ನಮ್ಮ ಸಂಗ್ರಹಾಲಯ
ಪೋರ್ಚುಗಲ್‌ನಲ್ಲಿ ಮೊಟ್ಟಮೊದಲಾಗಿ ರಾಜ್ಯದ ಬೀಜ ಬಿದ್ದ ದಿನಗಳು
ಹಡಗೊಂದು ಅಟ್ಲಾಂಟಿಕ್ ಸಾಗರದ ಅಲೆಗಳ ಅಬ್ಬರದಲ್ಲಿ ತೇಲಾಡುತ್ತಾ ಯೂರೋಪಿಗೆ ಸಾಗುತ್ತಿತ್ತು. ಅದರಲ್ಲಿದ್ದ ಒಬ್ಬ ಪ್ರಯಾಣಿಕ ಜಾರ್ಜ್ ಯಂಗ್. ಬ್ರಸಿಲ್‌ನಲ್ಲಿ ಸುವಾರ್ತೆ ಸಾರುವುದರಲ್ಲಿ ತನ್ನಿಂದ ಮಾಡಲಿಕ್ಕಾದ ವಿಷಯಗಳನ್ನು ನೆನಸಿಕೊಂಡು ಅವರ ಮುಖದಲ್ಲಿ ಮಂದಹಾಸ ಮೂಡಿತು. a ಆದರೆ ಈಗ ಅವರ ಗಮನ ತನ್ನ ಹೊಸ ನೇಮಕದ ಕಡೆಗೆ ತಿರುಗಿತು. ಸ್ಪೇನ್ ಮತ್ತು ಪೋರ್ಚುಗಲ್‌ನ ಬಹುತೇಕ ಪ್ರದೇಶಗಳಿಗೆ ಸುವಾರ್ತೆ ತಲಪಿಸಬೇಕಿತ್ತು. ‘ಬೇಗನೆ ಅಲ್ಲಿ ತಲುಪಬೇಕು, ಸಹೋದರ ರದರ್‌ಫರ್ಡ್ ಕೊಡುವ ಭಾಷಣಕ್ಕಾಗಿ ಏರ್ಪಾಡು ಮಾಡಬೇಕು, ಮೂರು ಲಕ್ಷ ಕರಪತ್ರಗಳನ್ನಾದರೂ ಹಂಚಬೇಕು’ ಎಂದು ಅವರು ಯೋಚಿಸುತ್ತಾ ಇದ್ದರು!
ಆದರೆ, 1925ರಲ್ಲಿ ಸಹೋದರ ಯಂಗ್ ಲಿಸ್ಬನ್‌ಗೆ ಕಾಲಿಟ್ಟಾಗ ಅವರನ್ನು ಸ್ವಾಗತಿಸಿದ್ದು ಅಲ್ಲಿ ನಡೆಯುತ್ತಿದ್ದ ಜಗಳಗಳು ಮತ್ತು ಗಲಭೆಗಳು. ಪೋರ್ಚುಗಲ್‌ನಲ್ಲಿ ಪ್ರಜಾಪ್ರಭುತ್ವದ ಪರವಾಗಿ ನಿಂತಿದ್ದ ಜನರ ದಂಗೆಯಿಂದಾಗಿ ರಾಜರ ಆಡಳಿತ 1910ಕ್ಕೆ ಕೊನೆಯಾಗಿತ್ತು. ಜೊತೆಗೆ ಕ್ಯಾಥೊಲಿಕ್ ಚರ್ಚು ಅಧಿಕಾರವನ್ನು ಕಳಕೊಳ್ಳುತ್ತಾ ಇತ್ತು. ಇದರಿಂದಾಗಿ ಜನರಿಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ಆಂತರಿಕ ಗಲಭೆ ಮುಂದುವರಿದಿತ್ತು.
ರದರ್‌ಫರ್ಡ್‌ರ ಭಾಷಣಕ್ಕಾಗಿ ಸಹೋದರ ಯಂಗ್ ಸಿದ್ಧತೆ ಮಾಡುತ್ತಿರುವಾಗಲೇ ಒಂದು ರಾಜಕೀಯ ಒಳಸಂಚಿನ ಬಗ್ಗೆ ಗೊತ್ತಾದ್ದರಿಂದ ಸರ್ಕಾರ ದೇಶವನ್ನು ಸೈನಿಕರ ನಿಯಂತ್ರಣಕ್ಕೆ ತಂದಿತು. ಬ್ರಿಟಿಷ್ ಆ್ಯಂಡ್ ಫಾರಿನ್ ಬೈಬಲ್ ಸೊಸೈಟಿಯ ಕಾರ್ಯದರ್ಶಿ ವಿರೋಧ ಬಂದೇ ಬರುತ್ತೆ ಅಂತ ಯಂಗ್‌ರನ್ನು ಎಚ್ಚರಿಸಿದರು. ವಿರೋಧಿಗಳು ಬಾಂಬ್ ದಾಳಿ ಮಾಡುತ್ತೇವೆ ಎಂಬ ಬೆದರಿಕೆಯನ್ನೂ ಹಾಕಿದರು. ಆದರೂ ಸಹೋದರ ಯಂಗ್ ಕೆಮೋನ್ಶ್ ಶಾಲೆಯ ಜಿಮ್‌ನಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ಕೇಳಿದಾಗ ಅನುಮತಿ ಸಿಕ್ಕಿತು!
ಮೇ 13 ಸಹೋದರ ರದರ್‌ಫರ್ಡ್ ಭಾಷಣ ಕೊಡಬೇಕಾದ ದಿನ. ಏನಾಗುತ್ತೋ ಎಂಬ ಕುತೂಹಲ! “ಭೂಮಿಯಲ್ಲಿ ಸದಾಕಾಲ ಜೀವಿಸುವುದು ಹೇಗೆ?” ಎಂಬ ಸಾರ್ವಜನಿಕ ಭಾಷಣದ ಬಗ್ಗೆ ಅಲ್ಲಿನ ಬಹುತೇಕ ಕಟ್ಟಡಗಳ ಮೇಲೆ ಫಲಕಗಳನ್ನು ಹಾಕಲಾಯಿತು, ವಾರ್ತಾಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಯಿತು. ಆದರೆ ಧಾರ್ಮಿಕ ವಿರೋಧಿಗಳು ತಮ್ಮ ವಾರ್ತಾಪತ್ರಿಕೆಯಲ್ಲಿ ಒಂದು ಲೇಖನವನ್ನು ಪ್ರಕಟಿಸಿದರು. ಅದರ ಮೂಲಕ ತಮ್ಮ ಓದುಗರನ್ನು ಹೊಸದಾಗಿ ಬಂದಿರುವ “ಕಳ್ಳ ಪ್ರವಾದಿಗಳ” ವಿಷಯದಲ್ಲಿ ಎಚ್ಚರಿಸಲು ಬಯಸಿದರು. ಅಷ್ಟೇ ಅಲ್ಲ, ಅವರು ಜಿಮ್ ಹೊರಗೆ ನಿಂತುಕೊಂಡು, ರದರ್‌ಫರ್ಡ್‌ರ ಬೋಧನೆಗಳ ವಿರುದ್ಧವಾದ ಮಾಹಿತಿ ಇರುವ ಸಾವಿರಾರು ಕಿರುಹೊತ್ತಗೆಗಳನ್ನು ಹಂಚಿದರು.
ಇಷ್ಟೆಲ್ಲ ಆದರೂ, ಕಾರ್ಯಕ್ರಮಕ್ಕೆ ತುಂಬ ಜನ ಬಂದರು. ಆ ಸಭಾಂಗಣದಲ್ಲಿ ಸುಮಾರು 2000 ಜನರಿಗೆ ಆಗುವಷ್ಟೇ ಜಾಗ ಇತ್ತು. ಇನ್ನೂ 2000ದಷ್ಟು ಜನ ಜಾಗ ಇಲ್ಲದೆ ಹಿಂದೆ ಹೋಗಬೇಕಾಗಿ ಬಂತು. ತುಂಬ ಆಸಕ್ತಿಯಿದ್ದ ಕೆಲವರು ಸಭಾಂಗಣದಲ್ಲಿದ್ದ ಹಗ್ಗದ ಏಣಿಗಳನ್ನು ಹತ್ತಿ ನೇತಾಡಿಕೊಂಡು ಭಾಷಣವನ್ನು ಕೇಳಿಸಿಕೊಂಡರು. ಇನ್ನೂ ಕೆಲವರು ವ್ಯಾಯಾಮ ಉಪಕರಣಗಳ ಮೇಲೆ ಹತ್ತಿ ಕೂತು ಭಾಷಣ ಕೇಳಿಸಿಕೊಂಡರು.
ಆದರೆ ಕೆಲವು ಕಹಿಘಟನೆಗಳೂ ನಡೆದವು. ವಿರೋಧಿಗಳು ಕಿರುಚಾಡುತ್ತಾ ಇದ್ದರು, ಕುರ್ಚಿಗಳನ್ನು ಮುರಿದು ಹಾಕಿದರು. ಆದರೆ ಸಹೋದರ ರದರ್‌ಫರ್ಡ್ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಎಲ್ಲರಿಗೂ ಕೇಳಿಸುವಂತೆ ಒಂದು ಮೇಜಿನ ಮೇಲೆ ನಿಂತು ಶಾಂತವಾಗಿ ಭಾಷಣ ನೀಡಿದರು. ಭಾಷಣ ಮುಗಿದಾಗ ಮಧ್ಯರಾತ್ರಿ ಆಗುತ್ತಾ ಬಂದಿತ್ತು. 1200ಕ್ಕೂ ಹೆಚ್ಚು ಆಸಕ್ತ ಜನರು ಬೈಬಲ್ ಸಾಹಿತ್ಯಕ್ಕಾಗಿ ತಮ್ಮ ಹೆಸರು-ವಿಳಾಸಗಳನ್ನು ಕೊಟ್ಟು ಹೋದರು. ಮಾರನೇ ದಿನನೇ ವೂ
ಸೆಕೂಲೂ ಎಂಬ ವಾರ್ತಾಪತ್ರಿಕೆಯಲ್ಲಿ ರದರ್‌ಫರ್ಡ್‌ರ ಭಾಷಣದ ಬಗ್ಗೆ ಲೇಖನ ಪ್ರಕಟವಾಯಿತು.1925ರ ಸೆಪ್ಟೆಂಬರ್‌ನಿಂದ ದ ವಾಚ್ ಟವರ್ ಪತ್ರಿಕೆಯ ಪೋರ್ಚುಗೀಸ್ ಭಾಷೆಯ ಆವೃತ್ತಿ ಪೋರ್ಚುಗಲ್‌ನಲ್ಲಿ ಮುದ್ರಣವಾಗಲು ಆರಂಭವಾಯಿತು. (ಆದರೆ ಪೋರ್ಚುಗೀಸ್ ಆವೃತ್ತಿ ಬ್ರಸಿಲ್‌ನಲ್ಲಿ ಈ ಮುಂಚೆಯೇ ಇತ್ತು.) ಸುಮಾರು ಆ ಸಮಯದಲ್ಲಿ ಬ್ರಸಿಲ್‌ನಲ್ಲಿದ್ದ ವೆರ್ಜೀಲಿಯೋ ಫರ್ಗಸನ್ ಎಂಬ ಬೈಬಲ್ ವಿದ್ಯಾರ್ಥಿ ಪೋರ್ಚುಗಲ್‌ಗೆ ಬಂದು ರಾಜ್ಯ ಕೆಲಸವನ್ನು ಬೆಂಬಲಿಸಬೇಕು ಎಂದು ತೀರ್ಮಾನಿಸಿದರು. ಅವರು ಸಹೋದರ ಯಂಗ್ ಜೊತೆ ಬ್ರಸಿಲ್‌ನಲ್ಲಿ ಬೈಬಲ್ ವಿದ್ಯಾರ್ಥಿಗಳ ಒಂದು ಚಿಕ್ಕ ಶಾಖಾ ಕಚೇರಿಯಲ್ಲಿ ಕೆಲಸ ಮಾಡಿದ್ದರು. ತಡಮಾಡದೆ ತನ್ನ ಹೆಂಡತಿ ಲಿಜೀ ಜೊತೆ ಸಹೋದರ ಯಂಗ್ ಹತ್ತಿರ ಹೋದರು. ಫರ್ಗಸನ್ ಆ ಸಮಯಕ್ಕೆ ಅಲ್ಲಿ ಬಂದದ್ದು ಒಳ್ಳೇದಾಯಿತು.ಯಾಕೆಂದರೆ ಯಂಗ್ ಪೋರ್ಚುಗಲ್‌ನಿಂದ ಬೇಗನೆ ಬೇರೆ ಕಡೆಗೆ ಹೋಗಲಿದ್ದರು. ಅವರಿಗೆ ಸೋವಿಯತ್ ಒಕ್ಕೂಟ ಸೇರಿದಂತೆ ಬೇರೆ ಕಡೆಗಳಲ್ಲಿ ಸಾರುವ ನೇಮಕ ಸಿಕ್ಕಿತ್ತು.
ಅಲ್ಲಿನ ಮಿಲಿಟರಿಯು ನಿರಂಕುಶ ಪ್ರಭುತ್ವವನ್ನು ಜಾರಿಗೆ ತಂದದ್ದರಿಂದ ದೇಶದಲ್ಲಿ ವಿರೋಧ ಜಾಸ್ತಿಯಾಯಿತು. ಆದರೆ ಸಹೋದರ ಫರ್ಗಸನ್ ಅಲ್ಲೇ ಇದ್ದು ಬೈಬಲ್ ವಿದ್ಯಾರ್ಥಿಗಳ ಚಿಕ್ಕ ಗುಂಪನ್ನು ಸಂರಕ್ಷಿಸಿದರು. ಧೈರ್ಯದಿಂದ ಸಾರಲು ಅವರಿಗೆ ಉತ್ತೇಜನ ನೀಡಿದರು. ತನ್ನ ಮನೆಯಲ್ಲಿ ಕೂಟಗಳನ್ನು ನಡೆಸಲು ಸರ್ಕಾರದ ಅನುಮತಿ ಕೇಳಿದರು. 1927ರ ಅಕ್ಟೋಬರ್‌ನಲ್ಲಿ ಅನುಮತಿ ಸಿಕ್ಕಿತು.
ನಿರಂಕುಶ ಪ್ರಭುತ್ವದ ಮೊದಲ ವರ್ಷದಲ್ಲೇ ಪೋರ್ಚುಗಲ್‌ನಲ್ಲಿ ಸುಮಾರು 450 ಜನರು ಕಾವಲಿನ ಬುರುಜು ಪತ್ರಿಕೆಯ ಚಂದಾದಾರರಾಗಿದ್ದರು. ಅಷ್ಟೇ ಅಲ್ಲದೆ ಪೋರ್ಚುಗೀಸ್ ವಸಾಹತುಗಳಾಗಿದ್ದ ಅಂಗೋಲ, ಅಝೋರ್ಸ್, ಈಸ್ಟ್ ಟೈಮರ್, ಕೇಪ್ ವರ್ಡ್, ಗೋವಾ, ಮಡೀರ ಮತ್ತು ಮೊಜಾಂಬಿಕ್ ಪ್ರಾಂತ್ಯಗಳಲ್ಲಿ ಕರಪತ್ರ ಮತ್ತು ಕಿರುಹೊತ್ತಗೆಯ ಮೂಲಕ ಸತ್ಯ ಹರಡಿತು.
ತೋಟಗಾರಿಕೆ ಮಾಡುತ್ತಿದ್ದ ಮಾನ್ವೆಲ್ ಡಾ ಸಿಲ್ವ ಝಾರ್ಡವು ಎಂಬ ದೀನ ವ್ಯಕ್ತಿ 1929ರಲ್ಲಿ ಬ್ರಸಿಲ್‌ನಿಂದ ಲಿಸ್ಬನ್‌ಗೆ ಬಂದರು. ಬ್ರಸಿಲ್‌ನಲ್ಲಿದ್ದಾಗಲೇ ಅವರು ಸಹೋದರ ಯಂಗ್ ಕೊಟ್ಟ ಸಾರ್ವಜನಿಕ ಭಾಷಣ ಕೇಳಿದ್ದರು. ಇದೇ ಸತ್ಯ ಅಂತ ಅವರಿಗೆ ಆಗಲೇ ಅರ್ಥವಾಗಿತ್ತು. ಸಾರುವ ಕೆಲಸದಲ್ಲಿ ಸಹೋದರ ಫರ್ಗಸನ್‌ಗೆ ಸಹಾಯ ಮಾಡಬೇಕೆಂಬ ಆಸೆ ಅವರಿಗಿತ್ತು. ಅದಕ್ಕಾಗಿ ಅವರು ಕಾಲ್ಪೋರ್ಟರ್ (ಪಯನೀಯರರನ್ನು ಆಗ ಹೀಗೆ ಕರೆಯುತ್ತಿದ್ದರು) ಆಗಿ ಸೇವೆ ಮಾಡಲು ಆರಂಭಿಸಿದ್ದರು. ಬೈಬಲ್ ಸಾಹಿತ್ಯವನ್ನು ಮುದ್ರಿಸಲು ಮತ್ತು ವಿತರಿಸಲು ಒಳ್ಳೇ ಏರ್ಪಾಡುಗಳು ಆದದ್ದರಿಂದ ಹೊಸದಾಗಿ ಚಿಗುರಿದ ಲಿಸ್ಬನ್ ಸಭೆ ಹೆಮ್ಮರವಾಗಿ ಬೆಳೆಯಿತು!
ಸಹೋದರ ಫರ್ಗಸನ್ ಮತ್ತು ಅವರ ಹೆಂಡತಿ 1934ರಲ್ಲಿ ಬ್ರಸಿಲ್‌ಗೆ ವಾಪಸ್ ಹೋದರು. ಅಷ್ಟರಲ್ಲಾಗಲೇ ಸತ್ಯದ ಬೀಜವನ್ನು ಎಲ್ಲಾ ಕಡೆ ಬಿತ್ತಲಾಗಿತ್ತು. ಇಡೀ ಯೂರೋಪನ್ನು ನಡುಗಿಸಿದ ಸ್ಪ್ಯಾನಿಷ್ ಯುದ್ಧ ಮತ್ತು 2ನೇ ಮಹಾಯುದ್ಧದ ಸಮಯದಲ್ಲೂ ಪೋರ್ಚುಗಲ್‌ನಲ್ಲಿದ್ದ ನಂಬಿಗಸ್ತ ಸಹೋದರರು ತಮ್ಮ ಆಧ್ಯಾತ್ಮಿಕತೆಯನ್ನು ಉಳಿಸಿಕೊಂಡರು. ಅವರ ಆಧ್ಯಾತ್ಮಿಕತೆ ಇನ್ನೇನು ಆರಿಹೋಗಲಿರುವ ದೀಪದಂತೆ ಕಂಡರೂ 1947ರಲ್ಲಿ ಅಲ್ಲಿಗೆ ಗಿಲ್ಯಡ್ ತರಬೇತಿ ಪಡೆದು ಬಂದ ಮೊದಲ ಮಿಷನರಿಯಾದ ಸಹೋದರ ಜಾನ್ ಕುಕ್‌ರವರ ಸಹಾಯದಿಂದ ಆ ಸಹೋದರರ ಆಧ್ಯಾತ್ಮಿಕತೆ ಉಜ್ವಲವಾಗಿ ಉರಿಯಲು ಆರಂಭಿಸಿತು. ಅದರ ನಂತರ ಪ್ರಚಾರಕರ ಸಂಖ್ಯೆಯಲ್ಲಾದ ಬೆಳವಣಿಗೆಯನ್ನು ಯಾರಿಂದಲೂ ತಡೆಯಲು ಆಗಲಿಲ್ಲ. 1962ರಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗೆ ಸರ್ಕಾರ ನಿಷೇಧ ತಂದಾಗಲೂ ಈ ಬೆಳವಣಿಗೆ ಮುಂದುವರಿಯಿತು. 1974ರಲ್ಲಿ ಯೆಹೋವನ ಸಾಕ್ಷಿಗಳಿಗೆ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿದಾಗ ಆ ದೇಶದಲ್ಲಿ 13,000ಕ್ಕೂ ಹೆಚ್ಚು ಪ್ರಚಾರಕರಿದ್ದರು.
ಇಂದು 50,000ಕ್ಕೂ ಹೆಚ್ಚು ಪ್ರಚಾರಕರು ಪೋರ್ಚುಗಲ್‌ನಲ್ಲಿ ಮತ್ತು ಪೋರ್ಚುಗೀಸ್ ಭಾಷೆಯನ್ನು ಮಾತಾಡುವ ಅಝೋರ್ಸ್ ಮತ್ತು ಮಡೀರದಂಥ ಅನೇಕ ದ್ವೀಪಗಳಲ್ಲಿ ಸುವಾರ್ತೆ ಸಾರುತ್ತಿದ್ದಾರೆ. ಇವರಲ್ಲಿ, ಹಿಂದೆ 1925ರಲ್ಲಿ ಸಹೋದರ ರದರ್‌ಫರ್ಡ್‌ರವರ ಭಾಷಣ ಕೇಳಿದವರ ಮುಂದಿನ ತಲೆಮಾರಿನವರೂ ಇದ್ದಾರೆ.
ಅಂದು ಅನೇಕ ನಂಬಿಗಸ್ತ ಸಹೋದರ ಸಹೋದರಿಯರು ‘ಅನ್ಯಜನಾಂಗಗಳಿಗೋಸ್ಕರ ಕ್ರಿಸ್ತ ಯೇಸುವಿನ ಸಾರ್ವಜನಿಕ ಸೇವಕರಾಗಿ’ ಧೈರ್ಯದಿಂದ ಸುವಾರ್ತೆ ಸಾರಿದರು. ಅವರಿಗೂ ಯೆಹೋವನಿಗೂ ನಾವು ಆಭಾರಿ.—ರೋಮ. 15:15, 16.—ಪೋರ್ಚುಗಲ್‌ನಲ್ಲಿರುವ ನಮ್ಮ ಸಂಗ್ರಹಾಲಯದಿಂದ.
a 2014ರ ಕಾವಲಿನಬುರುಜು ಮೇ 15 ಪುಟ 31-32ರಲ್ಲಿರುವ “ಕೊಯ್ಲಿನ ಕೆಲಸ ತುಂಬ ಮಾಡಲಿಕ್ಕಿದೆ” ಎಂಬ ಲೇಖನ ನೋಡಿ.