ಅಧ್ಯಯನ ಲೇಖನ 27
ಗೀತೆ 137 ಕೊಡು ನಮಗೆ ಧೈರ್ಯ
ಚಾದೋಕನ ತರ ಧೈರ್ಯಶಾಲಿಗಳಾಗಿರಿ
‘ಚಾದೋಕ ಧೈರ್ಯಶಾಲಿ, ವೀರ ಸೈನಿಕನಾಗಿದ್ದ.’—1 ಪೂರ್ವ. 12:28.
ಈ ಲೇಖನದಲ್ಲಿ ಏನಿದೆ?
ಧೈರ್ಯಶಾಲಿಗಳಾಗಿರೋಕೆ ಚಾದೋಕನ ಉದಾಹರಣೆ ನಮಗೆ ಹೇಗೆ ಸಹಾಯ ಮಾಡುತ್ತೆ?
1-2. ಚಾದೋಕ ಯಾರಾಗಿದ್ದ? (1 ಪೂರ್ವಕಾಲವೃತ್ತಾಂತ 12:22, 26-28)
ಹೆಬ್ರೋನಿನ ಹತ್ರ ಇದ್ದ ಬೆಟ್ಟ ಪ್ರದೇಶದಲ್ಲಿ ಏನಾಗ್ತಿದೆ ಅಂತ ಸ್ವಲ್ಪ ಕಲ್ಪಿಸಿ. ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಮಾಡೋಕೆ ಸುಮಾರು 3,40,000 ಗಂಡಸರು ಸೇರಿ ಬಂದಿದ್ದಾರೆ. ಮೂರು ದಿನಗಳಿಂದ ಅವರು ತುಂಬ ಖುಷಿಯಾಗಿ ಒಬ್ರಿಗೊಬ್ರು ಮಾತಾಡ್ತಿದ್ದಾರೆ, ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡ್ತಿದ್ದಾರೆ. ಅವ್ರ ಆ ಸದ್ದುಗದ್ದಲ ಅಲ್ಲೆಲ್ಲ ಕೇಳಿ ಬರ್ತಿತ್ತು. (1 ಪೂರ್ವ. 12:39) ಇವ್ರೆಲ್ರ ಮಧ್ಯ ಒಬ್ಬ ವ್ಯಕ್ತಿ ಇದ್ದ. ಅವನೇ ಚಾದೋಕ. ಇಷ್ಟು ದೊಡ್ಡ ಗುಂಪಲ್ಲಿ ಜನ್ರು ಅವನನ್ನ ಗುರುತಿಸಿರಲಿಕ್ಕಿಲ್ಲ. ಆದ್ರೆ ಯೆಹೋವ ಅವನನ್ನ ಗುರುತಿಸಿದನು. ಅಷ್ಟೇ ಅಲ್ಲ ನಾವೂ ಅವನ ಬಗ್ಗೆ ತಿಳ್ಕೊಬೇಕು ಅಂತ ಆತನು ಇಷ್ಟಪಟ್ಟನು. (1 ಪೂರ್ವಕಾಲವೃತ್ತಾಂತ 12:22, 26-28 ಓದಿ.) ಹಾಗಾದ್ರೆ ಈ ಚಾದೋಕ ಯಾರು?
2 ಚಾದೋಕ ಒಬ್ಬ ಪುರೋಹಿತನಾಗಿದ್ದ. ಇವನು ಮಹಾ ಪುರೋಹಿತನಾದ ಎಬ್ಯಾತಾರನ ಜೊತೆ ಕೆಲಸ ಮಾಡ್ತಿದ್ದ. ಚಾದೋಕ ದಿವ್ಯದೃಷ್ಟಿ ಇರೋ ವ್ಯಕ್ತಿಯಾಗಿದ್ದ. ಅಂದ್ರೆ ದೇವರು ಅವನಿಗೆ ತುಂಬ ವಿವೇಕ ಕೊಟ್ಟಿದ್ದನು ಮತ್ತು ತನ್ನ ಇಷ್ಟವನ್ನ ಅರ್ಥಮಾಡ್ಕೊಳ್ಳೋ ಸಾಮರ್ಥ್ಯನೂ ಕೊಟ್ಟಿದ್ದನು. (2 ಸಮು. 15:27) ಜನ್ರು ಚಾದೋಕನ ಹತ್ರ ಬುದ್ಧಿಮಾತನ್ನ, ಸಲಹೆಗಳನ್ನ ಕೇಳ್ತಿದ್ರು. ಅಷ್ಟೇ ಅಲ್ಲ ಅವನು ತುಂಬ ಧೈರ್ಯಶಾಲಿನೂ ಆಗಿದ್ದ. ಅವನ ಧೈರ್ಯದ ಬಗ್ಗೆನೇ ನಾವು ಈ ಲೇಖನದಲ್ಲಿ ಚರ್ಚೆ ಮಾಡ್ತೀವಿ.
3. (ಎ) ನಾವ್ಯಾಕೆ ಧೈರ್ಯ ತೋರಿಸಬೇಕು? (ಬಿ) ಈ ಲೇಖನದಲ್ಲಿ ಏನು ಕಲಿತೀವಿ?
3 ಈ ಕೊನೇ ದಿನಗಳಲ್ಲಿ ಯೆಹೋವನ ಜೊತೆಗೆ ನಮಗಿರೋ ಸಂಬಂಧನ ಹಾಳು ಮಾಡೋಕೆ ಸೈತಾನ ಮುಂಚೆಗಿಂತ ಈಗ ಜಾಸ್ತಿ ಪ್ರಯತ್ನ ಮಾಡ್ತಿದ್ದಾನೆ. (1 ಪೇತ್ರ 5:8) ಯೆಹೋವ ದೇವರು ಸೈತಾನನನ್ನ ಮತ್ತು ಈ ದುಷ್ಟ ಲೋಕವನ್ನ ನಾಶಮಾಡೋ ವರೆಗೂ ಸಮಸ್ಯೆಗಳನ್ನ ಎದುರಿಸೋಕೆ ನಾವು ಧೈರ್ಯ ತೋರಿಸಬೇಕಾಗುತ್ತೆ. (ಕೀರ್ತ. 31:24) ಹಾಗಾಗಿ ಚಾದೋಕನ ತರ ಧೈರ್ಯ ತೋರಿಸೋಕೆ ಸಹಾಯ ಮಾಡೋ ಮೂರು ವಿಧಗಳ ಬಗ್ಗೆ ಕಲಿಯೋಣ.
ದೇವರ ಆಳ್ವಿಕೆಯನ್ನ ಬೆಂಬಲಿಸಿ
4. ದೇವರ ಆಳ್ವಿಕೆಯನ್ನ ಬೆಂಬಲಿಸೋಕೆ ಯೆಹೋವನ ಜನ್ರಿಗೆ ಯಾಕೆ ಧೈರ್ಯ ಬೇಕು? (ಚಿತ್ರ ನೋಡಿ.)
4 ಯೆಹೋವನ ಜನ್ರಾಗಿರೋ ನಾವು ಮನಸ್ಸಾರೆ ದೇವರ ಆಳ್ವಿಕೆಗೆ ಬೆಂಬಲ ಕೊಡ್ತೀವಿ. ಆದ್ರೆ ಇದನ್ನ ಮಾಡೋಕೆ ಧೈರ್ಯ ಬೇಕು. (ಮತ್ತಾ. 6:33) ಉದಾಹರಣೆಗೆ, ಈ ಕೆಟ್ಟ ಲೋಕದಲ್ಲಿ ಯೆಹೋವನ ನೀತಿ ನಿಯಮಗಳನ್ನ ಪಾಲಿಸ್ತಾ ಜೀವನ ಮಾಡೋಕೆ ಮತ್ತು ದೇವರ ಆಳ್ವಿಕೆಯ ಸಿಹಿಸುದ್ದಿ ಸಾರೋಕೆ ಧೈರ್ಯಬೇಕು. (1 ಥೆಸ. 2:2) ರಾಜಕೀಯದಿಂದಾಗಿ ಇವತ್ತು ಜನ್ರಲ್ಲಿ ತುಂಬ ಒಡಕು ಬಂದಿದೆ. ಹಾಗಾಗಿ ಯಾವ ಪಕ್ಷನೂ ವಹಿಸದೆ ಇರಬೇಕಂದ್ರೆ ಧೈರ್ಯ ತೋರಿಸಬೇಕಾಗುತ್ತೆ. (ಯೋಹಾ. 18:36) ರಾಜಕೀಯದಲ್ಲಿ ಅಥವಾ ಮಿಲಿಟ್ರಿಯಲ್ಲಿ ಸೇರಿಲ್ಲ ಅನ್ನೋ ಕಾರಣಕ್ಕೆ ತುಂಬ ಯೆಹೋವನ ಸಾಕ್ಷಿಗಳಿಗೆ ಹಣಕಾಸಿನ ಸಮಸ್ಯೆ ಆಗಿದೆ, ಅವ್ರನ್ನ ಹೊಡೆದಿದ್ದಾರೆ ಮತ್ತು ಜೈಲಿಗೂ ಹಾಕಿದ್ದಾರೆ.
5. ದಾವೀದನನ್ನ ಬೆಂಬಲಿಸೋಕೆ ಚಾದೋಕನಿಗೆ ಯಾಕೆ ಧೈರ್ಯ ಬೇಕಿತ್ತು?
5 ಚಾದೋಕ ಹೆಬ್ರೋನಿಗೆ ದಾವೀದನನ್ನ ರಾಜನಾಗಿ ಮಾಡೋಕೆ ಹೋಗಿದ್ದಷ್ಟೇ ಅಲ್ಲ, ಅವನು ಯುದ್ಧಕ್ಕೆ ಹೋಗೋಕೂ ರೆಡಿ ಇದ್ದ. ಅವನ ಹತ್ರ ಆಯುಧಗಳೂ ಇತ್ತು. (1 ಪೂರ್ವ. 12:38) ಇಸ್ರಾಯೇಲ್ಯರ ಶತ್ರುಗಳ ಜೊತೆ ಯುದ್ಧ ಮಾಡೋಕೆ ದಾವೀದ ಹೋದ್ರೆ ಅವನ ಜೊತೆ ಹೋಗೋಕೆ ಇವನೂ ತಯಾರಿದ್ದ. ಅವನೇನು ವೀರ ಸೈನಿಕನಾಗಿರಲಿಲ್ಲ. ಆದ್ರೂ ಅವನಿಗೆ ತುಂಬ ಧೈರ್ಯ ಇತ್ತು.
6. ಧೈರ್ಯ ತೋರಿಸೋದ್ರಲ್ಲಿ ದಾವೀದ ಹೇಗೆ ಚಾದೋಕನಿಗೆ ಒಳ್ಳೇ ಮಾದರಿಯಾಗಿದ್ದ? (ಕೀರ್ತನೆ 138:3)
6 ಪುರೋಹಿತನಾಗಿದ್ದ ಚಾದೋಕನಿಗೆ ಇಷ್ಟು ಧೈರ್ಯ ತೋರಿಸೋಕೆ ಏನು ಸಹಾಯ ಮಾಡ್ತು? ಅವನ ಸುತ್ತಮುತ್ತ ಇದ್ದವರು ತುಂಬ ಧೈರ್ಯ ತೋರಿಸಿದ್ರು. ಅವ್ರಿಂದ ಅವನು ಧೈರ್ಯ ತೋರಿಸೋಕೆ ಕಲಿತ. ಉದಾಹರಣೆಗೆ ರಾಜ ದಾವೀದ. ಅವನು ‘ಮುಂದೆ ನಿಂತು ಇಸ್ರಾಯೇಲಿನ ಎಲ್ಲ ಯುದ್ಧಗಳನ್ನ ಮಾಡ್ತಿದ್ದ.’ ಇದನ್ನ ನೋಡಿದಾಗ ಎಲ್ಲ ಇಸ್ರಾಯೇಲ್ಯರು ರಾಜನಾಗೋಕೆ ಅವನಿಗೆ ಮನಸ್ಸಾರೆ ಬೆಂಬಲ ಕೊಟ್ರು. (1 ಪೂರ್ವ. 11:1, 2) ಅಷ್ಟೇ ಅಲ್ಲ ದಾವೀದ ಶತ್ರುಗಳನ್ನ ಸೋಲಿಸೋಕೆ ಯಾವಾಗ್ಲೂ ಯೆಹೋವನ ಸಹಾಯ ಕೇಳ್ತಿದ್ದ. (ಕೀರ್ತ. 28:7; ಕೀರ್ತನೆ 138:3 ಓದಿ.) ದಾವೀದನಿಂದ ಅಷ್ಟೆ ಅಲ್ಲ, ಯೆಹೋಯಾದ, ಅವನ ಮಗನಾದ ವೀರ ಸೈನಿಕ ಬೆನಾಯ ಮತ್ತು 22 ಮಖ್ಯಸ್ಥರಿಂದಾನೂ ಚಾದೋಕ ಧೈರ್ಯ ತೋರಿಸೋಕೆ ಕಲಿತ. (1 ಪೂರ್ವ. 11:22-25; 12:26-28) ಈ ಗಂಡಸರೆಲ್ಲರೂ ದಾವೀದನೇ ರಾಜನಾಗಬೇಕು ಅಂತ ಇಷ್ಟಪಟ್ರು ಮತ್ತು ಅವನಿಗೆ ಬೆಂಬಲನೂ ಕೊಟ್ರು.
7. (ಎ) ಇವತ್ತೂ ಕೆಲವು ಸಹೋದರರು ಹೇಗೆ ಧೈರ್ಯ ತೋರಿಸಿದ್ದಾರೆ? (ಬಿ) ವಿಡಿಯೋದಲ್ಲಿ ನೋಡಿದ ಸಹೋದರ ಸಿಲು ಅವ್ರಿಂದ ನೀವೇನು ಕಲಿತ್ರಿ?
7 ಯೆಹೋವನ ಆಳ್ವಿಕೆಯನ್ನ ಬೆಂಬಲಿಸೋಕೆ ತುಂಬ ಜನ ಧೈರ್ಯ ತೋರಿಸಿದ್ದಾರೆ. ಅವ್ರ ಬಗ್ಗೆ ಯೋಚ್ನೆ ಮಾಡುವಾಗ ನಮಗೂ ಧೈರ್ಯ ಸಿಗುತ್ತೆ. ನಮ್ಮ ರಾಜನಾದ ಯೇಸು ಕ್ರಿಸ್ತನಿಗೂ ಭೂಮಿಲಿದ್ದಾಗ ರಾಜಕೀಯದಲ್ಲಿ ತಲೆ ಹಾಕೋ ಒತ್ತಡ ಬಂತು. ಆಗ ಆತನು ಅದನ್ನ ಧೈರ್ಯವಾಗಿ ಎದುರಿಸಿದ. (ಮತ್ತಾ. 4:8-11; ಯೋಹಾ. 6:14, 15) ಆತನು ಧೈರ್ಯ ತೋರಿಸೋಕೆ ಯೆಹೋವನ ಹತ್ರ ಸಹಾಯ ಕೇಳಿದನು. ಅದೇ ತರ ಇವತ್ತು ಎಷ್ಟೋ ಯುವ ಸಹೋದರರು ರಾಜಕೀಯ ವಿಷ್ಯದಲ್ಲಿ ಭಾಗವಹಿಸೋಕೆ ಮತ್ತು ಮಿಲಿಟ್ರಿಗೆ ಸೇರೋಕೆ ಒತ್ತಡ ಬಂದಾಗ ಅದನ್ನ ಧೈರ್ಯವಾಗಿ ಎದುರಿಸಿದ್ದಾರೆ. ಇಂಥ ಕೆಲವು ಸಹೋದರರ ಬಗ್ಗೆ ನೀವು jw.orgನಲ್ಲಿ ಓದಬಹುದು. a
ನಿಮ್ಮ ಸಹೋದರರಿಗೆ ಸಹಾಯ ಮಾಡಿ
8. ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ಹಿರಿಯರು ಯಾವಾಗ ಧೈರ್ಯ ತೋರಿಸಬೇಕಾಗಬಹುದು?
8 ಯೆಹೋವನ ಜನ್ರಿಗೆ ಸಹಾಯ ಮಾಡೋದಂದ್ರೆ ತುಂಬ ಇಷ್ಟ. (2 ಕೊರಿಂ. 8:4) ಆದ್ರೆ ಕೆಲವೊಂದು ಸಲ ಈ ತರ ಸಹಾಯ ಮಾಡೋಕೆ ಧೈರ್ಯ ತೋರಿಸಬೇಕಾಗುತ್ತೆ. ಉದಾಹರಣೆಗೆ, ಯಾವುದಾದ್ರೂ ಒಂದು ಯುದ್ಧ ಆದಾಗ ಅಲ್ಲಿರೋ ಹಿರಿಯರು ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡ್ತಾರೆ, ಅವ್ರನ್ನ ಸಂತೈಸ್ತಾರೆ, ಅವ್ರಿಗೆ ಬೆಂಬಲ ಕೊಡ್ತಾರೆ. ಅಷ್ಟೇ ಅಲ್ಲ ಯೆಹೋವನಿಗೆ ನಿಯತ್ತಾಗಿರೋಕೆ ಬೇಕಾದ ಎಲ್ಲ ಬೆಂಬಲ ಕೊಡ್ತಾರೆ. ಅವ್ರಿಗೆ ಊಟ, ಬಟ್ಟೆ ಮತ್ತು ಉಳ್ಕೊಳ್ಳೋಕೆ ವ್ಯವಸ್ಥೆನೂ ಮಾಡಿ ಕೊಡ್ತಾರೆ. ಅವ್ರಿಗೆ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ ಇರೋದ್ರಿಂದ ತಮ್ಮ ಜೀವವನ್ನ ಪಣಕ್ಕಿಟ್ಟು ಸಹಾಯ ಮಾಡೋಕೂ ರೆಡಿ ಇರ್ತಾರೆ. (ಯೋಹಾ. 15:12, 13) ಹೀಗೆ ಅವರು ಚಾದೋಕನ ತರ ಧೈರ್ಯ ತೋರಿಸ್ತಾರೆ.
9. ದಾವೀದ ಚಾದೋಕನಿಗೆ ಏನು ಮಾಡೋಕೆ ಹೇಳಿದ? (2 ಸಮುವೇಲ 15:27-29) (ಚಿತ್ರ ನೋಡಿ.)
9 ದಾವೀದನ ಜೀವ ಅಪಾಯದಲ್ಲಿತ್ತು. ಯಾಕಂದ್ರೆ ಅವನ ಮಗ ಅಬ್ಷಾಲೋಮ ದಾವೀದನ ಬದ್ಲು ತಾನೇ ರಾಜನಾಗಬೇಕು ಅಂತ ತೀರ್ಮಾನ ಮಾಡಿದ್ದ. (2 ಸಮು. 15:12, 13) ಹಾಗಾಗಿ ದಾವೀದ ಯೆರೂಸಲೇಮನ್ನ ಬಿಟ್ಟು ಓಡಿ ಹೋಗಬೇಕಾಯ್ತು. ಅವನು ತನ್ನ ಸೇವಕರ ಹತ್ರ “ನಮ್ಮಲ್ಲಿ ಯಾರೂ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಇಲ್ಲಿಂದ ಓಡಿ ಹೋಗೋಣ!” ಅಂತ ಹೇಳಿದ. (2 ಸಮು. 15:14) ಆದ್ರೆ ಹೋಗ್ತಿರುವಾಗ ತನ್ನ ಎಲ್ಲಾ ಸೇವಕರನ್ನ ಕರ್ಕೊಂಡು ಹೋದ್ರೆ ಅಬ್ಷಾಲೋಮನ ಸಂಚನ್ನ ತಿಳ್ಕೊಳ್ಳೋಕೆ ಆಗಲ್ಲ ಅಂತ ನೆನಸಿ ಚಾದೋಕನನ್ನ ಮತ್ತು ಕೆಲವು ಪುರೋಹಿತರನ್ನ ವಾಪಸ್ ಯೆರೂಸಲೇಮಿಗೆ ಕಳಿಸಿದ. (2 ಸಮುವೇಲ 15:27-29 ಓದಿ.) ದಾವೀದ ಅವ್ರಿಗೆ ಕೊಟ್ಟ ಕೆಲಸ ಅಷ್ಟು ಸುಲಭ ಆಗಿರಲಿಲ್ಲ. ಅದ್ರಲ್ಲಿ ಅಪಾಯ ಇತ್ತು. ಯಾಕಂದ್ರೆ ಅಬ್ಷಾಲೋಮ ಕ್ರೂರಿಯಾಗಿದ್ದ, ಸ್ವಾರ್ಥಿಯಾಗಿದ್ದ, ಅಹಂಕಾರಿಯಾಗಿದ್ದ. ಒಂದುವೇಳೆ ಅಬ್ಷಾಲೋಮನಿಗೆ ಇವರು ತಾನು ಮಾಡೋ ಸಂಚನ್ನ ಕಂಡುಹಿಡಿಯೋಕೆ ಬಂದಿದ್ದಾರೆ ಅಂತ ಗೊತ್ತಾಗಿದ್ದಿದ್ರೆ ಅವ್ರನ್ನ ಕೊಂದು ಬಿಡ್ತಿದ್ದ.
10. ಚಾದೋಕ ಮತ್ತು ಅವನ ಜೊತೆ ಇದ್ದವರು ಹೇಗೆ ದಾವೀದನ ಜೀವ ಕಾಪಾಡಿದ್ರು?
10 ದಾವೀದ ಒಂದು ಪ್ಲ್ಯಾನ್ ಮಾಡ್ತಾನೆ. ಅದಕ್ಕೆ ಚಾದೋಕನ ಮತ್ತು ತನ್ನ ಇನ್ನೊಬ್ಬ ಒಳ್ಳೇ ಸ್ನೇಹಿತನಾದ ಹೂಷೈಯ ಸಹಾಯ ಕೇಳ್ತಾನೆ. (2 ಸಮು. 15:32-37) ಆ ಪ್ಲ್ಯಾನ್ ಪ್ರಕಾರ ಹೂಷೈ ನಾಟಕ ಆಡಿ ಅಬ್ಷಾಲೋಮನ ವಿಶ್ವಾಸ ಗಳಿಸ್ತಾನೆ ಮತ್ತು ದಾವೀದನನ್ನ ಹೇಗೆ ಕೊಲ್ಲಬೇಕು ಅಂತ ಸಲಹೆ ಕೊಡ್ತಾನೆ. ಅವನು ಹೀಗೆ ಮಾಡಿದ್ರಿಂದ ದಾವೀದನಿಗೆ ಯುದ್ಧಕ್ಕೆ ತಯಾರಾಗೋಕೆ ಸಮಯ ಸಿಕ್ತು. ಆಮೇಲೆ ಹೂಷೈ ಇದ್ರ ಬಗ್ಗೆ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಹೇಳ್ತಾನೆ. (2 ಸಮು. 17:8-16) ಇವ್ರಿಬ್ರೂ ದಾವೀದನಿಗೆ ಈ ಸುದ್ದಿ ಮುಟ್ಟಿಸ್ತಾರೆ. (2 ಸಮು. 17:17) ಹೀಗೆ ಯೆಹೋವ ದೇವರ ಸಹಾಯದಿಂದ ಚಾದೋಕ ಮತ್ತು ಅವನ ಜೊತೆ ಇದ್ದ ಪುರೋಹಿತರು ದಾವೀದನ ಜೀವ ಕಾಪಾಡ್ತಾರೆ.—2 ಸಮು. 17:21, 22.
11. ಸಹೋದರ ಸಹೋದರಿಯರಿಗೆ ಸಹಾಯ ಮಾಡುವಾಗ ಚಾದೋಕನ ತರ ಹೇಗೆ ಧೈರ್ಯ ತೋರಿಸಬಹುದು?
11 ಸಹೋದರ ಸಹೋದರಿಯರು ಅಪಾಯದಲ್ಲಿದ್ದಾಗ ಅವ್ರಿಗೆ ಸಹಾಯ ಮಾಡೋಕೆ ನಾವು ಹೇಗೆ ಚಾದೋಕನ ತರ ಧೈರ್ಯ ತೋರಿಸಬಹುದು? (1) ನಿರ್ದೇಶನ ಪಾಲಿಸಿ. ಕಷ್ಟದ ಸಮಯದಲ್ಲಿ ನಾವೆಲ್ರೂ ಒಗ್ಗಟ್ಟಾಗಿ ಇರೋದು ತುಂಬ ಪ್ರಾಮುಖ್ಯ. ಹಾಗಾಗಿ ಸ್ಥಳೀಯ ಬ್ರಾಂಚ್ ಕೊಡೋ ನಿರ್ದೇಶನ ಪಾಲಿಸಿ. (ಇಬ್ರಿ. 13:17) ವಿಪತ್ತು ಬರೋ ಮುಂಚೆ ಹೇಗೆ ತಯಾರಾಗಿರಬೇಕು ಮತ್ತು ವಿಪತ್ತು ಆದ್ಮೇಲೆ ಏನೆಲ್ಲಾ ಮಾಡಬೇಕು ಅಂತ ಸಂಘಟನೆ ಕೊಡೋ ನಿರ್ದೇಶನದ ಬಗ್ಗೆ ಹಿರಿಯರು ಆಗಾಗ ನೋಡ್ತಾ ಇರಬೇಕು. (1 ಕೊರಿಂ. 14:33, 40) (2) ಧೈರ್ಯ ತೋರಿಸಿ, ಆದ್ರೆ ಹುಷಾರಾಗಿ ಇರಿ. (ಜ್ಞಾನೋ. 22:3) ಯಾವುದೇ ಒಂದು ವಿಷ್ಯ ಮಾಡೋ ಮುಂಚೆ ಚೆನ್ನಾಗಿ ಯೋಚ್ನೆ ಮಾಡಿ, ಅನಗತ್ಯವಾಗಿ ಅಪಾಯದಲ್ಲಿ ಸಿಕ್ಕಿಹಾಕೋಬೇಡಿ. (3) ಯೆಹೋವನ ಮೇಲೆ ಆತುಕೊಳ್ಳಿ. ಯೆಹೋವ ಎಲ್ರನ್ನ ತುಂಬ ಪ್ರೀತಿಸ್ತಾನೆ. ನೀವು ಮತ್ತು ಬೇರೆಲ್ಲಾ ಸಹೋದರ ಸಹೋದರಿಯರು ಚೆನ್ನಾಗಿರಬೇಕು ಅನ್ನೋದೇ ಆತನ ಆಸೆ. ಹಾಗಾಗಿ ಬೇರೆಯವ್ರಿಗೆ ಸಹಾಯ ಮಾಡುವಾಗ ನೀವು ಸುರಕ್ಷಿತವಾಗಿ ಇರೋಕೆ ಆತನು ಸಹಾಯ ಮಾಡ್ತಾನೆ.
12-13. ವಿಕ್ಟರ್ ಮತ್ತು ವಿಟಾಲೆ ಅವ್ರ ಅನುಭವದಿಂದ ನೀವೇನು ಕಲಿತ್ರಿ? (ಚಿತ್ರ ನೋಡಿ.)
12 ಹಿರಿಯರಾಗಿರೋ ಸಹೋದರ ವಿಕ್ಟರ್ ಮತ್ತು ವಿಟಾಲೆ ಅವ್ರ ಉದಾಹರಣೆ ನೋಡಿ. ಅವರು ಉಕ್ರೇನಿನಲ್ಲಿ ಯುದ್ಧ ನಡೀತಿದ್ದಾಗ ಸಹೋದರ ಸಹೋದರಿಯರಿಗೆ ಊಟ, ನೀರು ತಗೊಂಡು ಹೋಗಿ ಕೊಡ್ತಾ ಇದ್ರು. ಇದ್ರ ಬಗ್ಗೆ ವಿಕ್ಟರ್ ಏನು ಹೇಳ್ತಾರಂದ್ರೆ: “ನಾವು ಆಹಾರಕ್ಕಾಗಿ ಎಲ್ಲಾ ಕಡೆ ಹುಡುಕಾಡಿದ್ವಿ. ನಮ್ಮ ಅಕ್ಕಪಕ್ಕದಲ್ಲಿ ಗುಂಡು ಹಾರಿಸ್ತಾ ಇದ್ದ ಶಬ್ಧ ನಮಗೆ ಕೇಳಿಸ್ತಿತ್ತು. ಒಬ್ಬ ಸಹೋದರ ಆಹಾರ ಶೇಖರಿಸಿ ಇಟ್ಟಿದ್ರು, ಅದನ್ನ ನಮಗೆ ಕೊಟ್ರು. ಇದ್ರಿಂದ ತುಂಬ ಸಹೋದರ ಸಹೋದರಿಯರಿಗೆ ಸ್ವಲ್ಪ ಸಮಯಕ್ಕೆ ಬೇಕಾದ ಊಟ ಸಿಕ್ತು. ಒಂದು ಸಲ ನಾವು ಟ್ರಕ್‌ನಲ್ಲಿ ಆಹಾರ ತುಂಬಿಸ್ತಿದ್ದಾಗ ಸ್ವಲ್ಪ ದೂರದಲ್ಲೇ ಅಂದ್ರೆ ಬರೀ 20 ಮೀಟರ್ ದೂರದಲ್ಲೇ ಒಂದು ಬಾಂಬ್ ಬಂದು ಬಿತ್ತು, ಆದ್ರೆ ಸ್ಫೋಟ ಆಗ್ಲಿಲ್ಲ. ಆ ಇಡೀ ದಿನ ನಾನು ಯೆಹೋವನ ಹತ್ರ, ಸಹೋದರ ಸಹೋದರಿಯರಿಗೆ ಸಹಾಯ ಮಾಡ್ತಾ ಇರೋಕೆ ಧೈರ್ಯ ಕೊಡಪ್ಪಾ ಅಂತ ಬೇಡ್ಕೊಳ್ತಾ ಇದ್ದೆ” ಅಂತ ವಿಕ್ಟರ್ ಹೇಳ್ತಾರೆ.
13 ವಿಟಾಲೆ ಏನು ಹೇಳ್ತಾರೆ ನೋಡಿ: “ನಾವು ತುಂಬ ಧೈರ್ಯ ತೋರಿಸಬೇಕಿತ್ತು. ನಾನು ಮೊದಲನೇ ಸಲ ಸಹೋದರ ಸಹೋದರಿಯರ ಹತ್ರ ಹೋದಾಗ 12 ತಾಸು ಪ್ರಯಾಣ ಮಾಡಬೇಕಿತ್ತು. ಆ ಪ್ರಯಾಣದಲ್ಲೆಲ್ಲ ಯೆಹೋವನ ಹತ್ರ ಪ್ರಾರ್ಥನೆ ಮಾಡ್ತಾನೇ ಇದ್ದೆ” ಅಂತ ಹೇಳ್ತಾರೆ. ವಿಟಾಲೆ ಧೈರ್ಯ ತೋರಿಸಿದ್ರು ಮತ್ತು ಹುಷಾರಾಗಿನೂ ಇದ್ರು. ಅವರು ಇನ್ನೇನು ಹೇಳ್ತಾರೆ ನೋಡಿ: “ನಾನು ವಿವೇಕಕ್ಕಾಗಿ ಯೆಹೋವನ ಹತ್ರ ಬೇಡಿಕೊಳ್ತಾ ಇದ್ದೆ. ಅಪಾಯದಲ್ಲಿ ಸಿಕ್ಕಿ ಹಾಕೊಳ್ಳದೇ ಇರೋ ತರ ತೀರ್ಮಾನ ತಗೊಳ್ಳೋಕೆ ಸಹಾಯ ಮಾಡು ಅಂತನೂ ಕೇಳ್ಕೊಂಡೆ. ಅಷ್ಟೇ ಅಲ್ಲ, ಅಧಿಕಾರಿಗಳು ಪ್ರಯಾಣ ಮಾಡೋಕೆ ಅನುಮತಿ ಕೊಟ್ಟ ರಸ್ತೆಗಳಲ್ಲೇ ನಾನು ಪ್ರಯಾಣ ಮಾಡಿದೆ. ಸಹೋದರ ಸಹೋದರಿಯರು ಸಹಾಯ ಮಾಡೋಕೆ ಒಟ್ಟಿಗೆ ಕೆಲಸ ಮಾಡಿದ್ದನ್ನ ನೋಡಿದಾಗ ನನ್ನ ನಂಬಿಕೆ ಇನ್ನೂ ಗಟ್ಟಿ ಆಯ್ತು. ಅವರು ರಸ್ತೆ ಮೇಲೆ ಬಿದ್ದಿದ್ದ ವಸ್ತುಗಳನ್ನೆಲ್ಲ ತೆಗೆದು ಹಾಕಿದ್ರು. ಆಹಾರ, ಬಟ್ಟೆ ಮತ್ತು ಬೇರೆ ಪ್ರಾಮುಖ್ಯ ವಸ್ತುಗಳನ್ನ ಟ್ರಕ್‌ನಲ್ಲಿ ತುಂಬಿಸಿದ್ರು. ನಮಗೂ ಊಟ ಕೊಟ್ರು ಮತ್ತು ಉಳ್ಕೊಳ್ಳೋಕೆ ವ್ಯವಸ್ಥೆ ಮಾಡಿ ಕೊಟ್ರು.”
ಯಾವಾಗ್ಲೂ ಯೆಹೋವನಿಗೆ ನಿಯತ್ತಾಗಿರಿ
14. ನಾವು ತುಂಬ ಪ್ರೀತಿಸೋರು ಯೆಹೋವನನ್ನ ಬಿಟ್ಟು ಹೋದಾಗ ನಮಗೆ ಹೇಗೆ ಅನಿಸುತ್ತೆ?
14 ನಮ್ಮ ಕುಟುಂಬ ಸದಸ್ಯರು ಅಥವಾ ನಮ್ಮ ಆಪ್ತ ಸ್ನೇಹಿತರು ಯೆಹೋವನನ್ನ ಬಿಟ್ಟು ಹೋದಾಗ ನಮ್ಮ ಮನಸ್ಸು ನುಚ್ಚುನೂರಾಗುತ್ತೆ. (ಕೀರ್ತ. 78:40; ಜ್ಞಾನೋ. 24:10) ನಾವು ಆ ವ್ಯಕ್ತಿಯನ್ನ ಇಷ್ಟಪಡೋದ್ರಿಂದ ನಡೆದಿರೋ ವಿಷ್ಯನ ಒಪ್ಕೊಳ್ಳೋಕೆ ತುಂಬ ಕಷ್ಟ ಆಗುತ್ತೆ. ಚಾದೋಕನ ಜೀವನದಲ್ಲೂ ಇಂಥ ಸನ್ನಿವೇಶ ಬಂದಿತ್ತು. ಆಗ ಅವನು ಏನು ಮಾಡಿದ ಅಂತ ನೋಡೋಣ.
15. ಯೆಹೋವನಿಗೆ ನಿಯತ್ತಾಗಿ ಇರೋಕೆ ಚಾದೋಕ ಯಾಕೆ ಧೈರ್ಯ ತೋರಿಸಬೇಕಿತ್ತು? (1 ಅರಸು 1:5-8)
15 ದಾವೀದನ ಆಳ್ವಿಕೆಯ ಕೊನೇ ಸಮಯದಲ್ಲಿ ಏನಾಯ್ತು ನೋಡಿ. ಚಾದೋಕನ ಆಪ್ತ ಸ್ನೇಹಿತನಾಗಿದ್ದ ಎಬ್ಯಾತಾರ ಯೆಹೋವನಿಗೆ ನಿಯತ್ತಾಗಿರಲಿಲ್ಲ. ಆದ್ರೆ ಚಾದೋಕ ಯೆಹೋವನಿಗೆ ನಂಬಿಗಸ್ತನಾಗಿದ್ದ. ದಾವೀದ ಹಾಸಿಗೆ ಹಿಡಿದಿದ್ದ ಸಮಯದಲ್ಲಿ ಅವನ ಮಗನಾದ ಅದೋನೀಯ ದಾವೀದನ ಸಿಂಹಾಸನ ಕಿತ್ಕೊಳ್ಳೋಕೆ ನೋಡ್ತಾನೆ. ಆದ್ರೆ ಯೆಹೋವ ದೇವರು ಸೊಲೊಮೋನನನ್ನ ಮುಂದಿನ ರಾಜನಾಗಿ ಮಾಡೋಕೆ ಇಷ್ಟಪಡ್ತಿದ್ದಾನೆ ಅಂತ ಗೊತ್ತಿದ್ರೂ ಅದೋನೀಯ ಆ ತಪ್ಪು ಮಾಡಿದ. (1 ಪೂರ್ವ. 22:9, 10) ಈ ಸಮಯದಲ್ಲಿ ಎಬ್ಯಾತಾರ ಅದೋನೀಯನಿಗೆ ಬೆಂಬಲ ಕೊಟ್ಟ. (1 ಅರಸು 1:5-8 ಓದಿ.) ಹೀಗೆ ಮಾಡಿದ್ರಿಂದ ದಾವೀದನಿಗೆ ಅಷ್ಟೇ ಅಲ್ಲ, ಯೆಹೋವನಿಗೂ ಅವನು ನಿಯತ್ತಾಗಿ ಇರಲಿಲ್ಲ. ಇದ್ರಿಂದ ಚಾದೋಕನಿಗೆ ಎಷ್ಟು ಬೇಜಾರಾಗಿರಬೇಕಲ್ವಾ? ಎಬ್ಯಾತಾರ ಮತ್ತು ಚಾದೋಕ ಸುಮಾರು 40 ವರ್ಷ ಒಟ್ಟಿಗೆ ಪುರೋಹಿತರಾಗಿ ಸೇವೆ ಮಾಡಿದ್ರು. (2 ಸಮು. 8:17) ಅವರು “ಸತ್ಯ ದೇವರ ಮಂಜೂಷ” ನೋಡ್ಕೊಳ್ತಿದ್ರು. (2 ಸಮು. 15:29) ಅವ್ರಿಬ್ರೂ ರಾಜ ದಾವೀದನಿಗೆ ಬೆಂಬಲ ಕೊಟ್ಟಿದ್ರು ಮತ್ತು ಯೆಹೋವನಿಗಾಗಿ ತುಂಬ ಕೆಲಸಗಳನ್ನ ಮಾಡಿದ್ರು.—2 ಸಮು. 19:11-14.
16. ನಿಯತ್ತಾಗಿ ಇರೋಕೆ ಚಾದೋಕನಿಗೆ ಏನು ಸಹಾಯ ಮಾಡ್ತು?
16 ಎಬ್ಯಾತಾರ ತಪ್ಪಾದ ತೀರ್ಮಾನ ಮಾಡಿದಾಗ್ಲೂ ಚಾದೋಕ ಯೆಹೋವನಿಗೆ ನಿಯತ್ತಾಗಿದ್ದ. ದಾವೀದನಿಗೆ ಚಾದೋಕನ ಮೇಲೆ ತುಂಬ ನಂಬಿಕೆ ಇತ್ತು. ಹಾಗಾಗಿ ಅದೋನೀಯನ ಸಂಚು ದಾವೀದನಿಗೆ ಗೊತ್ತಾದಾಗ ಸೊಲೊಮೋನನನ್ನ ರಾಜನಾಗಿ ಮಾಡೋಕೆ ಅವನು ಚಾದೋಕನನ್ನ, ನಾತಾನನನ್ನ ಮತ್ತು ಬೆನಾಯನನ್ನ ನೇಮಿಸಿದ. (1 ಅರ. 1:32-34) ಯೆಹೋವನಿಗೆ ನಿಯತ್ತಾಗಿದ್ದ ಮತ್ತು ದಾವೀದನಿಗೆ ಬೆಂಬಲ ಕೊಟ್ಟ ನಾತಾನ ಮತ್ತು ಇನ್ನೂ ಕೆಲವರಿಂದ ಚಾದೋಕನಿಗೆ ಖಂಡಿತ ಬಲ ಮತ್ತು ಪ್ರೋತ್ಸಾಹ ಸಿಕ್ಕಿರುತ್ತೆ. (1 ಅರ. 1:38, 39) ಅಷ್ಟೇ ಅಲ್ಲ, ಸೊಲೊಮೋನ ರಾಜನಾದಾಗ “ಚಾದೋಕನನ್ನ ಎಬ್ಯಾತಾರನ ಸ್ಥಾನದಲ್ಲಿ ಪುರೋಹಿತನಾಗಿ ನೇಮಿಸಿದ.”—1 ಅರ. 2:35.
17. ನೀವು ಚಾದೋಕನನ್ನ ಹೇಗೆ ಅನುಕರಿಸಬಹುದು?
17 ನೀವು ಹೇಗೆ ಚಾದೋಕನನ್ನ ಅನುಕರಿಸಬಹುದು? ನಿಮಗೆ ತುಂಬ ಹತ್ರ ಆಗಿರೋ ಯಾರಾದ್ರೂ ಯೆಹೋವನನ್ನ ಬಿಟ್ಟು ಹೋಗೋಕೆ ತೀರ್ಮಾನ ಮಾಡಿದಾಗ ನೀವು ಯೆಹೋವನಿಗೆ ನಿಯತ್ತಾಗಿ ಇದ್ದೀರ ಅಂತ ತೋರಿಸಿಕೊಡಿ. (ಯೆಹೋ. 24:15) ನಿಮಗೆ ಬೇಕಾದ ಶಕ್ತಿ ಮತ್ತು ಧೈರ್ಯವನ್ನ ಯೆಹೋವ ಕೊಡ್ತಾನೆ. ಹಾಗಾಗಿ ಯಾವಾಗ್ಲೂ ಆತನ ಹತ್ರ ಪ್ರಾರ್ಥಿಸಿ ಮತ್ತು ಆತನಿಗೆ ನಿಯತ್ತಾಗಿ ಇರೋರ ಜೊತೆ ಸ್ನೇಹ ಬೆಳೆಸ್ಕೊಳ್ಳಿ. ಹೀಗೆ ನೀವು ನಿಯತ್ತಾಗಿದ್ರೆ ಯೆಹೋವ ನಿಮ್ಮನ್ನ ತುಂಬ ಅಮೂಲ್ಯವಾಗಿ ನೋಡ್ತಾನೆ ಮತ್ತು ಖಂಡಿತ ಪ್ರತಿಫಲ ಕೊಟ್ಟೇ ಕೊಡ್ತಾನೆ.—2 ಸಮು. 22:26.
18. ಮಾರ್ಕೋ ಮತ್ತು ಸೈಡ್ಸೇ ಅವ್ರ ಅನುಭವದಿಂದ ನೀವೇನು ಕಲಿತ್ರಿ?
18 ಸಹೋದರ ಮಾರ್ಕೋ ಮತ್ತು ಅವ್ರ ಹೆಂಡ್ತಿ ಸೈಡ್ಸೇ ಅವ್ರ ಅನುಭವ ನೋಡಿ. ಅವ್ರಿಗೆ ಇಬ್ರು ಹೆಣ್ಣುಮಕ್ಕಳು. ಅವರು ಯೆಹೋವನನ್ನ ಬಿಟ್ಟು ಹೋಗಿಬಿಟ್ರು. ಅದ್ರ ಬಗ್ಗೆ ಮಾರ್ಕೋ ಏನು ಹೇಳ್ತಾರಂದ್ರೆ, “ಮಕ್ಕಳು ಹುಟ್ಟಿದಾಗಿಂದ ನಾವು ಅವ್ರನ್ನ ತುಂಬ ಚೆನ್ನಾಗಿ ನೋಡಿಕೊಳ್ತೀವಿ, ಅವ್ರನ್ನ ಪ್ರೀತಿಸ್ತೀವಿ, ಅವ್ರನ್ನ ಕಾದು ಕಾಪಾಡೋಕೆ ನಾವು ಏನು ಬೇಕಾದ್ರೂ ಮಾಡ್ತೀವಿ. ಆದ್ರೆ ಅವರು ಯೆಹೋವನನ್ನ ಬಿಟ್ಟು ಹೋದಾಗ ನಮ್ಮ ಎದೆನೇ ಒಡೆದು ಹೋಗುತ್ತೆ. ಯೆಹೋವ ಯಾವಾಗ್ಲೂ ನಮ್ಮ ಜೊತೆನೇ ಇದ್ದನು. ನಾನು ಕುಗ್ಗಿ ಹೋದಾಗ ನನ್ನ ಹೆಂಡ್ತಿ ನನಗೆ ಧೈರ್ಯ ತುಂಬ್ತಿದ್ದಳು, ಅವಳು ಕುಗ್ಗಿ ಹೋದಾಗ ನಾನು ಅವಳಿಗೆ ಧೈರ್ಯ ತುಂಬ್ತಿದ್ದೆ. ಹೀಗೆ ಯೆಹೋವ ನಮಗೆ ಸಹಾಯ ಮಾಡ್ತಾನೇ ಇದ್ದನು.” ಸೈಡ್ಸೇ ಏನು ಹೇಳ್ತಾರೆ ನೋಡಿ: “ಯೆಹೋವ ನಮಗೆ ಶಕ್ತಿ ಕೊಡದೇ ಇದ್ದಿದ್ರೆ ಆ ನೋವನ್ನ ಸಹಿಸ್ಕೊಳ್ಳೋಕೆ ನಮಗೆ ಆಗ್ತಾನೇ ಇರಲಿಲ್ಲ. ನನ್ನ ಮನಸ್ಸಲ್ಲಿ ಯಾವಾಗ್ಲೂ ನಂದೇ ತಪ್ಪು ಅನ್ನೋ ಕೊರಗಿತ್ತು. ಆ ನೋವನ್ನ ನಾನು ಯೆಹೋವನ ಹತ್ರ ಹೇಳಿದೆ. ಸ್ವಲ್ಪ ಸಮಯ ಆದ್ಮೇಲೆ ತುಂಬ ವರ್ಷಗಳಿಂದ ನನ್ನನ್ನ ಭೇಟಿ ಆಗದೇ ಇದ್ದ ಒಬ್ಬ ಸಹೋದರಿ ನನ್ನ ನೋಡೋಕೆ ಬಂದ್ರು. ನನ್ನ ಹೆಗಲ ಮೇಲೆ ಕೈ ಇಟ್ಟು, ನನ್ನ ಕಣ್ಣುಗಳನ್ನೇ ನೋಡ್ತಾ ‘ನೆನಪಿಡು ಸೈಡ್ಸೇ, ಇದು ನಿನ್ನ ತಪ್ಪಲ್ಲ’ ಅಂತ ಹೇಳಿದ್ರು. ಹೀಗೆ ಯೆಹೋವ ದೇವರ ಸಹಾಯ ಪಡ್ಕೊಂಡಿದ್ರಿಂದ ನಾನು ಖುಷಿ ಕಳ್ಕೊಳ್ಳದೇ ಆತನ ಸೇವೆ ಮಾಡ್ತಾ ಇದ್ದೀನಿ.”
19. ನೀವು ಯಾವ ತೀರ್ಮಾನ ಮಾಡಿದ್ದೀರಾ?
19 ತನ್ನ ಎಲ್ಲ ಸೇವಕರು ಚಾದೋಕನ ತರ ಧೈರ್ಯ ತೋರಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. (2 ತಿಮೊ. 1:7) ನಿಮ್ಮ ಸ್ವಂತ ಶಕ್ತಿ ಮೇಲಲ್ಲ, ತನ್ನ ಮೇಲೆ ಆತ್ಕೊಬೇಕು ಅಂತ ಆತನು ಬಯಸ್ತಾನೆ. ಹಾಗಾಗಿ ಯಾವುದಾದ್ರೂ ಕಷ್ಟದ ಸನ್ನಿವೇಶ ನಿಮ್ಮ ಜೀವನದಲ್ಲಿ ಬಂದಾಗ ಧೈರ್ಯ ತೋರಿಸೋಕೆ ಯೆಹೋವನ ಹತ್ರ ಸಹಾಯ ಕೇಳಿ. ಆಗ ಆತನು ನಿಮಗೂ ಚಾದೋಕನ ತರ ಧೈರ್ಯ ತೋರಿಸೋಕೆ ಸಹಾಯ ಮಾಡೇ ಮಾಡ್ತಾನೆ.—1 ಪೇತ್ರ 5:10.
ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ
a jw.orgನಲ್ಲಿ ನಿಜ ಕ್ರೈಸ್ತರಿಗೆ ಧೈರ್ಯಬೇಕು ಯಾಕೆ?—ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು ಅನ್ನೋ ವಿಡಿಯೋ ನೋಡಿ.