ಜೀವನ ಕಥೆ
ಜೀವನಪೂರ್ತಿ ಜೀವನ ಪಾಠ
ಗನ್ ಇಡ್ಕೊಂಡಿದ್ದ ಸೈನಿಕರು, ಹೊತ್ತಿ ಉರಿತ್ತಿದ್ದ ಬ್ಯಾರಿಕೇಡ್‌ಗಳು, ಆಂತರಿಕ ಯುದ್ಧಗಳು, ಚಂಡಮಾರುತಗಳು ಮತ್ತು ಪ್ರಾಣ ಉಳಿಸ್ಕೊಳ್ಳೋಕೆ ನಾವು ಮಾಡ್ತಿದ್ದ ಓಟ. ನಾನು, ನನ್ನ ಹೆಂಡ್ತಿ ಪಯನೀಯರ್ ಹಾಗೂ ಮಿಷನರಿ ಸೇವೆ ಮಾಡ್ತಿದ್ದಾಗ ಈ ಎಲ್ಲ ಸಮಸ್ಯೆಗಳನ್ನ ಎದುರಿಸಬೇಕಾಯ್ತು. ಏನೇ ಸಮಸ್ಯೆ ಬಂದ್ರು ನಾವು ಯೆಹೋವನ ಸೇವೆ ಮಾತ್ರ ಬಿಡೋಕೆ ರೆಡಿ ಇರ್ಲಿಲ್ಲ. ಮಹಾ ಬೋಧಕನಾದ ಯೆಹೋವ ನಮ್ಮ ಕೈಬಿಟ್ಟಿಲ್ಲ, ಈ ಎಲ್ಲ ಕಷ್ಟಗಳಲ್ಲೂ ಜೀವನಪೂರ್ತಿ ನಮಗೆ ಜೀವನ ಪಾಠಗಳನ್ನ ಹೇಳ್ಕೊಡ್ತಾ ಬಂದಿದ್ದಾನೆ.—ಯೋಬ 36:22; ಯೆಶಾ. 30:20.
ಅಪ್ಪ ಅಮ್ಮನ ಮಾದರಿ
1950ರ ನಂತರ, ನನ್ನ ಅಪ್ಪಅಮ್ಮ ಇಟಲಿಯಿಂದ ಕೆನಡಾಗೆ ಹೋದ್ರು. ಅವ್ರಿಗೆ ಸತ್ಯ ಸಿಕ್ಕಿದ್ದು ಅಲ್ಲೇ. ಅವಾಗಿಂದ ನಮ್ಮ ಜೀವನದಲ್ಲಿ ಸತ್ಯನೇ ಎಲ್ಲಕ್ಕಿಂತ ಮುಖ್ಯ ಆಯ್ತು! ನಾನು ಚಿಕ್ಕವನಿದ್ದಾಗ ನನ್ನ ಕುಟುಂಬದವ್ರ ಜೊತೆ ಸೇವೆಲಿ ಹೆಚ್ಚು ಸಮಯ ಕಳೀತಿದ್ದೆ. ಅದಕ್ಕೆ ನನ್ನ ಫ್ರೆಂಡ್ಸ್ ಹತ್ರ ತಮಾಷೆ ಮಾಡ್ತಾ ‘ನಾನು ಎಂಟು ವರ್ಷ ಇದ್ದಾಗ್ಲೇ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದ್ದೀನಿ ಗೊತ್ತಾ’ ಅಂತ ಹೇಳ್ತಿದ್ದೆ.
1966ರಲ್ಲಿ ನನ್ನ ಕುಟುಂಬದ ಜೊತೆ
ನನ್ನ ಅಪ್ಪಅಮ್ಮ ಬಡವರಾಗಿದ್ರೂ ಯೆಹೋವನಿಗಾಗಿ ತ್ಯಾಗ ಮಾಡೋದ್ರಲ್ಲಿ ಎತ್ತಿದ ಕೈ. ಉದಾಹರಣೆಗೆ, 1963ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ಅಧಿವೇಶನಕ್ಕೆ ಹೋಗೋಕೆ ಅವ್ರಿಗೆ ತುಂಬ ಆಸೆ ಇತ್ತು. ಆದ್ರೆ ಸಾಕಷ್ಟು ದುಡ್ಡು ಇರಲಿಲ್ಲ. ಆದ್ರಿಂದ ಅಪ್ಪಅಮ್ಮ ಅವರ ಹತ್ರ ಇದ್ದ ಎಷ್ಟೋ ವಸ್ತುಗಳನ್ನ ಮಾರಿ, ಅದ್ರಿಂದ ಸಿಕ್ಕ ಹಣದಿಂದ ಅಧಿವೇಶನಕ್ಕೆ ಹೋಗೋ ಖರ್ಚನ್ನೆಲ್ಲ ನೋಡ್ಕೊಂಡ್ರು. 1972ರಲ್ಲಿ ಇಟಲಿ ಭಾಷೆ ಮಾತಾಡೋ ಜನ್ರಿಗೆ ಸಿಹಿಸುದ್ದಿ ಸಾರೋಕೆ ನಾವು ಕೆನಡದಲ್ಲಿರೋ ಬ್ರಿಟಿಷ್ ಕೊಲಂಬಿಯಾ ಅನ್ನೋ ಜಾಗಕ್ಕೆ ಹೋದ್ವಿ. ಅದು 1000 ಕಿಲೋಮೀಟರ್ ದೂರದಲ್ಲಿತ್ತು. ಅಪ್ಪ ಹೌಸ್ ಕೀಪಿಂಗ್ ಕೆಲಸ ಮಾಡ್ತಿದ್ರು. ಅವ್ರಿಗೆ ಹೆಚ್ಚು ದುಡ್ಡು ಮಾಡೋ ಅವಕಾಶ ಇದ್ರೂ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ರು.
ನನ್ನ ಅಪ್ಪಅಮ್ಮನ ಮಾದರಿ ನನಗೆ ಮತ್ತು ನನ್ನ ಒಡಹುಟ್ಟಿದವ್ರಿಗೆ ಬೆಲೆಕಟ್ಟಲಾಗದ ಗಿಫ್ಟ್ ಆಗಿದೆ. ಅವ್ರನ್ನ ನೋಡಿನೇ ಯೆಹೋವನ ಸೇವೆ ಹೇಗೆ ಮಾಡೋದು ಅಂತ ನಾನು ಕಲಿತೆ. ನಾನು ನನ್ನ ಜೀವನನ ಯೆಹೋವನಿಗೆ ಬಿಟ್ಟುಕೊಟ್ರೆ, ಯೆಹೋವ ನನ್ನ ಕೈ ಬಿಡಲ್ಲ ಅಂತ ನನ್ನ ಅಪ್ಪಅಮ್ಮನ ಮಾದರಿಯಿಂದ ಕಲಿತೆ. ಇದು ನನ್ನ ಜೀವನದಲ್ಲಿ ಕಲಿತ ಮುಖ್ಯ ಪಾಠ.—ಮತ್ತಾ. 6:33.
ಪೂರ್ಣ ಸಮಯದ ಸೇವೆಯ ಆರಂಭ
ಡೆಬಿ ಅನ್ನೋ ಸಹೋದರಿ ಯೆಹೋವನ ಸೇವೆಗೆ ಮೊದಲನೇ ಸ್ಥಾನ ಕೊಟ್ಟು ಚೆನ್ನಾಗಿ ಸೇವೆ ಮಾಡ್ತಿದ್ದಳು. ಅವಳಲ್ಲಿ ಒಳ್ಳೆ ಗುಣಗಳಿತ್ತು. 1980ರಲ್ಲಿ ನಾನು ಅವಳನ್ನ ಮದುವೆ ಆದೆ. ನಮ್ಮಿಬ್ರಿಗೂ ಪೂರ್ಣ ಸಮಯದ ಸೇವೆ ಮಾಡೋ ಆಸೆ ಇತ್ತು. ಅದಕ್ಕೆ ಮದುವೆಯಾಗಿ ಮೂರು ತಿಂಗಳ ಆದ್ಮೇಲೆ ಡೆಬಿ ಪಯನೀಯರ್ ಸೇವೆ ಶುರು ಮಾಡಿದಳು. ನಮ್ಮ ಮದುವೆಯಾಗಿ ಒಂದು ವರ್ಷದಲ್ಲೇ ನಾವು ಅಗತ್ಯ ಇರೋ ಒಂದು ಚಿಕ್ಕ ಸಭೆಗೆ ಹೋದ್ವಿ. ಅಲ್ಲಿ ಡೆಬಿ ಜೊತೆ ನಾನು ಪಯನೀಯರ್ ಸೇವೆ ಸ್ಟಾರ್ಟ್ ಮಾಡ್ದೆ.
ನನ್ನ ಮದುವೆ ದಿನ, 1980
ಸ್ವಲ್ಪ ಸಮಯ ಆದ್ಮೇಲೆ ನಮಗೆ ಆ ಸಭೆಲಿ ಖುಷಿ ಸಿಗ್ಲಿಲ್ಲ, ಬೇಜಾರಾಯ್ತು. ಬೇರೆ ಸಭೆಗೆ ಹೋಗೋಣ ಅಂದ್ಕೊಂಡ್ವಿ. ಇದ್ರ ಬಗ್ಗೆ ಕೀರ್ತ. 141:5) ಆ ಸಲಹೆನ ತಕ್ಷಣ ಪಾಲಿಸಿದ್ವಿ. ಸಭೇಲಿರೋ ಒಳ್ಳೇ ವಿಷ್ಯಗಳನ್ನ ಗುರುತಿಸೋಕೆ ಕಲಿತ್ವಿ. ಸಭೆಲಿರೋ ಚಿಕ್ಕ ಮಕ್ಕಳಿಗೆ ಮತ್ತು ಗಂಡ ಸತ್ಯದಲ್ಲಿ ಇಲ್ಲದ ಸಹೋದರಿಯರಿಗೆ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅನ್ನೋ ಹುರುಪಿತ್ತು. ಇದು ನಮ್ಮಲ್ಲೂ ಹುರುಪು ತುಂಬ್ತು. ಇದ್ರಿಂದ ಯೆಹೋವ ಸನ್ನಿವೇಶನ ಸರಿ ಮಾಡೋವರೆಗೂ ನಾವು ತಾಳ್ಮೆಯಿಂದ ಕಾಯಬೇಕು ಅಂತ ಕಲಿತ್ಕೊಂಡ್ವಿ. ಆ ಸರ್ಕಿಟ್ ಮೇಲ್ವಿಚಾರಕರು ನಮಗೆ ಒಂದು ಮುಖ್ಯ ಪಾಠ ಕಲಿಸಿದ್ರು. (ಮೀಕ 7:7) ಇದ್ರಿಂದ ಕಳೆದ್ಕೊಂಡಿದ್ದ ಖುಷಿನ ನಾವು ಮತ್ತೆ ಕಂಡ್ಕೊಂಡ್ವಿ.
ನಾವು ಸರ್ಕಿಟ್ ಮೇಲ್ವಿಚಾರಕರ ಜೊತೆ ಮಾತಾಡಿದ್ವಿ. ಅವರು ನಮ್ಮತ್ರ ಪ್ರೀತಿಯಿಂದ ಮಾತಾಡಿದ್ರು. ಅವರು, ‘ನೀವು ನಿಮ್ಮ ಸಮಸ್ಯೆ ಬಗ್ಗೆ ತುಂಬ ತಲೆ ಕೆಡಿಸ್ಕೊಳ್ತಿದ್ದೀರ. ನೆಗೆಟಿವ್ ವಿಷ್ಯಗಳ ಬಗ್ಗೆ ಜಾಸ್ತಿ ಗಮನ ಕೊಡ್ತಿದ್ದೀರ. ಅದನ್ನ ಬಿಟ್ಟು ಪಾಸಿಟಿವ್ ವಿಷ್ಯಗಳ ಮೇಲೆ ಗಮನ ಕೊಡಿ. ಆಗ ಸಭೆಲಿ ನಿಮ್ಗೆ ಒಳ್ಳೆ ವಿಷ್ಯಗಳು ಕಾಣ್ಸುತ್ತೆ’ ಅಂತ ನಮ್ಮನ್ನ ತಿದ್ದಿದ್ರು. (ಸ್ವಲ್ಪ ಸಮಯ ಆದ್ಮೇಲೆ ನಾವು ಮೊದಲನೇ ಸಲ ಪಯನೀಯರ್ ಶಾಲೆಗೆ ಹೋದ್ವಿ. ನಮಗಿದ್ದ ಇನ್ಸ್‌ಟ್ರಕ್ಟರ್ಸ್ ಬೇರೆಬೇರೆ ದೇಶಗಳಲ್ಲಿ ಮಿಷನರಿ ಸೇವೆ ಮಾಡಿದ್ರು. ಅವರು ನಮಗೆ ಕೆಲವೊಂದು ಫೋಟೋಗಳನ್ನು ತೋರಿಸಿದ್ರು. ಅವರು ಎದುರಿಸಿದ ಸಮಸ್ಯೆಗಳನ್ನ, ಅವರಿಗೆ ಅಲ್ಲಿ ಸಿಕ್ಕ ಆಶೀರ್ವಾದಗಳನ್ನ ನಮ್ಮ ಹತ್ರ ಹಂಚ್ಕೊಂಡ್ರು. ಇದು ನಮ್ಮಲ್ಲಿ ಮಿಷನರಿಯಾಗಿ ಸೇವೆ ಮಾಡ್ಬೇಕು ಅನ್ನೋ ಆಸೆ ಹುಟ್ಟಿಸ್ತು. ಅದಕ್ಕೇ ನಾವು ಮಿಷನರಿ ಆಗಬೇಕು ಅಂತ ನಿರ್ಧಾರ ಮಾಡಿದ್ವಿ.
ಬ್ರಿಟಿಷ್ ಕೊಲಂಬಿಯಾದಲ್ಲಿನ ರಾಜ್ಯ ಸಭಾಗೃಹದಲ್ಲಿ, 1983
ಮಿಷನರಿಯಾಗೋ ಗುರಿನ ಮುಟ್ಟಲು ನಾವು 1984ರಲ್ಲಿ ಬ್ರಿಟಿಷ್ ಕೊಲಂಬಿಯಾ ಬಿಟ್ಟು ಫ್ರೆಂಚ್ ಮಾತಾಡೋ ಕ್ವಿಬೆಕ್ ಅನ್ನೋ ಜಾಗಕ್ಕೆ ಹೋದ್ವಿ. ಅದು 4000 ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿ ನಾವು ಹೊಸ ಭಾಷೆ ಮತ್ತು ಸಂಸ್ಕೃತಿನ ಕಲಿಬೇಕಿತ್ತು. ಎಷ್ಟೋ ಸಲ ನಮ್ಮ ಕೈಲಿ ಕಾಸು ಇರ್ತಿರಲಿಲ್ಲ. ಕೆಲವೊಂದು ಸಲ ಅಂತೂ ಹೊಲದಲ್ಲಿ ಮಿಕ್ಕಿ ಬಿಟ್ಟಿರೋ ಆಲೂಗಡ್ಡೆನ ಹೆಕ್ಕಿ ತೆಗಿತಿದ್ವಿ. ಡೆಬಿ, ಆಲೂಗಡ್ಡೆ ಬಳಸಿ ಬೇರೆಬೇರೆ ಅಡುಗೆ ಮಾಡೋದ್ರಲ್ಲಿ ಎಕ್ಸ್‌ಪರ್ಟ್ ಆಗಿಬಿಟ್ಳು. ಆದ್ರೆ ಇಂಥ ಕಷ್ಟದಲ್ಲೂ ನಾವು ಖುಷಿನ ಕಳ್ಕೊಳಿಲ್ಲ. ಯಾಕಂದ್ರೆ ಯೆಹೋವ ಯಾವತ್ತೂ ನಮ್ಮ ಕೈ ಬಿಡ್ಲಿಲ್ಲ.—ಕೀರ್ತ. 64:10.
ಒಂದಿನ ನಮಗೆ ಕೆನಡ ಬೆತೆಲಿಂದ ಫೋನ್ ಬಂತು. ಅದ್ರಲ್ಲಿ ‘ಬೆತೆಲಿಗೆ ಬಂದು ಸೇವೆ ಮಾಡ್ತೀರಾ’ ಅಂತ ಕೇಳಿದ್ರು. ಆದ್ರೆ ಈ ಮುಂಚೆ ನಾವು ಗಿಲ್ಯಡ್ ಶಾಲೆಗೆ ಹೋಗೋಕೆ ಅರ್ಜಿ ಹಾಕಿದ್ವಿ. ಅದಕ್ಕೆ ಬೆತೆಲಿಗೆ ಕರೆದಾಗ ಒಂದು ಕಡೆ ಖುಷಿನೂ ಆಯ್ತು, ಇನ್ನೊಂದು ಕಡೆ ಬೇಜಾರೂ ಆಯ್ತು. ಆದ್ರೂ ನಾವು ಆಮಂತ್ರಣವನ್ನ ಒಪ್ಕೊಂಡ್ವಿ. ನಾವು ಬೆತೆಲಿಗೆ ಬಂದಾಗ ಬ್ರಾಂಚ್ ಕಮಿಟಿಯ ಸದಸ್ಯರಾದ ಸಹೋದರ ಕೆನೆತ್ ಲಿಟಲ್ ಅವರ ಜೊತೆ ಮಾತಾಡಿದ್ವಿ. ‘ನಮ್ಮನ್ನ ಗಿಲ್ಯಡ್ ಶಾಲೆಗೆ ಕರೆದ್ರೆ ನಾವೇನು ಮಾಡೋದು?’ ಅಂತ ಅವ್ರನ್ನ ಕೇಳಿದ್ವಿ. ಅದಕ್ಕೆ ಅವರು ‘ಮೊದ್ಲು ಆಮಂತ್ರಣ ಬರ್ಲಿ, ಆಮೇಲೆ ನೋಡೋಣ’ ಅಂತ ಹೇಳಿದ್ರು.
ಬೆತೆಲ್‌ಗೆ ಬಂದು ಒಂದು ವಾರ ಆದ್ಮೇಲೆ ನಮ್ಮನ್ನ ಗಿಲ್ಯಡ್ ಶಾಲೆಗೆ ಕರೆದ್ರು. ಬೆತೆಲ್ ಸೇವೆನಾ ಅಥವಾ ಗಿಲ್ಯಡ್ ಶಾಲೆನಾ ಅಂತ ನಾವು ಆಯ್ಕೆ ಮಾಡ್ಬೇಕಿತ್ತು. ಹಾಗಾಗಿ ಸಹೋದರ ಲಿಟಲ್ ನಮಗೆ,
“ನೀವು ಯಾವುದೇ ಆಯ್ಕೆ ಮಾಡಿದ್ರು ಮುಂದೆ ಒಂದಿನ, ‘ಅಯ್ಯೋ, ನಾನು ಇನ್ನೊಂದನ್ನ ಆರಿಸ್ಕೊಬೇಕಿತ್ತು’ ಅಂತ ಅನ್ಸುತ್ತೆ. ಹಾಗಾಗಿ ನಾವು ಒಂದಕ್ಕಿಂತ ಇನ್ನೊಂದು ಮಿಗಿಲು ಅಂತ ಅಂದ್ಕೊಬಾರದು. ಯಾಕಂದ್ರೆ ಯೆಹೋವ ಎರಡೂ ಆಯ್ಕೆಯನ್ನ ಆಶೀರ್ವದಿಸ್ತಾನೆ” ಅಂತ ಹೇಳಿದ್ರು. ನಾವು ಗಿಲ್ಯಡ್ ಶಾಲೆಗೆ ಹೋಗಬೇಕು ಅಂತ ನಿರ್ಧರಿಸಿದ್ವಿ. ಹೋಗ್ತಾಹೋಗ್ತಾ ಬ್ರದರ್ ಲಿಟಲ್ ಹೇಳಿದ ಮಾತು ಎಷ್ಟು ನಿಜ ಅಂತ ಅರ್ಥ ಮಾಡ್ಕೊಂಡ್ವಿ. ನಮ್ಮ ತರಾನೇ ಯಾವ ಅಸೈನ್ಮೆಂಟ್‌ನ ಆಯ್ಕೆ ಮಾಡ್ಬೇಕು ಅಂತ ಕನ್ಫ್ಯೂಷನಲ್ಲಿರೋ ಸಹೋದರರಿಗೆ ಸಹೋದರ ಲಿಟಲ್ ಹೇಳಿದ ಮಾತನ್ನ ನಾವು ಎಷ್ಟೋ ಸಲ ಹೇಳಿದ್ದೀವಿ.ಮಿಷನರಿ ಜೀವನ
(ಎಡಕ್ಕೆ) ಯೂಲಸೀಸ್ ಗ್ಲಾಸ್
(ಬಲಕ್ಕೆ) ಜ್ಯಾಕ್ ರೆಡ್‌ಫೋರ್ಡ್
83ನೇ ಗಿಲ್ಯಡ್ ಶಾಲೆಯ 24 ವಿದ್ಯಾರ್ಥಿಗಳಲ್ಲಿ ನಾವೂ ಇದ್ವಿ. ಆಗ ನಮಗೆ ಆದ ಖುಷಿಗೆ ಎಲ್ಲೆನೇ ಇರಲಿಲ್ಲ. 1987ರ ಏಪ್ರಿಲ್‌ನಲ್ಲಿ ಬ್ರೂಕ್ಲಿನ್ ನ್ಯೂಯಾರ್ಕ್‌ನಲ್ಲಿ ಅದು ನಡೀತು. ಸಹೋದರ ಯೂಲಸೀಸ್ ಗ್ಲಾಸ್ ಮತ್ತು ಜ್ಯಾಕ್ ರೆಡ್‌ಫೋರ್ಡ್ ನಮ್ಮ ತರಗತಿಯ ಮುಖ್ಯ ಇನ್ಸ್‌ಟ್ರಕ್ಟರ್ಸ್ ಆಗಿದ್ರು. ಐದು ತಿಂಗಳು ಹೇಗೆ ಹೋಯ್ತು ಅಂತಾನೇ ಗೊತ್ತಾಗ್ಲಿಲ್ಲ. ನಾವು 1987ರ ಸೆಪ್ಟೆಂಬರ್ 6ರಂದು ಗಿಲ್ಯಡ್ ಪದವಿ ಪಡ್ಕೊಂಡ್ವಿ. ನಮ್ಮ ಜೊತೆ ಜಾನ್ ಮತ್ತು ಮೇರಿ ಗುಡೇ ಅವ್ರನ್ನ ಹೈಟಿ ದೇಶಕ್ಕೆ ನೇಮಿಸಿದ್ರು.
ಹೈಟಿಯಲ್ಲಿ, 1988
1962ರಲ್ಲಿ ಹೈಟಿಯಲ್ಲಿದ್ದ ಎಲ್ಲ ಮಿಷನರಿಗಳನ್ನ ದೇಶದಿಂದ ಓಡಿಸಿ ಬಿಟ್ಟಿದ್ರು. ಹಾಗಾಗಿ 1987ರಲ್ಲಿ ನಾವು ಬರೋವರೆಗೂ ಅಲ್ಲಿ ಯಾವ ಮಿಷನರಿಗಳೂ ಇರಲಿಲ್ಲ. ನಾವು ಗಿಲ್ಯಡ್ ಪದವಿ ಪಡ್ಕೊಂಡು ಮೂರು ವಾರಗಳಾದ್ಮೇಲೆ ಅಲ್ಲಿಗೆ ಬಂದ್ವಿ. ನಾವು ವಯಸ್ಸಲ್ಲಿ ಚಿಕ್ಕವರಾಗಿದ್ವಿ, ಅಷ್ಟೇನೂ ಅನುಭವನೂ ಇರಲಿಲ್ಲ. ಅಲ್ಲಿರೋ ಗುಡ್ಡಗಾಡು ಪ್ರದೇಶದಲ್ಲಿರೋ ಒಂದು ಚಿಕ್ಕ ಸಭೆಗೆ ನಾವು ಹೋದ್ವಿ. ಅಲ್ಲಿ ಬರೀ 35 ಪ್ರಚಾರಕರು ಇದ್ರು. ಅಲ್ಲಿದ್ದ ಜನರು ಕಡು ಬಡವರಾಗಿದ್ರು, ಅವ್ರಿಗೆ ಸರಿಯಾಗಿ ಓದೋಕೆ ಬರ್ತಿರಲಿಲ್ಲ. ನಾವಿದ್ದ ಪ್ರದೇಶದಲ್ಲಿ ಗಲಾಟೆಗಳು, ಹೊತ್ತಿ ಉರಿತ್ತಿದ್ದ ಬ್ಯಾರಿಕೇಡ್‌ಗಳು, ಪ್ರತಿಭಟನೆಗಳು ಮತ್ತು ಚಂಡಮಾರುತಗಳು ಸಾಮಾನ್ಯ ಆಗಿತ್ತು.
ಹೈಟಿಯಲ್ಲಿದ್ದ ಸಭೆ ಚಿಕ್ಕದಾದ್ರೂ ಅಲ್ಲಿದ್ದವ್ರಿಗೆ ಯೆಹೋವನ ಮೇಲಿದ್ದ ಪ್ರೀತಿ ತುಂಬ ದೊಡ್ಡದು. ಅವ್ರಿಗೆ ಕಷ್ಟ ಇದ್ರೂ ಚೆನ್ನಾಗಿ ಸಿಹಿಸುದ್ದಿ ಸಾರುತ್ತಿದ್ರು. ಅಲ್ಲಿದ್ದ ಒಬ್ಬ ವಯಸ್ಸಾದ ಸಿಸ್ಟರ್‌ಗೆ ಓದೋಕೆ ಬರ್ತಿರಲಿಲ್ಲ. ಹಾಗಿದ್ರೂ ಅವರು 150 ವಚನಗಳನ್ನ ಬಾಯಿಪಾಠ ಮಾಡಿದ್ರು. ಅಲ್ಲಿನ ಜನರ ಕಷ್ಟಗಳನ್ನ ನೋಡಿ ‘ಇದಕ್ಕೆಲ್ಲಾ ದೇವರ ಆಳ್ವಿಕೆನೇ ಪರಿಹಾರ. ಅದಕ್ಕೆ ಇವ್ರಿಗೆ ತಪ್ಪದೇ ಸಿಹಿಸುದ್ದಿ ಸಾರಬೇಕು’ ಅಂತ ಅಂದ್ಕೊಂಡ್ವಿ. ನಮ್ಮ ಸ್ಟಡಿಗಳಲ್ಲಿ ಕೆಲವರು ಪಯನೀಯರ್, ವಿಶೇಷ ಪಯನೀಯರ್ ಮತ್ತು ಹಿರಿಯರಾದ್ರು. ಇದನ್ನೆಲ್ಲಾ ನೋಡಿ ನಮಗೆ ಖುಷಿ ಆಯ್ತು.
ನಾನು ಹೈಟಿಯಲ್ಲಿ ಟ್ರೆವರ್ ಅನ್ನೋ ಯುವಕನನ್ನ ಭೇಟಿ ಮಾಡಿದ್ದೆ. ಇವನು ಮೊರ್ಮನ್ ಧರ್ಮದ ಮಿಷನರಿ. ಇವನ ಜೊತೆ ನಾನು ಕೆಲವು ಸಲ ಬೈಬಲ್ ಬಗ್ಗೆ ಮಾತಾಡಿದ್ದೆ. ಕೆಲವು ವರ್ಷ ಆದ್ಮೇಲೆ ಅವನು ನನಗೊಂದು ಪತ್ರ ಬರೆದ. ಅದ್ರಲ್ಲಿ ‘ಮುಂದಿನ ಸಮ್ಮೇಳನದಲ್ಲಿ ನಾನು ದೀಕ್ಷಾಸ್ನಾನ ತಗೊಳ್ತಾ ಇದೀನಿ. ನಾನು ಯಾವ ಜಾಗದಲ್ಲಿ ಮೊರ್ಮನ್ ಧರ್ಮದ ಮಿಷನರಿ ಆಗಿದ್ನೋ ಅದೇ ಹೈಟಿಗೆ ವಾಪಸ್ ಬಂದು ವಿಶೇಷ ಪಯನೀಯರ್ ಆಗಿ ಸೇವೆ ಮಾಡ್ತೀನಿ’ ಅಂತ ಬರೆದಿದ್ದ. ಅವನು ಹೇಳಿದಂತೆನೇ ಅವನ ಹೆಂಡ್ತಿ ಜೊತೆ ವಾಪಸ್ ಬಂದು ಎಷ್ಟೋ ವರ್ಷ ಇಲ್ಲಿ ವಿಶೇಷ ಪಯನೀಯರ್ ಸೇವೆ ಮಾಡಿದ್ರು.
ಯುರೋಪ್ ಅಲ್ಲಿ, ಆಮೇಲೆ ಆಫ್ರಿಕಾದಲ್ಲಿ ಸೇವೆ
ಸ್ಲೊವೇನಿಯದಲ್ಲಿ ಸೇವೆ ಮಾಡುವಾಗ, 1994
ಯುರೋಪ್‌ನ ಕೆಲವು ಜಾಗಗಳಲ್ಲಿ ಹಿಂದೆ ನಮ್ಮ ಸೇವೆಗೆ ನಿರ್ಬಂಧ ಇತ್ತು. ಆದ್ರೆ ಈಗ ಅಲ್ಲಿ ಅದನ್ನ ನಿಧಾನವಾಗಿ ತೆಗಿತಾ ಇದ್ರು. ಅದಕ್ಕೆ ನಮ್ಮನ್ನ ಅಲ್ಲಿಗೆ ಸೇವೆ ಮಾಡೋಕೆ ನೇಮಕ ಮಾಡಿದ್ರು. 1992ರಲ್ಲಿ ನಾವು ಸ್ಲೊವೇನಿಯಾ ದೇಶಕ್ಕೆ ಬಂದ್ವಿ. ನಮ್ಮ ಅಪ್ಪಅಮ್ಮ ಇಟಲಿಗೆ ಹೋಗೋಕಿಂತ ಮುಂಚೆ ಇಲ್ಲೇ ಇದ್ದಿದ್ದು. ಹಿಂದಿನ ಯುಗೋಸ್ಲೇವಿಯಾದಲ್ಲಿ ಇನ್ನೂ ಯುದ್ಧ ನಡೀತಿತ್ತು. ಅದಕ್ಕೆ ಆಸ್ಟ್ರಿಯಾದ ವಿಯೆನ್ನಾ, ಜಾಗ್ರಬ್, ಕ್ರೊಯೇಷಿಯ, ಬೆಲ್‌ಗ್ರೇಡ್, ಸೆರ್ಬಿಯಾದಲ್ಲಿರೊ ಬೆತೆಲ್ ಆಫೀಸ್ ಇಲ್ಲಿನ ಕೆಲಸನೆಲ್ಲ ನೋಡ್ಕೊತಿತ್ತು. ಆಮೇಲೆ ಪ್ರತಿಯೊಂದು ದೇಶಕ್ಕೂ ಅದ್ರದ್ದೇ ಆದ ಬೆತೆಲ್ ಇರಬೇಕು ಅನ್ನೋ ನಿರ್ಧಾರ ಮಾಡಿದ್ರು.
ಈ ದೇಶಕ್ಕೆ ಬಂದ ಮೇಲೆ ನಾವು ಮತ್ತೆ ಹೊಸ ಭಾಷೆ, ಹೊಸ ಸಂಸ್ಕೃತಿನ ಕಲಿತ್ವಿ. ಇಲ್ಲಿದ್ದವರು ನಮಗೆ “ಎಜ಼ಿಕ್ ಎ ತೆಜ಼ಿಕ್” ಅಂತ ಹೇಳ್ತಿದ್ರು. ಅಂದ್ರೆ “ನಮ್ಮ ಭಾಷೆ ತುಂಬಾ ಕಷ್ಟ ಬಿಡಿ” ಅಂತ ಅರ್ಥ. ನಿಜಕ್ಕೂ ಆ ಭಾಷೆ ತುಂಬ ಕಷ್ಟ! ಆದ್ರೂ ಇಲ್ಲಿದ್ದ ಸಹೋದರರ ಸೇವೆ ನೋಡಿ ನಾವು ತುಂಬ ಖುಷಿ ಪಟ್ವಿ. ಸಂಘಟನೆ ಏನಾದ್ರೂ ಬದಲಾವಣೆ ಮಾಡಿದ್ರೆ ಅದನ್ನ ತಕ್ಷಣ ಅವರು ಪಾಲಿಸ್ತಿದ್ರು. ಅದಕ್ಕೆ ಅವ್ರನ್ನ ಯೆಹೋವನು ಆಶೀರ್ವದಿಸ್ತಿದ್ದನು. ಯೆಹೋವನು ಸರಿಯಾಗಿರೋ ಸಮಯದಲ್ಲಿ ಒಂದು ವಿಷ್ಯನ ಸರಿ ಮಾಡ್ತಾನೆ ಅನ್ನೋದನ್ನ ನಾವು ಮತ್ತೆ ನಮ್ಮ ಜೀವನದಲ್ಲಿ ನೋಡಿದ್ವಿ. ಹಿಂದೆ ನಾವು ಕಲಿತ ಎಷ್ಟೋ ಪಾಠಗಳು ಸ್ಲೊವೇನಿಯಾದಲ್ಲಿ ಸೇವೆ ಮಾಡೋಕೆ ನಮಗೆ ಸಹಾಯ ಮಾಡ್ತು. ಇಲ್ಲೂ ಹೊಸ ಪಾಠಗಳನ್ನ ಕಲಿತ್ವಿ.
ಮುಂದೆ ನಮ್ಮ ಜೀವನದಲ್ಲಿ ಇನ್ನೂ ಜಾಸ್ತಿ ಬದಲಾವಣೆಗಳಾಯ್ತು. ಇಸವಿ 2000ದಲ್ಲಿ ನಮ್ಮನ್ನ ಪಶ್ಚಿಮ ಆಫ್ರಿಕಾದಲ್ಲಿದ್ದ ‘ಕೋಟ್ ಡೀವಾರ್’ ಅನ್ನೋ ದೇಶಕ್ಕೆ ನೇಮಿಸಿದ್ರು. ಆದ್ರೆ ಅಲ್ಲಿ ಆಂತರಿಕ ಯುದ್ಧ ನಡೀತಿತ್ತು. ಆದ್ರಿಂದ ನವೆಂಬರ್ 2002ರಲ್ಲಿ ನಾವು ನಮ್ಮ ಜೀವ ಉಳಿಸಿಕೊಳ್ಳೋಕೆ ಸಿಯಾರಾ ಲಿಯೋನಿ ದೇಶಕ್ಕೆ ಓಡಿ ಬರಬೇಕಾಯ್ತು. ನಾವು ಸಡನ್ ಆಗಿ ‘ಕೋಟ್ ಡೀವಾರ್’ ದೇಶಾನ ಬಿಟ್ಟು ಬರೋದು ತುಂಬ ಕಷ್ಟ ಆಯ್ತು. ಸಿಯಾರಾ ಲಿಯೋನಿ ದೇಶದಲ್ಲಿ 11 ವರ್ಷಗಳಿಂದ ನಡೀತಿದ್ದ ಒಂದು ಆಂತರಿಕ ಯುದ್ಧ ಆಗ್ತಾನೇ ಮುಗಿದಿತ್ತು. ಆದ್ರೂ ಅಲ್ಲಿ ಕಲಿತ ಪಾಠಗಳು ಸಂತೋಷವಾಗಿ ಈ ಹೊಸ ನೇಮಕನ ಮಾಡೋಕೆ ನಮಗೆ ಸಹಾಯ ಮಾಡ್ತು.
ಇಲ್ಲಿನ ಜನ್ರಿಗೆ ಸತ್ಯ ಕಲಿಯೋಕೆ ಆಸಕ್ತಿ ಇತ್ತು. ನಮ್ಮ ಸಹೋದರ ಸಹೋದರಿಯರು ಕೂಡ ಇಷ್ಟು ವರ್ಷಗಳು ಯುದ್ಧ ನಡೀತಿದ್ರೂ ತಾಳ್ಮೆಯಿಂದ ಎಲ್ಲ ಸಹಿಸ್ಕೊಂಡಿದ್ರು. ಅದಕ್ಕೆ ಇವ್ರಿಗೆ ಸಹಾಯ ಮಾಡಬೇಕು ಅಂತ ಅಂದ್ಕೊಂಡ್ವಿ. ಇವ್ರೆಲ್ಲ ತುಂಬ ಬಡವರಾಗಿದ್ರೂ ಇವ್ರ ಮನಸ್ಸು ತುಂಬ ದೊಡ್ಡದು. ಒಬ್ಬ ಸಹೋದರಿ ಡೆಬಿಗೆ ಕೆಲವು ಬಟ್ಟೆಗಳನ್ನ ಕೊಟ್ರು. ಡೆಬಿ ಅದನ್ನ ತಗೊಳೋಕೆ ಸ್ವಲ್ಪ ಹಿಂದೆ ಮುಂದೆ ನೋಡಿದ್ಲು. ಆಗ ಆ ಸಹೋದರಿ “ಯುದ್ಧ ನಡೀತಿದ್ದಾಗ ಬೇರೆ ದೇಶಗಳಲ್ಲಿರೋ ನಮ್ಮ ಸಹೋದರರು ನಮಗೆ ಸಹಾಯ ಮಾಡಿದ್ರು. ಈಗ ನೀವು ಕಷ್ಟದಲ್ಲಿರುವಾಗ ನಿಮಗೆ ಸಹಾಯ ಮಾಡೋದು ನಮ್ಮ ಕರ್ತವ್ಯ” ಅಂದ್ರು. ಅವ್ರನ್ನ ನೋಡಿ ಕಷ್ಟ ಇದ್ದಾಗ್ಲೂ ಬೇರೆಯವ್ರಿಗೆ ನಮ್ಮ ಹತ್ರ ಇರೋದನ್ನ ಹಂಚ್ಕೊಳ್ಳೋದು ಎಷ್ಟು ಮುಖ್ಯ ಅಂತ ಕಲಿತ್ವಿ.
ನಿಧಾನವಾಗಿ ನಾವು ‘ಕೋಟ್ ಡೀವಾರ್’ ದೇಶಕ್ಕೆ ವಾಪಸ್ ಹೋದ್ವಿ. ಆದ್ರೆ ಅಲ್ಲಿ ಮತ್ತೆ ರಾಜಕೀಯ ವಿಷ್ಯಗಳಿಂದಾಗಿ ಗಲಾಟೆ, ಹಿಂಸೆ ಶುರುವಾಯ್ತು. ಅದಕ್ಕೆ ನವೆಂಬರ್ 2004ರಲ್ಲಿ ನಾವು ಹೆಲಿಕಾಪ್ಟರ್ ಮೂಲಕ ಆ ದೇಶನ ಬಿಟ್ಟು ಓಡಿ ಬರಬೇಕಾಯ್ತು. ಆಗ ನಮ್ಮಿಬ್ರ ಕೈಯಲ್ಲಿ ಒಂದೊಂದು ಚಿಕ್ಕ ಬ್ಯಾಗ್ ಇತ್ತಷ್ಟೇ. ಅವತ್ತು ರಾತ್ರಿ ನಾವು ಫ್ರೆಂಚ್ ಸೈನಿಕರು ಇರ್ತಿದ್ದ ಜಾಗದಲ್ಲಿ ನೆಲದ ಮೇಲೆ ಮಲಗಿದ್ವಿ. ಮಾರನೇ ದಿನ ನಾವು ಸ್ವಿಜರ್ಲ್ಯಾಂಡ್ ಬೆತೆಲ್‌ಗೆ ಬಂದ್ವಿ, ಆಗ ಮಧ್ಯರಾತ್ರಿ ಆಗಿತ್ತು. ಆದ್ರೆ ಅಲ್ಲಿ ಬ್ರಾಂಚ್ ಕಮಿಟಿ, ಶುಶ್ರೂಷಾ ತರಬೇತಿ ಶಾಲೆಯ ಇನ್ಸ್‌ಟ್ರಕ್ಟರ್ಸ್, ಅವ್ರ ಹೆಂಡತಿಯರು ನಮ್ಮನ್ನ ಸ್ವಾಗತಿಸೋಕೆ ಕಾಯ್ತಿದ್ರು. ಅವರು ನಮ್ಮನ್ನ ಅಪ್ಕೊಂಡ್ರು. ಅವರು ನಮಗೆ ಬಿಸಿಬಿಸಿ ಊಟ ಮತ್ತು ಸ್ವಿಸ್ ಚಾಕೊಲೇಟ್ ಕೊಟ್ರು. ಅವರು ತೋರಿಸಿದ ಪ್ರೀತಿ ನೋಡಿ ನಾವು ಪಟ್ಟ ಕಷ್ಟನೆಲ್ಲಾ ಮರೆತು ಹೋದ್ವಿ.
ಕೋಟ್ ಡೀವಾರ್‌ನಲ್ಲಿ ಅಧಿವೇಶನದ ಭಾಷಣ, 2005
ಸ್ವಲ್ಪ ಸಮಯದವರೆಗೆ ನಮ್ಮನ್ನ ಘಾನ ದೇಶದಲ್ಲಿ ಸೇವೆ ಮಾಡೋಕೆ ಕಳ್ಸಿದ್ರು. ‘ಕೋಟ್ ಡೀವಾರ್’ ದೇಶದಲ್ಲಿ ಆಂತರಿಕ ಯುದ್ಧಗಳು ಕಡಿಮೆ ಆದ್ಮೇಲೆ ಮತ್ತೆ ಅಲ್ಲಿಗೆ ನಮ್ಮನ್ನ ವಾಪಸ್ ಕಳ್ಸಿದ್ರು. ಈ ತರ ದೇಶ ಬಿಟ್ಟು ಓಡಿ ಹೋಗುವಾಗ ಮತ್ತು ಬೇರೆ ದೇಶಗಳಲ್ಲಿ ಸ್ವಲ್ಪ ಸಮಯ ಸೇವೆ ಮಾಡುವಾಗ ನಮ್ಮವರು ತೋರಿಸಿದ ಪ್ರೀತಿ ನಮಗೆ ತುಂಬ ಸಹಾಯ ಮಾಡ್ತು. ಯೆಹೋವನ ಸಂಘಟನೆಲಿ ಎಲ್ಲಿ ನೋಡಿದ್ರೂ ನಮಗೆ ಈ ಪ್ರೀತಿ ಕಾಣಿಸುತ್ತೆ. ಹಾಗಂತ ಇದನ್ನ ನಾವು ಯಾವತ್ತೂ ಮಾಮೂಲಿಯಾಗಿ ನೋಡಬಾರದು. ನಮ್ಮ ಜೀವನದಲ್ಲಿ ಬಂದ ಕಷ್ಟಗಳು ಕೂಡ ನಮಗೆ ಒಳ್ಳೆ ಟ್ರೈನಿಂಗ್ ಕೊಡ್ತು. ಒಳ್ಳೊಳ್ಳೆ ಪಾಠಗಳನ್ನ ಕಲಿಸಿತು.
ಮಧ್ಯಪೂರ್ವ ದೇಶಗಳಲ್ಲಿ ಸೇವೆ
ಮಧ್ಯಪೂರ್ವ ದೇಶಗಳಲ್ಲಿ, 2007
2006ರಲ್ಲಿ ನಮಗೆ ಮುಖ್ಯ ಕಾರ್ಯಾಲಯದಿಂದ ಒಂದು ಪತ್ರದಲ್ಲಿ ನಮ್ಮನ್ನ ಮಧ್ಯಪೂರ್ವ ದೇಶಗಳಲ್ಲಿ ಸೇವೆ ಮಾಡೋಕೆ ನೇಮಿಸಲಾಗಿದೆ ಅಂತಿತ್ತು. ನಾವು ಮತ್ತೆ ಹೊಸ ಭಾಷೆ, ಹೊಸ ಸಂಸ್ಕೃತಿನ ಕಲಿಬೇಕಿತ್ತು. ಹೊಸ ಸವಾಲುಗಳನ್ನ ಎದುರಿಸಬೇಕಿತ್ತು. ಇಲ್ಲಿ ರಾಜಕೀಯ ಮತ್ತು ಧರ್ಮದ ವಿಷ್ಯಗಳಲ್ಲಿ ಏನಾದ್ರೂ ಒಂದು ಗಲಾಟೆ ನಡೀತಾನೇ ಇತ್ತು. ನಮ್ಮ ಸಭೇಲಿ ಬೇರೆಬೇರೆ ಭಾಷೆ ಮಾತಾಡೋ ಜನ ಇದ್ರು. ಅವ್ರೆಲ್ಲ ಸಂಘಟನೆಯ ನಿರ್ದೇಶನ ಪಾಲಿಸ್ತಿದ್ರಿಂದ ಐಕ್ಯತೆ ಎದ್ದು ಕಾಣಿಸ್ತಿತ್ತು. ಅವ್ರಿಗೆ ಕುಟುಂಬದಲ್ಲಿ, ಶಾಲೆಯಲ್ಲಿ, ಕೆಲಸದಲ್ಲಿ ಮತ್ತು ಅಕ್ಕಪಕ್ಕದ ಮನೆಯವ್ರಿಂದ ವಿರೋಧ ಬಂದ್ರೂ ಅವರಲ್ಲಿದ್ದ ಧೈರ್ಯ ನೋಡಿ ನಮಗೆ ತುಂಬ ಖುಷಿ ಆಗ್ತಿತ್ತು.
2012ರಲ್ಲಿ ಇಸ್ರೇಲ್‌ನ ಟೆಲ್ ಅವಿವ್ ಅನ್ನೋ ಜಾಗದಲ್ಲಿ ಒಂದು ವಿಶೇಷ ಅಧಿವೇಶನಕ್ಕೆ ನಾವು ಹಾಜರಾದ್ವಿ. ಕ್ರಿಸ್ತ ಶಕ 33 ಆದ್ಮೇಲೆ ಇಸ್ರೇಲ್ ದೇಶದಲ್ಲಿ ಯೆಹೋವನ ಜನರು ಇಷ್ಟು ದೊಡ್ಡ ಸಂಖ್ಯೆಲಿ ಸೇರಿ ಬಂದಿದ್ದು ಇದೇ ಮೊದಲು. ಈಗಲೂ ಕೂಡ ಆ ಘಟನೆ ನಮ್ಮ ಕಣ್ಣಿಗೆ ಕಟ್ಟಿದಂತಿದೆ.
ಇಲ್ಲಿ ಸೇವೆ ಮಾಡ್ವಾಗ ನಮ್ಮ ಕೆಲಸಕ್ಕೆ ನಿಷೇಧ ಹಾಕಿದ್ದ ಒಂದು ದೇಶಕ್ಕೆ ಹೋಗೋಕೆ ನಮಗೆ ಹೇಳಿದ್ರು. ನಾವು ಕೆಲವು ಸಾಹಿತ್ಯನ ತಗೊಂಡು ಹೋಗಿದ್ವಿ. ಸೇವೆಲಿ ಅದನ್ನ ಕೊಟ್ವಿ. ಚಿಕ್ಕಚಿಕ್ಕ ಸಮ್ಮೇಳನಗಳಿಗೂ ಹಾಜರಾದ್ವಿ. ಆದ್ರೆ ಎಲ್ಲಿ ನೋಡಿದ್ರೂ ಗನ್ ಹಿಡ್ಕೊಂಡು ಚೆಕ್ ಮಾಡ್ತಿದ್ದ ಸೈನಿಕರಿದ್ರು. ಆದ್ರೂ ನಾವು ಕೆಲವು ಪ್ರಚಾರಕರ ಜೊತೇಲಿ ವಿವೇಚನೆ ಬಳಸಿ ಹೋಗ್ತಾ ಇದಿದ್ರಿಂದ ಸುರಕ್ಷಿತವಾಗಿದ್ವಿ.
ವಾಪಸ್ ಆಫ್ರಿಕಾದಲ್ಲಿ ಸೇವೆ
ಕಾಂಗೋದಲ್ಲಿ ಭಾಷಣ ತಯಾರಿಸ್ತಿರೋದು, 2014
2013ರಲ್ಲಿ ನಮಗೆ ಇನ್ನೊಂದು ಹೊಸ ನೇಮಕ ಸಿಕ್ತು. ಈ ಸಲ ಕಾಂಗೋ ದೇಶದಲ್ಲಿರೋ ಕಿನ್ಶಾಸಾ ಬೆತೆಲ್‌ನಲ್ಲಿ ಸೇವೆ ಮಾಡೋಕೆ ಕರೆದ್ರು. ಕಾಂಗೋ ದೇಶದಲ್ಲಿ ನೋಡೋಕೆ ಒಳ್ಳೊಳ್ಳೆ ಜಾಗಗಳಿವೆ. ಆದ್ರೆ ಸಿಕ್ಕಾಪಟ್ಟೆ ಬಡತನನೂ ಇದೆ. ಎಲ್ಲಿ ನೋಡಿದ್ರು ಗನ್ ಹಿಡ್ಕೊಂಡು ಜನ ಗಲಾಟೆ ಮಾಡೋದು ಕಾಣ್ಸುತ್ತೆ. ಮೊದಲು ನಮ್ಮನ್ನ ಆಫ್ರಿಕಾಗೆ ಹಾಕಿದ್ದಾರೆ ಅಂದಾಗ, ‘ಆಫ್ರಿಕಾ ತಾನೇ, ನಾವು ಅಲ್ಲಿಗೆ ಚೆನ್ನಾಗಿ ಅಡ್ಜೆಸ್ಟ್ ಆಗಿದ್ದೀವಿ’ ಅಂದ್ಕೊಂಡ್ವಿ. ಆದ್ರೆ ಇಲ್ಲಿ ಬಂದ್ಮೇಲೆ ಇನ್ನು ಕಲಿಯೋಕೆ ತುಂಬ ಇದೆ ಅಂತ ಗೊತ್ತಾಯ್ತು. ಇಲ್ಲಿ ಸರಿಯಾಗಿರೋ ರಸ್ತೆ ಇಲ್ಲ, ಗಾಡಿಗಳಿಲ್ಲ. ಆದ್ರೂ ಒಳ್ಳೆ ವಿಷ್ಯಗಳಿವೆ. ನಮ್ಮ ಸಹೋದರರು ಬಡತನದ ಮಧ್ಯೆನೂ ಖುಷಿಯಾಗಿ ಸೇವೆಗೆ, ಕೂಟಗಳಿಗೆ, ಸಮ್ಮೇಳನಗಳಿಗೆ ಬರ್ತಿದ್ದಾರೆ. ಕಷ್ಟಗಳ ಮಧ್ಯೆನೂ ಸಿಹಿಸುದ್ದಿಯ ಕೆಲಸ ಚೆನ್ನಾಗಿ ಮಾಡ್ತಿದ್ದಾರೆ. ಇದೆಲ್ಲ ಯೆಹೋವನ ಸಹಾಯದಿಂದ ಮಾತ್ರ ಸಾಧ್ಯ ಅಂತ ಕಣ್ಣಾರೆ ನೋಡಿದ್ದೀವಿ. ಕಾಂಗೋ ದೇಶದಲ್ಲಿ ನಾವು ಹಲವಾರು ವರ್ಷ ಸೇವೆ ಮಾಡಿದ್ವಿ. ಇಲ್ಲಿ ಮಾಡಿದ ಸೇವೆ ನಮಗೆ ಮರೆಯಲಾಗದ ಅನುಭವಗಳನ್ನ ಮತ್ತು ಸ್ನೇಹಿತರನ್ನ ಕೊಟ್ಟಿದೆ.
ದಕ್ಷಿಣ ಆಫ್ರಿಕಾದಲ್ಲಿ ಸಾರುವ ಕೆಲಸ, 2023
2017ರ ಕೊನೆಯಷ್ಟರಲ್ಲಿ ನಮಗೆ ಇನ್ನೊಂದು ನೇಮಕ ಸಿಕ್ತು. ಈ ಸಲ ದಕ್ಷಿಣ ಆಫ್ರಿಕಾಗೆ ನಮ್ಮನ್ನ ಕಳಿಸಿದ್ರು. ಇದೇ ನಾವು ಸೇವೆ ಮಾಡಿರೋದ್ರಲ್ಲೇ ದೊಡ್ಡ ಬೆತೆಲ್. ಇಲ್ಲಿ ನಮಗಿದ್ದ ನೇಮಕ ತುಂಬ ಹೊಸದಾಗಿತ್ತು. ನಾವು ಮತ್ತೆ ಹೊಸ ಪಾಠಗಳನ್ನ ಕಲಿಬೇಕಿತ್ತು. ಆದ್ರೆ ಈ ಹಿಂದೆ ಕಲಿತ ಪಾಠಗಳು ನಮಗೆ ಸಹಾಯ ಮಾಡ್ತು. ಇಲ್ಲಿ ಹತ್ತಾರು ವರ್ಷಗಳಿಂದ ಎಲ್ಲಾನೂ ತಾಳ್ಕೊಂಡು ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿರೋ ಸಹೋದರರು ಇದ್ದಾರೆ. ಈ ಬೆತೆಲಲ್ಲಿ ಬೇರೆಬೇರೆ ಭಾಷೆ, ಹಿನ್ನೆಲೆ ಮತ್ತು ಸಂಸ್ಕೃತಿಯ ಸಹೋದರರು ಒಗ್ಗಟ್ಟಿನಿಂದ ಕೆಲಸ ಮಾಡ್ತಿದ್ದಾರೆ. ಇವ್ರೆಲ್ಲ ಹೊಸ ವ್ಯಕ್ತಿತ್ವ ಹಾಕೊಳ್ಳೋಕೆ, ಬೈಬಲ್ ಹೇಳೋದನ್ನ ಪಾಲಿಸೋಕೆ ತಮ್ಮ ಕೈಲಾಗಿದ್ದನ್ನೆಲ್ಲ ಮಾಡ್ತಾರೆ. ಇದನ್ನೆಲ್ಲಾ ನೋಡಿದ್ರೆ ಯೆಹೋವ ಇವ್ರನ್ನ ಆಶೀರ್ವಾದಿಸ್ತಿದ್ದಾನೆ ಅಂತ ಸ್ಪಷ್ಟವಾಗಿ ಗೊತ್ತಾಗುತ್ತೆ.
ಇಷ್ಟು ವರ್ಷಗಳಲ್ಲಿ ಡೆಬಿಗೆ ಮತ್ತು ನನಗೆ ಎಷ್ಟೊಂದು ನೇಮಕಗಳು ಸಿಕ್ಕಿದೆ. ನಾವು ಹೊಸಹೊಸ ಸಂಸ್ಕೃತಿ ಮತ್ತು ಭಾಷೆಗಳನ್ನ ಕಲಿಬೇಕಾಯ್ತು. ಇವೆಲ್ಲ ಅಷ್ಟು ಸುಲಭ ಇರ್ಲಿಲ್ಲ. ಹಾಗಿದ್ರೂ ತನ್ನ ಸಂಘಟನೆಯಿಂದ ನಮ್ಮ ಸಹೋದರರಿಂದ ಯೆಹೋವನು ತನ್ನ ಶಾಶ್ವತ ಪ್ರೀತಿ ತೋರಿಸಿದ್ದಾನೆ. (ಕೀರ್ತ. 144:2) ಪೂರ್ಣ ಸಮಯದ ಸೇವೆ ಮಾಡೋ ಮೂಲಕ ನಮಗೆ ಒಳ್ಳೇ ತರಬೇತಿ ಸಿಕ್ತು. ಇದ್ರಿಂದ ನಾವು ಯೆಹೋವನಿಗೆ ಇನ್ನಷ್ಟು ಒಳ್ಳೇ ಆರಾಧಕರಾಗೋಕೆ ಆಗಿದೆ.
ಅಪ್ಪಅಮ್ಮ ಕೊಟ್ಟ ತರಬೇತಿ, ಡೆಬಿ ಕೊಟ್ಟ ಬೆಂಬಲ ಮತ್ತು ನಮ್ಮ ಸಹೋದರರ ಮಾದರಿ ನನಗೆ ಎಷ್ಟೋ ಅಮೂಲ್ಯ ಪಾಠಗಳನ್ನ ಕಲಿಸಿದೆ. ಮುಂದಿನ ದಿನಗಳಲ್ಲೂ ನಮ್ಮ ಮಹಾನ್ ಬೋಧಕನಾದ ಯೆಹೋವ ಜೀವನಪೂರ್ತಿ ನಮಗೆ ಜೀವನ ಪಾಠಗಳನ್ನ ಕಲಿಸೋದಕ್ಕಾಗಿ ನಾವು ಕಾಯ್ತಾ ಇದ್ದೀವಿ.