ಅಧ್ಯಯನ ಲೇಖನ 27
ಹಿಂಸೆ ಎದುರಿಸಲು ಈಗಲೇ ತಯಾರಾಗಿ
“ಕ್ರಿಸ್ತ ಯೇಸುವಿನ ಸಂಬಂಧದಲ್ಲಿ ದೇವಭಕ್ತಿಯಿಂದ ಜೀವಿಸಲು ಬಯಸುವವರೆಲ್ಲರೂ ಹಿಂಸೆಗೂ ಒಳಗಾಗುವರು.”—2 ತಿಮೊ. 3:12.
ಗೀತೆ 154 ತಾಳಿಕೊಳ್ಳುತ್ತಾ ಇರೋಣ
ಕಿರುನೋಟ *
1. ಹಿಂಸೆಯನ್ನು ಎದುರಿಸಲು ನಾವು ಯಾಕೆ ತಯಾರಾಗಬೇಕು?
ತನ್ನ ಶಿಷ್ಯರಾಗಲು ಇಷ್ಟಪಡುವ ಎಲ್ಲರನ್ನು ಜನರು ದ್ವೇಷಿಸುತ್ತಾರೆ ಎಂದು ಯೇಸು ತಾನು ಸಾಯುವ ಹಿಂದಿನ ರಾತ್ರಿ ಹೇಳಿದನು. (ಯೋಹಾ. 17:14) ಅವತ್ತಿನಿಂದ ಇವತ್ತಿನ ತನಕ ಯೆಹೋವನಿಗೆ ನಂಬಿಗಸ್ತರಾಗಿರುವ ಎಲ್ಲಾ ಕ್ರೈಸ್ತರು ಸತ್ಯಾರಾಧನೆಯನ್ನು ವಿರೋಧಿಸುವ ಜನರಿಂದ ಹಿಂಸೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ. (2 ತಿಮೊ. 3:12) ಅಂತ್ಯ ತುಂಬ ಹತ್ತಿರ ಇರುವ ಈ ಸಮಯದಲ್ಲಂತೂ ನಮ್ಮ ವೈರಿಗಳಿಂದ ಇನ್ನೂ ಹೆಚ್ಚು ವಿರೋಧ ಬರುವ ಸಾಧ್ಯತೆ ಇರುತ್ತದೆ.—ಮತ್ತಾ. 24:9.
2-3. (ಎ) ನಾವು ಯಾಕೆ ಭಯಪಡಬಾರದು? (ಬಿ) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
2 ಹಿಂಸೆಯನ್ನು ಎದುರಿಸಲು ನಾವು ಈಗಲೇ ಹೇಗೆ ತಯಾರಾಗಬಹುದು? ನಮಗೆ ಈ ರೀತಿ ಹಿಂಸೆ ಬರುತ್ತೆ, ಆ ರೀತಿ ಹಿಂಸೆ ಬರುತ್ತೆ ಅಂತೆಲ್ಲ ಕಲ್ಪನೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗೆ ಕಲ್ಪನೆ ಮಾಡಿಕೊಂಡರೆ ನಾವು ಭಯ-ಚಿಂತೆಗಳಲ್ಲೇ ಮುಳುಗಿ ಹೋಗಬಹುದು. ಆ ಭಯದಿಂದಲೇ ನಾವು ಪರೀಕ್ಷೆಗಳು ಬರುವ ಮುಂಚೆನೇ ಯೆಹೋವನ ಆರಾಧನೆಯನ್ನು ಬಿಟ್ಟುಬಿಡುವ ಸಾಧ್ಯತೆ ಇದೆ ಅನ್ನುವುದನ್ನು ಮನಸ್ಸಲ್ಲಿಡಿ. (ಜ್ಞಾನೋ. 12:25; 17:22) ನಮ್ಮ “ವಿರೋಧಿಯಾಗಿರುವ ಪಿಶಾಚನು” ಭಯ ಎಂಬ ಅಸ್ತ್ರವನ್ನು ಉಪಯೋಗಿಸಿ ನಮ್ಮನ್ನು ಯೆಹೋವನಿಂದ ದೂರಮಾಡಲು ಪ್ರಯತ್ನಿಸುತ್ತಾನೆ ಎಂದು ಸಹ ಮನಸ್ಸಲ್ಲಿಡಿ. (1 ಪೇತ್ರ 5:8, 9) ಹಾಗಾದರೆ ಹಿಂಸೆಯನ್ನು ಎದುರಿಸುವುದಕ್ಕೆ ತಯಾರಾಗಲು ನಾವು ಏನು ಮಾಡಬೇಕು?
3 ಈ ಲೇಖನದಲ್ಲಿ ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ನಾವು ಹೇಗೆ ಬಲಪಡಿಸಿಕೊಳ್ಳಬಹುದು ಮತ್ತು ಈಗ ಅದು ಯಾಕೆ ತುಂಬ ಮುಖ್ಯ ಎಂದು ನೋಡಲಿದ್ದೇವೆ. ಇನ್ನೂ ಹೆಚ್ಚು ಧೈರ್ಯವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು ಮತ್ತು ವಿರೋಧಿಗಳು ನಮ್ಮನ್ನು ದ್ವೇಷಿಸುವಾಗ ನಾವೇನು ಮಾಡಬಹುದು ಎಂದು ಸಹ ತಿಳಿಯಲಿದ್ದೇವೆ.
ಯೆಹೋವನೊಟ್ಟಿಗಿನ ಸಂಬಂಧ ಬಲಪಡಿಸಿಕೊಳ್ಳೋದು ಹೇಗೆ?
4. ಇಬ್ರಿಯ 13:5, 6ರ ಪ್ರಕಾರ ನಮಗೆ ಯಾವ ವಿಷಯದಲ್ಲಿ ದೃಢನಂಬಿಕೆ ಇರಬೇಕು ಮತ್ತು ಯಾಕೆ?
4 ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ಆತನು ಯಾವತ್ತೂ ನಿಮ್ಮ ಕೈಬಿಡಲ್ಲ ಎಂಬ ದೃಢನಂಬಿಕೆ ನಿಮಗಿರಲಿ. (ಇಬ್ರಿಯ 13:5, 6 ಓದಿ.) ತುಂಬ ವರ್ಷಗಳ ಹಿಂದೆ ಬಂದ ಒಂದು ಕಾವಲಿನಬುರುಜುವಿನಲ್ಲಿ ಹೀಗಿತ್ತು: “ದೇವರನ್ನು ಯಾರು ಚೆನ್ನಾಗಿ ತಿಳಿದಿರುತ್ತಾರೋ ಅವರು ಪರೀಕ್ಷೆ ಬಂದಾಗಲೂ ದೇವರ ಮೇಲೆ ನಂಬಿಕೆ ಇಟ್ಟಿರುತ್ತಾರೆ.” ಇದು ನೂರಕ್ಕೆ ನೂರು ಸತ್ಯ! ನಾವು ಯೆಹೋವನನ್ನು ಪ್ರೀತಿಸಿದರೆ, ಸಂಪೂರ್ಣವಾಗಿ ನಂಬಿದರೆ ಮತ್ತು ನಮ್ಮ ಮೇಲಿರುವ ಆತನ ಪ್ರೀತಿ ಬಗ್ಗೆ ಅನುಮಾನಪಡದೇ ಇದ್ದರೆ ಹಿಂಸೆಯನ್ನು ತಾಳಿಕೊಳ್ಳುತ್ತೇವೆ.—ಮತ್ತಾ. 22:36-38; ಯಾಕೋ. 5:11.
5. ಯೆಹೋವನ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ನೀವು ಏನು ಮಾಡಬೇಕು?
5 ಯೆಹೋವನಿಗೆ ಇನ್ನೂ ಆಪ್ತರಾಗಬೇಕೆನ್ನುವ ಉದ್ದೇಶ ಇಟ್ಟುಕೊಂಡು ಪ್ರತಿದಿನ ಬೈಬಲ್ ಓದಿ. (ಯಾಕೋ. 4:8) ಬೈಬಲನ್ನು ಓದುತ್ತಾ ಇರುವಾಗ ಯೆಹೋವನ ಕೋಮಲವಾದ ಗುಣಗಳ ಕಡೆಗೆ ಗಮನಕೊಡಿ. ಆತನು ಹೇಳಿರುವ, ಮಾಡಿರುವ ವಿಷಯಗಳನ್ನು ಓದುವಾಗ ಆತನಿಗೆ ಎಷ್ಟು ಪ್ರೀತಿ-ಮಮತೆ ಇದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (ವಿಮೋ. 34:6) ಕೆಲವರಿಗೆ ಬೇರೆಯವರಿಂದ ಪ್ರೀತಿ ಸಿಗದಿರುವ ಕಾರಣ ದೇವರು ತಮ್ಮನ್ನು ಪ್ರೀತಿಸುತ್ತಾನೆ ಅಂತ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ನಿಮಗೂ ಕಷ್ಟವಾಗುತ್ತಿದ್ದರೆ, ಯೆಹೋವನು ನಿಮಗೆ ಪ್ರತಿದಿನ ಹೇಗೆಲ್ಲ ದಯೆ-ಕನಿಕರ ತೋರಿಸಿದ್ದಾನೆ ಅನ್ನುವುದನ್ನು ಪಟ್ಟಿಮಾಡಿ. (ಕೀರ್ತ. 78:38, 39; ರೋಮ. 8:32) ದೇವರು ನಿಮಗೆ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ ಎಂದು ಯೋಚಿಸುವಾಗ ಮತ್ತು ದೇವರ ವಾಕ್ಯವನ್ನು ಓದಿ ಧ್ಯಾನಿಸುವಾಗ ಪಟ್ಟಿಮಾಡಲು ಅನೇಕ ವಿಷಯಗಳು ಖಂಡಿತ ಸಿಗುತ್ತವೆ. ಯೆಹೋವನು ನಿಮಗಾಗಿ ಮಾಡುತ್ತಿರುವ ಎಲ್ಲಾ ವಿಷಯಗಳ ಕಡೆಗೆ ನೀವು ಕೃತಜ್ಞತೆ ಬೆಳೆಸಿಕೊಂಡಾಗ ಆತನೊಟ್ಟಿಗಿನ ನಿಮ್ಮ ಸಂಬಂಧ ಬಲವಾಗುತ್ತಾ ಹೋಗುತ್ತದೆ.—ಕೀರ್ತ. 116:1, 2.
6. ಕೀರ್ತನೆ 94:17-19ರ ಪ್ರಕಾರ ನೀವು ಮನಬಿಚ್ಚಿ ಪ್ರಾರ್ಥಿಸಿದರೆ ಯಾವ ಪ್ರಯೋಜನ ಸಿಗುತ್ತೆ?
6 ಪ್ರತಿದಿನ ಪ್ರಾರ್ಥನೆ ಮಾಡಿ. ಒಬ್ಬ ಪುಟ್ಟ ಹುಡುಗನನ್ನು ಅವನ ತಂದೆ ಪ್ರೀತಿಯಿಂದ ಅಪ್ಪಿಕೊಂಡಿರುವುದನ್ನು ಕಲ್ಪಿಸಿಕೊಳ್ಳಿ. ಆ ಹುಡುಗನಿಗೆ ಎಷ್ಟು ಸುರಕ್ಷಿತ ಭಾವನೆ ಇರುತ್ತದೆಂದರೆ ಅವನು ಆ ಇಡೀ ದಿನದಲ್ಲಿ ತನಗಾದ ಒಳ್ಳೇದನ್ನು, ಕೆಟ್ಟದನ್ನು ಯಾವುದೇ ಅಂಜಿಕೆ ಇಲ್ಲದೆ ತನ್ನ ತಂದೆ ಹತ್ತಿರ ಹೇಳಿಕೊಳ್ಳುತ್ತಾನೆ. ನೀವೂ ಪ್ರತಿದಿನ ಯೆಹೋವನಿಗೆ ಮನಬಿಚ್ಚಿ ಪ್ರಾರ್ಥಿಸಿದರೆ ಆತನ ಆಪ್ತತೆಯಲ್ಲಿ ಆನಂದಿಸಬಹುದು. (ಕೀರ್ತನೆ 94:17-19 ಓದಿ.) ನೀವು ಯೆಹೋವನಿಗೆ ಪ್ರಾರ್ಥಿಸುವಾಗ ನಿಮ್ಮ ಮನಸ್ಸಲ್ಲಿ ಇರುವುದನ್ನೆಲ್ಲ ‘ನೀರನ್ನೋ ಎಂಬಂತೆ ಹೊಯ್ದುಬಿಡಿ’ ಅಂದರೆ ಎಲ್ಲವನ್ನೂ ಹೇಳಿಕೊಳ್ಳಿ. ನಿಮಗಾಗುವ ಭಯ, ಚಿಂತೆಗಳನ್ನೂ ಹೇಳಿಕೊಳ್ಳಿ. (ಪ್ರಲಾ. 2:19) ಇದರಿಂದ ಏನು ಪ್ರಯೋಜನ ಆಗುತ್ತೆ? “ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿ” ನಿಮಗೆ ಸಿಗುತ್ತೆ. (ಫಿಲಿ. 4:6, 7) ನೀವು ಈ ರೀತಿಯಲ್ಲಿ ಪ್ರಾರ್ಥಿಸುವಾಗ ಯೆಹೋವನು ನಿಮಗೆ ಇನ್ನೂ ಆಪ್ತನಾಗುತ್ತಾನೆ.—ರೋಮ. 8:38, 39.
7. ದೇವರು ತನ್ನ ರಾಜ್ಯದ ಬಗ್ಗೆ ಕೊಟ್ಟ ಮಾತೆಲ್ಲಾ ಖಂಡಿತ ನೆರವೇರುತ್ತೆ ಎಂದು ನೀವು ಯಾಕೆ ದೃಢವಾಗಿ ನಂಬಬೇಕು?
7 ದೇವರು ತನ್ನ ರಾಜ್ಯದ ಬಗ್ಗೆ ಕೊಟ್ಟ ಮಾತೆಲ್ಲಾ ಖಂಡಿತ ನೆರವೇರುತ್ತೆ ಎಂದು ನಂಬಿ. (ಅರ. 23:19) ದೇವರ ರಾಜ್ಯದ ಆಶೀರ್ವಾದಗಳ ಮೇಲೆ ನಿಮ್ಮ ನಂಬಿಕೆ ಕಡಿಮೆಯಾಗುತ್ತಾ ಹೋದರೆ ಸೈತಾನನಿಗೆ ಮತ್ತವನ ನಿಯಂತ್ರಣದಲ್ಲಿ ಇರುವವರಿಗೆ ನಿಮ್ಮನ್ನು ಹೆದರಿಸಲು ತುಂಬ ಸುಲಭ ಆಗುತ್ತೆ. (ಜ್ಞಾನೋ. 24:10; ಇಬ್ರಿ. 2:15) ದೇವರ ರಾಜ್ಯದ ಬಗ್ಗೆ ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಈಗ ನೀವೇನು ಮಾಡಬೇಕು? ತನ್ನ ರಾಜ್ಯದ ಬಗ್ಗೆ ದೇವರು ಯಾವೆಲ್ಲಾ ಮಾತು ಕೊಟ್ಟಿದ್ದಾನೆ ಮತ್ತು ಅವೆಲ್ಲ ನೆರವೇರುತ್ತೆ ಅಂತ ಹೇಗೆ ಹೇಳಬಹುದು ಅನ್ನುವುದನ್ನು ಚೆನ್ನಾಗಿ ಅಧ್ಯಯನ ಮಾಡಿ ತಿಳುಕೊಳ್ಳಿ. ಹೀಗೆ ಮಾಡಿದರೆ ಸಹಾಯ ಆಗುತ್ತಾ? ಸಹೋದರ ಸ್ಟ್ಯಾನ್ಲಿ ಜೋನ್ಸ್‌ರ ಉದಾಹರಣೆ ನೋಡಿ. * ಅವರು ತಮ್ಮ ನಂಬಿಕೆಗಾಗಿ ಏಳು ವರ್ಷ ಜೈಲಿನಲ್ಲಿದ್ದರು. ಕಷ್ಟಗಳನ್ನು ತಾಳಲು ಅವರಿಗೆ ಯಾವುದು ಸಹಾಯ ಮಾಡಿತು? “ದೇವರ ರಾಜ್ಯದ ಬಗ್ಗೆ ಮತ್ತು ಅದು ಏನನ್ನು ಸಾಧಿಸಲಿಕ್ಕಿದೆಯೋ ಅದರ ಬಗ್ಗೆ ನಾನು ಚೆನ್ನಾಗಿ ತಿಳುಕೊಂಡಿದ್ದೆ. ಅದರಿಂದ ನನ್ನ ನಂಬಿಕೆ ಬಲವಾಗಿತ್ತು, ಅದು ನಿಜವಾಗಲೂ ಬರುತ್ತಾ ಅನ್ನೋ ಸಂಶಯ ನನಗೆ ಒಂದುಕ್ಷಣಾನೂ ಬಂದಿಲ್ಲ. ಹಾಗಾಗಿ ನನ್ನನ್ನು ಯೆಹೋವನಿಂದ ದೂರಮಾಡಲು ಯಾರಿಗೂ ಸಾಧ್ಯವಾಗಿಲ್ಲ” ಎಂದು ಅವರು ಹೇಳಿದರು. ದೇವರು ಕೊಟ್ಟ ಮಾತಿನ ಮೇಲೆ ನಿಮಗೆ ಬಲವಾದ ನಂಬಿಕೆ ಇದ್ದರೆ ನೀವು ಆತನಿಗೆ ಆಪ್ತರಾಗುತ್ತೀರಿ ಮತ್ತು ನೀವೆಂದೂ ಮನುಷ್ಯರಿಗೆ ಭಯಪಟ್ಟು ಆತನ ಆರಾಧನೆಯನ್ನು ನಿಲ್ಲಿಸಲ್ಲ.—ಜ್ಞಾನೋ. 3:25, 26.
8. ಕೂಟಗಳಿಗೆ ಹಾಜರಾಗುವುದರ ಬಗ್ಗೆ ನಮಗೆ ಇರುವ ಮನೋಭಾವ ಏನನ್ನು ತೋರಿಸಿಕೊಡುತ್ತೆ? ವಿವರಿಸಿ.
8 ಕೂಟಗಳಿಗೆ ತಪ್ಪದೆ ಹಾಜರಾಗಿ. ಯೆಹೋವನಿಗೆ ಆಪ್ತರಾಗಲು ಕೂಟಗಳು ಸಹಾಯ ಮಾಡುತ್ತವೆ. ಕೂಟಗಳಿಗೆ ಹಾಜರಾಗುವುದರ ಬಗ್ಗೆ ನಮಗೆ ಇರುವ ಮನೋಭಾವ ನಾವು ಮುಂದೆ ಹಿಂಸೆಯನ್ನು ತಾಳಿಕೊಳ್ಳುತ್ತೇವಾ ಇಲ್ವಾ ಅಂತ ತೋರಿಸಿಕೊಡುತ್ತೆ. (ಇಬ್ರಿ. 10:24, 25) ಹೇಗೆ ಹೇಳಬಹುದು? ನಾವು ಈಗಲೇ ಸಣ್ಣಪುಟ್ಟ ಸಮಸ್ಯೆಗಳಿಗೂ ಕೂಟಗಳನ್ನು ತಪ್ಪಿಸುತ್ತಾ ಇದ್ದರೆ ಮುಂದೆ ಸರಕಾರ ಕೂಟಗಳಿಗೆ ಸೇರಿಬರುವುದನ್ನೇ ನಿಷೇಧಿಸಿಬಿಟ್ಟರೆ ಆಗ ಏನು ಮಾಡುತ್ತೇವೆ? ಭಯಪಟ್ಟು ಕ್ರೈಸ್ತ ಸಹವಾಸವನ್ನು ಬಿಟ್ಟುಬಿಡುತ್ತೇವೆ. ಆದರೆ ಕೂಟಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು ಅನ್ನುವ ದೃಢತೀರ್ಮಾನ ಮಾಡಿದರೆ ಮುಂದೆ ನಾವು ಒಟ್ಟಾಗಿ ಸೇರುವುದನ್ನು ವಿರೋಧಿಗಳು ನಿಲ್ಲಿಸಲು ಪ್ರಯತ್ನಿಸುವಾಗಲೂ ನಾವು ಹೆದರಲ್ಲ. ಹಾಗಾಗಿ ಈಗಿಂದಲೇ ನಾವು ಕೂಟಗಳಿಗೆ ತಪ್ಪದೆ ಹಾಜರಾಗುವ ರೂಢಿ ಬೆಳೆಸಿಕೊಳ್ಳೋಣ. ಹೀಗೆ ಮಾಡಿದರೆ ಮುಂದೆ ಯಾವುದೇ ವಿರೋಧ ಬಂದರೂ, ಸರ್ಕಾರ ನಿಷೇಧ ಹಾಕಿದರೂ ನಾವು ದೇವರಿಗೆ ವಿಧೇಯರಾಗುವುದನ್ನು ಯಾವ ಮನುಷ್ಯನಿಂದಲೂ ತಡೆಯುವುದಕ್ಕೆ ಆಗಲ್ಲ.—ಅ. ಕಾ. 5:29.
9. ಹಿಂಸೆಯನ್ನು ಎದುರಿಸಲು ಯಾಕೆ ವಚನಗಳನ್ನು ಬಾಯಿಪಾಠ ಮಾಡಬೇಕು?
9 ನಿಮಗೆ ಇಷ್ಟವಾಗಿರುವ ವಚನಗಳನ್ನು ಬಾಯಿಪಾಠ ಮಾಡಿ. (ಮತ್ತಾ. 13:52) ಬಾಯಿಪಾಠ ಮಾಡಿದ ಎಲ್ಲ ವಚನಗಳು ಮುಂದೆ ನಿಮ್ಮ ನೆನಪಿಗೆ ಬರದೇ ಇರಬಹುದು. ಆದರೆ ಯೆಹೋವನು ನಿಮಗೆ ತನ್ನ ಶಕ್ತಿಶಾಲಿ ಪವಿತ್ರಾತ್ಮ ಕೊಟ್ಟು ಆ ವಚನಗಳು ನಿಮ್ಮ ನೆನಪಿಗೆ ಬರುವಂತೆ ಮಾಡುತ್ತಾನೆ. (ಯೋಹಾ. 14:26) ಒಬ್ಬ ಸಹೋದರನ ಉದಾಹರಣೆ ನೋಡಿ. ಅವರನ್ನು ಪೂರ್ವ ಜರ್ಮನಿಯ ಜೈಲಿನಲ್ಲಿ ಬಂಧಿಸಲಾಗಿತ್ತು. ಅಲ್ಲಿ ಅವರೊಬ್ಬರನ್ನೇ ಒಂದು ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಆಗ ಅವರು ಏನು ಮಾಡಿದರು? ಅವರು ಹೇಳಿದ್ದು: “ನಾನು ಬಾಯಿಪಾಠ ಮಾಡಿದ ನೂರಾರು ವಚನಗಳನ್ನು ನೆನಪು ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು. ಹೀಗೆ ಜೈಲಲ್ಲಿ ನಾನು ಒಂಟಿಯಾಗಿ ಇದ್ದರೂ ಯೋಚಿಸುವುದಕ್ಕೆ ಬೈಬಲಿನ ಹಲವಾರು ವಿಷಯಗಳು ನನಗೆ ಸಿಕ್ಕಿದ್ವು. ನಿಜವಾಗಲೂ ಅದು ದೇವರ ಆಶೀರ್ವಾದನೇ!” ನಮ್ಮ ಆ ಸಹೋದರನಿಗೆ ಯೆಹೋವನಿಂದ ದೂರವಾಗದಿರಲು ಮತ್ತು ನಂಬಿಗಸ್ತಿಕೆಯಿಂದ ಹಿಂಸೆಯನ್ನು ತಾಳಿಕೊಳ್ಳಲು ಆ ವಚನಗಳು ಸಹಾಯ ಮಾಡಿದವು.
10. ನಾವು ಯಾಕೆ ಗೀತೆಗಳನ್ನು ಬಾಯಿಪಾಠ ಮಾಡಬೇಕು?
10 ಗೀತೆ ಪುಸ್ತಕ ಮತ್ತು ವೆಬ್‌ಸೈಟ್‌ನಲ್ಲಿರುವ ಗೀತೆಗಳನ್ನು ಬಾಯಿಪಾಠ ಮಾಡಿ, ಹಾಡುತ್ತಾ ಇರಿ. ಪೌಲ ಮತ್ತು ಸೀಲ ಫಿಲಿಪ್ಪಿಯ ಜೈಲಿನಲ್ಲಿದ್ದಾಗ ಅವರಿಗೆ ನೆನಪಿದ್ದ ಗೀತೆಗಳನ್ನು ಹಾಡಿ ದೇವರನ್ನು ಸ್ತುತಿಸಿದರು. (ಅ. ಕಾ. 16:25) ಹಿಂದಿನ ಸೋವಿಯತ್ ಒಕ್ಕೂಟದಲ್ಲಿದ್ದ ಸಹೋದರ-ಸಹೋದರಿಯರನ್ನು ಸೈಬೀರಿಯಕ್ಕೆ ಗಡೀಪಾರು ಮಾಡಿದಾಗ ಅವರು ಏನು ಮಾಡಿದರು? ಮಾರಿಯಾ ಫೆಡೂನ್ ಎಂಬ ಸಹೋದರಿ ನೆನಪಿಸಿಕೊಳ್ಳುವುದು: “ಗೀತೆಪುಸ್ತಕದಲ್ಲಿ ನಮಗೆ ಗೊತ್ತಿದ್ದ ಗೀತೆಗಳನ್ನೆಲ್ಲ ನಾವು ಹಾಡಿದ್ವಿ.” ಆ ಗೀತೆಗಳು ಅವರೆಲ್ಲರನ್ನು ಬಲಪಡಿಸಿದವು ಮತ್ತು ಅವರು ಯೆಹೋವನಿಗೆ ಇನ್ನಷ್ಟು ಆಪ್ತರಾಗಲು ಸಹಾಯ ಮಾಡಿದವು ಎಂದು ಆ ಸಹೋದರಿ ಹೇಳಿದರು. ಗೀತೆ ಪುಸ್ತಕ ಮತ್ತು ವೆಬ್‌ಸೈಟ್‌ನಲ್ಲಿರುವ ಗೀತೆಗಳಲ್ಲಿ ನಿಮಗೆ ಇಷ್ಟವಾದ ಗೀತೆಯನ್ನು ಹಾಡುವಾಗ ನಿಮಗೂ ಬಲ ಪಡಕೊಂಡ ಹಾಗೆ ಅನಿಸುವುದಿಲ್ವಾ? ಹಾಗಾದರೆ ಈಗಿಂದಲೇ ನಿಮಗಿಷ್ಟವಾದ ಗೀತೆಗಳನ್ನು ಬಾಯಿಪಾಠ ಮಾಡಿ!—“ ಕೊಡು ಧೈರ್ಯ” ಎಂಬ ಚೌಕ ನೋಡಿ.
ಇನ್ನೂ ಹೆಚ್ಚು ಧೈರ್ಯವನ್ನು ಹೇಗೆ ಬೆಳೆಸಿಕೊಳ್ಳಬಹುದು?
11-12. (ಎ) ಒಂದನೇ ಸಮುವೇಲ 17:37, 45-47ರ ಪ್ರಕಾರ ದಾವೀದನಲ್ಲಿ ತುಂಬ ಧೈರ್ಯವಿರಲು ಕಾರಣವೇನು? (ಬಿ) ದಾವೀದನ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ?
11 ಹಿಂಸೆಯನ್ನು ಎದುರಿಸಲು ಧೈರ್ಯ ಬೇಕು. ನಿಮಗೆ ಅಷ್ಟು ಧೈರ್ಯ ಇಲ್ಲ ಅಂತ ಅನಿಸಿದರೆ ಏನು ಮಾಡಬಹುದು? ಧೈರ್ಯ ಎಂಬ ಗುಣ ನಿಮ್ಮ ಗಾತ್ರ, ಶಕ್ತಿ ಅಥವಾ ಸಾಮರ್ಥ್ಯದ ಮೇಲೆ ಹೊಂದಿಕೊಂಡಿಲ್ಲ ಅನ್ನುವುದನ್ನು ನೆನಪಿಡಿ. ಉದಾಹರಣೆಗೆ, ಯುವ ದಾವೀದನನ್ನು ನೋಡಿ. ಅವನು ಗೊಲ್ಯಾತನ ವಿರುದ್ಧ ಹೋರಾಡಲು ಹೋದಾಗ ಹೇಗಿದ್ದ? ಆ ದೈತ್ಯ ಗೊಲ್ಯಾತನಿಗೆ ಹೋಲಿಸುವಾಗ ಅವನು ತೆಳ್ಳಗಿದ್ದ, ಶಕ್ತಿ ಕಡಿಮೆ ಇತ್ತು ಮತ್ತು ಒಂದು ಆಯುಧನೂ ಅವನ ಹತ್ತಿರ ಇರಲಿಲ್ಲ. ಒಂದು ಕತ್ತಿನೂ ಇರಲಿಲ್ಲ. ಆದರೂ ಅವನಲ್ಲಿ ಧೈರ್ಯಕ್ಕೇನೂ ಕಮ್ಮಿ ಇರಲಿಲ್ಲ. ದುರಹಂಕಾರಿ ದೈತ್ಯ ಗೊಲ್ಯಾತನ ವಿರುದ್ಧ ಹೋರಾಡಲು ದಾವೀದ ಧೈರ್ಯವಾಗಿ ಮುನ್ನುಗಿದ.
12 ದಾವೀದನಲ್ಲಿ ಅಷ್ಟೊಂದು ಧೈರ್ಯ ಇರಲು ಕಾರಣವೇನು? ಯೆಹೋವನು ತನ್ನ ಜೊತೆ ಇದ್ದಾನೆ ಎಂಬ ದೃಢನಂಬಿಕೆ ಅವನಿಗಿತ್ತು. (1 ಸಮುವೇಲ 17:37, 45-47 ಓದಿ.) ‘ಗೊಲ್ಯಾತನ ಮುಂದೆ ನಾನು ಹುಲ್ಲುಕಡ್ಡಿ ತರ ಇದ್ದೀನಿ’ ಅಂತ ದಾವೀದ ಯೋಚಿಸಲಿಲ್ಲ. ಬದಲಿಗೆ ‘ಯೆಹೋವನ ಮುಂದೆ ಗೊಲ್ಯಾತ ಹುಲ್ಲುಕಡ್ಡಿ ತರ ಇದ್ದಾನೆ’ ಅಂತ ಯೋಚಿಸಿದ. ಈ ವೃತ್ತಾಂತದಿಂದ ನಾವೇನು ಕಲಿಯಬಹುದು? ಯೆಹೋವನು ನಮ್ಮ ಜೊತೆ ಇದ್ದಾನೆ ಎಂಬ ದೃಢನಂಬಿಕೆ ನಮಗಿದ್ದರೆ ಮತ್ತು ಸರ್ವಶಕ್ತನಾದ ದೇವರ ಮುಂದೆ ನಮ್ಮನ್ನು ವಿರೋಧಿಸುವವರು ಒಂದು ಹುಲ್ಲುಕಡ್ಡಿಗೆ ಸಮ ಅನ್ನುವ ಗ್ಯಾರಂಟಿ ನಮಗಿದ್ದರೆ ನಾವು ಏನೇ ಬಂದರೂ ಧೈರ್ಯವಾಗಿರುತ್ತೇವೆ. (2 ಪೂರ್ವ. 20:15; ಕೀರ್ತ. 16:8) ಹಾಗಾದರೆ ಹಿಂಸೆ ಬರುವುದಕ್ಕೂ ಮುಂಚೆ ಅಂದರೆ ಈಗ ನಾವು ಹೇಗೆ ಧೈರ್ಯ ಬೆಳೆಸಿಕೊಳ್ಳಬಹುದು?
13. ನಾವು ಈಗ ಹೇಗೆ ಧೈರ್ಯವನ್ನು ಬೆಳೆಸಿಕೊಳ್ಳಬಹುದು? ವಿವರಿಸಿ.
13 ಈಗ ನಾವು ಬೇರೆಯವರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಧೈರ್ಯ ಬೆಳೆಸಿಕೊಳ್ಳಬಹುದು. ಯಾಕೆ ಹಾಗೆ ಹೇಳಬಹುದು? ಯಾಕೆಂದರೆ ನಾವು ಸುವಾರ್ತೆ ಸಾರುವಾಗ ಯೆಹೋವನಲ್ಲಿ ನಂಬಿಕೆ ಇಡುವುದಕ್ಕೆ ಕಲಿಯುತ್ತೇವೆ ಮತ್ತು ಮನುಷ್ಯರ ಭಯನೂ ಕಡಿಮೆ ಆಗುತ್ತೆ. (ಜ್ಞಾನೋ. 29:25) ನಾವು ವ್ಯಾಯಾಮ ಮಾಡುವಾಗ ನಮ್ಮ ಮಾಂಸಖಂಡಗಳು ಬಲಗೊಳ್ಳುವ ಹಾಗೆ ನಾವು ಮನೆಯಿಂದ ಮನೆಗೆ, ಸಾರ್ವಜನಿಕವಾಗಿ, ಅನೌಪಚಾರಿಕವಾಗಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಸುವಾರ್ತೆ ಸಾರುವಾಗ ನಮ್ಮ ಧೈರ್ಯ ಹೆಚ್ಚಾಗುತ್ತೆ. ಈಗ ನಾವು ಧೈರ್ಯದಿಂದ ಸುವಾರ್ತೆ ಸಾರಿದರೆ ಮುಂದೆ ನಮ್ಮ ಕೆಲಸದ ಮೇಲೆ ಸರ್ಕಾರ ನಿಷೇಧ ಹಾಕಿದಾಗಲೂ ಸುವಾರ್ತೆ ಸಾರುವುದನ್ನು ಮುಂದುವರಿಸುತ್ತೇವೆ.—1 ಥೆಸ. 2:1, 2.
14-15. ನ್ಯಾನ್ಸಿ ಯುಎನ್ ಮತ್ತು ವಾಲೆಂಟಿನಾ ಗಾರ್ನೋಫ್‌ಸ್ಕಯಾರ ಉದಾಹರಣೆಗಳಿಂದ ನಾವು ಯಾವ ಪಾಠಗಳನ್ನು ಕಲಿಯಬಹುದು?
14 ತುಂಬ ಧೈರ್ಯವಂತೆಯರಾಗಿದ್ದ ಇಬ್ಬರು ನಂಬಿಗಸ್ತ ಸಹೋದರಿಯರ ಉದಾಹರಣೆಗಳಿಂದಲೂ ನಾವು ಧೈರ್ಯ ಪಡಕೊಳ್ಳಬಹುದು. ಅವರಲ್ಲಿ ಒಬ್ಬರು ಸಹೋದರಿ ನ್ಯಾನ್ಸಿ ಯುಎನ್. ಅವರ ಎತ್ತರ ಬರೀ ಐದಡಿ, ಆದರೆ ಅವರಿಗಿದ್ದ * ಸುವಾರ್ತೆ ಸಾರಬಾರದು ಅಂತ ಸರ್ಕಾರ ಹೇಳಿದರೂ ಅವರು ಸಾರುವುದನ್ನು ಮುಂದುವರಿಸಿದರು. ಇದರಿಂದಾಗಿ ಅವರು 20ಕ್ಕಿಂತ ಹೆಚ್ಚು ವರ್ಷಗಳು ಚೀನಾದ ಸೆರೆಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂತು. ಅವರನ್ನು ವಿಚಾರಣೆ ಮಾಡಿದ ಅಧಿಕಾರಿಗಳು “ಇವಳಷ್ಟು ಹಠಮಾರಿ ವ್ಯಕ್ತಿ ಈ ದೇಶದಲ್ಲೇ ಇಲ್ಲ” ಎಂದು ಹೇಳಿದರು.
ಧೈರ್ಯ ಸಾವಿರ ಅಡಿ!15 ಸಹೋದರಿ ವಾಲೆಂಟಿನಾ ಗಾರ್ನೋಫ್‌ಸ್ಕಯಾ ಅವರ ಉದಾಹರಣೆ ನೋಡಿ. ರಷ್ಯಾದಲ್ಲಿ ಅವರನ್ನು ಮೂರು ಸಲ ಬಂಧಿಸಲಾಯಿತು. ಅವರು 21 ವರ್ಷ ಜೈಲಲ್ಲಿ ಇರಬೇಕಾಗಿ ಬಂತು. * ಯಾವ ಕಾರಣಕ್ಕೆ? ಏನೇ ಆದರೂ ಸುವಾರ್ತೆ ಸಾರುವುದನ್ನು ನಿಲ್ಲಿಸದೇ ಇದ್ದದ್ದಕ್ಕೆ ಈ ಶಿಕ್ಷೆ ಸಿಕ್ಕಿತು. ಅಲ್ಲಿನ ಅಧಿಕಾರಿಗಳು ಆ ಸಹೋದರಿಗೆ “ಅತ್ಯಂತ ಅಪಾಯಕಾರಿ ಅಪರಾಧಿ” ಎಂಬ ಹಣೆಪಟ್ಟಿ ಕಟ್ಟಿದರು. ಇಂಥ ಅದ್ಭುತ ಧೈರ್ಯ ತೋರಿಸಲು ಈ ಇಬ್ಬರು ನಂಬಿಗಸ್ತ ಸಹೋದರಿಯರಿಗೆ ಹೇಗೆ ಸಾಧ್ಯವಾಯಿತು? ತಮ್ಮ ಜೊತೆ ಯೆಹೋವನು ಇದ್ದಾನೆಂಬ ದೃಢಭರವಸೆ ಇದ್ದಿದ್ದರಿಂದಲೇ.
16. ನಾವು ಧೈರ್ಯಶಾಲಿಗಳಾಗಲು ಏನು ಮಾಡಬೇಕು?
16 ನಾವು ಚರ್ಚಿಸಿದಂತೆ ಧೈರ್ಯ ಬೆಳೆಸಿಕೊಳ್ಳಲು ನಮ್ಮ ಶಕ್ತಿ-ಸಾಮರ್ಥ್ಯದ ಮೇಲೆ ಹೊಂದಿಕೊಳ್ಳಬಾರದು. ಬದಲಿಗೆ ಯೆಹೋವನು ನಮ್ಮ ಜೊತೆ ಇದ್ದಾನೆ ಮತ್ತು ಆತನು ನಮ್ಮ ಪರವಾಗಿ ಹೋರಾಡುತ್ತಾನೆ ಅನ್ನುವುದನ್ನು ನಾವು ನಂಬಬೇಕು. (ಧರ್ಮೋ. 1:29, 30; ಜೆಕ. 4:6) ಆಗ ನಾವು ಧೈರ್ಯಶಾಲಿಗಳಾಗುತ್ತೇವೆ.
ಜನರು ದ್ವೇಷಿಸುವಾಗ ನಾವೇನು ಮಾಡಬೇಕು?
17-18. ಯೋಹಾನ 15:18-21ರಲ್ಲಿ ಇರುವಂತೆ ಯೇಸು ಯಾವ ಎಚ್ಚರಿಕೆಯನ್ನು ನಮಗೆ ಕೊಟ್ಟಿದ್ದಾನೆ? ವಿವರಿಸಿ.
17 ಜನರು ನಮ್ಮನ್ನು ಗೌರವಿಸಿದರೆ ನಮಗೆ ಖುಷಿ ಆಗುತ್ತೆ. ಆದರೆ ನಮ್ಮನ್ನು ಇಷ್ಟಪಡದಿದ್ದರೆ ನಾವು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಯೋಚಿಸಬಾರದು. “ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ದ್ವೇಷಿಸಿ ನಿಮ್ಮನ್ನು ಬಹಿಷ್ಕರಿಸಿ, ನಿಂದಿಸಿ, ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕುವುದಾದರೆ ನೀವು ಸಂತೋಷಿತರು” ಎಂದು ಯೇಸು ಹೇಳಿದ್ದಾನೆ. (ಲೂಕ 6:22) ಆತನ ಮಾತಿನ ಅರ್ಥವೇನಾಗಿತ್ತು?
18 ಜನರು ದ್ವೇಷಿಸುವುದು ನಮಗೆ ಇಷ್ಟ ಆಗುತ್ತೆ ಅಂತಲ್ಲ, ಬದಲಿಗೆ ಜನರು ನಮ್ಮನ್ನು ಖಂಡಿತ ದ್ವೇಷಿಸುತ್ತಾರೆ ಅನ್ನುವುದು ಆತನ ಮಾತಿನ ಅರ್ಥವಾಗಿತ್ತು. ನಿಜ, ಈ ಲೋಕ ನಮ್ಮನ್ನು ಖಂಡಿತ ದ್ವೇಷಿಸುತ್ತೆ. ಯಾಕೆ? ಯಾಕೆಂದರೆ ನಾವು ಈ ಲೋಕದ ಭಾಗವಾಗಿಲ್ಲ, ನಮ್ಮ ಜೀವನದಲ್ಲಿ ಯೇಸುವಿನ ಬೋಧನೆಗಳನ್ನು ಅನ್ವಯಿಸಿಕೊಳ್ಳುತ್ತೇವೆ ಮತ್ತು ಆತನು ಸಾರಿದ ಸಂದೇಶವನ್ನೇ ಸಾರುತ್ತೇವೆ. (ಯೋಹಾನ 15:18-21 ಓದಿ.) ಏನೇ ಆಗಲಿ ನಾವಂತೂ ಯೆಹೋವನನ್ನು ಮೆಚ್ಚಿಸಲು ಇಷ್ಟಪಡುತ್ತೇವೆ. ನಮ್ಮ ತಂದೆಯನ್ನು ನಾವು ಪ್ರೀತಿಸುವುದು ಜನರಿಗೆ ಇಷ್ಟ ಆಗದಿದ್ದರೆ ಅದು ಅವರ ಸಮಸ್ಯೆ, ಅದಕ್ಕೆಲ್ಲ ನಾವು ತಲೆಕೆಡಿಸಿಕೊಳ್ಳಬಾರದು.
19. ಅಪೊಸ್ತಲರ ಉದಾಹರಣೆಗಳನ್ನು ನಾವು ಹೇಗೆ ಅನುಕರಿಸಬಹುದು?
19 ಜನ ಏನೇ ಹೇಳಿದರೂ, ಹೇಗೇ ನಡಕೊಂಡರೂ ನೀವಂತೂ ಯೆಹೋವನ ಸಾಕ್ಷಿ ಅಂತ ಹೇಳಿಕೊಳ್ಳಲು ನಾಚಿಕೆಪಡಬೇಡಿ. (ಮೀಕ 4:5) ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಯೇಸು ತೀರಿಹೋದ ಸ್ವಲ್ಪದರಲ್ಲೇ ಏನು ಮಾಡಿದರೆಂದು ಗಮನಿಸಿ. ಇದರಿಂದ ನಾವು ಭಯವನ್ನು ಹೇಗೆ ಮೆಟ್ಟಿನಿಲ್ಲಬಹುದು ಎಂದು ಕಲಿಯಬಹುದು. ಯೇಸುವಿನ ಸಾವಿಗೆ ಕಾರಣರಾದ ಯೆಹೂದಿ ಮುಖಂಡರು ತಮ್ಮನ್ನು ಎಷ್ಟು ದ್ವೇಷಿಸುತ್ತಿದ್ದಾರೆ ಅಂತ ಆ ಅಪೊಸ್ತಲರಿಗೆ ಚೆನ್ನಾಗಿ ಗೊತ್ತಿತ್ತು. (ಅ. ಕಾ. 5:17, 18, 27, 28) ಆದರೂ ಅವರು ಪ್ರತಿದಿನ ದೇವಾಲಯಕ್ಕೆ ಹೋಗಿ ಸುವಾರ್ತೆ ಸಾರುವ ಮೂಲಕ ತಾವು ಯೇಸುವಿನ ಶಿಷ್ಯರು ಅಂತ ಬಹಿರಂಗವಾಗಿ ತೋರಿಸಿಕೊಟ್ಟರು. (ಅ. ಕಾ. 5:42) ಅವರು ಹೆದರಿ ಸುಮ್ಮನೆ ಕೂರಲಿಲ್ಲ. ಅದೇ ರೀತಿ ನಾವು ಸಹ ಮನುಷ್ಯ ಭಯವನ್ನು ಮೆಟ್ಟಿನಿಲ್ಲಬೇಕೆಂದರೆ, ನಮ್ಮ ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ ಅಥವಾ ನಾವು ವಾಸಿಸುತ್ತಿರುವ ಸ್ಥಳದಲ್ಲಿರುವ ಎಲ್ಲರಿಗೂ ನಾವೊಬ್ಬ ಯೆಹೋವನ ಸಾಕ್ಷಿ ಅಂತ ತೋರಿಸಿಕೊಡಬೇಕು.—ಅ. ಕಾ. 4:29; ರೋಮ. 1:16.
20. ಅಪೊಸ್ತಲರನ್ನು ಜನರು ದ್ವೇಷಿಸಿದರೂ ಅವರು ಯಾಕೆ ಸಂತೋಷದಿಂದ ಇದ್ದರು?
20 ಅಪೊಸ್ತಲರು ಯಾಕೆ ಸಂತೋಷದಿಂದ ಇದ್ದರು? ಜನರು ತಮ್ಮನ್ನು ಯಾಕೆ ದ್ವೇಷಿಸುತ್ತಾರೆ ಎಂದು ಅವರಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ಯೆಹೋವನು ಹೇಳಿದಂತೆ ತಾವು ನಡೆಯುತ್ತಿರುವುದರಿಂದ ಹಿಂಸೆ ಬರುತ್ತಿರುವುದು ಒಂದು ದೊಡ್ಡ ಗೌರವ ಅಂತ ಅವರು ನೆನಸಿದರು. (ಲೂಕ 6:23; ಅ. ಕಾ. 5:41) “ನೀತಿಯ ನಿಮಿತ್ತ ಕಷ್ಟವನ್ನು ಅನುಭವಿಸಬೇಕಾದರೂ ನೀವು ಸಂತೋಷಿತರು” ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 2:19-21; 3:14) ನಾವು ಸರಿಯಾದದ್ದನ್ನು ಮಾಡುತ್ತಿರುವುದಕ್ಕೇ ಜನರು ನಮ್ಮನ್ನು ದ್ವೇಷಿಸುತ್ತಿದ್ದಾರೆ ಅಂತ ಅರ್ಥಮಾಡಿಕೊಂಡರೆ ನಾವೆಂದೂ ಮನುಷ್ಯರಿಗೆ ಭಯಪಟ್ಟು ಯೆಹೋವನಿಂದ ದೂರ ಹೋಗಲ್ಲ.
ಈಗಲೇ ತಯಾರಾಗಿ, ಮುಂದೆ ಪ್ರಯೋಜನ ಪಡಕೊಳ್ಳಿ
21-22. (ಎ) ಹಿಂಸೆ ಎದುರಿಸುವುದಕ್ಕೆ ತಯಾರಾಗಲು ನೀವು ಏನು ಮಾಡಬೇಕು ಅಂದುಕೊಂಡಿದ್ದೀರಿ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?
21 ಹಿಂಸೆಯ ಅಲೆ ಯಾವಾಗ ನಮ್ಮನ್ನು ಬಡಿಯುತ್ತೆ ಅಂತ ನಮಗೆ ಗೊತ್ತಿಲ್ಲ. ಸರಕಾರ ನಮ್ಮ ಕೆಲಸಾನ ಯಾವಾಗ ನಿಷೇಧಿಸುತ್ತೆ ಅಂತಾನೂ ನಮಗೆ ಗೊತ್ತಿಲ್ಲ. ಆದರೆ ಮುಂದೆ ಬರುವ ಹಿಂಸೆಯನ್ನು ಎದುರಿಸಲು ತಯಾರಾಗುವುದು ಹೇಗೆಂದು ಈ ಲೇಖನದಿಂದ ನಮಗೆ ಗೊತ್ತಾಯಿತು. ಹೇಗೆಂದರೆ, ಯೆಹೋವನೊಟ್ಟಿಗಿನ ನಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಬೇಕು, ಇನ್ನೂ ಹೆಚ್ಚು ಧೈರ್ಯ ಬೆಳೆಸಿಕೊಳ್ಳಬೇಕು ಮತ್ತು ಜನರ ದ್ವೇಷವನ್ನು ತಾಳಿಕೊಳ್ಳಲು ಕಲಿಯಬೇಕು. ನಾವು ಈಗಲೇ ತಯಾರಾದರೆ ಮುಂದೆನೂ ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮುಂದುವರಿಸಲು ಸಹಾಯ ಆಗುತ್ತೆ.
22 ಆದರೆ ನಮ್ಮ ಆರಾಧನೆಯನ್ನು ನಿಷೇಧಿಸಿದಾಗ ಏನು ಮಾಡುವುದು? ಮುಂದಿನ ಲೇಖನದಲ್ಲಿ ಇದಕ್ಕೆ ಉತ್ತರವಿದೆ. ಕೆಲವು ಬೈಬಲ್ ತತ್ವಗಳನ್ನು ಚರ್ಚಿಸಲಿದ್ದೇವೆ. ಅವು ನಿಷೇಧ ಇದ್ದಾಗಲೂ ಯೆಹೋವನ ಸೇವೆಯನ್ನು ನಾವು ಮುಂದುವರಿಸಿಕೊಂಡು ಹೋಗಲು ನಮಗೆ ಸಹಾಯ ಮಾಡುತ್ತವೆ.
ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”
^ ಪ್ಯಾರ. 5 ಜನ ನಮ್ಮನ್ನು ದ್ವೇಷಿಸಬೇಕು ಅಂತ ನಾವು ಯಾವತ್ತಿಗೂ ಬಯಸಲ್ಲ. ಆದರೆ ಇವತ್ತಲ್ಲ ನಾಳೆ ನಾವೆಲ್ಲರೂ ಹಿಂಸೆಯನ್ನು ಎದುರಿಸಲೇಬೇಕು. ನಾವು ಹಿಂಸೆಯನ್ನು ಎದುರಿಸುವುದಕ್ಕೆ ತಯಾರಾಗಲು ಮತ್ತು ಧೈರ್ಯವಾಗಿರಲು ಈ ಲೇಖನ ಸಹಾಯ ಮಾಡುತ್ತದೆ.
^ ಪ್ಯಾರ. 7 1965 ಡಿಸೆಂಬರ್ 15ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ಪುಟ 756 -767 ನೋಡಿ.
^ ಪ್ಯಾರ. 14 JW ಪ್ರಸಾರದಲ್ಲಿ ಯೆಹೋವನ ಹೆಸರು ಎಲ್ಲರಿಗೂ ತಿಳಿಸಲ್ಪಡುವುದು ಎಂಬ ವಿಡಿಯೋ ನೋಡಿ. ಇದು ಸಂದರ್ಶನಗಳು ಮತ್ತು ಅನುಭವಗಳು ವಿಭಾಗದಲ್ಲಿ ಸಿಗುತ್ತದೆ. 1979 ಜುಲೈ 15ರ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ಪುಟ 4-7 ನೋಡಿ.
^ ಪ್ಯಾರ. 67 ಚಿತ್ರ ವಿವರಣೆ: ಹೆತ್ತವರು ತಮ್ಮ ಕುಟುಂಬ ಆರಾಧನೆಯಲ್ಲಿ ವಚನ ಬರೆದಿರುವ ಕಾರ್ಡನ್ನು ಉಪಯೋಗಿಸಿ ಮಕ್ಕಳಿಗೆ ಬೈಬಲ್ ವಚನಗಳನ್ನು ಬಾಯಿಪಾಠ ಮಾಡಿಸುತ್ತಿದ್ದಾರೆ.
^ ಪ್ಯಾರ. 70 ಚಿತ್ರ ವಿವರಣೆ: ಇನ್ನೊಂದು ಕುಟುಂಬದವರು ಕಾರಲ್ಲಿ ಕೂಟಗಳಿಗೆ ಹೋಗುತ್ತಿರುವಾಗ ರಾಜ್ಯಗೀತೆಗಳನ್ನು ಹಾಡುತ್ತಾ ಪ್ರಾಕ್ಟಿಸ್ ಮಾಡುತ್ತಿದ್ದಾರೆ.