ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 29

ಗೀತೆ 83 ನಮಗೆ ಸ್ವನಿಯಂತ್ರಣ ಅಗತ್ಯ

ತಪ್ಪಾದ ಆಸೆಗಳನ್ನ ಜಯಿಸೋಕೆ ಯಾವಾಗ್ಲೂ ಎಚ್ಚರವಾಗಿರಿ

ತಪ್ಪಾದ ಆಸೆಗಳನ್ನ ಜಯಿಸೋಕೆ ಯಾವಾಗ್ಲೂ ಎಚ್ಚರವಾಗಿರಿ

“ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು.”ಮತ್ತಾ. 26:41.

ಈ ಲೇಖನದಲ್ಲಿ ಏನಿದೆ?

ಪಾಪ ಮಾಡದೇ ಇರೋಕೆ ನಾವು ಏನೆಲ್ಲಾ ಮಾಡಬೇಕು? ಮತ್ತು ಪಾಪಕ್ಕೆ ನಡೆಸೋ ವಿಷ್ಯಗಳಿಂದ ದೂರ ಇರೋಕೆ ಮತ್ತು ಎಚ್ಚರವಾಗಿ ಇರೋಕೆ ಏನು ಮಾಡಬೇಕು?

1-2. (ಎ) ಯೇಸು ತನ್ನ ಶಿಷ್ಯರಿಗೆ ಯಾವ ಎಚ್ಚರಿಕೆ ಕೊಟ್ಟನು? (ಬಿ) ಅವರು ಯೇಸುನ ಯಾಕೆ ಬಿಟ್ಟು ಹೋದ್ರು? (ಚಿತ್ರಗಳನ್ನ ನೋಡಿ.)

 ನಿಮಗೆ “ಮನಸ್ಸಿದೆ, ಆದ್ರೆ ದೇಹಕ್ಕೆ ಶಕ್ತಿ ಇಲ್ಲ.” a (ಮತ್ತಾ. 26:41ಬಿ) ಈ ಮಾತುಗಳಿಂದ ನಮಗೆ ಏನು ಗೊತ್ತಾಗುತ್ತೆ? ನಾವು ಅಪರಿಪೂರ್ಣರಾಗಿದ್ದೀವಿ ಮತ್ತು ತಪ್ಪು ಮಾಡ್ತೀವಿ ಅನ್ನೋದನ್ನ ಯೇಸು ಅರ್ಥಮಾಡ್ಕೊಂಡಿದ್ದನು ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ನಾವು ಯಾವಾಗ್ಲೂ ಸರಿಯಾಗಿರೋದನ್ನೇ ಮಾಡ್ತೀವಿ ಅಂತ ಅತಿಯಾದ ಆತ್ಮವಿಶ್ವಾಸ ಇಟ್ಕೊಬಾರದು ಅನ್ನೋ ಎಚ್ಚರಿಕೆ ಕೊಡೋಕೂ ಯೇಸು ಈ ಮಾತುಗಳನ್ನ ಹೇಳಿದನು. ಯೇಸು ಇದನ್ನ ಹೇಳೋ ಸ್ವಲ್ಪ ಸಮಯದ ಮುಂಚೆ ‘ಏನೇ ಆದ್ರೂ ನಾವು ನಿನ್ನನ್ನ ಬಿಟ್ಟು ಹೋಗಲ್ಲ’ ಅಂತ ಆತನ ಶಿಷ್ಯರು ಮಾತು ಕೊಟ್ಟಿದ್ರು. (ಮತ್ತಾ. 26:35) ಅವರು ಒಳ್ಳೇ ಉದ್ದೇಶದಿಂದಾನೇ ಹಾಗೆ ಹೇಳಿದ್ರು. ಆದ್ರೆ ಒತ್ತಡ ಬಂದಾಗ ಸರಿಯಾಗಿರೋದನ್ನ ಮಾಡೋಕೆ ತಪ್ಪಿ ಹೋಗ್ತಾರೆ ಅಂತ ಅವರು ಅರ್ಥಮಾಡ್ಕೊಂಡಿರಲಿಲ್ಲ. ಅದಕ್ಕೇ ಯೇಸು ಅವ್ರಿಗೆ “ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು” ಅಂತ ಹೇಳಿದನು.—ಮತ್ತಾ. 26:41ಎ.

2 ಆದ್ರೆ ದುಃಖದ ವಿಷ್ಯ ಏನಂದ್ರೆ ಯೇಸುವಿನ ಶಿಷ್ಯರು ಎಚ್ಚರವಾಗಿ ಇರೋಕೆ ತಪ್ಪಿ ಹೋದ್ರು. ಯೇಸುವನ್ನ ಜನ್ರು ಹಿಡ್ಕೊಂಡು ಹೋದಾಗ ಅವರು ಆತನ ಜೊತೆನೇ ಇದ್ರಾ? ಇಲ್ಲ! ಎಚ್ಚರವಾಗಿ ಇಲ್ಲದೇ ಇದ್ದಿದ್ರಿಂದ ಅವರು ಏನು ಮಾಡಲ್ಲ ಅಂತ ಹೇಳಿದ್ರೋ ಅದನ್ನೇ ಮಾಡಿದ್ರು. ಅಂದ್ರೆ ಯೇಸುನ ಬಿಟ್ಟು ಓಡಿ ಹೋಗಿಬಿಟ್ರು.—ಮತ್ತಾ. 26:56.

ಯೇಸು ತನ್ನ ಶಿಷ್ಯರಿಗೆ ಯಾವಾಗ್ಲೂ ಎಚ್ಚರವಾಗಿ ಇರಿ ಮತ್ತು ತಪ್ಪು ಮಾಡೋ ಸನ್ನಿವೇಶಗಳು ಬಂದಾಗ ನಿಮ್ಮನ್ನ ಕಾಪಾಡ್ಕೊಳ್ಳಿ ಅಂತ ಹೇಳಿದನು. ಆದ್ರೆ ಅವರು ಅವನನ್ನ ಬಿಟ್ಟು ಹೋದ್ರು (ಪ್ಯಾರ 1-2 ನೋಡಿ)


3. (ಎ) ಯೆಹೋವನಿಗೆ ನಿಯತ್ತಾಗಿ ಇರಬೇಕಂದ್ರೆ ನಾವ್ಯಾಕೆ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ?

3 ನಾವು ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡ್ತೀವಿ ಅಂತ ಅತಿಯಾದ ಆತ್ಮವಿಶ್ವಾಸ ತೋರಿಸಬಾರದು. ನಾವು ಯೆಹೋವನಿಗೆ ಏನಿಷ್ಟಾನೋ ಅದನ್ನೇ ಮಾಡೋಕೆ ಬಯಸ್ತೀವಿ ನಿಜ. ಆದ್ರೆ ನಾವು ಅಪರಿಪೂರ್ಣರು, ನಮಗೆ ತಪ್ಪು ಮಾಡೋ ಆಸೆ ಬರುತ್ತೆ ಅನ್ನೋದನ್ನ ನೆನಪಲ್ಲಿ ಇಟ್ಕೊಬೇಕು. (ರೋಮ. 5:12; 7:21-23) ಇದ್ದಕ್ಕಿದ್ದ ಹಾಗೆ ನಮಗೆ ತಪ್ಪು ಮಾಡೋ ಆಸೆ ಬಂದುಬಿಡಬಹುದು ಅದ್ರಿಂದ ನಮಗೆ ಖುಷಿ ಸಿಗುತ್ತೆ ಅಂತ ಅಂದ್ಕೊಬಹುದು. ಆದ್ರೆ ನಾವು ಯೆಹೋವನಿಗೆ ಮತ್ತು ಯೇಸುಗೆ ನಿಯತ್ತಾಗಿ ಇರೋಕೆ ಯೇಸು ಹೇಳಿದ ಸಲಹೆ ಪಾಲಿಸಬೇಕು. ಅಂದ್ರೆ ತಪ್ಪು ಮಾಡೋ ಆಸೆ ಬಂದಾಗ ಯಾವಾಗ್ಲೂ ಎಚ್ಚರವಾಗಿ ಇರಬೇಕು. ಅದಕ್ಕೆ ನಮಗೆ ಈ ಲೇಖನ ಸಹಾಯ ಮಾಡುತ್ತೆ. ಮೊದಲನೇದಾಗಿ, ಯಾವ ಸನ್ನಿವೇಶದಲ್ಲಿ ನಾವು ಎಚ್ಚರವಾಗಿ ಇರಬೇಕು? ಎರಡನೇದಾಗಿ, ತಪ್ಪಾದ ಆಸೆಗಳು ಬಂದಾಗ ನಾವು ಹೇಗೆ ಎಚ್ಚರವಾಗಿ ಇರಬೇಕು? ಮತ್ತು ಮೂರನೇದಾಗಿ, ಯಾವಾಗ್ಲೂ ಎಚ್ಚರವಾಗಿ ಇರೋಕೆ ಏನು ಮಾಡಬೇಕು ಅಂತ ನೋಡೋಣ.

ಯಾವೆಲ್ಲ ಸನ್ನಿವೇಶಗಳಲ್ಲಿ ನಾವು ಯಾವಾಗ್ಲೂ ಎಚ್ಚರವಾಗಿ ಇರಬೇಕು?

4-5. ಚಿಕ್ಕಪುಟ್ಟ ತಪ್ಪುಗಳನ್ನೂ ಮಾಡದೇ ಇರೋದು ಯಾಕಷ್ಟು ಪ್ರಾಮುಖ್ಯ?

4 ಕೆಲವು ತಪ್ಪುಗಳು ಚಿಕ್ಕಪುಟ್ಟದಾಗಿದ್ರೂ ಯೆಹೋವನ ಜೊತೆಗಿರೋ ನಮ್ಮ ಸಂಬಂಧನೇ ಹಾಳು ಮಾಡಿಬಿಡಬಹುದು. ಅಷ್ಟೇ ಅಲ್ಲ ನಾವು ಹೋಗ್ತಾಹೋಗ್ತಾ ದೊಡ್ಡ ಪಾಪನೇ ಮಾಡಿಬಿಡಬಹುದು.

5 ನಮ್ಮೆಲ್ರಿಗೂ ತಪ್ಪು ಮಾಡೋ ಆಸೆ ಬಂದೇ ಬರುತ್ತೆ. ಒಬ್ಬೊಬ್ರಿಗೂ ಬೇರೆಬೇರೆ ತರದ ಬಲಹೀನತೆಗಳಿರುತ್ತೆ. ಅಂದ್ರೆ ಕೆಲವ್ರಿಗೆ ದೊಡ್ಡ ಪಾಪಗಳನ್ನ ಮಾಡಬೇಕು ಅಂತ ಅನಿಸಬಹುದು. ಕೆಲವ್ರಿಗೆ ಕೆಟ್ಟ ಚಟ ಬೆಳೆಸ್ಕೊಳ್ಳೋ ಆಸೆ ಬರಬಹುದು. ಇನ್ನು ಕೆಲವ್ರಿಗೆ ಲೋಕದವ್ರ ತರ ಯೋಚ್ನೆ ಮಾಡೋ ಆಸೆ ಬರಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿ ಲೈಂಗಿಕ ಅನೈತಿಕತೆ ಮಾಡೋ ಆಸೆಯಿಂದ ಹೊರಗೆ ಬರೋಕೆ ಹೋರಾಡ್ತಿರಬಹುದು. ಇನ್ನೊಬ್ಬ ವ್ಯಕ್ತಿ, ಕೆಟ್ಟ ಚಟ ಅಂದ್ರೆ ಹಸ್ತಮೈಥುನ ಅಥವಾ ಅಶ್ಲೀಲ ಚಿತ್ರಗಳನ್ನ ನೋಡೋ ಆಸೆಯ ವಿರುದ್ಧ ಹೋರಾಡ್ತಿರಬಹುದು. ಮತ್ತೊಬ್ಬ ವ್ಯಕ್ತಿ, ಕೋಪ ಹೆಮ್ಮೆ ಅನ್ನೋ ಕೆಟ್ಟ ಗುಣಗಳನ್ನ ಬಿಟ್ಟು ಬಿಡೋಕೆ ಹೋರಾಡ್ತಿರಬಹುದು. ಅಥವಾ ಮನುಷ್ಯರ ಭಯ ಇರೋದ್ರಿಂದ ಸರಿಯಾಗಿ ಇರೋದನ್ನ ಮಾಡೋಕೆ ಕಷ್ಟ ಪಡ್ತಾ ಇರಬಹುದು. ಅದಕ್ಕೇ ಯಾಕೋಬ “ಒಬ್ಬ ವ್ಯಕ್ತಿಯ ಆಸೆನೇ ಅವನನ್ನ ಎಳ್ಕೊಂಡು ಹೋಗಿ ಪುಸಲಾಯಿಸಿ ಪರೀಕ್ಷೆ ಮಾಡುತ್ತೆ” ಅಂತ ಹೇಳಿದ.—ಯಾಕೋ. 1:14.

6. ನಮ್ಮ ಬಗ್ಗೆ ನಮಗೆ ಏನು ಗೊತ್ತಿರಬೇಕು?

6 ನಿಮ್ಮಲ್ಲಿ ಯಾವ ಬಲಹೀನತೆಗಳಿವೆ ಅಂತ ನಿಮಗೆ ಗೊತ್ತಿದೆಯಾ? ನನ್ನಲ್ಲಿ ಯಾವ ಬಲಹೀನತೆನೂ ಇಲ್ಲ, ಎಷ್ಟೇ ತಪ್ಪು ಮಾಡೋ ಆಸೆ ಬಂದ್ರೂ ನಾನು ಸರಿಯಾಗಿರೋದನ್ನೇ ಮಾಡ್ತೀನಿ ಅಂತ ಅಂದ್ಕೊಂಡ್ರೆ ನಮ್ಗೆ ನಾವೇ ಮೋಸ ಮಾಡ್ಕೊಳ್ತೀವಿ. (1 ಯೋಹಾ. 1:8) ಎಚ್ಚರವಾಗಿ ಇಲ್ಲಾಂದ್ರೆ ‘ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರೂ’ ತಪ್ಪು ಮಾಡಿಬಿಡಬಹುದು ಅಂತ ಅಪೊಸ್ತಲ ಪೌಲ ಹೇಳಿದ. (ಗಲಾ. 6:1) ಹಾಗಾಗಿ ನಮ್ಮ ಬಗ್ಗೆ ನಾವು ಚೆನ್ನಾಗಿ ತಿಳ್ಕೊಂಡಿರಬೇಕು ಮತ್ತು ನಮ್ಮಲ್ಲಿರೋ ಬಲಹೀನತೆಗಳನ್ನ ಕಂಡುಹಿಡಿಬೇಕು.—2 ಕೊರಿಂ. 13:5.

7. ನಾವು ಯಾವುದಕ್ಕೆ ಚೆನ್ನಾಗಿ ಗಮನ ಕೊಡಬೇಕು? ಉದಾಹರಣೆ ಕೊಡಿ.

7 ನಮ್ಮಲ್ಲಿ ಕೆಟ್ಟ ಆಸೆ ಹುಟ್ಟಿಸೋ ವಿಷ್ಯಗಳು ಯಾವುದು ಅಂತ ಗೊತ್ತಾದ ಮೇಲೆ ಏನು ಮಾಡಬೇಕು? ಆ ಆಸೆ ವಿರುದ್ಧ ಹೋರಾಡೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಬೇಕು. ಉದಾಹರಣೆಗೆ ಹಿಂದಿನ ಕಾಲದಲ್ಲಿ ಒಂದು ಪಟ್ಟಣದ ಗೋಡೆಯಲ್ಲಿ ಅದರ ಬಾಗಿಲುಗಳೇ ತುಂಬಾ ಬಲಹೀನವಾಗಿತ್ತು. ಅದಕ್ಕೇ ಬಾಗಿಲುಗಳನ್ನ ಗಟ್ಟಿಮುಟ್ಟಾಗಿ ಕಟ್ತಿದ್ರು ಮತ್ತು ಅದನ್ನ ಕಾಯೋಕೆ ತುಂಬ ಕಾವಲುಗಾರರನ್ನ ಇಡ್ತಿದ್ರು. ಅದೇ ತರ ನಮ್ಮಲ್ಲಿ ಯಾವ ಬಲಹೀನತೆ ಇದೆ ಅಂತ ಗೊತ್ತಾದ ಮೇಲೆ ಅದಕ್ಕೆ ನಾವು ಚೆನ್ನಾಗಿ ಗಮನ ಕೊಡಬೇಕು. ಆಗ ಆ ಆಸೆ ವಿರುದ್ಧ ಹೋರಾಡೋಕೆ ಆಗುತ್ತೆ.—1 ಕೊರಿಂ. 9:27.

ತಪ್ಪಾದ ಆಸೆಗಳು ಬಂದಾಗ ನಾವು ಹೇಗೆ ಎಚ್ಚರವಾಗಿರಬೇಕು?

8-9. ಜ್ಞಾನೋಕ್ತಿ 7​ನೇ ಅಧ್ಯಾಯದಲ್ಲಿರೋ ಯುವಕ, ಪಾಪ ಮಾಡೋದ್ರಿಂದ ತನ್ನನ್ನ ಹೇಗೆ ಕಾಪಾಡ್ಕೊಬಹುದಿತ್ತು? (ಜ್ಞಾನೋಕ್ತಿ 7:8, 9, 13, 14, 21)

8 ನಮ್ಮನ್ನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು? ಇದನ್ನ ಅರ್ಥಮಾಡ್ಕೊಳ್ಳೋಕೆ ಜ್ಞಾನೋಕ್ತಿ 7​ನೇ ಅಧ್ಯಾಯದಲ್ಲಿ ತಿಳಿಸಿರೋ ಆ ಯುವಕನ ಉದಾಹರಣೆ ನೋಡಿ. ಅವನು ನಡತೆಗೆಟ್ಟ ಒಬ್ಬ ಸ್ತ್ರೀ ಜೊತೆ ಅನೈತಿಕತೆ ಮಾಡ್ತಾನೆ. ವಚನ 22ರಲ್ಲಿ ಅವನು ಅವಳ ಹಿಂದೆ “ತಕ್ಷಣ” ಹೋದ ಅಂತ ಹೇಳುತ್ತೆ. ಆದ್ರೆ ಅದ್ರ ಮೇಲೆ ಇರೋ ವಚನಗಳಲ್ಲಿ ಅವನು ಅವಳ ಹತ್ರ ಹೋಗೋಕೆ ಕೆಲವು ಹೆಜ್ಜೆಗಳನ್ನ ತಗೊಂಡಿದ್ರಿಂದ ಹೋಗ್ತಾ ಹೋಗ್ತಾ ಪಾಪ ಮಾಡಿಬಿಟ್ಟ ಅಂತ ಹೇಳುತ್ತೆ.

9 ಅವನು ಪಾಪ ಮಾಡೋಕೆ ಕಾರಣ ಏನು? ಆ ಸಂಜೆ ಅವನು “ಆ ಹೆಂಗಸು (ಅಂದ್ರೆ ಕೆಟ್ಟ ನಡತೆ ಇದ್ದ ಹೆಂಗಸು) ಇರೋ ಬೀದಿಗೆ ಹೋದ.” ಆಮೇಲೆ ಅವಳ ಮನೆ ಕಡೆ ಹೆಜ್ಜೆ ಹಾಕಿದ. (ಜ್ಞಾನೋಕ್ತಿ 7:8, 9 ಓದಿ.) ನಂತ್ರ ಅವಳನ್ನ ನೋಡಿದಾಗ ಅವನು ಮುಖ ತಿರುಗಿಸಿ ಹೋಗಲಿಲ್ಲ. ಅದ್ರ ಬದ್ಲು ಅವಳು ಮುತ್ತು ಕೊಡೋಕೆ ಬಿಟ್ಟುಕೊಟ್ಟ. ಅಷ್ಟೇ ಅಲ್ಲ ಅವಳು ಒಳ್ಳೆಯವಳು ಅಂತ ತೋರಿಸ್ಕೊಳ್ಳೋಕೆ ಸಮಾಧಾನ ಬಲಿಗಳನ್ನ ಅರ್ಪಿಸಿದ್ದೀನಿ ಅಂತ ಹೇಳಿದ ಮಾತುಗಳನ್ನ ಕೇಳಿಸ್ಕೊಂಡ. (ಜ್ಞಾನೋಕ್ತಿ 7:13, 14, 21 ಓದಿ.) ಅವನು ಪಾಪಕ್ಕೆ ನಡಿಸೋ ಈ ಹೆಜ್ಜೆಗಳನ್ನ ತಗೊಳ್ಳದೇ ಇದ್ದಿದ್ರೆ ತಪ್ಪು ಮಾಡೋ ಆಸೆಯಿಂದ ಮತ್ತು ಪಾಪ ಮಾಡೋದ್ರಿಂದ ತನ್ನನ್ನ ಕಾಪಾಡ್ಕೊಳ್ಳೋಕೆ ಆಗ್ತಿತ್ತು.

10. ಆ ಯುವಕನ ತರ ಇವತ್ತೂ ಹೇಗೆ ಒಬ್ಬ ವ್ಯಕ್ತಿ ಪಾಪ ಮಾಡಿಬಿಡಬಹುದು?

10 ಸೊಲೊಮೋನ ಹೇಳಿದ ಈ ಉದಾಹರಣೆಯಿಂದ ನಮಗೇನು ಗೊತ್ತಾಗುತ್ತೆ? ಯೆಹೋವನ ಯಾವುದೇ ಒಬ್ಬ ಸೇವಕನಿಗೂ ಹೀಗೇ ಆಗಬಹುದು ಅಂತ ಗೊತ್ತಾಗುತ್ತೆ. ಒಬ್ಬ ವ್ಯಕ್ತಿ ಪಾಪ ಮಾಡಿದ್ಮೇಲೆ ಅದು “ತಕ್ಷಣ” ಆಗಿಬಿಡ್ತು, ನನಗೆ ಗೊತ್ತಿಲ್ಲದೇ ಆಗಿಬಿಡ್ತು ಅಂತ ಹೇಳಬಹುದು. ಆದ್ರೆ ಆಮೇಲೆ ಅವನು ಕೂತು ಯೋಚ್ನೆ ಮಾಡಿದಾಗ, ಆ ಪಾಪ ಮಾಡೋ ಮುಂಚೆ ಕೆಲವೊಂದು ತಪ್ಪಾದ ಹೆಜ್ಜೆಗಳನ್ನ ತಗೊಂಡಿದ್ದ ಅಂತ ಅವನಿಗೆ ಗೊತ್ತಾಗುತ್ತೆ. ತಪ್ಪಾದ ಹೆಜ್ಜೆಗಳು ಅಂದ್ರೆ, ಕೆಟ್ಟ ಸಹವಾಸ ಮಾಡಿರಬಹುದು, ಕೆಟ್ಟ ಮನೋರಂಜನೆ ಆರಿಸ್ಕೊಂಡಿರಬಹುದು, ತಪ್ಪು ಆಸೆ ಹುಟ್ಟಿಸೋ ವೆಬ್‌ಸೈಟನ್ನ ನೋಡಿರಬಹುದು ಮತ್ತು ತಪ್ಪಾದ ಜಾಗದಲ್ಲಿ ಇದ್ದಿರಬಹುದು. ಅಷ್ಟೇ ಅಲ್ಲ ಅವನು ಪ್ರಾರ್ಥನೆ ಮಾಡೋದನ್ನ, ಬೈಬಲ್‌ ಓದೋದನ್ನ, ಕೂಟಗಳಿಗೆ ಹೋಗೋದನ್ನ, ಸೇವೆ ಮಾಡೋದನ್ನ ನಿಲ್ಲಿಸಿರಬಹುದು. ಹೀಗೆ ಜ್ಞಾನೋಕ್ತಿಯಲ್ಲಿ ಹೇಳಿದ ಆ ಯುವಕನ ತರ ಅವನು ತಕ್ಷಣ ಪಾಪ ಮಾಡದೇ ಇರಬಹುದು, ಆದ್ರೆ ಅದಕ್ಕಿಂತ ಮುಂಚೆ ಕೆಲವು ಹೆಜ್ಜೆಗಳನ್ನ ತಗೊಂಡಿರ್ತಾನೆ.

11. ಪಾಪ ಮಾಡದೇ ಇರೋಕೆ ನಾವೇನು ಮಾಡಬೇಕು?

11 ಇದ್ರಿಂದ ನಮಗೇನು ಪಾಠ? ನಾವು ಪಾಪ ಮಾಡೋದ್ರಿಂದಷ್ಟೇ ಅಲ್ಲ ಪಾಪಕ್ಕೆ ನಡಿಸೋ ಹೆಜ್ಜೆಗಳಿಂದಾನೂ ದೂರ ಇರಬೇಕು. ಸೊಲೊಮೋನ ಆ ಯುವಕನ ಬಗ್ಗೆ ಮತ್ತು ಸ್ತ್ರೀ ಬಗ್ಗೆ ಹೇಳುವಾಗ “ಅಪ್ಪಿತಪ್ಪಿನೂ ಅವಳ ಬೀದಿಗೆ ಹೋಗಬೇಡ” ಅಂತ ಹೇಳಿದ. (ಜ್ಞಾನೋ. 7:25) ಅಷ್ಟೇ ಅಲ್ಲ “ಅವಳಿಂದ ದೂರ ಇರು, ಅವಳ ಮನೆ ಬಾಗಿಲ ಹತ್ರನೂ ಹೋಗಬೇಡ” ಅಂತ ಹೇಳಿದ. (ಜ್ಞಾನೋ. 5:3, 8) ಹಾಗಾಗಿ ನಮ್ಮನ್ನ ಕಾಪಾಡ್ಕೊಳ್ಳೋಕೆ ಪಾಪಕ್ಕೆ ನಡೆಸೋ ಸನ್ನಿವೇಶಗಳಿಂದ ದೂರ ಇರಬೇಕು. b ಕೆಲವೊಂದು ವಿಷ್ಯಗಳನ್ನ ಕ್ರೈಸ್ತರು ಮಾಡೋದ್ರಲ್ಲಿ ತಪ್ಪೇನಿಲ್ಲ. ಆದ್ರೂ ಅದು ನಮ್ಮಲ್ಲಿ ತಪ್ಪಾದ ಆಸೆಯನ್ನ ಹುಟ್ಟಿಸೋದಾದ್ರೆ ನಾವು ಅದ್ರಿಂದ ದೂರ ಇರಬೇಕು.—ಮತ್ತಾ. 5:29, 30.

12. ಯೋಬ ಯಾವ ದೃಢತೀರ್ಮಾನ ಮಾಡಿದ್ದ? ಅದು ಅವನಿಗೆ ಹೇಗೆ ಸಹಾಯ ಮಾಡ್ತು? (ಯೋಬ 31:1)

12 ನಾವು ಪಾಪಕ್ಕೆ ನಡೆಸೋ ಸನ್ನಿವೇಶಗಳಿಂದ ದೂರ ಇರಬೇಕಂದ್ರೆ ತಪ್ಪು ಮಾಡಬಾರದು ಅನ್ನೋ ದೃಢನಿರ್ಧಾರ ಮಾಡಬೇಕು. ಯೋಬ ಅದನ್ನೇ ಮಾಡಿದ. ಅವನು ತನ್ನ “ಕಣ್ಣುಗಳ ಜೊತೆ ಒಪ್ಪಂದ” ಮಾಡ್ಕೊಂಡಿದ್ದ. ಅದಕ್ಕೇ ಬೇರೆ ಸ್ತ್ರೀಯರನ್ನ ಅವನು ತಪ್ಪಾದ ದೃಷ್ಟಿಯಿಂದ ನೋಡ್ಲಿಲ್ಲ. (ಯೋಬ 31:1 ಓದಿ, ಪಾದಟಿಪ್ಪಣಿ.) ಅವನು ಈ ತರ ಮಾಡಿದ್ರಿಂದಾನೇ ವ್ಯಭಿಚಾರ ಮಾಡ್ಲಿಲ್ಲ. ಅವನ ತರ ನಾವೂ ನಮ್ಮ ಮನಸ್ಸಲ್ಲಿ ದೃಢವಾದ ತೀರ್ಮಾನ ತಗೊಂಡ್ರೆ ಪಾಪಕ್ಕೆ ನಡಿಸೋ ಯಾವುದೇ ಹೆಜ್ಜೆಗಳನ್ನ ತಗೊಳಲ್ಲ.

13. ನಮ್ಮ ಯೋಚ್ನೆಯನ್ನ ನಾವು ಯಾಕೆ ಕಾಪಾಡ್ಕೊಬೇಕು? (ಚಿತ್ರಗಳನ್ನ ನೋಡಿ.)

13 ನಮ್ಮ ಯೋಚ್ನೆಗಳನ್ನ ನಾವು ಕಾಪಾಡ್ಕೊಬೇಕು. (ವಿಮೋ. 20:17) ಕೆಲವರು ನಾನು ತಪ್ಪಾದ ವಿಷ್ಯಗಳ ಬಗ್ಗೆ ಯೋಚ್ನೆ ಮಾಡ್ತಾ ಇದ್ದೀನಿ ಅಷ್ಟೇ. ಅದ್ರಲ್ಲೇನ್‌ ತಪ್ಪಿದೆ? ನಾನು ಅದನ್ನ ಯಾವತ್ತೂ ಮಾಡಲ್ಲ ಅಂತ ಹೇಳಬಹುದು. ಆದ್ರೆ ಈ ತರ ಯೋಚ್ನೆ ಮಾಡೋದು ತಪ್ಪು. ಕೆಟ್ಟ ವಿಷ್ಯಗಳ ಬಗ್ಗೆ ಒಬ್ಬ ವ್ಯಕ್ತಿ ಯೋಚಿಸ್ತಾ ಇರೋದಾದ್ರೆ ಆ ಆಸೆ ಇನ್ನೂ ಅವನಲ್ಲಿ ಜಾಸ್ತಿ ಆಗ್ತಾ ಹೋಗುತ್ತೆ. ಇನ್ನೊಂದು ಅರ್ಥದಲ್ಲಿ ಹೇಳೋದಾದ್ರೆ ಸಮಸ್ಯೆನ ಮೈಮೇಲೆ ಎಳ್ಕೊಂಡಂಗೆ ಇರುತ್ತೆ. ಇದ್ರಿಂದ ಆ ತಪ್ಪಾದ ಆಸೆ ವಿರುದ್ಧ ಹೋರಾಡೋಕೆ ತುಂಬಾ ಕಷ್ಟಪಡಬೇಕಾಗುತ್ತೆ. ನಮ್ಮೆಲ್ರಿಗೂ ಒಂದಲ್ಲ ಒಂದು ತಪ್ಪಾದ ಆಸೆ ಬಂದೇ ಬರುತ್ತೆ. ಆಗ ನಾವು ತಕ್ಷಣ ಒಳ್ಳೇ ವಿಷ್ಯಗಳ ಬಗ್ಗೆ ಯೋಚಿಸಬೇಕು. ನಾವು ಹೀಗೆ ಮಾಡಿದ್ರೆ ತಪ್ಪು ಮಾಡಬೇಕನ್ನೋ ಆಸೆನೂ ಜಾಸ್ತಿ ಆಗಲ್ಲ, ಪಾಪಕ್ಕೆ ನಡಿಸೋ ಹೆಜ್ಜೆಗಳನ್ನೂ ತಗೊಳಲ್ಲ.—ಫಿಲಿ. 4:8; ಕೊಲೊ. 3:2; ಯಾಕೋ. 1:13-15.

ಪಾಪಕ್ಕೆ ನಡಿಸೋ ಸನ್ನಿವೇಶಗಳಿಂದ ನಾವು ದೂರ ಇರಬೇಕು (ಪ್ಯಾರ 13 ನೋಡಿ)


14. ಕೆಟ್ಟ ಆಸೆಗಳಿಂದ ಕಾಪಾಡ್ಕೊಳ್ಳೋಕೆ ನಾವು ಇನ್ನೇನು ಮಾಡಬೇಕು?

14 ಕೆಟ್ಟ ಆಸೆಗಳಿಂದ ಕಾಪಾಡ್ಕೊಳ್ಳೋಕೆ ನಾವು ಇನ್ನೇನು ಮಾಡಬೇಕು? ಯೆಹೋವನ ನಿಯಮಗಳನ್ನ ಪಾಲಿಸೋದ್ರಿಂದ ನಮಗೆ ಯಾವಾಗ್ಲೂ ಪ್ರಯೋಜನ ಆಗುತ್ತೆ ಅನ್ನೋ ಬಲವಾದ ನಂಬಿಕೆ ಇಡಬೇಕು. ಕೆಲವೊಮ್ಮೆ ನಮ್ಮ ಯೋಚ್ನೆಗಳು, ಆಸೆಗಳು ಯೆಹೋವ ಇಷ್ಟಪಡೋ ತರ ಇರಲಿಕ್ಕಿಲ್ಲ. ಆದ್ರೂ ಆತನನ್ನ ಮೆಚ್ಚಿಸೋಕೆ ನಮ್ಮಿಂದಾದ ಎಲ್ಲಾ ಪ್ರಯತ್ನ ಮಾಡುವಾಗ ಖುಷಿಯಾಗಿ ನೆಮ್ಮದಿಯಿಂದ ಇರ್ತೀವಿ.

15. ಸರಿಯಾದ ಆಸೆ ಬೆಳೆಸ್ಕೊಂಡ್ರೆ ಏನು ಪ್ರಯೋಜನ?

15 ನಾವು ಸರಿಯಾದ ಆಸೆಯನ್ನ ಬೆಳೆಸ್ಕೊಬೇಕು. ‘ಕೆಟ್ಟದ್ದನ್ನ ದ್ವೇಷಿಸಿ, ಒಳ್ಳೇದನ್ನ ಪ್ರೀತಿಸೋಕೆ’ ಕಲಿತ್ರೆ ನಾವು ಸರಿಯಾಗಿರೋದನ್ನೇ ಮಾಡಬೇಕು ಅಂತ ದೃಢತೀರ್ಮಾನ ಮಾಡ್ತೀವಿ ಮತ್ತು ಪಾಪಕ್ಕೆ ನಡಿಸೋ ಸನ್ನಿವೇಶಗಳಿಂದ ದೂರ ಇರ್ತೀವಿ. (ಆಮೋ. 5:15) ನಮ್ಮಲ್ಲಿ ಸರಿಯಾದ ಆಸೆ ಇದ್ರೆ ಇದ್ದಕ್ಕಿದ್ದ ಹಾಗೆ ತಪ್ಪು ಮಾಡೋ ಸನ್ನಿವೇಶ ಬಂದ್ರೂ ನಾವು ಅದಕ್ಕೆ ಬಲಿಯಾಗಲ್ಲ.

16. ಸರಿಯಾದ ಆಸೆ ಬೆಳೆಸ್ಕೊಳ್ಳೋಕೆ ನಾವೇನು ಮಾಡಬೇಕು? (ಚಿತ್ರಗಳನ್ನ ನೋಡಿ.)

16 ಸರಿಯಾದ ಆಸೆ ಬೆಳೆಸ್ಕೊಳ್ಳೋಕೆ ನಾವೇನು ಮಾಡಬೇಕು? ಯೆಹೋವನ ಜೊತೆಗಿರೋ ಸ್ನೇಹವನ್ನ ಗಟ್ಟಿ ಮಾಡ್ಕೊಳ್ಳೋಕೆ ಸಹಾಯ ಮಾಡೋ ಕೆಲಸಗಳಲ್ಲಿ ಬಿಜ಼ಿ ಆಗಿರಬೇಕು. ಅಂದ್ರೆ ಯಾವಾಗ್ಲೂ ಕೂಟಗಳಿಗೆ ಹೋಗ್ತಾ ಇದ್ರೆ, ಸಿಹಿಸುದ್ದಿ ಸಾರುತ್ತಾ ಇದ್ರೆ ತಪ್ಪಾದ ಆಸೆಗಳು ನಮ್ಮಲ್ಲಿ ಬರಲ್ಲ. ಬದ್ಲಿಗೆ ಯೆಹೋವನನ್ನ ಖುಷಿಪಡಿಸಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. (ಮತ್ತಾ. 28:19, 20; ಇಬ್ರಿ. 10:24, 25) ನಾವು ದೇವರ ವಾಕ್ಯವನ್ನ ಓದಿ ಅಧ್ಯಯನ ಮಾಡಿ ಅದ್ರ ಬಗ್ಗೆ ಚೆನ್ನಾಗಿ ಯೋಚಿಸಿದ್ರೆ ಕೆಟ್ಟದ್ದನ್ನ ದ್ವೇಷಿಸ್ತೀವಿ ಮತ್ತು ಒಳ್ಳೇದನ್ನ ಪ್ರೀತಿಸ್ತೀವಿ. (ಯೆಹೋ. 1:8; ಕೀರ್ತ. 1:2, 3; 119:97, 101) ಯೇಸು ತನ್ನ ಶಿಷ್ಯರಿಗೆ “ನೀವು ಪಾಪ ಮಾಡದೆ ಇರಬೇಕಂದ್ರೆ ಎಚ್ಚರವಾಗಿದ್ದು ಪ್ರಾರ್ಥನೆ ಮಾಡ್ತಾ ಇರಬೇಕು” ಅಂತ ಹೇಳಿದನು. (ಮತ್ತಾ. 26:41) ಹಾಗಾಗಿ ನಾವು ನಮ್ಮ ಪ್ರೀತಿಯ ಅಪ್ಪನಾದ ಯೆಹೋವನ ಜೊತೆ ಮಾತಾಡೋಕೆ ಸಮಯ ಮಾಡ್ಕೊಬೇಕು. ಆಗ ನಾವು, ಯೆಹೋವ ನಮಗೆ ಸಹಾಯ ಮಾಡೋಕೆ ಬಿಟ್ಟು ಕೊಡ್ತೀವಿ ಮತ್ತು ಆತನನ್ನ ಮೆಚ್ಚಿಸಬೇಕು ಅನ್ನೋ ಆಸೆನೂ ನಮಗೆ ಜಾಸ್ತಿ ಆಗುತ್ತೆ.—ಯಾಕೋ. 4:8.

ಯೆಹೋವನಿಗೆ ಹತ್ರ ಆಗೋ ಕೆಲಸಗಳನ್ನ ಮಾಡ್ತಾ ಇದ್ರೆ ಕೆಟ್ಟ ಆಸೆಗಳಿಂದ ದೂರ ಇರೋಕೆ ಆಗುತ್ತೆ (ಪ್ಯಾರ 16 ನೋಡಿ) c


ಯಾವಾಗ್ಲೂ ಎಚ್ಚರವಾಗಿರೋಕೆ ನಾವೇನು ಮಾಡಬೇಕು?

17. ಯಾವ ಬಲಹೀನತೆಯನ್ನ ಜಯಿಸೋಕೆ ಪೇತ್ರನಿಗೆ ಕಷ್ಟ ಆಯ್ತು?

17 ಕೆಲವೊಂದು ಬಲಹೀನತೆಗಳನ್ನ ನಾವು ಪೂರ್ತಿಯಾಗಿ ಜಯಿಸಬಹುದು. ಆದ್ರೆ ಇನ್ನೂ ಕೆಲವೊಂದು ಬಲಹೀನತೆಗಳನ್ನ ಜಯಿಸೋದು ಅಷ್ಟು ಸುಲಭ ಅಲ್ಲ. ಅಪೊಸ್ತಲ ಪೇತ್ರನ ಬಗ್ಗೆ ನೋಡಿ. ಅವನಿಗೆ ಮನುಷ್ಯರ ಭಯ ಇದ್ದಿದ್ರಿಂದ ಯೇಸು ತನಗೆ ಗೊತ್ತೇ ಇಲ್ಲ ಅಂತ ಮೂರು ಸಲ ಹೇಳಿದ. (ಮತ್ತಾ. 26:69-75) ಆದ್ರೆ ಸ್ವಲ್ಪ ಸಮಯ ಆದ್ಮೇಲೆ ಅವನು ಮನುಷ್ಯರ ಭಯದಿಂದ ಹೊರಗೆ ಬಂದ ಹಾಗೆ ಕಾಣಿಸ್ತು. ಯಾಕಂದ್ರೆ ಅವನು ಹಿರೀಸಭೆ ಮುಂದೆ ಧೈರ್ಯವಾಗಿ ಸಾಕ್ಷಿ ಕೊಟ್ಟ. (ಅ. ಕಾ. 5:27-29) ಹಾಗಿದ್ರೂ ಕೆಲವು ವರ್ಷಗಳು ಆದ್ಮೇಲೆ “ಸುನ್ನತಿ ಆದವ್ರಿಗೆ ಅವನು ಹೆದರಿ” ಬೇರೆ ಜನಾಂಗದವ್ರ ಜೊತೆ ಊಟ ಮಾಡೋದನ್ನ ಬಿಟ್ಟುಬಿಟ್ಟ. (ಗಲಾ. 2:11, 12) ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಪೇತ್ರನಿಗೆ ಆಗ್ಲೂ ಮನುಷ್ಯರ ಭಯ ಇತ್ತು, ಅದು ಪೂರ್ತಿಯಾಗಿ ಹೋಗಿರಲಿಲ್ಲ.

18. ನಮ್ಮ ಕೆಲವು ಬಲಹೀನತೆಗಳ ಬಗ್ಗೆ ನಮಗೆ ಏನು ಅನಿಸಬಹುದು?

18 ನಮಗೂ ಪೇತ್ರನ ತರಾನೇ ಆಗಬಹುದು. ಕೆಲವೊಂದು ಬಲಹೀನತೆಗಳನ್ನ ಜಯಿಸಿದ್ದೀವಿ ಅಂತ ನಾವು ಅಂದ್ಕೊಂಡ್ರೂ ಅದು ಮತ್ತೆ ನಮ್ಮಲ್ಲಿ ಕಾಣಿಸ್ಕೊಬಹುದು. ಒಬ್ಬ ಸಹೋದರನ ಉದಾಹರಣೆ ನೋಡಿ. “ಹತ್ತು ವರ್ಷಗಳಿಂದ ನಾನು ಅಶ್ಲೀಲ ಚಿತ್ರ ನೋಡೋ ಚಟ ಬಿಟ್ಟು ಬಿಟ್ಟಿದ್ದೆ. ಆ ಬಲಹೀನತೆಯನ್ನ ನಾನು ಜಯಿಸಿದ್ದೀನಿ ಅಂತ ಅಂದ್ಕೊಂಡೆ. ಆದ್ರೆ ಅದು ನನ್ನ ಮೇಲೆ ಆಕ್ರಮಣ ಮಾಡೋಕೆ ಹೊಂಚು ಹಾಕೊಂಡು ಕೂತಿರೋ ಕ್ರೂರ ಪ್ರಾಣಿ ತರ ಇತ್ತು” ಅಂತ ಅವರು ಹೇಳ್ತಾರೆ. ಆದ್ರೆ ಆ ಸಹೋದರ ತಮ್ಮ ಪ್ರಯತ್ನ ಬಿಡ್ಲಿಲ್ಲ. ಈ ಕೆಟ್ಟ ಲೋಕದಲ್ಲಿ ಜೀವಿಸುವಷ್ಟು ಕಾಲ ಪ್ರತಿದಿನ ಆ ಕೆಟ್ಟ ಚಟದ ವಿರುದ್ಧ ಹೋರಾಡ್ತಾ ಇರಬೇಕು ಅಂತ ಅವರು ಅರ್ಥ ಮಾಡ್ಕೊಂಡ್ರು. ಅಷ್ಟೇ ಅಲ್ಲ ಈ ಬಲಹೀನತೆಯಿಂದ ದೂರ ಇರೋಕೆ ತಮ್ಮ ಹೆಂಡತಿ ಮತ್ತು ಹಿರಿಯರ ಸಹಾಯ ಪಡ್ಕೊತಿದ್ದಾರೆ.

19. ನಿಮ್ಮಲ್ಲಿ ಇನ್ನೂ ಕೆಲವು ಬಲಹೀನತೆಗಳಿದ್ರೆ ನೀವೇನು ಮಾಡಬೇಕು?

19 ನಮ್ಮಲ್ಲಿ ಇನ್ನೂ ಉಳ್ಕೊಂಡಿರೋ ಬಲಹೀನತೆಯಿಂದಾಗಿ ತಪ್ಪು ಮಾಡದೇ ಇರೋಕೆ ಏನು ಮಾಡಬೇಕು? ‘ಎಚ್ಚರವಾಗಿರಿ’ ಅನ್ನೋ ಯೇಸು ಕೊಟ್ಟ ಸಲಹೆಯನ್ನ ಪಾಲಿಸಬೇಕು. ತಪ್ಪು ಮಾಡಲ್ಲ ಅಂತ ಅನಿಸಿದ್ರೂ ಕೆಟ್ಟ ಆಸೆಗಳನ್ನ ಹುಟ್ಟಿಸೋ ಸನ್ನಿವೇಶಗಳಿಂದ ದೂರ ಇರಿ. (1 ಕೊರಿಂ. 10:12) ನಿಮಗೆ ಬಲಹೀನತೆಗಳನ್ನ ಜಯಿಸೋಕೆ ಈಗಾಗ್ಲೇ ಸಹಾಯ ಮಾಡಿದ ವಿಷ್ಯಗಳನ್ನೇ ಮಾಡ್ತಾ ಇರಿ. ಆಗ ಜ್ಞಾನೋಕ್ತಿ 28:14ರಲ್ಲಿರೋ ಮಾತು ನಿಮ್ಮ ಜೀವನದಲ್ಲಿ ನಿಜ ಆಗುತ್ತೆ. ಅಲ್ಲಿ “ಎಚ್ಚರವಾಗಿ ಇರುವವನು ಯಾವಾಗ್ಲೂ ಸಂತೋಷವಾಗಿ ಇರ್ತಾನೆ” ಅಂತ ಹೇಳುತ್ತೆ.—2 ಪೇತ್ರ 3:14

ಯಾವಾಗ್ಲೂ ಎಚ್ಟರವಾಗಿದ್ರೆ ಏನು ಪ್ರಯೋಜನ ಸಿಗುತ್ತೆ?

20-21. (ಎ) ನಾವು ಯಾವಾಗ್ಲೂ ಎಚ್ಚರವಾಗಿದ್ರೆ ಏನು ಪ್ರಯೋಜನ ಸಿಗುತ್ತೆ? (ಬಿ) ನಾವು ನಮ್ಮ ಪ್ರಯತ್ನ ಮಾಡಿದ್ರೆ ಯೆಹೋವ ಏನು ಮಾಡ್ತಾನೆ? (2 ಕೊರಿಂಥ 4:7)

20 ತಪ್ಪು ಮಾಡದೇ ಇರೋಕೆ ನಾವು ಯಾವಾಗ್ಲೂ ಎಚ್ಚರವಾಗಿ ಇರಬೇಕು. ಅದಕ್ಕೆ ನಾವು ಹಾಕೋ ಪ್ರಯತ್ನ ವ್ಯರ್ಥ ಆಗೋದೇ ಇಲ್ಲ. ಪಾಪ ಮಾಡಿದಾಗ ಸಿಗೋ ಸುಖ “ಸ್ವಲ್ಪ” ಸಮಯ ಮಾತ್ರ ಇರುತ್ತೆ. ಆದ್ರೆ ಯೆಹೋವನ ಮಾತು ಕೇಳಿದ್ರೆ ನಾವು ಯಾವಾಗ್ಲೂ ಖುಷಿಯಾಗಿ ಇರ್ತೀವಿ. (ಇಬ್ರಿ. 11:25; ಕೀರ್ತ. 19:8) ಯಾಕಂದ್ರೆ ನಾವು ಯೆಹೋವನ ಇಷ್ಟದ ಪ್ರಕಾರ ಜೀವಿಸೋ ರೀತಿಯಲ್ಲೇ ಆತನು ನಮ್ಮನ್ನ ಸೃಷ್ಟಿ ಮಾಡಿದ್ದಾನೆ. (ಆದಿ. 1:27) ಆತನ ಮಾತು ಕೇಳಿದ್ರೆ ನಮಗೆ ಒಳ್ಳೇ ಮನಸ್ಸಾಕ್ಷಿನೂ ಇರುತ್ತೆ, ಶಾಶ್ವತವಾಗಿ ಜೀವಿಸೋ ಅವಕಾಶನೂ ಸಿಗುತ್ತೆ.—1 ತಿಮೊ. 6:12; 2 ತಿಮೊ. 1:3; ಯೂದ 20, 21.

21 ನಮ್ಮ “ದೇಹಕ್ಕೆ ಶಕ್ತಿ ಇಲ್ಲ” ನಿಜ. ಹಾಗಂತ ನಮ್ಮ ಬಲಹೀನತೆಗಳನ್ನ ಜಯಿಸೋಕೆ ಆಗೋದೇ ಇಲ್ಲ ಅಂತ ಹೇಳೋಕ್ಕಾಗಲ್ಲ. ಯಾಕಂದ್ರೆ ನಮಗೆ ಸಹಾಯ ಮಾಡೋಕೆ ಯೆಹೋವ ಕಾಯ್ತಾ ಇದ್ದಾನೆ. (2 ಕೊರಿಂಥ 4:7 ಓದಿ.) ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿನ ಯೆಹೋವ ಕೊಡ್ತಾನೆ. ಆದ್ರೆ ಪ್ರತಿದಿನ ನಾವು ತಪ್ಪಾದ ಆಸೆ ವಿರುದ್ಧ ಹೋರಾಡೋಕೆ ನಮ್ಮ ಶಕ್ತಿಯನ್ನ ಬಳಸಬೇಕು. ನಾವು ನಮ್ಮ ಪ್ರಯತ್ನ ಮಾಡಿದ್ರೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಅಂದ್ರೆ ನಮ್ಮ ಪ್ರಾರ್ಥನೆಗೆ ಯೆಹೋವ ಉತ್ರನೂ ಕೊಡ್ತಾನೆ ಮತ್ತು ನಮಗೆ ಬೇಕಾದ ಶಕ್ತಿನೂ ಕೊಡ್ತಾನೆ. (1 ಕೊರಿಂ. 10:13) ಹೀಗೆ ನಾವು ಯೆಹೋವನ ಸಹಾಯ ಪಡ್ಕೊಂಡ್ರೆ ಯಾವಾಗ್ಲೂ ಎಚ್ಚರವಾಗಿದ್ದು ತಪ್ಪಾದ ಆಸೆಗಳನ್ನ ಜಯಿಸೋಕೆ ಆಗುತ್ತೆ.

ಗೀತೆ 67 ಯೆಹೋವನಿಗೆ ಪ್ರತಿ ದಿನವೂ ಪ್ರಾರ್ಥಿಸಿರಿ

a ಪದ ವಿವರಣೆ: ಮತ್ತಾಯ 26:41ರಲ್ಲಿ ಯೇಸು “ಮನಸ್ಸಿದೆ” ಅಂತ ಹೇಳಿರೋದು ಸರಿಯಾಗಿರೋದನ್ನ ಮಾಡೋಕೆ ನಮಗಿರೋ ಆಸೆಯನ್ನ ಸೂಚಿಸುತ್ತೆ. “ದೇಹಕ್ಕೆ” ಅಂತ ಹೇಳಿರೋದು ನಾವು ಅಪರಿಪೂರ್ಣರಾಗಿರೋದ್ರಿಂದ ಪಾಪಿಗಳಾಗಿರೋದ್ರಿಂದ ನಾವು ಹೆಚ್ಚಾಗಿ ತಪ್ಪಾಗಿ ಯೋಚಿಸ್ತೀವಿ, ನಡ್ಕೊಳ್ತೀವಿ ಅನ್ನೋದನ್ನ ಸೂಚಿಸುತ್ತೆ. ಹಾಗಾಗಿ ಸರಿಯಾಗಿರೋದನ್ನೇ ಮಾಡೋ ಆಸೆ ನಮಗಿದ್ರೂ ಹುಷಾರಾಗಿಲ್ಲ ಅಂದ್ರೆ ತಪ್ಪಾದ ಆಸೆಗೆ ಬಲಿಯಾಗ್ತೀವಿ ಮತ್ತು ಪಾಪ ಮಾಡಿಬಿಡ್ತೀವಿ.

c ಚಿತ್ರ ವಿವರಣೆ: ಒಬ್ಬ ಸಹೋದರ ಬೆಳಿಗ್ಗೆ ದಿನದ ವಚನ ಓದ್ತಾ ಇದ್ದಾನೆ, ಮಧ್ಯಾಹ್ನ ಊಟದ ಸಮಯದಲ್ಲಿ ಬೈಬಲ್‌ ಓದ್ತಾ ಇದ್ದಾನೆ, ಸಂಜೆ ಮಧ್ಯವಾರದ ಕೂಟಕ್ಕೆ ಹೋಗಿದ್ದಾನೆ.