ಸುಳ್ಳು ಧರ್ಮವನ್ನು ಬಿಟ್ಟುಬಂದರು
“ನನ್ನ ಜನರೇ, . . . ಅವಳನ್ನು ಬಿಟ್ಟು ಹೊರಗೆ ಬನ್ನಿರಿ.”—ಪ್ರಕ. 18:4.
1. (ಎ) ದೇವಜನರು ಮಹಾ ಬಾಬೆಲಿನ ಬಂಧನದಿಂದ ಹೊರಗೆ ಬರುವರೆಂದು ನಮಗೆ ಹೇಗೆ ಗೊತ್ತು? (ಬಿ) ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
ನಂಬಿಗಸ್ತ ಕ್ರೈಸ್ತರು ಮಹಾ ಬಾಬೆಲಿನ ಬಂದಿವಾಸದಲ್ಲಿದ್ದರು ಎಂದು ಕಳೆದ ಲೇಖನದಲ್ಲಿ ಕಲಿತೆವು. ಆದರೆ ಸಂತೋಷದ ವಿಷಯ ಏನೆಂದರೆ, ಅವರು ಶಾಶ್ವತವಾಗಿ ಬಂಧನದಲ್ಲಿ ಇರುವುದಿಲ್ಲ. ಯಾಕೆಂದರೆ ಸುಳ್ಳು ಧರ್ಮದ ಸಾಮ್ರಾಜ್ಯವನ್ನು “ಬಿಟ್ಟು ಹೊರಗೆ ಬನ್ನಿರಿ” ಎಂದು ದೇವರೇ ಆಜ್ಞೆ ಕೊಟ್ಟಿದ್ದನು. (ಪ್ರಕಟನೆ 18:4 ಓದಿ.) ಇದರರ್ಥ ನಿಜ ಕ್ರೈಸ್ತರು ಮಹಾ ಬಾಬೆಲಿನ ಬಂಧನದಿಂದ ಹೊರಗೆ ಬರುವರು ಎಂದಾಗಿದೆ. ಅವರ ಬಿಡುಗಡೆ ಯಾವಾಗ ಆಯಿತು ಎಂದು ತಿಳಿಯಲು ನಾವು ಕಾತುರದಿಂದ ಇದ್ದೇವೆ. ಅದನ್ನು ತಿಳಿದುಕೊಳ್ಳುವ ಮುಂಚೆ ನಾವು ಈ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕು: 1914ಕ್ಕೆ ಮುಂಚೆಯೇ ಬೈಬಲ್ ವಿದ್ಯಾರ್ಥಿಗಳು ಮಹಾ ಬಾಬೆಲಿನ ವಿಷಯದಲ್ಲಿ ಯಾವ ದೃಢತೀರ್ಮಾನ ತೆಗೆದುಕೊಂಡಿದ್ದರು? ಒಂದನೇ ಲೋಕ ಯುದ್ಧದ ಸಮಯದಲ್ಲಿ ನಮ್ಮ ಸಹೋದರರು ಸೇವೆಯಲ್ಲಿ ಎಷ್ಟು ಹುರುಪು ತೋರಿಸಿದರು? ಈ ಸಮಯದಲ್ಲಿ ಅವರು ಕೆಲವು ವಿಷಯಗಳನ್ನು ಸರಿಯಾಗಿ ಮಾಡಲಿಲ್ಲವಾದ್ದರಿಂದ ಅವರು ಮಹಾ ಬಾಬೆಲಿನ ಬಂದಿವಾಸದಲ್ಲಿದ್ದರು ಎಂದು ಹೇಳಬಹುದಾ?
“ಬಾಬೆಲಿನ ಪತನ”
2. ಒಂದನೇ ಲೋಕ ಯುದ್ಧಕ್ಕಿಂತ ಮುಂಚೆಯೇ ಬೈಬಲ್ ವಿದ್ಯಾರ್ಥಿಗಳು ಏನು ಮಾಡಲು ತೀರ್ಮಾನಿಸಿದರು?
2 ಬೈಬಲಿನಲ್ಲಿರುವ ಸತ್ಯವನ್ನು ಕ್ರೈಸ್ತಪ್ರಪಂಚ ಬೋಧಿಸುತ್ತಿಲ್ಲ ಎಂದು ಒಂದನೇ ಲೋಕ ಯುದ್ಧ ಆರಂಭವಾಗುವುದಕ್ಕೆ ಎಷ್ಟೋ ವರ್ಷಗಳ ಮುಂಚೆಯೇ ಚಾರ್ಲ್ಸ್ ಟೇಸ್ ರಸಲ್ ಮತ್ತು ಬೇರೆ ಬೈಬಲ್ ವಿದ್ಯಾರ್ಥಿಗಳು ಅರ್ಥಮಾಡಿಕೊಂಡರು. ಪ್ರಕಟನೆ 17:1, 2 ಓದಿ.
ಆದ್ದರಿಂದ ಸುಳ್ಳು ಧರ್ಮದೊಂದಿಗೆ ಇದ್ದ ಎಲ್ಲ ಸಂಬಂಧ ಕಡಿದುಹಾಕಲು ತೀರ್ಮಾನಿಸಿದರು. 1879ರಲ್ಲಿ ಬಂದ ಝಯನ್ಸ್ ವಾಚ್ ಟವರ್ ಪತ್ರಿಕೆ ತಿಳಿಸಿದ್ದೇನಂದರೆ, ಕ್ರಿಸ್ತನ ನಿಷ್ಠಾವಂತ ವಧು ಎಂದು ಹೇಳಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸಿರುವ ಯಾವುದೇ ಚರ್ಚು ಮಹಾ ಬಾಬೆಲಿನ ಭಾಗವಾಗಿದೆ. ಬೈಬಲು ಈ ಮಹಾ ಬಾಬೆಲನ್ನು ವೇಶ್ಯೆ ಎಂದು ಕರೆಯುತ್ತದೆ.—3. ತಮಗೂ ಸುಳ್ಳು ಧರ್ಮಕ್ಕೂ ಇನ್ನು ಯಾವ ಹೊಕ್ಕುಬಳಕೆ ಇಲ್ಲ ಎಂದು ಬೈಬಲ್ ವಿದ್ಯಾರ್ಥಿಗಳು ಹೇಗೆ ತೋರಿಸಿದರು? (ಲೇಖನದ ಆರಂಭದ ಚಿತ್ರ ನೋಡಿ.)
3 ಸುಳ್ಳು ಧರ್ಮದ ಭಾಗವಾಗಿಯೇ ಉಳಿದರೆ ತಮಗೆ ದೇವರ ಆಶೀರ್ವಾದ ಸಿಗಲ್ಲ ಎಂದು ನಂಬಿಗಸ್ತ ಸ್ತ್ರೀ ಪುರುಷರಿಗೆ ಗೊತ್ತಾಯಿತು. ಆದ್ದರಿಂದ ಅವರು ಸಹವಾಸಮಾಡುತ್ತಿದ್ದ ಚರ್ಚುಗಳಿಗೆ ಪತ್ರ ಕಳುಹಿಸಿ ತಾವು ಇನ್ನು ಮುಂದೆ ಅದರ ಸದಸ್ಯರಾಗಿರಲು ಬಯಸುವುದಿಲ್ಲ ಎಂದು ತಿಳಿಸಿದರು. ಕೆಲವರು ಚರ್ಚಿಗೆ ಬಂದಿದ್ದ ಎಲ್ಲರ ಮುಂದೆ ನಿಂತು ತಮ್ಮ ಪತ್ರವನ್ನು ಗಟ್ಟಿಯಾಗಿ ಓದಿದರು. ಹೀಗೆ ಓದಲು ಅನುಮತಿ ಸಿಗಲಿಲ್ಲವಾದರೆ, ಚರ್ಚಿನ ಪ್ರತಿಯೊಬ್ಬ ಸದಸ್ಯನಿಗೆ ಪತ್ರ ಕಳುಹಿಸುತ್ತಿದ್ದರು. ಹೀಗೆ ಸುಳ್ಳು ಧರ್ಮಕ್ಕೂ ತಮಗೂ ಯಾವ ಹೊಕ್ಕುಬಳಕೆಯೂ ಇಲ್ಲ ಎಂದು ಬೈಬಲ್ ವಿದ್ಯಾರ್ಥಿಗಳು ಸ್ಪಷ್ಟವಾಗಿ ತೋರಿಸಿದರು. ಕೆಲವು ವರ್ಷಗಳ ಮುಂಚೆ ಹೀಗೆ ಮಾಡಿದ್ದರೆ ಚರ್ಚು ಅವರನ್ನು ಕೊಂದೇ ಹಾಕುತ್ತಿತ್ತು. ಆದರೆ 1870ರಷ್ಟಕ್ಕೆ ಅನೇಕ ದೇಶಗಳ ಸರ್ಕಾರಗಳು ಮುಂಚಿನ ತರ ಚರ್ಚುಗಳು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರಲಿಲ್ಲ. ಈಗ ಜನ ಬೈಬಲ್ ಬಗ್ಗೆ ಬಹಿರಂಗವಾಗಿ ಮಾತಾಡಬಹುದಿತ್ತು, ಚರ್ಚು ಹೇಳುವುದು ಸರಿಯಲ್ಲ ಎಂದು ಸಹ ವಾದಿಸಬಹುದಿತ್ತು.
4. ಒಂದನೇ ಲೋಕ ಯುದ್ಧದ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳು ಮಹಾ ಬಾಬೆಲ್ ಏನಾಗಿದೆ ಎಂದು ಅರ್ಥಮಾಡಿಕೊಂಡರು? ಆಮೇಲೆ ಏನು ಮಾಡಿದರು?
4 ತಮಗಿನ್ನು ಸುಳ್ಳು ಧರ್ಮದೊಂದಿಗೆ ಯಾವ ನಂಟೂ ಇಲ್ಲ ಎಂದು ತಮ್ಮ ಕುಟುಂಬದ ಸದಸ್ಯರಿಗೆ, ಆಪ್ತ ಸ್ನೇಹಿತರಿಗೆ, ತಾವು ಸಹವಾಸ ಮಾಡುತ್ತಿದ್ದ ಚರ್ಚಿನ ಸದಸ್ಯರಿಗೆ ಮಾತ್ರ ಹೇಳಿದರೆ ಸಾಕಾಗುವುದಿಲ್ಲ ಎಂದು ಬೈಬಲ್ ವಿದ್ಯಾರ್ಥಿಗಳು ಅರ್ಥಮಾಡಿಕೊಂಡರು. ಮಹಾ ಬಾಬೆಲ್ ಧಾರ್ಮಿಕ ವೇಶ್ಯೆ ಎಂದು ಇಡೀ ಲೋಕಕ್ಕೆ ಸಾರಿಹೇಳಲು ಬಯಸಿದರು. ಆದ್ದರಿಂದ ಆಗ ಇದ್ದ ಕೆಲವೇ ಬೈಬಲ್ ವಿದ್ಯಾರ್ಥಿಗಳು 1917ರ ಡಿಸೆಂಬರ್ ತಿಂಗಳಿನಿಂದ 1918ರ ವರೆಗೆ “ಬಾಬೆಲಿನ ಪತನ” ಎಂಬ ಲೇಖನವಿದ್ದ ಕರಪತ್ರದ 1,00,00,000 ಪ್ರತಿಗಳನ್ನು ಹುರುಪಿನಿಂದ ಹಂಚಿದರು. ಆ ಕರಪತ್ರ ಕ್ರೈಸ್ತಪ್ರಪಂಚದ ಬಣ್ಣಬಯಲು ಮಾಡಿತು. ಇದರಿಂದ ಚರ್ಚ್ ಮುಖಂಡರು ಕೆಂಡಾಮಂಡಲವಾದರು. ಆದರೆ ಬೈಬಲ್ ವಿದ್ಯಾರ್ಥಿಗಳು ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವ ಯೋಚನೆನೂ ಮಾಡಲಿಲ್ಲ. ಏನೇ ಆದರೂ ಸಾರುವುದನ್ನು ನಿಲ್ಲಿಸುವುದಿಲ್ಲ, “ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂದು ತೀರ್ಮಾನ ಮಾಡಿಕೊಂಡಿದ್ದರು. (ಅ. ಕಾ. 5:29) ಇದರಿಂದ ನಮಗೇನು ಗೊತ್ತಾಗುತ್ತೆ? ಈ ಕ್ರೈಸ್ತ ಸ್ತ್ರೀಪುರುಷರು ಒಂದನೇ ಲೋಕ ಯುದ್ಧದ ಸಮಯದಲ್ಲಿ ಬಾಬೆಲಿನ ಬಂದಿವಾಸಕ್ಕೆ ಹೋಗಲಿಲ್ಲ. ಬಂಧನದ ಬೇಡಿಗಳನ್ನು ಕಿತ್ತುಹಾಕಿ ಹೊರಗೆ ಬಂದರು ಮತ್ತು ಬೇರೆಯವರಿಗೂ ಇದನ್ನೇ ಮಾಡಲು ಸಹಾಯಮಾಡಿದರು.
ಒಂದನೇ ಲೋಕ ಯುದ್ಧದ ಸಮಯದಲ್ಲಿ ದೇವಜನರ ಹುರುಪು
5. ಒಂದನೇ ಲೋಕ ಯುದ್ಧದ ಸಮಯದಲ್ಲಿ ಸಹೋದರರ ಹುರುಪು ಕಡಿಮೆ ಆಗಿತ್ತಾ?
5 ದೇವಜನರು ಒಂದನೇ ಲೋಕ ಯುದ್ಧದ ಸಮಯದಲ್ಲಿ ಹುರುಪಿನಿಂದ ಸಾರದ ಕಾರಣ ಅವರ ಮೇಲೆ ದೇವರ ಅನುಗ್ರಹ ಇರಲಿಲ್ಲ ಎಂದು ಮೊದಲೆಲ್ಲಾ ಹೇಳುತ್ತಿದ್ದೆವು. ಇದರಿಂದ ಯೆಹೋವನು ಸ್ವಲ್ಪ ಸಮಯಕ್ಕೆ ಅವರನ್ನು ಮಹಾ ಬಾಬೆಲಿನ ಬಂದಿವಾಸಕ್ಕೆ ಕಳುಹಿಸಿದನು ಎಂದು ನೆನಸುತ್ತಿದ್ದೆವು. ಆದರೆ 1914ರಿಂದ 1918ರ ವರೆಗೆ ನಂಬಿಗಸ್ತರಾಗಿ ಸೇವೆ ಮಾಡಿದ್ದ ಸಹೋದರ ಸಹೋದರಿಯರು ಸುವಾರ್ತೆ ಸಾರುತ್ತಾ ಇರಲು ತಮ್ಮಿಂದಾದ ಎಲ್ಲಾ ಪ್ರಯತ್ನ ಮಾಡಿದರು ಅಂತ ಹೇಳಿದರು. ಆ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳಿಗೆ ಏನಾಯಿತೆಂದು ಸ್ಪಷ್ಟವಾಗಿ ಅರ್ಥಮಾಡಿಕೊಂಡಾಗ ಬಾಬೆಲಿನ ಬಂದಿವಾಸದ ಬಗ್ಗೆ ಮತ್ತು ಅದು ಯಾವುದನ್ನು ಮುನ್ಸೂಚಿಸಿತು ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
6, 7. (ಎ) ಒಂದನೇ ಲೋಕ ಯುದ್ಧದ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳು ಯಾವ ಸವಾಲುಗಳನ್ನು ಎದುರಿಸಿದರು? (ಬಿ) ಬೈಬಲ್ ವಿದ್ಯಾರ್ಥಿಗಳು ಹುರುಪಿನಿಂದ ಸಾರುತ್ತಿದ್ದರು ಎನ್ನುವುದಕ್ಕೆ ಯಾವ ಆಧಾರವಿದೆ?
6 ಒಂದನೇ ಲೋಕ ಯುದ್ಧದ ಸಮಯದಲ್ಲಿ ಬೈಬಲ್ ವಿದ್ಯಾರ್ಥಿಗಳು ತುಂಬ ಹುರುಪಿನಿಂದ ಸುವಾರ್ತೆ ಸಾರಿದರು. ಆದರೆ ಅನೇಕ ಸವಾಲುಗಳೂ ಇದ್ದವು. ಅದರಲ್ಲಿ ಎರಡು ಸವಾಲುಗಳ ಬಗ್ಗೆ ನೋಡೋಣ. ಮೊದಲನೇದಾಗಿ ಬೈಬಲ್ ವಿದ್ಯಾರ್ಥಿಗಳು ಬೈಬಲನ್ನು ಮಾತ್ರ ಬಳಸುತ್ತಾ ಸುವಾರ್ತೆ ಸಾರುವುದು ಹೇಗೆಂದು ಕಲಿತಿರಲಿಲ್ಲ. ಬರೀ ಪುಸ್ತಕಗಳನ್ನು ಕೊಟ್ಟು ಬರುತ್ತಿದ್ದರು. ಜನ ಪುಸ್ತಕದಿಂದ ವಿಷಯಗಳನ್ನು ಓದಿ ತಿಳುಕೊಳ್ಳುತ್ತಿದ್ದರು. 1918ರಲ್ಲಿ ದ ಫಿನಿಷ್ಡ್ ಮಿಸ್ಟರಿ ಪುಸ್ತಕವನ್ನು ಸರ್ಕಾರ ನಿಷೇಧಿಸಿದಾಗ ಅನೇಕ ಸಹೋದರರಿಗೆ ಹೇಗೆ ಸಾರಬೇಕೆಂದೇ ಗೊತ್ತಾಗಲಿಲ್ಲ. ಅದೇ ವರ್ಷ ಎದುರಾದ ಇನ್ನೊಂದು ಸವಾಲು, ಸ್ಪ್ಯಾನಿಷ್ ಫ್ಲೂ ಕಾಯಿಲೆ. ಈ ಕಾಯಿಲೆ ತುಂಬ ಬೇಗ ಹರಡುತ್ತಿತ್ತು. ಇದರಿಂದ ಸಹೋದರರಿಗೆ ಬೇರೆ ಬೇರೆ ಸ್ಥಳಕ್ಕೆ ಹೋಗಿ ಸುವಾರ್ತೆ ಸಾರಲು ಕಷ್ಟವಾಯಿತು. ಈ ಎಲ್ಲಾ ಸವಾಲುಗಳಿದ್ದರೂ ಬೈಬಲ್ ವಿದ್ಯಾರ್ಥಿಗಳು ತಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನ ಹಾಕಿ ಸುವಾರ್ತೆ ಸಾರಿದರು.
7 ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿನಂತೆ 1914ರಲ್ಲಿ ಬೈಬಲ್ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ ತುಂಬ ಕೆಲಸ ಮಾಡಿದರು. 1914ರಲ್ಲಿ “ಫೋಟೋ-ಡ್ರಾಮ ಆಫ್ ಕ್ರಿಯೇಷನ್” ಎನ್ನುವ ವಿಡಿಯೋವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಸ್ಲೈಡುಗಳಿದ್ದವು, ಚಲಿಸುವ ಚಿತ್ರಗಳಿದ್ದವು. ಅದರೊಟ್ಟಿಗೆ ಧ್ವನಿಯೂ ಕೇಳಿಸಿಕೊಂಡಾಗ ತುಂಬ ಚೆನ್ನಾಗಿತ್ತು. ಆ ಕಾಲದಲ್ಲಿ ಇದೆಲ್ಲ ಇರಲೇ ಇಲ್ಲ. ಈ ವಿಡಿಯೋದಲ್ಲಿ ಅದರ ಹೆಸರಿನಂತೆಯೇ ಆದಾಮನ ಸೃಷ್ಟಿಯಿಂದ ಆರಂಭವಾಗಿ ಕ್ರಿಸ್ತನ ಆಳ್ವಿಕೆಯ ಅಂತ್ಯದ ವರೆಗಿನ ವಿಷಯಗಳು ಸೇರಿದ್ದವು. ಈ ವಿಡಿಯೋ ಬಿಡುಗಡೆಯಾದ ಮೊದಲನೇ ವರ್ಷದಲ್ಲೇ 90,00,000 ಜನ ಇದನ್ನು ನೋಡಿದರು. ಇದು ಇವತ್ತಿರುವ ಯೆಹೋವನ ಸಾಕ್ಷಿಗಳ ಸಂಖ್ಯೆಗಿಂತ ಹೆಚ್ಚು! ಇನ್ನು ಕೆಲವು ವರದಿ ನೋಡಿ. 1916ರಲ್ಲಿ ಅಮೆರಿಕದಲ್ಲಿ ನಡೆದ ಸಾರ್ವಜನಿಕ ಕೂಟಗಳಿಗೆ 8,09,000ಕ್ಕಿಂತ ಹೆಚ್ಚು ಜನ ಹಾಜರಾಗಿದ್ದರು. 1918ರಷ್ಟಕ್ಕೆ ಆ ಸಂಖ್ಯೆ 9,50,000ದಷ್ಟು ಆಯಿತು. ಆ ಬೈಬಲ್ ವಿದ್ಯಾರ್ಥಿಗಳು ಸಾರುವುದನ್ನು ಕಡಿಮೆ ಮಾಡಿದರು ಎಂದು ಹೇಳಲು ಸಾಧ್ಯವೇ ಇಲ್ಲ.
8. ಒಂದನೇ ಲೋಕ ಯುದ್ಧದ ಸಮಯದಲ್ಲಿ ಮುಂದಾಳತ್ವ ವಹಿಸುತ್ತಿದ್ದ ಸಹೋದರರು ಬೈಬಲ್ ವಿದ್ಯಾರ್ಥಿಗಳನ್ನು ಹೇಗೆ ಪ್ರೋತ್ಸಾಹಿಸಿದರು?
8 ಒಂದನೇ ಲೋಕ ಯುದ್ಧದ ಸಮಯದಲ್ಲಿ ಸಹೋದರರಿಗೆ ಬೈಬಲ್ ಸಾಹಿತ್ಯವನ್ನು ಒದಗಿಸಲು ಮತ್ತು ಅವರನ್ನು ಪ್ರೋತ್ಸಾಹಿಸಲು ಮುಂದಾಳತ್ವ ವಹಿಸುತ್ತಿದ್ದ ಸಹೋದರರು ತುಂಬ ಪ್ರಯತ್ನ ಮಾಡಿದರು. ಇದರಿಂದ ಎಲ್ಲರೂ ಹುರುಪಿನಿಂದ ಸುವಾರ್ತೆ ಸಾರುತ್ತಾ ಇರಲು ಸಹಾಯವಾಯಿತು. ಆ ಸಮಯದಲ್ಲಿ
ಹುರುಪಿನಿಂದ ಸೇವೆ ಮಾಡಿದ ಸಹೋದರ ರಿಚರ್ಡ್ ಏಚ್. ಬಾರ್ಬರ್ ಹೀಗೆ ಹೇಳುತ್ತಾರೆ: “ಕೆಲವು ಸಂಚರಣ ಮೇಲ್ವಿಚಾರಕರನ್ನು ನಮ್ಮಿಂದ ಬೆಂಬಲಿಸಲು ಆಯಿತು. ವಾಚ್ ಟವರ್ ಪತ್ರಿಕೆ ಯಾರಿಗೆ ಬೇಕಿತ್ತೋ ಅವರ ಕೈಗೆ ಸಿಗಲು ಏರ್ಪಾಡು ಮಾಡಿದ್ವಿ. ನಿಷೇಧವಿದ್ದ ಕೆನಡ ದೇಶಕ್ಕೂ ಪತ್ರಿಕೆಗಳನ್ನು ಕಳುಹಿಸಲು ನಮ್ಮಿಂದ ಆಯ್ತು. ಅಷ್ಟೇ ಅಲ್ಲ, ನಾನು ದ ಫಿನಿಷ್ಡ್ ಮಿಸ್ಟರಿ ಪುಸ್ತಕದ ಪಾಕೆಟ್ ಸೈಜ್ ಪ್ರತಿಗಳನ್ನು ನನ್ನ ಕೆಲವು ಗೆಳೆಯರಿಗೆ ಕಳುಹಿಸಿದೆ. ಏಕೆಂದರೆ ಅವರ ಹತ್ರ ಇದ್ದ ಪುಸ್ತಕಗಳನ್ನು ಸರ್ಕಾರ ಜಪ್ತಿ ಮಾಡಿತ್ತು. ಸಹೋದರ ರದರ್‌ಫರ್ಡ್ ನಮಗೆ ಅಮೆರಿಕದ ಪಶ್ಚಿಮ ಭಾಗದಲ್ಲಿರುವ ನಗರಗಳಲ್ಲಿ ಅಧಿವೇಶನಗಳನ್ನು ಏರ್ಪಡಿಸುವಂತೆ ಮತ್ತು ಅಲ್ಲಿರುವ ಸಹೋದರರನ್ನು ಪ್ರೋತ್ಸಾಹಿಸಲು ಭಾಷಣಕಾರರನ್ನು ಕಳುಹಿಸಿಕೊಡುವಂತೆ ಹೇಳಿದರು. ಅದನ್ನೇ ಮಾಡಿದ್ವಿ.”ಸರಿಪಡಿಸಿಕೊಳ್ಳಬೇಕಾದ ವಿಷಯ
9. (ಎ) ದೇವಜನರು 1914-1919ರ ಸಮಯದಲ್ಲಿ ಯಾವ ವಿಷಯವನ್ನು ಸರಿಪಡಿಸಿಕೊಳ್ಳಬೇಕಿತ್ತು? (ಬಿ) ಅವರು ಕೆಲವು ವಿಷಯಗಳನ್ನು ಸರಿಪಡಿಸಿಕೊಳ್ಳಬೇಕಿತ್ತಾದರೂ ನಾವು ಯಾವ ತೀರ್ಮಾನಕ್ಕೆ ಬರಬಾರದು?
9 ಬೈಬಲ್ ವಿದ್ಯಾರ್ಥಿಗಳು ಸರಿಪಡಿಸಿಕೊಳ್ಳಬೇಕಾದ ಒಂದು ವಿಷಯ ಇತ್ತು. ಸರ್ಕಾರಕ್ಕೆ ವಿಧೇಯತೆ ತೋರಿಸಬೇಕು ಅನ್ನುವ ವಿಷಯವನ್ನು ಅವರು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ. (ರೋಮ. 13:1) ಈ ಕಾರಣದಿಂದ ಯುದ್ಧದ ಸಮಯದಲ್ಲಿ ಅವರು ಸಂಪೂರ್ಣವಾಗಿ ತಟಸ್ಥರಾಗಿ ಇರಲಿಲ್ಲ. ಉದಾಹರಣೆಗೆ, 1918ರ ಮೇ 30ರಂದು ಅಮೆರಿಕದ ಅಧ್ಯಕ್ಷ ಶಾಂತಿಗಾಗಿ ಪ್ರಾರ್ಥಿಸುವಂತೆ ಜನರಿಗೆ ಹೇಳಿದಾಗ ವಾಚ್ ಟವರ್ ಪತ್ರಿಕೆ ಸಹ ಬೈಬಲ್ ವಿದ್ಯಾರ್ಥಿಗಳನ್ನು ಪ್ರಾರ್ಥಿಸುವಂತೆ ಹೇಳಿತು. ಕೆಲವು ಸಹೋದರರು ಯುದ್ಧಕ್ಕೆ ಹಣಸಹಾಯ ಮಾಡಿದರು, ಇನ್ನು ಕೆಲವರು ಸೈನಿಕರಾಗಿ ರಣರಂಗಕ್ಕೇ ಹೋದರು. ಈ ವಿಷಯವನ್ನು ಅವರು ಸರಿಮಾಡಿಕೊಳ್ಳಬೇಕಿತ್ತಾದರೂ ಇದೇ ಕಾರಣಕ್ಕೆ ಅವರು ಮಹಾ ಬಾಬೆಲಿನ ಬಂದಿವಾಸಕ್ಕೆ ಹೋದರು ಎಂದು ಹೇಳುವುದು ತಪ್ಪು. ನಿಜ ಸಂಗತಿ ಏನೆಂದರೆ, ಒಂದನೇ ಲೋಕ ಯುದ್ಧದ ಸಮಯದಲ್ಲಿ ಅವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವನ್ನು ಸಂಪೂರ್ಣವಾಗಿ ಬಿಟ್ಟುಬರಲು ಎಲ್ಲಾ ಹೆಜ್ಜೆಗಳನ್ನು ತೆಗೆದುಕೊಂಡಿದ್ದರು.—ಲೂಕ 12:47, 48 ಓದಿ.
10. ಜೀವ ಅಮೂಲ್ಯ ಎಂದು ಬೈಬಲ್ ವಿದ್ಯಾರ್ಥಿಗಳು ಹೇಗೆ ತೋರಿಸಿದರು?
10 ಕ್ರೈಸ್ತರು ತಟಸ್ಥರಾಗಿರಬೇಕೆಂಬ ವಿಷಯವನ್ನು ಬೈಬಲ್ ವಿದ್ಯಾರ್ಥಿಗಳು ಸರಿಯಾಗಿ ಅರ್ಥಮಾಡಿಕೊಂಡಿರಲಿಲ್ಲ ನಿಜ. ಆದರೆ ಕೊಲೆ ಮಾಡುವುದು ತಪ್ಪು ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ ಸೈನಿಕರಾಗಿ ಆಯುಧಗಳನ್ನು ತೆಗೆದುಕೊಂಡು ರಣರಂಗಕ್ಕೆ ಹೋದ ಕೆಲವು ಸಹೋದರರು ಯಾರನ್ನೂ ಕೊಲ್ಲಲಿಲ್ಲ. ಈ ಕಾರಣದಿಂದ ಅವರಲ್ಲಿ ಕೆಲವರನ್ನು ಸೈನ್ಯದ ಮುಂದಿನ ಸಾಲುಗಳಿಗೆ ಕಳುಹಿಸಲಾಯಿತು. ವೈರಿ ಸೈನ್ಯ ಇವರನ್ನು ಕೊಂದುಹಾಕಲಿ ಎಂದು ಹೀಗೆ ಮಾಡಲಾಯಿತು.
11. ಬೈಬಲ್ ವಿದ್ಯಾರ್ಥಿಗಳು ಯುದ್ಧದಲ್ಲಿ ಹೋರಾಡಲು ನಿರಾಕರಿಸಿದಾಗ ಸರ್ಕಾರದ ಪ್ರತಿಕ್ರಿಯೆ ಏನಾಗಿತ್ತು?
11 ನಮ್ಮ ಸಹೋದರರು ದೇವರಿಗೆ ನಿಷ್ಠೆ ತೋರಿಸಿದ್ದರಿಂದ ಸೈತಾನನಿಗೆ ತುಂಬ ಸಿಟ್ಟು ಬಂತು. ಅವನು ‘ಕಟ್ಟಳೆಯಿಂದ ಕೇಡನ್ನು ಕಲ್ಪಿಸಲು’ ಮುಂದಾದ. (ಕೀರ್ತ. 94:20, ಪವಿತ್ರ ಬೈಬಲ್ ಭಾಷಾಂತರ) ಸಹೋದರ ರದರ್‌ಫರ್ಡ್ ಮತ್ತು ವಾನ್ ಆ್ಯಂಬರ್ಗ್‌ಗೆ ಅಮೆರಿಕದ ಸೇನಾಧಿಕಾರಿ ಜೇಮ್ಸ್ ಫ್ರಾಂಕ್ಲಿನ್ ಬೆಲ್ ಹೇಳಿದ ವಿಷಯದಿಂದ ಇದು ಸ್ಪಷ್ಟವಾಗುತ್ತದೆ. ಯಾರು ಯುದ್ಧದಲ್ಲಿ ಹೋರಾಡಲು ಬಯಸುವುದಿಲ್ಲವೋ ಅವರಿಗೆ ಮರಣ ದಂಡನೆ ಆಗಬೇಕೆಂಬ ಹೊಸ ನಿಯಮವನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸಿತು ಎಂದು ಆ ಸೇನಾಧಿಕಾರಿ ಹೇಳಿದರು. ಬೈಬಲ್ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟೇ ಈ ಹೊಸ ನಿಮಯವನ್ನು ಹೊರಡಿಸುವ ಪ್ರಯತ್ನ ನಡೆದಿತ್ತು. ಅಮೆರಿಕದ ಅಧ್ಯಕ್ಷ ಆ ನಿಯಮವನ್ನು ಜಾರಿಗೆ ತರಲು ಒಪ್ಪಲಿಲ್ಲ. ಇದರಿಂದ ಸಿಟ್ಟುಗೊಂಡ ಆ ಸೇನಾಧಿಕಾರಿ “ಆದರೆ ನಿಮ್ಮನ್ನು ಸುಮ್ನೆ ಬಿಡಲ್ಲ. ಏನ್ ಮಾಡ್ಬಕಂತ ನಮಗೆ ಗೊತ್ತು” ಎಂದು ಸಹೋದರ ರದರ್‌ಫರ್ಡ್‌ಗೆ ಧಮಕಿ ಹಾಕಿದರು.
12, 13. (ಎ) ಎಂಟು ಮಂದಿ ಸಹೋದರರಿಗೆ ಯಾಕೆ ದೀರ್ಘಾವಧಿಯ ಶಿಕ್ಷೆ ಕೊಡಲಾಯಿತು? (ಬಿ) ಇದರಿಂದ ಆ ಸಹೋದರರು ತಮ್ಮ ದೃಢತೀರ್ಮಾನವನ್ನು ಕಳೆದುಕೊಂಡರಾ? ವಿವರಿಸಿ.
12 ಬೈಬಲ್ ವಿದ್ಯಾರ್ಥಿಗಳನ್ನು ಶಿಕ್ಷಿಸಲು ಸರ್ಕಾರ ಕೊನೆಗೊಂದು ಉಪಾಯ ಕಂಡುಹಿಡಿಯಿತು. ವಾಚ್ ಟವರ್ ಸೊಸೈಟಿಯ ಪ್ರತಿನಿಧಿಗಳಾದ
ಸಹೋದರ ರದರ್‌ಫರ್ಡ್, ವಾನ್ ಆ್ಯಂಬರ್ಗ್ ಮತ್ತು ಇನ್ನು ಆರು ಮಂದಿಯನ್ನು ದಸ್ತಗಿರಿ ಮಾಡಲಾಯಿತು. ಇವರು ಜರ್ಮನ್ ಸೈನಿಕರ ದಳಕ್ಕಿಂತ ಅಪಾಯಕರವಾದ ವ್ಯಕ್ತಿಗಳು ಎಂದು ಮೊಕದ್ದಮೆಯ ಉಸ್ತುವಾರಿ ವಹಿಸಿದ್ದ ನ್ಯಾಯಾಧೀಶರು ಹೇಳಿದರು. ಇವರು ಸರ್ಕಾರ, ಸೈನ್ಯ ಮತ್ತು ಚರ್ಚಿನ ವಿರುದ್ಧ ದಂಗೆ ಎದ್ದಿದ್ದಾರೆ, ಇವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ತೀರ್ಪು ಹೊರಡಿಸಿದರು. (ಎ. ಏಚ್. ಮ್ಯಾಕ್‌ಮಿಲನ್‌ರ ಮುನ್ನಡೆಯುವ ನಂಬಿಕೆ [ಇಂಗ್ಲಿಷ್] ಪುಸ್ತಕದ ಪು. 99) ಈ ಎಂಟು ಮಂದಿ ಬೈಬಲ್ ವಿದ್ಯಾರ್ಥಿಗಳಿಗೆ ದೀರ್ಘಾವಧಿಯ ಶಿಕ್ಷೆ ಕೊಟ್ಟು ಜಾರ್ಜಿಯದ ಅಟ್ಲಾಂಟಾಗೆ ಕಳುಹಿಸಲಾಯಿತು. ಆದರೆ ಯುದ್ಧ ಮುಗಿದಾಗ ಇವರಿಗೆ ಬಿಡುಗಡೆ ಆಯಿತು. ಇವರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನೂ ಕೈಬಿಡಲಾಯಿತು.13 ಈ ಎಂಟು ಮಂದಿ ಸಹೋದರರು ಜೈಲಿನಲ್ಲಿದ್ದಾಗಲೇ ತಾವು ದೇವರ ನಿಯಮವನ್ನು ಪಾಲಿಸಲು ದೃಢತೀರ್ಮಾನ ಮಾಡಿದ್ದೇವೆ ಎಂದು ತೋರಿಸಿದರು. ಹೇಗೆ? ಅಮೆರಿಕದ ಅಧ್ಯಕ್ಷರಿಗೆ ಒಂದು ಪತ್ರ ಬರೆದರು. ಅದರಲ್ಲಿ ಅವರು, ತಮ್ಮನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡರು. ನರಹತ್ಯ ಮಾಡಬಾರದು ಎಂದು ಬೈಬಲ್ ಹೇಳುತ್ತದೆ. ದೇವರಿಗೆ ಸಮರ್ಪಿಸಿಕೊಂಡಿರುವ ಒಬ್ಬ ವ್ಯಕ್ತಿ ತಿಳಿದೂತಿಳಿದು ಆತನ ನಿಯಮವನ್ನು ಮೀರಿದರೆ ಆತನ ಅನುಗ್ರಹವನ್ನು ಕಳೆದುಕೊಳ್ಳುತ್ತಾನೆ ಮತ್ತು ನಾಶವಾಗುತ್ತಾನೆ. ಹಾಗಾಗಿ ನಾವು ನರಹತ್ಯ ಮಾಡಲಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ ಎಂದೂ ಆ ಪತ್ರದಲ್ಲಿ ಬರೆದಿದ್ದರು. ಈ ಸಹೋದರರ ಧೈರ್ಯವನ್ನು ನಿಜವಾಗಲೂ ಮೆಚ್ಚಬೇಕಲ್ಲವೇ? ಏನೇ ಆದರೂ ಅವರು ಯೆಹೋವನಿಗೆ ವಿಧೇಯರಾಗಿರಲು ದೃಢಸಂಕಲ್ಪ ಮಾಡಿದ್ದರು.
ದೇವಜನರು ಕೊನೆಗೂ ಹೊರಗೆ ಬಂದರು!
14. ಬೈಬಲ್ ವಚನ ಉಪಯೋಗಿಸಿ 1914-1919ರ ಸಮಯದಲ್ಲಿ ಏನಾಯಿತು ಎಂದು ವಿವರಿಸಿ.
14 ಬೈಬಲ್ ವಿದ್ಯಾರ್ಥಿಗಳಿಗೆ 1914-1919ರ ಸಮಯದಲ್ಲಿ ಏನಾಯಿತು ಎಂದು ಮಲಾಕಿಯ 3:1-3 ವಿವರಿಸುತ್ತದೆ. (ಓದಿ.) ‘ಕರ್ತನಾದ’ ಯೆಹೋವ ದೇವರು ‘ಒಡಂಬಡಿಕೆಯ ದೂತನಾದ’ ಯೇಸು ಕ್ರಿಸ್ತನ ಜೊತೆ “ಲೇವಿ ವಂಶದವರನ್ನು” ಅಂದರೆ ಅಭಿಷಿಕ್ತರನ್ನು ಪರೀಕ್ಷಿಸಲು ಬಂದನು. ಯೆಹೋವನು ಅವರನ್ನು ತಿದ್ದಿ ಶುದ್ಧೀಕರಿಸಿದ ನಂತರ ಹೊಸ ನೇಮಕವನ್ನು ಕೊಟ್ಟನು. 1919ರಲ್ಲಿ ಯೇಸು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ನೇಮಿಸಿದನು. ಈ ಆಳು ದೇವರ ಎಲ್ಲ ಸೇವಕರಿಗೆ ಮಾರ್ಗದರ್ಶನ ಮತ್ತು ನಿರ್ದೇಶನ ನೀಡಲಿದ್ದರು. (ಮತ್ತಾ. 24:45) ಹೀಗೆ ಕೊನೆಗೂ ದೇವಜನರು ಮಹಾ ಬಾಬೆಲಿನಿಂದ ಹೊರಗೆ ಬಂದರು. ಅಂದಿನಿಂದ ಅವರು ದೇವರ ಉದ್ದೇಶಗಳ ಬಗ್ಗೆ ಹೆಚ್ಚುಚ್ಚು ಕಲಿಯುತ್ತಾ ಇದ್ದಾರೆ ಮತ್ತು ದೇವರ ಮೇಲೆ ಅವರಿಗಿರುವ ಪ್ರೀತಿಯೂ ಹೆಚ್ಚಾಗಿದೆ. ಇದು ಅವರಿಗೆ ಸಿಕ್ಕಿದ ದೊಡ್ಡ ಆಶೀರ್ವಾದ! [1]
15. ಮಹಾ ಬಾಬೆಲಿನಿಂದ ದೇವರು ನಮ್ಮನ್ನು ಬಿಡಿಸಿದ್ದಕ್ಕೆ ನಾವು ಹೇಗೆ ಗಣ್ಯತೆ ತೋರಿಸಬೇಕು?
15 ನಾವು ಮಹಾ ಬಾಬೆಲಿನ ಬಂದಿವಾಸದಿಂದ ಹೊರಗೆ ಬಂದಿರುವುದಕ್ಕೆ ತುಂಬ ಸಂತೋಷಪಡುತ್ತೇವೆ. ಸತ್ಯಾರಾಧನೆಯನ್ನು ಅಳಿಸಿಹಾಕಲು ಸೈತಾನ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಅವನು ಸೋತು ಹೋಗಿದ್ದಾನೆ! ಯೆಹೋವನು ನಮ್ಮನ್ನು ಮಹಾ ಬಾಬೆಲಿನಿಂದ ಬಿಡಿಸಿರುವ ಉದ್ದೇಶವನ್ನು ನಾವು ಮರೆಯಬಾರದು. ಎಲ್ಲಾ ಮನುಷ್ಯರು ರಕ್ಷಣೆ ಹೊಂದಬೇಕು ಎನ್ನುವುದು ಯೆಹೋವನ ಉದ್ದೇಶ. (2 ಕೊರಿಂ. 6:1) ಇವತ್ತು ಸುಳ್ಳು ಧರ್ಮ ಕೋಟಿಗಟ್ಟಲೆ ಜನರನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಅವರಿಗೆ ನಮ್ಮ ಸಹಾಯ ಬೇಕಿದೆ. ಅಭಿಷಿಕ್ತ ಸಹೋದರರು ಜನರಿಗೆ ಹೇಗೆ ಸಹಾಯ ಮಾಡಿದರೋ ಅದೇ ರೀತಿ ಇಂದು ನಾವು ಜನರಿಗೆ ಸಹಾಯ ಮಾಡೋಣ.
^ [1] (ಪ್ಯಾರ 14) ಯೆಹೂದ್ಯರು ಬಾಬೆಲಿನ ಬಂದಿವಾಸದಲ್ಲಿದ್ದ ವಿಷಯಕ್ಕೂ ಮತ್ತು ಧರ್ಮಭ್ರಷ್ಟತೆ ಹುಟ್ಟಿದ ಮೇಲೆ ಇದ್ದ ಕ್ರೈಸ್ತರ ಪರಿಸ್ಥಿತಿಗೂ ಹಲವಾರು ಹೋಲಿಕೆಗಳಿವೆ. ಆದರೂ ಯೆಹೂದ್ಯರ ಬಂದಿವಾಸವು ಅಭಿಷಿಕ್ತ ಕ್ರೈಸ್ತರ ಬಂದಿವಾಸದ ಮುನ್ಸೂಚನೆಯಾಗಿತ್ತು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಕ್ಕೂ ಪ್ರವಾದನಾತ್ಮಕ ಅರ್ಥ ಹುಡುಕಬಾರದು. ಹೋಲಿಕೆಗಳು ಇರುವಂತೆಯೇ ವ್ಯತ್ಯಾಸಗಳೂ ಇವೆ. ಒಂದು ವ್ಯತ್ಯಾಸ ಏನೆಂದರೆ, ಯೆಹೂದ್ಯರು ಬಾಬೆಲಿನಲ್ಲಿ 70 ವರ್ಷ ಬಂಧನದಲ್ಲಿದ್ದರು. ಆದರೆ ಕ್ರೈಸ್ತರು ಮಹಾ ಬಾಬೆಲಿನ ಬಂದಿವಾಸದಲ್ಲಿ ಅದಕ್ಕಿಂತ ತುಂಬ ವರ್ಷ ಇದ್ದರು.