ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರ ಮೆಚ್ಚುಗೆ ನಿಮಗೆ ತುಂಬ ಮುಖ್ಯ?

ಯಾರ ಮೆಚ್ಚುಗೆ ನಿಮಗೆ ತುಂಬ ಮುಖ್ಯ?

‘ನಿಮ್ಮ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ.’—ಇಬ್ರಿ. 6:10.

ಗೀತೆಗಳು: 4, 91

1. ನಮ್ಮೆಲ್ಲರಲ್ಲೂ ಯಾವ ಆಸೆ ಇದೆ?

 ನಿಮಗೆ ಪರಿಚಯವಿರುವ ಮತ್ತು ನೀವು ತುಂಬ ಗೌರವಿಸುವ ಒಬ್ಬ ವ್ಯಕ್ತಿ ನಿಮ್ಮ ಹೆಸರನ್ನು ಮರೆತುಬಿಟ್ಟರೆ ಅಥವಾ ಅವರಿಗೆ ನಿಮ್ಮ ಗುರುತೇ ಸಿಗದೆ ಹೋದರೆ ನಿಮಗೆ ಹೇಗನಿಸುತ್ತದೆ? ನಿಮಗೆ ತುಂಬ ಬೇಜಾರಾಗಬಹುದು. ಯಾಕೆ? ಬೇರೆಯವರು ನಮ್ಮನ್ನು ನೋಡಿ ಹತ್ತಿರಕ್ಕೆ ಸೇರಿಸಿಕೊಳ್ಳಬೇಕೆಂಬ ಆಸೆ ನಮ್ಮೆಲ್ಲರಲ್ಲೂ ಇದೆ. ಅವರು ನಮ್ಮನ್ನು ಗುರುತಿಸುವುದು ಮಾತ್ರವೇ ಅಲ್ಲ ನಾವು ಯಾವ ರೀತಿಯ ವ್ಯಕ್ತಿ, ಜೀವನದಲ್ಲಿ ಏನೇನು ಮಾಡಿದ್ದೇವೆಂದು ಸಹ ತಿಳಿದುಕೊಂಡಿರಬೇಕು ಎಂದು ಬಯಸುತ್ತೇವೆ.—ಅರ. 11:16; ಯೋಬ 31:5.

2, 3. ಬೇರೆಯವರ ಮೆಚ್ಚುಗೆ ಪಡೆಯಬೇಕೆಂಬ ವಿಷಯ ನಮ್ಮನ್ನು ಹೇಗೆ ದಾರಿತಪ್ಪಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

2 ಆದರೆ ನಾವು ಜಾಗ್ರತೆ ವಹಿಸದಿದ್ದರೆ, ಈ ಆಸೆ ನಮ್ಮನ್ನು ದಾರಿತಪ್ಪಿಸುವ ಸಾಧ್ಯತೆ ಇದೆ. ದೊಡ್ಡ ಹೆಸರು-ಪ್ರಖ್ಯಾತಿಯನ್ನು ಪಡೆಯಬೇಕೆಂಬ ಯೋಚನೆಗಳನ್ನು ಸೈತಾನನ ಲೋಕ ನಮ್ಮ ಮನಸ್ಸಲ್ಲಿ ತುಂಬಬಹುದು. ಒಂದುವೇಳೆ ನಾವು ಇಂಥ ಯೋಚನೆಗಳನ್ನು ಬೆಳೆಸಿಕೊಂಡರೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಕೊಡಬೇಕಾದ ಮನ್ನಣೆ ಮತ್ತು ಪೂಜ್ಯಭಾವವನ್ನು ನಾವು ಕೊಡುವುದಿಲ್ಲ.—ಪ್ರಕ. 4:11.

3 ಯೇಸುವಿನ ದಿನದಲ್ಲಿದ್ದ ಧಾರ್ಮಿಕ ಮುಖಂಡರಿಗೆ ಹೆಸರು, ಪ್ರಖ್ಯಾತಿ ತುಂಬ ಮುಖ್ಯವಾಗಿತ್ತು. ಆದ್ದರಿಂದ ಯೇಸು ತನ್ನ ಶಿಷ್ಯರಿಗೆ ಈ ಎಚ್ಚರಿಕೆ ಕೊಟ್ಟನು: “ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾ ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ ಸಂಧ್ಯಾ ಭೋಜನಗಳಲ್ಲಿ ಅತಿ ಶ್ರೇಷ್ಠ ಸ್ಥಾನಗಳನ್ನೂ ಇಷ್ಟಪಡುತ್ತಾರೆ. . . . ಇವರು ಹೆಚ್ಚು ತೀಕ್ಷ್ಣವಾದ ನ್ಯಾಯತೀರ್ಪನ್ನು ಹೊಂದುವರು.” (ಲೂಕ 20:46, 47) ಆದರೆ ಬರೀ ಎರಡು ಚಿಕ್ಕ ನಾಣ್ಯಗಳನ್ನು ಕಾಣಿಕೆಯಾಗಿ ಕೊಟ್ಟ ಬಡ ವಿಧವೆಯನ್ನು ಯೇಸು ಬಾಯಿತುಂಬ ಹೊಗಳಿದನು. ಅವಳು ಕೊಟ್ಟ ಕಾಣಿಕೆಯನ್ನು ಬೇರೆಯವರು ನೋಡಿರದೆ ಇದ್ದರೂ ಯೇಸು ಅದನ್ನು ಗಮನಿಸಿದನು. (ಲೂಕ 21:1-4) ಬೇರೆಯವರ ಮೆಚ್ಚುಗೆ ಪಡೆಯುವ ವಿಷಯದಲ್ಲಿ ಯೇಸುವಿಗೆ ತುಂಬ ಭಿನ್ನವಾದ ದೃಷ್ಟಿಕೋನವಿತ್ತು ಎಂದು ಇದರಿಂದ ಗೊತ್ತಾಗುತ್ತದೆ. ಮೆಚ್ಚುಗೆ ಪಡೆಯುವ ವಿಷಯದಲ್ಲಿ ಸರಿಯಾದ ದೃಷ್ಟಿಕೋನವನ್ನು ಇಟ್ಟುಕೊಳ್ಳುವುದು ಹೇಗೆ ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ. ಈ ದೃಷ್ಟಿಕೋನ ನಮಗೆ ಇರಬೇಕೆಂದು ಯೆಹೋವನು ಬಯಸುತ್ತಾನೆ.

ಯಾರ ಮೆಚ್ಚುಗೆ ತುಂಬ ಮುಖ್ಯ?

4. ಯಾರ ಮೆಚ್ಚುಗೆಯನ್ನು ಪಡೆಯುವುದು ತುಂಬ ಮುಖ್ಯ? ಯಾಕೆ?

4 ಯಾರ ಮೆಚ್ಚುಗೆ ನಮಗೆ ತುಂಬ ಮುಖ್ಯ? ಉನ್ನತ ಶಿಕ್ಷಣ ಪಡೆದಾಗ, ವ್ಯಾಪಾರದಲ್ಲಿ ದೊಡ್ಡ ಲಾಭ ಸಿಕ್ಕಿದಾಗ ಅಥವಾ ಒಬ್ಬ ದೊಡ್ಡ ತಾರೆಯಾದಾಗ ಸಿಗುವ ಪ್ರಖ್ಯಾತಿ, ಜನರ ಮೆಚ್ಚುಗೆ ತುಂಬ ದೊಡ್ಡದು ಎಂದು ಅನೇಕರಿಗೆ ಅನಿಸುತ್ತದೆ. ಆದರೆ ಯಾರ ಮೆಚ್ಚುಗೆ ನಮಗೆ ತುಂಬ ಮುಖ್ಯ ಎಂದು ಪೌಲನ ಮಾತುಗಳಲ್ಲಿ ಗೊತ್ತಾಗುತ್ತದೆ. “ಈಗ ನೀವು ದೇವರನ್ನು ತಿಳಿದುಕೊಂಡಿರುವುದರಿಂದ ಅಥವಾ ಸರಿಯಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಈಗ ತಿಳಿದುಕೊಂಡಿರುವುದರಿಂದ ನೀವು ಪುನಃ ದುರ್ಬಲವೂ ದರಿದ್ರವೂ ಆಗಿರುವಂಥ ಪ್ರಾಥಮಿಕ ವಿಷಯಗಳ ಕಡೆಗೆ ತಿರುಗಿಕೊಂಡು ಪುನಃ ಅವುಗಳಿಗೆ ದಾಸರಾಗಲು ಇಷ್ಟಪಡುತ್ತಿರುವುದು ಹೇಗೆ?” ಎಂದನು. (ಗಲಾ. 4:9) ಇಡೀ ವಿಶ್ವದ ಪರಮಾಧಿಕಾರಿ ‘ನಮ್ಮನ್ನು ತಿಳಿದುಕೊಂಡಿರುವುದು’ ತುಂಬ ದೊಡ್ಡ ವಿಷಯ! ನಾವು ಯಾರೆಂದು ಯೆಹೋವನಿಗೆ ತಿಳಿದಿದೆ. ಆತನು ನಮ್ಮನ್ನು ಪ್ರೀತಿಸುತ್ತಾನೆ ಮತ್ತು ನಮ್ಮ ಸ್ನೇಹಿತನಾಗಲು ಬಯಸುತ್ತಾನೆ. ನಾವು ಆತನ ಸ್ನೇಹಿತರಾಗಬೇಕೆಂದೇ ಆತನು ನಮ್ಮನ್ನು ಸೃಷ್ಟಿಮಾಡಿದ್ದಾನೆ.—ಪ್ರಸಂ. 12:13, 14.

5. ದೇವರ ಸ್ನೇಹಿತರಾಗಲು ನಾವೇನು ಮಾಡಬೇಕು?

5 ಮೋಶೆ ಯೆಹೋವನ ಸ್ನೇಹಿತನಾಗಿದ್ದನೆಂದು ನಮಗೆ ಗೊತ್ತು. ಒಂದು ಸಾರಿ ಮೋಶೆ ಯೆಹೋವನಿಗೆ, “ನಿನ್ನ ಮಾರ್ಗವನ್ನು ನನಗೆ ತೋರಿಸು” ಎಂದು ಬೇಡಿಕೊಂಡನು. ಅದಕ್ಕೆ ಯೆಹೋವನು, “ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ” ಎಂದನು. (ವಿಮೋ. 33:12-17, ಪವಿತ್ರ ಗ್ರಂಥ ಭಾಷಾಂತರ) ನಾವು ಯಾರು, ಎಂಥವರು ಎಂದು ಯೆಹೋವನು ತಿಳಿದುಕೊಳ್ಳುವಾಗ ತುಂಬ ಆಶೀರ್ವಾದಗಳು ಸಿಗುತ್ತವೆ. ಆದರೆ ಯೆಹೋವನ ಸ್ನೇಹಿತರಾಗಲು ನಾವೇನು ಮಾಡಬೇಕು? ನಾವು ಆತನನ್ನು ಪ್ರೀತಿಸಬೇಕು ಮತ್ತು ನಮ್ಮ ಜೀವನವನ್ನು ಆತನಿಗೆ ಸಮರ್ಪಿಸಬೇಕು.—1 ಕೊರಿಂಥ 8:3 ಓದಿ.

6, 7. ಯೆಹೋವನೊಟ್ಟಿಗಿರುವ ನಮ್ಮ ಸ್ನೇಹವನ್ನು ಯಾವುದು ಕೆಡಿಸಬಲ್ಲದು?

6 ನಮ್ಮ ಸ್ವರ್ಗೀಯ ತಂದೆಯೊಟ್ಟಿಗೆ ನಮಗಿರುವ ಅಮೂಲ್ಯವಾದ ಸ್ನೇಹಸಂಬಂಧವನ್ನು ನಾವು ಕಾಪಾಡಿಕೊಳ್ಳಬೇಕು. ಗಲಾತ್ಯದಲ್ಲಿದ್ದ ಕ್ರೈಸ್ತರು ಮಾಡಬೇಕಾಗಿದ್ದಂತೆ ನಾವು ಕೂಡ ಈ ಲೋಕದ ‘ದುರ್ಬಲವೂ ದರಿದ್ರವೂ ಆಗಿರುವಂಥ ಪ್ರಾಥಮಿಕ ವಿಷಯಗಳಿಗೆ’ ದಾಸರಾಗಿರುವುದನ್ನು ನಿಲ್ಲಿಸಬೇಕು. ಈ ಲೋಕ ಕೊಡುವ ಯಶಸ್ಸು ಪ್ರಖ್ಯಾತಿ ನಮಗೆ ಬೇಡ. (ಗಲಾ. 4:9) ಗಲಾತ್ಯದಲ್ಲಿದ್ದ ಕ್ರೈಸ್ತರು ದೇವರನ್ನು ತಿಳಿದುಕೊಂಡಿದ್ದರು ಮತ್ತು ದೇವರು ಅವರನ್ನು ತಿಳಿದುಕೊಂಡಿದ್ದನು. ಆದರೆ ಈ ಸಹೋದರರೇ ತಾವು ಬಿಟ್ಟುಬಂದ ನಿಷ್ಪ್ರಯೋಜಕ ವಿಷಯಗಳ ‘ಕಡೆಗೆ ತಿರುಗಿಕೊಳ್ಳಲು’ ಪ್ರಯತ್ನಿಸುತ್ತಿದ್ದರು. ಆದ್ದರಿಂದ ಪೌಲನು ಅವರಿಗೆ, ‘ನೀವು ಕೆಲಸಕ್ಕೆ ಬಾರದ ನಿಷ್ಪ್ರಯೋಜಕ ವಿಷಯಗಳನ್ನು ಬಿಟ್ಟುಬಂದ ಮೇಲೆ ಯಾಕೆ ಪುನಃ ಅದರ ಕಡೆ ತಿರುಗಿಕೊಂಡಿರಿ?’ ಎಂದು ಕೇಳುವಂತಿತ್ತು.

7 ನಮ್ಮ ವಿಷಯದಲ್ಲೂ ಹೀಗಾಗಲು ಸಾಧ್ಯನಾ? ಸಾಧ್ಯ. ನಾವು ಸತ್ಯಕ್ಕೆ ಬಂದಾಗ ಪೌಲನಂತೆ ಸೈತಾನನ ಲೋಕದಿಂದ ಸಿಗುತ್ತಿದ್ದ ಹೆಸರು ಪ್ರಖ್ಯಾತಿಯನ್ನು ಬಿಟ್ಟು ಬಂದಿರಬಹುದು. (ಫಿಲಿಪ್ಪಿ 3:7, 8 ಓದಿ.) ನಾವು ಬಹುಶಃ ಉನ್ನತ ಶಿಕ್ಷಣವನ್ನು, ದೊಡ್ಡ ಉದ್ಯೋಗವನ್ನು, ತುಂಬ ದುಡ್ಡು ಮಾಡುವ ಅವಕಾಶಗಳನ್ನು ಬಿಟ್ಟುಬಂದಿರಬಹುದು. ನಮ್ಮಲ್ಲಿ ಸಂಗೀತ ನುಡಿಸುವ ಅಥವಾ ಕ್ರೀಡೆಯನ್ನು ಚೆನ್ನಾಗಿ ಆಡುವ ಪ್ರತಿಭೆ ಇರುವುದರಿಂದ ದೊಡ್ಡ ಹೆಸರು ಮಾಡಬಹುದಿತ್ತು, ತುಂಬ ದುಡ್ಡು ನೋಡಬಹುದಿತ್ತು. ಆದರೆ ನಾವು ಆ ಎಲ್ಲಾ ಅವಕಾಶಗಳನ್ನು ತಳ್ಳಿಬಿಟ್ಟೆವು. (ಇಬ್ರಿ. 11:24-27) ಅದೆಲ್ಲಾ ತುಂಬ ಒಳ್ಳೇ ನಿರ್ಧಾರಗಳು! ‘ಯಾಕಪ್ಪಾ ಅಂಥ ನಿರ್ಧಾರ ಮಾಡಿದೆ’ ಎಂದು ನಾವು ಯಾವತ್ತೂ ವಿಷಾದಪಡಬಾರದು. ‘ಆ ವಿಷಯಗಳ ಹಿಂದೆ ಹೋಗಿದ್ದರೆ ಜೀವನ ಚೆನ್ನಾಗಿರುತ್ತಿತ್ತು’ ಎಂದು ನಾವು ನೆನಸಬಾರದು. ಹೀಗೆ ಯೋಚಿಸಿದರೆ ನಾವು ಯಾವ ವಿಷಯಗಳನ್ನು “ದುರ್ಬಲವೂ ದರಿದ್ರವೂ” ಆಗಿದೆ ಎಂದು ಬಿಟ್ಟುಬಂದೆವೋ ಅದರ ಹಿಂದೆಯೇ ಪುನಃ ಹೋಗಿಬಿಡುತ್ತೇವೆ. a

ಯೆಹೋವನ ಮೆಚ್ಚುಗೆ ಪಡೆಯುವ ಆಸೆಯನ್ನು ಇನ್ನೂ ಬಲಗೊಳಿಸಿ

8. ಯೆಹೋವನ ಮೆಚ್ಚುಗೆಯೇ ಬೇಕೆಂಬ ನಮ್ಮ ಆಸೆಯನ್ನು ಯಾವುದು ಬಲಪಡಿಸುತ್ತದೆ?

8 ನಮಗೆ ಈ ಲೋಕದ ಮೆಚ್ಚುಗೆ ಅಲ್ಲ ಯೆಹೋವನ ಮೆಚ್ಚುಗೆಯೇ ಬೇಕು ಅನ್ನುವ ಆಸೆಯನ್ನು ಹೇಗೆ ಇನ್ನೂ ಬಲಪಡಿಸಬಹುದು? ಎರಡು ಪ್ರಾಮುಖ್ಯ ಸತ್ಯಾಂಶಗಳ ಮೇಲೆ ನಮ್ಮ ಗಮನವನ್ನು ಇಡಬೇಕು. ಮೊದಲನೇದು, ತನ್ನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡುವ ವ್ಯಕ್ತಿಗಳನ್ನು ಯೆಹೋವನು ಮೆಚ್ಚದೆ ಬಿಡುವುದಿಲ್ಲ. (ಇಬ್ರಿಯ 6:10 ಓದಿ; 11:6) ಯೆಹೋವನು ತನ್ನ ನಂಬಿಗಸ್ತ ಸೇವಕರಲ್ಲಿರುವ ಪ್ರತಿಯೊಬ್ಬರನ್ನೂ ತುಂಬ ಮಾನ್ಯಮಾಡುತ್ತಾನೆ. ಆದ್ದರಿಂದ ಅವರಲ್ಲಿ ಒಬ್ಬರನ್ನು ಕೂಡ ಗಮನಿಸದೆ ಬಿಡುವುದು ‘ಅನೀತಿಯ’ ಕೃತ್ಯ ಎಂದು ಆತನಿಗೆ ಅನಿಸುತ್ತದೆ. ‘ತನ್ನವರು ಯಾರು’ ಎಂದು ಯೆಹೋವನಿಗೆ ಚೆನ್ನಾಗಿ ಗೊತ್ತು. (2 ತಿಮೊ. 2:19) “ನೀತಿವಂತರ ಮಾರ್ಗವನ್ನು ಯೆಹೋವನು ಅರಿತಿದ್ದಾನೆ.” ಇಂಥವರನ್ನು ಹೇಗೆ ರಕ್ಷಿಸಬೇಕೆಂದು ಆತನಿಗೆ ಗೊತ್ತು.—ಕೀರ್ತ. 1:6; 2 ಪೇತ್ರ 2:9.

9. ತನ್ನ ಜನರ ಮೇಲೆ ತನ್ನ ಮೆಚ್ಚುಗೆ ಇದೆ ಎಂದು ಯೆಹೋವನು ಹೇಗೆ ತೋರಿಸಿದ್ದಾನೆಂಬುದಕ್ಕೆ ಉದಾಹರಣೆಗಳನ್ನು ಕೊಡಿ.

9 ಯೆಹೋವನು ತನ್ನ ಮೆಚ್ಚುಗೆಯನ್ನು ಕೆಲವೊಮ್ಮೆ ವಿಶೇಷವಾದ ವಿಧಗಳಲ್ಲಿ ತೋರಿಸಿದ್ದಾನೆ. (2 ಪೂರ್ವ. 20:20, 29) ಉದಾಹರಣೆಗೆ ಕೆಂಪು ಸಮುದ್ರದ ಹತ್ತಿರ ಯೆಹೋವನು ತನ್ನ ಜನರನ್ನು ಹೇಗೆ ಕಾಪಾಡಿದನೆಂದು ಯೋಚಿಸಿ. ಫರೋಹನ ಶಕ್ತಿಶಾಲಿ ಸೈನ್ಯ ಅಟ್ಟಿಸಿಕೊಂಡು ಬಂದರೂ ಅವರನ್ನು ಕಾಪಾಡಿದನು. (ವಿಮೋ. 14:21-30; ಕೀರ್ತ. 106:9-11) ಇದು ಎಂಥ ಅದ್ಭುತ ಘಟನೆಯಾಗಿತ್ತೆಂದರೆ, ಸುಮಾರು 40 ವರ್ಷಗಳಾದ ಮೇಲೆ ಸಹ ಜನರು ಅದರ ಬಗ್ಗೆ ಮಾತಾಡುತ್ತಿದ್ದರು. (ಯೆಹೋ. 2:9-11) ಯೆಹೋವನು ಹಿಂದಿನ ಕಾಲದಲ್ಲಿ ತನ್ನ ಜನರನ್ನು ಹೇಗೆ ಪ್ರೀತಿಸಿದನು ಮತ್ತು ತನ್ನ ಶಕ್ತಿ ಉಪಯೋಗಿಸಿ ಅವರನ್ನು ಹೇಗೆ ರಕ್ಷಿಸಿದನು ಎನ್ನುವುದನ್ನು ನೆನಪಿಸಿಕೊಂಡರೆ ತುಂಬ ಪ್ರೋತ್ಸಾಹ ಸಿಗುತ್ತದೆ. ಯಾಕೆಂದರೆ ಮಾಗೋಗಿನ ಗೋಗನು ತುಂಬ ಬೇಗ ನಮ್ಮ ಮೇಲೆ ದಾಳಿ ಮಾಡಲಿದ್ದಾನೆ. (ಯೆಹೆ. 38:8-12) ಆಗ ನಾವು ಈ ಲೋಕದ ಮೆಚ್ಚುಗೆ ಪಡೆಯಲು ಪ್ರಯತ್ನಿಸುವ ಬದಲು ದೇವರ ಮೆಚ್ಚುಗೆ ಪಡೆಯಲು ಬಯಸಿದ್ದನ್ನು ನೆನಸಿ ತುಂಬ ಸಂತೋಷಪಡುವೆವು.

10. ನಾವು ಇನ್ಯಾವ ಸತ್ಯಾಂಶದ ಮೇಲೆ ಗಮನವಿಡಬೇಕು?

10 ನಾವು ಗಮನವಿಡಬೇಕಾದ ಎರಡನೇ ಸತ್ಯಾಂಶ ಯಾವುದೆಂದರೆ, ನಾವು ನೆನಸಿರದ ರೀತಿಯಲ್ಲಿ ಯೆಹೋವನು ತನ್ನ ಮೆಚ್ಚುಗೆಯನ್ನು ತೋರಿಸಬಹುದು. ಬೇರೆ ಜನರು ನೋಡಿ ಹೊಗಳಲಿ ಎಂಬ ಒಂದೇ ಕಾರಣಕ್ಕೆ ಯಾರಾದರೂ ಒಳ್ಳೇ ವಿಷಯಗಳನ್ನು ಮಾಡಿದರೆ ಯೆಹೋವನು ಪ್ರತಿಫಲ ಕೊಡಲ್ಲ. ಯಾಕೆ? ಯಾಕೆಂದರೆ ಬೇರೆಯವರಿಂದ ಸಿಗುವ ಹೊಗಳಿಕೆಯೇ ಅವರಿಗೆ ಸಿಗುವ ಪ್ರತಿಫಲ ಎಂದು ಯೇಸು ಹೇಳಿದ್ದಾನೆ. (ಮತ್ತಾಯ 6:1-5 ಓದಿ.) ಒಳ್ಳೇದನ್ನು ಮಾಡಿ ಯಾರಿಗೆ ಪ್ರತಿಫಲ ಸಿಕ್ಕಿಲ್ಲವೋ ಅಂಥವರನ್ನು ಯೆಹೋವನು ‘ರಹಸ್ಯವಾದ ಸ್ಥಳದಿಂದ ನೋಡಿ’ ಪ್ರತಿಫಲ ಕೊಡುತ್ತಾನೆ ಅಥವಾ ಆಶೀರ್ವದಿಸುತ್ತಾನೆ. ಕೆಲವೊಮ್ಮೆ ತನ್ನ ಸೇವಕರು ನೆನಸಿರದ ವಿಧಗಳಲ್ಲಿ ಯೆಹೋವನು ಪ್ರತಿಫಲ ಕೊಡುತ್ತಾನೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ.

ಒಬ್ಬ ದೀನ ಸ್ವಭಾವದ ಯುವತಿಯನ್ನು ಯೆಹೋವನು ಮೆಚ್ಚಿದ ವಿಧ

11. ಯೆಹೋವನು ಮರಿಯಳಿಗೆ ಹೇಗೆ ಮೆಚ್ಚುಗೆ ತೋರಿಸಿದನು?

11 ಯೆಹೋವನು ಮರಿಯಳೆಂಬ ಒಬ್ಬ ದೀನ ಯುವತಿಯನ್ನು ತನ್ನ ಮಗನಾದ ಯೇಸುವಿನ ತಾಯಿಯಾಗಲು ಆರಿಸಿಕೊಂಡನು. ಅವಳು ನಜರೇತೆಂಬ ಸಣ್ಣ ಊರಿನವಳು. ಇದು ಯೆರೂಸಲೇಮಿನಿಂದ ಮತ್ತು ಸುಂದರವಾದ ದೇವಾಲಯದಿಂದ ದೂರದಲ್ಲಿತ್ತು. (ಲೂಕ 1:26-33 ಓದಿ.) ಯೆಹೋವನು ಮರಿಯಳನ್ನು ಯಾಕೆ ಆರಿಸಿಕೊಂಡನು? ಅವಳಿಗೆ ಗಬ್ರಿಯೇಲ ದೇವದೂತನು ಅವಳ ಮೇಲೆ “ದೇವರ ಅನುಗ್ರಹ” ಇತ್ತೆಂದು ಹೇಳಿದನು. ನಂತರ ಅವಳ ಸಂಬಂಧಿಕಳಾದ ಎಲಿಸಬೇತಳಿಗೆ ಹೇಳಿದ ಮಾತುಗಳಿಂದ ಅವಳಿಗೆ ಯೆಹೋವನ ಜೊತೆ ಆಪ್ತ ಸ್ನೇಹ ಇತ್ತೆಂದು ಗೊತ್ತಾಗುತ್ತದೆ. (ಲೂಕ 1:46-55) ಯೆಹೋವನು ಮರಿಯಳನ್ನು ಗಮನಿಸುತ್ತಾ ಇದ್ದನು ಮತ್ತು ಅವಳ ನಂಬಿಗಸ್ತಿಕೆಯನ್ನು ನೋಡಿ ಅವಳು ನೆನಸಿರದ ರೀತಿಯಲ್ಲಿ ಮೆಚ್ಚುಗೆಯನ್ನು ತೋರಿಸಿದನು.

12, 13. ಯೇಸು ಹುಟ್ಟಿದಾಗ ಮತ್ತು ಅವನು ಹುಟ್ಟಿ 40 ದಿನಗಳಾದ ಮೇಲೆ ಯೆಹೋವನು ಅವನನ್ನು ಹೇಗೆ ಸನ್ಮಾನಿಸಿದನು?

12 ಯೇಸು ಹುಟ್ಟಿದಾಗ ಯೆಹೋವನು ಅದನ್ನು ಯಾರಿಗೆ ತಿಳಿಸಿದನು? ಯೆರೂಸಲೇಮಿನಲ್ಲಿ ಅಥವಾ ಬೇತ್ಲೆಹೇಮಿನಲ್ಲಿದ್ದ ಮುಖ್ಯ ಅಧಿಕಾರಿಗಳಿಗೆ ಅಥವಾ ನಾಯಕರಿಗೆ ಈ ವಿಷಯ ತಿಳಿಸಲಿಲ್ಲ. ಬೇತ್ಲೆಹೇಮಿನ ಹೊರಗೆ ಬಯಲಿನಲ್ಲಿ ಕುರಿ ಕಾಯುತ್ತಿದ್ದ ದೀನ ಕುರುಬರಿಗೆ ಈ ವಿಷಯವನ್ನು ದೇವದೂತರ ಮೂಲಕ ತಿಳಿಸಿದನು. (ಲೂಕ 2:8-14) ನಂತರ ಈ ಕುರುಬರು ಮಗುವನ್ನು ನೋಡಲು ಹೋದರು. (ಲೂಕ 2:15-17) ಯೇಸುವಿಗೆ ಈ ರೀತಿಯಲ್ಲಿ ಗೌರವ ಸಿಕ್ಕಿದ್ದನ್ನು ನೋಡಿ ಮರಿಯಳಿಗೆ ಮತ್ತು ಯೋಸೇಫನಿಗೆ ತುಂಬ ಆಶ್ಚರ್ಯ ಆಗಿರಬೇಕು. ಯೆಹೋವನು ಒಂದು ವಿಷಯವನ್ನು ನಿರ್ವಹಿಸುವುದಕ್ಕೂ ಸೈತಾನನು ನಿರ್ವಹಿಸುವುದಕ್ಕೂ ವ್ಯತ್ಯಾಸ ಇದೆ. ಯೇಸುವನ್ನು ಮತ್ತು ಅವನ ಹೆತ್ತವರನ್ನು ಭೇಟಿಯಾಗಲೆಂದು ಸೈತಾನನು ಜ್ಯೋತಿಷಿಗಳನ್ನು ಕಳುಹಿಸಿದಾಗ ಯೆರೂಸಲೇಮಿನಲ್ಲಿದ್ದ ಎಲ್ಲರಿಗೂ ಯೇಸುವಿನ ಜನನದ ಬಗ್ಗೆ ಗೊತ್ತಾಯಿತು. ಇದರಿಂದ ತುಂಬ ಗೊಂದಲ ಉಂಟಾಯಿತು. (ಮತ್ತಾ. 2:3) ಇದರ ಪರಿಣಾಮವಾಗಿ ಎಷ್ಟೋ ಅಮಾಯಕ ಮಕ್ಕಳನ್ನು ನಂತರ ಕೊಲ್ಲಲಾಯಿತು.—ಮತ್ತಾ. 2:16.

13 ಒಂದು ಗಂಡು ಮಗು ಹುಟ್ಟಿದರೆ 40 ದಿನಗಳಾದ ಮೇಲೆ ಅದರ ತಾಯಿ ಯೆಹೋವನಿಗೆ ಒಂದು ಯಜ್ಞವನ್ನು ಕೊಡಬೇಕೆಂದು ಧರ್ಮಶಾಸ್ತ್ರದಲ್ಲಿ ನಿಯಮವಿತ್ತು. ಆದ್ದರಿಂದ ಮರಿಯ ಪುಟ್ಟ ಯೇಸುವನ್ನು ಎತ್ತಿಕೊಂಡು ಯೋಸೇಫನ ಜೊತೆ ಬೇತ್ಲೆಹೇಮಿನಿಂದ 9 ಕಿ.ಮೀ. ದೂರದಲ್ಲಿದ್ದ ಯೆರೂಸಲೇಮಿನ ದೇವಾಲಯಕ್ಕೆ ಹೋದಳು. (ಲೂಕ 2:22-24) ದಾರಿಯಲ್ಲಿ ಹೋಗುತ್ತಿದ್ದಾಗ, ಯೇಸುವಿಗೆ ಯಾಜಕನು ಬಂದು ವಿಶೇಷವಾದ ರೀತಿಯಲ್ಲಿ ಏನಾದರೂ ಮಾಡಿ ಯೇಸುವನ್ನು ಗೌರವಿಸುವನಾ ಎಂದು ಅವಳು ಯೋಚಿಸಿರಬಹುದು. ಯೇಸುವಿಗೆ ಗೌರವ ಸಿಕ್ಕಿತು, ಆದರೆ ಬೇರೆ ರೀತಿಯಲ್ಲಿ. ಹೇಗೆ? ಯೇಸುವೇ ಮೆಸ್ಸೀಯನಾಗುವನು ಅಥವಾ ಕ್ರಿಸ್ತನಾಗುವನೆಂದು ತಿಳಿಸಲು ಯೆಹೋವನು “ನೀತಿವಂತನೂ ದೇವಭಯವುಳ್ಳವನೂ” ಆಗಿದ್ದ ಸಿಮೆಯೋನನನ್ನು ಮತ್ತು 84 ವಯಸ್ಸಿನ ವಿಧವೆಯಾಗಿದ್ದ ಪ್ರವಾದಿನಿ ಅನ್ನಳನ್ನು ಬಳಸಿದನು. ಯೇಸುವಿಗೆ ಈ ರೀತಿಯಲ್ಲಿ ಗೌರವ ಸಿಗುತ್ತದೆ ಎಂದು ಮರಿಯಳು ನೆನಸಿರಲಿಕ್ಕಿಲ್ಲ.—ಲೂಕ 2:25-38.

14. ಯೆಹೋವನು ಮರಿಯಳನ್ನು ಹೇಗೆ ಸನ್ಮಾನಿಸಿದನು?

14 ಮರಿಯಳು ಯೇಸುವನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ್ದರಿಂದ ಯೆಹೋವನು ಅವಳನ್ನು ಸನ್ಮಾನಿಸಿದನಾ? ಹೌದು. ಮರಿಯಳು ಹೇಳಿದ ಮತ್ತು ಮಾಡಿದ ಕೆಲವು ವಿಷಯಗಳನ್ನು ದೇವರು ಬೈಬಲಿನಲ್ಲಿ ಬರೆಸಿದ್ದಾನೆ. ಯೇಸು ಮೂರೂವರೆ ವರ್ಷ ಸಾರುವ ಕೆಲಸವನ್ನು ಮಾಡುತ್ತಿದ್ದಾಗ ಆತನೊಂದಿಗೆ ಹೋಗಲು ಮರಿಯಳಿಗೆ ಆಗಲಿಲ್ಲ ಎಂದು ತೋರುತ್ತದೆ. ಬಹುಶಃ ವಿಧವೆಯಾಗಿದ್ದ ಕಾರಣ ಅವಳು ನಜರೇತಿನಲ್ಲಿ ಇರಬೇಕಾಯಿತು. ಇದರಿಂದ ಬೇರೆಯವರಿಗೆ ನೋಡಲು ಸಿಕ್ಕಿದ ಎಷ್ಟೋ ಅದ್ಭುತ ವಿಷಯಗಳನ್ನು ನೋಡುವ ಅವಕಾಶ ಅವಳಿಗೆ ಸಿಗಲಿಲ್ಲ. ಆದರೆ ಯೇಸು ತೀರಿಹೋದಾಗ ಅವಳು ಆತನ ಹತ್ತಿರದಲ್ಲಿ ಇದ್ದಳು. (ಯೋಹಾ. 19:26) ನಂತರ ಪಂಚಾಶತ್ತಮದಂದು ದೇವರು ಪವಿತ್ರಾತ್ಮ ಸುರಿಸುವ ಮುಂಚೆ ಮರಿಯ ಯೇಸುವಿನ ಶಿಷ್ಯರ ಜೊತೆ ಇದ್ದಳು. (ಅ. ಕಾ. 1:13, 14) ಬೇರೆ ಶಿಷ್ಯರ ಜೊತೆ ಮರಿಯಳನ್ನೂ ಅಭಿಷೇಕಿಸಲಾಯಿತು ಎಂದು ತೋರುತ್ತದೆ. ಇದು ಸತ್ಯವಾದರೆ, ಯುಗಯುಗಾಂತರಕ್ಕೂ ಯೇಸುವಿನ ಜೊತೆ ಸ್ವರ್ಗದಲ್ಲಿರುವ ಸದವಕಾಶ ಅವಳಿಗೆ ಸಿಕ್ಕಿತು ಎಂದರ್ಥ. ಅವಳ ನಂಬಿಗಸ್ತ ಸೇವೆಗೆ ಸಿಕ್ಕಿದ ಅದ್ಭುತ ಪ್ರತಿಫಲ ಇದು!

ಯೆಹೋವನು ತನ್ನ ಮಗನನ್ನು ಮೆಚ್ಚಿದನು

15. ಯೇಸು ಭೂಮಿಯಲ್ಲಿದ್ದಾಗ ಆತನನ್ನು ಮೆಚ್ಚಿದ್ದೇನೆಂದು ಯೆಹೋವನು ಹೇಗೆ ತೋರಿಸಿದನು?

15 ಯೇಸುವಿಗೆ ಧಾರ್ಮಿಕ, ರಾಜಕೀಯ ಮುಖಂಡರಿಂದ ಗೌರವ ಬೇಕಾಗಿರಲಿಲ್ಲ. ಆದರೆ ಯೆಹೋವನೇ ಖುದ್ದಾಗಿ ಮೂರು ಸಲ ತನ್ನ ಮಗನನ್ನು ಪ್ರೀತಿಸುತ್ತೇನೆಂದು ಸ್ವರ್ಗದಿಂದ ಹೇಳಿದನು. ಇದರಿಂದ ಯೇಸುವಿಗೆ ತುಂಬ ಪ್ರೋತ್ಸಾಹ ಸಿಕ್ಕಿರಬೇಕು! ಯೊರ್ದನ್‌ ನದಿಯಲ್ಲಿ ಯೇಸು ದೀಕ್ಷಾಸ್ನಾನ ಪಡೆದಾಗ ಯೆಹೋವನು, “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದನು. (ಮತ್ತಾ. 3:17) ಇದನ್ನು ಯೇಸು ಮತ್ತು ಸ್ನಾನಿಕನಾದ ಯೋಹಾನ ಮಾತ್ರ ಕೇಳಿಸಿಕೊಂಡರು. ನಂತರ ಯೇಸು ತೀರಿಹೋಗಲಿದ್ದ ಒಂದು ವರ್ಷದ ಮುಂಚೆ, “ಇವನು ಪ್ರಿಯನಾಗಿರುವ ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ; ಇವನ ಮಾತಿಗೆ ಕಿವಿಗೊಡಿರಿ” ಎಂದು ಯೆಹೋವನು ಹೇಳಿದ್ದನ್ನು ಮೂರು ಅಪೊಸ್ತಲರು ಕೇಳಿಸಿಕೊಂಡರು. (ಮತ್ತಾ. 17:5) ಕೊನೆಗೆ, ಯೇಸು ತೀರಿಹೋಗಲಿದ್ದ ಕೆಲವು ದಿನಗಳ ಹಿಂದೆ ಯೆಹೋವನು ಸ್ವರ್ಗದಿಂದ ತನ್ನ ಮಗನೊಂದಿಗೆ ಮಾತಾಡಿದನು.—ಯೋಹಾ. 12:28.

ಯೆಹೋವನು ತನ್ನ ಮಗನಿಗೆ ತೋರಿಸಿದ ಮೆಚ್ಚುಗೆಯಿಂದ ನಾವೇನು ತಿಳುಕೊಳ್ಳಬಹುದು? (ಪ್ಯಾರ 15-17 ನೋಡಿ)

16, 17. ಯೇಸುವನ್ನು ಮೆಚ್ಚಿದ್ದೇನೆಂದು ಯೆಹೋವನು ಯಾರೂ ನೆನಸಿರದ ರೀತಿಯಲ್ಲಿ ಹೇಗೆ ತೋರಿಸಿದನು?

16 ಜನರು ತನಗೆ ದೇವದೂಷಕನೆಂಬ ಪಟ್ಟ ಕಟ್ಟಿ ಹೀಯಾಳಿಸಿ ಕೊಲ್ಲುವರೆಂದು ಯೇಸುವಿಗೆ ಗೊತ್ತಿದ್ದರೂ ‘ದೇವರೇ, ನನ್ನ ಚಿತ್ತದಂತಲ್ಲ ನಿನ್ನ ಚಿತ್ತದಂತೆಯೇ ಆಗಲಿ’ ಎಂದು ಪ್ರಾರ್ಥನೆ ಮಾಡಿದನು. (ಮತ್ತಾ. 26:39, 42) ಆತನು ‘ಅವಮಾನವನ್ನು ಅಲಕ್ಷ್ಯಮಾಡಿ ಯಾತನಾ ಕಂಬವನ್ನು ಸಹಿಸಿಕೊಂಡನು.’ ಯಾಕೆಂದರೆ ಆತನಿಗೆ ತನ್ನ ತಂದೆಯ ಮೆಚ್ಚುಗೆ ಬೇಕಾಗಿತ್ತು, ಈ ಲೋಕದ ಮೆಚ್ಚುಗೆ ಬೇಕಾಗಿರಲಿಲ್ಲ. (ಇಬ್ರಿ. 12:2) ಯೆಹೋವನು ಯೇಸುವಿಗೆ ಯಾವ ಪ್ರತಿಫಲ ಕೊಟ್ಟನು?

17 ಯೇಸು ಭೂಮಿಯಲ್ಲಿದ್ದಾಗ, ತಾನು ಸ್ವರ್ಗದಲ್ಲಿ ತಂದೆಯೊಂದಿಗೆ ಇದ್ದ ಸಮಯದಲ್ಲಿ ಯಾವ ಮಹಿಮೆ ಇತ್ತೋ ಅಷ್ಟೇ ಸಿಕ್ಕಿದರೆ ಸಾಕು ಎಂದು ಪ್ರಾರ್ಥಿಸಿದನು. (ಯೋಹಾ. 17:5) ಮೊದಲಿದ್ದ ಗೌರವಕ್ಕಿಂತ ಹೆಚ್ಚಿನ ಗೌರವ ಸಿಗಬೇಕೆಂದು ಯೇಸು ಬಯಸಿದನೆಂದು ನಾವು ಬೈಬಲಿನಲ್ಲಿ ಎಲ್ಲೂ ಓದುವುದಿಲ್ಲ. ಭೂಮಿಯ ಮೇಲೆ ಯೆಹೋವನ ಚಿತ್ತವನ್ನು ಮಾಡಿದ್ದಕ್ಕೆ ವಿಶೇಷ ಸುಯೋಗಗಳು ಸಿಗಬೇಕೆಂದು ಆತನು ಬಯಸಲಿಲ್ಲ. ಆದರೆ ಯೆಹೋವನು ಏನು ಮಾಡಿದನು? ಯಾರೂ ನೆನಸಿರದ ರೀತಿಯಲ್ಲಿ ಯೇಸುವಿಗೆ ತನ್ನ ಮೆಚ್ಚುಗೆಯನ್ನು ತೋರಿಸಿದನು. ಯೇಸುವನ್ನು ಪುನರುತ್ಥಾನಗೊಳಿಸಿದಾಗ ಯೆಹೋವನು ಆತನಿಗೆ ಸ್ವರ್ಗದಲ್ಲಿ “ಉನ್ನತವಾದ ಸ್ಥಾನ” ಕೊಟ್ಟನು. ಆತನು ಯೇಸುವಿಗೆ ಅಮರ ಆತ್ಮಜೀವವನ್ನೂ ಕೊಟ್ಟನು. ಈ ಬಹುಮಾನ ಯೇಸುವಿಗಿಂತ ಮುಂಚೆ ಬೇರೆ ಯಾರಿಗೂ ಸಿಕ್ಕಿರಲಿಲ್ಲ. b (ಫಿಲಿ. 2:9; 1 ತಿಮೊ. 6:16) ಯೇಸುವಿನ ನಂಬಿಗಸ್ತ ಸೇವೆಗೆ ಯೆಹೋವನು ಎಷ್ಟು ಅದ್ಭುತವಾದ ಆಶೀರ್ವಾದ ಕೊಟ್ಟನು!

18. ನಾವು ಈ ಲೋಕದ ಮೆಚ್ಚುಗೆಯನ್ನಲ್ಲ ಯೆಹೋವನ ಮೆಚ್ಚುಗೆಯನ್ನು ಪಡೆಯುವುದರ ಮೇಲೆ ಗಮನವಿಡಲು ಯಾವುದು ಸಹಾಯ ಮಾಡುತ್ತದೆ?

18 ನಾವು ಈ ಲೋಕದ ಮೆಚ್ಚುಗೆಯನ್ನಲ್ಲ ಯೆಹೋವನ ಮೆಚ್ಚುಗೆಯನ್ನು ಪಡೆಯುವುದರ ಮೇಲೆ ಗಮನವಿಡಲು ಯಾವುದು ಸಹಾಯ ಮಾಡುತ್ತದೆ? ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಮೆಚ್ಚದೆ ಬಿಡುವುದಿಲ್ಲ ಮತ್ತು ಹೆಚ್ಚಾಗಿ ಅವರು ನೆನಸಿರದ ರೀತಿಯಲ್ಲಿ ಪ್ರತಿಫಲ ಕೊಡುತ್ತಾನೆ ಅನ್ನುವ ಸತ್ಯಾಂಶಗಳನ್ನು ಮನಸ್ಸಲ್ಲಿಡಬೇಕು. ಮುಂದೆ ನಮಗೆ ಯಾವೆಲ್ಲಾ ಆಶೀರ್ವಾದಗಳು ಸಿಗಲಿವೆಯೋ ಏನೋ? ಆದರೆ ಈಗ ಈ ದುಷ್ಟ ಲೋಕದಲ್ಲಿ ನಾವು ಅನೇಕ ಕಷ್ಟ ತೊಂದರೆಗಳನ್ನು ಎದುರಿಸಬೇಕಾಗಿದೆ. ಇದೆಲ್ಲಾ ಬೇಗ ಹಿಂದಿನ ಕಾಲದ ವಿಷಯವಾಗಿಬಿಡುತ್ತದೆ ಅನ್ನುವುದನ್ನು ಮರೆಯಬೇಡಿ. ಈ ಲೋಕದಿಂದ ಸಿಗುವ ಯಾವುದೇ ಮನ್ನಣೆ ಮಣ್ಣಿಗೆ ಸೇರುತ್ತದೆ. (1 ಯೋಹಾ. 2:17) ಆದರೆ ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮ್ಮ ಕೆಲಸವನ್ನು ಮತ್ತು ಆತನ ಹೆಸರಿಗಾಗಿ ನಾವು ತೋರಿಸಿದ ಪ್ರೀತಿಯನ್ನು ಮರೆಯಲ್ಲ. ಯಾಕೆಂದರೆ ಆತನು “ಅನೀತಿವಂತನಲ್ಲ.” (ಇಬ್ರಿ. 6:10) ಆತನು ಖಂಡಿತ ನಮ್ಮನ್ನು ಮೆಚ್ಚುತ್ತಾನೆ, ನಾವು ನೆನಸಿರದ ರೀತಿಯಲ್ಲಿ ನಮ್ಮನ್ನು ಮಾನ್ಯಮಾಡುತ್ತಾನೆ.

a ಬೇರೆ ಬೈಬಲ್‌ ಭಾಷಾಂತರಗಳು “ದರಿದ್ರ” ಎಂಬ ಪದಕ್ಕೆ “ಕೆಲಸಕ್ಕೆ ಬಾರದ” “ದಿವಾಳಿಯಾದ” “ಗತಿ ಇಲ್ಲದ” “ಹೀನವಾದ” ಎಂಬ ಪದಗಳನ್ನು ಬಳಸಿವೆ.

b ಹೀಬ್ರು ಶಾಸ್ತ್ರಗ್ರಂಥದಲ್ಲಿ ಅಮರತ್ವದ ಬಗ್ಗೆ ತಿಳಿಸಿಲ್ಲದ ಕಾರಣ ಯೇಸುವಿಗೆ ಈ ಬಹುಮಾನ ಸಿಗುತ್ತದೆಂದು ಯಾರೂ ನೆನಸಿರಲಿಕ್ಕಿಲ್ಲ.