ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ

ಮುಖ್ಯ ವಿವಾದಾಂಶದ ಮೇಲೆ ಗಮನವಿಡಿ

“ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಕೀರ್ತ. 83:18.

ಗೀತೆಗಳು: 46, 136

1, 2. (ಎ) ಎಲ್ಲ ಮಾನವರನ್ನು ಒಳಗೊಂಡಿರುವ ಮುಖ್ಯವಾದ ವಿವಾದಾಂಶ ಯಾವುದು? (ಬಿ) ಈ ವಿವಾದಾಂಶಕ್ಕೆ ನಾವೇಕೆ ಮಹತ್ವ ಕೊಡಬೇಕು?

 ಇಂದು ಹೆಚ್ಚಿನ ಜನರಿಗೆ ಹಣನೇ ಎಲ್ಲಕ್ಕಿಂತ ಮುಖ್ಯ. ಯಾವಾಗಲೂ ಅದರ ಬಗ್ಗೆಯೇ ಯೋಚಿಸುತ್ತಾರೆ. ಹಣ ಮಾಡುವುದರಲ್ಲಿ ಇಲ್ಲವೇ ಇದ್ದ ಹಣವನ್ನು ಉಳಿಸಿಕೊಳ್ಳುವುದರಲ್ಲಿ ತಮ್ಮ ಸಮಯವನ್ನೆಲ್ಲ ಕಳೆಯುತ್ತಾರೆ. ಬೇರೆ ಜನರಿಗೆ ಅವರ ಕುಟುಂಬ, ಆರೋಗ್ಯ, ಜೀವನದಲ್ಲಿ ಮಾಡಬೇಕಾದ ಸಾಧನೆಗಳು ಇವೆಲ್ಲ ಎಲ್ಲಕ್ಕಿಂತ ಮುಖ್ಯ ಆಗಿರುತ್ತದೆ.

2 ಈ ಎಲ್ಲ ವಿಷಯಗಳಿಗಿಂತಲೂ ಹೆಚ್ಚು ಮುಖ್ಯವಾದ ಒಂದು ವಿಷಯವಿದೆ. ಅದು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ವಿವಾದಾಂಶ. ಅದರ ಮೇಲಿಂದ ನಮ್ಮ ಗಮನ ಯಾವತ್ತೂ ಸರಿಯಬಾರದು. ನಾವು ಎಚ್ಚರ ವಹಿಸದಿದ್ದರೆ ನಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ಇಲ್ಲವೇ ನಮ್ಮ ವೈಯಕ್ತಿಕ ಸಮಸ್ಯೆಗಳ ಚಿಂತೆಯಲ್ಲೇ ಮುಳುಗಿ ಈ ವಿವಾದಾಂಶದ ಮಹತ್ವವನ್ನು ಮರೆತುಬಿಡುವ ಸಾಧ್ಯತೆ ಇದೆ. ನಾವು ಯೆಹೋವನ ಪರಮಾಧಿಕಾರದ ವಿವಾದಾಂಶಕ್ಕೆ ಮಹತ್ವ ಕೊಟ್ಟರೆ ನಮ್ಮ ದೈನಂದಿನ ಸಮಸ್ಯೆಗಳನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುವುದು. ಮಾತ್ರವಲ್ಲ ನಾವು ಯೆಹೋವನಿಗೆ ಇನ್ನೂ ಹತ್ತಿರವಾಗುವೆವು.

ಈ ವಿವಾದಾಂಶ ಯಾಕೆ ಮುಖ್ಯ?

3. ದೇವರ ಆಳ್ವಿಕೆಯ ಬಗ್ಗೆ ಸೈತಾನನು ಏನು ಹೇಳಿದ್ದಾನೆ?

3 ಪಿಶಾಚನಾದ ಸೈತಾನನು ಯೆಹೋವನ ಪರಮಾಧಿಕಾರ ಅಂದರೆ ಆಳುವ ಹಕ್ಕಿನ ಬಗ್ಗೆ ಸವಾಲೆಬ್ಬಿಸಿದ್ದಾನೆ. ಯೆಹೋವನು ಚೆನ್ನಾಗಿ ಆಳುವುದಿಲ್ಲ, ನಮ್ಮ ಒಳಿತನ್ನು ಬಯಸುವುದಿಲ್ಲವೆಂದು ನಾವು ನೆನಸಬೇಕೆನ್ನುವುದೇ ಅವನ ಆಸೆ. ಮಾನವರಾದ ನಾವು ನಮ್ಮನ್ನೇ ಆಳಿದರೆ ಹೆಚ್ಚು ಸಂತೋಷದಿಂದ ಇರಬಹುದು ಎನ್ನುವುದು ಸೈತಾನನ ಮಾತಿನ ಅರ್ಥವಾಗಿದೆ. (ಆದಿ. 3:1-5) ಅವನು ಇನ್ನೊಂದು ಮಾತನ್ನೂ ಹೇಳಿದ್ದಾನೆ. ಅದೇನೆಂದರೆ, ಯಾವ ಮಾನವನೂ ದೇವರಿಗೆ ನಿಜವಾದ ನಿಷ್ಠೆ ತೋರಿಸುವುದಿಲ್ಲ. ಜೀವನದಲ್ಲಿ ತುಂಬ ಕಷ್ಟಗಳು ಬಂದರೆ ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸಿಬಿಡುತ್ತಾನೆ ಎನ್ನುವುದು ಅವನ ವಾದ. (ಯೋಬ 2:4, 5) ಆದ್ದರಿಂದ ಯೆಹೋವನು, ತನ್ನ ಆಳ್ವಿಕೆ ಇಲ್ಲದಿದ್ದರೆ ಜೀವನ ಎಷ್ಟು ಕಷ್ಟಕರವಾಗುತ್ತದೆಂದು ಎಲ್ಲರಿಗೂ ಸ್ಪಷ್ಟವಾಗಲಿಕ್ಕಾಗಿ ಸಮಯ ಕೊಟ್ಟಿದ್ದಾನೆ.

4. ಪರಮಾಧಿಕಾರದ ವಿವಾದಾಂಶ ಯಾಕೆ ಇತ್ಯರ್ಥವಾಗಬೇಕು?

4 ಸೈತಾನನು ಹಾಕಿರುವ ಆರೋಪಗಳು ಸುಳ್ಳೆಂದು ಯೆಹೋವನಿಗೆ ಚೆನ್ನಾಗಿ ತಿಳಿದಿದೆ. ಹೀಗಿರುವಾಗ ಸೈತಾನನು ತನ್ನ ವಾದವನ್ನು ಸಾಬೀತುಪಡಿಸಲಿಕ್ಕಾಗಿ ಯೆಹೋವನು ಯಾಕೆ ಸಮಯ ಕೊಟ್ಟಿದ್ದಾನೆ? ಯಾಕೆಂದರೆ ಆತನ ಪರಮಾಧಿಕಾರದ ಕುರಿತ ವಿವಾದಾಂಶ ಇತ್ಯರ್ಥಗೊಳ್ಳುವುದರಲ್ಲಿ ದೇವದೂತರಿಗೆ ಮತ್ತು ಮಾನವರಿಗೆ ಸಹ ಒಂದು ಪಾತ್ರವಿದೆ. (ಕೀರ್ತನೆ 83:18 ಓದಿ.) ಆರಂಭದಲ್ಲಿ ಆದಾಮಹವ್ವರು, ಅನಂತರ ಇನ್ನೂ ಅನೇಕರು ಯೆಹೋವನ ಆಳ್ವಿಕೆಯನ್ನು ತಿರಸ್ಕರಿಸಿದ್ದಾರೆ. ಆದ್ದರಿಂದ ಪಿಶಾಚನು ಹೇಳಿದ್ದು ಸರಿ ಅಂತ ಕೆಲವರು ನೆನಸಬಹುದು. ಅವನು ಎಬ್ಬಿಸಿದ ವಿವಾದಾಂಶ ಮಾನವರ ಅಥವಾ ದೇವದೂತರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದರೆ ಈ ಲೋಕದಲ್ಲಿ ಸಂಪೂರ್ಣ ಶಾಂತಿ ಐಕ್ಯ ಇರಲು ಸಾಧ್ಯವಿಲ್ಲ. ಆದರೆ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಬಳಿಕ ಎಲ್ಲರೂ ಸದಾಕಾಲ ಆತನ ಅದ್ಭುತವಾದ ಆಳ್ವಿಕೆಯ ಕೆಳಗೆ ಜೀವಿಸುವರು. ಆಗ ಇಡೀ ವಿಶ್ವದಲ್ಲಿ ಶಾಂತಿ ಇರುವುದು. ಈ ಕಾರಣಕ್ಕೆ ಈ ವಿವಾದಾಂಶ ಇತ್ಯರ್ಥವಾಗಲೇಬೇಕು.—ಎಫೆ. 1:9, 10.

5. ಪರಮಾಧಿಕಾರದ ವಿವಾದಾಂಶದಲ್ಲಿ ನಾವು ಹೇಗೆ ಒಳಗೂಡಿದ್ದೇವೆ?

5 ದೇವರ ಪರಮಾಧಿಕಾರದ ನಿರ್ದೋಷೀಕರಣ ಆಗಲಿದೆ. ಸೈತಾನನ ಮತ್ತು ಮಾನವರ ಆಳ್ವಿಕೆ ಪೂರ್ತಿ ಸೋತುಹೋಗಿ, ಅದನ್ನು ತೆಗೆದುಹಾಕಲಾಗುವುದು. ಮೆಸ್ಸೀಯನ ರಾಜ್ಯದ ಮೂಲಕ ನಡೆಯಲಿರುವ ದೇವರ ಆಳ್ವಿಕೆ ಯಶಸ್ಸು ಹೊಂದುವುದು. ಅಷ್ಟರೊಳಗೆ, ಮಾನವರು ದೇವರಿಗೆ ನಂಬಿಗಸ್ತರಾಗಿ ಉಳಿಯಬಲ್ಲರು, ಆತನ ಆಳ್ವಿಕೆಯನ್ನು ನಿಷ್ಠೆಯಿಂದ ಬೆಂಬಲಿಸಲು ಶಕ್ತರು ಎಂದು ಸಾಬೀತಾಗಿರುವುದು. (ಯೆಶಾ. 45:23, 24) ದೇವರ ಪರಮಾಧಿಕಾರವನ್ನು ಬೆಂಬಲಿಸುವ ಇಂಥ ನಂಬಿಗಸ್ತ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಿರಲು ಇಷ್ಟಪಡುತ್ತೀರಲ್ಲವಾ? ಆದ್ದರಿಂದ ಈ ವಿವಾದಾಂಶ ಎಷ್ಟು ಪ್ರಾಮುಖ್ಯವೆಂದು ಅರ್ಥಮಾಡಿಕೊಂಡು ಅದರ ಮೇಲೆ ನಿಮ್ಮ ಗಮನವಿಡಿ.

ರಕ್ಷಣೆಗಿಂತ ನಿರ್ದೋಷೀಕರಣ ಮುಖ್ಯ

6. ಯೆಹೋವನ ಪರಮಾಧಿಕಾರದ ನಿರ್ದೋಷೀಕರಣ ಎಷ್ಟು ಮುಖ್ಯ?

6 ನಮ್ಮ ಸ್ವಂತ ಸಂತೋಷಕ್ಕಿಂತ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣವೇ ಮುಖ್ಯ. ಯೆಹೋವನಿಗೆ ನಮ್ಮ ರಕ್ಷಣೆ ಮುಖ್ಯವಲ್ಲ ಅಥವಾ ನಮ್ಮ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲ ಎಂದು ಇದರ ಅರ್ಥವಲ್ಲ. ಇದು ನಮಗೆ ಹೇಗೆ ಗೊತ್ತು?

7, 8. ದೇವರ ಪರಮಾಧಿಕಾರದ ನಿರ್ದೋಷೀಕರಣದಿಂದ ನಮಗೆ ಹೇಗೆ ಪ್ರಯೋಜನ ಆಗಲಿದೆ?

7 ಯೆಹೋವನಿಗೆ ಮನುಷ್ಯರ ಮೇಲೆ ತುಂಬ ಪ್ರೀತಿ ಇದೆ. ಆತನು ನಮ್ಮನ್ನು ಎಷ್ಟು ಅಮೂಲ್ಯ ಎಂದೆಣಿಸುತ್ತಾನೆಂದರೆ ನಾವು ನಿತ್ಯಜೀವ ಪಡೆಯಲು ಸಾಧ್ಯವಾಗುವಂತೆ ತನ್ನ ಪುತ್ರನನ್ನೇ ನಮಗೋಸ್ಕರ ಕೊಟ್ಟನು. (ಯೋಹಾ. 3:16; 1 ಯೋಹಾ. 4:9) ಯೆಹೋವನು ನಮ್ಮ ಭವಿಷ್ಯತ್ತಿನ ವಿಷಯದಲ್ಲಿ ಏನೆಲ್ಲ ಮಾತುಕೊಟ್ಟಿದ್ದಾನೊ ಅದನ್ನು ಪೂರೈಸದಿದ್ದರೆ, ಸೈತಾನನು ಹಾಕಿದ ಆರೋಪ ನಿಜ ಎಂದಾಗುವುದು. ಯೆಹೋವನು ಸುಳ್ಳುಗಾರನು, ಮಾನವರಿಗೆ ಒಳ್ಳೇದೇನೂ ಸಿಗದ ಹಾಗೆ ತಡೆಯುತ್ತಾನೆ, ಸರಿಯಾಗಿ ಆಳುವುದಿಲ್ಲ ಎನ್ನುವುದು ಸೈತಾನನ ವಾದ. ಯೆಹೋವನ ಬೇರೆ ವಿರೋಧಿಗಳು ಆತನ ವಾಗ್ದಾನಗಳ ಬಗ್ಗೆ ಹೀಗೆ ಅಪಹಾಸ್ಯಮಾಡುತ್ತಾರೆ: “ಅವನ ವಾಗ್ದತ್ತ ಸಾನ್ನಿಧ್ಯವು ಎಲ್ಲಿದೆ? ನಮ್ಮ ಪೂರ್ವಜರು ಮರಣದಲ್ಲಿ ನಿದ್ರೆಹೋದ ದಿನದಿಂದ ಎಲ್ಲವೂ ಸೃಷ್ಟಿಯ ಆರಂಭದಿಂದಿದ್ದ ಹಾಗೆಯೇ ಮುಂದುವರಿಯುತ್ತಿದೆಯಲ್ಲಾ.” (2 ಪೇತ್ರ 3:3, 4) ಆದರೆ ಯೆಹೋವನು ಖಂಡಿತ ತನ್ನ ವಾಗ್ದಾನಗಳನ್ನು ಪೂರೈಸುವನು. ಆತನ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಮಾನವರ ರಕ್ಷಣೆಯೂ ಸೇರಿದೆ. (ಯೆಶಾಯ 55:10, 11 ಓದಿ.) ಆತನ ಪರಮಾಧಿಕಾರದ ಆಧಾರವೇ ಪ್ರೀತಿ. ಹಾಗಾಗಿ ಆತನು ತನ್ನ ನಿಷ್ಠಾವಂತ ಸೇವಕರನ್ನು ಪ್ರೀತಿಸುತ್ತಾ ಇರುವನು, ಅಮೂಲ್ಯ ಎಂದೆಣಿಸುವನೆಂಬ ಭರವಸೆ ನಮಗಿದೆ.—ವಿಮೋ. 34:6.

8 ಯೆಹೋವನ ಪರಮಾಧಿಕಾರಕ್ಕೆ ಮಹತ್ವ ಕೊಡುವುದರಿಂದ ನಾವಾಗಲಿ ನಮ್ಮ ರಕ್ಷಣೆಯಾಗಲಿ ದೇವರಿಗೆ ಮುಖ್ಯವಲ್ಲ ಎಂದು ನಾವು ತೋರಿಸಿಕೊಡುತ್ತಿಲ್ಲ. ಬದಲಾಗಿ ದೇವರ ಪರಮಾಧಿಕಾರ ಮತ್ತು ನಮ್ಮ ರಕ್ಷಣೆಯನ್ನು ಅದರದರ ಸ್ಥಾನದಲ್ಲಿ ಇಡುತ್ತಿದ್ದೇವೆ ಅಷ್ಟೇ. ಮುಖ್ಯವಾದ ವಿವಾದಾಂಶದ ಮೇಲೆ ನಮ್ಮ ಗಮನವನ್ನು ಯಾವಾಗಲೂ ಇಟ್ಟು, ದೇವರ ಆಳ್ವಿಕೆಯನ್ನು ಬೆಂಬಲಿಸಬೇಕಾದರೆ ಈ ರೀತಿಯ ಸರಿಯಾದ ದೃಷ್ಟಿಕೋನ ಪ್ರಾಮುಖ್ಯ.

ಯೋಬ ತನ್ನ ದೃಷ್ಟಿಕೋನ ಬದಲಾಯಿಸಿದನು

9. ಸೈತಾನನು ಯೋಬನ ಬಗ್ಗೆ ಏನು ಹೇಳಿದನು? (ಲೇಖನದ ಆರಂಭದ ಚಿತ್ರ ನೋಡಿ.)

9 ಯೆಹೋವನ ಪರಮಾಧಿಕಾರದ ಬಗ್ಗೆ ಸರಿಯಾದ ದೃಷ್ಟಿಕೋನ ಇರುವುದು ಪ್ರಾಮುಖ್ಯ. ಇದು ಯೋಬ ಪುಸ್ತಕದಿಂದ ತಿಳಿದುಬರುತ್ತದೆ. ಮೊದಮೊದಲು ಬರೆಯಲಾದ ಬೈಬಲ್‌ ಪುಸ್ತಕಗಳಲ್ಲಿ ಇದೂ ಒಂದು. ಇದರಲ್ಲಿ, ಯೋಬನಿಗೆ ತುಂಬ ಕಷ್ಟಗಳು ಬಂದರೆ ದೇವರನ್ನು ತಿರಸ್ಕರಿಸಿಬಿಡುತ್ತಾನೆಂದು ಸೈತಾನನು ಹೇಳಿದ ಮಾತುಗಳನ್ನು ಓದಬಲ್ಲೆವು. ಆ ಕಷ್ಟಗಳನ್ನು ದೇವರೇ ಯೋಬನ ಮೇಲೆ ತರುವಂತೆಯೂ ಸೈತಾನನು ಹೇಳಿದನು. ಯೆಹೋವನು ಅದನ್ನು ಮಾಡಲಿಲ್ಲ. ಬದಲಾಗಿ ಯೋಬನನ್ನು ಪರೀಕ್ಷಿಸುವಂತೆ ಸೈತಾನನನ್ನು ಅನುಮತಿಸುತ್ತಾ “ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ” ಎಂದನು. (ಯೋಬ 1:7-12 ಓದಿ.) ಇದಾಗಿ ಸ್ವಲ್ಪ ಸಮಯದಲ್ಲೇ ಯೋಬನು ತನ್ನ ಸೇವಕರನ್ನೂ ಸೊತ್ತನ್ನೂ ಕಳೆದುಕೊಂಡನು. ನಂತರ ಅವನ ಹತ್ತು ಮಂದಿ ಮಕ್ಕಳೂ ದುರಂತಕರ ಮರಣವನ್ನಪ್ಪಿದರು. ಇದೆಲ್ಲವನ್ನೂ ದೇವರೇ ಮಾಡಿರುವ ಹಾಗೆ ತೋರುವಂತೆ ಸೈತಾನನು ಮಾಡಿದನು. (ಯೋಬ 1:13-19) ಆಮೇಲೆ ಯೋಬನಿಗೆ ತುಂಬ ನೋವಿನ, ಅಸಹ್ಯಕರ ಕಾಯಿಲೆ ಬರುವಂತೆ ಮಾಡಿದನು. (ಯೋಬ 2:7) ಇಷ್ಟೆಲ್ಲ ಸಾಲದು ಎಂಬಂತೆ ಯೋಬನ ಪತ್ನಿ ಮತ್ತು ಮೂವರು ಸುಳ್ಳು ಸ್ನೇಹಿತರು ಅವನಿಗೆ ಮನನೋಯಿಸುವ, ನಿರುತ್ಸಾಹ ಉಂಟುಮಾಡುವ ಮಾತುಗಳನ್ನಾಡಿದರು.—ಯೋಬ 2:9; 3:11; 16:2.

10. (ಎ) ಯೋಬನು ದೇವರಿಗೆ ನಂಬಿಗಸ್ತನಾಗಿ ಇದ್ದದ್ದು ಹೇಗೆ? (ಬಿ) ಯೋಬನನ್ನು ಏಕೆ ತಿದ್ದಬೇಕಾಗಿ ಬಂತು?

10 ಯೋಬನ ಬಗ್ಗೆ ಸೈತಾನ ಹೇಳಿದ ಮಾತು ನಿಜವಾಗಿತ್ತಾ? ಇಲ್ಲ. ಅತ್ಯಂತ ಭೀಕರ ದುರಂತಗಳನ್ನು ಅನುಭವಿಸಿದರೂ ಯೋಬನು ಯೆಹೋವನನ್ನು ತಿರಸ್ಕರಿಸಲಿಲ್ಲ. (ಯೋಬ 27:5) ಆದರೆ ಯೋಬನು ಯಾವುದು ನಿಜವಾಗಿ ಮುಖ್ಯ ಎಂಬದನ್ನು ಸ್ವಲ್ಪ ಸಮಯಕ್ಕೆ ಮರೆತು, ಬರೀ ತನ್ನ ಬಗ್ಗೆ ಯೋಚಿಸಿದನು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪದೇಪದೇ ಹೇಳುತ್ತಾ ಇದ್ದನು. ತನಗೆ ಯಾಕೆ ಇಷ್ಟೆಲ್ಲ ಕಷ್ಟ ಬಂದಿದೆ ಎಂಬ ಕಾರಣ ತನಗೆ ಗೊತ್ತಾಗಲೇಬೇಕೆಂದು ಅವನಿಗೆ ಅನಿಸಿತು. (ಯೋಬ 7:20; 13:24) ಯೋಬನಿಗೆ ಅನಿಸಿದ್ದು ಸಹಜ ಅಂತ ನಮಗನಿಸಬಹುದು. ಆದರೆ ಅವನ ದೃಷ್ಟಿಕೋನ ತಪ್ಪೆಂದು ಯೆಹೋವನಿಗೆ ಗೊತ್ತಿತ್ತು, ಅವನನ್ನು ತಿದ್ದಿದನು. ಹೇಗೆ?

11, 12. (ಎ) ಯೋಬನು ಏನು ಗ್ರಹಿಸುವಂತೆ ಯೆಹೋವನು ಸಹಾಯಮಾಡಿದನು? (ಬಿ) ಯೋಬನ ಪ್ರತಿಕ್ರಿಯೆ ಏನಾಗಿತ್ತು?

11 ಯೆಹೋವನು ಯೋಬನಿಗೆ ಹೇಳಿದ ಮಾತುಗಳು ಯೋಬ ಪುಸ್ತಕದ 38-41ನೇ ಅಧ್ಯಾಯಗಳಲ್ಲಿವೆ. ಅವನಿಗೆ ಯಾಕೆ ಈ ಕಷ್ಟಗಳು ಬಂದಿವೆಯೆಂದು ಯೆಹೋವನು ವಿವರಿಸಲು ಹೋಗಲಿಲ್ಲ. ಬದಲಿಗೆ, ತನಗೆ ಹೋಲಿಸಿದರೆ ಯೋಬನು ಎಷ್ಟು ಅಲ್ಪನೆಂದು ಗ್ರಹಿಸಲು ಸಹಾಯಮಾಡಿದನು. ಹೀಗೆ, ಯೋಬನ ಸಮಸ್ಯೆಗಳಿಗಿಂತಲೂ ತುಂಬ ದೊಡ್ಡದಾದ ವಿಷಯಗಳಿವೆ ಎಂದು ಕಲಿಸಿದನು. (ಯೋಬ 38:18-21 ಓದಿ.) ಯೆಹೋವನು ಹೇಳಿದ ವಿಷಯಗಳು ಯೋಬನಿಗೆ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿದವು.

12 ಯೋಬನಿಗೆ ಇಷ್ಟೆಲ್ಲ ಕಷ್ಟ ಬಂದಿರುವಾಗ ಯೆಹೋವನು ಅವನ ಜೊತೆ ಹಾಗೆ ಮಾತಾಡಿದ್ದು ಸ್ವಲ್ಪ ಕಠೋರ ಆಗಿತ್ತಾ? ಇಲ್ಲ. ದೇವರು ಕಠೋರನಾಗಿರಲಿಲ್ಲ, ಯೋಬನಿಗೂ ಹಾಗನಿಸಲಿಲ್ಲ. ಯೆಹೋವನು ಕೊಟ್ಟ ಬುದ್ಧಿವಾದ ಅವನಿಗೆ ಅರ್ಥವಾಯಿತು. ಅದಕ್ಕೆ ಕೃತಜ್ಞನಾಗಿದ್ದನು. ಹೀಗೂ ಹೇಳಿದನು: “[ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.” (ಯೋಬ 42:1-6) ಯೋಬ ತನ್ನ ಯೋಚನಾರೀತಿಯನ್ನು ತಿದ್ದಿಕೊಳ್ಳಲು ಎಲೀಹು ಎಂಬ ಯುವಕನು ಕೂಡ ಈ ಹಿಂದೆ ಸಹಾಯಮಾಡಿದ್ದನು. (ಯೋಬ 32:5-10) ಯೆಹೋವನು ಪ್ರೀತಿಯಿಂದ ಕೊಟ್ಟ ಬುದ್ಧಿವಾದಕ್ಕೆ ಯೋಬನು ಕಿವಿಗೊಟ್ಟು ತನ್ನ ದೃಷ್ಟಿಕೋನವನ್ನು ಬದಲಾಯಿಸಿದ ನಂತರ, ಅವನ ನಂಬಿಗಸ್ತಿಕೆಯನ್ನು ಮೆಚ್ಚುತ್ತೇನೆಂದು ಯೆಹೋವನು ಇತರರಿಗೆ ತಿಳಿಯಪಡಿಸಿದನು.—ಯೋಬ 42:7, 8.

13. ಯೋಬನ ಕಷ್ಟಗಳು ನಿಂತುಹೋದ ನಂತರವೂ ಅವನಿಗೆ ಯೆಹೋವನ ಬುದ್ಧಿವಾದದಿಂದ ಹೇಗೆ ಸಹಾಯ ಆಗಿರಬೇಕು?

13 ಯೆಹೋವನು ಯೋಬನಿಗೆ ಕೊಟ್ಟ ಬುದ್ಧಿವಾದ ಅವನ ಕಷ್ಟಗಳು ನಿಂತುಹೋದ ನಂತರವೂ ಅವನಿಗೆ ಸಹಾಯಮಾಡಿತು. ಹೇಗೆ? ‘ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೆಚ್ಚಾಗಿ ಆಶೀರ್ವದಿಸಿದನು.’ ಅವನಿಗೆ “ಏಳು ಮಂದಿ ಗಂಡುಮಕ್ಕಳೂ ಮೂರು ಮಂದಿ ಹೆಣ್ಣುಮಕ್ಕಳೂ ಆದರು.” (ಯೋಬ 42:12-14) ಯೋಬನಿಗೆ ಈ ಮಕ್ಕಳ ಮೇಲೆ ಪ್ರೀತಿಯಿದ್ದರೂ, ತೀರಿಹೋಗಿದ್ದ ಮಕ್ಕಳು ಖಂಡಿತ ತುಂಬ ನೆನಪಾಗಿರಬೇಕು. ತನಗೂ ತನ್ನ ಕುಟುಂಬಕ್ಕೂ ಆದ ಘೋರ ಸಂಗತಿಗಳನ್ನು ಬಹುಶಃ ಸಾಯುವ ವರೆಗೂ ಅವನು ಮರೆತಿರಲಿಕ್ಕಿಲ್ಲ. ತನ್ನ ಕಷ್ಟಗಳಿಗೆ ಕಾರಣ ಏನೆಂದು ಅವನಿಗೆ ಆಮೇಲೆ ಗೊತ್ತಾಗಿರಬಹುದಾದರೂ ತನಗೆ ಇಷ್ಟೊಂದು ಕಷ್ಟಗಳು ಬರುವಂತೆ ದೇವರು ಯಾಕೆ ಬಿಟ್ಟನೆಂಬ ಯೋಚನೆ ಅವನಿಗೆ ಬಂದಿರಬಹುದು. ಈ ರೀತಿಯ ಯೋಚನೆಗಳು ಬಂದಾಗೆಲ್ಲ ಯೆಹೋವನು ತನಗೆ ಹೇಳಿದ ವಿಷಯಗಳನ್ನು ಅವನು ನೆನಪಿಗೆ ತಂದಿರಬಹುದು. ಇದರಿಂದ ಅವನ ಮನಸ್ಸಿಗೆ ಸಮಾಧಾನ ಆಗಿರುತ್ತದೆ. ಸರಿಯಾದ ದೃಷ್ಟಿಕೋನ ಇಡುವಂತೆ ಅವನಿಗೆ ಸಹಾಯ ಆಗಿರುತ್ತದೆ.—ಕೀರ್ತ. 94:19.

ಬರೀ ನಮ್ಮ ಸಮಸ್ಯೆಗಳ ಮೇಲೆ ಗಮನವಿಡುವ ಬದಲು ಯೆಹೋವನ ಪರಮಾಧಿಕಾರದ ಮೇಲೆ ಗಮನವಿಡೋಣ (ಪ್ಯಾರ 14 ನೋಡಿ)

14. ಯೋಬನ ಅನುಭವದಿಂದ ನಾವೇನು ಕಲಿಯುತ್ತೇವೆ?

14 ಯೋಬನ ಬಗ್ಗೆ ಯೋಚಿಸಿದರೆ ನಾವು ನಮ್ಮ ಯೋಚನಾರೀತಿಯನ್ನು ಬದಲಾಯಿಸಲು ಸಹಾಯವಾಗುತ್ತದೆ, ಸಾಂತ್ವನವೂ ಸಿಗುತ್ತದೆ. ಯೋಬ ಪುಸ್ತಕವು ಯೆಹೋವನು ನಮಗೋಸ್ಕರ ಸಂರಕ್ಷಿಸಿಟ್ಟಿರುವ ಶಾಸ್ತ್ರಗ್ರಂಥದ ಭಾಗವಾಗಿದೆ. ಇದು ‘ನಮ್ಮನ್ನು ಉಪದೇಶಿಸುವುದಕ್ಕಾಗಿ, ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ’ ಬರೆದಿಡಲ್ಪಟ್ಟಿದೆ. (ರೋಮ. 15:4) ನಾವು ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಬಗ್ಗೆ ಮರೆತುಹೋಗುವಷ್ಟರ ಮಟ್ಟಿಗೆ ನಮ್ಮ ಸಮಸ್ಯೆಗಳ ಬಗ್ಗೆಯೇ ಯೋಚಿಸುತ್ತಾ ಇರಬಾರದೆಂದು ಕಲಿಸುತ್ತದೆ. ಜೀವನದಲ್ಲಿ ಕಷ್ಟಗಳು ಬಂದಾಗಲೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಾಗ ಯೋಬನಂತೆ ಆತನ ಪರಮಾಧಿಕಾರಕ್ಕಾಗಿ ನಮ್ಮ ಬೆಂಬಲ ತೋರಿಸುತ್ತೇವೆ.

15. ಕಷ್ಟಗಳ ಮಧ್ಯೆಯೂ ನಾವು ನಂಬಿಗಸ್ತರಾಗಿರುವಾಗ ಏನೆಲ್ಲ ಸಾಧ್ಯವಾಗುತ್ತದೆ?

15 ನಮಗೆ ಬರುವ ಕಷ್ಟಗಳು ದೇವರಿಗೆ ನಮ್ಮ ಮೇಲಿರುವ ಕೋಪದ ಸೂಚನೆಯಲ್ಲ ಎಂದು ತೋರಿಸುತ್ತಾ ಯೋಬನ ಅನುಭವ ನಮಗೆ ಸಾಂತ್ವನ ಕೊಡುತ್ತದೆ. ಈ ಕಷ್ಟಗಳು ನಮಗೆ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ಅವಕಾಶ ಕೊಡುತ್ತವೆ. (ಜ್ಞಾನೋ. 27:11) ನಾವು ನಂಬಿಗಸ್ತಿಕೆಯಿಂದ ತಾಳಿಕೊಳ್ಳುವಾಗ ಯೆಹೋವನನ್ನು ಸಂತೋಷಪಡಿಸುತ್ತೇವೆ ಮತ್ತು ಭವಿಷ್ಯತ್ತಿನ ಕುರಿತ ನಮ್ಮ ನಿರೀಕ್ಷೆ ಇನ್ನಷ್ಟು ಬಲವಾಗುತ್ತದೆ. (ರೋಮನ್ನರಿಗೆ 5:3-5 ಓದಿ.) “ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ” ಎಂದು ಯೋಬನ ಅನುಭವ ತೋರಿಸಿಕೊಡುತ್ತದೆ. (ಯಾಕೋ. 5:11) ನಾವು ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಿದರೆ ಆತನು ನಮಗೆ ಖಂಡಿತ ಪ್ರತಿಫಲ ಕೊಡುತ್ತಾನೆ. ಈ ವಿಷಯ ತಿಳಿದಿರುವುದರಿಂದ ‘ಸಂಪೂರ್ಣವಾಗಿ ತಾಳಿಕೊಳ್ಳಲು ಮತ್ತು ಆನಂದದಿಂದ ದೀರ್ಘ ಸಹನೆಯುಳ್ಳವರಾಗಿರಲು’ ನಮಗೆ ಸಹಾಯವಾಗುತ್ತದೆ.—ಕೊಲೊ. 1:11.

ವಿವಾದಾಂಶದ ಮೇಲೆ ಸದಾ ಗಮನ ಇಡಿ

16. ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಬಗ್ಗೆ ನಾವು ನೆನಪಿಸಿಕೊಳ್ಳುತ್ತಾ ಇರಬೇಕು ಯಾಕೆ?

16 ನಮ್ಮ ಸಮಸ್ಯೆಗಳೊಟ್ಟಿಗೆ ಹೆಣಗಾಡುತ್ತಿರುವಾಗ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದ ಮೇಲೆ ಗಮನವಿಡಲು ಕಷ್ಟ ಆಗಬಹುದು ನಿಜ. ಕೆಲವೊಮ್ಮೆ ಸಮಸ್ಯೆಗಳು ಚಿಕ್ಕಪುಟ್ಟದಾಗಿದ್ದರೂ ಅದರ ಬಗ್ಗೆ ಯೋಚಿಸುತ್ತಾ ಇರುವುದರಿಂದ ಅವು ನಮಗೆ ದೊಡ್ಡದಾಗಿ ಕಾಣುತ್ತವೆ. ಆದ್ದರಿಂದ, ನಮ್ಮ ಕಷ್ಟ ಏನೇ ಆಗಿರಲಿ ದೇವರ ಪರಮಾಧಿಕಾರವನ್ನು ಬೆಂಬಲಿಸುವುದು ತುಂಬ ಪ್ರಾಮುಖ್ಯವೆಂದು ಆಗಾಗ ನಾವು ನೆನಪಿಸಿಕೊಳ್ಳುತ್ತಾ ಇರಬೇಕು.

17. ಯೆಹೋವನ ಕೆಲಸದಲ್ಲಿ ಮಗ್ನರಾಗಿರುವುದು ನಮಗೆ ಮುಖ್ಯವಾದ ವಿವಾದಾಂಶದ ಮೇಲೆ ಗಮನವಿಡಲು ಹೇಗೆ ಸಹಾಯಮಾಡುತ್ತದೆ?

17 ಈ ಮುಖ್ಯವಾದ ವಿವಾದಾಂಶದ ಮೇಲೆ ಗಮನವಿಡಲು ಸಹಾಯಮಾಡುವ ಒಂದು ವಿಷಯ, ಯೆಹೋವನ ಕೆಲಸದಲ್ಲಿ ಮಗ್ನರಾಗಿರುವುದೇ ಆಗಿದೆ. ಇದಕ್ಕೊಂದು ಉದಾಹರಣೆ ಸಹೋದರಿ ರನೇ. ಅವರಿಗೆ ಲಕ್ವ ಹೊಡೆದಿತ್ತು, ಯಾವಾಗಲೂ ನೋವಿನಲ್ಲಿ ಇರುತ್ತಿದ್ದರು, ಕ್ಯಾನ್ಸರ್‌ ಕಾಯಿಲೆಯೂ ಇತ್ತು. ಅವರು ಆಸ್ಪತ್ರೆಯಲ್ಲಿದ್ದಾಗ ಅಲ್ಲಿ ಕೆಲಸಮಾಡುತ್ತಿದ್ದವರಿಗೆ, ಬೇರೆ ರೋಗಿಗಳಿಗೆ ಮತ್ತು ರೋಗಿಗಳನ್ನು ನೋಡಲು ಬರುತ್ತಿದ್ದವರಿಗೆ ಸಾಕ್ಷಿ ಕೊಡುತ್ತಿದ್ದರು. ಒಮ್ಮೆ ಅವರು ಆಸ್ಪತ್ರೆಯಲ್ಲಿ ಎರಡೂವರೆ ವಾರ ಇದ್ದಾಗ ಸಾಕ್ಷಿಕೊಡುವುದರಲ್ಲಿ 80 ತಾಸು ಕಳೆದರು! ಸಾವು ಹತ್ತಿರವಿದೆ ಎಂದು ಅವರಿಗೆ ಗೊತ್ತಿದ್ದರೂ ಮುಖ್ಯವಾದ ವಿವಾದಾಂಶದ ಮೇಲಿಂದ ಅವರ ಗಮನ ಸರಿಯಲಿಲ್ಲ. ಯೆಹೋವನ ಪರಮಾಧಿಕಾರಕ್ಕೆ ತಮ್ಮ ಬೆಂಬಲ ತೋರಿಸುವುದು ಅವರಿಗೆ ಶಾಂತಿ, ನೆಮ್ಮದಿ ಕೊಟ್ಟಿತು.

18. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುವ ವಿಷಯದಲ್ಲಿ ಜೆನಿಫರಳ ಅನುಭವದಿಂದ ಏನು ಕಲಿಯಬಲ್ಲೆವು?

18 ನಾವು ಪ್ರತಿದಿನ ಚಿಕ್ಕಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೂ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಬಹುದು. ಜೆನಿಫರ್‌ ಎಂಬ ಸಹೋದರಿಯ ಅನುಭವ ನೋಡಿ. ಅವಳು ತನ್ನ ಊರಿಗೆ ವಾಪಸ್ಸು ಹೋಗಲು ವಿಮಾನ ನಿಲ್ದಾಣದಲ್ಲಿ 3 ದಿನ ಕಾಯಬೇಕಾಯಿತು. ಏಕೆಂದರೆ ಅವಳ ವಿಮಾನಯಾನ ಒಂದರ ನಂತರ ಒಂದು ರದ್ದಾಗುತ್ತಾ ಇತ್ತು. ಅವಳು ತುಂಬ ದಣಿದುಹೋದಳು. ಜೊತೆಯಲ್ಲಿ ಯಾರೂ ಇರಲಿಲ್ಲ ಸಹ. ಆಕೆ ತನ್ನ ಈ ಕಷ್ಟದ ಬಗ್ಗೆಯೇ ಕೊರಗುತ್ತಾ ಸುಮ್ಮನೆ ಕೂರಬಹುದಿತ್ತು. ಆದರೆ ಹಾಗೆ ಮಾಡದೆ, ವಿಮಾನ ನಿಲ್ದಾಣದಲ್ಲಿ ಕಾಯುತ್ತಾ ಇದ್ದ ಬೇರೆಯವರಿಗೆ ಸುವಾರ್ತೆ ಸಾರಲು ಸಹಾಯಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿದಳು. ಅನೇಕರಿಗೆ ಸಾಕ್ಷಿಕೊಟ್ಟಳು. ತುಂಬ ಸಾಹಿತ್ಯವನ್ನೂ ನೀಡಿದಳು. ಜೆನಿಫರ್‌ ಹೇಳುವುದು: “ಆ ಕಷ್ಟದ ಸನ್ನಿವೇಶದಲ್ಲಿ ಯೆಹೋವನು ನನ್ನನ್ನು ಆಶೀರ್ವದಿಸಿದನು ಮತ್ತು ಆತನ ಹೆಸರಿಗೆ ಯೋಗ್ಯವಾದ ರೀತಿಯಲ್ಲಿ ನಡಕೊಳ್ಳಲು ಬೇಕಾದ ಬಲ ಕೊಟ್ಟನೆಂದು ನನಗನಿಸಿತು.”

19. ಸತ್ಯಾರಾಧಕರನ್ನು ಹೇಗೆ ಗುರುತಿಸಲಿಕ್ಕಾಗುತ್ತದೆ?

19 ಯೆಹೋವನ ಪರಮಾಧಿಕಾರದ ಮಹತ್ವವೇನೆಂದು ಯೆಹೋವನ ಜನರಿಗೆ ಮಾತ್ರ ನಿಜವಾಗಿ ಅರ್ಥವಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳುವವರನ್ನು ಸತ್ಯಾರಾಧಕರೆಂದು ಗುರುತಿಸಲಿಕ್ಕಾಗುತ್ತದೆ. ಹಾಗಾಗಿ ನಮ್ಮಲ್ಲಿ ಒಬ್ಬೊಬ್ಬರೂ ಯೆಹೋವನ ಪರಮಾಧಿಕಾರವನ್ನು ಬೆಂಬಲಿಸುತ್ತಾ ಇರಬೇಕು.

20. ಯೆಹೋವನ ಪರಮಾಧಿಕಾರವನ್ನು ಬೆಂಬಲಿಸಲು ನೀವು ಮಾಡುವ ಪ್ರಯತ್ನದ ಬಗ್ಗೆ ಆತನಿಗೆ ಹೇಗನಿಸುತ್ತದೆ?

20 ನೀವು ಕಷ್ಟಗಳನ್ನು ತಾಳಿಕೊಳ್ಳುತ್ತಾ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುವ ಮೂಲಕ ಆತನ ಪರಮಾಧಿಕಾರವನ್ನು ಬೆಂಬಲಿಸುತ್ತೀರಿ. ಇದನ್ನು ಆತನು ಗಮನಿಸುತ್ತಾನೆ, ಅಮೂಲ್ಯ ಎಂದೆಣಿಸುತ್ತಾನೆ. (ಇಬ್ರಿ. 6:10) ಯೆಹೋವನ ಪರಮಾಧಿಕಾರವನ್ನು ನೀವು ಯಾಕೆ ಬೆಂಬಲಿಸಬೇಕು ಮತ್ತು ಅದನ್ನು ಇನ್ನೂ ಹೆಚ್ಚಾಗಿ ಹೇಗೆ ಮಾಡಬಹುದೆಂಬ ಹೆಚ್ಚಿನ ವಿವರಣೆಯನ್ನು ಮುಂದಿನ ಲೇಖನ ಕೊಡಲಿದೆ.