ವಾಚಕರಿಂದ ಪ್ರಶ್ನೆಗಳು
ಕೈತೊಳೆದುಕೊಳ್ಳುವ ವಿಷಯವನ್ನು ಯೇಸುವಿನ ವಿರೋಧಿಗಳು ವಾದಕ್ಕೆಳೆದದ್ದು ಏಕೆ?
ಯೇಸುವಿನ ವಿರೋಧಿಗಳು ಆತನಲ್ಲಿ ಮತ್ತು ಆತನ ಶಿಷ್ಯರಲ್ಲಿ ತಪ್ಪು ಕಂಡುಹಿಡಿದ ಅನೇಕ ವಿಷಯಗಳಲ್ಲಿ ಕೈತೊಳೆಯುವ ವಿಷಯ ಒಂದಾಗಿತ್ತು. ಮೋಶೆಯ ಧರ್ಮಶಾಸ್ತ್ರವು ವಿಧಿಬದ್ಧವಾದ ಶುದ್ಧಾಚಾರದ ಕುರಿತ ಹಲವಾರು ಆಜ್ಞೆಗಳನ್ನು ಕೊಟ್ಟಿತ್ತು. ಉದಾಹರಣೆಗಾಗಿ ಶಾರೀರಿಕ ಸ್ರಾವಗಳು, ಕುಷ್ಠರೋಗ, ಮನುಷ್ಯ ಮತ್ತು ಪ್ರಾಣಿಯ ಹೆಣವನ್ನು ನಿರ್ವಹಿಸುವ ವಿಧ ಇತ್ಯಾದಿಗಳ ಕುರಿತು ಆಜ್ಞೆಗಳಿದ್ದವು. ಅಶುದ್ಧನಾದ ಒಬ್ಬ ವ್ಯಕ್ತಿ ಮತ್ತೆ ಶುದ್ಧನಾಗಲು ಏನು ಮಾಡಬೇಕು ಎಂಬ ಸೂಚನೆಗಳೂ ಇದ್ದವು. ಯಜ್ಞಾರ್ಪಣೆ, ತೊಳೆಯುವಿಕೆ ಅಥವಾ ಚಿಮಿಕಿಸುವಿಕೆಯ ಮೂಲಕ ಒಬ್ಬನು ಶುದ್ಧನಾಗಬಹುದಿತ್ತು.—ಯಾಜ. ಅಧ್ಯಾ. 11-15; ಅರ. ಅಧ್ಯಾ. 19.
ಈ ನಿಯಮಗಳಲ್ಲಿ ಪ್ರತಿಯೊಂದಕ್ಕೆ ಯೆಹೂದಿ ರಬ್ಬಿಗಳು ತಮ್ಮದೇ ಆದ ಕಟ್ಟುಪಾಡುಗಳನ್ನು ಸೇರಿಸಿದರು. ಒಬ್ಬ ವ್ಯಕ್ತಿ ಯಾವುದರಿಂದ ಅಶುದ್ಧನಾಗುತ್ತಾನೆ ಮತ್ತು ಬೇರೆಯವರು ಅಶುದ್ಧರಾಗುವಂತೆ ಹೇಗೆ ಮಾಡುತ್ತಾನೆ ಎನ್ನುವುದರ ಬಗ್ಗೆ ರಬ್ಬಿಗಳು ಹೆಚ್ಚಿನ, ಇನ್ನಷ್ಟು ವಿವರವಾದ ನಿಯಮಗಳನ್ನು ಮಾಡಿದರು ಎನ್ನುತ್ತದೆ ಒಂದು ಪುಸ್ತಕ. ಯಾವೆಲ್ಲ ವಿಧದ ಪಾತ್ರೆ, ವಸ್ತುಗಳು ಅಶುದ್ಧವಾಗಬಲ್ಲವು, ಅಶುದ್ಧವಾಗಲಾರವು ಎನ್ನುವುದರ ಬಗ್ಗೆ ಮತ್ತು ಜನರು ಮತ್ತೆ ಶುದ್ಧರಾಗಲು ಯಾವೆಲ್ಲ ಸಂಸ್ಕಾರಗಳನ್ನು ಪಾಲಿಸಬೇಕೆಂಬುದರ ಬಗ್ಗೆಯೂ ಅವರು ನಿಯಮಗಳನ್ನು ಮಾಡಿದರು.
ಯೇಸುವಿನ ವಿರೋಧಿಗಳು ಅವನನ್ನು ಕೇಳಿದ್ದು: “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯಕ್ಕನುಸಾರ ಏಕೆ ನಡೆದುಕೊಳ್ಳುತ್ತಿಲ್ಲ? ಅವರು ಕೊಳಕು ಕೈಗಳಿಂದಲೇ ಊಟಮಾಡುತ್ತಾರಲ್ಲಾ”? (ಮಾರ್ಕ 7:5) ಕೊಳಕು ಕೈಗಳಿಂದ ಉಣ್ಣುವುದು ಆರೋಗ್ಯಕರವಲ್ಲ ಎಂಬ ಅರ್ಥದಲ್ಲಿ ಆ ಧಾರ್ಮಿಕ ಶತ್ರುಗಳು ಇದನ್ನು ಹೇಳುತ್ತಿರಲಿಲ್ಲ. ನಿಜ ಸಂಗತಿ ಏನೆಂದರೆ ಊಟಮಾಡುವ ಮೊದಲು ಒಂದು ಸಂಸ್ಕಾರ ಎಂಬಂತೆ ಕೈಗಳ ಮೇಲೆ ನೀರನ್ನು ಸುರಿಯಬೇಕೆಂದು ಆ ರಬ್ಬಿಗಳು ಅವಶ್ಯಪಡಿಸುತ್ತಿದ್ದರು. ಮೇಲೆ ತಿಳಿಸಿದ ಅದೇ ಪುಸ್ತಕವು ಕೂಡಿಸಿದ್ದು: “ಕೈಗೆ ನೀರು ಸುರಿಯಲು ಯಾವ ಪಾತ್ರೆಗಳನ್ನು ಬಳಸಬೇಕು, ಯಾವ ನೀರು ಅದಕ್ಕೆ ಸೂಕ್ತ, ಅದನ್ನು ಯಾರು ಸುರಿಯಬೇಕು ಮತ್ತು ಕೈಗಳನ್ನು ಎಲ್ಲಿಯ ವರೆಗೆ ನೀರಿನಿಂದ ತೊಳೆಯಬೇಕು ಎಂಬ ವಿಷಯದಲ್ಲೂ ವಾದವಿವಾದಗಳಿದ್ದವು.”
ಮನುಷ್ಯನು ಮಾಡಿದ ಈ ನಿಯಮಗಳಿಗೆಲ್ಲ ಯೇಸುವಿನ ಪ್ರತಿಕ್ರಿಯೆ ಸರಳವಾಗಿತ್ತು. ಒಂದನೇ ಶತಮಾನದ ಯೆಹೂದಿ ಧರ್ಮಗುರುಗಳಿಗೆ ಅವನಂದದ್ದು: “ಕಪಟಿಗಳಾದ ನಿಮ್ಮ ಕುರಿತು ಯೆಶಾಯನು ಸರಿಯಾಗಿಯೇ ಪ್ರವಾದಿಸಿದ್ದಾನೆ; ಅವನು ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಗೌರವಿಸುತ್ತಾರೆ, ಆದರೆ ಅವರ ಹೃದಯಗಳು ನನ್ನಿಂದ ಬಹಳ ದೂರವಾಗಿವೆ. ಅವರು ಮನುಷ್ಯರ ಆಜ್ಞೆಗಳನ್ನೇ ಕಟ್ಟಳೆಗಳಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುತ್ತಿರುವುದು ವ್ಯರ್ಥ’ ಎಂದು ಬರೆದಿದ್ದಾನೆ. ನೀವು ದೇವರ ಆಜ್ಞೆಯನ್ನು ತೊರೆದು ಮನುಷ್ಯರ ಸಂಪ್ರದಾಯವನ್ನೇ ಭದ್ರವಾಗಿ ಹಿಡಿದುಕೊಂಡಿದ್ದೀರಿ.”—ಮಾರ್ಕ 7:6-8.