ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಿಮ್ಮ ಮನಸ್ಸಿದೆಯಾ?

ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಿಮ್ಮ ಮನಸ್ಸಿದೆಯಾ?

“ಪವಿತ್ರಾತ್ಮವನ್ನು ಅನುಸರಿಸುವವರು ತಮ್ಮ ಮನಸ್ಸುಗಳನ್ನು ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಾರೆ.”—ರೋಮ. 8:5.

ಗೀತೆಗಳು: 57, 52

1, 2. ಅಭಿಷಿಕ್ತ ಕ್ರೈಸ್ತರು ರೋಮನ್ನರಿಗೆ 8⁠ನೇ ಅಧ್ಯಾಯವನ್ನು ತುಂಬ ಆಸಕ್ತಿಯಿಂದ ಯಾಕೆ ಓದುತ್ತಾರೆ?

 ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿ ಅಭಿಷಿಕ್ತರಿಗೆ ಸಂಬಂಧಪಟ್ಟ ಮಾಹಿತಿ ಇದೆ. ಒಂದನೇ ವಚನ, ಅಭಿಷಿಕ್ತರು “ಕ್ರಿಸ್ತ ಯೇಸುವಿನೊಂದಿಗೆ ಐಕ್ಯರಾಗಿ” ಇರುತ್ತಾರೆ ಎಂದು ಹೇಳುತ್ತದೆ. 15ರಿಂದ 17, ಅಭಿಷಿಕ್ತರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ ಎಂದು ತಿಳಿಸುತ್ತದೆ. ಹಾಗಾದರೆ ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿರುವ ವಿಷಯಗಳು ಅಭಿಷಿಕ್ತರಿಗೆ ಮಾತ್ರ ಅನ್ವಯವಾಗುತ್ತಾ? ಭೂಮಿ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆ ಇರುವವರಿಗೆ ಈ ಅಧ್ಯಾಯದಿಂದ ಏನೂ ಪ್ರಯೋಜನ ಇಲ್ವಾ?

2 ಅಭಿಷಿಕ್ತರನ್ನು ಮನಸ್ಸಿನಲ್ಲಿಟ್ಟೇ ರೋಮನ್ನರಿಗೆ 8⁠ನೇ ಅಧ್ಯಾಯವನ್ನು ಬರೆಯಲಾಗಿದೆ. ಅಭಿಷಿಕ್ತರು ‘ಪವಿತ್ರಾತ್ಮವನ್ನು ಹೊಂದಿ ತಮ್ಮ ದೇಹಗಳಿಗೆ ಸಿಗುವ ಬಿಡುಗಡೆಗಾಗಿ ಅಂದರೆ ದತ್ತುಪುತ್ರರಾಗಿ ಸ್ವೀಕರಿಸಲ್ಪಡಲು ತವಕದಿಂದ ಕಾಯುತ್ತಾರೆ.’ (ರೋಮ. 8:23) ವಿಮೋಚನಾ ಮೌಲ್ಯದ ಆಧಾರದ ಮೇಲೆ ಯೆಹೋವನು ಅವರ ಪಾಪಗಳನ್ನು ಕ್ಷಮಿಸಿ, ‘ನೀತಿವಂತರೆಂದು ನಿರ್ಣಯಿಸುತ್ತಾನೆ. ಮುಂದೆ ಅವರು ಸ್ವರ್ಗಕ್ಕೆ ಹೋಗುತ್ತಾರೆ. ದೇವರು ಅವರನ್ನು ತನ್ನ ಪುತ್ರರಾಗಿ ಸ್ವೀಕರಿಸುತ್ತಾನೆ.—ರೋಮ. 3:23-26; 4:25; 8:30.

3. ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆ ಇರುವವರು ಕೂಡ ರೋಮನ್ನರಿಗೆ 8⁠ನೇ ಅಧ್ಯಾಯವನ್ನು ಯಾಕೆ ಅಧ್ಯಯನ ಮಾಡಬೇಕು?

3 ರೋಮನ್ನರಿಗೆ ಬರೆದ ಪುಸ್ತಕದಲ್ಲಿ ಅಬ್ರಹಾಮನ ಬಗ್ಗೆ ಸಹ ಪೌಲ ಮಾತಾಡಿದ್ದಾನೆ. ಅಬ್ರಹಾಮ ಅಭಿಷಿಕ್ತನಾಗಿರಲಿಲ್ಲ. ಯೇಸು ಮಾನವರಿಗೋಸ್ಕರ ಪ್ರಾಣ ಕೊಡುವ ಮುಂಚೆಯೇ ಯೆಹೋವನು ಅವನನ್ನು ನೀತಿವಂತನೆಂದು ಪರಿಗಣಿಸಿದನು. (ರೋಮನ್ನರಿಗೆ 4:20-22 ಓದಿ.) ಅದೇ ರೀತಿ ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆ ಇರುವ ನಂಬಿಗಸ್ತ ಕ್ರೈಸ್ತರನ್ನು ಕೂಡ ಯೆಹೋವನು ನೀತಿವಂತರೆಂದು ಪರಿಗಣಿಸುತ್ತಾನೆ. ಅಭಿಷಿಕ್ತರಲ್ಲದ ಕ್ರೈಸ್ತರಿಗೂ ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿರುವ ಮಾತುಗಳಿಂದ ಪ್ರಯೋಜನವಾಗುತ್ತದೆ.

4. ರೋಮನ್ನರಿಗೆ 8:21⁠ನ್ನು ಓದಿ ನಮ್ಮನ್ನೇ ಯಾವ ಪ್ರಶ್ನೆ ಕೇಳಿಕೊಳ್ಳಬೇಕು?

4 ಮಾನವರು ‘ದೇವರ ಮಕ್ಕಳ ಮಹಿಮಾಭರಿತ ಸ್ವಾತಂತ್ರ್ಯವನ್ನು ಹೊಂದುತ್ತಾರೆ’ ಎಂದು ರೋಮನ್ನರಿಗೆ 8:21 ಹೇಳುತ್ತದೆ. ಇದರರ್ಥ ಯೆಹೋವನು ಹೊಸ ಲೋಕವನ್ನು ಖಂಡಿತ ತರುತ್ತಾನೆ ಮತ್ತು ಮಾನವರು ಪಾಪ ಮತ್ತು ಮರಣದಿಂದ ಬಿಡುಗಡೆ ಆಗುತ್ತಾರೆ. ನಾವು ‘ಹೊಸ ಲೋಕದಲ್ಲಿ ನಾನು ಇರುತ್ತೇನಾ?’ ಎಂದು ನಮ್ಮನ್ನೇ ಕೇಳಿಕೊಳ್ಳಬೇಕು. ಹೊಸ ಲೋಕದಲ್ಲಿ ನಾವಿರಬೇಕಾದರೆ ಏನು ಮಾಡಬೇಕು ಎಂದು ಈಗ ನೋಡೋಣ.

‘ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡಬೇಡಿ’

5. ರೋಮನ್ನರಿಗೆ 8:4-13⁠ರಲ್ಲಿ ಪೌಲ ಯಾವ ವಿಷಯದ ಬಗ್ಗೆ ಮಾತಾಡಿದ್ದಾನೆ?

5 ರೋಮನ್ನರಿಗೆ 8:4-13 ಓದಿ. ಇಲ್ಲಿ ಪೌಲ ‘ಪವಿತ್ರಾತ್ಮಕ್ಕೆ ಅನುಸಾರವಾಗಿ’ ಜೀವಿಸುವವರು ಮತ್ತು ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವವರು ಎಂದು ಎರಡು ರೀತಿಯ ಜನರ ಬಗ್ಗೆ ಮಾತಾಡಿದ್ದಾನೆ. ಪೌಲ ಇಲ್ಲಿ ಕ್ರೈಸ್ತರು ಮತ್ತು ಕ್ರೈಸ್ತರಲ್ಲದವರ ಬಗ್ಗೆ ಮಾತಾಡುತ್ತಿದ್ದಾನೆ ಅಂತ ಕೆಲವರು ನೆನಸುತ್ತಾರೆ. ಆದರೆ ಅವನು ಈ ಪತ್ರವನ್ನು ಬರೆದದ್ದು ‘ಪವಿತ್ರ ಜನರಾಗಿರಲು ಕರೆಯಲ್ಪಟ್ಟ’ ಕ್ರೈಸ್ತರಿಗೇ. (ರೋಮ. 1:7) ಹಾಗಾದರೆ ‘ಪವಿತ್ರಾತ್ಮಕ್ಕೆ ಅನುಸಾರವಾಗಿ’ ಜೀವಿಸುವವರೂ ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವವರೂ ಕ್ರೈಸ್ತರೇ. ಇವರ ಮಧ್ಯೆ ಇರುವ ವ್ಯತ್ಯಾಸವೇನು?

6, 7. (ಎ) “ಶರೀರ” ಎನ್ನುವುದಕ್ಕೆ ಬೈಬಲಿನಲ್ಲಿ ಯಾವ ಯಾವ ಅರ್ಥಗಳಿವೆ? (ಬಿ) ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವವರು ಅಂದರೆ ಯಾರು?

6 “ಶರೀರ” ಎನ್ನುವ ಪದವನ್ನು ಬೈಬಲ್‌ ಬೇರೆ ಬೇರೆ ಅರ್ಥದಲ್ಲಿ ಬಳಸಿದೆ. ಅದರಲ್ಲಿ ಒಂದು ಅರ್ಥ, ನಮ್ಮ ದೇಹ. (ರೋಮ. 2:28; 1 ಕೊರಿಂ. 15:39, 50) ಇನ್ನು ಕೆಲವೊಮ್ಮೆ ರಕ್ತಸಂಬಂಧದ ಬಗ್ಗೆ ಹೇಳುವಾಗಲೂ ಬೈಬಲ್‌ ಈ ಪದವನ್ನು ಬಳಸಿದೆ. ಉದಾಹರಣೆಗೆ, ಯೇಸು “ಶರೀರಾನುಸಾರವಾಗಿ ದಾವೀದನ ಸಂತಾನದಲ್ಲಿ” ಹುಟ್ಟಿದನು ಮತ್ತು ಯೆಹೂದ್ಯರು ‘ಶರೀರ ಸಂಬಂಧವಾಗಿ ನನ್ನ ಬಂಧುಗಳು’ ಎಂದು ಪೌಲ ಹೇಳಿದನು.—ರೋಮ. 1:3; 9:3.

7 ರೋಮನ್ನರಿಗೆ 8:4-13⁠ರಲ್ಲಿ ‘ಶರೀರಭಾವಕ್ಕೆ ಅನುಸಾರವಾಗಿ ಜೀವಿಸುವವರು ಅಂದರೆ ಯಾರು ಎಂದು ಅರ್ಥಮಾಡಿಕೊಳ್ಳಲು ರೋಮನ್ನರಿಗೆ 7:5 ಸಹಾಯ ಮಾಡುತ್ತದೆ. ಆ ವಚನದಲ್ಲಿ ಪೌಲ “ನಾವು ಶರೀರಭಾವಕ್ಕನುಸಾರ ಜೀವಿಸುತ್ತಿದ್ದಾಗ ಧರ್ಮಶಾಸ್ತ್ರದಿಂದ ಪ್ರಕಟಿಸಲ್ಪಟ್ಟ ಪಾಪಭರಿತ ಇಚ್ಛೆಗಳು ನಮ್ಮ ಅಂಗಗಳಲ್ಲಿ ಕಾರ್ಯನಡೆಸುತ್ತಿದ್ದವು” ಎಂದು ಹೇಳಿದನು. ಯಾರು ತಮ್ಮ ಪಾಪಭರಿತ ಆಸೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಮುಳುಗಿರುತ್ತಾರೋ, ಯಾರು ತಮಗೆ ಇಷ್ಟ ಬಂದಂತೆ ನಡೆಯುತ್ತಾರೋ ಅಂಥವರನ್ನು ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವವರು ಎಂದು ಪೌಲ ಹೇಳಿದನು.

8. ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವುದರ ಬಗ್ಗೆ ಪೌಲ ಅಭಿಷಿಕ್ತರಿಗೆ ಯಾಕೆ ಎಚ್ಚರಿಕೆ ಕೊಟ್ಟನು?

8 ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವುದರ ಬಗ್ಗೆ ಪೌಲ ಅಭಿಷಿಕ್ತರಿಗೆ ಯಾಕೆ ಎಚ್ಚರಿಕೆ ಕೊಟ್ಟನು? ಯಾಕೆಂದರೆ ದೇವರ ಸೇವಕರಿಗೆ ಕೂಡ ಅವರ ಆಸೆ-ಆಕಾಂಕ್ಷೆಗಳೇ ದೊಡ್ಡದಾಗಬಹುದು. ರೋಮ್‌ ಸಭೆಯಲ್ಲಿದ್ದ ಕೆಲವು ಸಹೋದರರು “ತಮ್ಮ ಹೊಟ್ಟೆಯ ಸೇವೆ” ಮಾಡುವವರಾಗಿದ್ದರು. ಅಂದರೆ ಅವರ ಬದುಕಲ್ಲಿ ತಿನ್ನುವುದು, ಕುಡಿಯುವುದು, ಲೈಂಗಿಕ ಹಸಿವನ್ನು ತೀರಿಸಿಕೊಳ್ಳುವುದು ಇಂಥ ಸುಖಭೋಗಗಳೇ ಮುಖ್ಯವಾಗಿತ್ತು. (ರೋಮ. 16:17, 18; ಫಿಲಿ. 3:18, 19; ಯೂದ 4, 8, 12) ಕೊರಿಂಥ ಸಭೆಯಲ್ಲೂ ಸ್ವಲ್ಪ ಸಮಯದ ವರೆಗೆ ಇದೇ ರೀತಿಯ ಸನ್ನಿವೇಶ ಇತ್ತು. ಅಲ್ಲಿನ ಒಬ್ಬ ಸಹೋದರ ‘ತನ್ನ ತಂದೆಯ ಹೆಂಡತಿಯನ್ನೇ ಇಟ್ಟುಕೊಂಡಿದ್ದ.’ (1 ಕೊರಿಂ. 5:1) ಹಾಗಾಗಿ, ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವುದರ ಬಗ್ಗೆ ಆಗಿನ ಕ್ರೈಸ್ತರಿಗೆ ಪೌಲ ಕೊಟ್ಟ ಎಚ್ಚರಿಕೆ ಸೂಕ್ತವಾಗಿತ್ತು.—ರೋಮ. 8:5, 6

9. ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸುವುದು ಅಂದರೆ ಏನಲ್ಲ?

9 ಈ ಎಚ್ಚರಿಕೆಗೆ ಇಂದಿನ ಕ್ರೈಸ್ತರು ಕೂಡ ಯಾಕೆ ಗಮನಕೊಡಬೇಕು? ಒಬ್ಬ ವ್ಯಕ್ತಿ ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿದ್ದರೂ ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸಲು ಶುರುಮಾಡಿಬಿಡಬಹುದು. ಹಾಗಾದರೆ ಪೌಲನ ಮಾತಿನ ಅರ್ಥ ನಾವು ಊಟ-ತಿಂಡಿ, ಕೆಲಸ, ಮನೋರಂಜನೆ, ದಾಂಪತ್ಯ ಸುಖ ಎಲ್ಲಾ ಬಿಟ್ಟು ಸಂನ್ಯಾಸಿ ತರ ಬದುಕಬೇಕು ಅಂತನಾ? ಖಂಡಿತ ಇಲ್ಲ. ಇದೆಲ್ಲ ಜೀವನದಲ್ಲಿ ಸಾಮಾನ್ಯವಾದ ವಿಷಯಗಳು. ಯೇಸು ಕೂಡ ರುಚಿರುಚಿಯಾದ ಊಟ ಮಾಡಿದ್ದಾನೆ. ಬೇರೆಯವರಿಗೂ ಊಟ ಕೊಟ್ಟಿದ್ದಾನೆ. ವಿಶ್ರಾಂತಿ ಪಡೆಯಬೇಕೆಂದೂ ಅವನಿಗೆ ಗೊತ್ತಿತ್ತು. ಅಷ್ಟೇ ಅಲ್ಲ, ಮದುವೆ ಜೀವನದಲ್ಲಿ ಲೈಂಗಿಕ ಅಗತ್ಯವನ್ನು ಪೂರೈಸುವುದು ಮುಖ್ಯ ಎಂದು ಪೌಲ ಬರೆದಿದ್ದಾನೆ.

ನಮ್ಮ ಮಾತುಕತೆ ಏನು ತೋರಿಸುತ್ತದೆ? (ಪ್ಯಾರ 10, 11 ನೋಡಿ)

10. “ಮನಸ್ಸಿಡುವುದು” ಎನ್ನುವುದರ ಅರ್ಥವೇನು?

10 “ಮನಸ್ಸಿಡುವುದು” ಎನ್ನುವುದರ ಅರ್ಥವೇನು? ಪೌಲ ಬಳಸಿರುವ ಈ ಗ್ರೀಕ್‌ ಪದದ ಅರ್ಥ ಒಂದು ವಿಷಯವನ್ನು ಮನಸ್ಸಲ್ಲೆಲ್ಲ ತುಂಬಿಸಿಕೊಳ್ಳುವುದು, ಅದರ ಬಗ್ಗೆನೇ ಯೋಚಿಸುತ್ತಾ ಇರುವುದು. ಯಾರಿಗೆ ಈ ಪದವನ್ನು ಬಳಸಬಹುದು ಅಂತ ಒಬ್ಬ ವಿದ್ವಾಂಸರು ಹೇಳುತ್ತಾರೆ. ಅವರ ಪ್ರಕಾರ ಯಾರು ತಮ್ಮ ಆಸೆ-ಆಕಾಂಕ್ಷೆಗಳ ಬಗ್ಗೆನೇ ಮೂರು ಹೊತ್ತು ಯೋಚಿಸುತ್ತಾ ಇರುತ್ತಾರೋ, ಅದರಲ್ಲೇ ಯಾರು “ಸಂಪೂರ್ಣವಾಗಿ ಮುಳುಗಿಹೋಗಿರುತ್ತಾರೋ, ಅದರ ಬಗ್ಗೆನೇ ಮಾತಾಡುತ್ತಾ ಇರುತ್ತಾರೋ” ಅಂಥವರು. ಶರೀರಭಾವದ ಮೇಲೆ ಮನಸ್ಸಿಡುವವರು ತಮ್ಮ ಆಸೆಗಳು ಆಡಿಸುವ ತರ ಆಡುತ್ತಾರೆ.

11. ಯಾವ ವಿಷಯಗಳು ನಮ್ಮ ಜೀವನದಲ್ಲಿ ತುಂಬ ಮುಖ್ಯವಾಗಿ ಬಿಡಬಹುದು?

11 ರೋಮ್‌ನ ಕ್ರೈಸ್ತರು “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ” ಮೇಲೆ ಮನಸ್ಸಿಟ್ಟಿದ್ದೇವಾ ಎಂದು ಪರೀಕ್ಷಿಸಿಕೊಳ್ಳಬೇಕಿತ್ತು. ಅವರ ಹಾಗೆ ನಾವು ಕೂಡ ನಮಗೆ ಯಾವುದು ತುಂಬ ಮುಖ್ಯ ಎಂದು ಪರೀಕ್ಷಿಸಿಕೊಳ್ಳಬೇಕು. ನಾವು ಯಾವಾಗಲೂ ಯಾವುದರ ಬಗ್ಗೆ ಮಾತಾಡುತ್ತಾ ಇರುತ್ತೇವೆ? ಏನು ಮಾಡಲು ಬಯಸುತ್ತೇವೆ? ಕೆಲವರು ಮದ್ಯಪಾನದ ಬಗ್ಗೆ, ಮನೆ ಅಲಂಕಾರದ ಬಗ್ಗೆ, ಹೊಸ ಬಟ್ಟೆ ಬಗ್ಗೆ, ಯಾವುದರಲ್ಲಿ ದುಡ್ಡು ಹಾಕೋಣ ಅನ್ನೋದರ ಬಗ್ಗೆ, ರಜೆಯಲ್ಲಿ ಯಾವ ಊರಿಗೆ ಹೋಗೋಣ ಎನ್ನುವುದರ ಬಗ್ಗೆನೇ ಮಾತಾಡುತ್ತಾ ಇರುತ್ತಾರೆ. ಇದ್ಯಾವುದೂ ತಪ್ಪಲ್ಲ, ಇದೆಲ್ಲ ಜೀವನದಲ್ಲಿ ಸಹಜ. ಯೇಸು ಕೂಡ ಒಂದು ಮದುವೆಗೆ ಹೋದಾಗ ನೀರನ್ನು ದ್ರಾಕ್ಷಾಮದ್ಯ ಮಾಡಿ ಕೊಟ್ಟಿದ್ದನು. ತಿಮೊಥೆಯನ ಆರೋಗ್ಯ ಹಾಳಾದಾಗ “ಸ್ವಲ್ಪ ದ್ರಾಕ್ಷಾಮದ್ಯವನ್ನು ಉಪಯೋಗಿಸು” ಎಂದು ಪೌಲ ಹೇಳಿದ್ದನು. (1 ತಿಮೊ. 5:23; ಯೋಹಾ. 2:3-11) ಆದರೆ ದ್ರಾಕ್ಷಾಮದ್ಯವೇ ಅವರ ಜೀವನದಲ್ಲಿ ಪ್ರಾಮುಖ್ಯ ವಿಷಯವಾಗಿ ಇರಲಿಲ್ಲ. ನಮ್ಮ ಬಗ್ಗೆ ಏನು? ನಮ್ಮ ಜೀವನದಲ್ಲಿ ನಮಗೆ ಯಾವುದು ತುಂಬ ಮುಖ್ಯ?

12, 13. ಶರೀರಭಾವದ ಮೇಲೆ ಮನಸ್ಸಿಟ್ಟರೆ ಏನಾಗುತ್ತದೆ?

12 “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ” ಎಂದು ಪೌಲ ಎಚ್ಚರಿಸಿದನು. (ರೋಮ. 8:6) ಇದರ ಅರ್ಥವೇನು? ನಾವು ‘ಶರೀರಭಾವಕ್ಕೆ ಅನುಸಾರವಾಗಿ’ ಜೀವಿಸಿದರೆ ಯೆಹೋವನೊಂದಿಗೆ ಇರುವ ಸಂಬಂಧವನ್ನು ಕಳಕೊಂಡು ಜೀವಂತ ಶವ ಆಗಿಬಿಡುತ್ತೇವೆ. ಮುಂದೆ ನಿತ್ಯಜೀವವನ್ನೂ ಕಳಕೊಳ್ಳುತ್ತೇವೆ. ಆದರೆ ಇಂಥ ಸ್ಥಿತಿ ನಮಗೆ ಬರಬೇಕಾಗಿಲ್ಲ. ಶರೀರಭಾವಕ್ಕೆ ಅನುಸಾರವಾಗಿ ಜೀವಿಸುತ್ತಾ ಇರುವ ವ್ಯಕ್ತಿ ಬದಲಾಗಬಹುದು. ಕೊರಿಂಥ ಸಭೆಯಲ್ಲಿದ್ದ ವ್ಯಕ್ತಿಯನ್ನೇ ತೆಗೆದುಕೊಳ್ಳಿ. ಅನೈತಿಕ ಜೀವನ ನಡೆಸುತ್ತಿದ್ದದರಿಂದ ಅವನನ್ನು ಬಹಿಷ್ಕರಿಸಲಾಯಿತು. ಆಮೇಲೆ ತನ್ನ ತಪ್ಪನ್ನು ತಿದ್ದಿಕೊಂಡ. ತಪ್ಪಾದ ಆಸೆಗಳನ್ನು ಮನಸ್ಸಿಂದ ತೆಗೆದುಹಾಕಿ ಶುದ್ಧ ಹೃದಯದಿಂದ ಪುನಃ ಯೆಹೋವನ ಸೇವೆ ಮಾಡಲು ಆರಂಭಿಸಿದ.—2 ಕೊರಿಂ. 2:6-8.

13 ಅಂಥ ದೊಡ್ಡ ತಪ್ಪನ್ನು ಮಾಡಿದವನೇ ಬದಲಾದ ಅಂದಮೇಲೆ ಎಂಥವರು ಬೇಕಾದರೂ ಬದಲಾಗಬಹುದು. ಇಂದು ಕ್ರೈಸ್ತನೊಬ್ಬ ತನ್ನ ಪಾಪಭರಿತ ಆಸೆ-ಆಕಾಂಕ್ಷೆಗಳ ಮೇಲೆ ಮನಸ್ಸಿಡಲು ಶುರುಮಾಡಿದ್ದರೆ ಅವನು ಕೂಡ ತನ್ನನ್ನು ಬದಲಾಯಿಸಿಕೊಳ್ಳಬಹುದು. ಪೌಲ ಕೊಟ್ಟ ಎಚ್ಚರಿಕೆಯ ಮಾತುಗಳಿಗೆ ಗಮನಕೊಟ್ಟರೆ ನಾವು ಎಷ್ಟು ದೊಡ್ಡ ತಪ್ಪನ್ನು ಮಾಡಿದರೂ ತಿದ್ದಿಕೊಳ್ಳಬಹುದು.

‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡಿ’

14, 15. (ಎ) ನಾವು ಯಾವುದರ ಮೇಲೆ ಮನಸ್ಸಿಡಬೇಕು ಎಂದು ಪೌಲ ಹೇಳಿದನು? (ಬಿ) “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು” ಅಂದರೆ ಏನಲ್ಲ?

14 ‘ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಟ್ಟರೆ’ ಏನಾಗುತ್ತದೆ ಎಂದು ಹೇಳಿದ ಮೇಲೆ “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ” ಎಂದು ಪೌಲ ಹೇಳಿದನು. ಇದು ನಿಜವಾಗಲೂ ನಮಗೆ ಸಿಗುವ ದೊಡ್ಡ ಬಹುಮಾನ!

15 “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು” ಅಂದರೆ ಯಾವಾಗಲೂ ಯೆಹೋವನ ಬಗ್ಗೆ, ಬೈಬಲ್‌ ಬಗ್ಗೆ, ಹೊಸ ಲೋಕದ ಬಗ್ಗೆ ಯೋಚಿಸುತ್ತಾ ಇರುತ್ತೇವೆ, ಅದರ ಬಗ್ಗೆನೇ ಮಾತಾಡುತ್ತಾ ಇರುತ್ತೇವೆ ಅಂತಲ್ಲ. ನಾವು ಎಲ್ಲರ ಹಾಗೆ ಜೀವನ ನಡೆಸುತ್ತೇವೆ. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಕೂಡ ಸಾಮಾನ್ಯ ಜನರಂತೆ ಬದುಕಿದರು. ಅವರು ರುಚಿರುಚಿಯಾದ ಆಹಾರ ತಿಂದರು, ಮದುವೆಯಾದರು, ಮಕ್ಕಳು ಮಾಡಿಕೊಂಡರು, ಕೆಲಸ ಮಾಡುತ್ತಿದ್ದರು.—ಮಾರ್ಕ 6:3; 1 ಥೆಸ. 2:9.

16. ಪೌಲನಿಗೆ ತನ್ನ ಜೀವನದಲ್ಲಿ ಯಾವುದು ಮುಖ್ಯವಾಗಿತ್ತು?

16 ಆದರೂ ಆ ಕ್ರೈಸ್ತರಾಗಲಿ ಪೌಲನಾಗಲಿ ಜೀವನದ ಈ ಸಾಮಾನ್ಯ ವಿಷಯಗಳಲ್ಲೇ ಮುಳುಗಿಹೋಗಲಿಲ್ಲ. ಪೌಲ ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗುಡಾರ ಮಾಡುವ ಕೆಲಸ ಮಾಡುತ್ತಿದ್ದನು. ಆದರೆ ಆ ಕೆಲಸನೇ ಅವನ ಸರ್ವಸ್ವ ಆಗಿರಲಿಲ್ಲ. ದೇವರ ಸೇವೆ ಮಾಡುವುದೇ ಅವನಿಗೆ ಜೀವನದಲ್ಲಿ ಮುಖ್ಯವಾಗಿತ್ತು. ಸಾರುವ ಮತ್ತು ಬೋಧಿಸುವ ಕೆಲಸದ ಮೇಲೆ ಅವನು ಮನಸ್ಸಿಟ್ಟನು. (ಅಪೊಸ್ತಲರ ಕಾರ್ಯಗಳು 18:2-4; 20:20, 21, 34, 35 ಓದಿ.) ಪೌಲ ರೋಮ್‌ನ ಸಹೋದರ ಸಹೋದರಿಯರಿಗೆ ಒಳ್ಳೇ ಮಾದರಿಯಾಗಿದ್ದನು. ಅವನ ಮಾದರಿಯನ್ನು ನಾವು ಕೂಡ ಅನುಕರಿಸಬೇಕು.—ರೋಮ. 15:15, 16.

17. ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಟ್ಟರೆ’ ಯಾವ ಪ್ರಯೋಜನ ಸಿಗುತ್ತದೆ?

17 ನಾವು ಯೆಹೋವನ ಸೇವೆ ಮಾಡುವುದರ ಮೇಲೆ ಮನಸ್ಸಿಟ್ಟರೆ ಯಾವ ಪ್ರಯೋಜನ ಸಿಗುತ್ತದೆ? “ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಜೀವ ಮತ್ತು ಶಾಂತಿಯ ಅರ್ಥದಲ್ಲಿದೆ” ಎನ್ನುತ್ತದೆ ರೋಮನ್ನರಿಗೆ 8:6. ಅದರ ಅರ್ಥ, ನಾವು ಪವಿತ್ರಾತ್ಮ ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡಬೇಕು ಮತ್ತು ಯೆಹೋವನು ಯೋಚಿಸುವಂತೆ ನಾವೂ ಯೋಚಿಸಲು ಕಲಿಯಬೇಕು. ಹೀಗೆ ಮಾಡಿದರೆ ಈಗ ನಮಗೆ ಸಂತೋಷ, ಸಂತೃಪ್ತಿ ಸಿಗುವಂತೆ ಯೆಹೋವನು ಮಾಡುತ್ತಾನೆ ಮತ್ತು ಮುಂದಕ್ಕೆ ನಿತ್ಯಜೀವ ಕೊಡುತ್ತಾನೆ.

18. ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಟ್ಟರೆ’ ಹೇಗೆ ಶಾಂತಿಯಿಂದ ಇರುತ್ತೇವೆ?

18 ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಶಾಂತಿಯ ಅರ್ಥದಲ್ಲಿದೆ’ ಎಂದು ಪೌಲ ಹೇಳಿದ್ದರ ಅರ್ಥವೇನು? ಎಲ್ಲರೂ ಶಾಂತಿಯಿಂದ ಇರಬೇಕು, ಮನಶ್ಶಾಂತಿ ಬೇಕು ಅಂತ ಬಯಸುತ್ತಾರೆ. ಆದರೆ ಅದು ಎಲ್ಲರಿಗೂ ಸಿಗಲ್ಲ. ಸಂತೋಷದ ವಿಷಯ ಏನೆಂದರೆ ಯೆಹೋವನು ನಮಗೆ ಅದನ್ನು ಕೊಟ್ಟಿದ್ದಾನೆ. ನಾವು ಕುಟುಂಬದಲ್ಲಿ, ಸಭೆಯಲ್ಲಿ ಶಾಂತಿ-ಸಮಾಧಾನದಿಂದ ಇದ್ದೇವೆ. ಆದರೂ ನಾವು ಅಪರಿಪೂರ್ಣರು ಆಗಿರುವುದರಿಂದ ನಮ್ಮ ಮಧ್ಯೆ ಕೆಲವೊಮ್ಮೆ ಮನಸ್ತಾಪಗಳಾಗುತ್ತವೆ. ಆಗೆಲ್ಲ “ನಿನ್ನ ಸಹೋದರನೊಂದಿಗೆ ಸಮಾಧಾನ ಮಾಡಿಕೊ” ಎಂಬ ಯೇಸುವಿನ ಸಲಹೆಯನ್ನು ನಾವು ಪಾಲಿಸುತ್ತೇವೆ. (ಮತ್ತಾ. 5:24) ನಾವೆಲ್ಲರೂ ‘ಶಾಂತಿಯನ್ನು ದಯಪಾಲಿಸುವ ದೇವರಾದ’ ಯೆಹೋವನನ್ನು ಆರಾಧಿಸುವುದರಿಂದ ಶಾಂತಿಯಿಂದ ಇರಬೇಕು.—ರೋಮ. 15:33; 16:20.

19. ಯಾವ ವಿಶೇಷ ರೀತಿಯ ಶಾಂತಿ ನಮಗೆ ಸಿಗಲು ಸಾಧ್ಯವಿದೆ?

19 ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಟ್ಟರೆ’ ಯೆಹೋವ ದೇವರ ಜೊತೆ ಕೂಡ ನಾವು ಶಾಂತಿಯಿಂದ ಇರುತ್ತೇವೆ. “ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ” ಎಂದು ಪ್ರವಾದಿಯಾದ ಯೆಶಾಯ ಹೇಳಿದ್ದಾನೆ.—ಯೆಶಾ. 26:3; ರೋಮನ್ನರಿಗೆ 5:1 ಓದಿ.

20. ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿರುವ ಸಲಹೆ ಬಗ್ಗೆ ನಿಮಗೆ ಹೇಗನಿಸುತ್ತದೆ?

20 ರೋಮನ್ನರಿಗೆ 8⁠ನೇ ಅಧ್ಯಾಯದಲ್ಲಿ ಮುತ್ತಿನಂಥ ಮಾತುಗಳಿವೆ. ಆ ಮಾತುಗಳಿಂದ, ಸ್ವರ್ಗಕ್ಕೆ ಹೋಗುವ ನಿರೀಕ್ಷೆ ಇರುವವರಿಗೆ ಮತ್ತು ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಇರುವವರಿಗೆ ಪ್ರಯೋಜನ ಇದೆ. ನಮ್ಮ ಆಸೆಗಳ ಮೇಲೆ ಮನಸ್ಸಿಡದೆ ಯೆಹೋವನ ಸೇವೆ ಮಾಡುವುದರ ಮೇಲೆ ಮನಸ್ಸಿಡಬೇಕು ಎಂದು ಬೈಬಲ್‌ ನಮಗೆ ಉತ್ತೇಜನ ನೀಡುತ್ತದೆ. ಇದಕ್ಕಾಗಿ ನಾವು ಕೃತಜ್ಞರು ಅಲ್ಲವೇ? ‘ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಟ್ಟರೆ’ ನಮಗೆ ಸಿಗುವ ಬಹುಮಾನ ಏನು ಗೊತ್ತೇ? ಪೌಲನು ಹೇಳಿದ್ದು: “ದೇವರು ಕೊಡುವ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನ ಮೂಲಕವಾಗಿರುವ ನಿತ್ಯಜೀವ.”—ರೋಮ. 6:23.