ಆಧ್ಯಾತ್ಮಿಕ ನಿಧಿ-ನಿಕ್ಷೇಪಗಳ ಮೇಲೆ ನಿಮ್ಮ ಮನಸ್ಸಿಡಿ
‘ನಿಮ್ಮ ನಿಧಿ ಇರುವಲ್ಲಿಯೇ ನಿಮ್ಮ ಹೃದಯ ಇರುವುದು.’—ಲೂಕ 12:34.
1, 2. (ಎ) ಯೆಹೋವನು ನಮಗೆ ಯಾವ ಮೂರು ನಿಕ್ಷೇಪಗಳನ್ನು ಕೊಟ್ಟಿದ್ದಾನೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
ಯೆಹೋವನು ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತನು. ವಿಶ್ವದಲ್ಲಿರುವುದೆಲ್ಲ ಆತನಿಗೆ ಸೇರಿದೆ. (1 ಪೂರ್ವ. 29:11, 12) ಯೆಹೋವನು ನಮಗೆ ಅನೇಕ ಆಧ್ಯಾತ್ಮಿಕ ನಿಕ್ಷೇಪಗಳನ್ನು ಕೊಟ್ಟು ಉದಾರತೆ ಮೆರೆದಿದ್ದಾನೆ. ಅದಕ್ಕಾಗಿ ನಾವು ಆತನಿಗೆ ಕೃತಜ್ಞರಾಗಿರಬೇಕು! ಆತನು ನಮಗೆ ಕೊಟ್ಟಿರುವ ಕೆಲವು ನಿಕ್ಷೇಪಗಳು ಯಾವುವು? (1) ದೇವರ ರಾಜ್ಯ, (2) ಸಾರುವ ಕೆಲಸ, (3) ಆತನ ವಾಕ್ಯದಲ್ಲಿರುವ ಅಮೂಲ್ಯ ಸತ್ಯಗಳು. ಆದರೆ ಈ ನಿಕ್ಷೇಪಗಳು ಅಮೂಲ್ಯವಾದವು ಎನ್ನುವುದನ್ನು ಸಮಯ ಹೋದಂತೆ ನಾವು ಮರೆತುಬಿಡುವ ಸಾಧ್ಯತೆ ಇದೆ. ಆದ್ದರಿಂದ ಹುಷಾರಾಗಿರಬೇಕು. ಈ ನಿಕ್ಷೇಪಗಳು ಬಹು ಅಮೂಲ್ಯ ಎನ್ನುವುದನ್ನು ಯಾವಾಗಲೂ ನಮಗೆ ನಾವೇ ನೆನಪಿಸಿಕೊಳ್ಳಬೇಕು ಮತ್ತು ಅವುಗಳ ಕಡೆಗಿನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬೇಕು. ಯಾಕೆ? ನಿಮ್ಮ ನಿಕ್ಷೇಪ ಅಥವಾ ‘ನಿಮ್ಮ ನಿಧಿ ಇರುವಲ್ಲಿಯೇ ನಿಮ್ಮ ಹೃದಯ ಇರುವುದು’ ಎಂದು ಯೇಸು ಹೇಳಿದ್ದಾನೆ.—ಲೂಕ 12:34.
2 ದೇವರ ರಾಜ್ಯ, ಸಾರುವ ಕೆಲಸ, ಸತ್ಯ ಇವುಗಳಿಗಾಗಿ ನಮ್ಮ ಪ್ರೀತಿ ಹಾಗೂ ಕೃತಜ್ಞತಾಭಾವವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂದು ನಾವೀಗ ಚರ್ಚಿಸೋಣ. ಇದನ್ನು ಚರ್ಚಿಸುವಾಗ ಈ ಆಧ್ಯಾತ್ಮಿಕ ನಿಕ್ಷೇಪಗಳ ಮೇಲಿರುವ ನಿಮ್ಮ ಪ್ರೀತಿಯನ್ನು ವೈಯಕ್ತಿಕವಾಗಿ ನೀವು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ಯೋಚಿಸಿ.
ದೇವರ ರಾಜ್ಯ ಬೆಲೆಬಾಳುವ ಮುತ್ತಿಗೆ ಸಮಾನ
3. ಒಂದು ಮುತ್ತನ್ನು ಖರೀದಿಸಲು ಒಬ್ಬ ವ್ಯಾಪಾರಿ ಏನು ಮಾಡಿದನು? (ಲೇಖನದ ಆರಂಭದ ಚಿತ್ರ ನೋಡಿ.)
3 ಮತ್ತಾಯ 13:45, 46 ಓದಿ. ಯೇಸು ಮುತ್ತಿನ ವ್ಯಾಪಾರಿಯೊಬ್ಬನ ಕಥೆ ಹೇಳಿದನು. ಒಮ್ಮೆ ಆ ವ್ಯಾಪಾರಿ ಒಂದು ಮುತ್ತನ್ನು ನೋಡಿದ. ಇಲ್ಲಿ ತನಕ ಅವನು ಅಂಥ ಬೆಲೆಬಾಳುವ ಮುತ್ತನ್ನು ನೋಡಿರಲಿಲ್ಲ. ಅದನ್ನು ಖರೀದಿಸಲೇಬೇಕು ಎಂದು ನಿರ್ಧರಿಸಿದ. ಅದಕ್ಕಾಗಿ ತನ್ನಲ್ಲಿದ್ದದನ್ನೆಲ್ಲ ಮಾರಿದ. ಹಾಗಾಗಿ ಆ ಮುತ್ತು ಅವನಿಗೆ ಎಷ್ಟು ಅಮೂಲ್ಯ ಆಗಿತ್ತೆಂದು ಊಹಿಸಬಲ್ಲಿರಾ?
4. ದೇವರ ರಾಜ್ಯಕ್ಕಾಗಿ ನಾವು ಏನು ಮಾಡಲು ಸಿದ್ಧರಿರುತ್ತೇವೆ?
4 ಯೇಸು ಹೇಳಿದ ಕಥೆಯಿಂದ ನಾವೇನು ಕಲಿಯಬಹುದು? ದೇವರ ರಾಜ್ಯದ ಸತ್ಯ ಈ ಬೆಲೆಬಾಳುವ ಮುತ್ತಿನಂತಿದೆ. ಆ ವ್ಯಾಪಾರಿ ಆ ಮುತ್ತನ್ನು ಎಷ್ಟು ಅಮೂಲ್ಯವೆಂದು ಎಣಿಸಿದನೋ ಅದೇ ರೀತಿ ನಾವು ದೇವರ ರಾಜ್ಯವನ್ನು ಅಮೂಲ್ಯ ಎಂದೆಣಿಸಬೇಕು, ಪ್ರೀತಿಸಬೇಕು. ನಾವು ರಾಜ್ಯವನ್ನು ಪ್ರೀತಿಸುವುದಾದರೆ ಅದರ ಪ್ರಜೆಗಳಾಗಲು ಮತ್ತು ಹಾಗೆಯೇ ಮುಂದುವರಿಯಲು ಎಲ್ಲವನ್ನೂ ತ್ಯಾಗಮಾಡಲು ಸಿದ್ಧರಿರುತ್ತೇವೆ. (ಮಾರ್ಕ 10:28-30 ಓದಿ.) ಇದನ್ನು ಮಾಡಿದ ಇಬ್ಬರ ಬಗ್ಗೆ ನಾವೀಗ ನೋಡೋಣ.
5. ದೇವರ ರಾಜ್ಯಕ್ಕಾಗಿ ಜಕ್ಕಾಯ ಏನು ಮಾಡಿದನು?
5 ಜಕ್ಕಾಯ ತೆರಿಗೆ ವಸೂಲಿಗಾರನಾಗಿದ್ದನು. ಜನರಿಂದ ಹಣ ಸುಲಿಗೆ ಮಾಡಿ ಶ್ರೀಮಂತನಾಗಿದ್ದನು. (ಲೂಕ 19:1-9) ಒಂದು ದಿನ ದೇವರ ರಾಜ್ಯದ ಬಗ್ಗೆ ಯೇಸು ಮಾತಾಡಿದ್ದನ್ನು ಕೇಳಿಸಿಕೊಂಡನು. ಅದು ಅವನಿಗೆ ತುಂಬ ಇಷ್ಟವಾಯಿತು. ತನ್ನನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕು ಎಂದು ಬಯಸಿದನು. “ಸ್ವಾಮಿ, ನನ್ನ ಆಸ್ತಿಯಲ್ಲಿ ಅರ್ಧವನ್ನು ನಾನು ಬಡವರಿಗೆ ಕೊಡುತ್ತೇನೆ; . . . ನಾನು ಯಾರಿಂದ ಏನನ್ನು ಸುಲಿಗೆಮಾಡಿದ್ದೆನೋ ಅದನ್ನು ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ” ಎಂದು ಯೇಸುವಿಗೆ ಹೇಳಿದನು. ಅವನು ಹೇಳಿದಂತೆಯೇ ಮಾಡಿದನು. ಜನರಿಂದ ಸುಲಿಗೆ ಮಾಡಿದ್ದ ಹಣವನ್ನು ವಾಪಸ್ಸು ಕೊಟ್ಟನು ಮತ್ತು ಹಣದಾಸೆಯನ್ನು ಬಿಟ್ಟುಬಿಟ್ಟನು.
6. ಒಬ್ಬ ಮಹಿಳೆ ಯಾವ ಬದಲಾವಣೆಗಳನ್ನು ಮಾಡಿದಳು? ಯಾಕೆ?
6 ಕೆಲವು ವರ್ಷಗಳ ಹಿಂದೆ ಒಬ್ಬ ಮಹಿಳೆ ದೇವರ ರಾಜ್ಯದ ಸಂದೇಶವನ್ನು ಕೇಳಿಸಿಕೊಂಡಳು. ಅವಳು ಸಲಿಂಗಕಾಮಿ ಆಗಿದ್ದಳು. ಅವಳಿಗೊಬ್ಬ ಸಲಿಂಗಕಾಮಿ ಸಂಗಾತಿಯೂ ಇದ್ದಳು. ಅಷ್ಟೇ ಅಲ್ಲ, ಸಲಿಂಗಕಾಮಿಗಳ ಹಕ್ಕಿಗಾಗಿ ಹೋರಾಡುವ ಸಂಘಟನೆಯ ಅಧ್ಯಕ್ಷೆ ಕೂಡ ಆಗಿದ್ದಳು. ಆದರೆ ಅವಳು ಬೈಬಲಿನ ಬಗ್ಗೆ ಮತ್ತು ದೇವರ ರಾಜ್ಯದ ಮೌಲ್ಯದ ಬಗ್ಗೆ ಕಲಿಯುತ್ತಾ ಹೋದ ಹಾಗೆ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕು ಎಂದು ಅವಳಿಗೆ ಗೊತ್ತಾಯಿತು. (1 ಕೊರಿಂ. 6:9, 10) ಯೆಹೋವನ ಮೇಲೆ ಪ್ರೀತಿ ಇದ್ದದರಿಂದ ಸಲಿಂಗಕಾಮಿಗಳ ಸಂಘಟನೆಯನ್ನು ಬಿಟ್ಟುಬಿಟ್ಟಳು ಮತ್ತು ತನ್ನ ಆ ಸಲಿಂಗಕಾಮಿ ಸಂಗಾತಿಯೊಟ್ಟಿಗಿನ ಸಂಬಂಧವನ್ನೂ ಕಡಿದುಹಾಕಿದಳು. 2009ರಲ್ಲಿ ದೀಕ್ಷಾಸ್ನಾನ ಪಡೆದಳು. ಮುಂದಿನ ವರ್ಷ ಪಯನೀಯರ್ ಸೇವೆ ಆರಂಭಿಸಿದಳು. ತನಗಿದ್ದ ತಪ್ಪಾದ ಆಸೆಗಳಿಗಿಂತ ಯೆಹೋವನ ಮೇಲಿನ ಅವಳ ಪ್ರೀತಿ ಹೆಚ್ಚು ಬಲವಾಗಿದ್ದ ಕಾರಣ ಇಂಥ ದೊಡ್ಡ ಬದಲಾವಣೆಗಳನ್ನು ಮಾಡಿದಳು.—ಮಾರ್ಕ 12:29, 30.
7. ದೇವರ ರಾಜ್ಯದ ಮೇಲೆ ನಾವಿಟ್ಟಿರುವ ಪ್ರೀತಿಯನ್ನು ಯಾವುದು ಕಡಿಮೆಮಾಡಬಹುದು?
7 ದೇವರ ರಾಜ್ಯದ ಪ್ರಜೆಗಳಾಗಲು ನಮ್ಮಲ್ಲಿ ಅನೇಕರು ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದೇವೆ. (ರೋಮ. 12:2) ಆದರೆ ನಮ್ಮ ಹೋರಾಟ ಇಷ್ಟಕ್ಕೇ ನಿಲ್ಲುವುದಿಲ್ಲ. ಹಣ ಮತ್ತು ವಸ್ತುಗಳ ಆಸೆಯಾಗಲಿ, ಅನೈತಿಕವಾದ ಲೈಂಗಿಕ ಆಸೆಗಳಾಗಲಿ, ಬೇರಾವುದೇ ವಿಷಯವಾಗಲಿ ನಾವು ದೇವರ ರಾಜ್ಯದ ಮೇಲೆ ಇಟ್ಟಿರುವ ಪ್ರೀತಿಯನ್ನು ಕಡಿಮೆ ಮಾಡಲು ಬಿಡಬಾರದು. (ಜ್ಞಾನೋ. 4:23; ಮತ್ತಾ. 5:27-29) ದೇವರ ರಾಜ್ಯಕ್ಕಾಗಿ ನಮಗಿರುವ ಪ್ರೀತಿಯನ್ನು ಬಲವಾಗಿಡಲು ಯೆಹೋವನು ನಮಗೆ ಇನ್ನೊಂದು ಬೆಲೆಬಾಳುವ ನಿಕ್ಷೇಪವನ್ನು ಕೊಟ್ಟಿದ್ದಾನೆ.
ಸಾರುವ ಕೆಲಸ ಜೀವ ರಕ್ಷಿಸುತ್ತದೆ
8. (ಎ) ಪೌಲ ಸಾರುವ ಕೆಲಸವನ್ನು ‘ಮಣ್ಣಿನ ಪಾತ್ರೆಗಳಲ್ಲಿರುವ ನಿಕ್ಷೇಪ’ ಎಂದು ಯಾಕೆ ಕರೆದನು? (ಬಿ) ಪೌಲ ಸಾರುವ ಕೆಲಸದ ಬಗ್ಗೆ ತನಗಿದ್ದ ಪ್ರೀತಿಯನ್ನು ಹೇಗೆ ತೋರಿಸಿದನು?
8 ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮತ್ತು ಕಲಿಸುವ ನೇಮಕವನ್ನು ಯೇಸು ನಮಗೆ ಕೊಟ್ಟಿದ್ದಾನೆ. (ಮತ್ತಾ. 28:19, 20) ಈ ಸಾರುವ ಕೆಲಸವನ್ನು ‘ಮಣ್ಣಿನ ಪಾತ್ರೆಗಳಲ್ಲಿರುವ ನಿಕ್ಷೇಪ’ ಎಂದು ಅಪೊಸ್ತಲ ಪೌಲ ಕರೆದಿದ್ದಾನೆ. (2 ಕೊರಿಂ. 4:7; 1 ತಿಮೊ. 1:12) ನಾವು ಅಪರಿಪೂರ್ಣರು ಆಗಿರುವುದರಿಂದ ಮಣ್ಣಿನ ಪಾತ್ರೆಗಳಂತೆ ಇದ್ದೇವೆ. ಆದರೆ ನಾವು ಸಾರುವ ಸಂದೇಶ ಅಮೂಲ್ಯವಾದ ನಿಕ್ಷೇಪದಂತೆ ಇದೆ. ಯಾಕೆಂದರೆ ನಮಗೆ ಮತ್ತು ನಮಗೆ ಕಿವಿಗೊಡುವವರಿಗೆ ಇದರಿಂದ ನಿತ್ಯಜೀವ ಸಿಗುತ್ತದೆ. ಆದ್ದರಿಂದಲೇ ಪೌಲ “ನಾನು ಇತರರೊಂದಿಗೆ ಸುವಾರ್ತೆಯಲ್ಲಿ ಪಾಲುಗಾರನಾಗಲಿಕ್ಕಾಗಿ ಎಲ್ಲವನ್ನೂ ಸುವಾರ್ತೆಗೋಸ್ಕರವೇ ಮಾಡುತ್ತೇನೆ” ಎಂದನು. (1 ಕೊರಿಂ. 9:23) ದೇವರ ರಾಜ್ಯದ ಬಗ್ಗೆ ಇತರರಿಗೆ ಕಲಿಸಲು ಪೌಲ ತುಂಬ ಶ್ರಮಪಟ್ಟನು. (ರೋಮನ್ನರಿಗೆ 1:14, 15; 2 ತಿಮೊಥೆಯ 4:2 ಓದಿ.) ಕ್ರೂರವಾದ ಹಿಂಸೆಯನ್ನು ಅನುಭವಿಸಬೇಕಾಗಿ ಬಂದರೂ ಸುವಾರ್ತೆಯ ಮೇಲೆ ಪ್ರೀತಿ ಇದ್ದದರಿಂದ ಅವನು ಪಟ್ಟುಬಿಡದೆ ಸಾರಿದನು. (1 ಥೆಸ. 2:2) ಸಾರುವ ಕೆಲಸದ ಮೇಲೆ ಪೌಲನಿಗಿದ್ದ ಪ್ರೀತಿಯನ್ನು ನಾವು ಹೇಗೆ ಅನುಕರಿಸಬಹುದು?
9. ಸಾರುವ ಕೆಲಸದ ಮೇಲೆ ನಮಗೆ ಪ್ರೀತಿ ಇದೆಯೆಂದು ನಾವು ಯಾವ ವಿಧಗಳಲ್ಲಿ ತೋರಿಸಬಹುದು?
9 ಸಾರುವ ಕೆಲಸದ ಮೇಲೆ ಪೌಲನಿಗಿದ್ದ ಪ್ರೀತಿಯನ್ನು ಅವನು ತೋರಿಸಿದ ಒಂದು ವಿಧ ಯಾವುದೆಂದರೆ, ಜನರೊಂದಿಗೆ ಮಾತಾಡಲು ಸಿಕ್ಕಿದ ಪ್ರತಿಯೊಂದು ಸಂದರ್ಭವನ್ನು ಬಳಸಿದನು. ಪೌಲನಂತೆ ಮತ್ತು ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಂತೆ ನಾವು ಕೂಡ ಮನೆಮನೆ ಸೇವೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಜನರು ಸಿಗುವಲ್ಲೆಲ್ಲಾ ಸುವಾರ್ತೆ ಸಾರುತ್ತೇವೆ. (ಅ. ಕಾ. 5:42; 20:20) ನಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸಾರಲು ಅವಕಾಶಗಳಿಗಾಗಿ ಹುಡುಕುತ್ತೇವೆ. ನಮ್ಮ ಪರಿಸ್ಥಿತಿ ಅನುಮತಿಸುವುದಾದರೆ ಪಯನೀಯರ್ ಸೇವೆ ಮಾಡುತ್ತೇವೆ ಅಥವಾ ಸಹಾಯಕ ಪಯನೀಯರ್ ಸೇವೆ ಮಾಡುತ್ತೇವೆ. ಅಥವಾ ನಮ್ಮ ಸೇವೆಯನ್ನು ಹೆಚ್ಚಿಸಲು ಬೇರೆ ಭಾಷೆ ಕಲಿಯಬಹುದು, ನಮ್ಮ ದೇಶದಲ್ಲೇ ಇರುವ ಇನ್ನೊಂದು ಸ್ಥಳಕ್ಕೆ ಹೋಗಬಹುದು, ಇನ್ನೊಂದು ದೇಶಕ್ಕೂ ಹೋಗಬಹುದು.—ಅ. ಕಾ. 16:9, 10.
10. ಸಾರುವ ಕೆಲಸದಲ್ಲಿ ಶ್ರಮಪಟ್ಟದ್ದರಿಂದ ಐರೀನ್‌ಗೆ ಯಾವ ಪ್ರಯೋಜನಗಳು ಸಿಕ್ಕಿವೆ?
10 ಅಮೆರಿಕದಲ್ಲಿರುವ ಐರೀನ್ ಎಂಬ ಒಬ್ಬ ಅವಿವಾಹಿತ ಸಹೋದರಿಯ ಅನುಭವ ನೋಡೋಣ. ಅವರು ರಷ್ಯನ್ ಭಾಷೆಯನ್ನು ಮಾತಾಡುವ ಜನರಿಗೆ ಸುವಾರ್ತೆ ಸಾರಲು ಬಯಸಿದರು. ಆದ್ದರಿಂದ 1993ರಲ್ಲಿ ನ್ಯೂಯಾರ್ಕ್ ನಗರದಲ್ಲಿದ್ದ ಒಂದು ರಷ್ಯನ್ ಭಾಷಾ ಗುಂಪಿಗೆ ಸೇರಿ ಸೇವೆಮಾಡಲು ಆರಂಭಿಸಿದರು. ಆಗ ಆ ಗುಂಪಿನಲ್ಲಿ ಸುಮಾರು 20 ಪ್ರಚಾರಕರಿದ್ದರು. ಅವರು ಆ ಗುಂಪಿಗೆ ಸೇರಿ ಈಗ 20ಕ್ಕಿಂತ ಹೆಚ್ಚು ವರ್ಷಗಳಾಗಿವೆ. “ರಷ್ಯನ್ ಭಾಷೆ ಮಾತಾಡಲು ಈಗಲೂ ಸ್ವಲ್ಪ ಕಷ್ಟಪಡುತ್ತೇನೆ” ಎನ್ನುತ್ತಾರೆ ಐರೀನ್. ಆದರೂ ಈ ಭಾಷೆಯ ಜನರಿಗೆ ಸುವಾರ್ತೆ ಸಾರಲು ಯೆಹೋವನು ಅವರಿಗೂ ಇತರ ಪ್ರಚಾರಕರಿಗೂ ಸಹಾಯ ಮಾಡಿದ್ದಾನೆ. ಪರಿಣಾಮವಾಗಿ, ಇಂದು ನ್ಯೂಯಾರ್ಕ್ ನಗರದಲ್ಲಿ ಆರು ರಷ್ಯನ್ ಸಭೆಗಳಿವೆ. ಐರೀನ್ ತುಂಬ ಜನರ ಜೊತೆ ಬೈಬಲ್ ಅಧ್ಯಯನ ಮಾಡಿದರು. ಅವರಲ್ಲಿ 15 ಜನ ದೀಕ್ಷಾಸ್ನಾನ ಪಡೆದುಕೊಂಡರು. ಅವರಲ್ಲಿ ಕೆಲವರು ಬೆತೆಲಿನಲ್ಲಿ ಸೇವೆ ಮಾಡುತ್ತಿದ್ದಾರೆ, ಕೆಲವರು ಪಯನೀಯರ್ ಆಗಿದ್ದಾರೆ, ಕೆಲವರು ಹಿರಿಯರು ಆಗಿದ್ದಾರೆ. “ನಾನು ಬೇರೆ ಯಾವುದೇ ಗುರಿಯನ್ನು ಬೆನ್ನಟ್ಟಿದ್ದರೂ ನನಗೆ ಇಷ್ಟೊಂದು ಸಂತೋಷ ಸಿಗುತ್ತಿರಲಿಲ್ಲ” ಎಂದು ಐರೀನ್ ಹೇಳುತ್ತಾರೆ. ಸುವಾರ್ತೆ ಸಾರುವುದನ್ನು ಐರೀನ್ ತುಂಬ ಅಮೂಲ್ಯವಾಗಿ ನೋಡುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ!
11. ಹಿಂಸೆಯಿದ್ದರೂ ಸುವಾರ್ತೆ ಸಾರಿದ್ದರಿಂದ ನಮಗೆ ಯಾವ ಫಲಿತಾಂಶ ಸಿಕ್ಕಿದೆ?
11 ನಾವು ಸಾರುವ ಕೆಲಸವನ್ನು ಅಮೂಲ್ಯವಾಗಿ ಎಣಿಸುವುದಾದರೆ ನಮಗೆ ಹಿಂಸೆ ಬಂದರೂ ಅಪೊಸ್ತಲ ಪೌಲನಂತೆ ಸುವಾರ್ತೆ ಸಾರುವುದನ್ನು ಬಿಟ್ಟುಬಿಡುವುದಿಲ್ಲ. (ಅ. ಕಾ. 14:19-22) ಉದಾಹರಣೆಗೆ, ಇಸವಿ 1930ರಿಂದ 1944ರ ತನಕ ಅಮೆರಿಕದಲ್ಲಿ ನಮ್ಮ ಸಹೋದರರಿಗೆ ತುಂಬ ಹಿಂಸೆ ಎದುರಾಗಿತ್ತು. ಆದರೂ ಅವರು ಸಾರುವುದನ್ನು ಮುಂದುವರಿಸಿದರು. ಅಧಿಕಾರಿಗಳು ಅದನ್ನು ನಿಲ್ಲಿಸಲು ಪ್ರಯತ್ನಿಸಿದಾಗ ನಮ್ಮ ಸಹೋದರರು ನ್ಯಾಯಾಲಯದ ಮೆಟ್ಟಿಲೇರಿದರು. ಅನೇಕ ಮೊಕದ್ದಮೆಗಳನ್ನೂ ಗೆದ್ದರು. 1943ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯನ್ನು ಗೆದ್ದಾಗ ಸಹೋದರ ನಾರ್ ಹೇಳಿದ್ದೇನೆಂದರೆ, ‘ನಮ್ಮ ಮೊಕದ್ದಮೆಗಳು ಈ ನ್ಯಾಯಾಲಯದ ಮೆಟ್ಟಿಲೇರಿವೆಯಾದರೆ ನಮ್ಮ ಸಹೋದರರು ವಿರೋಧವಿದ್ದರೂ ಸುವಾರ್ತೆ ಸಾರಿದ್ದಾರೆ ಎಂದರ್ಥ. ಲೋಕವ್ಯಾಪಕವಾಗಿ ಸಹೋದರರು ಸಾರುತ್ತಾ ಇರುವುದರಿಂದ ಹಿಂಸೆ ತಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ತೋರಿಸಿದ್ದಾರೆ.’ ಬೇರೆ ದೇಶಗಳಲ್ಲೂ ನಾವು ಇಂಥ ಮೊಕದ್ದಮೆಗಳನ್ನು ಗೆದ್ದಿದ್ದೇವೆ. ನಮಗೆ ಹಿಂಸೆ ಬಂದರೂ ಸಾರುವ ಕೆಲಸದ ಮೇಲೆ ನಮಗಿರುವ ಪ್ರೀತಿಯಿಂದಾಗಿ ಅದನ್ನು ನಿಲ್ಲಿಸುವುದಿಲ್ಲ.
12. ನೀವು ಯಾವ ದೃಢತೀರ್ಮಾನ ಮಾಡಿದ್ದೀರಿ?
12 ಸಾರುವ ಕೆಲಸವನ್ನು ನಾವು ಪ್ರೀತಿಸುತ್ತೇವಾದರೆ ‘ನಾನಿಷ್ಟು ತಾಸು ಮಾಡಿದರೆ ಸಾಕು’ ಅಂತ ನೆನಸುವುದಿಲ್ಲ. ಬದಲಾಗಿ “ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು” ಕೊಡಲು ನಮ್ಮಿಂದ ಆಗುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ. (ಅ. ಕಾ. 20:24; 2 ತಿಮೊ. 4:5) ಆದರೆ ನಾವು ಜನರಿಗೆ ಕಲಿಸುವ ವಿಷಯಗಳೇನು? ದೇವರು ನಮಗೆ ಕೊಟ್ಟಿರುವ ಇನ್ನೊಂದು ನಿಕ್ಷೇಪದ ಬಗ್ಗೆ ನೋಡೋಣ.
ನಾವು ಕಲಿಯುವ ಅಮೂಲ್ಯ ಸತ್ಯಗಳು
13, 14. (ಎ) ಮತ್ತಾಯ 13:52ರಲ್ಲಿ ಯೇಸು ಹೇಳಿದ “ಬೊಕ್ಕಸ” ಯಾವುದು? (ಬಿ) ಅದನ್ನು ತುಂಬಿಸುವುದು ಹೇಗೆ?
13 ನಾವು ಕಲಿತಿರುವ ಎಲ್ಲ ಸತ್ಯಗಳು ಯೆಹೋವನು ಕೊಟ್ಟಿರುವ ಮೂರನೇ ನಿಕ್ಷೇಪ. ಆತನು ಸತ್ಯದ ಮೂಲನು. (2 ಸಮು. 7:28) ಉದಾರ ಸ್ವಭಾವದ ನಮ್ಮ ತಂದೆಯಾದ ಆತನು ಆ ಸತ್ಯಗಳನ್ನು ನಮ್ಮೊಟ್ಟಿಗೂ ಹಂಚಿಕೊಂಡಿದ್ದಾನೆ. ನಾವು ಆತನ ವಾಕ್ಯವನ್ನು ಮತ್ತು ನಮ್ಮ ಪ್ರಕಾಶನಗಳನ್ನು ಓದುವುದರಿಂದ, ಅಧಿವೇಶನ, ಸಮ್ಮೇಳನ, ಕೂಟಗಳಿಗೆ ಹಾಜರಾಗುವುದರಿಂದ ಈ ಸತ್ಯಗಳನ್ನು ಕಲಿತಿದ್ದೇವೆ. ಹೀಗೆ ಕಲಿಯುತ್ತಾ ಹೋಗುವಾಗ ಯೇಸು ಹೇಳಿದಂತೆ ನಮ್ಮ ‘ಬೊಕ್ಕಸದೊಳಗೆ’ ‘ಹೊಸ ಮತ್ತು ಹಳೇ’ ಸತ್ಯಗಳಿರುತ್ತವೆ. (ಮತ್ತಾಯ 13:52 ಓದಿ.) ನೆಲದಡಿ ಹುದುಗಿರುವ ನಿಕ್ಷೇಪವನ್ನು ಹುಡುಕುವ ರೀತಿಯಲ್ಲಿ ನಾವು ಈ ಸತ್ಯಗಳನ್ನು ಹುಡುಕುವುದಾದರೆ ನಮ್ಮ ‘ಬೊಕ್ಕಸವನ್ನು’ ತುಂಬಿಸಲು ಯೆಹೋವನು ಸಹಾಯ ಮಾಡುತ್ತಾನೆ. (ಜ್ಞಾನೋಕ್ತಿ 2:4-7 ಓದಿ.) ಇದನ್ನು ಮಾಡುವುದು ಹೇಗೆ?
14 ನಾವು ಬೈಬಲನ್ನು, ನಮ್ಮ ಪ್ರಕಾಶನಗಳನ್ನು ತಪ್ಪದೆ ಅಧ್ಯಯನ ಮಾಡಬೇಕು ಮತ್ತು ಸಂಶೋಧನೆ ಮಾಡಬೇಕು. ಇದು ನಮಗೆ ಹಿಂದೆಂದೂ ಗೊತ್ತಿರದ “ಹೊಸ” ಸತ್ಯಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. (ಯೆಹೋ. 1:8, 9; ಕೀರ್ತ. 1:2, 3) ಜುಲೈ 1879ರಲ್ಲಿ ಪ್ರಕಟಿಸಲಾದ ಕಾವಲಿನಬುರುಜು ಪತ್ರಿಕೆಯ ಮೊತ್ತ ಮೊದಲ ಸಂಚಿಕೆಯಲ್ಲಿ, ಸತ್ಯವನ್ನು ಕಳೆಗಿಡಗಳ ಮಧ್ಯೆ ಅಡಗಿರುವ ಒಂದು ಹೂವಿಗೆ ಹೋಲಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಆ ಹೂವು ಬೇಕಾದರೆ ಕಳೆಗಿಡಗಳ ಮಧ್ಯೆ ಚೆನ್ನಾಗಿ ಹುಡುಕಬೇಕಾಗುತ್ತದೆ. ಅವನಿಗದು ಸಿಕ್ಕಿದಾಗ ಅಷ್ಟಕ್ಕೆ ಸುಮ್ಮನಿರಬಾರದು. ಇನ್ನೂ ಹೆಚ್ಚು ಹೂವುಗಳಿಗಾಗಿ ಹುಡುಕಬೇಕು. ಅದೇ ರೀತಿ ನಾವು ಒಂದೇ ಒಂದು ಸತ್ಯವನ್ನು ಕಲಿತ ಮೇಲೆ ಅಲ್ಲಿಗೇ ನಿಲ್ಲಿಸಬಾರದು. ಇನ್ನೂ ಹೆಚ್ಚು ಸತ್ಯಗಳನ್ನು ಹುಡುಕಿ ಕಂಡುಕೊಳ್ಳಬೇಕು.
15. (ಎ) ನಾವು ಯಾವುದನ್ನು “ಹಳೇ” ಸತ್ಯಗಳು ಎಂದು ಹೇಳಬಹುದು? (ಬಿ) ಅವುಗಳಲ್ಲಿ ಯಾವುದು ನಿಮಗೆ ಅಮೂಲ್ಯವಾಗಿದೆ?
15 ನಾವು ಬೈಬಲನ್ನು ಕಲಿಯಲು ಆರಂಭಿಸಿದಾಗ ಆಶ್ಚರ್ಯ ಹುಟ್ಟಿಸುವ ಕೆಲವು ಸತ್ಯಗಳನ್ನು ಕಲಿತೆವು. ಅವುಗಳನ್ನು ನಾವು “ಹಳೇ” ಸತ್ಯಗಳು ಎಂದು ಹೇಳಬಹುದು. ಯಾಕೆಂದರೆ ನಾವು ಅವುಗಳನ್ನು ಮೊದಮೊದಲು ಕಲಿತೆವು. ಅಂಥ ಕೆಲವು ಸತ್ಯಗಳು ಯಾವುವು? ಯೆಹೋವನೇ ನಮ್ಮ ಸೃಷ್ಟಿಕರ್ತ, ಮಾನವರಿಗಾಗಿ ಆತನಿಗೆ ಒಂದು ಉದ್ದೇಶ ಇದೆ, ನಮ್ಮನ್ನು ಪಾಪ ಮರಣದಿಂದ ಬಿಡಿಸಲು ತನ್ನ ಮಗನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟನು, ದೇವರ ರಾಜ್ಯ ಕಷ್ಟಗಳಿಗೆಲ್ಲ ಕೊನೆ ತರುತ್ತದೆ ಮತ್ತು ನಾವು ಈ ಭೂಮಿಯಲ್ಲೇ ಶಾಂತಿ ಸಂತೋಷದಿಂದ ಸಾಯದೆ ಬದುಕಬಹುದು ಎಂಬ ಸತ್ಯಗಳನ್ನು ಕಲಿತೆವು.—ಯೋಹಾ. 3:16; ಪ್ರಕ. 4:11; 21:3, 4.
16. ಬೈಬಲ್ ಸತ್ಯಗಳ ಬಗ್ಗೆ ಹೊಸ ತಿಳುವಳಿಕೆ ಬಂದಾಗ ನಾವು ಏನು ಮಾಡಬೇಕು?
16 ಕೆಲವೊಮ್ಮೆ ಒಂದು ಬೈಬಲ್ ಪ್ರವಾದನೆ ಅಥವಾ ವಚನದ ಬಗ್ಗೆ ಹೊಸ ತಿಳುವಳಿಕೆ ಬರಬಹುದು. ಆಗ ನಾವು ಸಮಯ ಮಾಡಿಕೊಂಡು ಅದನ್ನು ಅ. ಕಾ. 17:11; 1 ತಿಮೊ. 4:15) ಹಳೇ ತಿಳುವಳಿಕೆಯಲ್ಲಿ ಮುಖ್ಯವಾಗಿ ಏನು ಬದಲಾಗಿದೆ ಎಂದು ಅರ್ಥಮಾಡಿಕೊಂಡರೆ ಸಾಕಾಗುವುದಿಲ್ಲ. ಹೊಸ ತಿಳುವಳಿಕೆಯಲ್ಲಿರುವ ಚಿಕ್ಕಪುಟ್ಟ ವಿವರಗಳಿಗೂ ಗಮನಕೊಡಬೇಕು. ಈ ರೀತಿಯಲ್ಲಿ ಅಧ್ಯಯನ ಮಾಡಿದರೆ ಖಂಡಿತ ನಿಮ್ಮ ಬೈಬಲ್ ಸತ್ಯಗಳ ಬೊಕ್ಕಸ ಹೊಸ ಸತ್ಯಗಳಿಂದ ತುಂಬುತ್ತದೆ. ನಾವು ಇಷ್ಟೊಂದು ಪ್ರಯತ್ನ ಮಾಡುವುದು ಯಾಕೆ ಒಳ್ಳೇದು?
ಅಧ್ಯಯನ ಮಾಡಬೇಕು ಮತ್ತು ಧ್ಯಾನಿಸಬೇಕು. (17, 18. ನಮಗೆ ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ?
17 ನಾವು ಹಿಂದೆ ಕಲಿತ ವಿಷಯಗಳನ್ನು ನಮ್ಮ ನೆನಪಿಗೆ ತಂದುಕೊಳ್ಳಲು ಪವಿತ್ರಾತ್ಮ ಸಹಾಯ ಮಾಡುತ್ತದೆ ಎಂದು ಯೇಸು ಹೇಳಿದನು. (ಯೋಹಾ. 14:25, 26) ನಾವು ಸುವಾರ್ತೆ ಸಾರುವಾಗ ಪವಿತ್ರಾತ್ಮ ಹೇಗೆ ಸಹಾಯ ಮಾಡುತ್ತದೆ? ಪೀಟರ್ ಎಂಬ ಸಹೋದರನಿಗಾದ ಅನುಭವ ನೋಡಿ. 1970ರಲ್ಲಿ ನಡೆದ ಘಟನೆ. ಅವರಿಗಾಗ 19 ವಯಸ್ಸು. ಆಗಷ್ಟೇ ಬ್ರಿಟನ್‌ನ ಬೆತೆಲಿಗೆ ಸೇರಿದ್ದರು. ಒಮ್ಮೆ ಮನೆಮನೆ ಸೇವೆ ಮಾಡುತ್ತಿದ್ದಾಗ ಗಡ್ಡ ಬಿಟ್ಟಿರುವ 50ರ ಆಸುಪಾಸಿನ ವ್ಯಕ್ತಿ ಪೀಟರ್‌ಗೆ ಸಿಕ್ಕಿದರು. ಬೈಬಲಿನ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೀರಾ ಎಂದು ಪೀಟರ್ ಆ ವ್ಯಕ್ತಿಯನ್ನು ಕೇಳಿದರು. ಆ ವ್ಯಕ್ತಿ ಒಬ್ಬ ಯೆಹೂದಿ ರಬ್ಬಿ (ಧರ್ಮಗುರು) ಆಗಿದ್ದರು. ಒಬ್ಬ ಹುಡುಗ ತನಗೆ ಬೈಬಲನ್ನು ಕಲಿಸುತ್ತಾನಾ ಎಂದು ಅವರಿಗೆ ಆಶ್ಚರ್ಯವಾಯಿತು. ಪೀಟರನ್ನು ಪರೀಕ್ಷಿಸಲಿಕ್ಕಾಗಿ, “ಆಯ್ತಪ್ಪಾ, ಮೊದಲು ನನಗೆ ಹೇಳು, ದಾನಿಯೇಲ ಪುಸ್ತಕವನ್ನು ಯಾವ ಭಾಷೆಯಲ್ಲಿ ಬರೆಯಲಾಯಿತು?” ಎಂದು ಕೇಳಿದರು. ಅದಕ್ಕೆ ಪೀಟರ್, “ದಾನಿಯೇಲ ಪುಸ್ತಕದ ಕೆಲವು ಭಾಗಗಳನ್ನು ಅರಮಾಯ ಭಾಷೆಯಲ್ಲಿ ಬರೆಯಲಾಯಿತು” ಎಂದರು. “ನನಗೆ ಉತ್ತರ ಗೊತ್ತಿರುವುದು ನೋಡಿ ಆ ರಬ್ಬಿಗೆ ಆಶ್ಚರ್ಯವಾಯಿತು. ಆದರೆ ಅದಕ್ಕಿಂತ ಹೆಚ್ಚಾಗಿ ನನಗೇ ನನ್ನ ಬಗ್ಗೆ ಆಶ್ಚರ್ಯ ಆಯಿತು. ನನಗೆ ಹೇಗೆ ಉತ್ತರ ಗೊತ್ತಿತ್ತು? ಮನೆಗೆ ವಾಪಸ್ಸು ಹೋದಾಗ ಹಿಂದಿನ ತಿಂಗಳುಗಳ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ತೆಗೆದು ನೋಡಿದೆ. ಆಗ ಒಂದು ಲೇಖನ ಸಿಕ್ಕಿತು. ಅದರಲ್ಲಿ ದಾನಿಯೇಲ ಪುಸ್ತಕವನ್ನು ಅರಮಾಯ ಭಾಷೆಯಲ್ಲಿ ಬರೆಯಲಾಯಿತು ಎಂದು ವಿವರಿಸಲಾಗಿತ್ತು” ಎನ್ನುತ್ತಾರೆ ಪೀಟರ್. (ದಾನಿ. 2:4) * ನಾವು ಹಿಂದೆ ಓದಿ ನಮ್ಮ ಬೊಕ್ಕಸಕ್ಕೆ ಸೇರಿಸಿಟ್ಟ ವಿಷಯಗಳನ್ನು ಮತ್ತೆ ನೆನಪಿಗೆ ತರಲು ಪವಿತ್ರಾತ್ಮ ಸಹಾಯ ಮಾಡುತ್ತದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ.—ಲೂಕ 12:11, 12; 21:13-15.
18 ಯೆಹೋವನಿಂದ ಕಲಿತ ಸತ್ಯಗಳನ್ನು ನಾವು ಪ್ರೀತಿಸುವುದಾದರೆ ಮತ್ತು ಮಾನ್ಯಮಾಡುವುದಾದರೆ ಅವುಗಳನ್ನು ನಮ್ಮ ಬೊಕ್ಕಸಕ್ಕೆ ಸೇರಿಸುತ್ತಾ ಹೋಗುತ್ತೇವೆ. ಇದನ್ನು ನಾವು ಎಷ್ಟು ಹೆಚ್ಚಾಗಿ ಮಾಡುತ್ತೇವೋ ಅಷ್ಟೇ ಹೆಚ್ಚಾಗಿ ನಾವು ಬೇರೆಯವರಿಗೆ ಕಲಿಸಲು ತಯಾರಾಗಿರುತ್ತೇವೆ.
ನಿಮ್ಮ ನಿಕ್ಷೇಪಗಳನ್ನು ಕಾಪಾಡಿಕೊಳ್ಳಿ
19. ನಾವು ನಮ್ಮ ಆಧ್ಯಾತ್ಮಿಕ ನಿಕ್ಷೇಪಗಳನ್ನು ಯಾಕೆ ಕಾಪಾಡಿಕೊಳ್ಳಬೇಕು?
19 ಆಧ್ಯಾತ್ಮಿಕ ನಿಕ್ಷೇಪಗಳನ್ನು ಅಮೂಲ್ಯವಾಗಿ ಎಣಿಸುವುದು ಎಷ್ಟು ಪ್ರಾಮುಖ್ಯ ಎಂದು ಈ ಲೇಖನದಲ್ಲಿ ಕಲಿತೆವು. ನಮಗೆ ಈ ನಿಕ್ಷೇಪಗಳ ಮೇಲಿರುವ ಪ್ರೀತಿಯನ್ನು ಸೈತಾನ ಮತ್ತು ಅವನ ಲೋಕ ಕಡಿಮೆಮಾಡದಂತೆ ನಾವು ತುಂಬ ಜಾಗ್ರತೆ ವಹಿಸಬೇಕು. ಇಲ್ಲದಿದ್ದರೆ, ಕೈತುಂಬ ಸಂಬಳ ಕೊಡುವ ಕೆಲಸ ಅಥವಾ ಐಷಾರಾಮವಾಗಿ ಬದುಕುವ ಕನಸು ಅಥವಾ ನಮ್ಮ ಹತ್ತಿರ ಹಣ-ವಸ್ತುಗಳು ಇದೆ ಎಂದು ತೋರಿಸಿಕೊಳ್ಳುವ ಆಸೆ ನಮ್ಮನ್ನು ದಾರಿತಪ್ಪಿಸಿಬಿಡಬಹುದು. ಹಾಗಾಗಿ ಅಪೊಸ್ತಲ ಯೋಹಾನನು ಈ ಲೋಕ ಮತ್ತು ಅದರಲ್ಲಿರುವ ಎಲ್ಲವೂ ನಾಶವಾಗಿ ಹೋಗಲಿದೆ ಎಂದು ನೆನಪುಹುಟ್ಟಿಸುತ್ತಾನೆ. (1 ಯೋಹಾ. 2:15-17) ಆದ್ದರಿಂದ ನಾವು ನಮ್ಮ ಆಧ್ಯಾತ್ಮಿಕ ನಿಕ್ಷೇಪಗಳನ್ನು ಮಾನ್ಯಮಾಡಿ ಕಾಪಾಡಿಕೊಳ್ಳಬೇಕು.
20. ನಿಮ್ಮ ಆಧ್ಯಾತ್ಮಿಕ ನಿಕ್ಷೇಪಗಳನ್ನು ಕಾಪಾಡಿಕೊಳ್ಳಲು ಯಾವ ದೃಢತೀರ್ಮಾನ ಮಾಡಿದ್ದೀರಿ?
20 ದೇವರ ರಾಜ್ಯದ ಮೇಲೆ ನಿಮಗಿರುವ ಪ್ರೀತಿಯನ್ನು ಕಡಿಮೆಮಾಡುವ ಯಾವ ವಿಷಯವನ್ನೇ ಆಗಲಿ ಬಿಟ್ಟುಬಿಡಲು ಸಿದ್ಧರಾಗಿರಿ. ಹುರುಪಿನಿಂದ ಸಾರಲು ಮತ್ತು ಸಾರುವ ಕೆಲಸದ ಮೇಲಿರುವ ನಿಮ್ಮ ಪ್ರೀತಿಯನ್ನು ಕಳಕೊಳ್ಳದಿರಲು ದೃಢತೀರ್ಮಾನ ಮಾಡಿ. ಬೈಬಲ್ ಸತ್ಯಗಳಿಗಾಗಿ ಹುಡುಕುತ್ತಾ ಇರಿ. ಇದನ್ನೆಲ್ಲ ಮಾಡಿದರೆ ನಿಮ್ಮ ನಿಕ್ಷೇಪವನ್ನು ಅಥವಾ ‘ನಿಧಿಯನ್ನು ಸ್ವರ್ಗದಲ್ಲಿ ಸೇರಿಸಿಡುತ್ತೀರಿ. ಅಲ್ಲಿ ಕಳ್ಳನು ಸಮೀಪಕ್ಕೆ ಬರುವುದೂ ಇಲ್ಲ, ಅದು ನುಸಿಹಿಡಿದು ಹಾಳಾಗುವುದೂ ಇಲ್ಲ. ನಿಮ್ಮ ನಿಧಿ ಇರುವಲ್ಲಿಯೇ ನಿಮ್ಮ ಹೃದಯ ಇರುವುದು.’—ಲೂಕ 12:33, 34.
^ ಪ್ಯಾರ. 17 ದಾನಿಯೇಲ 2:4ರಿಂದ 7:28ರ ವರೆಗಿರುವ ಭಾಗವನ್ನು ಅರಮಾಯ ಭಾಷೆಯಲ್ಲಿ ಬರೆಯಲಾಗಿದೆ.