ನಿಮಗೆ ಗೊತ್ತಿತ್ತಾ?
ಪ್ರಾಚೀನ ಕಾಲದಲ್ಲಿ ಜನರು ಸಮುದ್ರ ಪ್ರಯಾಣಕ್ಕಾಗಿ ಹೇಗೆ ಏರ್ಪಾಡು ಮಾಡುತ್ತಿದ್ದರು?
ಪೌಲನ ದಿನಗಳಲ್ಲಿ, ಪ್ರಯಾಣಿಕರನ್ನು ಮಾತ್ರ ಕೊಂಡೊಯ್ಯುತ್ತಿದ್ದ ಹಡಗುಗಳು ಹೆಚ್ಚಾಗಿ ಇರುತ್ತಿರಲಿಲ್ಲ. ತಾವು ಹೋಗಬೇಕೆಂದಿರುವ ದಾರಿಯಲ್ಲಿ ಯಾವುದಾದರೂ ವ್ಯಾಪಾರಿ-ಹಡಗು ಹೋಗುತ್ತಿದೆಯಾ ಎಂದು ವಿಚಾರಿಸಿ ತಿಳುಕೊಳ್ಳುತ್ತಿದ್ದರು. ಒಂದುವೇಳೆ ಅಂಥ ಹಡಗು ಸಿಕ್ಕಿದರೂ ಪ್ರಯಾಣಿಕರನ್ನು ಕರಕೊಂಡು ಹೋಗುತ್ತಾ ಎಂದು ಕೇಳಬೇಕಿತ್ತು. (ಅ. ಕಾ. 21:2, 3) ಕೆಲವೊಮ್ಮೆ ಒಬ್ಬ ಪ್ರಯಾಣಿಕ ಹೋಗಲು ಬಯಸುವ ಸ್ಥಳಕ್ಕೆ ಯಾವ ಹಡಗೂ ಹೋಗದಿದ್ದ ಸಂದರ್ಭಗಳಿರುತ್ತಿತ್ತು. ಆಗ ಅವನು ತಾನು ಹೋಗಬೇಕೆಂದಿರುವ ಸ್ಥಳದ ಹತ್ತಿರದಲ್ಲಿರುವ ಒಂದು ಬಂದರಲ್ಲಿ ಇಳುಕೊಳ್ಳುತ್ತಿದ್ದನು. ನಂತರ ಬೇರೆ ಹಡಗನ್ನು ಹತ್ತಿ ತಾನು ಹೋಗಬೇಕಿದ್ದ ಸ್ಥಳಕ್ಕೆ ಹೋಗುತ್ತಿದ್ದನು.—ಅ. ಕಾ. 27:1-6.
ಹವಾಮಾನವನ್ನು ನೋಡಿ ಹಡಗುಗಳು ಹೊರಡುತ್ತಾ ಇದ್ದವು. ಹಾಗಾಗಿ ನಿರ್ದಿಷ್ಟವಾಗಿ ಒಂದು ಸಮಯ ಅಂತ ಇರುತ್ತಿರಲಿಲ್ಲ. ಇದಲ್ಲದೇ ಕೆಲವು ನಾವಿಕರು ತಮ್ಮ ಮೂಢನಂಬಿಕೆಯಿಂದ ಪ್ರಯಾಣದ ಸಮಯವನ್ನು ಬದಲಾಯಿಸುತ್ತಾ ಇದ್ದರು. ಒಂದುವೇಳೆ ಹಡಗಿನ ಹಗ್ಗಗಳ ಮೇಲೆ ಕಾಗೆ ಕೂತು ಕೂಗಿದರೆ ಮತ್ತು ಸಮುದ್ರ ತೀರದಲ್ಲಿ ಯಾವುದೋ ಹಡಗು ಒಡೆದುಹೋಗಿರುವುದನ್ನು ಕಂಡರೆ ಪ್ರಯಾಣವನ್ನು ಮಾಡುತ್ತಾ ಇರಲಿಲ್ಲ. ಸರಿಯಾದ ದಿಕ್ಕಿಗೆ ಬೀಸುವ ಗಾಳಿ ಇದ್ದಾಗ ಮಾತ್ರ ನಾವಿಕರು ಪ್ರಯಾಣವನ್ನು ಆರಂಭಿಸುತ್ತಿದ್ದರು. ಪ್ರಯಾಣಕ್ಕಾಗಿ ಒಬ್ಬರಿಗೆ ಹಡಗು ಸಿಕ್ಕಿದಾಗ ಅವರು ತಮ್ಮ ವಸ್ತುಗಳನ್ನು ತಗೊಂಡು ಬಂದರಿಗೆ ಹೋಗಿ ಕಾಯುತ್ತಿದ್ದರು. ಅವರು ಹೋಗಲಿರುವ ಹಡಗು ಹೊರಡಲಿದೆ ಎಂಬ ಪ್ರಕಟಣೆ ಕೇಳಿಸಿಕೊಂಡಾಗ ಅವರು ಹಡಗನ್ನು ಹತ್ತುತ್ತಿದ್ದರು.
ಲೈನೆಲ್ ಕ್ಯಾಸನ್ ಎಂಬ ಇತಿಹಾಸಗಾರ ತಿಳಿಸುವುದು: “ಸಮುದ್ರ ಪ್ರಯಾಣ ಮಾಡಲಿರುವವರಿಗೆ ಅನುಕೂಲವಾಗಲೆಂದು ರೋಮ್ ಪಟ್ಟಣ ಒಂದು ಏರ್ಪಾಡನ್ನು ಮಾಡಿತ್ತು. ಆ ಪಟ್ಟಣದಲ್ಲಿ ಟೈಬರ್ ನದಿಯ ಉಗಮದ ಹತ್ತಿರ ಬಂದರು ಇತ್ತು. ಬಂದರಿನ ಹತ್ತಿರ ಆಸ್ಟೀಯ ಪಟ್ಟಣ ಇತ್ತು. ಇಲ್ಲಿರುವ ಪೇಟೆಯ ಚೌಕದಲ್ಲಿ ತುಂಬ ಕಚೇರಿಗಳಿದ್ದವು. ಇಲ್ಲಿ ಬೇರೆಬೇರೆ ಬಂದರುಗಳಿಗೆ ಸೇರಿದ ವ್ಯಾಪಾರಿಗಳು ಇರುತ್ತಿದ್ದರು. ಹಡಗುಗಳ ಮೂಲಕ ವಸ್ತುಗಳನ್ನು ಸಾಗಿಸುವುದೇ ಇವರ ಕೆಲಸ ಆಗಿತ್ತು. ನಾರ್ಬಾನ್ನ [ಈಗಿನ ಫ್ರಾನ್ಸ್] ವ್ಯಾಪಾರಿಗಳ ಕಚೇರಿ ಇತ್ತು, ಕಾರ್ತೇಜ್ನ [ಈಗಿನ ಟುನೀಸ್ಯ] ವ್ಯಾಪಾರಿಗಳ ಕಚೇರಿ ಇತ್ತು . . . ಮತ್ತು ಬೇರೆಯವರ ಕಚೇರಿಗಳೂ ಇದ್ದವು. ಪ್ರಯಾಣಿಕರು ಈ ಕಚೇರಿಗಳಿಗೆ ಬಂದು ತಾವು ಹೋಗಬೇಕೆಂದಿರುವ ಪಟ್ಟಣದ ಕಡೆ ಯಾವ ಹಡಗು ಹೋಗುತ್ತಿದೆ ಎಂದು ತಿಳುಕೊಳ್ಳಬೇಕಿತ್ತು ಅಷ್ಟೆ.”
ಈ ಸಮುದ್ರ ಪ್ರಯಾಣ ಸಮಯವನ್ನು ಉಳಿಸುತ್ತಿತ್ತಾದರೂ ತುಂಬ ಅಪಾಯಕಾರಿಯಾಗಿತ್ತು. ಪೌಲನೂ ತನ್ನ ಮಿಷನರಿ ಪ್ರಯಾಣವನ್ನು ಮಾಡುವಾಗ ಹಡಗೊಡೆತವನ್ನು ಅನೇಕ ಸಲ ಎದುರಿಸಿದ್ದಾನೆ.—2 ಕೊರಿಂ. 11:25.