ಕರುಣೆಯಿಂದ ಕೂಡಿದ ನಿಯಮ ನಿಮ್ಮನ್ನ ಪ್ರೇರಿಸಲಿ
“ಸಹೋದರ ಸಹೋದರಿಯರು ತೋರಿಸಿದ ಕರುಣೆನೇ ನನ್ನನ್ನ ಸತ್ಯಕ್ಕೆ ಕರಕೊಂಡು ಬಂತು” ಅಂತ ಲೀಸಾ ಹೇಳ್ತಾರೆ. a “ಅವರು ಕಲಿಸಿದ ವಿಷಯಕ್ಕಿಂತ ಅವರು ತೋರಿಸಿದ ಕರುಣೆನೇ ನನ್ನ ಮನಸ್ಸು ಮುಟ್ಟಿತು” ಅಂತ ಸಹೋದರಿ ಆ್ಯನ್ ಹೇಳ್ತಾರೆ. ಈ ಇಬ್ಬರು ಸಹೋದರಿಯರಿಗೆ ಬೈಬಲ್ ಅಧ್ಯಯನ ಮಾಡೋದಂದ್ರೆ ಇಷ್ಟ. ಆದ್ರೆ ಅವರನ್ನ ಸತ್ಯಕ್ಕೆ ಕರೆದುಕೊಂಡು ಬಂದಿದ್ದು ಸಹೋದರ ಸಹೋದರಿಯರು ತೋರಿಸಿದ ಪ್ರೀತಿ ಅಥವಾ ಕರುಣೆನೇ ಅಂತ ಇದ್ರಿಂದ ಗೊತ್ತಾಗುತ್ತೆ.
ಜನರ ಮನಸ್ಸನ್ನ ಸೆಳೆಯೋ ತರ ಕರುಣೆ ತೋರಿಸಬೇಕಂದ್ರೆ ನಮ್ಮ ಮಾತು ಮತ್ತು ನಮ್ಮ ನಡತೆಯಲ್ಲಿ ಆ ಗುಣ ಎದ್ದುಕಾಣಬೇಕು. ಅದನ್ನ ಹೇಗೆ ತೋರಿಸಬೇಕು ಮತ್ತು ಯಾರಿಗೆ ತೋರಿಸಬೇಕು ಅಂತ ಈಗ ನೊಡೋಣ.
ನಿಮ್ಮ ನಾಲಿಗೆಯಲ್ಲಿ ಕರುಣೆಯಿಂದ ಕೂಡಿದ ನಿಯಮ ಇರಲಿ
ಜ್ಞಾನೋಕ್ತಿ 31ನೇ ಅಧ್ಯಾಯದಲ್ಲಿ ಒಳ್ಳೇ ಹೆಂಡತಿ ಬಗ್ಗೆ ಮಾತಾಡುತ್ತೆ. ಅವಳ ನಾಲಿಗೆಯಲ್ಲಿ ‘ಶಾಶ್ವತ ಪ್ರೀತಿಯಿಂದ [ಕರುಣೆಯಿಂದ] ಕೂಡಿದ ನಿಯಮ ಇರುತ್ತೆ.’ (ಜ್ಞಾನೋ. 31:26, ಪಾದಟಿಪ್ಪಣಿ) ಈ “ನಿಯಮ” ಅವಳಲ್ಲಿ ಇರೋದ್ರಿಂದ ಅವಳು ಮಾತಾಡೋಕೂ ಮುಂಚೆ ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಅಂತ ಯೋಚನೆ ಮಾಡಿ ಮಾತಾಡ್ತಾಳೆ. ಕುಟುಂಬದಲ್ಲಿರೋ ಅಪ್ಪಂದಿರು ಈ ನಿಯಮನ ಪಾಲಿಸ್ತಾರೆ. ಅವರು ತಮ್ಮ ಮಕ್ಕಳ ಜೊತೆ ಮಾತಾಡುವಾಗ ಕಟುವಾಗಿ, ಕೋಪದಿಂದ, ನಿರ್ದಯೆಯಿಂದ ಅಥವಾ ಕಡ್ಡಿ ಮುರಿದ ಹಾಗೆ ಮಾತಾಡಲ್ಲ. ಯಾಕಂದ್ರೆ ಹೀಗೆ ಮಾಡಿದ್ರೆ ಮಕ್ಕಳಿಗೆ ತುಂಬ ಬೇಜಾರಾಗುತ್ತೆ, ತಮ್ಮ ಮಾತು ಕೇಳಲ್ಲ ಅಂತ ಅವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಮಕ್ಕಳು ತಮ್ಮ ಮಾತು ಕೇಳಬೇಕಂದ್ರೆ ಹೆತ್ತವರು ಪ್ರೀತಿ ಮತ್ತು ದಯೆಯಿಂದ ಮಾತಾಡೋದು ತುಂಬ ಮುಖ್ಯ.
ಹೆತ್ತವರು ಮಾತ್ರ ಅಲ್ಲ ನಾವೆಲ್ರೂ ದಯೆಯಿಂದ ಮಾತಾಡಬೇಕು. ಅದಕ್ಕೆ ನಾವೇನು ಮಾಡಬೇಕು? ಅದಕ್ಕೆ ಉತ್ತರ ಜ್ಞಾನೋಕ್ತಿ 31:26ರ ಮೊದಲನೇ ಭಾಗದಲ್ಲಿದೆ. ಅಲ್ಲಿ, “ಅವಳು ಬಾಯಿ ತೆರೆದಾಗೆಲ್ಲ ವಿವೇಕದಿಂದ ಮಾತಾಡ್ತಾಳೆ” ಅಂತ ಹೇಳುತ್ತೆ. ಈ ವಚನದಲ್ಲಿ ಹೇಳಿದ ಹಾಗೆ ನಾವು ವಿವೇಕದಿಂದ ಮಾತಾಡಬೇಕು ಅಂದ್ರೆ ನಾವು ಮಾತಾಡೋಕೂ ಮುಂಚೆ ನಾವು ಏನು ಮಾತಾಡುತ್ತಿದ್ದೀವಿ, ಹೇಗೆ ಮಾತಾಡುತ್ತಿದ್ದೀವಿ ಅಂತ ಯೋಚನೆ ಮಾಡಬೇಕು. ಉದಾಹರಣೆಗೆ, ನಾವು ಒಬ್ಬರ ಹತ್ರ ಮಾತಾಡೋ ಮುಂಚೆ, ‘ಈಗ ನಾನು ಆಡೋ ಮಾತು ಅವರಿಗೆ ಕೋಪ ಬರಿಸುತ್ತಾ, ಅಥವಾ ಸಮಾಧಾನ ಮಾಡುತ್ತಾ?’ ಅಂತ ನಮ್ಮನ್ನೇ ಕೇಳ್ಕೊಬೇಕು. (ಜ್ಞಾನೋ. 15:1) ಹೀಗೆ ಯೋಚನೆ ಮಾಡಿ ಮಾತಾಡೋದೇ ವಿವೇಕ ಆಗಿದೆ.
“ಯೋಚ್ನೆ ಮಾಡ್ದೆ ಹೇಳೋ ಮಾತುಗಳು ಕತ್ತಿ ತಿವಿದ ಹಾಗಿರುತ್ತೆ” ಅಂತ ಇನ್ನೊಂದು ಜ್ಞಾನೋಕ್ತಿ ಹೇಳುತ್ತೆ. (ಜ್ಞಾನೋ. 12:18) ನಾವು ಏನು ಹೇಳ್ತಿದ್ದೀವಿ? ಯಾವ ಸ್ವರದಲ್ಲಿ ಹೇಳ್ತಿದ್ದೀವಿ? ಇದನ್ನ ಕೇಳಿಸಿಕೊಂಡಾಗ ಅವರಿಗೆ ಹೇಗೆ ಅನಿಸುತ್ತೆ? ಅಂತೆಲ್ಲ ನಾವು ಯೋಚನೆ ಮಾಡಿದ್ರೆ ನಾವು ಮಾತಾಡೋ ರೀತಿಯನ್ನ ಬದಲಾಯಿಸಿಕೊಳ್ತೀವಿ. “ಶಾಶ್ವತ ಪ್ರೀತಿಯಿಂದ ಕೂಡಿದ ನಿಯಮನ” ನಾವು ಪಾಲಿಸಿದ್ರೆ ಬೇರೆಯವರ ಜೊತೆ ಒರಟಾಗಿ, ಕೋಪದಿಂದ ನಾವು ಮಾತಾಡಲ್ಲ. (ಎಫೆ. 4:31, 32) ನಾವು ಅವರ ಬಗ್ಗೆ ಒಳ್ಳೇದನ್ನೇ ಯೋಚಿಸ್ತೀವಿ, ಪ್ರೀತಿಯಿಂದ ನಡಕೊಳ್ತೀವಿ ಮತ್ತು ಅವರಿಗೆ ಇಷ್ಟ ಆಗೋ ತರ ಮಾತಾಡ್ತೀವಿ. ಈ ವಿಷಯದಲ್ಲಿ ಯೆಹೋವ ಒಳ್ಳೇ ಮಾದರಿಯಾಗಿದ್ದಾನೆ. ಭಯದಲ್ಲಿ ಮುಳುಗಿಹೋಗಿದ್ದ ಎಲೀಯನ ಹತ್ರ ಯೆಹೋವ ಧೈರ್ಯ ತುಂಬೋ ತರ ಮಾತಾಡಿದನು. ಆತನು ಕಳಿಸಿದ ದೇವದೂತ ಎಲೀಯನ ಹತ್ರ ‘ಪ್ರಶಾಂತವಾದ ಚಿಕ್ಕ ಧ್ವನಿಯಿಂದ’ ಮಾತಾಡಿದ. (1 ಅರ. 19:12) ನಾವು ಕರುಣೆಯಿರೋ ವ್ಯಕ್ತಿಗಳಾಗಬೇಕಂದ್ರೆ ದಯೆಯಿಂದ ಮಾತಾಡೋದಷ್ಟೇ ಅಲ್ಲ, ದಯೆಯಿಂದ ನಡೆದುಕೊಳ್ಳಬೇಕು. ಹೇಗೆ ಅಂತ ಈಗ ನೊಡೋಣ.
ದಯೆ ತೋರಿ ಮನ ಗೆಲ್ಲಿ
ನಾವು ಯೆಹೋವನ ತರ ಇರಬೇಕಂದ್ರೆ ದಯೆಯಿಂದ ಮಾತಾಡೋದಷ್ಟೇ ಅಲ್ಲ ಅದೇ ತರ ನಡಕೊಳ್ಳಬೇಕು. (ಎಫೆ. 4:32; 5:1, 2) ಯೆಹೋವನ ಸಾಕ್ಷಿಗಳು, ಸಹೋದರಿ ಲೀಸಾ ಮತ್ತು ಅವರ ಕುಟುಂಬದವರಿಗೆ ಹೇಗೆ ಕರುಣೆ ತೋರಿಸಿದ್ರು ಅಂತ ಸಹೋದರಿ ಹೇಳ್ತಾರೆ: “ನಾವು ದಿಢೀರಂತ ಮನೆ ಖಾಲಿ ಮಾಡಬೇಕಾಗಿ ಬಂದಾಗ ನಮ್ಮ ಪಕ್ಕದ ಮನೆಯಲ್ಲಿದ್ದ ಇಬ್ಬರು ದಂಪತಿಗಳು, ಅವರ ಕೆಲಸಕ್ಕೆ ರಜೆ ಹಾಕಿ ಪ್ಯಾಕಿಂಗ್ ಮಾಡೋಕೆ ನಮಗೆ ಸಹಾಯ ಮಾಡಿದ್ರು. ಅವರು ಯೆಹೋವನ ಸಾಕ್ಷಿಗಳಾಗಿದ್ರು. ಆಗ ನಾನಿನ್ನೂ ಬೈಬಲ್ ಕಲಿಯೋಕೆ ಶುರು ಮಾಡಿರಲಿಲ್ಲ!” ಆ ದಂಪತಿಗಳು ದಯೆಯಿಂದ ನಡಕೊಂಡಿದ್ದು ಲೀಸಾಗೆ ಸತ್ಯ ಕಲಿಯೋಕೆ ಸಹಾಯ ಮಾಡ್ತು.
ಸಹೋದರಿ ಆ್ಯನ್‌ಗೂ ಸತ್ಯಕ್ಕೆ ಬರೋಕೆ ಸಹಾಯ ಮಾಡಿದ್ದು ನಮ್ಮ ಸಹೋದರ ಸಹೋದರಿಯರು ತೋರಿಸಿದ ಕರುಣೆನೇ. “ಈ ಕಾಲದಲ್ಲಿ ನಾವು ಯಾರನ್ನೂ ನಂಬೋಕಾಗಲ್ಲ. ಮೊದಮೊದಲು ಯೆಹೋವನ ಸಾಕ್ಷಿಗಳು ನನ್ನ ಹತ್ರ ಮಾತಾಡೋಕೆ ಬಂದಾಗ ನಾನು ಅವರನ್ನೂ ನಂಬುತ್ತಿರಲಿಲ್ಲ. ‘ಅವರು ಯಾಕೆ ನನ್ನ ಹತ್ರ ಬಂದಿದ್ದಾರೆ?’ ಅಂತ ಅಂದುಕೊಳ್ತಿದ್ದೆ. ಆದ್ರೆ ನನಗೆ ಬೈಬಲ್ ಕಲಿಸ್ತಿದ್ದವರು ನನ್ನ ಜೊತೆ ದಯೆಯಿಂದ ನಡಕೊಳ್ತಿದ್ರು. ಇದ್ರಿಂದ ನನಗೆ ಬೈಬಲ್ ಕಲಿಬೇಕು ಅನ್ನೋ ಆಸೆ ಬಂತು” ಅಂತ ಸಹೋದರಿ ಆ್ಯನ್ ಹೇಳ್ತಾರೆ.
ನೋಡಿದ್ರಾ ಸಹೋದರಿ ಲೀಸಾ ಮತ್ತು ಆ್ಯನ್, ಸಭೆಯವರು ತೋರಿಸಿದ ಕರುಣೆಯನ್ನ ಇನ್ನೂ ಮರೆತಿಲ್ಲ. ಅವರ ಮನಸ್ಸಲ್ಲಿ ಬೈಬಲ್ ಕಲಿಬೇಕು ಅನ್ನೋ ಆಸೆ ಚಿಗುರೊಡೆಯೋಕೆ ಕಾರಣ ಸಹೋದರ ಸಹೋದರಿಯರು ತೋರಿಸಿದ ಕರುಣೆನೇ. ಈ ಕರುಣೆಯಿಂದನೇ ಅವರು ಯೆಹೋವನನ್ನು ಮತ್ತು ಆತನ ಜನರನ್ನು ನಂಬಿದ್ರು.
ದೇವರ ತರನೇ ಕರುಣೆ ತೋರಿಸೋಕೆ ಕಲಿರಿ
ಕೆಲವು ಸಂಸ್ಕೃತಿಯ ಜನರು ಬೇರೆಯವರ ಹತ್ರ ಮಾತಾಡುವಾಗ ಮುಗುಳ್ನಗೆಯಿಂದ ಮಾತಾಡ್ತಾರೆ, ದಯೆಯಿಂದ ಅಪೊಸ್ತಲರ ಕಾರ್ಯ 28:2 ಹೋಲಿಸಿ.
ಮಾತಾಡ್ತಾರೆ. ಇದು ಅವರಿಗೆ ಸ್ವಾಭಾವಿಕವಾಗೇ ಬರುತ್ತೆ. ಈ ರೀತಿ ಸಭ್ಯತೆಯಿಂದ ನಡಕೊಳ್ಳೋದು ಒಳ್ಳೇದೇ. ಆದ್ರೆ ನಾವು ಸ್ವಾಭಾವಿಕವಾಗಿ ಕರುಣೆ ತೋರಿಸೋಕೂ ದೇವರ ತರ ಕರುಣೆ ತೋರಿಸೋಕೂ ವ್ಯತ್ಯಾಸ ಇದೆ.—ಕರುಣೆ ಯೆಹೋವನ ಪವಿತ್ರ ಶಕ್ತಿಯಿಂದ ಬರೋ ಗುಣ ಆಗಿದೆ. (ಗಲಾ. 5:22, 23) ಅದನ್ನ ಬೆಳೆಸಿಕೊಳ್ಳೋಕೆ ಪವಿತ್ರ ಶಕ್ತಿಯ ಸಹಾಯ ಬೇಕು ಮತ್ತು ಯೆಹೋವ ಮತ್ತು ಯೇಸುಗೆ ಇಷ್ಟ ಆಗೋ ತರ ನಡಕೊಳ್ಳಬೇಕು ಅನ್ನೋ ಆಸೆ ನಮ್ಮಲ್ಲಿರಬೇಕು. ಅಷ್ಟೇ ಅಲ್ಲ, ಜನರಿಗೆ ಸಹಾಯ ಮಾಡಬೇಕು ಅನ್ನೋ ಆಸೆನೂ ನಮಗಿರಬೇಕು. ಹಾಗಾಗಿ ಈ ಕರುಣೆ ಯೆಹೋವನ ಮೇಲೆ ಮತ್ತು ಜನರ ಮೇಲಿರೋ ಪ್ರೀತಿಯಿಂದ ಬರುತ್ತೆ. ದೇವರಿಂದ ಬರೋ ಈ ಕರುಣೆ ಬರೀ ಒಂದು ಭಾವನೆ ಅಲ್ಲ, ಅದು ನಮ್ಮ ಮನಸ್ಸಲ್ಲಿ ಹುಟ್ಟೋ ಗುಣ. ನಾವು ಈ ಗುಣವನ್ನ ಬೆಳೆಸಿಕೊಂಡ್ರೆ ಯೆಹೋವನಿಗೆ ತುಂಬ ಖುಷಿಯಾಗುತ್ತೆ.
ಯಾರಿಗೆ ಕರುಣೆ ತೋರಿಸಬೇಕು?
ನಮಗೆ ಗೊತ್ತಿರುವವರಿಗೆ, ನಮ್ಮ ಜೊತೆ ದಯೆ ಪ್ರೀತಿಯಿಂದ ನಡಕೊಳ್ಳುವವ್ರಿಗೆ ನಾವು ಕರುಣೆ ತೋರಿಸ್ತೀವಿ. (2 ಸಮು. 2:6) ಅವರು ಮಾಡಿದ ಸಹಾಯವನ್ನ ನೆನಪಿಸಿಕೊಳ್ತೀವಿ. (ಕೊಲೊ. 3:15) ಆದ್ರೆ ಕೆಲವರಿಗೆ ನಮ್ಮ ಕರುಣೆಯನ್ನ ಪಡೆದುಕೊಳ್ಳೋ ಯೋಗ್ಯತೆ ಇಲ್ಲ ಅಂತ ನಮಗೆ ಅನಿಸಬಹುದು. ಆಗ ನಾವು ಏನು ಮಾಡೋದು?
ಇದಕ್ಕೆ ಯೆಹೋವ ನಮಗೆ ಒಳ್ಳೇ ಮಾದರಿ ಇಟ್ಟಿದ್ದಾನೆ. ಕರುಣೆಯನ್ನ ಪಡೆದುಕೊಳ್ಳೋ ಯೋಗ್ಯತೆ ಇಲ್ಲದೆ ಇರುವವರಿಗೂ ಯೆಹೋವ ಕರುಣೆ ತೋರಿಸ್ತಾನೆ. ಆತನ ತರ ಅಪಾರ ಕೃಪೆಯನ್ನ ತೋರಿಸೋಕೆ ಯಾರಿಂದನೂ ಆಗಲ್ಲ. ಅದನ್ನ ಹೇಗೆ ತೋರಿಸಬೇಕು ಅಂತ ಬೈಬಲ್ ನಮಗೆ ಹೇಳಿಕೊಡುತ್ತೆ. ಈ “ಅಪಾರ ಕೃಪೆ” ಅನ್ನೋ ಪದನ ಕ್ರೈಸ್ತ ಗ್ರೀಕ್ ಶಾಸ್ತ್ರ ಗ್ರಂಥದಲ್ಲಿ ತುಂಬ ಸಲ ಬಳಸಲಾಗಿದೆ. ಈ ಗುಣನ ಯೆಹೋವ ಹೇಗೆಲ್ಲಾ ತೋರಿಸಿದ್ದಾನೆ?
ಇಲ್ಲಿ ತನಕ ಭೂಮಿ ಮೇಲೆ ಕೋಟ್ಯಾಂತರ ಜನರು ಜೀವಿಸಿದ್ದಾರೆ, ಈಗಲೂ ಜೀವಿಸ್ತಿದ್ದಾರೆ. ಅವರಿಗೆ ಬದುಕೋಕೆ ಬೇಕಾಗಿರೋದನ್ನೆಲ್ಲ ಕೊಟ್ಟು ಯೆಹೋವ ಅವರಿಗೆ ಕರುಣೆ ತೋರಿಸಿದ್ದಾನೆ. (ಮತ್ತಾ. 5:45) ಯೆಹೋವ ಯಾರಂತ ಮನುಷ್ಯರಿಗೆ ಇನ್ನೂ ಗೊತ್ತಿಲ್ಲದೆ ಇದ್ದಾಗಲೇ ಯೆಹೋವ ಅವರಿಗೆ ಕರುಣೆ ತೋರಿಸಿದ್ದಾನೆ. (ಎಫೆ. 2:4, 5, 8) ಉದಾಹರಣೆಗೆ, ಆತನ ಒಬ್ಬನೇ ಮಗನನ್ನ ನಮಗೋಸ್ಕರ ಕಳಿಸಿಕೊಟ್ಟಿದ್ದಾನೆ. ಆತನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ‘ಅಪಾರ ಕೃಪೆಯನ್ನ ಧಾರಾಳವಾಗಿ ತೋರಿಸಿದ್ದಾನೆ’ ಅಂತ ಅಪೊಸ್ತಲ ಪೌಲ ಬರೆದ. (ಎಫೆ. 1:7) ಅಷ್ಟೇ ಅಲ್ಲ, ನಾವು ಪಾಪಿಗಳು, ತನ್ನ ಮನಸ್ಸನ್ನ ನೋಯಿಸಿಬಿಡ್ತೀವಿ ಅಂತ ಯೆಹೋವನಿಗೆ ಗೊತ್ತಿದ್ರೂ ನಮಗೆ ದಾರಿ ತೋರಿಸ್ತಾ, ಕಲಿಸ್ತಾ ಇದ್ದಾನೆ. ಆತನ ಮಾತುಗಳು ಮತ್ತು ನಿರ್ದೇಶನಗಳು “ತುಂತುರಿನ” ಹಾಗಿದೆ. (ಧರ್ಮೋ. 32:2) ಆತನು ನಮಗೆ ತೋರಿಸಿರೋ ಕರುಣೆಯ ಋಣವನ್ನ ಏನು ಮಾಡಿದ್ರೂ ನಾವು ತೀರಿಸೋಕಾಗಲ್ಲ. ನಿಜ ಹೇಳಬೇಕಂದ್ರೆ ಯೆಹೋವ ನಮಗೆ ಕರುಣೆ ತೋರಿಸದೆ ಹೋಗಿದ್ರೆ ನಮ್ಮ ಜೀವನಕ್ಕೆ ನಿರೀಕ್ಷೆನೇ ಇರುತ್ತಿರಲಿಲ್ಲ.—1 ಪೇತ್ರ 1:13 ಹೋಲಿಸಿ.
ಯೆಹೋವ ಕರುಣೆ ತೋರಿಸೋದನ್ನ ನೋಡಿದ್ರೆ ನಾವೂ ಬೇರೆಯವ್ರಿಗೆ ಕರುಣೆ ತೋರಿಸಬೇಕು ಅನಿಸುತ್ತೆ. ನಮಗೆ ಇಷ್ಟ ಆದವ್ರಿಗೆ ಮಾತ್ರ ಅಲ್ಲ ಎಲ್ರಿಗೂ ಯಾವಾಗಲೂ ಕರುಣೆ ತೋರಿಸಬೇಕು. ಹೀಗೆ ಮಾಡಿದ್ರೆ ನಾವು ಯೆಹೋವನ ತರ ನಡಕೊಂಡ ಹಾಗಾಗುತ್ತೆ. (1 ಥೆಸ. 5:15) ಚಳಿಗಾಲದಲ್ಲಿ ಬೆಂಕಿ ಕಾಯಿಸಿಕೊಂಡಾಗ ಹೇಗೆ ಬೆಚ್ಚಗಾಗುತ್ತೋ ಹಾಗೇ ನಾವು ಬೇರೆಯವ್ರಿಗೆ ಕರುಣೆ ತೋರಿಸಿದಾಗ ಅವರ ಮನಸ್ಸು ಖುಷಿಯಿಂದ ಅರಳುತ್ತೆ. ನಾವು ಕರುಣೆ ತೋರಿಸಿದ್ರೆ ನಮ್ಮ ಕುಟುಂಬದವರಿಗೆ, ಸಹೋದರ ಸಹೋದರಿಯರಿಗೆ, ಜೊತೆ ಕೆಲಸ ಮಾಡುವವ್ರಿಗೆ, ಸಹಪಾಠಿಗಳಿಗೆ, ಅಕ್ಕ ಪಕ್ಕದವ್ರಿಗೆ ನಮ್ಮ ಜೊತೆ ಇರೋಕೆ ಇಷ್ಟ ಆಗುತ್ತೆ.
ನೀವು ದಯೆಯಿಂದ ಮಾತಾಡಿದ್ರೆ ಅಥವಾ ನಡಕೊಂಡ್ರೆ ನಿಮ್ಮ ಮನೆಯಲ್ಲಿ ಇರುವವ್ರಿಗೆ ಅಥವಾ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಏನೆಲ್ಲಾ ಪ್ರಯೋಜನ ಆಗುತ್ತೆ ಅಂತ ಸ್ವಲ್ಪ ಯೋಚಿಸಿ. ನಿಮ್ಮ ಸಭೆಯಲ್ಲಿ ಯಾರಿಗಾದ್ರೂ ಮನೆ ಕೆಲಸ ಮಾಡೋಕೆ, ತೋಟದ ಕೆಲಸ ಮಾಡೋಕೆ ಅಥವಾ ಅಂಗಡಿಗೆ ಹೋಗಿ ಬರೋಕೆ ಸಹಾಯ ಬೇಕಾಗಿರಬಹುದು. ನೀವು ಸಿಹಿಸುದ್ದಿ ಸಾರೋ ಜನ್ರಿಗೂ ಸಹಾಯದ ಅಗತ್ಯ ಇರಬಹುದು. ನೀವು ಅಂಥವರಿಗೆ ಸಹಾಯ ಮಾಡೋಕಾಗುತ್ತಾ ಅಂತ ಯೋಚನೆ ಮಾಡಿ.
ಹಾಗಾಗಿ ನಮ್ಮ ಮಾತಲ್ಲಿ ಮತ್ತು ನಡತೆಯಲ್ಲಿ ಕರುಣೆಯಿಂದ ಕೂಡಿದ ನಿಯಮನ ಪಾಲಿಸುತ್ತಾ ಇರೋಣ.
a ಹೆಸರುಗಳು ಬದಲಾಗಿವೆ.