ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಗೀತೆ 91 ನನ್ನ ಪಿತ, ನನ್ನ ದೇವ ಮತ್ತು ಮಿತ್ರ

ಯೆಹೋವ ತೋರಿಸೋ ಕೋಮಲ ಮಮತೆ

ಯೆಹೋವ ತೋರಿಸೋ ಕೋಮಲ ಮಮತೆ

“ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ.”ಯಾಕೋ. 5:11.

ಈ ಲೇಖನದಲ್ಲಿ ಏನಿದೆ?

ಯೆಹೋವ ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದನ್ನ ತಿಳ್ಕೊಂಡಾಗ ನಾವು ಆತನಿಗೆ ಹತ್ರ ಆಗ್ತೀವಿ. ಯಾವುದಕ್ಕೂ ಭಯ ಪಡಲ್ಲ. ಆತನು ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಿದ್ದಾನೆ ಅಂತ ಅರ್ಥಮಾಡ್ಕೊಳ್ತೀವಿ ಮತ್ತು ಹೊಸಬಲ ಪಡ್ಕೊಳ್ತೀವಿ.

1. ಯೆಹೋವನ ಬಗ್ಗೆ ಯೋಚ್ನೆ ಮಾಡಿದಾಗ ನಿಮ್ಮ ಮನಸ್ಸಿಗೆ ಏನು ಬರುತ್ತೆ?

 ಯೆಹೋವ ನೋಡೋಕೆ ಹೇಗಿದ್ದಾನೆ ಅಂತ ನೀವು ಯಾವತ್ತಾದ್ರೂ ಯೋಚ್ನೆ ಮಾಡಿದ್ದೀರಾ? ನೀವು ಪ್ರಾರ್ಥನೆಯಲ್ಲಿ ಆತನ ಹತ್ರ ಮಾತಾಡುವಾಗ ನಿಮ್ಮ ಮನಸ್ಸಿಗೆ ಏನು ಬರುತ್ತೆ? ಯೆಹೋವ ನಮ್ಮ ಕಣ್ಣಿಗೆ ಕಾಣಲ್ಲ ನಿಜ. ಆದ್ರೆ ಆತನು “ನಮ್ಮ ಸೂರ್ಯ, ನಮ್ಮ ಗುರಾಣಿ” ಮತ್ತು “ಸುಟ್ಟು ಬೂದಿ ಮಾಡೋ ಬೆಂಕಿ” ಅಂತ ಬೈಬಲ್‌ ಹೇಳುತ್ತೆ. (ಕೀರ್ತ. 84:11; ಇಬ್ರಿ. 12:29) ಅಷ್ಟೇ ಅಲ್ಲ ಯೆಹೆಜ್ಕೇಲ ಆತನನ್ನ ನೀಲಮಣಿ, ಪಳಪಳ ಅಂತ ಹೊಳಿಯೋ ಚಿನ್ನಬೆಳ್ಳಿ ಮತ್ತು ಮಳೆಬಿಲ್ಲು ಅಂತ ವರ್ಣಿಸ್ತಾನೆ. (ಯೆಹೆ. 1:26-28) ಇದನ್ನ ಕೇಳಿದಾಗ ನಿಮಗೇನು ಅನಿಸುತ್ತೆ? ಯೆಹೋವನ ಮೇಲೆ ಭಯ ಭಕ್ತಿ ಜಾಸ್ತಿ ಆಗುತ್ತಾ? ಆತನ ಮುಂದೆ ನಾವು ಏನೇನೂ ಅಲ್ಲ ಅಂತ ಅನಿಸುತ್ತಾ?

2. ಯೆಹೋವನಿಗೆ ಹತ್ರ ಆಗೋಕೆ ನಮಗೆ ಯಾಕೆ ಕಷ್ಟ ಆಗಬಹುದು?

2 ಯೆಹೋವನನ್ನ ನಾವು ನೋಡೋಕೆ ಆಗದೆ ಇರೋದ್ರಿಂದ ಆತನು ನಮ್ಮನ್ನ ಪ್ರೀತಿಸ್ತಾನೆ ಅಂತ ನಂಬೋಕೆ ನಮಗೆ ಕಷ್ಟ ಆಗಬಹುದು. ಕೆಲವ್ರಿಗೆ ತಮ್ಮ ಜೀವನದಲ್ಲಿ ನಡೆದಿರೋ ಕಹಿ ಘಟನೆಗಳಿಂದ ಅಥವಾ ಅವ್ರ ಅಪ್ಪ ಅವ್ರಿಗೆ ಪ್ರೀತಿ ತೋರಿಸದೇ ಇರೋದ್ರಿಂದ ಯೆಹೋವನ ಪ್ರೀತಿಯನ್ನ ಅರ್ಥಮಾಡ್ಕೊಳ್ಳೋಕೆ ಆಗದೆ ಇರಬಹುದು. ಇದು ಯೆಹೋವನಿಗೆ ಚೆನ್ನಾಗಿ ಗೊತ್ತು. ಆತನಿಗೆ ಹತ್ರ ಆಗೋಕೆ ನಮಗ್ಯಾಕೆ ಆಗ್ತಿಲ್ಲ ಅಂತಾನೂ ಅರ್ಥ ಮಾಡ್ಕೊಳ್ತಾನೆ. ಅದಕ್ಕೇ ಆತನು ತನ್ನ ಬಗ್ಗೆ ಬೈಬಲಿನಲ್ಲಿ ಬರೆಸಿಟ್ಟಿದ್ದಾನೆ. ಅದನ್ನ ನಾವು ತಿಳ್ಕೊಬೇಕು ಅಂತ ಇಷ್ಟಪಡ್ತಾನೆ.

3. ಯೆಹೋವ ತೋರಿಸೋ ಪ್ರೀತಿ ಬಗ್ಗೆ ನಾವ್ಯಾಕೆ ತಿಳ್ಕೊಬೇಕು?

3 ಒಂದೇ ಮಾತಲ್ಲಿ ಹೇಳೋದಾದ್ರೆ ಯೆಹೋವ ಪ್ರೀತಿಯಾಗಿದ್ದಾನೆ. (1 ಯೋಹಾ. 4:8) ಆತನು ಏನೇ ಮಾಡಿದ್ರು ಅದನ್ನ ಪ್ರೀತಿಯಿಂದ ಮಾಡ್ತಾನೆ. ತನ್ನನ್ನ ಇಷ್ಟಪಡದೇ ಇರೋರನ್ನೂ ಆತನು ಪ್ರೀತಿಸ್ತಾನೆ. (ಮತ್ತಾ. 5:44, 45) ಹಾಗಾಗಿ ಈ ಲೇಖನದಲ್ಲಿ, ಯೆಹೋವನ ಬಗ್ಗೆ ಮತ್ತು ಆತನು ತೋರಿಸಿರೋ ಪ್ರೀತಿ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಣ. ಆಗ ನಮಗೆ ಆತನ ಮೇಲಿರೋ ಪ್ರೀತಿ ಜಾಸ್ತಿಯಾಗುತ್ತೆ.

ಯೆಹೋವನಿಗೆ ನಾವಂದ್ರೆ ಪಂಚಪ್ರಾಣ

4. ಯೆಹೋವ ತೋರಿಸೋ ಕೋಮಲ ಮಮತೆ ಹೇಗಿರುತ್ತೆ? (ಚಿತ್ರನೂ ನೋಡಿ.)

4 “ಯೆಹೋವ ದೇವರು ಕೋಮಲ ಮಮತೆ ತೋರಿಸ್ತಾನೆ.” (ಯಾಕೋ. 5:11) ಆತನು ತನ್ನನ್ನ ಒಬ್ಬ ತಾಯಿಗೆ ಹೋಲಿಸ್ಕೊಂಡಿದ್ದಾನೆ. (ಯೆಶಾ. 66:12, 13) ಒಬ್ಬ ತಾಯಿ ತನ್ನ ಪುಟ್ಟ ಕಂದಮ್ಮನನ್ನ ತುಂಬ ಪ್ರೀತಿಸ್ತಾಳೆ. ತನ್ನ ಮಡಿಲಿನ ಮೇಲೆ ಕೂರಿಸ್ಕೊಂಡು ಆಡಿಸ್ತಾಳೆ, ಪ್ರೀತಿಯಿಂದ ಮಾತಾಡಿಸ್ತಾಳೆ. ಆ ಮಗು ಅಳ್ತಿದ್ರೆ, ಏನಾದ್ರೂ ನೋವಾದ್ರೆ ಅದಕ್ಕೆ ಏನು ಬೇಕೋ ಅದನ್ನ ತಂದು ಕೊಡ್ತಾಳೆ. ಯೆಹೋವ ಕೂಡ ಒಬ್ಬ ತಾಯಿ ತರ, ನಾವು ನೋವಲ್ಲಿ ಇದ್ದಾಗ ನಮಗೆ ಪ್ರೀತಿ ತೋರಿಸ್ತಾನೆ. ಅದಕ್ಕೆ ಒಬ್ಬ ಕೀರ್ತನೆಗಾರ, “ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ, ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ” ಅಂತ ಬರೆದ.—ಕೀರ್ತ. 94:19.

“ತಾಯಿ ತನ್ನ ಮಗನನ್ನ ಸಂತೈಸೋ ತರ ನಾನು ನಿಮ್ಮನ್ನ ಸಂತೈಸ್ತಾ ಇರ್ತಿನಿ” (ಪ್ಯಾರ 4 ನೋಡಿ)


5. ಯೆಹೋವ ನಿಮಗೆ ಶಾಶ್ವತ ಪ್ರೀತಿಯನ್ನ ಹೇಗೆ ತೋರಿಸ್ತಾನೆ?

5 ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ. (ಕೀರ್ತ. 103:8) ನಾವೇನಾದ್ರೂ ತಪ್ಪು ಮಾಡಿದಾಗ ತಕ್ಷಣ ನಮ್ಮನ್ನ ಬಿಟ್ಟುಬಿಡಲ್ಲ. ಇಸ್ರಾಯೇಲ್ಯರು ಕೂಡ ಪದೇಪದೇ ಯೆಹೋವನ ಮನಸ್ಸನ್ನ ನೋಯಿಸ್ತಿದ್ರು. ಆದ್ರೆ ಅವರು ತಿದ್ಕೊಂಡು ಬದಲಾದಾಗ ಯೆಹೋವ ಅವ್ರನ್ನ ಮತ್ತೆ ಮುಂಚಿನ ತರಾನೇ ಪ್ರೀತಿಸಿದನು. “ನೀನು ನನ್ನ ದೃಷ್ಟಿಯಲ್ಲಿ ತುಂಬ ಅಮೂಲ್ಯ, ನಾನು ನಿನ್ನನ್ನ ಗೌರವಿಸಿದ್ದೀನಿ, ಪ್ರೀತಿಸಿದ್ದೀನಿ” ಅಂತ ಹೇಳಿದನು. (ಯೆಶಾ. 43:4, 5) ಯೆಹೋವ ಈಗ್ಲೂ ಬದಲಾಗಿಲ್ಲ, ನಾವು ದೊಡ್ಡ ತಪ್ಪು ಮಾಡಿದ ತಕ್ಷಣ ಆತನು ನಮ್ಮ ಕೈ ಬಿಟ್ಟುಬಿಡಲ್ಲ. ನಾವು ಪಶ್ಚಾತ್ತಾಪಪಟ್ಟು ವಾಪಸ್‌ ಬಂದ್ರೆ ಆತನು ನಮ್ಮನ್ನ ಮತ್ತೆ ಪ್ರೀತಿಸ್ತಾನೆ, “ಉದಾರವಾಗಿ ಕ್ಷಮಿಸ್ತಾನೆ.” (ಯೆಶಾ. 55:7) ಯೆಹೋವ ನಮ್ಮನ್ನ ಈ ರೀತಿ ಕ್ಷಮಿಸಿದಾಗ ನಮಗೆ “ನೆಮ್ಮದಿ” ಸಿಗುತ್ತೆ.—ಅ. ಕಾ. 3:19.

6. ಜೆಕರ್ಯ 2:8ರಿಂದ ಯೆಹೋವನ ಬಗ್ಗೆ ನಮಗೇನು ಗೊತ್ತಾಗುತ್ತೆ?

6 ಜೆಕರ್ಯ 2:8 ಓದಿ. ಯೆಹೋವ ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ನಮ್ಮ ಭಾವನೆಗಳನ್ನ ಚೆನ್ನಾಗಿ ಅರ್ಥಮಾಡ್ಕೊಳ್ತಾನೆ. ನಮ್ಮನ್ನ ಕಾಪಾಡೋಕೆ ತುದಿಗಾಲಲ್ಲಿ ನಿಂತಿರ್ತಾನೆ. ನಮಗೇನಾದ್ರೂ ನೋವಾದ್ರೆ, ಆತನಿಗೂ ನೋವಾಗುತ್ತೆ. ಹಾಗಾಗಿ ನಾವು “ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು” ಅಂತ ಬೇಡ್ಕೊಂಡಾಗ ಆತನು ಖಂಡಿತ ಕಾಪಾಡ್ತಾನೆ. (ಕೀರ್ತ. 17:8) ನಮ್ಮ ದೇಹದಲ್ಲಿ ಕಣ್ಣು ತುಂಬ ಸೂಕ್ಷ್ಮ ಮತ್ತು ಅದು ತುಂಬ ಅಮೂಲ್ಯ. ಯೆಹೋವ ನಮ್ಮನ್ನ ತನ್ನ ಕಣ್ಣಗುಡ್ಡೆಗೆ ಹೋಲಿಸಿದ್ದಾನೆ. ಹಾಗಾಗಿ ಯಾರಾದ್ರೂ ನಮಗೆ ತೊಂದ್ರೆ ಮಾಡಿದ್ರೆ ಯೆಹೋವನಿಗೆ ತುಂಬ ನೋವಾಗುತ್ತೆ. ಯಾಕಂದ್ರೆ ನಾವು ಆತನಿಗೆ ತುಂಬ ಅಮೂಲ್ಯರಾಗಿದ್ದೀವಿ.

7. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ನಾವ್ಯಾಕೆ ಅರ್ಥಮಾಡ್ಕೊಬೇಕು?

7 ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ನಾವು ಅರ್ಥಮಾಡ್ಕೊಬೇಕು ಅನ್ನೋದು ಆತನ ಆಸೆ. ಆದ್ರೆ ನಿಮ್ಮ ಜೀವನದಲ್ಲಿ ನಡೆದಿರೋ ಕಹಿ ಘಟನೆಗಳಿಂದಾನೋ ಅಥವಾ ನೀವೀಗ ಅನುಭವಿಸ್ತಿರೋ ಕಷ್ಟಗಳಿಂದಾನೋ ಯೆಹೋವ ‘ನನ್ನನ್ನ ಪ್ರೀತಿಸ್ತಾನಾ, ಇಲ್ವಾ’ ಅಂತ ನಿಮಗೆ ಅನಿಸಬಹುದು. ಆದ್ರೆ ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ. ಅದನ್ನ ಹೇಗೆ ನಂಬಬಹುದು? ಆತನು ಯೇಸುಗೆ, ಅಭಿಷಿಕ್ತರಿಗೆ ಮತ್ತು ನಮ್ಮೆಲ್ರಿಗೂ ಹೇಗೆ ಪ್ರೀತಿ ತೋರಿಸಿದ್ದಾನೆ ಅಂತ ತಿಳ್ಕೊಂಡ್ರೆ ಆ ಪ್ರಶ್ನೆಗೆ ಉತ್ರ ಸಿಗುತ್ತೆ.

ಯೆಹೋವ ಹೇಗೆ ಪ್ರೀತಿ ತೋರಿಸ್ತಾನೆ?

8. ಯೆಹೋವ ತನ್ನನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ಯೇಸುಗೆ ಯಾಕಿತ್ತು?

8 ಯೆಹೋವ ಮತ್ತು ಯೇಸು ಮಧ್ಯ ಇರೋ ಪ್ರೀತಿ ನಿನ್ನೆ ಮೊನ್ನೆಯಿಂದ ಬಂದಿದ್ದಲ್ಲ. ಕೊಟ್ಯಾಂತರ ವರ್ಷಗಳಿಂದ ಇದೆ. ಅವರು ಒಬ್ರನ್ನೊಬ್ರು ತುಂಬ ಪ್ರೀತಿಸ್ತಾರೆ. ಯೆಹೋವ ಯೇಸುನ ತುಂಬ ಪ್ರೀತಿಸ್ತಾನೆ. ಅದನ್ನ ನಾವು ಹೇಗೆ ಹೇಳಬಹುದು? ಮತ್ತಾಯ 17:5ರಲ್ಲಿ “ಇವನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ” ಅಂತಷ್ಟೇ ಹೇಳದೇ “ಇವನು ನನ್ನ ಪ್ರೀತಿಯ ಮಗ” ಅಂತಾನೂ ಹೇಳಿದನು. ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೆಹೋವನಿಗೆ ಯೇಸು ಮೇಲೆ ತುಂಬ ಪ್ರೀತಿ ಇತ್ತು. ಅದ್ರಲ್ಲೂ ಯೇಸು ತನ್ನ ಜೀವ ಕೊಡೋಕೆ ಮುಂದೆ ಬಂದಿದ್ದನ್ನ ನೋಡಿದಾಗ ಯೆಹೋವನಿಗೆ ಆತನ ಬಗ್ಗೆ ಹೆಮ್ಮೆ ಅನಿಸ್ತು. (ಎಫೆ. 1:7) ಯೆಹೋವ ತನ್ನನ್ನ ಪ್ರೀತಿಸ್ತಾನೆ ಅನ್ನೋದು ಯೇಸುಗೆ ಗೊತ್ತಿತ್ತು. ಅದಕ್ಕೇ ಆತನು ಭೂಮಿಯಲ್ಲಿ ಇದ್ದಾಗ ಅದ್ರ ಬಗ್ಗೆ ತುಂಬ ಸಲ ಹೇಳಿದನು.—ಯೋಹಾ. 3:35; 10:17; 17:24.

9. ಅಭಿಷಿಕ್ತರನ್ನ ಕಂಡ್ರೆ ಯೆಹೋವನಿಗೆ ತುಂಬಾ ಇಷ್ಟ ಅಂತ ನಾವು ಹೇಗೆ ಹೇಳಬಹುದು? ವಿವರಿಸಿ. (ರೋಮನ್ನರಿಗೆ 5:5)

9 ಅಭಿಷಿಕ್ತರನ್ನೂ ‘ನಾನು ಪ್ರೀತಿಸ್ತೀನಿ’ ಅಂತ ಯೆಹೋವ ಹೇಳಿದ್ದಾನೆ. (ರೋಮನ್ನರಿಗೆ 5:5 ಓದಿ.) ಈ ವಚನದಲ್ಲಿ “ಸುರಿದಿದ್ದಾನೆ” ಅಂತ ಇದೆ. ಆ ಪದಕ್ಕೆ ಸ್ವಲ್ಪ ಗಮನ ಕೊಡಿ. ಒಂದು ರೆಫರೆನ್ಸ್‌ ಈ ಪದನ “ನದಿ ತರ ಹರಿದು ಬರೋದು” ಅಂತ ವರ್ಣಿಸುತ್ತೆ. ಇದ್ರಿಂದ ಯೆಹೋವ ದೇವರಿಗೆ ಅಭಿಷಿಕ್ತರ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತೆ. ಅಭಿಷಿಕ್ತರಿಗೂ “ದೇವರು ಅವ್ರನ್ನ ಪ್ರೀತಿಸ್ತಾನೆ” ಅಂತ ಚೆನ್ನಾಗಿ ಗೊತ್ತು. (ಯೂದ 1) ಅದಕ್ಕೇ ಯೋಹಾನ “ದೇವರು ನಮಗೆ ಎಂಥ ಪ್ರೀತಿ ತೋರಿಸಿದ್ದಾನೆ ಅಂತ ನೋಡಿ. ದೇವರ ಮಕ್ಕಳು ಅಂತ ಕರಿಸ್ಕೊಳ್ಳೋ ಸುಯೋಗವನ್ನ ನಮಗೆ ಕೊಟ್ಟಿದ್ದಾನೆ” ಅಂತ ಬರೆದ. (1 ಯೋಹಾ. 3:1) ಆದ್ರೆ ಯೆಹೋವ ಅಭಿಷಿಕ್ತರನ್ನ ಮಾತ್ರ ಪ್ರೀತಿಸ್ತಾನಾ? ಇಲ್ಲ, ನಮ್ಮೆಲ್ರನ್ನೂ ಪ್ರೀತಿಸ್ತಾನೆ.

10. ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಬಹುದು?

10 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಬಹುದು? ಆತನು ನಮಗೋಸ್ಕರ ಬಿಡುಗಡೆ ಬೆಲೆಯ ಏರ್ಪಾಡು ಮಾಡಿದ್ದಾನೆ. ಇಂಥ ಪ್ರೀತಿನ ಬೇರೆ ಯಾರಿಂದನೂ ತೋರಿಸೋಕಾಗಲ್ಲ. (ಯೋಹಾ. 3:16; ರೋಮ. 5:8) ನಮ್ಮ ಪಾಪಗಳಿಗೆ ಕ್ಷಮೆ ಸಿಗೋಕೆ ಮತ್ತು ಯೆಹೋವನ ಫ್ರೆಂಡ್‌ ಆಗೋಕೆ ಆತನು ತನ್ನ ಒಬ್ಬನೇ ಮಗನನ್ನ ಕೊಟ್ಟನು. (1 ಯೋಹಾ. 4:10) ಯೆಹೋವ ಮತ್ತು ಯೇಸು ನಮಗೋಸ್ಕರ ಎಷ್ಟು ದೊಡ್ಡ ಬೆಲೆ ಕೊಟ್ಟಿದ್ದಾರೆ ಅಂತ ಯೋಚಿಸುವಾಗ ಅವ್ರಿಬ್ರೂ ನಮ್ಮನ್ನ ಎಷ್ಟು ಪ್ರೀತಿಸ್ತಾರೆ ಅಂತ ಅರ್ಥ ಆಗುತ್ತೆ. (ಗಲಾ. 2:20) ಯೆಹೋವ ಬಿಡುಗಡೆ ಬೆಲೆಯ ಏರ್ಪಾಡನ್ನ ಸುಮ್ನೆ ಕೊಡಬೇಕು ಅಂತನೋ ಅಥವಾ ನಮಗೆ ನ್ಯಾಯ ಕೊಡಿಸಬೇಕು ಅಂತಾನೋ ಕೊಡಲಿಲ್ಲ. ಬದಲಿಗೆ ನಮ್ಮ ಮೇಲೆ ತುಂಬ ಪ್ರೀತಿ ಇದ್ದಿದ್ರಿಂದಾನೇ ಇದನ್ನ ಒಂದು ಗಿಫ್ಟಾಗಿ ಕೊಟ್ಟನು. ಯೆಹೋವನಿಗೆ ಯೇಸು ಅಂದ್ರೆ ಪಂಚಪ್ರಾಣ. ಆದ್ರೂ ಆತನನ್ನ ಸಾಯೋಕೆ ಬಿಟ್ಟುಕೊಟ್ಟು ಒಂದು ದೊಡ್ಡ ತ್ಯಾಗ ಮಾಡಿದನು.

11. ಯೆರೆಮೀಯ 31:3ರಿಂದ ನಮಗೇನು ಗೊತ್ತಾಗುತ್ತೆ?

11 ಯೆಹೋವ ನಮ್ಮನ್ನ ತುಂಬ ಪ್ರೀತಿಸ್ತಾನೆ. ಆ ಪ್ರೀತಿನ ತನ್ನ ಮನಸ್ಸಲ್ಲಿ ಇಟ್ಕೊಳ್ಳದೆ ಅದನ್ನ ತೋರಿಸಿದ್ದಾನೆ. (ಯೆರೆಮೀಯ 31:3 ಓದಿ.) ಆತನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದಾನೇ ತನ್ನ ಹತ್ರ ನಮ್ಮನ್ನ ಸೆಳೆದಿದ್ದಾನೆ. (ಧರ್ಮೋಪದೇಶಕಾಂಡ 7:7, 8 ಹೋಲಿಸಿ.) ನಮ್ಮನ್ನ ಯೆಹೋವನ ಪ್ರೀತಿಯಿಂದ ದೂರ ಮಾಡೋಕೆ ಯಾವುದ್ರಿಂದನೂ, ಯಾರಿಂದನೂ ಆಗಲ್ಲ. (ರೋಮ. 8:38, 39) ಇದನ್ನ ತಿಳ್ಕೊಂಡಾಗ ನಿಮಗೆ ಹೇಗೆ ಅನಿಸುತ್ತೆ? ಯೆಹೋವನ ಪ್ರೀತಿ ಬಗ್ಗೆ ದಾವೀದನಿಗೆ ಹೇಗೆ ಅನಿಸ್ತು ಅಂತ ಕೀರ್ತನೆ 23ರಲ್ಲಿ ಇದೆ. ಅದನ್ನ ಓದಿದಾಗ ನಮಗೂ ಅವನ ತರಾನೇ ಅನಿಸುತ್ತೆ.

ಯೆಹೋವ ಪ್ರೀತಿ ತೋರಿಸುವಾಗ ನಿಮಗೆ ಹೇಗೆ ಅನಿಸುತ್ತೆ?

12. ಕೀರ್ತನೆ 23ರಲ್ಲಿ ಏನಿದೆ?

12 ಕೀರ್ತನೆ 23:1-6 ಓದಿ. ದಾವೀದನಿಗೆ ಯೆಹೋವ ತನ್ನನ್ನ ಪ್ರೀತಿಸ್ತಾನೆ, ಚೆನ್ನಾಗಿ ನೋಡ್ಕೊಳ್ತಾನೆ ಅಂತ ಗೊತ್ತಿತ್ತು. ಯೆಹೋವನ ಜೊತೆಗಿರೋ ತನ್ನ ಫ್ರೆಂಡ್‌ಶಿಪ್‌ ಬಗ್ಗೆ ಅವನು ಕೀರ್ತನೆ 23ರಲ್ಲಿ ಚೆನ್ನಾಗಿ ವರ್ಣಿಸಿದ್ದಾನೆ. ಅಲ್ಲಿ ಅವನು ಆತನನ್ನ ತನ್ನ ಕುರುಬ ಅಂತ ಕರೆದಿದ್ದಾನೆ. ಯೆಹೋವ ಹೇಳೋ ತರ ನಡ್ಕೊಂಡ್ರೆ ‘ಖುಷಿಯಾಗಿ ಇರ್ತೀನಿ ಸುರಕ್ಷಿತವಾಗಿ ಇರ್ತೀನಿ’ ಅಂತ ದಾವೀದನಿಗೆ ಗೊತ್ತಿತ್ತು. ಅದಕ್ಕೇ ಅವನು ಯಾವಾಗ್ಲೂ ಯೆಹೋವನ ಮಾತನ್ನ ಕೇಳ್ತಿದ್ದ. ಕೊನೆ ಉಸಿರಿರೋ ತನಕ ತನ್ನನ್ನ ಯೆಹೋವ ಪ್ರೀತಿಸ್ತಾನೆ ಅನ್ನೋ ಗ್ಯಾರಂಟಿನೂ ಅವನಿಗಿತ್ತು. ಯಾಕಷ್ಟು ಗ್ಯಾರಂಟಿ ಇತ್ತು?

13. ಯೆಹೋವ ತನ್ನನ್ನ ನೋಡ್ಕೊಳ್ತಾನೆ ಅನ್ನೋ ನಂಬಿಕೆ ದಾವೀದನಿಗೆ ಯಾಕಿತ್ತು?

13 “ನನಗೆ ಯಾವ ಕೊರತೆನೂ ಇರಲ್ಲ.” ದಾವೀದನಿಗೆ ಏನೆಲ್ಲಾ ಬೇಕಿತ್ತೋ ಅದನ್ನೆಲ್ಲ ಯೆಹೋವ ಕೊಟ್ಟನು. ಅದಕ್ಕೇ ಅವನು ಯೆಹೋವನನ್ನ ಒಬ್ಬ ಸ್ನೇಹಿತನಾಗಿ ನೋಡಿದ ಮತ್ತು ಆತನು ತನ್ನನ್ನ ಇಷ್ಟಪಡ್ತಾನೆ ಅಂತ ಅರ್ಥಮಾಡ್ಕೊಂಡ. ಅಷ್ಟೇ ಅಲ್ಲ ಅವನಿಗೆ, ಮುಂದೆ ಏನೇ ಆದ್ರೂ ಯೆಹೋವ ತನ್ನನ್ನ ನೋಡ್ಕೊಳ್ತಾನೆ, ತನ್ನನ್ನ ಪ್ರೀತಿಸ್ತಾನೆ ಅನ್ನೋ ನಂಬಿಕೆ ಇತ್ತು. ಈ ಭರವಸೆ ಇದ್ದಿದ್ದಕ್ಕೆ ಅವನು ಯಾವುದ್ರ ಬಗ್ಗೆನೂ ಚಿಂತೆ ಮಾಡದೆ ಖುಷಿಯಾಗಿ, ತೃಪ್ತಿಯಾಗಿ ಇರ್ತಿದ್ದ.—ಕೀರ್ತ. 16:11.

14. ಯೆಹೋವ ನಮ್ಮನ್ನ ಹೇಗೆಲ್ಲ ನೋಡ್ಕೊಳ್ತಾನೆ?

14 ಯೆಹೋವ ನಮ್ಮನ್ನೂ ಚೆನ್ನಾಗಿ ನೋಡ್ಕೊಳ್ತಾನೆ. ಕಷ್ಟಗಳು ಬಂದಾಗಂತೂ ಜಾಸ್ತಿ ಪ್ರೀತಿ ತೋರಿಸ್ತಾನೆ. ಕ್ಲೇರ್‌ a ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರು 20ಕ್ಕಿಂತ ಜಾಸ್ತಿ ವರ್ಷ ಬೆತೆಲಲ್ಲಿ ಸೇವೆ ಮಾಡಿದ್ರು. ಆದ್ರೆ ಒಂದ್ಸಲ ಅವ್ರಿಗೆ ಧಿಡೀರ್‌ ಅಂತ ಒಂದ್ರ ಮೇಲೊಂದು ಕಷ್ಟಗಳು ಬಂತು. ಅವ್ರ ಅಪ್ಪಂಗೆ ಲಕ್ವ ಹೊಡಿತು, ಅವ್ರ ತಂಗಿಗೆ ಬಹಿಷ್ಕಾರ ಆಯ್ತು, ಅವರು ಮಾಡ್ತಿದ್ದ ಒಂದು ಚಿಕ್ಕ ವ್ಯಾಪಾರನೂ ನಿಂತೋಯ್ತು, ಮನೆನೂ ಕಳ್ಕೊಂಡ್ರು. ಆಗ ಯೆಹೋವ ಅವ್ರನ್ನ ಹೇಗೆ ನೋಡ್ಕೊಂಡ? “ಪ್ರತಿದಿನ ನಮ್ಮ ಕುಟುಂಬಕ್ಕೆ ಏನು ಬೇಕಿತ್ತೋ ಅದನ್ನ ಯೆಹೋವ ಕೊಟ್ಟನು. ಎಷ್ಟೋ ಸಲ ನಾವು ಅಂದ್ಕೊಂಡಿದ್ದಕ್ಕಿಂತ ಜಾಸ್ತಿನೇ ಕೊಟ್ಟಿದ್ದಾನೆ! ಆಗ ಆತನು ತೋರಿಸಿದ ಪ್ರೀತಿನ ನಂಗೆ ಮರಿಯೋಕೇ ಆಗಲ್ಲ. ಈಗ್ಲೂ ನಾನು ಅದನ್ನ ನೆನಸ್ಕೊಂಡಾಗ ಎಷ್ಟೇ ಕಷ್ಟ ಬಂದ್ರೂ ಖುಷಿಖುಷಿಯಾಗಿ ಆತನ ಸೇವೆ ಮಾಡ್ಕೊಂಡು ಹೋಗೋಕೆ ಆಗ್ತಿದೆ” ಅಂತ ಕ್ಲೇರ್‌ ಹೇಳ್ತಾರೆ.

15. ದಾವೀದನಿಗೆ ಹೇಗೆ ಹೊಸಬಲ ಸಿಕ್ತು? (ಚಿತ್ರನೂ ನೋಡಿ.)

15 “ಆತನು ನನಗೆ ಹೊಸಬಲ ಕೊಡ್ತಾನೆ.” ದಾವೀದನಿಗೆ ಕಷ್ಟಗಳು, ಸಮಸ್ಯೆಗಳು ಬಂದಾಗ ಕೆಲವೊಂದು ಸಲ ಅವನು ಕುಗ್ಗಿಹೋದ. (ಕೀರ್ತ. 18:4-6) ಆಗ ಯೆಹೋವ ತೋರಿಸಿದ ಪ್ರೀತಿ, ಕಾಳಜಿ ಅವನಿಗೆ ಹೊಸಬಲ ಕೊಡ್ತು. ಅಷ್ಟೇ ಅಲ್ಲ ಯೆಹೋವ ಅವನನ್ನ “ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ” ಮತ್ತು “ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ” ನಡೆಸಿದನು. ಹೀಗೆ ಆತನು ದಾವೀದನಿಗೆ ಬೆನ್ನೆಲುಬಾಗಿ ನಿಂತು ತನ್ನ ಸೇವೆನ ಖುಷಿಖುಷಿಯಾಗಿ ಮಾಡೋಕೆ ಶಕ್ತಿ ಕೊಟ್ಟನು.—ಕೀರ್ತ. 18:28-32.

ದಾವೀದ ಅಲೆಮಾರಿಯಾಗಿ ಇದ್ದಾಗ್ಲೂ ಯೆಹೋವ ತೋರಿಸಿದ ಪ್ರೀತಿ ಮತ್ತು ಕಾಳಜಿ ಅವನಿಗೆ ಹೊಸಬಲ ಕೊಡ್ತು. (ಪ್ಯಾರ 15 ನೋಡಿ)


16. ಯೆಹೋವ ತೋರಿಸೋ ಪ್ರೀತಿಯಿಂದ ನಿಮಗೆ ಹೇಗೆ ಹೊಸಬಲ ಸಿಕ್ಕಿದೆ?

16 “ಯೆಹೋವ ಶಾಶ್ವತ ಪ್ರೀತಿ ತೋರಿಸಿದ್ರಿಂದಾನೇ” ಇವತ್ತು ನಮಗೂ ಕಷ್ಟಗಳನ್ನ ಸಹಿಸ್ಕೊಳ್ಳೋಕೆ ಆಗ್ತಿದೆ. (ಪ್ರಲಾ. 3:22; ಕೊಲೊ. 1:11) ರೇಚಲ್‌ ಅನ್ನೋ ಸಹೋದರಿಯ ಉದಾಹರಣೆ ನೋಡಿ, ಕೊರೋನ ಸಮಯದಲ್ಲಿ ಅವ್ರನ್ನ ಮತ್ತು ಯೆಹೋವನನ್ನ ಅವ್ರ ಗಂಡ ಬಿಟ್ಟು ಹೋದ್ರು. ಆಗ ಅವಳ ಎದೆನೇ ಒಡೆದು ಹೋಯ್ತು. ಯೆಹೋವ ಅವಳಿಗೆ ಹೇಗೆ ಸಹಾಯ ಮಾಡಿದನು? “ಸಹೋದರ ಸಹೋದರಿಯರಿಂದ ನಂಗೆ ಪ್ರೀತಿ ಸಿಗೋ ಹಾಗೆ ಮಾಡಿದನು. ಅವರು ನನ್ನ ಜೊತೆ ಯಾವಾಗ್ಲೂ ಸಮಯ ಕಳಿತಿದ್ರು, ಊಟ ತಂದು ಕೊಡ್ತಿದ್ರು, ಆಗಾಗ ಮೆಸೇಜ್‌ ಮಾಡ್ತಿದ್ರು, ವಚನಗಳನ್ನ ತೋರಿಸಿ ಸಮಾಧಾನ ಮಾಡ್ತಿದ್ರು. ಯೆಹೋವ ನನ್ನನ್ನ ಯಾವಾಗ್ಲೂ ನೋಡ್ಕೊಳ್ತಾನೆ ಅಂತ ಹೇಳಿ ಧೈರ್ಯ ತುಂಬ್ತಿದ್ರು, ನನ್ನ ಜೊತೆ ನಗುನಗ್ತಾ ಮಾತಾಡ್ತಿದ್ರು. ಈ ತರ ಪ್ರೀತಿಸೋ ಒಂದು ದೊಡ್ಡ ಕುಟುಂಬ ಕೊಟ್ಟಿದ್ದಕ್ಕೆ ನಾನು ಯೆಹೋವನಿಗೆ ಯಾವಾಗ್ಲೂ ಥ್ಯಾಂಕ್ಸ್‌ ಹೇಳ್ತೀನಿ” ಅಂತ ಸಹೋದರಿ ರೇಚಲ್‌ ಹೇಳ್ತಾಳೆ.

17. “ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ” ಅಂತ ದಾವೀದ ಯಾಕೆ ಹೇಳಿದ?

17 “ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ, ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ.” ದಾವೀದನಿಗೆ ತುಂಬ ಶತ್ರುಗಳು ಇದ್ದಿದ್ರಿಂದ ಅವನ ಜೀವ ಅಪಾಯದಲ್ಲಿತ್ತು. ಆದ್ರೆ ಯೆಹೋವ ಅವನನ್ನ ಪ್ರೀತಿಸಿದ್ರಿಂದ ತನ್ನನ್ನ ಕಾಪಾಡ್ತಾನೆ ಅನ್ನೋ ನಂಬಿಕೆ ಅವನಿಗಿತ್ತು. ಅದಕ್ಕೇ ಅವನು ನೆಮ್ಮದಿಯಿಂದ ಇದ್ದ. ಅಷ್ಟೇ ಅಲ್ಲ ಪ್ರತಿಕ್ಷಣನೂ ಯೆಹೋವ ತನ್ನ ಜೊತೆ ಇರ್ತಾನೆ, ತನ್ನನ್ನ ಕಾಪಾಡ್ತಾನೆ ಅನ್ನೋ ಭರವಸೆ ಅವನಿಗೆ ಇತ್ತು. ಅದಕ್ಕೇ ಅವನು “[ಯೆಹೋವ] ಎಲ್ಲ ಭಯಗಳಿಂದ ನನ್ನನ್ನ ಕಾಪಾಡಿದ” ಅಂತ ಹಾಡಿದ. (ಕೀರ್ತ. 34:4) ದಾವೀದನಿಗೆ ಭಯ ಇತ್ತು ನಿಜ, ಆದ್ರೆ ಯೆಹೋವನ ಪ್ರೀತಿ ಆ ಭಯದಿಂದ ಹೊರಗೆ ಬರೋಕೆ ಅವನಿಗೆ ಸಹಾಯ ಮಾಡ್ತು.   

18. ನಮಗೆ ಭಯ ಆದಾಗ ಯೆಹೋವನ ಪ್ರೀತಿಯನ್ನ ನೆನಸ್ಕೊಂಡ್ರೆ ಹೇಗೆ ಅನಿಸುತ್ತೆ?

18 ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಗೊತ್ತಾದಾಗ ನಮಗೂ ಶಕ್ತಿ ಸಿಗುತ್ತೆ. ಪಯನೀಯರ್‌ ಆಗಿರೋ ಸಹೋದರಿ ಸೂಸಿ ಅವ್ರ ಉದಾಹರಣೆ ನೋಡಿ. ಅವ್ರ ಮಗ ಆತ್ಮಹತ್ಯೆ ಮಾಡ್ಕೊಂಡ, ಆಗ ಅವ್ರಿಗೂ ಅವ್ರ ಗಂಡನಿಗೂ ತುಂಬಾನೇ ಬೇಜಾರಾಯ್ತು. “ಇಂಥ ಕಹಿ ಘಟನೆಗಳು ನಡೆದಾಗ ಅದನ್ನ ಮರೆಯೋಕೆ ತುಂಬ ಕಷ್ಟ ಆಗಿಬಿಡುತ್ತೆ. ಈ ತರ ಆಗುತ್ತೆ ಅಂತ ಕನಸು ಮನಸಲ್ಲೂ ನೆನಸಿರಲಿಲ್ಲ. ಮುಂದೆ ಏನೇನಾಗುತ್ತೋ ಅನ್ನೋ ಭಯನೂ ನನಗಿತ್ತು. ಆದ್ರೆ ಯೆಹೋವ ನಮಗೆ ಪ್ರೀತಿ, ಕೋಮಲ ಮಮತೆ ತೋರಿಸಿದನು. ಆಗ ಭಯದಿಂದ ಹೊರಗೆ ಬರೋಕೆ ಆಯ್ತು” ಅಂತ ಸೂಸಿ ಹೇಳ್ತಾರೆ. ಸಹೋದರಿ ರೇಚಲ್‌ಗೆ ಏನಾಯ್ತು ನೋಡಿ. “ಒಂದು ರಾತ್ರಿ ನಂಗೆ ತುಂಬ ಎದೆ ನೋವು ಬಂತು. ಆಗ ಏನಾಗುತ್ತೋ ಅಂತ ತುಂಬ ಹೆದರಿಕೊಂಡೆ. ಆಮೇಲೆ ಜೋರಾಗಿ ಅತ್ತು ಯೆಹೋವನಿಗೆ ಪ್ರಾರ್ಥಿಸಿದೆ. ತಕ್ಷಣ ಯೆಹೋವ ನಂಗೆ ಸಮಾಧಾನ ಮಾಡಿದನು. ಒಂದು ಮಗುಗೆ ಭಯ ಆದಾಗ ತಾಯಿ ಹೇಗೆ ಸಮಾಧಾನ ಮಾಡಿ ತಟ್ಟಿತಟ್ಟಿ ಮಲಗಿಸ್ತಾಳೋ ಹಾಗೇ ಯೆಹೋವ ನನಗೆ ಮಾಡಿದನು. ಆ ಕ್ಷಣನ ನನಗೆ ಯಾವತ್ತೂ ಮರಿಯೋಕೆ ಆಗಲ್ಲ” ಅಂತ ಸಹೋದರಿ ಹೇಳ್ತಾರೆ. ಟಿಮ್‌ ಅನ್ನೋ ಒಬ್ಬ ಹಿರಿಯ ಮಿಲಿಟರಿಗೆ ಸೇರಲಿಲ್ಲ. ಅದಕ್ಕೆ ಅಧಿಕಾರಿಗಳು ಅವನನ್ನ ನಾಲ್ಕು ವರ್ಷ ಜೈಲಿಗೆ ಹಾಕಿದ್ರು. ಆಗ ಯೆಹೋವ ಅವನಿಗೆ ಪ್ರೀತಿ ಮತ್ತು ಕಾಳಜಿಯನ್ನ ಹೇಗೆ ತೋರಿಸಿದನು? “ಯೆಹೋವ ನಂಗೆ ಬೇಕಾಗಿದ್ದನ್ನೆಲ್ಲ ಕೊಟ್ಟನು. ನಾನು ಅಂದ್ಕೊಂಡಿದ್ದಕ್ಕಿಂತ ತುಂಬ ಚೆನ್ನಾಗಿ ನೋಡ್ಕೊಂಡನು, ಪ್ರೀತಿಸಿದನು. ಇದ್ರಿಂದ ಆತನ ಮೇಲಿರೋ ನಂಬಿಕೆ ಜಾಸ್ತಿ ಆಯ್ತು. ಆತನು ಪವಿತ್ರಶಕ್ತಿ ಕೊಟ್ಟಿದ್ರಿಂದ ಜೈಲಲ್ಲೂ ಖುಷಿಯಾಗಿರೋಕೆ ಮತ್ತು ಅಲ್ಲೇ ನಾನು ರೆಗ್ಯುಲರ್‌ ಪಯನೀಯರಿಂಗ್‌ ಶುರು ಮಾಡೋಕೆ ಆಯ್ತು” ಅಂತ ಟಿಮ್‌ ಹೇಳ್ತಾನೆ.

ಕೋಮಲ ಮಮತೆ ತೋರಿಸೋ ಯೆಹೋವನಿಗೆ ಹತ್ರ ಆಗಿ

19. (ಎ) ಯೆಹೋವ ನಮ್ಮನ್ನ ಪ್ರೀತಿಸ್ತಾನೆ ಅಂತ ಗೊತ್ತಿದ್ರೆ ನಾವು ಹೇಗೆ ಪ್ರಾರ್ಥನೆ ಮಾಡ್ತೀವಿ? (ಬಿ) ಯೆಹೋವ ನಿಮಗೆ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ? (“ ಯೆಹೋವನ ಪ್ರೀತಿ ಸವಿದು ನೋಡೋಕೆ ಈ ಮಾತುಗಳು ಸಹಾಯ ಮಾಡುತ್ತೆ” ಅನ್ನೋ ಚೌಕ ನೋಡಿ.)

19 ನಾವು ಇಲ್ಲಿ ತನಕ ನೋಡಿದ ಉದಾಹರಣೆಗಳಿಂದ ಏನು ಗೊತ್ತಾಗುತ್ತೆ? ‘ಪ್ರೀತಿಯ ದೇವರಾದ’ ಯೆಹೋವ ನಮ್ಮ ಜೊತೆ ಯಾವಾಗ್ಲೂ ಇರ್ತಾನೆ ಅಂತ ಗೊತ್ತಾಗುತ್ತೆ. (2 ಕೊರಿಂ. 13:11) ಆತನು ನಮ್ಮಲ್ಲಿ ಒಬ್ಬೊಬ್ರ ಬಗ್ಗೆನೂ ಯೋಚ್ನೆ ಮಾಡ್ತಾನೆ. “ಆತನ ಶಾಶ್ವತ ಪ್ರೀತಿ” ನಮ್ಮ ಜೊತೆ ಯಾವಾಗ್ಲೂ ಇರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. (ಕೀರ್ತ. 32:10) ಆ ಪ್ರೀತಿ ಬಗ್ಗೆ ನಾವು ಜಾಸ್ತಿ ಯೋಚ್ನೆ ಮಾಡಿದಷ್ಟು ಆತನು ನಮ್ಮನ್ನ ಚೆನ್ನಾಗಿ ನೋಡ್ಕೊಳ್ತಾನೆ ಅನ್ನೋ ನಂಬಿಕೆ ಜಾಸ್ತಿ ಆಗುತ್ತೆ ಮತ್ತು ನಾವು ಆತನಿಗೆ ಇನ್ನೂ ಹತ್ರ ಆಗ್ತೀವಿ. ಅಷ್ಟೇ ಅಲ್ಲ ನಾವು ಆತನ ಹತ್ರ ಮಾತಾಡೋಕೆ, ಆತನ ಪ್ರೀತಿ ಪಡ್ಕೊಳ್ಳೋಕೆ ಎಷ್ಟು ಆಸೆಪಡ್ತಿದ್ದೀವಿ ಅಂತ ಹೇಳೋಕೆ ಹಿಂಜರಿಯಲ್ಲ. ಯೆಹೋವ ನಮ್ಮನ್ನ ಅರ್ಥಮಾಡ್ಕೊಳ್ತಾನೆ ಮತ್ತು ಸಹಾಯ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ. ಅದಕ್ಕೇ ನಮ್ಮ ಚಿಂತೆನೆಲ್ಲ ಆತನ ಹತ್ರ ಹೇಳ್ಕೊಬಹುದು.—ಕೀರ್ತ. 145:18, 19.

20. ಯೆಹೋವನ ಪ್ರೀತಿ ನಮ್ಮನ್ನ ಹೇಗೆ ಆತನ ಹತ್ರ ಸೆಳೆಯುತ್ತೆ?

20 ಚಳಿಗಾಲದಲ್ಲಿ ಬೆಂಕಿ ಕಾಯಿಸ್ಕೊಂಡಾಗ ನಮಗೆ ಹೇಗೆ ಬೆಚ್ಚಗಾಗುತ್ತೋ ಅದೇ ತರದ ಬೆಚ್ಚಗಿನ ಪ್ರೀತಿನ ಯೆಹೋವ ನಮಗೆ ತೋರಿಸ್ತಾನೆ. ಆತನ ಪ್ರೀತಿಗೆ ತುಂಬ ಶಕ್ತಿ ಇದೆ, ಅದು ಕೋಮಲವಾಗೂ ಇದೆ. ಹಾಗಾಗಿ ಯೆಹೋವ ಪ್ರೀತಿ ತೋರಿಸ್ತಾ ಇರೋದ್ರಿಂದ ನೀವು ಸಂತೋಷಪಡಿ. ಅಷ್ಟೇ ಅಲ್ಲ “ನಾನು ಯೆಹೋವನನ್ನ ಪ್ರೀತಿಸ್ತೀನಿ” ಅಂತ ಮನಸಾರೆ ಹೇಳಿ!—ಕೀರ್ತ. 116:1.

ನೀವೇನು ಹೇಳ್ತಿರಾ?

  • ಯೆಹೋವನ ಪ್ರೀತಿನ ನೀವು ಹೇಗೆ ವರ್ಣಿಸ್ತೀರ?

  • ಯೆಹೋವ ನಿಮ್ಮನ್ನ ಪ್ರೀತಿಸ್ತಾನೆ ಅಂತ ನೀವು ಯಾಕೆ ನಂಬಬಹುದು?

  • ಯೆಹೋವ ನಿಮ್ಮನ್ನ ಪ್ರೀತಿಸುವಾಗ ನಿಮಗೆ ಹೇಗೆ ಅನಿಸುತ್ತೆ?

ಗೀತೆ 18 ದೇವರ ನಿಷ್ಠಾ ಪ್ರೀತಿ

a ಕೆಲವ್ರ ಹೆಸ್ರು ಬದಲಾಗಿದೆ.