ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧುನಿಕ ನೆರವೇರಿಕೆಯಲ್ಲಿ, ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು ತೆರೆಮರೆಯಲ್ಲಿದ್ದುಕೊಂಡು ಪಾರಾಗಲಿರುವ ಜನರಿಗೆ ಗುರುತು ಹಾಕುವ ಯೇಸು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೆಜ್ಕೇಲ ಕಂಡ ದರ್ಶನದಲ್ಲಿ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷ ಯಾರು? ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯಾರು?

ಇವರು ಯೆಹೆಜ್ಕೇಲನ ಸಮಯದಲ್ಲಿ ಯೆರೂಸಲೇಮಿನ ನಾಶನದಲ್ಲಿ ಪಾಲ್ಗೊಂಡ ಮತ್ತು ಅರ್ಮಗೊದೋನಿನಲ್ಲಿ ಸೈತಾನನ ಈ ದುಷ್ಟ ಲೋಕವನ್ನು ನಾಶ ಮಾಡುವುದರಲ್ಲಿ ಪಾಲ್ಗೊಳ್ಳುವ ಸ್ವರ್ಗೀಯ ಸೈನ್ಯ ಆಗಿದ್ದಾರೆ. ಈ ಹೊಸ ಹೊಂದಾಣಿಕೆ ಮಾಡಲು ಕಾರಣವೇನು?

ಯೆಹೋವನು ಯೆಹೆಜ್ಕೇಲನಿಗೆ ಒಂದು ದರ್ಶನ ತೋರಿಸಿದನು. ಅದರಲ್ಲಿ ಕ್ರಿಸ್ತ ಪೂರ್ವ 607ರಲ್ಲಿ ಯೆರೂಸಲೇಮ್‌ ನಾಶವಾಗುವುದಕ್ಕೆ ಮುಂಚೆ ಅಲ್ಲಿ ನಡೆಯುತ್ತಿದ್ದ ಕೆಟ್ಟ ಕೆಲಸಗಳನ್ನು ಮತ್ತು ಪಟ್ಟಣ ನಾಶವಾಗುವುದಕ್ಕೆ ಮುಂಚೆ ನಡೆಯುವ ಘಟನೆಗಳನ್ನು ನೋಡಿದನು. ಗದೆಗಳನ್ನು ಹಿಡಿದುಕೊಂಡ ಆರು ಪುರುಷರನ್ನು ನೋಡಿದನು. ಅಲ್ಲದೆ, ‘ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನನ್ನೂ’ ನೋಡಿದನು. (ಯೆಹೆ. 8:6-12; 9:2, 3) ಈ ಪುರುಷನಿಗೆ ‘ಯೆರೂಸಲೇಮ್‌ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡುವಂತೆ’ ಹೇಳಲಾಯಿತು. (ಯೆಹೆ. 9:4-7) ಈ ದರ್ಶನದಿಂದ ನಮಗಿರುವ ಪಾಠವೇನು? ಲೇಖಕನ ದೌತಿಯನ್ನು ಹೊದ್ದುಕೊಂಡಿರುವವನು ಯಾರು?

ಈ ಪ್ರವಾದನೆಯನ್ನು ಕ್ರಿಸ್ತ ಪೂರ್ವ 612ರಲ್ಲಿ ಹೇಳಲಾಯಿತು. ಇದಾಗಿ ಐದು ವರ್ಷಗಳ ನಂತರ ಬಾಬೆಲ್‌ ಸೈನ್ಯ ಯೆರೂಸಲೇಮನ್ನು ನಾಶ ಮಾಡಿದಾಗ ಇದು ಮೊದಲನೇದಾಗಿ ನೆರವೇರಿತು. ಯೆರೂಸಲೇಮನ್ನು ನಾಶಮಾಡಿದ್ದು ಸುಳ್ಳು ದೇವರುಗಳನ್ನು ಆರಾಧಿಸುತ್ತಿದ್ದ ಬಾಬೆಲಿನವರಾಗಿದ್ದರೂ ಇವರನ್ನು ಬಳಸಿದ್ದು ಯೆಹೋವ ದೇವರೇ. (ಯೆರೆ. 25:9, 15-18) ಯಾಕೆ? ಧರ್ಮಭ್ರಷ್ಟರಾಗಿದ್ದ ತನ್ನ ಜನರನ್ನು ದಂಡಿಸಲು ಯೆಹೋವ ದೇವರು ಇವರನ್ನು ಬಳಸಿದನು. ಹಾಗಂತ ದೇವರು ಎಲ್ಲರನ್ನೂ ನಾಶಮಾಡಿಬಿಟ್ಟನಾ? ಇಲ್ಲ. ಕೆಟ್ಟ ಜನರ ಜೊತೆ ಒಳ್ಳೇ ಜನರು ನಾಶವಾಗಲಿಲ್ಲ. ಅಸಹ್ಯ ಕೆಲಸಗಳಿಗೆ ಕೈಜೋಡಿಸದಿದ್ದ ಯೆಹೂದ್ಯರನ್ನು ಕಾಪಾಡಲು ಪ್ರೀತಿಯ ದೇವರು ಏರ್ಪಾಡು ಮಾಡಿದನು.

ಗುರುತು ಹಾಕುವ ಕೆಲಸದಲ್ಲಾಗಲಿ, ಜನರನ್ನು ಹತಿಸುವ ಕೆಲಸದಲ್ಲಾಗಲಿ ಯೆಹೆಜ್ಕೇಲ ಪಾಲ್ಗೊಂಡಿಲ್ಲ. ಈ ಕೆಲಸವನ್ನು ಮಾಡಿದವರು ದೇವದೂತರು. ಸ್ವರ್ಗೀಯ ಸೈನ್ಯ ಈ ಕೆಲಸವನ್ನು ತೆರೆಮರೆಯಲ್ಲಿದ್ದುಕೊಂಡು ಮಾಡಿದ್ದನ್ನು ಈ ಪ್ರವಾದನೆ ನಮಗೆ ಸ್ಪಷ್ಟಪಡಿಸುತ್ತದೆ. ಕೆಟ್ಟವರನ್ನು ನಾಶಮಾಡುವ ಕೆಲಸದೊಟ್ಟಿಗೆ ನೀತಿವಂತರನ್ನು ಗುರುತಿಸುವ ಕೆಲಸವನ್ನೂ ಯೆಹೋವ ದೇವರು ದೇವದೂತರಿಗೆ ಕೊಟ್ಟನು. a

ಈ ದರ್ಶನದ ಆಧುನಿಕ ನೆರವೇರಿಕೆಯಲ್ಲಿ ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷ ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರನ್ನು ಸೂಚಿಸುತ್ತಾನೆ ಮತ್ತು ಸುವಾರ್ತೆಗೆ ಒಳ್ಳೇ ಪ್ರತಿಕ್ರಿಯೆ ನೀಡುವವರು ರಕ್ಷಣೆಗೆ ಅರ್ಹರು ಎಂಬ ಗುರುತು ಪಡೆಯುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ವಿವರಣೆ ಇನ್ನಷ್ಟು ಸ್ಪಷ್ಟವಾಗಿದ್ದರಿಂದ ಹೊಂದಾಣಿಕೆ ಮಾಡಬೇಕಾಗಿದೆ. ಮತ್ತಾಯ 25:31-33 ಕ್ಕನುಸಾರ ಒಳ್ಳೇ ಮತ್ತು ಕೆಟ್ಟ ಜನರನ್ನು ಬೇರ್ಪಡಿಸಿ, ನ್ಯಾಯತೀರ್ಪು ನೀಡುವವನು ಯೇಸು. ಅವನು ಮಹಾ ಸಂಕಟದಲ್ಲಿ ಅಂತಿಮ ತೀರ್ಪು ಮಾಡಲಿದ್ದಾನೆ. ಆಗ ಕುರಿಗಳಂಥ ಜನರು ಪಾರಾಗುತ್ತಾರೆ ಮತ್ತು ಆಡುಗಳಂಥ ಜನರು ನಾಶವಾಗುತ್ತಾರೆ.

ಈ ಹೊಂದಾಣಿಕೆಯಿಂದ ನಾವು ಕಲಿಯುವ ವಿಷಯಗಳೇನು? ಐದು ವಿಷಯಗಳನ್ನಾದರೂ ಕಲಿಯಬಹುದು:

  1. ಯೆರೂಸಲೇಮಿನ ನಾಶನದ ಮುಂಚೆ ಯೆಹೆಜ್ಕೇಲನು ಯೆರೆಮೀಯನೊಂದಿಗೆ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ. ಒಂದು ಸಮಯದಲ್ಲಿ ಯೆಶಾಯ ಕೂಡ ಕಾವಲುಗಾರನಾಗಿದ್ದ. ಇಂದು ಯೆಹೋವ ದೇವರು ಮಹಾ ಸಂಕಟ ಶುರುವಾಗುವ ತನಕ ಅಭಿಷಿಕ್ತರ ಚಿಕ್ಕ ಗುಂಪನ್ನು ಬಳಸಿ ತನ್ನ ಜನರಿಗೆ ಆಧ್ಯಾತ್ಮಿಕ ಆಹಾರವನ್ನು ಕೊಡುತ್ತಿದ್ದಾನೆ ಮತ್ತು ಎಚ್ಚರಿಸುತ್ತಿದ್ದಾನೆ. ಕ್ರಿಸ್ತನ ಮನೆವಾರ್ತೆಯವರು ಕೂಡ ಎಚ್ಚರಿಕೆಯ ವಿಷಯವನ್ನು ಎಲ್ಲರಿಗೂ ಸಾರಿ ಹೇಳುವ ಮೂಲಕ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.—ಮತ್ತಾ. 24:45-47.

  2. ಪಾರಾಗುವ ಜನರಿಗೆ ಗುರುತು ಹಾಕುವ ಕೆಲಸದಲ್ಲಿ ಯೆಹೆಜ್ಕೇಲನು ಭಾಗಿಯಾಗಿರಲಿಲ್ಲ. ಇಂದು ದೇವರ ಸೇವಕರು ಸಹ ಇದರಲ್ಲಿ ಭಾಗಿಯಾಗುವುದಿಲ್ಲ. ಬದಲಿಗೆ ದೇವರ ಸಂದೇಶವನ್ನು ತಿಳಿಸುವ ಕೆಲಸವನ್ನಷ್ಟೇ ಮಾಡುತ್ತಾರೆ. ಇದು ಸುವಾರ್ತೆ ಸಾರುವುದರ ಒಂದು ಭಾಗವಾಗಿದೆ. ಇದನ್ನು ದೇವದೂತರು ಮಾರ್ಗದರ್ಶಿಸುತ್ತಾರೆ.—ಪ್ರಕ. 14:6.

  3. ಯೆಹೆಜ್ಕೇಲನ ಕಾಲದಲ್ಲಾಗಲಿ, ಈಗ ನಮ್ಮ ಕಾಲದಲ್ಲಾಗಲಿ ಯಾರು ಕೂಡ ತಮ್ಮ ಹಣೆಯ ಮೇಲೆ ಯಾವುದೇ ಅಕ್ಷರಾರ್ಥಕ ಗುರುತನ್ನು ಪಡೆದುಕೊಂಡಿಲ್ಲ. ಬದಲಿಗೆ ಸಾಂಕೇತಿಕ ಗುರುತನ್ನು ಪಡೆದುಕೊಳ್ಳುತ್ತಾರೆ. ಇದಕ್ಕಾಗಿ ಜನರು ಏನು ಮಾಡಬೇಕು? ಸುವಾರ್ತೆಯನ್ನು ಕೇಳಿಸಿಕೊಂಡಾಗ ಒಳ್ಳೇ ಪ್ರತಿಕ್ರಿಯೆ ತೋರಿಸಬೇಕು, ಕ್ರಿಸ್ತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು, ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು, ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲಿಸಬೇಕು. (ಮತ್ತಾ. 25:35-40) ಇವನ್ನು ಮಾಡುವವರು ಮಾತ್ರ ಮಹಾ ಸಂಕಟವನ್ನು ಪಾರಾಗಲು ಗುರುತನ್ನು ಪಡೆದುಕೊಳ್ಳುತ್ತಾರೆ.

  4. ಆಧುನಿಕ ನೆರವೇರಿಕೆಯಲ್ಲಿ, ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು ತೆರೆಮರೆಯಲ್ಲಿದ್ದುಕೊಂಡು ಪಾರಾಗಲಿರುವ ಜನರಿಗೆ ಗುರುತು ಹಾಕುವ ಯೇಸು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ. ಮಹಾ ಸಂಕಟದ ಸಮಯದಲ್ಲಿ ಕುರಿಗಳು ಎಂದು ತೀರ್ಪಾಗುವ ಜನರು ಅಂದರೆ ಮಹಾ ಸಮೂಹದವರು ಈ ಗುರುತು ಪಡೆದುಕೊಳ್ಳುತ್ತಾರೆ. ಇವರೇ ಮುಂದೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವ ಆಶೀರ್ವಾದ ಪಡೆಯುವವರು.—ಮತ್ತಾ. 25:34, 46. b

  5. ಆಧುನಿಕ ನೆರವೇರಿಕೆಯಲ್ಲಿ, ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯೇಸುವಿನ ಸ್ವರ್ಗೀಯ ಸೈನ್ಯವನ್ನು ಪ್ರತಿನಿಧಿಸುತ್ತಾರೆ. ಆ ಸೈನ್ಯದ ಮುಂದಾಳತ್ವವನ್ನು ಯೇಸು ವಹಿಸುತ್ತಾನೆ. ಜನಾಂಗಗಳನ್ನೂ ಕೆಟ್ಟತನವನ್ನೂ ಅವರು ಬೇಗನೆ ನಾಶಮಾಡುತ್ತಾರೆ.—ಯೆಹೆ. 9:2, 6, 7; ಪ್ರಕ. 19:11-21.

ಈ ಮೇಲಿನ ವಿಷಯಗಳು, ಯೆಹೋವ ದೇವರು ಕೆಟ್ಟವರ ಜೊತೆ ಒಳ್ಳೇ ಜನರನ್ನು ಎಂದೂ ನಾಶಮಾಡುವುದಿಲ್ಲ ಎಂಬ ನಮ್ಮ ಭರವಸೆಯನ್ನು ಬಲಪಡಿಸುತ್ತದೆ. (2 ಪೇತ್ರ 2:9; 3:9) ಅಲ್ಲದೆ ಸುವಾರ್ತೆ ಸಾರುವ ಕೆಲಸ ತುಂಬ ಪ್ರಾಮುಖ್ಯ ಎನ್ನುವುದನ್ನೂ ನೆನಪಿಸುತ್ತದೆ. ಏಕೆಂದರೆ ಅಂತ್ಯ ಬರುವ ಮುಂಚೆ ಪ್ರತಿಯೊಬ್ಬರಿಗೂ ಈ ಎಚ್ಚರಿಕೆ ಸಂದೇಶ ತಲುಪಬೇಕಾಗಿದೆ!—ಮತ್ತಾ. 24:14.

a ಬಾರೂಕ (ಯೆರೆಮೀಯನ ಕಾರ್ಯದರ್ಶಿ), ಇಥಿಯೋಪ್ಯದ ಎಬೆದ್ಮೆಲೆಕ ಮತ್ತು ರೇಕಾಬ್ಯ ಇವರ ಹಣೆಯ ಮೇಲೆ ಗುರುತು ಹಾಕದಿದ್ದರೂ ಇವರ ಜೀವ ಉಳಿಯಿತು. (ಯೆರೆ. 35:1-19; 39:15-18; 45:1-5) ಇವರ ಜೀವ ಉಳಿಸಲಿಕ್ಕಾಗಿ ಸಾಂಕೇತಿಕ ಗುರುತನ್ನು ಹಾಕಲಾಗಿತ್ತು.

b ನಂಬಿಗಸ್ತರಾಗಿರುವ ಅಭಿಷಿಕ್ತರು ಈ ಗುರುತನ್ನು ಪಡೆಯುವ ಅಗತ್ಯವಿಲ್ಲ. ಇವರು ಸಾಯುವ ಮುಂಚೆ ಅಥವಾ ಮಹಾ ಸಂಕಟ ಆರಂಭವಾಗುವ ಮುಂಚೆ ಇವರಿಗೆ ಕೊನೇ ಮುದ್ರೆಯನ್ನು ಒತ್ತಲಾಗುತ್ತದೆ.—ಪ್ರಕ. 7:1, 3.