ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉದಾರವಾಗಿ ಕೊಡಿ ಸಂತೋಷಪಡಿ

ಉದಾರವಾಗಿ ಕೊಡಿ ಸಂತೋಷಪಡಿ

“ಕೊಡುವುದರಲ್ಲಿ . . . ಸಂತೋಷವಿದೆ.”—ಅ. ಕಾ. 20:35.

ಗೀತೆಗಳು: 153, 74

1. ಯೆಹೋವನು ಉದಾರವಾಗಿ ಕೊಡುವ ದೇವರು ಎಂದು ಹೇಗೆ ಗೊತ್ತಾಗುತ್ತದೆ?

 ಇಡೀ ವಿಶ್ವದಲ್ಲಿ ಯೆಹೋವ ದೇವರು ಒಬ್ಬನೇ ಇದ್ದನು. ನಂತರ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ಬುದ್ಧಿಜೀವಿಗಳನ್ನು ಸೃಷ್ಟಿಮಾಡಿ ಜೀವವೆಂಬ ಉಡುಗೊರೆ ಕೊಟ್ಟನು. ಬೇರೆಯವರಿಗೆ ಒಳ್ಳೇ ವಿಷಯಗಳನ್ನು ಕೊಡುವುದೆಂದರೆ ‘ಸಂತೋಷದ ದೇವರಾದ’ ಯೆಹೋವನಿಗೆ ತುಂಬ ಇಷ್ಟ. (1 ತಿಮೊ. 1:11; ಯಾಕೋ. 1:17) ಅದೇ ರೀತಿ ನಾವು ಕೂಡ ಸಂತೋಷವಾಗಿ ಇರಬೇಕು ಎಂದು ಆತನು ಬಯಸುತ್ತಾನೆ. ಆದ್ದರಿಂದ ಬೇರೆಯವರಿಗೆ ಉದಾರವಾಗಿ ಕೊಡಿ ಎಂದು ನಮಗೂ ಹೇಳಿದ್ದಾನೆ.—ರೋಮ. 1:20.

2, 3. (ಎ) ನಾವು ಉದಾರತೆ ತೋರಿಸಿದಾಗ ನಮಗೆ ಯಾಕೆ ಸಂತೋಷವಾಗುತ್ತದೆ? (ಬಿ) ಈ ಲೇಖನದಲ್ಲಿ ನಾವು ಏನು ಚರ್ಚಿಸಲಿದ್ದೇವೆ?

2 ದೇವರು ಮನುಷ್ಯರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಮಾಡಿದ್ದಾನೆ. (ಆದಿ. 1:27) ಇದರರ್ಥ ತನ್ನ ಗುಣಗಳನ್ನು ತೋರಿಸುವ ಸಾಮರ್ಥ್ಯವನ್ನು ನಮಗೆ ಕೊಟ್ಟಿದ್ದಾನೆ. ನಾವು ನಿಜವಾಗಲೂ ಸಂತೋಷವಾಗಿ ಇರಬೇಕೆಂದರೆ ಮತ್ತು ಯೆಹೋವನಿಂದ ಆಶೀರ್ವಾದ ಸಿಗಬೇಕೆಂದರೆ ನಾವು ಕೂಡ ಆತನಂತಿರಬೇಕು. ಜನರ ಬಗ್ಗೆ ನಿಜವಾದ ಆಸಕ್ತಿ ಇರಬೇಕು ಮತ್ತು ಬೇರೆಯವರಿಗೆ ಉದಾರವಾಗಿ ಕೊಡಬೇಕು. (ಫಿಲಿ. 2:3, 4; ಯಾಕೋ. 1:5) ಯಾಕೆ? ಯಾಕೆಂದರೆ ಯೆಹೋವನು ನಮ್ಮನ್ನು ಆ ರೀತಿಯಲ್ಲೇ ಸೃಷ್ಟಿಮಾಡಿದ್ದಾನೆ. ನಾವು ಅಪರಿಪೂರ್ಣರು ಆಗಿರುವುದಾದರೂ ಯೆಹೋವನಂತೆ ಬೇರೆಯವರಿಗೆ ಉದಾರತೆ ತೋರಿಸಲು ಸಾಧ್ಯ.

3 ನಾವು ಉದಾರತೆ ತೋರಿಸುವಾಗ ಯೆಹೋವನಿಗೆ ಯಾಕೆ ಸಂತೋಷವಾಗುತ್ತದೆ? ಆತನು ನಮಗೆ ಕೊಟ್ಟಿರುವ ಕೆಲಸವನ್ನು ಮಾಡಲು ಉದಾರತೆ ಹೇಗೆ ಸಹಾಯ ಮಾಡುತ್ತದೆ? ಉದಾರವಾಗಿ ಬೇರೆಯವರಿಗೆ ಸಹಾಯ ಮಾಡಿದಾಗ ಯಾಕೆ ಸಂತೋಷವಾಗುತ್ತದೆ? ನಾವು ಯಾಕೆ ಉದಾರತೆಯನ್ನು ತೋರಿಸುತ್ತಾ ಇರಬೇಕು? ಇದರ ಬಗ್ಗೆ ಬೈಬಲಿನಿಂದ ಕೆಲವು ವಿಷಯಗಳನ್ನು ಚರ್ಚಿಸೋಣ.

ಯೆಹೋವನು ಸಂತೋಷಪಡುತ್ತಾನೆ

4, 5. (ಎ) ಯೆಹೋವ ಮತ್ತು ಯೇಸು ಹೇಗೆ ಉದಾರತೆ ತೋರಿಸಿದ್ದಾರೆ? (ಬಿ) ನಾವು ಅವರನ್ನು ಯಾಕೆ ಅನುಕರಿಸಬೇಕು?

4 ನಾವು ಉದಾರತೆ ತೋರಿಸುವುದು ಯೆಹೋವನಿಗೆ ಇಷ್ಟ. ಆದ್ದರಿಂದ ನಾವು ಬೇರೆಯವರಿಗೆ ಉದಾರತೆ ತೋರಿಸುವಾಗ ಆತನು ತುಂಬ ಸಂತೋಷಪಡುತ್ತಾನೆ. (ಎಫೆ. 5:1) ನಾವು ಸಂತೋಷವಾಗಿ ಇರಬೇಕೆಂದೂ ಆತನು ಇಷ್ಟಪಡುತ್ತಾನೆ. ಆತನು ನಮ್ಮನ್ನು ಅದ್ಭುತವಾಗಿ ಸೃಷ್ಟಿಮಾಡಿರುವುದರಿಂದ ಮತ್ತು ನಮ್ಮ ಸಂತೋಷಕ್ಕಾಗಿ ಈ ಸುಂದರವಾದ ಭೂಮಿಯನ್ನೂ ಅದರಲ್ಲಿರುವ ಎಲ್ಲವನ್ನೂ ಸೃಷ್ಟಿಮಾಡಿರುವುದರಿಂದ ಇದು ಸ್ಪಷ್ಟವಾಗುತ್ತದೆ. (ಕೀರ್ತ. 104:24; 139:13-16) ಹಾಗಾಗಿ ನಾವು ಬೇರೆಯವರನ್ನು ಸಂತೋಷಪಡಿಸಿದಾಗ ಯೆಹೋವನನ್ನು ಗೌರವಿಸಿದಂತೆ ಇರುತ್ತದೆ.

5 ಉದಾರತೆ ತೋರಿಸುವುದರಲ್ಲಿ ಯೇಸು ಕೂಡ ಮಾದರಿ ಇಟ್ಟಿದ್ದಾನೆ. ಮನುಷ್ಯರು ಹೇಗೆ ಉದಾರತೆ ತೋರಿಸಬಹುದು ಎನ್ನುವುದಕ್ಕೆ ಯೇಸುವಿನ ಉದಾಹರಣೆಗಿಂತ ಉತ್ತಮವಾದ ಉದಾಹರಣೆ ಇನ್ನೊಂದಿಲ್ಲ. ಆತನು ಹೇಳಿದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ, ಬದಲಾಗಿ ಸೇವೆಮಾಡುವುದಕ್ಕೂ ಅನೇಕರಿಗೆ ಪ್ರತಿಯಾಗಿ ತನ್ನ ಪ್ರಾಣವನ್ನು ವಿಮೋಚನಾ ಮೌಲ್ಯವಾಗಿ ಕೊಡುವುದಕ್ಕೂ ಬಂದನು.” (ಮತ್ತಾ. 20:28) ಅಪೊಸ್ತಲ ಪೌಲನು “ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ” ಎಂದು ಹೇಳಿ ಕ್ರೈಸ್ತರನ್ನು ಪ್ರೋತ್ಸಾಹಿಸಿದ್ದಾನೆ. ಯಾಕೆಂದರೆ ಯೇಸು “ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು” ಧರಿಸಿದನು. (ಫಿಲಿ. 2:5, 7) ಆದ್ದರಿಂದ ನಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ನಾನು ಯೇಸುವಿನ ಮಾದರಿಯನ್ನು ಇನ್ನೂ ಚೆನ್ನಾಗಿ ಹೇಗೆ ಅನುಕರಿಸಬಹುದು?’—1 ಪೇತ್ರ 2:21 ಓದಿ.

6. ಸಮಾರ್ಯದವನ ಕಥೆ ಹೇಳಿ ಯೇಸು ಏನು ಕಲಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)

6 ಯೆಹೋವ ಮತ್ತು ಯೇಸು ಇಟ್ಟಿರುವ ಪರಿಪೂರ್ಣ ಮಾದರಿಯನ್ನು ನಾವು ಅನುಕರಿಸುವಾಗ ಯೆಹೋವನಿಗೆ ತುಂಬ ಸಂತೋಷವಾಗುತ್ತದೆ. ಜನರ ಬಗ್ಗೆ ಆಸಕ್ತಿವಹಿಸಿ ಅವರಿಗೆ ಯಾವ ಸಹಾಯ ಬೇಕೆಂದು ನೋಡಿ ಅದನ್ನು ಮಾಡಿದಾಗ ನಾವು ಯೆಹೋವನಂತೆ ಉದಾರತೆ ತೋರಿಸುತ್ತೇವೆ. ಇದು ಎಷ್ಟು ಮುಖ್ಯ ಎನ್ನುವುದನ್ನು ಯೇಸು ನೆರೆಯವನಾದ ಸಮಾರ್ಯದವನ ಕಥೆಯ ಮೂಲಕ ಹೇಳಿದನು. (ಲೂಕ 10:29-37 ಓದಿ.) ಜನರು ಯಾವುದೇ ಹಿನ್ನೆಲೆಯವರಾಗಿ ಇರಲಿ ಅವರಿಗೆ ಸಹಾಯ ಮಾಡಬೇಕೆಂದು ತನ್ನ ಹಿಂಬಾಲಕರಿಗೆ ಯೇಸು ಕಲಿಸಿದನು. ಅವನು ಆ ಕಥೆ ಹೇಳಲು ಕಾರಣವೇನು ಎಂದು ನಿಮಗೆ ನೆನಪಿದೆಯಾ? “ನಿಜವಾಗಿಯೂ ನನ್ನ ನೆರೆಯವನು ಯಾರು?” ಎಂದು ಯೆಹೂದ್ಯನೊಬ್ಬನು ಕೇಳಿದಾಗ ಯೇಸು ಆ ಕಥೆಯನ್ನು ಹೇಳಿದನು. ಯೇಸು ಕೊಟ್ಟ ಉತ್ತರದಿಂದ ನಮಗೆ ಗೊತ್ತಾಗುವುದೇನೆಂದರೆ, ನಾವು ಯೆಹೋವನನ್ನು ಸಂತೋಷಪಡಿಸಬೇಕಾದರೆ ಆ ಸಮಾರ್ಯದವನ ತರ ಉದಾರತೆ ತೋರಿಸಬೇಕು.

7. ಯೆಹೋವನು ಹೇಳುವುದೆಲ್ಲ ನಮ್ಮ ಒಳ್ಳೇದಕ್ಕೇ ಎನ್ನುವುದನ್ನು ನಂಬುತ್ತೇವೆ ಎಂದು ಹೇಗೆ ತೋರಿಸಿಕೊಡಬಹುದು? ವಿವರಿಸಿ.

7 ಏದೆನ್‌ ತೋಟದಲ್ಲಿ ನಡೆದ ಘಟನೆಯನ್ನು ನೋಡಿದರೆ ನಮಗೆ ಉದಾರತೆ ತೋರಿಸಲು ಮತ್ತೊಂದು ಕಾರಣ ಸಿಗುತ್ತದೆ. ಯೆಹೋವನ ಮಾತನ್ನು ಕೇಳದಿದ್ದರೆ ಮತ್ತು ತಮ್ಮ ಸ್ವಾರ್ಥ ನೋಡಿಕೊಂಡರೆ ತುಂಬ ಸಂತೋಷವಾಗಿರಬಹುದು ಎಂದು ಸೈತಾನ ಆದಾಮಹವ್ವರಿಗೆ ಹೇಳಿದನು. ಆಗ ಹವ್ವಳಿಗೆ ದೇವರ ತರ ಆಗಬೇಕೆಂಬ ಸ್ವಾರ್ಥ ಬಯಕೆ ಬಂತು. ಆದಾಮನು ದೇವರನ್ನಲ್ಲ ತನ್ನ ಹೆಂಡತಿಯನ್ನು ಮೆಚ್ಚಿಸಲು ಹೋಗಿ ಸ್ವಾರ್ಥಿಯಾದನು. (ಆದಿ. 3:4-6) ಇದರ ಪರಿಣಾಮ ತುಂಬ ಕೆಟ್ಟದಾಗಿತ್ತು. ಇದರಿಂದ ಸ್ಪಷ್ಟವಾಗುವುದೇನೆಂದರೆ, ಒಬ್ಬ ವ್ಯಕ್ತಿ ಸ್ವಾರ್ಥಿಯಾದರೆ ಸಂತೋಷವಾಗಿರಲ್ಲ. ಆದರೆ ನಾವು ನಿಸ್ವಾರ್ಥಿಗಳಾಗಿ ಬೇರೆಯವರಿಗೆ ಉದಾರತೆ ತೋರಿಸಿದರೆ ಯೆಹೋವನು ಹೇಳುವುದೆಲ್ಲ ನಮ್ಮ ಒಳ್ಳೇದಕ್ಕೇ ಎನ್ನುವುದನ್ನು ನಂಬುತ್ತೇವೆ ಎಂದು ತೋರಿಸಿಕೊಡುತ್ತೇವೆ.

ದೇವರು ಕೊಟ್ಟಿರುವ ಕೆಲಸವನ್ನು ಮಾಡಿ

8. ಆದಾಮಹವ್ವ ಏನು ಯೋಚನೆ ಮಾಡಬೇಕಿತ್ತು?

8 ಏದೆನಿನಲ್ಲಿ ಆದಾಮ ಮತ್ತು ಹವ್ವ ಇಬ್ಬರೇ ಇದ್ದರೂ ಬೇರೆಯವರಿಗೆ ಒಳ್ಳೇದನ್ನು ಮಾಡುವುದರ ಬಗ್ಗೆ ಯೋಚನೆ ಮಾಡಬೇಕಿತ್ತು. ಹೇಗೆ? ಯೆಹೋವನು ಅವರಿಗೆ ಕೆಲಸ ಕೊಟ್ಟಿದ್ದನು. ಅವರು ಇಡೀ ಭೂಮಿಯನ್ನು ಮಕ್ಕಳಿಂದ ತುಂಬಿಸಬೇಕಿತ್ತು ಮತ್ತು ಅದನ್ನು ಸುಂದರ ಉದ್ಯಾನವನ ಮಾಡಬೇಕಿತ್ತು. (ಆದಿ. 1:28) ಮಾನವರೆಲ್ಲರೂ ಸಂತೋಷವಾಗಿರಬೇಕು ಎಂಬ ಆಸೆ ಯೆಹೋವನಿಗಿತ್ತು. ಇದೇ ಆಸೆ ಆದಾಮಹವ್ವರಿಗೂ ಇರಬೇಕಿತ್ತು. ಅವರೆಲ್ಲರೂ ಸೇರಿ ಈ ಭೂಮಿಯನ್ನು ಪರದೈಸ ಮಾಡುವುದರಲ್ಲಿ ಕೈಜೋಡಿಸಬೇಕು ಎನ್ನುವುದು ಯೆಹೋವನ ಇಷ್ಟವಾಗಿತ್ತು. ಇದು ಅಂತಿಂಥ ಕೆಲಸವಲ್ಲ, ಬೃಹತ್‌ ಪ್ರಮಾಣದ ಕೆಲಸವಾಗಿತ್ತು!

9. ಭೂಮಿಯನ್ನು ಪರದೈಸ ಮಾಡುವುದರಲ್ಲಿ ಮನುಷ್ಯರಿಗೆ ಯಾಕೆ ತುಂಬ ಸಂತೋಷ ಸಿಗುತ್ತಿತ್ತು?

9 ಭೂಮಿಯನ್ನು ಪರದೈಸ ಮಾಡಲು ಮತ್ತು ದೇವರ ಚಿತ್ತವನ್ನು ಪೂರೈಸಲು ಪರಿಪೂರ್ಣ ಮನುಷ್ಯರು ಯೆಹೋವನು ಹೇಳಿದ ಪ್ರತಿಯೊಂದು ವಿಷಯವನ್ನು ಮಾಡುತ್ತಾ ಇರಬೇಕಿತ್ತು. ಹೀಗೆ ಮಾಡಿದರೆ ಅವರು ಆತನ ವಿಶ್ರಾಂತಿಯಲ್ಲಿ ಸೇರಲು ಸಾಧ್ಯವಿತ್ತು. (ಇಬ್ರಿ. 4:11) ಈ ಕೆಲಸ ಮಾಡುತ್ತಾ ಮನುಷ್ಯರು ಎಷ್ಟು ಸಂತೋಷವಾಗಿ ಇರಬಹುದಿತ್ತು, ಅವರಿಗೆ ಎಷ್ಟು ಸಂತೃಪ್ತಿ ಸಿಗುತ್ತಿತ್ತು ಎಂದು ಯೋಚನೆ ಮಾಡಿ. ಅವರು ನಿಸ್ವಾರ್ಥಿಗಳಾಗಿ ಬೇರೆಯವರಿಗೆ ಒಳ್ಳೇದನ್ನು ಮಾಡಿದ್ದರೆ ಯೆಹೋವನು ಅವರನ್ನು ಇನ್ನೂ ಹೆಚ್ಚು ಆಶೀರ್ವದಿಸುತ್ತಿದ್ದನು.

10, 11. ಸಾರಲು ಮತ್ತು ಶಿಷ್ಯರನ್ನಾಗಿ ಮಾಡಲು ನಮಗೆ ಯಾವುದು ಸಹಾಯ ಮಾಡುತ್ತದೆ?

10 ಇಂದು ಯೆಹೋವನು ನಮಗೆ ವಿಶೇಷವಾದ ಒಂದು ಕೆಲಸವನ್ನು ಕೊಟ್ಟಿದ್ದಾನೆ. ಅದು ಸಾರುವ ಮತ್ತು ಶಿಷ್ಯರನ್ನು ಮಾಡುವ ಕೆಲಸ. ಈ ಕೆಲಸ ಮಾಡಲು ನಮಗೆ ನಿಜವಾಗಲೂ ಜನರ ಕಡೆಗೆ ಆಸಕ್ತಿ ಇರಬೇಕು. ಸರಿಯಾದ ಉದ್ದೇಶ ಇದ್ದರೆ ಅಂದರೆ ಯೆಹೋವನ ಮೇಲೆ ಮತ್ತು ಜನರ ಮೇಲೆ ಪ್ರೀತಿ ಇದ್ದರೆ ಈ ಕೆಲಸವನ್ನು ನಾವು ಕೊನೆವರೆಗೂ ಮಾಡುತ್ತಾ ಇರುತ್ತೇವೆ.

11 ಪೌಲನು ಮತ್ತು ಆಗಿನ ಸಮಯದಲ್ಲಿದ್ದ ಕ್ರೈಸ್ತರು ಜನರಿಗೆ ಸಾರುತ್ತಾ, ಸತ್ಯವನ್ನು ಕಲಿಸುತ್ತಾ ಇದ್ದದರಿಂದ ತಾವೆಲ್ಲರೂ “ದೇವರ ಜೊತೆಕೆಲಸಗಾರರಾಗಿದ್ದೇವೆ” ಎಂದು ಪೌಲನು ಹೇಳಿದನು. (1 ಕೊರಿಂ. 3:6, 9) ಇಂದು ನಾವು ಕೂಡ ಸಾರುವ ಕೆಲಸಕ್ಕಾಗಿ ನಮ್ಮ ಸಮಯ, ಶಕ್ತಿ, ಸೊತ್ತುಗಳನ್ನು ಉದಾರವಾಗಿ ಕೊಟ್ಟರೆ ‘ದೇವರ ಜೊತೆಕೆಲಸಗಾರರಾಗಲು’ ಸಾಧ್ಯ. ಇದಕ್ಕಿಂತ ದೊಡ್ಡ ಗೌರವ ಇದೆಯಾ?

ಸತ್ಯ ಕಲಿಯಲು ಯಾರಿಗಾದರೂ ಸಹಾಯ ಮಾಡಿದರೆ ತುಂಬ ಸಂತೋಷ ಸಿಗುತ್ತದೆ (ಪ್ಯಾರ 12 ನೋಡಿ)

12, 13. ಶಿಷ್ಯರನ್ನು ಮಾಡುವ ಕೆಲಸದಿಂದ ಯಾವ ಪ್ರತಿಫಲ ಸಿಗುತ್ತವೆ?

12 ನಮ್ಮ ಸಮಯ, ಶಕ್ತಿಯನ್ನು ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಉದಾರವಾಗಿ ಬಳಸಿದರೆ ನಮ್ಮ ಜೀವನದಲ್ಲಿ ಸಂತೋಷ ಉಕ್ಕಿ ಹರಿಯುತ್ತದೆ. ಇದನ್ನೇ ಬೈಬಲ್‌ ಅಧ್ಯಯನ ನಡೆಸಿದ ಅನೇಕ ಸಹೋದರ ಸಹೋದರಿಯರು ಹೇಳುತ್ತಾರೆ. ನಮ್ಮ ಬೈಬಲ್‌ ವಿದ್ಯಾರ್ಥಿಗಳು ಸತ್ಯವನ್ನು ಅರ್ಥಮಾಡಿಕೊಂಡಾಗ, ನಂಬಿಕೆ ಹೆಚ್ಚಿಸಿಕೊಂಡಾಗ, ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಂಡಾಗ ಮತ್ತು ಕಲಿತ ವಿಷಯಗಳನ್ನು ಬೇರೆಯವರಿಗೆ ಹೇಳಿದಾಗ ನಮಗೆ ತುಂಬ ಸಂತೋಷವಾಗುತ್ತದೆ. ಯೇಸು ಕೂಡ 70 ಶಿಷ್ಯರನ್ನು ಸಾರಲು ಕಳುಹಿಸಿ ಅವರು ಒಳ್ಳೊಳ್ಳೇ ಅನುಭವಗಳನ್ನು ಪಡೆದು “ಆನಂದದಿಂದ ಹಿಂದಿರುಗಿ” ಬಂದಾಗ ಸಂತೋಷಪಟ್ಟನು.—ಲೂಕ 10:17-21.

13 ಬೈಬಲ್‌ ವಿದ್ಯಾರ್ಥಿಗಳು ಜೀವನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಬೈಬಲ್‌ ಸಂದೇಶ ಸಹಾಯ ಮಾಡುವುದನ್ನು ನೋಡಿದಾಗ ಲೋಕವ್ಯಾಪಕವಾಗಿರುವ ನಮ್ಮ ಸಹೋದರ ಸಹೋದರಿಯರು ಸಂತೋಷಪಡುತ್ತಾರೆ. ಉದಾಹರಣೆಗೆ, ಆ್ಯನ ಎಂಬ ಅವಿವಾಹಿತ ಸಹೋದರಿಗೆ ಹೆಚ್ಚು ಸೇವೆ ಮಾಡಬೇಕು ಎಂಬ ಆಸೆ ಇತ್ತು. a ಹಾಗಾಗಿ ಅವಳು ಯೂರೋಪಿನ ಪೂರ್ವಭಾಗದಲ್ಲಿ ಹೆಚ್ಚು ಪ್ರಚಾರಕರ ಅಗತ್ಯವಿದ್ದ ಸ್ಥಳಕ್ಕೆ ಸೇವೆ ಮಾಡಲು ಹೋದಳು. ಅವಳು ಹೇಳುವುದು: “ಬೈಬಲ್‌ ಅಧ್ಯಯನ ನಡೆಸುವ ಅವಕಾಶಗಳು ಇಲ್ಲಿ ಬೇಕಾದಷ್ಟು ಸಿಗುತ್ತವೆ. ಹೀಗಿದ್ದರೆ ನನಗೆ ತುಂಬ ಇಷ್ಟ. ಇಲ್ಲಿ ಸೇವೆ ಮಾಡುತ್ತಾ ನಾನು ಸಂತೋಷವಾಗಿದ್ದೀನಿ. ಸೇವೆ ಮುಗಿಸಿ ಮನೆಗೆ ಹೋದರೆ ನನ್ನ ಬಗ್ಗೆ ಯೋಚನೆ ಮಾಡೋಕೆ ಸಮಯನೇ ಇರಲ್ಲ. ನನ್ನ ಬೈಬಲ್‌ ವಿದ್ಯಾರ್ಥಿಗಳಿಗೆ ಇರುವ ಕಷ್ಟ, ಚಿಂತೆಗಳ ಬಗ್ಗೆನೇ ಯೋಚನೆ ಮಾಡುತ್ತಾ ಇರ್ತೀನಿ. ಅವರಿಗೆ ಏನು ಹೇಳಬಹುದು, ಹೇಗೆ ಸಹಾಯ ಮಾಡಬಹುದು ಅಂತ ಯೋಚಿಸುತ್ತಿರುತ್ತೀನಿ. ‘ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ’ ಅನ್ನೋದು ಎಷ್ಟು ನಿಜ ಅಂತ ನನಗೀಗ ಅರ್ಥವಾಗಿದೆ.”—ಅ. ಕಾ. 20:35.

ನಮ್ಮ ಸೇವಾಕ್ಷೇತ್ರದಲ್ಲಿರುವ ಎಲ್ಲ ಮನೆಗಳಿಗೆ ಭೇಟಿಕೊಡುವಾಗ ಸುವಾರ್ತೆ ಕೇಳಿಸಿಕೊಳ್ಳಲು ಜನರಿಗೆ ಒಂದು ಅವಕಾಶ ಕೊಡುತ್ತೇವೆ (ಪ್ಯಾರ 14 ನೋಡಿ)

14. ಜನರು ಸಂದೇಶವನ್ನು ಕೇಳದಿದ್ದರೂ ನಾವು ಹೇಗೆ ಸಾರುವ ಕೆಲಸದಲ್ಲಿ ಆನಂದಿಸಬಹುದು?

14 ನಾವು ಸಾರುವಾಗ ಜನರು ಕೇಳದಿದ್ದರೂ ನಾವು ಸಂತೋಷವಾಗಿರಬಹುದು. ಯಾಕೆಂದರೆ ನಾವು ಸಾರುವಾಗ ಅವರಿಗೆ ಸುವಾರ್ತೆ ಕೇಳಿಸಿಕೊಳ್ಳಲು ಒಂದು ಅವಕಾಶ ಕೊಡುತ್ತೇವೆ. ಯೆಹೋವನು ಯೆಹೆಜ್ಕೇಲನಿಗೆ ಹೀಗಂದನು: “ಅವರು ಕೇಳಿದರೂ ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ನುಡಿಯಲೇಬೇಕು.” ಇದನ್ನೇ ಮಾಡುವಂತೆ ನಿಮಗೂ ಹೇಳುತ್ತಿದ್ದಾನೆ. (ಯೆಹೆ. 2:7; ಯೆಶಾ. 43:10) ಆದ್ದರಿಂದ ಜನರು ಕೇಳಲಿ ಕೇಳದೇ ಇರಲಿ ನಾವು ಮಾಡುವ ಪ್ರಯತ್ನಕ್ಕೆ ದೇವರ ದೃಷ್ಟಿಯಲ್ಲಿ ಬೆಲೆ ಇದೆ. (ಇಬ್ರಿಯ 6:10 ಓದಿ.) ಒಬ್ಬ ಸಹೋದರ ತನ್ನ ಸೇವೆಯ ಬಗ್ಗೆ ಹೀಗೆ ಹೇಳಿದರು: “ನಾವು ನೆಟ್ಟೆವು, ನೀರು ಹಾಕಿದೆವು ಮತ್ತು ಯೆಹೋವನು ಅದನ್ನು ಬೆಳೆಸುತ್ತಾನೆ ಅನ್ನೋ ನಂಬಿಕೆಯಿಟ್ಟು ಪ್ರಾರ್ಥನೆ ಮಾಡಿದೆವು.”—1 ಕೊರಿಂ. 3:6.

ನಾವು ಹೇಗೆ ಸಂತೋಷವಾಗಿ ಇರಬಹುದು?

15. ಜನರು ಕೃತಜ್ಞತೆ ತೋರಿಸಿದರೆ ಮಾತ್ರ ನಾವು ಉದಾರತೆ ತೋರಿಸಬೇಕಾ? ವಿವರಿಸಿ.

15 ನಾವು ಉದಾರವಾಗಿ ಕೊಡಬೇಕು ಎಂದು ಯೇಸು ಬಯಸುತ್ತಾನೆ. ಯಾಕೆಂದರೆ ಅದು ನಮಗೆ ಸಂತೋಷ ಕೊಡುತ್ತದೆ. ನಾವು ಉದಾರತೆ ತೋರಿಸಿದರೆ ಜನರೂ ನಮಗೆ ಉದಾರತೆ ತೋರಿಸುತ್ತಾರೆ. ಆದ್ದರಿಂದಲೇ ಆತನು ನಮ್ಮನ್ನು ಹೀಗೆ ಪ್ರೋತ್ಸಾಹಿಸುತ್ತಾನೆ: “ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು. ಅವರು ಒಳ್ಳೆಯ ಅಳತೆಯಲ್ಲಿ ಅಳೆದು, ಒತ್ತಿ, ಅಲ್ಲಾಡಿಸಿ, ತುಂಬಿತುಳುಕುತ್ತಿರುವಾಗ ಅದನ್ನು ನಿಮ್ಮ ಮಡಿಲಿಗೆ ಹಾಕುವರು. ಏಕೆಂದರೆ ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು.” (ಲೂಕ 6:38) ನೀವು ಯಾರಿಗೆಲ್ಲ ಉದಾರತೆ ತೋರಿಸುತ್ತೀರೋ ಅವರಲ್ಲಿ ಎಲ್ಲರೂ ನಿಮಗೆ ಕೃತಜ್ಞತೆ ತೋರಿಸುವುದಿಲ್ಲ. ಜನರು ಕೃತಜ್ಞತೆ ತೋರಿಸಲ್ಲ ಅಂತ ನೀವು ಬೇರೆಯವರಿಗೆ ಉದಾರವಾಗಿ ಕೊಡುವುದನ್ನು ಬಿಟ್ಟುಬಿಡಬೇಡಿ. ನೀವು ಉದಾರತೆಯಿಂದ ಮಾಡುವ ಒಂದು ಕೆಲಸದಿಂದ ಎಷ್ಟು ಒಳ್ಳೇದಾಗುತ್ತದೆ ಎಂದು ನಿಮಗೆ ಗೊತ್ತಿಲ್ಲ.

16. ನಾವು ಯಾರಿಗೆ ಉದಾರವಾಗಿ ಕೊಡಬೇಕು? ಯಾಕೆ?

16 ನಿಜವಾಗಿ ಉದಾರತೆ ತೋರಿಸುವವರು ಲಾಭ ಲೆಕ್ಕಿಸದೆ ಬೇರೆಯವರಿಗೆ ಸಹಾಯ ಮಾಡುತ್ತಾರೆ. ಯೇಸು ಹೇಳಿದ್ದು: “ನೀನು ಔತಣವನ್ನು ಏರ್ಪಡಿಸುವಾಗ ಬಡವರನ್ನೂ ಊನವಾದವರನ್ನೂ ಕುಂಟರನ್ನೂ ಕುರುಡರನ್ನೂ ಆಮಂತ್ರಿಸು; ನಿನಗೆ ಪ್ರತ್ಯುಪಕಾರ ಮಾಡಲು ಅವರ ಬಳಿ ಏನೂ ಇಲ್ಲದ ಕಾರಣ ನೀನು ಸಂತೋಷಿತನಾಗುವಿ.” (ಲೂಕ 14:13, 14) “ದಯಾದೃಷ್ಟಿಯವನು ಆಶೀರ್ವಾದವನ್ನು ಪಡೆಯುವನು” ಮತ್ತು “ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 22:9; ಕೀರ್ತ. 41:1) ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ನಮಗೆ ಸಂತೋಷ ಸಿಗುವುದರಿಂದ ನಾವು ಉದಾರತೆ ತೋರಿಸಬೇಕು.

17. ಇನ್ನೂ ಯಾವ ವಿಧಗಳಲ್ಲಿ ಬೇರೆಯವರಿಗೆ ಸಹಾಯ ಮಾಡುವ ಮೂಲಕ ನಾವು ಸಂತೋಷವಾಗಿರಬಹುದು?

17 “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಹೇಳಿದ ಮಾತನ್ನೇ ಪೌಲನು ಉಲ್ಲೇಖಿಸಿದ್ದಾನೆ. ಅವನಿದನ್ನು ಆರ್ಥಿಕವಾಗಿ ಸಹಾಯ ಮಾಡುವುದಲ್ಲದೆ ಬೇರೆ ವಿಷಯಗಳಿಗೂ ಅನ್ವಯಿಸಿದ್ದಾನೆ. ನಾವು ಜನರಿಗೆ ಪ್ರೋತ್ಸಾಹ ಕೊಡಬಹುದು, ಬೈಬಲಿನಿಂದ ಸಲಹೆ ಕೊಡಬಹುದು ಮತ್ತು ಪ್ರಾಯೋಗಿಕ ಸಹಾಯನೂ ಮಾಡಬಹುದು. (ಅ. ಕಾ. 20:31-35) ಜನರಿಗೆ ಸಹಾಯ ಮಾಡುವುದರಲ್ಲಿ ನಮ್ಮ ಸಮಯ, ಶಕ್ತಿ, ಹಿತಾಸಕ್ತಿ, ಪ್ರೀತಿಯನ್ನು ಉದಾರವಾಗಿ ಉಪಯೋಗಿಸುವುದು ತುಂಬ ಮುಖ್ಯ ಎಂದು ಪೌಲನು ತನ್ನ ಮಾತು ಮತ್ತು ನಡತೆಯಿಂದ ತೋರಿಸಿದ್ದಾನೆ.

18. ಉದಾರವಾಗಿ ಕೊಡುವುದರ ಬಗ್ಗೆ ಅನೇಕ ಸಂಶೋಧಕರು ಏನು ಹೇಳುತ್ತಾರೆ?

18 ಮನುಷ್ಯನ ಸ್ವಭಾವಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರು ಸಹ ಕೊಡುವುದರಿಂದ ಸಂತೋಷವಾಗಿ ಇರಬಹುದು ಎನ್ನುವುದನ್ನು ಗಮನಿಸಿದ್ದಾರೆ. ಒಂದು ಲೇಖನಕ್ಕನುಸಾರ, ಬೇರೆಯವರಿಗೆ ಒಳ್ಳೇದನ್ನು ಮಾಡಿದ ಮೇಲೆ ತಮಗೆ ತುಂಬ ಸಂತೋಷ ಸಿಕ್ಕಿದೆ ಎಂದು ಜನರು ಹೇಳಿದ್ದಾರೆ. ಸಂಶೋಧಕರು ಹೇಳುವುದೇನೆಂದರೆ, ನಾವು ಬೇರೆಯವರಿಗೆ ಸಹಾಯ ಮಾಡಿದರೆ ನಮ್ಮ ಜೀವನಕ್ಕೆ ಅರ್ಥ ಇದೆ, ಉದ್ದೇಶ ಇದೆ ಎಂದು ಅನಿಸುತ್ತದೆ. ಆದ್ದರಿಂದ ಆರೋಗ್ಯ ಚೆನ್ನಾಗಿರಲು ಮತ್ತು ಸಂತೋಷ ಹೆಚ್ಚಲು ಸ್ವಯಂಸೇವೆ ಮಾಡಿ ಎಂದು ಕೆಲವು ಪರಿಣತರು ಸಲಹೆ ಕೊಡುತ್ತಾರೆ. ಇದೆಲ್ಲ ಕೇಳಿದಾಗ ನಮಗೆ ಹೊಸ ವಿಷಯ ಎಂದು ಅನಿಸಲ್ಲ. ಯಾಕೆಂದರೆ ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವನು ಬೇರೆಯವರಿಗೆ ಸಹಾಯ ಮಾಡಿದರೆ ಸಂತೋಷ ಸಿಗುತ್ತದೆ ಎಂದು ಸಾವಿರಾರು ವರ್ಷಗಳ ಹಿಂದೆನೇ ಹೇಳಿದ್ದಾನೆ.—2 ತಿಮೊ. 3:16, 17.

ಉದಾರವಾಗಿ ಕೊಡುತ್ತಾ ಇರಿ

19, 20. ನೀವು ಯಾಕೆ ಉದಾರತೆ ತೋರಿಸಲು ಇಷ್ಟಪಡುತ್ತೀರಿ?

19 ನಮ್ಮ ಸುತ್ತಮುತ್ತ ತಮ್ಮ ಬಗ್ಗೆ ಮಾತ್ರ ಯೋಚಿಸುವ ಜನರೇ ಇರುವಾಗ ಉದಾರತೆ ತೋರಿಸಲು ನಮಗೆ ಕಷ್ಟವಾಗಬಹುದು. ಆದರೆ ನಾವು ಯೆಹೋವನನ್ನು ನಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು, ಬಲದಿಂದ ಪ್ರೀತಿಸಬೇಕು ಮತ್ತು ನೆರೆಯವರನ್ನು ನಮ್ಮಂತೆಯೇ ಪ್ರೀತಿಸಬೇಕು ಎಂಬ ಆಜ್ಞೆಗಳೇ ಎರಡು ದೊಡ್ಡ ಆಜ್ಞೆಗಳು ಎಂದು ಯೇಸು ಹೇಳಿದ್ದಾನೆ. (ಮಾರ್ಕ 12:28-31) ಯೆಹೋವನನ್ನು ಪ್ರೀತಿಸುವ ಜನರು ಆತನನ್ನು ಅನುಕರಿಸುತ್ತಾರೆ ಎಂದು ಈ ಲೇಖನದಲ್ಲಿ ಕಲಿತೆವು. ಯೆಹೋವ ಮತ್ತು ಯೇಸು ಇಬ್ಬರೂ ಉದಾರತೆ ತೋರಿಸುತ್ತಾರೆ. ಅವರ ತರ ಇದ್ದರೆ ನಾವು ನಿಜವಾಗಲೂ ಸಂತೋಷವಾಗಿರುತ್ತೇವೆ ಎಂದು ಅವರಿಗೆ ಗೊತ್ತಿರುವುದರಿಂದ ನಾವು ಉದಾರತೆ ತೋರಿಸಬೇಕೆಂದು ಪ್ರೋತ್ಸಾಹಿಸುತ್ತಾರೆ. ದೇವರ ಕೆಲಸಗಳಲ್ಲಿ ಮತ್ತು ಜನರ ವಿಷಯದಲ್ಲಿ ನಾವು ಉದಾರತೆ ತೋರಿಸುವಾಗ ಯೆಹೋವನನ್ನು ಗೌರವಿಸುತ್ತೇವೆ. ಇದರಿಂದ ನಮಗೂ ಬೇರೆಯವರಿಗೂ ಪ್ರಯೋಜನ ಸಿಗುತ್ತದೆ.

20 ನೀವು ಬೇರೆಯವರಿಗೆ ಅದರಲ್ಲೂ ಸಹೋದರ ಸಹೋದರಿಯರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದೀರಿ. ಅದರಲ್ಲಿ ಸಂಶಯವಿಲ್ಲ. (ಗಲಾ. 6:10) ಇದನ್ನು ಮುಂದುವರಿಸುತ್ತಾ ಇದ್ದರೆ ಬೇರೆಯವರು ಕೃತಜ್ಞತೆ ತೋರಿಸುತ್ತಾರೆ ಮತ್ತು ನಿಮ್ಮನ್ನು ಪ್ರೀತಿಸುತ್ತಾರೆ. ನೀವೂ ಸಂತೋಷವಾಗಿ ಇರುತ್ತೀರಿ. ಬೈಬಲ್‌ ಹೇಳುವುದು: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.” (ಜ್ಞಾನೋ. 11:25) ನಮ್ಮ ಜೀವನ ಮತ್ತು ಸೇವೆಯಲ್ಲಿ ನಿಸ್ವಾರ್ಥವಾಗಿ ಉದಾರತೆ ತೋರಿಸಲು ತುಂಬ ಅವಕಾಶಗಳು ಸಿಗುತ್ತವೆ. ಅವುಗಳಲ್ಲಿ ಕೆಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ.

a ಹೆಸರನ್ನು ಬದಲಿಸಲಾಗಿದೆ.