ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 4

ಯೇಸುವಿನ ಮರಣದ ಸ್ಮರಣೆಗೆ ನಾವು ಯಾಕೆ ಬರ್ತೀವಿ?

ಯೇಸುವಿನ ಮರಣದ ಸ್ಮರಣೆಗೆ ನಾವು ಯಾಕೆ ಬರ್ತೀವಿ?

‘ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ.’—ಲೂಕ 22:19.

ಗೀತೆ 148 ಕೊಟ್ಟೆ ನೀ ಮಗನ

ಕಿರುನೋಟ a

1-2. (ಎ) ತೀರಿಹೋದವರನ್ನ ನಾವು ಯಾವಾಗ ಜಾಸ್ತಿ ನೆನಪಿಸಿಕೊಳ್ತೀವಿ? (ಬಿ) ಯೇಸು ತಾನು ಸಾಯುವ ಹಿಂದಿನ ರಾತ್ರಿ ಏನು ಮಾಡಿದ?

 ನಮ್ಮವರು ಯಾರಾದ್ರೂ ಸತ್ತು ತುಂಬ ವರ್ಷ ಆಗಿದ್ರೂ ಅವರು ನಮ್ಮ ನೆನಪಲ್ಲಿ ಇರುತ್ತಾರೆ. ಅವರ ಸತ್ತ ದಿನ ಬಂದಾಗ ಅವರ ಜೊತೆ ಇದ್ದ ಒಂದೊಂದು ಕ್ಷಣನೂ ನಮ್ಮ ಕಣ್ಮುಂದೆ ಬರುತ್ತೆ.

2 ಯೇಸು ಕ್ರಿಸ್ತನನ್ನು ನಾವು ತುಂಬ ಪ್ರೀತಿಸ್ತೀವಿ. ಹಾಗಾಗಿ ಆತನು ಸತ್ತ ದಿನವನ್ನ ನಾವು ಪ್ರತಿವರ್ಷ ನೆನಪಿಸಿಕೊಳ್ತೀವಿ. ನಮ್ಮ ಜೊತೆ ಲಕ್ಷಾಂತರ ಜನ ಸೇರಿ ಬರುತ್ತಾರೆ. (1 ಪೇತ್ರ 1:8) ನಮ್ಮನ್ನ ಪಾಪದಿಂದ ಮತ್ತು ಸಾವಿಂದ ಬಿಡಿಸೋಕೆ ಯೇಸು ತನ್ನ ಪ್ರಾಣವನ್ನೇ ಬಿಡುಗಡೆ ಬೆಲೆಯಾಗಿ ಕೊಟ್ಟಿದ್ರಿಂದ ನಾವು ಆತನ ಮರಣವನ್ನ ಸ್ಮರಿಸುತ್ತೀವಿ. (ಮತ್ತಾ. 20:28) ತನ್ನನ್ನ ನೆನಪಿಸಿಕೊಳ್ಳಬೇಕು ಅಂತ ಯೇಸುನೇ ತನ್ನ ಶಿಷ್ಯರಿಗೆ ಹೇಳಿದ್ದಾನೆ. ತಾನು ಸಾಯೋ ಹಿಂದಿನ ರಾತ್ರಿ ಅವರ ಜೊತೆ ಒಂದು ವಿಶೇಷ ಭೋಜನ ಮಾಡಿದ ಮೇಲೆ “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ” ಅಂತ ಆಜ್ಞೆ ಕೊಟ್ಟನು. bಲೂಕ 22:19.

3. ಈ ಲೇಖನದಲ್ಲಿ ನಾವು ಏನು ಚರ್ಚೆ ಮಾಡ್ತೀವಿ?

3 ಯೇಸುವಿನ ಸ್ಮರಣೆಗೆ ಬರುವ ಕೆಲವರಿಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇದೆ. ಇವರನ್ನ ಅಭಿಷಿಕ್ತರು ಅಂತ ಕರೆಯುತ್ತೀವಿ. ಆದ್ರೆ ಲಕ್ಷಾಂತರ ಜನರಿಗೆ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇದೆ. ಇವರು ಮತ್ತು ಅಭಿಷಿಕ್ತರು ಸ್ಮರಣೆಗೆ ಯಾಕೆ ಬರುತ್ತಾರೆ ಮತ್ತು ಇದರಿಂದ ಯಾವ ಪ್ರಯೋಜನಗಳಿವೆ ಅಂತ ಈ ಲೇಖನದಲ್ಲಿ ನೋಡೋಣ. ಅಭಿಷಿಕ್ತರು ಯಾಕೆ ಬರುತ್ತಾರೆ ಅಂತ ಮೊದಲು ನೋಡೋಣ.

ಅಭಿಷಿಕ್ತರು ಯಾಕೆ ಬರುತ್ತಾರೆ?

4. ಸ್ಮರಣೆಯ ಸಮಯದಲ್ಲಿ ಅಭಿಷಿಕ್ತರು ಮಾತ್ರ ಯಾಕೆ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುತ್ತಾರೆ?

4 ಅಭಿಷಿಕ್ತರು ಸ್ಮರಣೆಗೆ ಬಂದಾಗ ರೊಟ್ಟಿ ತಿನ್ನುತ್ತಾರೆ ಮತ್ತು ದ್ರಾಕ್ಷಾಮದ್ಯ ಕುಡಿತಾರೆ. ಯಾಕೆ? ಅದಕ್ಕೆ ಉತ್ತರ ತಿಳಿದುಕೊಳ್ಳೋಕೆ ಯೇಸು ತೀರಿಹೋಗುವ ಹಿಂದಿನ ರಾತ್ರಿ ಏನಾಯ್ತು ಅಂತ ನೋಡಿ. ಪಸ್ಕ ಹಬ್ಬ ಆಚರಿಸಿದ ಮೇಲೆ ಯೇಸು ತನ್ನ ಶಿಷ್ಯರ ಜೊತೆ ಒಂದು ವಿಶೇಷ ಭೋಜನ ಮಾಡಿದನು. ಅದನ್ನ ಜನರು ಕರ್ತನ ಸಂಧ್ಯಾ ಭೋಜನ ಅಂತ ಕರೆಯುತ್ತಾರೆ. ಯೇಸು ತನ್ನ ಜೊತೆ ಇದ್ದ 11 ಅಪೊಸ್ತಲರಿಗೆ ತಿನ್ನೋಕೆ ರೊಟ್ಟಿ ಮತ್ತು ಕುಡಿಯೋಕೆ ದ್ರಾಕ್ಷಾಮದ್ಯ ಕೊಟ್ಟನು. ಆಮೇಲೆ ಅವರ ಜೊತೆ ರಾಜ್ಯದ ಒಪ್ಪಂದ ಮತ್ತು ಹೊಸ ಒಪ್ಪಂದ ಮಾಡಿಕೊಂಡನು. c (ಲೂಕ 22:19, 20, 28-30) ಈ ಒಪ್ಪಂದದಿಂದ 1,44,000 ಜನರಿಗೆ ಸ್ವರ್ಗದಲ್ಲಿ ರಾಜರಾಗಿ ಮತ್ತು ಪುರೋಹಿತರಾಗಿ ಸೇವೆ ಮಾಡೋ ಅವಕಾಶ ಸಿಕ್ಕಿದೆ. (ಪ್ರಕ. 5:10; 14:1) ಹಾಗಾಗಿ ಈ ಅಭಿಷಿಕ್ತರಲ್ಲಿ ಯಾರೆಲ್ಲಾ ಇನ್ನು ಬದುಕಿದ್ದಾರೋ ಅವರು ಮಾತ್ರ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ತಗೊಳ್ಳುತ್ತಾರೆ.

5. ಅಭಿಷಿಕ್ತರಿಗೆ ಅವರ ನಿರೀಕ್ಷೆ ಬಗ್ಗೆ ಏನೆಲ್ಲಾ ಗೊತ್ತು?

5 ಅಭಿಷಿಕ್ತರು ಸ್ಮರಣೆಗೆ ಬರೋಕೆ ಇನ್ನೊಂದು ಕಾರಣ ಏನಂದರೆ ಅವರು ತಮ್ಮ ನಿರೀಕ್ಷೆ ಬಗ್ಗೆ ಯೋಚನೆ ಮಾಡೋಕೆ ಅದೊಂದು ಒಳ್ಳೆ ಸಂದರ್ಭ ಆಗಿರುತ್ತೆ. ಯೆಹೋವ ದೇವರು ಮುಂದೆ ಅವರಿಗೆ ಸ್ವರ್ಗದಲ್ಲಿ ಅಮರವಾದ ಜೀವ ಕೊಡ್ತಾನೆ, ಕೊಳೆತು ಹೋಗದ ದೇಹ ಕೊಡ್ತಾನೆ. ಅಷ್ಟೇ ಅಲ್ಲ, ಈಗಾಗಲೇ ಸ್ವರ್ಗದಲ್ಲಿ ಇರೋ ಯೇಸು ಮತ್ತು ಬೇರೆ ಅಭಿಷಿಕ್ತರ ಜೊತೆ ಈ ಅಭಿಷಿಕ್ತರು ಸೇವೆ ಮಾಡ್ತಾರೆ. ಯೆಹೋವ ದೇವರನ್ನ ಕಣ್ಣಾರೆ ನೋಡೋ ಅವಕಾಶನೂ ಇವರಿಗಿದೆ. (1 ಕೊರಿಂ. 15:51-53; 1 ಯೋಹಾ. 3:2) ಆದ್ರೆ ಈ ಎಲ್ಲಾ ಅವಕಾಶ ಅವರಿಗೆ ಸಿಗಬೇಕಾದ್ರೆ ಅವರು ಸಾಯೋ ತನಕ ಯೆಹೋವನಿಗೆ ನಿಯತ್ತಾಗಿ ಇರಬೇಕು ಅಂತ ಅವರಿಗೆ ಗೊತ್ತು. (2 ತಿಮೊ. 4:7, 8) ಈ ನಿರೀಕ್ಷೆ ಬಗ್ಗೆ ಯೋಚನೆ ಮಾಡಿದಾಗೆಲ್ಲಾ ಅಭಿಷಿಕ್ತರಿಗೆ ತುಂಬ ಖುಷಿಯಾಗುತ್ತೆ. (ತೀತ 2:13) ಆದ್ರೆ ‘ಬೇರೆ ಕುರಿಗಳು’ ಸ್ಮರಣೆಗೆ ಯಾಕೆ ಬರುತ್ತಾರೆ ಅಂತ ಈಗ ನೋಡೋಣ.—ಯೋಹಾ. 10:16.

ಬೇರೆ ಕುರಿಗಳು ಸ್ಮರಣೆಗೆ ಯಾಕೆ ಬರುತ್ತಾರೆ?

6. ಬೇರೆ ಕುರಿಗಳು ಪ್ರತಿವರ್ಷ ಯಾಕೆ ಸ್ಮರಣೆಗೆ ಬರುತ್ತಾರೆ?

6 ಬೇರೆ ಕುರಿಗಳು ಸ್ಮರಣೆಗೆ ಬಂದು ರೊಟ್ಟಿ ತಿನ್ನದೇ ಇದ್ರೂ, ದ್ರಾಕ್ಷಾಮದ್ಯ ಕುಡಿಯದೇ ಇದ್ರೂ ಅಲ್ಲಿ ಇರೋಕೆ ಅವರು ತುಂಬ ಖುಷಿಪಡ್ತಾರೆ. ಇದರ ಬಗ್ಗೆ ಮಾರ್ಚ್‌ 1, 1938ರ ಕಾವಲಿನಬುರುಜು ಹೀಗೆ ಹೇಳಿತ್ತು: “ಬೇರೆ ಕುರಿಗಳೂ ಈ ಸ್ಮರಣೆಗೆ ಹಾಜರಾಗಬೇಕು. ಯೇಸುವಿನ ಮರಣವನ್ನು ಹೇಗೆ ಸ್ಮರಿಸಲಾಗುತ್ತೆ ಅಂತ ಅವರೂ ನೋಡಬೇಕು. . . . ಅವರಿಗೂ ಇದು ಒಂದು ಸಂತೋಷದ ಸಂದರ್ಭವಾಗಿದೆ.” ಒಂದು ಮದುವೆಗೆ ಬಂದಿರೋ ಅತಿಥಿಗಳು ಹೇಗೆ ಖುಷಿಖುಷಿಯಾಗಿ ಇರುತ್ತಾರೋ ಹಾಗೇ ಬೇರೆ ಕುರಿಗಳು ಸ್ಮರಣೆಗೆ ಬಂದಾಗ ಖುಷಿಖುಷಿಯಾಗಿ ಇರುತ್ತಾರೆ.

7. ಸ್ಮರಣೆಯ ಭಾಷಣವನ್ನ ಕೇಳಿಸಿಕೊಳ್ಳೋಕೆ ಬೇರೆ ಕುರಿಗಳು ಯಾಕೆ ಖುಷಿಯಿಂದ ಕಾಯುತ್ತಾ ಇರುತ್ತಾರೆ?

7 ಬೇರೆ ಕುರಿಗಳೂ ತಮ್ಮ ನಿರೀಕ್ಷೆ ಬಗ್ಗೆ ಯೋಚನೆ ಮಾಡೋಕೆ ಇದೊಂದು ಒಳ್ಳೇ ಸಂದರ್ಭ ಆಗಿದೆ. ಸ್ಮರಣೆಯ ಭಾಷಣದಲ್ಲಿ, ಯೇಸು ಮತ್ತು ಅವನ 1,44,000 ರಾಜರು ಸಾವಿರ ವರ್ಷ ಭೂಮಿಯನ್ನು ಆಳುವಾಗ ಮನುಷ್ಯರಿಗೋಸ್ಕರ ಏನೆಲ್ಲಾ ಮಾಡ್ತಾರೆ ಅಂತ ಹೇಳಲಾಗುತ್ತೆ. ಅವರು ಮುಂದೆ ಭೂಮಿಯನ್ನ ಪರದೈಸಾಗಿ ಮಾಡ್ತಾರೆ ಮತ್ತು ಮನುಷ್ಯರಿಗೆ ಪರಿಪೂರ್ಣರಾಗೋಕೆ ಸಹಾಯ ಮಾಡ್ತಾರೆ. ಈ ವಿಷಯಗಳನ್ನ ಮತ್ತು ಯೆಶಾಯ 35:5, 6; 65:21-23 ಮತ್ತು ಪ್ರಕಟನೆ 21:3, 4ರಲ್ಲಿರೋ ಭವಿಷ್ಯವಾಣಿಗಳು ನೆರವೇರೋದನ್ನ ನೆನಸಿಕೊಂಡು ಬೇರೆ ಕುರಿಗಳು ತುಂಬ ಖುಷಿಪಡ್ತಾರೆ. ಇದು ಅವರ ನಿರೀಕ್ಷೆಯನ್ನ ಗಟ್ಟಿಯಾಗಿ ಇಟ್ಟುಕೊಳ್ಳೋಕೆ ಸಹಾಯ ಮಾಡುತ್ತೆ ಮತ್ತು ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆಯನ್ನ ಇನ್ನೂ ಜಾಸ್ತಿ ಮಾಡುತ್ತೆ.—ಮತ್ತಾ. 24:13; ಗಲಾ. 6:9.

8. ಬೇರೆ ಕುರಿಗಳು ಸ್ಮರಣೆಗೆ ಬರೋಕೆ ಇನ್ನೊಂದು ಕಾರಣ ಏನು?

8 ಬೇರೆ ಕುರಿಗಳು ಸ್ಮರಣೆಗೆ ಬರೋಕೆ ಇನ್ನೊಂದು ಕಾರಣ ಏನಂದ್ರೆ ಅಭಿಷಿಕ್ತರನ್ನ ಅವರು ಪ್ರೀತಿಸ್ತಾರೆ ಮತ್ತು ಅವರಿಗೆ ಸಹಕಾರ ಕೊಡೋಕೆ ಇಷ್ಟ ಪಡ್ತಾರೆ. ಬೇರೆ ಕುರಿಗಳು ಮತ್ತು ಅಭಿಷಿಕ್ತರು ಒಟ್ಟಿಗೆ ಕೆಲಸ ಮಾಡ್ತಾರೆ ಅಂತ ಬೈಬಲ್‌ ಈಗಾಗಲೇ ಭವಿಷ್ಯವಾಣಿ ಹೇಳಿತ್ತು. ಅದರಲ್ಲಿ ಕೆಲವನ್ನ ಈಗ ನೋಡೋಣ.

9. ಜೆಕರ್ಯ 8:23ರಲ್ಲಿರೋ ಭವಿಷ್ಯವಾಣಿ ಅಭಿಷಿಕ್ತರ ಮತ್ತು ಬೇರೆ ಕುರಿಗಳ ಸ್ನೇಹದ ಬಗ್ಗೆ ಏನು ಹೇಳುತ್ತೆ?

9 ಜೆಕರ್ಯ 8:23 ಓದಿ. ಅಭಿಷಿಕ್ತರ ಮತ್ತು ಬೇರೆ ಕುರಿಗಳ ಸ್ನೇಹ ಎಷ್ಟು ಗಟ್ಟಿಯಾಗಿದೆ ಅಂತ ಈ ಭವಿಷ್ಯವಾಣಿಯಿಂದ ನಮಗೆ ಅರ್ಥ ಆಗುತ್ತೆ. ಈ ವಚನದಲ್ಲಿ “ಒಬ್ಬ ಯೆಹೂದ್ಯ” ಮತ್ತು “ನಿಮ್ಮ” ಅಂತ ಹೇಳಿರೋದು ಒಂದೇ ಗುಂಪನ್ನ ಅಂದ್ರೆ ಇನ್ನೂ ಬದುಕಿರುವ ಅಭಿಷಿಕ್ತರನ್ನು ಸೂಚಿಸುತ್ತೆ. (ರೋಮ. 2:28, 29) “ಎಲ್ಲ ಭಾಷೆಗಳಿಂದ ಎಲ್ಲ ದೇಶಗಳಿಂದ ಬಂದಂಥ 10 ಜನ” ಬೇರೆ ಕುರಿಗಳನ್ನ ಸೂಚಿಸುತ್ತಾರೆ. ಇವರು ಯೆಹೂದ್ಯನ ಬಟ್ಟೆಯ ತುದಿಯನ್ನ ‘ಗಟ್ಟಿಯಾಗಿ ಹಿಡ್ಕೊಂಡಿದ್ದಾರೆ’ ಅಂತ ಆ ವಚನದಲ್ಲಿ ಹೇಳಿದೆ. ಹಾಗಂದ್ರೆ, ಅಭಿಷಿಕ್ತರು ಮತ್ತು ಬೇರೆ ಕುರಿಗಳು ಒಗ್ಗಟ್ಟಿಂದ ಯೆಹೋವ ದೇವರನ್ನ ಆರಾಧನೆ ಮಾಡ್ತಾರೆ ಅಂತ ಅರ್ಥ. ಅದಕ್ಕೇ ಅಭಿಷಿಕ್ತರ ಜೊತೆ ಬೇರೆ ಕುರಿಗಳು ಸ್ಮರಣೆಗೆ ಬರುತ್ತಾರೆ.

10. ಯೆಹೆಜ್ಕೇಲ 37:15-19, 24, 25ರಲ್ಲಿರೋ ಭವಿಷ್ಯವಾಣಿ ಪ್ರಕಾರ ಯೆಹೋವ ಏನು ಮಾಡಿದ್ದಾನೆ?

10 ಯೆಹೆಜ್ಕೇಲ 37:15-19, 24, 25 ಓದಿ. ಈ ವಚನದಲ್ಲಿ ಓದಿದ ಪ್ರಕಾರ ಯೆಹೋವ ದೇವರು ಅಭಿಷಿಕ್ತರನ್ನ ಮತ್ತು ಬೇರೆ ಕುರಿಗಳನ್ನ ಒಗ್ಗಟ್ಟಿಂದ ಇರೋ ತರ ಮಾಡಿದ್ದಾನೆ. ಈ ಭವಿಷ್ಯವಾಣಿಯಲ್ಲಿ ಎರಡು ಕೋಲುಗಳ ಬಗ್ಗೆ ಇದೆ. ಒಂದು ಕೋಲು “ಯೆಹೂದನದ್ದು” (ಇಸ್ರಾಯೇಲ್‌ ರಾಜರನ್ನ ಈ ಕುಲದಿಂದ ಆರಿಸಲಾಗುತ್ತಿತ್ತು), ಇನ್ನೊಂದು ಕೋಲು ‘ಎಫ್ರಾಯೀಮನದ್ದು.’ d ಯೆಹೂದನ ಕೋಲು ಅಂದ್ರೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರೋ ಅಭಿಷಿಕ್ತರು, ಎಫ್ರಾಯೀಮನ ಕೋಲು ಅಂದ್ರೆ ಈ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರುವ ಬೇರೆ ಕುರಿಗಳು. ಯೆಹೋವ ದೇವರು ಈ ಎರಡು ಗುಂಪಿನವರನ್ನ “ಒಂದೇ ಕೋಲಾಗಿ” ಮಾಡ್ತಾನೆ. ಅಂದ್ರೆ, ಈ ಎರಡೂ ಗುಂಪಿನವರು ಯೇಸುವಿನ ಮಾತನ್ನ ಕೇಳುತ್ತಾ ಒಗ್ಗಟ್ಟಾಗಿ ದೇವರ ಸೇವೆ ಮಾಡ್ತಾರೆ. ಹಾಗಾಗಿ ಅಭಿಷಿಕ್ತರು ಮತ್ತು ಬೇರೆ ಕುರಿಗಳು ಪ್ರತಿವರ್ಷ ಸ್ಮರಣೆಗೆ ಎರಡು ಗುಂಪುಗಳಾಗಿ ಅಲ್ಲ, ‘ಒಬ್ಬ ಕುರುಬನ’ ಕೆಳಗೆ ‘ಒಂದೇ ಹಿಂಡಾಗಿ’ ಬರುತ್ತಾರೆ.—ಯೋಹಾ. 10:16.

11. ಮತ್ತಾಯ 25:31-36, 40ರಲ್ಲಿ ಹೇಳಿರುವ ‘ಕುರಿಗಳು’ ಅಭಿಷಿಕ್ತರಿಗೆ ಹೇಗೆ ಸಹಾಯ ಮಾಡ್ತಿದ್ದಾರೆ?

11 ಮತ್ತಾಯ 25:31-36, 40 ಓದಿ. ಈ ಉದಾಹರಣೆಯಲ್ಲಿ ಯೇಸು ಹೇಳಿದ ‘ಕುರಿಗಳು’ ಯಾರು? ಕೊನೇ ತನಕ ಯೆಹೋವ ದೇವರಿಗೆ ನಿಯತ್ತಾಗಿ ಇರೋರು ಮತ್ತು ಈ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋರು. ಅವರೇ ಈಗ ಇರುವ ಬೇರೆ ಕುರಿಗಳು. ಅವರು ಜನರಿಗೆ ಸಿಹಿಸುದ್ದಿ ಸಾರುತ್ತಾ, ಶಿಷ್ಯರಾಗಿ ಮಾಡುತ್ತಾ ಯೇಸುವಿನ ಅಭಿಷಿಕ್ತ ಸಹೋದರರಿಗೆ ಸಹಾಯ ಮಾಡುತ್ತಿದ್ದಾರೆ.—ಮತ್ತಾ. 24:14; 28:19, 20.

12-13. ಬೇರೆ ಕುರಿಗಳು ಅಭಿಷಿಕ್ತರಿಗೆ ಇನ್ನೂ ಹೇಗೆಲ್ಲಾ ಸಹಾಯ ಮಾಡ್ತಿದ್ದಾರೆ?

12 ಪ್ರತಿವರ್ಷ ಸ್ಮರಣೆ ಶುರುವಾಗುವ ಕೆಲವು ವಾರಗಳ ಮುಂಚೆನೇ ಇಡೀ ಲೋಕದಲ್ಲಿ ಒಂದು ಅಭಿಯಾನ ನಡಿಯುತ್ತೆ. ಬೇರೆ ಕುರಿಗಳು ಈ ಅಭಿಯಾನದಲ್ಲಿ ಸಿಹಿಸುದ್ದಿ ಸಾರುತ್ತಾ ಒಳ್ಳೇ ಮನಸ್ಸಿರುವ ಜನರನ್ನ ಸ್ಮರಣೆಗೆ ಆಮಂತ್ರಿಸುತ್ತಾರೆ. ಹೀಗೆ ಅವರು ಅಭಿಷಿಕ್ತರಿಗೆ ಸಹಾಯ ಮಾಡುತ್ತಿದ್ದಾರೆ. (“ ನೀವು ತಯಾರಾಗಿದ್ದೀರಾ?” ಚೌಕ ನೋಡಿ.) ಕೆಲವು ಸಭೆಗಳಲ್ಲಿ ಅಭಿಷಿಕ್ತ ಕ್ರೈಸ್ತರು ಇಲ್ಲದೇ ಇದ್ದರೂ ಬೇರೆ ಕುರಿಗಳು ಸ್ಮರಣೆಗೆ ಬೇಕಾದ ಏರ್ಪಾಡು ಮಾಡ್ತಾರೆ. ಹೀಗೆ ಅವರು ಯೇಸುವಿನ ಅಭಿಷಿಕ್ತ ಸಹೋದರರಿಗೆ ಸಹಾಯ ಮಾಡೋಕೆ ಖುಷಿಪಡ್ತಾರೆ. ಯಾಕಂದ್ರೆ ಅಭಿಷಿಕ್ತರಿಗೆ ಸಹಾಯ ಮಾಡೋದು ಒಂದರ್ಥದಲ್ಲಿ ಯೇಸುವಿಗೇ ಸಹಾಯ ಮಾಡಿದ ಹಾಗೆ ಅಂತ ಅವರು ತಿಳಿದುಕೊಂಡಿದ್ದಾರೆ.—ಮತ್ತಾ. 25:37-40.

13 ಸ್ಮರಣೆಗೆ ಬರೋಕೆ ಅಭಿಷಿಕ್ತರಿಗೆ ಮತ್ತು ಬೇರೆ ಕುರಿಗಳಿಗೆ ಇನ್ನೂ ಅನೇಕ ಕಾರಣಗಳಿವೆ. ಅವು ಏನು ಅಂತ ಈಗ ನೋಡೋಣ.

ಇನ್ನೂ ಕೆಲವು ಕಾರಣಗಳು . . .

14. ಯೆಹೋವ ಮತ್ತು ಯೇಸು ನಮಗೆ ಹೇಗೆ ಪ್ರೀತಿ ತೋರಿಸಿದ್ದಾರೆ?

14 ಯೆಹೋವ ಮತ್ತು ಯೇಸು ನಮಗೆ ತೋರಿಸಿದ ಪ್ರೀತಿಗೆ ನಾವು ಋಣಿಗಳಾಗಿದ್ದೀವಿ. ಯೆಹೋವ ನಮಗೋಸ್ಕರ ತುಂಬ ಮಾಡಿದ್ದಾನೆ. ಇದರಿಂದ ಆತನಿಗೆ ನಮ್ಮ ಮೇಲೆ ಪ್ರೀತಿ ಇದೆ ಅಂತ ಗೊತ್ತಾಗುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಒಬ್ಬನೇ ಮಗನನ್ನ ನಮಗಾಗಿ ಕೊಟ್ಟು ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ತೋರಿಸಿದ್ದಾನೆ. (ಯೋಹಾ. 3:16) ಯೇಸುವಿಗೂ ನಮ್ಮ ಮೇಲೆ ಪ್ರೀತಿ ಇರೋದ್ರಿಂದನೇ ಖುಷಿಖುಷಿಯಿಂದ ನಮಗೋಸ್ಕರ ತನ್ನ ಪ್ರಾಣವನ್ನೇ ಕೊಟ್ಟನು. (ಯೋಹಾ. 15:13) ಯೆಹೋವ ಮತ್ತು ಯೇಸುವಿನ ಋಣನ ನಾವು ಯಾವತ್ತೂ ತೀರಿಸೋಕೆ ಆಗಲ್ಲ. ಆದರೆ ನಾವು ನಮ್ಮ ಜೀವನದಲ್ಲಿ ನಡೆದುಕೊಳ್ಳೋ ರೀತಿಯಿಂದ ಅವರನ್ನ ಪ್ರೀತಿಸ್ತೀವಿ ಅಂತ ತೋರಿಸಬಹುದು. (ಕೊಲೊ. 3:15) ಹಾಗಾಗಿ ಯೆಹೋವ ಮತ್ತು ಯೇಸುನ ಪ್ರೀತಿಸ್ತೀವಿ ಅಂತ ತೋರಿಸೋಕೆ ಮತ್ತು ಅವರು ತೋರಿಸಿದ ಪ್ರೀತಿಯನ್ನು ನೆನಪಿಸಿಕೊಳ್ಳೋಕೆ ನಾವು ಸ್ಮರಣೆಗೆ ಬರ್ತೀವಿ.

15. ಅಭಿಷಿಕ್ತರು ಮತ್ತು ಬೇರೆ ಕುರಿಗಳು ಬಿಡುಗಡೆ ಬೆಲೆಯನ್ನ ಯಾಕೆ ಅಮೂಲ್ಯವಾಗಿ ನೋಡ್ತಾರೆ?

15 ಯೇಸು ಕ್ರಿಸ್ತನ ಬಿಡುಗಡೆ ಬೆಲೆಯನ್ನ ಅಮೂಲ್ಯವಾಗಿ ನೋಡ್ತೀವಿ. (ಮತ್ತಾ. 20:28) ಯೇಸು ಮಾಡಿದ ತ್ಯಾಗಕ್ಕೆ ಅಭಿಷಿಕ್ತರು ತುಂಬ ಬೆಲೆ ಕೊಡ್ತಾರೆ. ಇದರಿಂದ ಅವರಿಗೆ ಒಂದು ಅದ್ಭುತ ನಿರೀಕ್ಷೆ ಸಿಕ್ಕಿದೆ. ಈ ತ್ಯಾಗದ ಮೇಲೆ ಅವರು ನಂಬಿಕೆ ಇಟ್ಟಿದ್ದರಿಂದ ಯೆಹೋವ ಅವರನ್ನ ತನ್ನ ಮಕ್ಕಳಾಗಿ ದತ್ತು ತಗೊಂಡಿದ್ದಾನೆ. (ರೋಮ. 5:1; 8:15-17, 23) ಬೇರೆ ಕುರಿಗಳೂ ಯೇಸುವಿನ ತ್ಯಾಗಕ್ಕೆ ತುಂಬ ಬೆಲೆ ಕೊಡ್ತಾರೆ. ಯೇಸು ಸುರಿಸಿದ ರಕ್ತದ ಮೇಲೆ ಅವರು ನಂಬಿಕೆ ಇಟ್ಟಿದ್ದರಿಂದ ಯೆಹೋವ ದೇವರ ಮುಂದೆ ಅವರು ಶುದ್ಧರಾಗಿ ಸೇವೆ ಮಾಡುತ್ತಿದ್ದಾರೆ ಮತ್ತು “ಮಹಾ ಸಂಕಟವನ್ನ” ತಪ್ಪಿಸಿಕೊಳ್ಳುವ ಅವಕಾಶನೂ ಅವರಿಗೆ ಸಿಗುತ್ತೆ. (ಪ್ರಕ. 7:13-15) ಹಾಗಾಗಿ ಅಭಿಷಿಕ್ತರು ಮತ್ತು ಬೇರೆ ಕುರಿಗಳು, ಬಿಡುಗಡೆ ಬೆಲೆಗೆ ಋಣಿಗಳಾಗಿದ್ದಾರೆ ಅಂತ ತೋರಿಸೋಕೆ ಸ್ಮರಣೆಗೆ ಬರುತ್ತಾರೆ.

16. ನಾವು ಸ್ಮರಣೆಗೆ ಬರೋಕೆ ಇನ್ನೊಂದು ಕಾರಣ ಏನು?

16 ನಾವು ಯೇಸು ಮಾತನ್ನ ಕೇಳ್ತೀವಿ. ಅದಕ್ಕೆ ಸ್ಮರಣೆಗೆ ಬರ್ತೀವಿ. ಸ್ಮರಣೆಯನ್ನ ಶುರುಮಾಡಿದ ರಾತ್ರಿ ಯೇಸು, “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ” ಅಂತ ಆಜ್ಞೆ ಕೊಟ್ಟನು. (1 ಕೊರಿಂ. 11:23, 24) ಹಾಗಾಗಿ ನಮಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ ಅಥವಾ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರಲಿ, ನಾವು ಯೇಸುವಿನ ಮಾತನ್ನ ಪಾಲಿಸ್ತೀವಿ.

ಸ್ಮರಣೆಗೆ ಬರೋದ್ರಿಂದ ಪ್ರಯೋಜನಗಳು

17. ಸ್ಮರಣೆಗೆ ಬರೋದ್ರಿಂದ ಯೆಹೋವನಿಗೆ ಹೇಗೆ ಹತ್ತಿರ ಆಗ್ತೀವಿ?

17 ಯೆಹೋವ ದೇವರಿಗೆ ಹತ್ತಿರ ಆಗ್ತೀವಿ. (ಯಾಕೋ. 4:8) ಈಗಾಗಲೇ ಕಲಿತ ಹಾಗೆ, ನಮಗಿರೋ ನಿರೀಕ್ಷೆ ಬಗ್ಗೆ ಮತ್ತು ದೇವರು ತೋರಿಸಿರೋ ಪ್ರೀತಿ ಬಗ್ಗೆ ಯೋಚಿಸೋಕೆ ಸ್ಮರಣೆಯ ದಿನ ಒಂದು ಒಳ್ಳೇ ಸಂದರ್ಭ ಆಗಿದೆ. (ಯೆರೆ. 29:11; 1 ಯೋಹಾ. 4:8-10) ಹಾಗಾಗಿ ಮುಂದೆ ನಮಗೆ ಸಿಗೋ ಆ ಆಶೀರ್ವಾದದ ಬಗ್ಗೆ ಮತ್ತು ಯೆಹೋವ ನಮಗೆ ತೋರಿಸಿರೋ ಆ ಶಾಶ್ವತ ಪ್ರೀತಿಯ ಬಗ್ಗೆ ಯೋಚಿಸುವಾಗ, ಯೆಹೋವನ ಮೇಲೆ ನಮಗಿರೋ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ ಮತ್ತು ಆತನ ಜೊತೆಯಿರೋ ಸ್ನೇಹ ಇನ್ನೂ ಗಟ್ಟಿಯಾಗುತ್ತೆ.—ರೋಮ. 8:38, 39.

18. ಯೇಸು ಮಾಡಿದ ತ್ಯಾಗದ ಬಗ್ಗೆ ಯೋಚನೆ ಮಾಡಿದಾಗ ನಮಗೆ ಏನು ಅನಿಸುತ್ತೆ?

18 ನಾವೂ ಯೇಸು ತರ ಇರಬೇಕು ಅನ್ನೋ ಆಸೆ ಜಾಸ್ತಿ ಆಗುತ್ತೆ. (1 ಪೇತ್ರ 2:21) ತನ್ನ ಕೊನೇ ವಾರಗಳಲ್ಲಿ ಯೇಸು ಏನೇನು ಮಾಡಿದ ಅನ್ನೋದರ ಬಗ್ಗೆ, ಆತನು ಸತ್ತು ಪುನರುತ್ಥಾನ ಆಗಿದ್ದರ ಬಗ್ಗೆ ನಾವು ಸ್ಮರಣೆಗೆ ಮುಂಚೆ ಓದುತ್ತೀವಿ ಮತ್ತು ಅದರ ಬಗ್ಗೆ ಯೋಚನೆ ಮಾಡ್ತೀವಿ. ಅಷ್ಟೇ ಅಲ್ಲ, ಸ್ಮರಣೆಯ ಕಾರ್ಯಕ್ರಮದಲ್ಲಿ ನಾವು ಕೇಳಿಸಿಕೊಳ್ಳೋ ಆ ಭಾಷಣ, ಯೇಸು ನಮಗೆ ತೋರಿಸಿದ ಪ್ರೀತಿಯನ್ನ ನೆನಪಿಸುತ್ತೆ. (ಎಫೆ. 5:2; 1 ಯೋಹಾ. 3:16) ಹೀಗೆ, ಯೇಸು ನಮಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದಾನೆ ಅನ್ನೋದನ್ನ ಧ್ಯಾನಿಸಿದಾಗ ಮತ್ತು ಅದರ ಬಗ್ಗೆ ಓದಿದಾಗ, ‘ನಾವೂ ಆತನ ತರಾನೇ ನಡಿಬೇಕು’ ಅಂತ ಮನಸ್ಸಾಗುತ್ತೆ.—1 ಯೋಹಾ. 2:6.

19. ಯೆಹೋವನ ಫ್ರೆಂಡ್‌ ಆಗಿರೋಕೆ ನಾವೇನು ಮಾಡಬೇಕು?

19 ನಾವು ಯೆಹೋವನ ಫ್ರೆಂಡ್‌ ಆಗಿರಬೇಕು ಅನ್ನೋ ನಮ್ಮ ತೀರ್ಮಾನ ಇನ್ನೂ ಗಟ್ಟಿಯಾಗುತ್ತೆ. (ಯೂದ 20, 21) ನಾವು ಯೆಹೋವನ ಮಾತನ್ನ ಕೇಳಿದ್ರೆ, ಆತನ ಹೆಸರಿಗೆ ಗೌರವ ತಂದರೆ, ಆತನ ಮನಸ್ಸನ್ನ ಖುಷಿಪಡಿಸಿದ್ರೆ ಆತನ ಫ್ರೆಂಡ್‌ ಆಗಿರೋಕೆ ಆಗುತ್ತೆ. (ಜ್ಞಾನೋ. 27:11; ಮತ್ತಾ. 6:9; 1 ಯೋಹಾ. 5:3) ನಾವು ಸ್ಮರಣೆಗೆ ಬರೋದ್ರಿಂದ ಪ್ರತಿದಿನ ಯೆಹೋವನಿಗೆ ಇಷ್ಟ ಆಗೋ ತರ ಇರಬೇಕು ಅನ್ನೋ ನಮ್ಮ ಆಸೆ ಇನ್ನೂ ಜಾಸ್ತಿ ಆಗುತ್ತೆ. ಇದು ಒಂದರ್ಥದಲ್ಲಿ ‘ಯೆಹೋವ ದೇವರೇ, ನಾನು ಯಾವಾಗಲೂ ನಿಮ್ಮ ಫ್ರೆಂಡ್‌ ಆಗಿರೋಕೆ ಇಷ್ಟ ಪಡ್ತೀನಿ!’ ಅಂತ ಹೇಳಿದ ಹಾಗಿರುತ್ತೆ.

20. ನಾವು ಯಾಕೆ ಸ್ಮರಣೆಗೆ ಬರ್ತೀವಿ?

20 ಕೆಲವರಿಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇದೆ, ಇನ್ನು ಕೆಲವರಿಗೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇದೆ. ಆದ್ರೂ ನಾವೆಲ್ಲ ಸ್ಮರಣೆಗೆ ಯಾಕೆ ಬರಬೇಕು ಅನ್ನೋಕೆ ತುಂಬ ಕಾರಣಗಳನ್ನ ಇಲ್ಲಿ ತನಕ ನೋಡಿದ್ವಿ. ಪ್ರತಿವರ್ಷ ನಾವು ಸ್ಮರಣೆಗೆ ಬಂದಾಗ ಯೇಸು ನಮಗೋಸ್ಕರ ಯಾಕೆ ಸತ್ತನು ಅನ್ನೋದನ್ನ ನೆನಪಿಸಿಕೊಳ್ತೀವಿ. ಎಲ್ಲಕ್ಕಿಂತ ಹೆಚ್ಚಾಗಿ ಯೆಹೋವ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ತ್ಯಾಗಮಾಡಿ ಎಷ್ಟು ಪ್ರೀತಿ ತೋರಿಸಿದ್ದಾನೆ ಅನ್ನೋದನ್ನ ಜ್ಞಾಪಿಸಿಕೊಳ್ತೀವಿ. ಈ ವರ್ಷ ಏಪ್ರಿಲ್‌ 15, 2022ರ ಶುಕ್ರವಾರ ಸಂಜೆ ಯೇಸುವಿನ ಮರಣವನ್ನ ನಾವು ಸ್ಮರಿಸುತ್ತೀವಿ. ಆ ದಿನ ನಾವು ತಪ್ಪದೆ ಸ್ಮರಣೆಗೆ ಬರ್ತೀವಿ. ಯಾಕಂದ್ರೆ ಯೆಹೋವ ಮತ್ತು ಯೇಸುವನ್ನ ತುಂಬ ಪ್ರೀತಿಸ್ತೀವಿ.

ಗೀತೆ 108 ಯೆಹೋವನ ರಾಜ್ಯಕ್ಕಾಗಿ ಆತನನ್ನು ಸ್ತುತಿಸಿ

a ನಮ್ಮ ನಿರೀಕ್ಷೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋದಾಗಿರಲಿ ಅಥವಾ ಸ್ವರ್ಗಕ್ಕೆ ಹೋಗೋದಾಗಿರಲಿ, ಪ್ರತಿವರ್ಷ ನಾವೆಲ್ಲ ಸ್ಮರಣೆ ಕಾರ್ಯಕ್ರಮಕ್ಕಾಗಿ ಕಾಯ್ತಾ ಇರ್ತೀವಿ. ನಾವು ಯಾಕೆ ಸ್ಮರಣೆಗೆ ಬರಬೇಕು ಅಂತ ಬೈಬಲ್‌ ಹೇಳುತ್ತೆ ಮತ್ತು ಬರೋದ್ರಿಂದ ನಮಗೇನು ಪ್ರಯೋಜನ ಅಂತ ಈ ಲೇಖನದಲ್ಲಿ ನೋಡೋಣ.

b ಪವಿತ್ರ ಬೈಬಲ್‌ನಲ್ಲಿ ಯೇಸು ಹೇಳಿದ ಈ ಮಾತುಗಳನ್ನ “ನನ್ನ ನೆನಪಿಗಾಗಿ ನೀವು ಇದನ್ನು ಮಾಡಿರಿ” ಅಂತ ಕೊಡಲಾಗಿದೆ. ಸತ್ಯವೇದವು (C.L.) ಬೈಬಲಲ್ಲಿ “ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ” ಅಂತ ಕೊಡಲಾಗಿದೆ.

c ಹೊಸ ಒಪ್ಪಂದ ಮತ್ತು ರಾಜ್ಯದ ಒಪ್ಪಂದದ ಬಗ್ಗೆ ಇನ್ನೂ ಜಾಸ್ತಿ ತಿಳಿದುಕೊಳ್ಳೋಕೆ ಅಕ್ಟೋಬರ್‌ 15, 2014ರ ಕಾವಲಿನಬುರುಜುವಿನ “ನೀವು ‘ಯಾಜಕರಾಜ್ಯ’ ಆಗುವಿರಿ” ಅನ್ನೋ ಲೇಖನದ ಪುಟ 15-17 ನೋಡಿ.