ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 18

ಯೆಹೋವನ ಸೇವೆಯಲ್ಲಿ ಗುರಿಗಳನ್ನಿಟ್ಟು ಅದನ್ನು ಮುಟ್ಟಿ

ಯೆಹೋವನ ಸೇವೆಯಲ್ಲಿ ಗುರಿಗಳನ್ನಿಟ್ಟು ಅದನ್ನು ಮುಟ್ಟಿ

“ಈ ವಿಷ್ಯಗಳ ಬಗ್ಗೆ ಚೆನ್ನಾಗಿ ಯೋಚ್ನೆ ಮಾಡು. ಅದ್ರಲ್ಲೇ ಮುಳುಗಿರು. ಆಗ ನಿನ್ನ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ.”1 ತಿಮೊ. 4:15.

ಗೀತೆ 150 ಸಾರಲು ಹೋಗೋಣ

ಕಿರುನೋಟ a

1. ನಾವು ಯಾವ ಗುರಿಗಳನ್ನ ಇಡಬಹುದು?

 ನಾವು ನಿಜ ಕ್ರೈಸ್ತರಾಗಿರೋದ್ರಿಂದ ಯೆಹೋವನನ್ನು ತುಂಬ ಪ್ರೀತಿಸ್ತೀವಿ. ಆತನ ಸೇವೆಯನ್ನ ಚೆನ್ನಾಗಿ ಮಾಡಬೇಕು ಅಂತ ಆಸೆಪಡ್ತೀವಿ. ಹಾಗಾಗಿ ಆತನ ಸೇವೆಯನ್ನ ಚೆನ್ನಾಗಿ ಮಾಡಬೇಕಂದ್ರೆ ನಾವು ಕೆಲವು ಗುರಿಗಳನ್ನ ಇಡಬೇಕು. ಉದಾಹರಣೆಗೆ, ನಾವು ಯೆಹೋವನಿಗೆ ಇಷ್ಟವಾಗೋ ಗುಣಗಳನ್ನ ಬೆಳೆಸಿಕೊಳ್ಳಬಹುದು. ಹೊಸ ಕೌಶಲಗಳನ್ನ ಕಲಿಯಬಹುದು, ಜನರಿಗೆ ಬೇರೆಬೇರೆ ರೀತಿಯಲ್ಲಿ ಸಹಾಯ ಮಾಡಬಹುದು.

2. ನಾವು ಯಾಕೆ ಗುರಿಗಳನ್ನ ಇಟ್ಟು ಅದನ್ನು ಮುಟ್ಟಬೇಕು?

2 ನಾವು ಯೆಹೋವನ ಸೇವೆಯನ್ನ ಇನ್ನೂ ಚೆನ್ನಾಗಿ ಯಾಕೆ ಮಾಡಬೇಕು? ಯಾಕಂದ್ರೆ ನಾವು ಯೆಹೋವನನ್ನು ಪ್ರೀತಿಸ್ತೀವಿ ಮತ್ತು ನಾವು ನಮ್ಮ ಸಾಮರ್ಥ್ಯಗಳನ್ನ ಹಾಗೂ ಕೌಶಲಗಳನ್ನ ಚೆನ್ನಾಗಿ ಬಳಸಿಕೊಳ್ಳಬೇಕು ಅಂತ ಯೆಹೋವ ಇಷ್ಟಪಡುತ್ತಾನೆ. ಈ ರೀತಿ ಸೇವೆ ಮಾಡೋದ್ರಿಂದ ನಮ್ಮ ಸಹೋದರ ಸಹೋದರಿಯರಿಗೂ ಸಹಾಯ ಮಾಡೋಕೆ ಆಗುತ್ತೆ. (1 ಥೆಸ. 4:9, 10) ಹಾಗಾಗಿ ನಾವು ಎಷ್ಟೇ ವರ್ಷಗಳಿಂದ ಯೆಹೋವನನ್ನ ಆರಾಧಿಸುತ್ತಿದ್ರೂ ಆತನ ಸೇವೆಯನ್ನ ಚೆನ್ನಾಗಿ ಮಾಡೋಕೆ ಪ್ರಯತ್ನ ಮಾಡಬೇಕು. ಅದನ್ನ ಮಾಡೋದು ಹೇಗೆ ಅಂತ ನೊಡೋಣ.

3. ಒಂದನೇ ತಿಮೊತಿ 4:12-16 ರಲ್ಲಿ ಅಪೊಸ್ತಲ ಪೌಲ ತಿಮೊತಿಗೆ ಏನು ಮಾಡೋಕೆ ಪ್ರೋತ್ಸಾಹಿಸಿದ?

3 ತಿಮೊತಿಗೆ ಅಪೊಸ್ತಲ ಪೌಲ ಮೊದಲನೇ ಪತ್ರ ಬರೆಯುವಾಗ, ತಿಮೊತಿ ಈಗಾಗಲೇ ಒಬ್ಬ ಹಿರಿಯನಾಗಿದ್ದ. ಆದ್ರೂ ಇನ್ನೂ ಚೆನ್ನಾಗಿ ಯೆಹೋವನ ಸೇವೆ ಮಾಡೋಕೆ ತಿಮೊತಿಗೆ ಪ್ರೋತ್ಸಾಹ ಕೊಟ್ಟ. (1 ತಿಮೊತಿ 4:12-16 ಓದಿ.) ತಿಮೊತಿಗೆ ಎರಡು ರೀತಿಯ ಗುರಿಗಳನ್ನ ಇಡೋಕೆ ಪೌಲ ಹೇಳಿದ. (1) ಪ್ರೀತಿ, ನಂಬಿಕೆ, ನೈತಿಕ ಶುದ್ಧತೆ ತರ ಇನ್ನೂ ಬೇರೆ ಗುಣಗಳನ್ನ ಬೆಳೆಸಿಕೊಳ್ಳೋಕೆ ಹೇಳಿದ. (2) ಓದೋದ್ರಲ್ಲಿ, ಪ್ರೋತ್ಸಾಹ ಕೊಡೋದ್ರಲ್ಲಿ, ಕಲಿಸೋದ್ರಲ್ಲಿ ಕೌಶಲಗಳನ್ನ ಬೆಳೆಸಿಕೊಳ್ಳೋಕೆ ಹೇಳಿದ. ಗುರಿಗಳನ್ನ ಇಡೋದ್ರಿಂದ ಯೆಹೋವನ ಸೇವೆಯನ್ನ ಚೆನ್ನಾಗಿ ಮಾಡೋಕೆ ಹೇಗೆ ಸಹಾಯ ಆಗುತ್ತೆ ಅಂತ ತಿಮೊತಿಯ ಉದಾಹರಣೆಯಿಂದ ನೋಡೋಣ. ಅಷ್ಟೇ ಅಲ್ಲ, ನಾವು ಇನ್ನೂ ಬೇರೆಬೇರೆ ರೀತಿಯಲ್ಲಿ ಹೇಗೆ ಸೇವೆಯನ್ನ ಮಾಡಬಹುದು ಅಂತನೂ ನೋಡೋಣ.

ಯೆಹೋವನಿಗೆ ಇಷ್ಟವಾಗೋ ಗುಣಗಳನ್ನ ಬೆಳೆಸಿಕೊಳ್ಳಿ

4. ಫಿಲಿಪ್ಪಿ 2:19-22 ರಲ್ಲಿ ಹೇಳೋ ತರ ತಿಮೊತಿ ಯೆಹೋವನ ಸೇವೆನ ಚೆನ್ನಾಗಿ ಮಾಡ್ತಿದ್ದ ಅಂತ ಹೇಗೆ ಹೇಳಬಹುದು?

4 ತಿಮೊತಿಯಲ್ಲಿ ತುಂಬ ಒಳ್ಳೇ ಗುಣಗಳು ಇದ್ದಿದ್ರಿಂದ ಅವನು ಯೆಹೋವನ ಸೇವೆಯನ್ನ ಚೆನ್ನಾಗಿ ಮಾಡ್ತಿದ್ದ. (ಫಿಲಿಪ್ಪಿ 2:19-22 ಓದಿ.) ತಿಮೊತಿ ದೀನನಾಗಿದ್ದ, ನಿಷ್ಠೆಯಿಂದ ಇದ್ದ, ಕಷ್ಟಪಟ್ಟು ಕೆಲಸ ಮಾಡ್ತಿದ್ದ ಮತ್ತು ಅವನಿಗೆ ಯಾವ ಜವಾಬ್ದಾರಿ ಕೊಟ್ರೂ ಅದನ್ನ ಚೆನ್ನಾಗಿ ಮಾಡ್ತಿದ್ದ. ಅಷ್ಟೇ ಅಲ್ಲ, ಸಹೋದರ ಸಹೋದರಿಯರಂದ್ರೆ ಅವನಿಗೆ ತುಂಬ ಇಷ್ಟ ಇತ್ತು, ಅವರ ಬಗ್ಗೆ ಕಾಳಜಿ ವಹಿಸುತ್ತಿದ್ದ. ಅದಕ್ಕೆ ಪೌಲನಿಗೆ ತಿಮೊತಿ ಅಂದ್ರೆ ತುಂಬ ಇಷ್ಟ ಇತ್ತು ಮತ್ತು ಅವನನ್ನ ನಂಬುತ್ತಿದ್ದ. ಹಾಗಾಗಿ ಅವನಿಗೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಕೊಟ್ಟ. (1 ಕೊರಿಂ. 4:17) ತಿಮೊತಿ ತರಾನೇ ನಾವೂ ಒಳ್ಳೇ ಗುಣಗಳನ್ನ ಬೆಳೆಸಿಕೊಂಡ್ರೆ ಯೆಹೋವ ನಮ್ಮನ್ನ ಇಷ್ಟ ಪಡ್ತಾನೆ ಮತ್ತು ನಾವು ನಮ್ಮ ಸಹೋದರ ಸಹೋದರಿಯರಿಗೆ ಇನ್ನೂ ಜಾಸ್ತಿ ಸಹಾಯ ಮಾಡಬಹುದು.—ಕೀರ್ತ. 25:9; 138:6.

5. (ಎ) ನೀವು ಯಾವ ಗುಣ ಬೆಳೆಸಿಕೊಳ್ಳಬೇಕು ಅಂತ ತಿಳಿದುಕೊಳ್ಳೋಕೆ ಏನು ಮಾಡಬೇಕು? (ಬಿ) ಚಿತ್ರದಲ್ಲಿರೋ ಯುವ ಸಹೋದರಿ ಅನುಕಂಪ ತೋರಿಸಬೇಕು ಅನ್ನೋ ತನ್ನ ಗುರಿಯನ್ನು ಮುಟ್ಟೋಕೆ ಏನು ಮಾಡುತ್ತಿದ್ದಾರೆ?

5 ಒಂದು ಗುರಿಯಿಡಿ. ನೀವು ಯಾವ ಗುಣಗಳನ್ನ ಬೆಳೆಸಿಕೊಳ್ಳಬೇಕು ಅಂತ ತಿಳಿದುಕೊಳ್ಳೋಕೆ ಯೆಹೋವನ ಹತ್ರ ಚೆನ್ನಾಗಿ ಪ್ರಾರ್ಥನೆ ಮಾಡಿ. ಆಮೇಲೆ ಆ ಗುಣಗಳನ್ನ ಒಂದೊಂದಾಗಿ ಬೆಳೆಸಿಕೊಳ್ಳೋಕೆ ಪ್ರಯತ್ನ ಮಾಡಿ. ಉದಾಹರಣೆಗೆ, “ಸಹೋದರ ಸಹೋದರಿಯರಿಗೆ ಸಹಾಯ ಮಾಡೋಕೆ ನನ್ನಲ್ಲಿ ಅನುಕಂಪ ಇದೆಯಾ? ಮನಸ್ತಾಪ ಆದಾಗ ನಾನೇ ಮುಂದೆ ಹೋಗಿ ಕ್ಷಮೆ ಕೇಳಿ ಶಾಂತಿ ಸಮಾಧಾನದಿಂದ ಇರೋಕೆ ಪ್ರಯತ್ನ ಮಾಡ್ತೀನಾ?” ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಇದರ ಬಗ್ಗೆ ನಿಮ್ಮ ಆಪ್ತ ಸ್ನೇಹಿತರ ಹತ್ರ ಮಾತಾಡಿ. ಈ ಗುಣಗಳನ್ನು ಬೆಳೆಸಿಕೊಳ್ಳೋಕೆ ಏನು ಮಾಡಬೇಕು ಅಂತ ಅವರ ಹತ್ರ ಸಹಾಯ ಕೇಳಿ.—ಜ್ಞಾನೋ. 27:6.

6. ಒಂದು ಗುಣನ ಬೆಳೆಸಿಕೊಳ್ಳೋಕೆ ನೀವೇನು ಮಾಡಬಹುದು?

6 ಗುರಿ ಮುಟ್ಟೋಕೆ ಪ್ರಯತ್ನ ಮಾಡಿ. ಇದನ್ನ ಮಾಡೋ ಒಂದು ವಿಧ, ನೀವು ಬೆಳೆಸಿಕೊಳ್ಳೋಕೆ ಇಷ್ಟ ಪಡೋ ಗುಣದ ಬಗ್ಗೆ ಓದಿ, ಯೋಚನೆ ಮಾಡಿ. ಉದಾಹರಣೆಗೆ, ನೀವು ಕ್ಷಮಿಸೋ ಗುಣವನ್ನ ಬೆಳೆಸಿಕೊಳ್ಳಬೇಕಂದ್ರೆ ಈ ಗುಣವನ್ನ ತೋರಿಸಿದವರ ಮತ್ತು ತೋರಿಸದೆ ಇದ್ದವರ ಉದಾಹರಣೆಯನ್ನ ಬೈಬಲಲ್ಲಿ ಓದಿ ನೋಡಿ, ಅವರ ಬಗ್ಗೆ ಯೋಚನೆ ಮಾಡಿ. ಯೇಸು ಬೇರೆಯವರನ್ನ ಮನಸ್ಸಾರೆ ಕ್ಷಮಿಸುತ್ತಿದ್ದನು. (ಲೂಕ 7:47, 48) ಅವರಲ್ಲಿ ತಪ್ಪು ಹುಡುಕುತ್ತಿರಲಿಲ್ಲ, ಅವರು ಮುಂದೆ ಬದಲಾಗ್ತಾರೆ, ಒಳ್ಳೇದನ್ನ ಮಾಡ್ತಾರೆ ಅಂತ ನಂಬುತ್ತಿದ್ದನು. ಆದ್ರೆ ಫರಿಸಾಯರು ‘ಬೇರೆಯವ್ರನ್ನ ಕೀಳಾಗಿ ನೋಡುತ್ತಿದ್ದರು.’ (ಲೂಕ 18:9) ಬೈಬಲಲ್ಲಿ ಇವರ ಬಗ್ಗೆ ಓದಿದ ಮೇಲೆ “ನಾನು ಸಹೋದರ ಸಹೋದರಿಯರಲ್ಲಿ ಒಳ್ಳೇ ಗುಣಗಳನ್ನ ನೋಡ್ತಿನಾ ಅಥವಾ ಅವರಲ್ಲಿ ತಪ್ಪು ಹುಡುಕುತ್ತೀನಾ?” ಅಂತ ಕೇಳಿಕೊಳ್ಳಿ. ಒಂದುವೇಳೆ ಯಾರನ್ನಾದರೂ ಕ್ಷಮಿಸೋಕೆ ಕಷ್ಟ ಆಗ್ತಿದೆ ಅಂದ್ರೆ ಆ ವ್ಯಕ್ತಿಯಲ್ಲಿರೋ ಎಲ್ಲಾ ಒಳ್ಳೇ ಗುಣಗಳನ್ನ ಬರೆಯಿರಿ. “ನನ್ನ ಜಾಗದಲ್ಲಿ ಯೇಸು ಇದ್ದಿದ್ರೆ ಏನು ಮಾಡ್ತಿದ್ದನು? ಅವನು ಅವರನ್ನು ಕ್ಷಮಿಸುತ್ತಿದ್ದನಾ?” ಅಂತ ಕೇಳಿಕೊಳ್ಳಿ. ಈ ತರ ಮಾಡಿದ್ರೆ ಆ ವ್ಯಕ್ತಿ ಬಗ್ಗೆ ನೀವು ಯೋಚನೆ ಮಾಡೋ ರೀತಿನ ಬದಲಾಯಿಸಿಕೊಳ್ಳೋಕೆ ಆಗುತ್ತೆ. ನಿಮ್ಮ ಮನಸ್ಸನ್ನು ನೋಯಿಸಿದವರನ್ನ ಕ್ಷಮಿಸೋಕೆ ಮೊದಮೊದಲು ಕಷ್ಟ ಅಂತ ಅನಿಸಬಹುದು. ಆದ್ರೆ ನೀವು ಪ್ರಯತ್ನ ಮಾಡುತ್ತಾ ಇದ್ರೆ ಕ್ಷಮಿಸೋ ಗುಣನ ಬೆಳೆಸಿಕೊಳ್ತೀರ.

ಕೌಶಲಗಳನ್ನ ಬೆಳೆಸಿಕೊಳ್ಳಿ

7. ಈಗ ಯೆಹೋವ ದೇವರು ಕೌಶಲ ಇರೋ ಸಹೋದರ ಸಹೋದರಿಯರಿಂದ ಏನೆಲ್ಲಾ ಸಾಧನೆ ಮಾಡಿಸುತ್ತಿದ್ದಾರೆ? (ಜ್ಞಾನೋಕ್ತಿ 22:29)

7 ಯಾವುದಾದ್ರೂ ಒಂದು ಕೌಶಲವನ್ನ ಬೆಳೆಸಿಕೊಳ್ಳೋ ಗುರಿಯಿಡಿ. ಬೆತೆಲ್‌ ಕಟ್ಟಡಗಳನ್ನ, ಅಧಿವೇಶನದ ಹಾಲ್‌ಗಳನ್ನ ಮತ್ತು ರಾಜ್ಯ ಸಭಾಗೃಹಗಳನ್ನ ಕಟ್ಟೋಕೆ ತುಂಬ ಜನ ಬೇಕಾಗಿದ್ದಾರೆ. ನಿಮಗೆ ಕೆಲಸ ಬರಲ್ಲ ಅಂತ ಬೇಜಾರು ಮಾಡಿಕೊಳ್ಳಬೇಡಿ. ಅನುಭವ ಇರೋ ನಮ್ಮ ಸಹೋದರ ಸಹೋದರಿಯರಿಂದ ತುಂಬ ಜನ ಕೆಲಸ ಕಲ್ತಿದ್ದಾರೆ. ಚಿತ್ರದಲ್ಲಿ ನೋಡೋ ಹಾಗೆ ಸಹೋದರರು ಮಾತ್ರ ಅಲ್ಲ, ಸಹೋದರಿಯರು ಕೂಡ ಅಧಿವೇಶನದ ಹಾಲ್‌ಗಳು ಅಥವಾ ಸಭಾಗೃಹಗಳನ್ನ ಚೆನ್ನಾಗಿ ಇಟ್ಟುಕೊಳ್ಳೋಕೆ ಬೇಕಾದ ಕೌಶಲಗಳನ್ನ ಬೆಳೆಸಿಕೊಳ್ಳುತ್ತಿದ್ದಾರೆ. “ಯುಗಯುಗಕ್ಕೂ ರಾಜನಾದ” ಯೆಹೋವ ದೇವರು, ಮತ್ತು ‘ರಾಜರ ರಾಜನಾಗಿರೋ’ ಯೇಸು ಇಂಥ ಸಹೋದರ ಸಹೋದರಿಯರ ಕೈಯಿಂದ ದೊಡ್ಡದೊಡ್ಡ ಸಾಧನೆಗಳನ್ನ ಮಾಡಿಸುತ್ತಿದ್ದಾರೆ. (1 ತಿಮೊ. 1:17; 6:15; ಜ್ಞಾನೋಕ್ತಿ 22:29 ಓದಿ.) ನಾವು ನಮಗೆ ಹೆಸರು ಮಾಡಿಕೊಳ್ಳೋಕೆ ಅಲ್ಲ, ಯೆಹೋವನ ಹೆಸರಿಗೆ ಗೌರವ ತರೋಕೆ ನಮ್ಮ ಕೌಶಲಗಳನ್ನ ಉಪಯೋಗಿಸಬೇಕು.—ಯೋಹಾ. 8:54.

8. ಯಾವ ಕೌಶಲ ಬೆಳೆಸಿಕೊಳ್ಳಬೇಕು ಅಂತ ತಿಳಿದುಕೊಳ್ಳೋಕೆ ಏನು ಮಾಡಬೇಕು?

8 ಒಂದು ಗುರಿಯಿಡಿ. ನೀವು ಯಾವ ಕೌಶಲ ಬೆಳೆಸಿಕೊಳ್ಳಬೇಕು ಅಂತ ತಿಳಿದುಕೊಳ್ಳೋಕೆ ನಿಮ್ಮ ಸಭೆಯ ಹಿರಿಯರ ಹತ್ರ ಅಥವಾ ಸಂಚರಣ ಮೇಲ್ವಿಚಾರಕರ ಹತ್ರ ಕೇಳಬಹುದು. ಆಗ ಅವರು ನಿಮಗೆ ಇನ್ನೂ ಚೆನ್ನಾಗಿ ಮಾತಾಡೋಕೆ, ಬೇರೆಯವರಿಗೆ ಚೆನ್ನಾಗಿ ಕಲಿಸೋಕೆ ಪ್ರಯತ್ನ ಮಾಡಿ ಅಂತ ಹೇಳಬಹುದು. ಆಗ ಕಲಿಸೋದ್ರಲ್ಲಿ ಯಾವ ನಿರ್ದಿಷ್ಟ ಕೌಶಲವನ್ನ ಬೆಳೆಸಿಕೊಳ್ಳಬೇಕು ಅಂತ ಅವರ ಹತ್ರ ಕೇಳಿ ತಿಳಿದುಕೊಳ್ಳಿ. ಆ ಕೌಶಲವನ್ನ ಬೆಳೆಸಿಕೊಳ್ಳೋಕೆ ಪ್ರಯತ್ನ ಮಾಡಿ. ಇದನ್ನ ಹೇಗೆ ಮಾಡೋದು?

9. ಒಂದು ಕೌಶಲವನ್ನ ಬೆಳೆಸಿಕೊಳ್ಳೋಕೆ ನೀವೇನು ಮಾಡಬೇಕು?

9 ಗುರಿ ಮುಟ್ಟೋಕೆ ಪ್ರಯತ್ನ ಮಾಡಿ. ನೀವು ಕಲಿಸೋದ್ರಲ್ಲಿ ಕೌಶಲ ಬೆಳೆಸಿಕೊಳ್ಳಬೇಕಂದ್ರೆ ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ ಅನ್ನೋ ಕಿರುಹೊತ್ತಗೆಯನ್ನ ಚೆನ್ನಾಗಿ ಓದಿ. ಮಧ್ಯವಾರದ ಕೂಟದಲ್ಲಿ ನಿಮಗೆ ನೇಮಕ ಸಿಕ್ಕಿದಾಗ ಅನುಭವ ಇರೋ ಸಹೋದರರ ಹತ್ರ ಹೋಗಿ ನೇಮಕ ಮಾಡೋ ಮುಂಚೆನೇ ಅವರ ಮುಂದೆ ಮಾಡಿ ತೋರಿಸಿ. ಆಮೇಲೆ ಅದನ್ನ ಇನ್ನೂ ಚೆನ್ನಾಗಿ ಮಾಡೋದು ಹೇಗೆ ಅಂತ ಕೇಳಿ. ಇದ್ರಿಂದ ನಿಮ್ಮ ಕೌಶಲಗಳನ್ನ ಬೆಳೆಸಿಕೊಳ್ತೀರ. ಅಷ್ಟೇ ಅಲ್ಲ, ಯಾವ ನೇಮಕಗಳನ್ನ ಕೊಟ್ಟರೂ ಅದನ್ನ ಚೆನ್ನಾಗಿ ಮಾಡುವವರು ಅನ್ನೋ ಹೆಸರನ್ನ ಸಂಪಾದಿಸ್ತೀರ.—ಜ್ಞಾನೋ. 21:5; 2 ಕೊರಿಂ. 8:22.

10. ಒಂದು ಕೌಶಲವನ್ನ ಬೆಳೆಸಿಕೊಳ್ಳೋಕೆ ಕಷ್ಟ ಆದಾಗ ಏನು ಮಾಡಬೇಕು? ಉದಾಹರಣೆ ಕೊಡಿ.

10 ನಿಮಗೆ ಯಾವುದಾದರೂ ಒಂದು ಕೌಶಲವನ್ನ ಬೆಳೆಸಿಕೊಳ್ಳೋಕೆ ಕಷ್ಟ ಆಗ್ತಿದ್ರೆ, ‘ನನ್ನ ಕೈಯಲ್ಲಿ ಆಗ್ತಿಲ್ಲ’ ಅಂತ ಅನಿಸಿದ್ರೆ ಏನು ಮಾಡ್ತೀರಾ? ಸೋತುಹೋಗಬೇಡಿ, ಪ್ರಯತ್ನ ಮಾಡ್ತಾ ಇರಿ. ಸಹೋದರ ಗ್ಯಾರಿಗೆ ಚೆನ್ನಾಗಿ ಓದೋಕೆ ಬರುತ್ತಿರಲಿಲ್ಲ. ಇದ್ರಿಂದ ಸಭೆಯಲ್ಲಿ ಎಲ್ಲರ ಮುಂದೆ ಓದೋಕೆ ಅವರು ಸಂಕೋಚ ಪಟ್ಟುಕೊಳ್ಳುತ್ತಿದ್ದರು. ಆದ್ರೂ ಅವರು ಪ್ರಯತ್ನ ಬಿಟ್ಟುಬಿಡಲಿಲ್ಲ. ಅವರು ತರಬೇತಿ ಪಡೆದುಕೊಂಡಿದ್ರಿಂದ ಈಗ ಸಭೆಯಲ್ಲಿ, ಸರ್ಕಿಟ್‌ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಭಾಷಣ ಕೊಡೋಕೆ ಆಗ್ತಿದೆ ಅಂತ ಅವರು ಹೇಳ್ತಾರೆ.

11. ತಿಮೊತಿ ತರ ನಾವೇನು ಮಾಡಬಹುದು?

11 ತಿಮೊತಿ ಸೂಪರ್‌ ಆಗಿ ಭಾಷಣ ಕೊಡುತ್ತಿದ್ದನಾ? ಅಥವಾ ಜನರಿಗೆ ತುಂಬಾ ಚೆನ್ನಾಗಿ ಕಲಿಸುತ್ತಿದ್ದನಾ? ನಮಗೆ ಗೊತ್ತಿಲ್ಲ. ಆದ್ರೆ ಒಂದಂತೂ ನಿಜ. ಪೌಲ ಕೊಟ್ಟ ಸಲಹೆಯನ್ನ ಪಾಲಿಸಿದ್ರಿಂದ ತನಗೆ ಸಿಕ್ಕ ಜವಾಬ್ದಾರಿಗಳನ್ನ ತುಂಬ ಚೆನ್ನಾಗಿ ಮಾಡಿದ. (2 ತಿಮೊ. 3:10) ಅದೇ ತರ ನಾವೂ ಕೌಶಲಗಳನ್ನ ಬೆಳೆಸಿಕೊಂಡ್ರೆ ನಮಗೆ ಸಿಗೋ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋಕೆ ಕಲಿತೀವಿ.

ಬೇರೆಬೇರೆ ರೀತಿಯಲ್ಲಿ ಸಹೋದರ ಸಹೋದರಿಯರ ಸೇವೆ ಮಾಡಿ

12. ಬೇರೆಯವರು ನಿಮಗೆ ಹೇಗೆಲ್ಲಾ ಸಹಾಯ ಮಾಡಿದ್ದಾರೆ?

12 ಬೇರೆಯವರು ಸಹಾಯ ಮಾಡಿದಾಗ ನಮಗೆ ಎಷ್ಟೋ ಒಳ್ಳೇದಾಗಿದೆ. ನಾವು ಆಸ್ಪತ್ರೆಯಲ್ಲಿದ್ದಾಗ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಹಿರಿಯರು ಅಥವಾ ರೋಗಿಗಳನ್ನು ಭೇಟಿಮಾಡುವ ಗುಂಪಿಂದ (ಪೇಶೆಂಟ್‌ ವಿಸಿಟೇಶನ್‌ ಗ್ರೂಪ್‌) ಸಹೋದರರು ಬಂದಾಗ ನಮಗೆ ಧೈರ್ಯ ಸಿಗುತ್ತೆ. ನಾವು ಕಷ್ಟದಲ್ಲಿರುವಾಗ ಯಾರಾದ್ರೂ ಹಿರಿಯರು ಬಂದು ನಮ್ಮನ್ನ ಮಾತಾಡಿಸಿ, ನಮ್ಮ ಸುಖ-ದುಃಖಗಳನ್ನ ಕೇಳ್ತಾ ನಮಗೆ ಸಮಾಧಾನ ಮಾಡಿದಾಗ ಮರುಭೂಮಿಯಲ್ಲಿ ನೀರು ಸಿಕ್ಕಿದ ಹಾಗಾಗುತ್ತೆ. ಬೈಬಲ್‌ ಸ್ಟಡಿ ಮಾಡೋಕೆ ಅನುಭವ ಇರೋ ಪಯನೀಯರ್‌ ನಮ್ಮ ಜೊತೆ ಬಂದು ಸ್ಟಡಿನ ಇನ್ನೂ ಚೆನ್ನಾಗಿ ಮಾಡೋಕೆ ಟಿಪ್ಸ್‌ ಕೊಟ್ಟಾಗ ತುಂಬ ಪ್ರಯೋಜನ ಆಗುತ್ತೆ. ಈ ರೀತಿ ಸಹಾಯ ಮಾಡಿದಾಗ ಆ ಸಹೋದರ ಸಹೋದರಿಯರಿಗೆ ತುಂಬ ಖುಷಿಯಾಗುತ್ತೆ. ನಮಗೂ ಆ ಖುಷಿ ಸಿಗಬೇಕಂದ್ರೆ ನಾವೂ ಬೇರೆಯವರಿಗೆ ಸಹಾಯ ಮಾಡಬೇಕು. ಯಾಕಂದ್ರೆ “ತಗೊಳ್ಳೋದಕ್ಕಿಂತ ಕೊಡೋದ್ರಲ್ಲಿ ಜಾಸ್ತಿ ಖುಷಿ ಸಿಗುತ್ತೆ” ಅಂತ ಯೇಸು ಹೇಳಿದನು. (ಅ. ಕಾ. 20:35) ಹಾಗಾಗಿ ನೀವೂ ಬೇರೆಯವರಿಗೆ ಸಹಾಯ ಮಾಡೋ ಗುರಿಯಿಡಿ.

13. ನಾವು ಗುರಿಯನ್ನ ಯಾವ ತರ ಇಡಬೇಕು?

13 ನೀವು ಗುರಿಗಳನ್ನ ಇಡುವಾಗ ಸಭೆಯಲ್ಲಿರೋ ಸಹೋದರ ಸಹೋದರಿಯರಿಗೆ ಸಹಾಯ ಮಾಡಬೇಕು ಅಂತಷ್ಟೇ ಅಂದುಕೊಳ್ಳಬೇಡಿ. ಆಗ ನೀವು ಅದನ್ನ ಮಾಡ್ತಿದ್ದೀರಾ ಇಲ್ವಾ ಅನ್ನೋದೇ ಗೊತ್ತಾಗಲ್ಲ. ಆದ್ರೆ ಅದನ್ನ ಯಾವ್ಯಾವ ರೀತಿಯಲ್ಲಿ ಮಾಡಬೇಕು ಅಂತಾನೂ ಯೋಚಿಸಿ ಮತ್ತು ಅದನ್ನ ಬರೆದಿಡಿ. ಆಗ ನೀವು ಆ ಗುರಿ ತಲುಪುತ್ತಿದ್ದೀರಾ ಇಲ್ವಾ, ಪ್ರಯತ್ನ ಮಾಡುತ್ತಿದ್ದೀರಾ ಇಲ್ವಾ ಅಂತ ನಿಮಗೆ ಗೊತ್ತಾಗುತ್ತೆ.

14. ನಮ್ಮ ಗುರಿಗಳನ್ನ ಬದಲಾಯಿಸಿಕೊಳ್ಳೋಕೆ ನಾವು ಯಾಕೆ ರೆಡಿಯಾಗಿರಬೇಕು?

14 ಪರಿಸ್ಥಿತಿಗಳು ಯಾವಾಗಲೂ ನಮ್ಮ ಕೈಯಲ್ಲಿ ಇರಲ್ಲ. ಹಾಗಾಗಿ ಪರಿಸ್ಥಿತಿಗೆ ತಕ್ಕಂತೆ ನಮ್ಮ ಗುರಿಗಳನ್ನ ಹೊಂದಿಸಿಕೊಳ್ಳಬೇಕು. ಉದಾಹರಣೆಗೆ, ಥೆಸಲೊನೀಕದಲ್ಲಿ ಹೊಸ ಸಭೆಯನ್ನ ಶುರುಮಾಡೋಕೆ ಪೌಲ ಸಹಾಯ ಮಾಡಿದ, ಅಲ್ಲಿಗೆ ಬರೋ ಹೊಸಬರಿಗೆ ಪೌಲ ಅಲ್ಲೇ ಇದ್ದು ಸಹಾಯ ಮಾಡಬೇಕು ಅಂತ ಅವನು ಯೋಚಿಸಿರಬಹುದು. ಆದ್ರೆ, ಆ ಊರಿನ ಜನರು ವಿರೋಧಿಸಿದ್ರಿಂದ ಪೌಲ ಅಲ್ಲಿಂದ ಹೋಗಬೇಕಾಯ್ತು. (ಅ. ಕಾ. 17:1-5, 10) ಅಷ್ಟೇ ಅಲ್ಲ, ಪೌಲ ಅಲ್ಲೇ ಇದ್ದಿದ್ದರೆ ಅಲ್ಲಿರೋ ಸಹೋದರರಿಗೆ ಅಪಾಯ ಆಗುತ್ತಿತ್ತು. ಹಾಗಂತ ಪೌಲ ತನ್ನ ಗುರಿಯನ್ನ ಬಿಟ್ಟುಬಿಡಲಿಲ್ಲ, ಸನ್ನಿವೇಶಕ್ಕೆ ತಕ್ಕ ಹಾಗೆ ತನ್ನ ಗುರಿಯನ್ನು ಬದಲಾಯಿಸಿಕೊಂಡ. ಥೆಸಲೊನೀಕದಲ್ಲಿದ್ದ ಸಹೋದರರಿಗೆ ಪ್ರೋತ್ಸಾಹಿಸೋಕೆ ತಿಮೊತಿನ ಕಳುಹಿಸಿದ. (1 ಥೆಸ. 3:1-3) ಅಲ್ಲಿದ್ದ ಸಹೋದರರಿಗೆ ತಿಮೊತಿಯಿಂದ ಸಹಾಯ ಸಿಕ್ಕಿದಾಗ ಎಷ್ಟು ಖುಷಿಯಾಗಿರಬೇಕು ಅಲ್ವಾ!

15. ಪರಿಸ್ಥಿತಿ ಬದಲಾದಾಗ ನಾವೇನು ಮಾಡಬೇಕು? ಒಂದು ಉದಾಹರಣೆ ಕೊಡಿ.

15 ನಮ್ಮ ಪರಿಸ್ಥಿತಿಗಳು ಕೆಲವೊಮ್ಮೆ ಬದಲಾಗಬಹುದು. ಆಗ ನಾವಿಟ್ಟಿರೋ ಗುರಿಗಳನ್ನ ನಮ್ಮಿಂದ ಮುಟ್ಟೋಕೆ ಆಗಲ್ಲ. (ಪ್ರಸಂ. 9:11) ಹಾಗಾದಾಗ ನಾವೂ ಪೌಲನ ತರ ನಮ್ಮ ಗುರಿಗಳನ್ನ ಬದಲಾಯಿಸಿಕೊಂಡು ನಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡಬೇಕು. ಟೆಡ್‌ ಮತ್ತು ಅವನ ಹೆಂಡತಿ ಹೈಡಿ ಇದನ್ನೇ ಮಾಡಿದ್ರು. ಅವರಿಬ್ಬರೂ ಬೆತೆಲಿನಲ್ಲಿ ಸೇವೆ ಮಾಡ್ತಿದ್ರು. ಆದ್ರೆ ಅವರಲ್ಲಿ ಒಬ್ರಿಗೆ ಹುಷಾರಿಲ್ಲದ ಹಾಗಾಯ್ತು. ಹಾಗಾಗಿ ಅವರು ಬೆತೆಲ್‌ನ ಬಿಡಬೇಕಾಯ್ತು. ಆದ್ರೆ ಅವರಿಗೆ ಯೆಹೋವನ ಮೇಲೆ ಪ್ರೀತಿ ಇದ್ದಿದ್ರಿಂದ ಇನ್ನೊಂದು ರೀತಿಯಲ್ಲಿ ಆತನ ಸೇವೆ ಮಾಡೋಕೆ ಯೋಚನೆ ಮಾಡಿದ್ರು. ಅವರು ರೆಗ್ಯುಲರ್‌ ಪಯನೀಯರಿಂಗ್‌ ಶುರುಮಾಡಿದ್ರು. ಸ್ವಲ್ಪ ಸಮಯ ಆದ್ಮೇಲೆ ವಿಶೇಷ ಪಯನೀಯರಾದರು ಮತ್ತು ಸಹೋದರ ಟೆಡ್‌ ಬದಲಿ ಸಂಚರಣಾ ಮೇಲ್ವಿಚಾರಕರಾಗಿ ತರಬೇತಿ ಪಡ್ಕೊಂಡ್ರು. ಆದ್ರೆ ಆಮೇಲೆ ಇನ್ನೊಂದು ಬದಲಾವಣೆ ಆಯ್ತು. ಅದೇನಂದ್ರೆ, ಇಂತಿಷ್ಟೇ ವಯಸ್ಸಿನ ತನಕ ಸಂಚರಣಾ ಮೇಲ್ವಿಚಾರಕರಾಗಿ ಸೇವೆ ಮಾಡಬೇಕು ಅಂತ ಸಂಘಟನೆಯಲ್ಲಿ ತೀರ್ಮಾನ ಮಾಡಿದ್ರು. ಇದ್ರಿಂದ ಟೆಡ್‌ ಸಂಚರಣಾ ಮೇಲ್ವಿಚಾರಕನಾಗಿಯೂ ಸೇವೆ ಮಾಡೋಕೆ ಆಗಲಿಲ್ಲ. ಆಗ ಅವರಿಬ್ಬರಿಗೂ ತುಂಬ ದುಃಖ ಆಯ್ತು. ಆದ್ರೂ ಯೆಹೋವನ ಸೇವೆನ ಇನ್ನೂ ಹೇಗೆಲ್ಲಾ ಮಾಡಬಹುದು ಅಂತ ಯೋಚನೆ ಮಾಡಿದ್ರು. “ಬೇರೆ ಬೇರೆ ರೀತಿಯಲ್ಲೂ ಸೇವೆ ಮಾಡೋಕೆ ನಾವು ರೆಡಿ ಇರ್ಬೇಕು ಅಂತ ನಾನು ಕಲಿತುಕೊಂಡೆ” ಅಂತ ಟೆಡ್‌ ಹೇಳ್ತಾರೆ.

16. ಗಲಾತ್ಯ 6:4 ರಿಂದ ನಾವೇನು ಕಲಿತೀವಿ?

16 ನಮ್ಮ ಜೀವನದಲ್ಲಿ ಯಾವಾಗ ಏನು ಬೇಕಾದ್ರೂ ಆಗಬಹುದು. ಇವತ್ತು ನಮಗಿರೋ ಜವಾಬ್ದಾರಿಗಳು ನಾಳೆ ಇಲ್ಲದೆ ಹೋಗಬಹುದು. ಆದ್ರೆ ಒಂದು ವಿಷಯವನ್ನ ನಾವು ಯಾವಾಗಲೂ ಮನಸ್ಸಲ್ಲಿಡಬೇಕು. ನಮ್ಮ ಜವಾಬ್ದಾರಿಗಳನ್ನು ನೋಡಿ ಯೆಹೋವ ನಮ್ಮನ್ನ ಪ್ರೀತಿಸ್ತಿಲ್ಲ. ಅಷ್ಟೇ ಅಲ್ಲ, ನಮಗಿರೋ ನೇಮಕಗಳನ್ನ ಬೇರೆಯವರಿಗಿರೋ ನೇಮಕಗಳ ಜೊತೆ ಹೋಲಿಸಿಕೊಳ್ಳಬಾರದು. “ನಾವು ಆ ತರ ನಮ್ಮನ್ನ ಹೋಲಿಸಿಕೊಂಡಾಗ ನಮ್ಮಲ್ಲಿರೋ ಖುಷಿಯನ್ನ ಕಳೆದುಕೊಂಡು ಬಿಡ್ತೀವಿ” ಅಂತ ಸಹೋದರಿ ಹೈಡಿ ಹೇಳ್ತಾರೆ. (ಗಲಾತ್ಯ 6:4 ಓದಿ.) ಹಾಗಾಗಿ ನಾವು ಈಗಿರೋ ಪರಿಸ್ಥಿತಿಯಲ್ಲಿ ಯೆಹೋವನಿಗೆ ಮತ್ತು ಬೇರೆಯವರಿಗೆ ಹೇಗೆಲ್ಲಾ ಸೇವೆ ಮಾಡಬಹುದು ಅಂತ ಯೋಚನೆ ಮಾಡಿದ್ರೆ ಚೆನ್ನಾಗಿರುತ್ತೆ. b

17. ಯೆಹೋವನ ಸೇವೆಯಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನ ಪಡೆದುಕೊಳ್ಳೋಕೆ ಏನು ಮಾಡಬೇಕು?

17 ಒಂದುವೇಳೆ ನಿಮಗೆ ಯೆಹೋವನ ಸೇವೆಯನ್ನ ಇನ್ನೂ ಜಾಸ್ತಿ ಮಾಡೋಕೆ ಆಸೆ ಇದ್ದರೆ ನಿಮ್ಮ ಜೀವನದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚೋಕೆ ಕಲಿಯಿರಿ ಮತ್ತು ಅನಾವಶ್ಯಕವಾಗಿ ಸಾಲ ಮಾಡಿಕೊಳ್ಳಬೇಡಿ. ನೀವು ಒಂದು ದೊಡ್ಡ ಗುರಿ ಮುಟ್ಟೋಕೆ ಚಿಕ್ಕಚಿಕ್ಕ ಗುರಿಗಳನ್ನ ಇಡಿ. ಉದಾಹರಣೆಗೆ, ನಿಮಗೆ ರೆಗ್ಯುಲರ್‌ ಪಯನೀಯರ್‌ ಆಗೋ ಗುರಿ ಇದ್ದರೆ ಕೆಲವು ತಿಂಗಳುಗಳು ಆಕ್ಸಿಲಿಯರಿ ಪಯನೀಯರಿಂಗ್‌ ಮಾಡೋಕೆ ಪ್ರಯತ್ನ ಮಾಡಿ. ಸಹಾಯಕ ಸೇವಕರಾಗೋ ಗುರಿ ಇಟ್ಟಿದ್ರೆ ಸಿಹಿಸುದ್ದಿ ಸಾರೋಕೆ ಜಾಸ್ತಿ ಸಮಯ ಕೊಡಿ ಮತ್ತು ಸಭೆಯಲ್ಲಿ ಯಾರಿಗಾದ್ರೂ ಹುಷಾರಿಲ್ಲದಿದ್ದರೆ, ಅವರನ್ನ ಮತ್ತು ವಯಸ್ಸಾಗಿರೋರನ್ನ ಆಗಾಗ ಭೇಟಿ ಮಾಡಿ, ಅವರ ಜೊತೆ ಸಮಯ ಕಳೆಯೋಕೆ ಪ್ರಯತ್ನ ಮಾಡಿ. ಹನಿಹನಿ ಕೂಡಿದರೆ ಹಳ್ಳ ಅನ್ನೋ ಹಾಗೆ ನೀವು ಈಗ ಸೇವೆ ಮಾಡುತ್ತಾ ಪಡೆದುಕೊಳ್ಳೋ ಅನುಭವಗಳು ಮುಂದೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋಕೆ ಸಹಾಯ ಮಾಡುತ್ತೆ. ಹಾಗಾಗಿ ನಿಮಗೆ ಯಾವ ನೇಮಕ, ಜವಾಬ್ದಾರಿಗಳು ಸಿಕ್ಕಿದರೂ ಅದನ್ನ ಚೆನ್ನಾಗಿ ಮಾಡೋಕೆ ನಿಮ್ಮಿಂದ ಆಗೋದನ್ನೆಲ್ಲಾ ಮಾಡಿ.—ರೋಮ. 12:11.

18. ಚಿತ್ರದಲ್ಲಿರೋ ಸಹೋದರಿ ಬೆವರ್ಲಿಯಿಂದ ನಾವೇನು ಕಲಿತೀವಿ?

18 ಗುರಿ ಇಟ್ಟು ಅದನ್ನ ಮುಟ್ಟೋಕೆ ನಮಗೆ ವಯಸ್ಸಿನ ಇತಿಮಿತಿ ಇಲ್ಲ. 75 ವರ್ಷದ ಸಹೋದರಿ ಬೆವರ್ಲಿ ಅವರ ಉದಾಹರಣೆ ನೋಡಿ. ಆರೋಗ್ಯದ ಸಮಸ್ಯೆಯಿಂದ ಅವರಿಗೆ ನಡೆಯೋಕೆ ಕಷ್ಟ ಆಗ್ತಿತ್ತು. ಆದ್ರೆ ಸ್ಮರಣೆಯ ಅಭಿಯಾನದಲ್ಲಿ ಯೆಹೋವನ ಸೇವೆ ಜಾಸ್ತಿ ಮಾಡಬೇಕು ಅಂತ ಅವರಿಗೆ ಆಸೆ ಇತ್ತು. ಹಾಗಾಗಿ ಅದಕ್ಕೋಸ್ಕರ ನಿರ್ದಿಷ್ಟ ಗುರಿಗಳನ್ನ ಇಟ್ಟರು. ಅಭಿಯಾನದಲ್ಲಿ ಸೇವೆ ಮಾಡಿದಾಗ ಆ ಸಹೋದರಿ ತುಂಬಾ ಖುಷಿ ಆಯ್ತು. ಅವರು ಮಾಡುತ್ತಿರುವ ಪ್ರಯತ್ನನ ನೋಡಿ ಬೇರೆ ಸಹೋದರ ಸಹೋದರಿಯರು, ಯೆಹೋವನ ಸೇವೆಯನ್ನ ಇನ್ನೂ ಜಾಸ್ತಿ ಮಾಡಬೇಕು ಅಂದುಕೊಂಡರು. ನಮ್ಮ ಜೊತೆ ಇರೋ ವಯಸ್ಸಾದ ಸಹೋದರ ಸಹೋದರಿಯರಿಗೆ ಇತಿಮಿತಿಗಳು ಇದ್ದರೂ ತಮ್ಮಿಂದ ಆಗೋದನ್ನ ಯೆಹೋವನ ಸೇವೆಯಲ್ಲಿ ಮಾಡುತ್ತಿದ್ದಾರೆ. ಅವರನ್ನ ನೋಡುವಾಗ ಯೆಹೋವನಿಗೆ ತುಂಬಾ ಖುಷಿಯಾಗುತ್ತೆ.—ಕೀರ್ತ. 71:17, 18.

19. ನಾವು ಯಾವ ತರದ ಗುರಿಗಳನ್ನ ಇಡಬಹುದು?

19 ನಿಮ್ಮಿಂದ ಮುಟ್ಟೋಕೆ ಆಗೋ ಗುರಿಗಳನ್ನ ಇಡಿ. ಯೆಹೋವನಿಗೆ ಇಷ್ಟ ಆಗೋ ಗುಣಗಳನ್ನ ಬೆಳೆಸಿಕೊಳ್ಳಿ. ಯೆಹೋವನಿಗೋಸ್ಕರ ಮತ್ತು ಆತನ ಸಂಘಟನೆಯಲ್ಲಿ ಜಾಸ್ತಿ ಸೇವೆ ಮಾಡೋಕೋಸ್ಕರ ಕೌಶಲಗಳನ್ನ ಕಲಿತುಕೊಳ್ಳಿ. ನಿಮ್ಮ ಸಹೋದರ ಸಹೋದರಿಯರ ಸೇವೆಯನ್ನ ಇನ್ನೂ ಜಾಸ್ತಿ ಮಾಡಿ. c ಹೀಗೆ ಮಾಡಿದ್ರೆ, ತಿಮೊತಿ ತರ ‘ನಿಮ್ಮ ಪ್ರಗತಿ ಎಲ್ರಿಗೆ ಸ್ಪಷ್ಟವಾಗಿ ಕಾಣಿಸುತ್ತೆ.’ ಯೆಹೋವನಿಂದ ಆಶೀರ್ವಾದನೂ ಸಿಗುತ್ತೆ.—1 ತಿಮೊ. 4:15.

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

a ತಿಮೊತಿ ಈಗಾಗಲೇ ಬೇರೆಯವರಿಗೆ ಚೆನ್ನಾಗಿ ಸಿಹಿಸುದ್ದಿ ಸಾರುತ್ತಿದ್ದ. ಆದ್ರೂ ಅಪೊಸ್ತಲ ಪೌಲ ತಿಮೊತಿಗೆ ಯೆಹೋವನ ಸೇವೆಯನ್ನ ಇನ್ನೂ ಚೆನ್ನಾಗಿ ಮಾಡೋಕೆ ಪ್ರೋತ್ಸಾಹಿಸಿದ. ಇದರಿಂದ ತಿಮೊತಿ ಯೆಹೋವನ ಸೇವೆಯನ್ನ ಚೆನ್ನಾಗಿ ಮಾಡಿದ ಮತ್ತು ಸಹೋದರ ಸಹೋದರಿಯರಿಗೆ ತುಂಬ ಸಹಾಯ ಮಾಡಿದ. ನೀವೂ ತಿಮೊತಿ ತರ ಆಗೋಕೆ ಇಷ್ಟಪಡ್ತೀರಾ? ಹಾಗಾದ್ರೆ ನೀವು ಯಾವ ಗುರಿಗಳನ್ನ ಇಡಬಹುದು ಮತ್ತು ಆ ಗುರಿಗಳನ್ನ ಹೇಗೆ ಮುಟ್ಟಬಹುದು ಅಂತ ಈ ಲೇಖನದಲ್ಲಿ ನೋಡೋಣ.

c ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ “ಯೆಹೋವನ ಸೇವೆಯಲ್ಲಿ ಪ್ರಗತಿ ಮಾಡುತ್ತಾ ಇರಿ” ಅನ್ನೋ 60ನೇ ಪಾಠ ನೋಡಿ.

d ಚಿತ್ರ ವಿವರಣೆ ಪುಟ: ಒಬ್ಬ ಸಹೋದರ ಇಬ್ಬರು ಸಹೋದರಿಯರಿಗೆ ಸಭೆಯನ್ನ ಚೆನ್ನಾಗಿ ನೋಡಿಕೊಳ್ಳೋಕೆ ಬೇಕಾದ ಕೌಶಲಗಳನ್ನ ಕಲಿಸಿಕೊಡುತ್ತಿದ್ದಾರೆ. ಆಮೇಲೆ ಆ ಇಬ್ಬರು ಸಹೋದರಿಯರು ಆ ಕೌಶಲಗಳನ್ನ ಬೆಳೆಸಿಕೊಂಡು ಕೆಲಸ ಮಾಡುತ್ತಿದ್ದಾರೆ.

e ಚಿತ್ರ ವಿವರಣೆ ಪುಟ: ಒಬ್ಬ ವಯಸ್ಸಾದ ಸಹೋದರಿಗೆ ಜಾಸ್ತಿ ಓಡಾಡೋಕೆ ಆಗಲ್ಲ. ಅದಕ್ಕೆ ಅವರು ಯೇಸುವಿನ ಮರಣದ ಸ್ಮರಣೆಗೆ ಜನರನ್ನ ಫೋನ್‌ ಮಾಡಿ ಕರೆಯುತ್ತಿದ್ದಾರೆ.