ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 42

ಗೀತೆ 123 ಕುರಿಪಾಲರು—ಮನುಷ್ಯರಲ್ಲಿ ದಾನಗಳು

ದೇವರು ಕೊಟ್ಟ ಉಡುಗೊರೆ—ಮರಿಬೇಡಿ ಸಹೋದರರೇ!

ದೇವರು ಕೊಟ್ಟ ಉಡುಗೊರೆ—ಮರಿಬೇಡಿ ಸಹೋದರರೇ!

“ಆತನು ಉನ್ನತ ಸ್ಥಳಕ್ಕೆ ಏರಿಹೋದಾಗ . . . ಗಂಡಸ್ರನ್ನ ಉಡುಗೊರೆಗಳಾಗಿ ಕೊಟ್ಟನು”ಎಫೆ. 4:8.

ಈ ಲೇಖನದಲ್ಲಿ ಏನಿದೆ?

ಸಹಾಯಕ ಸೇವಕರು, ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ಏನೆಲ್ಲಾ ಮಾಡ್ತಾರೆ? ಅವರು ಮಾಡೋ ಸಹಾಯನ ಮರಿಯದೇ ಇರೋಕೆ ನಾವೇನು ಮಾಡಬಹುದು?

1. ಯೇಸು ನಮಗೋಸ್ಕರ ಏನೆಲ್ಲ ಮಾಡಿದ್ದಾನೆ?

 ಯೇಸುದಂತೂ ತುಂಬ ದೊಡ್ಡ ಮನಸ್ಸು. ಯೇಸು ಭೂಮಿಲಿದ್ದಾಗ ಜನ್ರ ಕಷ್ಟ ನೋಡಿ ಅವ್ರಿಗೆ ತುಂಬ ಸಹಾಯ ಮಾಡಿದ್ರು! (ಲೂಕ 9:12-17) ನಮಗೋಸ್ಕರ ತನ್ನ ಪ್ರಾಣನೇ ಕೊಟ್ಟನು. ಇದೇನು ಮಾಮೂಲಿ ವಿಷ್ಯ ಅಲ್ಲ! (ಯೋಹಾ. 15:13) ಯೇಸು ಮತ್ತೆ ಜೀವ ಪಡ್ಕೊಂಡು ಬಂದ ಮೇಲೆನೂ ನಮ್ಮ ಬಗ್ಗೆ ಯೋಚಿಸೋದನ್ನ ನಿಲ್ಲಿಸಿಲ್ಲ. ನಮಗೆ ಕಲಿಸೋಕೆ, ನಮ್ಮನ್ನ ಸಂತೈಸೋಕೆ ‘ಪವಿತ್ರಶಕ್ತಿನ ಸುರಿಸು’ ಅಂತ ಯೆಹೋವನ ಹತ್ರ ಅಂತ ಬೇಡ್ಕೊಂಡಿದ್ದಾನೆ. (ಯೋಹಾನ 14:16, 17, ಪಾದಟಿಪ್ಪಣಿ; 16:13) ನಾವು ಜನ್ರಿಗೆ ಸತ್ಯ ಕಲಿಸೋಕೆ ಬೇಕಾಗಿರೋ ತರಬೇತಿನ ನಮಗೆ ಸಭೆಗಳಿಂದ ಕೊಡ್ತಿದ್ದಾನೆ.—ಮತ್ತಾ. 28:18-20.

2. ಎಫೆಸ 4:7, 8ರಲ್ಲಿ ಹೇಳಿರೋ ‘ಉಡುಗೊರೆಗಳು’ ಯಾರು?

2 ಈಗ ನಾವು ಯೇಸು ಕೊಟ್ಟ ಇನ್ನೊಂದು “ಉಡುಗೊರೆ” ಬಗ್ಗೆ ನೋಡೋಣ. ಯೇಸು ಸ್ವರ್ಗಕ್ಕೆ ಹೋದ್ಮೇಲೆ ಪೌಲ, “ಆತನು ಗಂಡಸ್ರನ್ನ ಉಡುಗೊರೆಗಳಾಗಿ ಕೊಟ್ಟನು” ಅಂತ ಹೇಳಿದ. (ಎಫೆಸ 4:7, 8 ಓದಿ.) ಇವರು ಸಭೆನ ನಡೆಸ್ತಾರೆ ನಮ್ಮನ್ನ ಪ್ರೋತ್ಸಾಹಿಸ್ತಾರೆ ಅಂತ ಪೌಲ ವಿವರಿಸಿದ. (ಎಫೆ. 1:22, 23; 4:11-13) ಇವತ್ತು ಈ ‘ಉಡುಗೊರೆಗಳಲ್ಲಿ’ ಕೆಲವರು ಯಾರು? ಸಹಾಯಕ ಸೇವಕರು, ಸಭೆಯ ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು. a ಇವರೂ ನಮ್ಮ ತರನೇ ಅಪರಿಪೂರ್ಣರು. ಅದಕ್ಕೆ ಇವ್ರಿಂದನೂ ಕೆಲವೊಮ್ಮೆ ತಪ್ಪುಗಳಾಗುತ್ತೆ. (ಯಾಕೋ. 3:2) ಆದ್ರೂ ನಮಗೆ ಸಹಾಯ ಮಾಡೋಕಂತಾನೇ ಯೇಸು ಇವ್ರನ್ನ ಕೊಟ್ಟಿದ್ದಾನೆ ಅನ್ನೋದನ್ನ ನಾವು ಮರಿಬಾರದು.

3. ರಾಜ್ಯ ಸಭಾಗೃಹ ಕಟ್ಟೋ ಉದಾಹರಣೆಯಿಂದ ನೀವೇನು ಕಲಿತ್ರಿ?

3 ಸಭೆನ ನೋಡ್ಕೊಳೋ ದೊಡ್ಡ ಜವಾಬ್ದಾರಿನ ಯೇಸು ಮುಖ್ಯವಾಗಿ ಈ ಸಹೋದರರಿಗೆ ಕೊಟ್ಟಿದ್ದಾನೆ. (ಎಫೆ. 4:12) ಹಾಗಾದ್ರೆ ಉಳಿದವ್ರಿಗೆ ಯಾವ ಜವಾಬ್ದಾರಿ ಇದೆ? ಆ ಸಹೋದರರು ಸಭೆನ ಚೆನ್ನಾಗಿ ನೋಡ್ಕೊಬೇಕಂದ್ರೆ ನಾವು ಅವ್ರಿಗೆ ಬೆಂಬಲ ಕೊಡಬೇಕು. ಇದನ್ನ ರಾಜ್ಯ ಸಭಾಗೃಹ ಕಟ್ಟೋದಕ್ಕೆ ಹೋಲಿಸಬಹುದು. ರಾಜ್ಯ ಸಭಾಗೃಹ ಕಟ್ಟುವಾಗ ಕೆಲವರು ನೇರವಾಗಿ ಕೆಲಸ ಮಾಡ್ತಾರೆ. ಇನ್ನು ಕೆಲವರು ಅವ್ರಿಗೆ ಅಡಿಗೆ ಮಾಡ್ಕೊಡ್ತಾರೆ, ವಸ್ತುಗಳನ್ನ ತಂದ್ಕೊಡ್ತಾರೆ. ಅಥವಾ ಬೇರೆ ಯಾವುದಾದ್ರೂ ಕೆಲಸ ಮಾಡಿ ಅವ್ರಿಗೆ ಸಹಾಯ ಮಾಡ್ತಾರೆ. ಹೀಗೆ ಅವ್ರಿಗೆ ಬೇಕಾಗಿರೋ ಬೆಂಬಲ ಕೊಡ್ತಾರೆ. ಅದೇ ತರ ನಾವು ಸಹಾಯಕ ಸೇವಕರಿಗೆ, ಸಭೆಯ ಹಿರಿಯರಿಗೆ ಮತ್ತು ಸಂಚರಣ ಮೇಲ್ವಿಚಾರಕರಿಗೆ ಪ್ರೋತ್ಸಾಹ ಮತ್ತು ಬೆಂಬಲ ಕೊಡೋ ತರ ಮಾತಾಡಬೇಕು ಮತ್ತು ನಡ್ಕೊಬೇಕು. ಹಾಗಾಗಿ ನಾವು ಈ ಲೇಖನದಲ್ಲಿ, ಕಷ್ಟಪಟ್ಟು ಕೆಲಸ ಮಾಡ್ತಿರೋ ಇವ್ರಿಂದ ನಮಗೇನು ಪ್ರಯೋಜನ? ಇವ್ರಿಗೆ ಮತ್ತು ಇವ್ರನ್ನ ನೇಮಿಸಿರೋ ಯೇಸುಗೆ ನಾವು ಹೇಗೆ ಬೆಂಬಲ ಕೊಡಬಹುದು? ಅಂತ ನೋಡೋಣ.

ಹೆಗಲಿಗೆ ಹೆಗಲು ಕೊಡೋ ಸಹಾಯಕ ಸೇವಕರು

4. ಒಂದನೇ ಶತಮಾನದಲ್ಲಿ ಸಹಾಯಕ ಸೇವಕರು ಯಾವ ಸಹಾಯ ಮಾಡ್ತಿದ್ರು?

4 ಒಂದನೇ ಶತಮಾನದಲ್ಲಿದ್ದ ಸಭೆಗಳಲ್ಲಿ ಕೆಲವು ಸಹೋದರರನ್ನ ಸಹಾಯಕ ಸೇವಕರಾಗಿ ನೇಮಕ ಮಾಡ್ತಿದ್ರು. (1 ತಿಮೊ. 3:8) 1 ಕೊರಿಂಥ 12:28ರಲ್ಲಿ “ಬೇರೆಯವ್ರಿಗೆ ಸಹಾಯ ಮಾಡುವವರು” ಅಂತ ಪೌಲ ಹೇಳಿರೋದು ಇವ್ರ ಬಗ್ಗೆನೇ ಅನ್ಸುತ್ತೆ. ಇವರು ಸಭೆಲಿ ಕೆಲವು ಮುಖ್ಯವಾದ ಕೆಲಸನ ಮಾಡ್ತಿದ್ರಿಂದ ಹಿರಿಯರು ಜನ್ರನ್ನ ಪರಿಪಾಲಿಸೋಕೆ, ಅವ್ರಿಗೆ ಕಲಿಸೋಕೆ ಜಾಸ್ತಿ ಸಮಯ ಕೊಡೋಕೆ ಆಗ್ತಿತ್ತು. ಉದಾಹರಣೆಗೆ ಸಹಾಯಕ ಸೇವಕರು ಬೈಬಲನ್ನ ನಕಲು ಮಾಡೋಕೆ ಸಹಾಯ ಮಾಡ್ತಿದ್ರು. ಅಥವಾ ನಕಲು ಮಾಡೋಕೆ ಬೇಕಾದ ವಸ್ತುಗಳನ್ನ ತಂದ್ಕೊಡ್ತಿದ್ರು ಅಂತ ಅನ್ಸುತ್ತೆ.

5. ಸಹಾಯಕ ಸೇವಕರು ನಿಮ್ಮ ಸಭೆಯಲ್ಲಿ ಏನೆಲ್ಲಾ ಕೆಲಸಗಳನ್ನ ಮಾಡ್ತಿದ್ದಾರೆ?

5 ಈ ಸಹಾಯಕ ಸೇವಕರು ನಿಮ್ಮ ಸಭೆಯಲ್ಲಿ ಯಾವೆಲ್ಲ ಕೆಲಸಗಳನ್ನ ಮಾಡ್ತಿದ್ದಾರೆ ಅಂತ ನಿಮಗೆ ಗೊತ್ತಾ? (1 ಪೇತ್ರ 4:10) ಒಂದು ಸಭೆ ಅಚ್ಚುಕಟ್ಟಾಗಿ ನಡಿಯೋಕೆ ಏನೆಲ್ಲ ಮಾಡಬೇಕೋ ಅದನ್ನೆಲ್ಲ ಇವರು ಮಾಡ್ತಿದ್ದಾರೆ! (1 ಕೊರಿಂ. 14:40) ಉದಾಹರಣೆಗೆ, ಅಟೆಂಡೆಂಟಾಗಿ ಸೇವೆ ಮಾಡ್ತಿದ್ದಾರೆ, ಟೆರಿಟೊರಿಗಳನ್ನ ರೆಡಿ ಮಾಡ್ತಿದ್ದಾರೆ, ಅಕೌಂಟ್ಸ್‌ ನೋಡ್ಕೊಳ್ತಾರೆ. ಸಾಹಿತ್ಯನ ಆರ್ಡರ್‌ ಮಾಡ್ತಾರೆ, ಸಭೆಗೆ ಬಂದ ಸಾಹಿತ್ಯನ ಎಲ್ರಿಗೆ ಹಂಚ್ತಾರೆ. ಜೊತೆಗೆ ಸೌಂಡ್‌ ಡಿಪಾರ್ಟ್‌ಮೆಂಟ್‌ ನೋಡ್ಕೊಳ್ತಾರೆ, ಕ್ಲೀನಿಂಗ್‌ ಮಾಡ್ತಾರೆ. ಇಷ್ಟು ಮಾತ್ರ ಅಲ್ಲ, ಕೆಲವು ಸಹಾಯಕ ಸೇವಕರು ‘ಕ್ರೈಸ್ತ ಜೀವನ ಮತ್ತು ಸೇವೆ ಕೂಟದಲ್ಲಿ‘ ಕೆಲವು ಭಾಗಗಳನ್ನ ಮಾಡ್ತಾರೆ, ಸಾರ್ವಜನಿಕ ಭಾಷಣಗಳನ್ನ ಕೊಡ್ತಾರೆ. ಕೆಲವು ಅರ್ಹ ಸಹಾಯಕ ಸೇವಕರು ಕ್ಷೇತ್ರ ಸೇವಾ ಗುಂಪಿನ ಸಹಾಯಕರಾಗಿ ಸೇವೆ ಮಾಡ್ತಾರೆ. ಇನ್ನು ಕೆಲವರು ಹಿರಿಯರ ಜೊತೆ ಪರಿಪಾಲನಾ ಭೇಟಿಗಳಿಗೂ ಹೋಗ್ತಾರೆ.

6. ಹೆಗಲಿಗೆ ಹೆಗಲು ಕೊಟ್ಟು ಸೇವೆ ಮಾಡ್ತಿರೋ ಸಹಾಯಕ ಸೇವಕರನ್ನ ನಾವು ಯಾಕೆ ಮರಿಬಾರದು?

6 ಸಹಾಯಕ ಸೇವಕರು ತುಂಬ ಕೆಲಸಗಳನ್ನ ಮಾಡ್ತಿರೋದ್ರಿಂದ ಇಡೀ ಸಭೆಗೆ ಹೇಗೆ ಪ್ರಯೋಜನ ಆಗ್ತಿದೆ? ಬೇರೆಬೇರೆ ಸಭೆಯಲ್ಲಿರೋ ಸಹೋದರಿಯರು ಏನು ಹೇಳ್ತಾರೆ ಕೇಳೋಣ ಬನ್ನಿ. ಬೊಲಿವಿಯಾದಲ್ಲಿರೋ ಸಹೋದರಿ ಬೆಬರ್ಲಿ, b “ನಮ್ಮ ಸಭೇಲಿ ಸಹಾಯಕ ಸೇವಕರು ಚೆನ್ನಾಗಿ ಕೆಲಸ ಮಾಡ್ತಿರೋದ್ರಿಂದ ನಾನಂತೂ ಕೂಟಗಳನ್ನ ತುಂಬ ಎಂಜಾಯ್‌ ಮಾಡ್ತಿದ್ದೀನಿ. ನಾನು ಕೂಟಗಳಲ್ಲಿ ಚೆನ್ನಾಗಿ ಹಾಡ್ತಿದ್ದೀನಿ, ಉತ್ರ ಹೇಳ್ತೀನಿ, ಭಾಷಣಗಳನ್ನ ಕೇಳಿಸ್ಕೊಳ್ತೀನಿ. ವಿಡಿಯೋಗಳಿಂದ ಮತ್ತು ಚಿತ್ರಗಳಿಂದ ಪಾಠಗಳನ್ನ ಕಲಿತೀನಿ. ಇದಕ್ಕೆಲ್ಲ ಕಾರಣ ಸಹಾಯಕ ಸೇವಕರು ಅಚ್ಚುಕಟ್ಟಾಗಿ ಮಾಡ್ತಿರೋ ಕೆಲಸನೇ. ಕೂಟಗಳು ನಡೆಯೋವಾಗ ಸುರಕ್ಷಿತವಾಗಿ ನಾವು ಇರೋ ತರ ಅವರು ನೋಡ್ಕೊತಾರೆ. ಜ಼ೂಮ್‌ನಲ್ಲಿ ಮೀಟಿಂಗ್ಸ್‌ ನೋಡೋವ್ರಿಗೂ ಸಹಾಯ ಮಾಡ್ತಾರೆ. ಕೂಟ ಆದ್ಮೇಲೆ ಹಾಲ್‌ನ ಕ್ಲೀನ್‌ ಮಾಡ್ತಾರೆ. ನಮ್ಗೆ ಬೇಕಾಗಿರೋ ಪ್ರಕಾಶನಗಳನ್ನ ಕೊಡ್ತಾರೆ. ಇದಕ್ಕೆಲ್ಲ ನಾನು ಅವ್ರಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀನಿ” ಅಂತ ಹೇಳ್ತಾರೆ. ಕೊಲಂಬಿಯಾದಲ್ಲಿರೋ ಹಿರಿಯನ ಹೆಂಡತಿಯಾಗಿರೋ ಲೆಸ್ಲಿ ಹೀಗೆ ಹೇಳ್ತಾರೆ: “ಸಹಾಯಕ ಸೇವಕರೇನಾದ್ರೂ ನಮ್‌ ಸಭೇಲಿ ಇಲ್ಲ ಅಂದಿದ್ರೆ, ನಮ್‌ ಮನೆಯವ್ರಿಗೆ ಎಷ್ಟೋ ಕೆಲಸಗಳನ್ನ ಮಾಡೋಕೆ ಆಗ್ತಾನೇ ಇರಲಿಲ್ಲ. ಅವ್ರೇ ಅದನ್ನೆಲ್ಲ ಮಾಡಬೇಕಾಗ್ತಿತ್ತು. ಸಹಾಯಕ ಸೇವಕರು ಮಾಡ್ತಿರೋ ಕೆಲಸಕ್ಕೆ, ಅವ್ರ ಹುರುಪಿಗೆ ನಾನೆಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ!” ನೀವು ನಿಮ್ಮ ಸಭೆಲಿರೋ ಸಹಾಯಕ ಸೇವಕರ ಬಗ್ಗೆ ಏನು ಹೇಳ್ತಿರಾ?—1 ತಿಮೊ. 3:13.

7. ಸಹಾಯಕ ಸೇವಕರು ಮಾಡ್ತಿರೋ ಸೇವೆನ ನೀವು ಮರ್ತಿಲ್ಲ ಅಂತ ತೋರಿಸೋಕೆ ಏನು ಮಾಡಬಹುದು? (ಚಿತ್ರ ನೋಡಿ.)

7 ಸಭೇಲಿ ಸಹಾಯಕ ಸೇವಕರು ಮಾಡೋ ಸಹಾಯನ ನೋಡ್ದಾಗ ಅವ್ರಿಗೆ ಥ್ಯಾಂಕ್ಸ್‌ ಹೇಳಬೇಕು ಅಂತ ನಮಗೆ ಅನಿಸುತ್ತೆ. ಆದ್ರೆ ಅದಷ್ಟೇ ಸಾಕಾಗಲ್ಲ, “ನೀವು ಆ ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ” ಅಂತ ಬೈಬಲ್‌ ಹೇಳುತ್ತೆ. (ಕೊಲೊ. 3:15) ಫಿನ್‌ಲ್ಯಾಂಡಲ್ಲಿ ಹಿರಿಯರಾಗಿರೋ ಸಹೋದರ ಕ್ರಿಸ್ಟೋಫರ್‌ ಹೇಗೆ ಕೃತಜ್ಞತೆ ತೋರಿಸ್ತಾರೆ ಅಂತ ನೋಡಿ: “ನಾನು ಸಹಾಯಕ ಸೇವಕರನ್ನ ಪ್ರೋತ್ಸಾಹಿಸೋಕೆ ಕಾರ್ಡ್‌ ಬರೆಯೋ ಅಥವಾ ಮೆಸೇಜ್‌ ಮಾಡೋ ಅಭ್ಯಾಸನ ಮಾಡ್ಕೊಂಡಿದ್ದೀನಿ. ಅದ್ರಲ್ಲಿ ನಾನು ಒಂದು ವಚನನ ಬರೀತೀನಿ, ಅವರು ನನಗೆ ಹೇಗೆ ಸಹಾಯ ಮಾಡಿದ್ದಾರೆ ಅಥವಾ ಅವ್ರಲ್ಲಿ ನಾನು ನೋಡಿದ ಒಳ್ಳೆದ್ರ ಬಗ್ಗೆ ಬರೀತೀನಿ.” ನ್ಯೂಕ್ಯಾಲಿಡೋನಿಯದಲ್ಲಿ ಇರೋ ಪ್ಯಾಸ್ಕಲ್‌ ಮತ್ತು ಜಾಯೆಲ್‌ ಅನ್ನೋ ದಂಪತಿ ಏನು ಹೇಳ್ತಾರೆ ಅಂತ ನೋಡಿ. ಪ್ಯಾಸ್ಕಲ್‌ ಹೇಳೋದು, “ನಮ್‌ ಸಭೇಲಿರೋ ಸಹಾಯಕ ಸೇವಕರಿಗೋಸ್ಕರ ನಾವು ಇತ್ತೀಚೆಗೆ ತುಂಬ ಬೇಡ್ಕೊತೀವಿ. ಅವ್ರನ್ನ ಕೊಟ್ಟಿದ್ದಕ್ಕೆ ನಾವು ಯೆಹೋವನಿಗೆ ತುಂಬ ಥ್ಯಾಂಕ್ಸ್‌ ಹೇಳ್ತೀವಿ. ಅಷ್ಟೇ ಅಲ್ಲ, ಅವ್ರ ಕೆಲಸಗಳನ್ನೆಲ್ಲ ಅವ್ರು ಚೆನ್ನಾಗಿ ಮಾಡೋಕೆ ಸಹಾಯ ಮಾಡಪ್ಪಾ ಅಂತನೂ ಬೇಡ್ಕೊತೀವಿ.” ಇಂಥ ಪ್ರಾರ್ಥನೆಗಳನ್ನ ಯೆಹೋವ ಕೇಳಿಸ್ಕೊಳ್ತಾರೆ ಮತ್ತು ಇದ್ರಿಂದ ಸಭೆಗೆ ತುಂಬ ಪ್ರಯೋಜನ ಆಗುತ್ತೆ.—2 ಕೊರಿಂ. 1:11.

‘ಶ್ರಮಪಟ್ಟು ಕೆಲಸ ಮಾಡ್ತಿರೋ’ ಸಭೆಯ ಹಿರಿಯರು

8. ಹಿರಿಯರು ‘ಶ್ರಮಪಟ್ಟು ಕೆಲಸ ಮಾಡ್ತಾರೆ’ ಅಂತ ಪೌಲ ಯಾಕೆ ಹೇಳಿದ? (1 ಥೆಸಲೊನೀಕ 5:12, 13)

8 ಒಂದನೇ ಶತಮಾನದಲ್ಲಿ ಹಿರಿಯರು ಸಭೆಗೋಸ್ಕರ ಶ್ರಮಪಟ್ಟು ಕೆಲಸ ಮಾಡ್ತಿದ್ರು. (1 ಥೆಸಲೊನೀಕ 5:12, 13 ಓದಿ; 1 ತಿಮೊ. 5:17) ಅವರು ಸಭೆಲಿ “ಮೇಲ್ವಿಚಾರಣೆ” ಮಾಡ್ತಿದ್ರು. ಅಂದ್ರೆ ಕೂಟಗಳನ್ನ ನಡೆಸ್ತಿದ್ರು, ಹಿರಿಯರೆಲ್ಲ ಜೊತೆ ಸೇರಿ ನಿರ್ಧಾರಗಳನ್ನ ಮಾಡ್ತಿದ್ರು. ಇದ್ರ ಜೊತೆಗೆ ಸಭೆಗೆ ‘ಬುದ್ಧಿ ಹೇಳ್ತಿದ್ರು.’ ಅಂದ್ರೆ ಸಭೆನ ಕಾಪಾಡೋಕೆ ಮತ್ತು ಬಲಪಡಿಸೋಕೆ ಪ್ರೀತಿಯಿಂದ ತಿದ್ತಾ ಇದ್ರು. (1 ಥೆಸ. 2:11, 12; 2 ತಿಮೊ. 4:2) ಇದೆಲ್ಲದ್ರ ಜೊತೆಯಲ್ಲಿ ಅವರು ಅವ್ರ ಕುಟುಂಬಗಳನ್ನೂ ನೋಡ್ಕೊಬೇಕಿತ್ತು, ದೇವರ ಜೊತೆಗೆ ಅವ್ರಿಗಿದ್ದ ಸಂಬಂಧನೂ ಕಾಪಾಡ್ಕೊಬೇಕಿತ್ತು.—1 ತಿಮೊ. 3:2, 4; ತೀತ 1:6-9.

9. ಹಿರಿಯರು ಇವತ್ತು ಯಾವೆಲ್ಲ ಕೆಲಸಗಳನ್ನ ಮಾಡ್ತಾರೆ?

9 ಇವತ್ತು ಕೂಡ ಹಿರಿಯರು ತುಂಬ ಕೆಲಸ ಮಾಡ್ತಾರೆ. ಅವರು ಹುರುಪಿಂದ ಸಿಹಿಸುದ್ದಿ ಸಾರಿ, ನಮಗೆ ಒಳ್ಳೇ ಮಾದರಿ ಇಡ್ತಾರೆ. (2 ತಿಮೊ. 4:5) ಸಭೆಯವರು ಎಲ್ಲೆಲ್ಲಿ ಸೇವೆ ಮಾಡಬೇಕು ಅಂತ ಟೆರಿಟೊರಿಗಳನ್ನ ರೆಡಿ ಮಾಡ್ತಾರೆ. ಸಾರೋಕೆ, ಕಲಿಸೋಕೆ ಅವ್ರಿಗೆ ಚೆನ್ನಾಗಿ ತರಬೇತಿ ಕೊಡ್ತಾರೆ. ಇದ್ರ ಜೊತೆಯಲ್ಲಿ ಹಿರಿಯರು ಕನಿಕರ ತೋರಿಸ್ತಾ ಬೇಧಭಾವ ಇಲ್ಲದೆ ತೀರ್ಪು ಮಾಡ್ತಾರೆ. ಸಭೆಲಿ ಯಾರಾದ್ರೂ ಗಂಭೀರ ತಪ್ಪು ಮಾಡಿದ್ರೆ ಆ ವ್ಯಕ್ತಿ ಯೆಹೋವನ ಜೊತೆ ಸಂಬಂಧನ ಮತ್ತೆ ಸರಿ ಮಾಡ್ಕೊಳೋಕೆ ಸಹಾಯ ಮಾಡ್ತಾರೆ. ಅದೇ ಸಮಯದಲ್ಲಿ ಸಭೆಯನ್ನೂ ಶುದ್ಧವಾಗಿ ಇಡೋಕೆ ಎಲ್ಲ ಪ್ರಯತ್ನ ಹಾಕ್ತಾರೆ. (1 ಕೊರಿಂ. 5:12, 13; ಗಲಾ. 6:1) ಇದೆಲ್ಲದಕ್ಕಿಂತ ಮುಖ್ಯವಾಗಿ ಹಿರಿಯರು ಕುರುಬರಾಗಿದ್ದಾರೆ. (1 ಪೇತ್ರ 5:1-3) ಬೈಬಲ್‌ ವಚನಗಳನ್ನ ಬಳಸಿ ಚೆನ್ನಾಗಿ ತಯಾರಿಸಿದ ಭಾಷಣಗಳನ್ನ ಕೊಡ್ತಾರೆ. ಸಭೆಲಿ ಇರೋ ಎಲ್ರನ್ನೂ ಚೆನ್ನಾಗಿ ಅರ್ಥ ಮಾಡ್ಕೊಳ್ತಾರೆ. ಆಗಿಂದಾಗ್ಗೆ ಪರಿಪಾಲನಾ ಭೇಟಿಗಳನ್ನ ಮಾಡ್ತಾರೆ. ಈ ಎಲ್ಲ ಕೆಲಸಗಳ ಜೊತೆಯಲ್ಲಿ ಇನ್ನು ಕೆಲವು ಹಿರಿಯರು ರಾಜ್ಯ ಸಭಾಗೃಹ ಕಟ್ಟೋ ಕೆಲಸ ಮಾಡ್ತಾರೆ, ರಿಪೇರಿ ಮಾಡ್ತಾರೆ. ಅಧಿವೇಶನಗಳಲ್ಲಿ ಕೆಲಸ ಮಾಡ್ತಾರೆ, ಆಸ್ಪತ್ರೆ ಸಂಪರ್ಕ ಸಮಿತಿ (ಹೆಚ್‌.ಎಲ್‌.ಸಿ.) ಮತ್ತು ರೋಗಿಗಳನ್ನ ಭೇಟಿ ಮಾಡೋ ಗುಂಪು (ಪಿ.ವಿ.ಜಿ.) ಡಿಪಾರ್ಟ್‌ಮೆಂಟಲ್ಲೂ ಕೆಲಸ ಮಾಡ್ತಾರೆ. ಅಬ್ಬಾ! ಹಿರಿಯರು ಎಷ್ಟೊಂದು ಕೆಲಸ ಮಾಡ್ತಾರೆ ಅಲ್ವಾ?

10. ಹಿರಿಯರು ಮಾಡೋ ಯಾವ ವಿಷ್ಯಗಳು ನಮ್ಮ ಹೃದಯ ಮುಟ್ಟುತ್ತೆ?

10 ‘ನಿಮ್ಮನ್ನ ಚೆನ್ನಾಗಿ ನೋಡ್ಕೊಳೋ ಹಿರಿಯರ ಕೈಗೆ ಕೊಡ್ತೀನಿ. ಇನ್ನು ಮೇಲೆ ನೀವು ಹೆದ್ರಲ್ಲ, ಬೆಚ್ಚಿ ಬೀಳಲ್ಲ’ ಅಂತ ಯೆಹೋವ ನಮಗೆ ಮಾತು ಕೊಟ್ಟಿದ್ದಾನೆ. (ಯೆರೆ. 23:4) ಈ ಮಾತು ನೂರಕ್ಕೆ ನೂರು ಸತ್ಯ ಅಂತ ಫಿನ್‌ಲ್ಯಾಂಡಲ್ಲಿ ಜೀವಿಸ್ತಿರೋ ಸಹೋದರಿ ಜೊಯಾನಗೆ ಅನಿಸ್ತು. ಅವ್ರ ತಾಯಿಗೆ ಗಂಭೀರ ಕಾಯಿಲೆ ಬಂತು ಆಗ ಏನಾಯ್ತು ಅಂತ ಆ ಸಹೋದರಿ ವಿವರಿಸ್ತಾರೆ ನೋಡಿ: “ನಾನು ಸಾಮಾನ್ಯವಾಗಿ ನನ್‌ ಕಷ್ಟನ ಯಾರ ಹತ್ರನೂ ಹೇಳ್ಕೊಳ್ಳಲ್ಲ. ಆದ್ರೆ ಯಾಕೋ ಗೊತ್ತಿಲ್ಲ ಒಬ್ಬ ಹಿರಿಯನ ಹತ್ರ ನನ್‌ ಕಷ್ಟನ ಹೇಳ್ಕೊಂಡೆ. ಅವರು ನನಗೆ ಜಾಸ್ತಿ ಪರಿಚಯ ಇರ್ಲಿಲ್ಲ. ಆದ್ರೂ ಅವರು ನಾನ್‌ ಹೇಳೋದನ್ನೆಲ್ಲ ತಾಳ್ಮೆಯಿಂದ ಕೇಳಿಸ್ಕೊಂಡ್ರು. ನನಗೋಸ್ಕರ ಪ್ರಾರ್ಥನೆ ಮಾಡಿದ್ರು. ಯೆಹೋವ ನಿಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ನನಗೆ ಭರವಸೆ ತುಂಬಿದ್ರು. ಅವರು ಏನೆಲ್ಲ ಹೇಳಿದ್ರು ಅಂತ ನನಗೆ ನೆನಪಿಲ್ಲ. ಆದ್ರೆ ಅವರು ನನಗೆ ತುಂಬ ಧೈರ್ಯ ತುಂಬಿದ್ರು ಅಂತ ಮಾತ್ರ ನೆನಪಿದೆ. ನಿಜವಾಗ್ಲೂ ಸರಿಯಾಗಿರೋ ಸಮಯಕ್ಕೆ ಯೆಹೋವನೇ ಅವ್ರನ್ನ ನನ್ನ ಹತ್ರ ಕಳಿಸಿದನು ಅಂತ ನಾನು ನಂಬ್ತೀನಿ.” ಈಗ ನೀವು ಯೋಚಿಸಿ, ನಿಮ್ಮ ಸಭೆಲಿರೋ ಸಹೋದರರು ನಿಮಗೆ ಹೇಗೆ ಸಹಾಯ ಮಾಡಿದ್ದಾರೆ?

11. ಶ್ರಮಪಟ್ಟು ಕೆಲಸ ಮಾಡ್ತಿರೋ ಹಿರಿಯರಿಗೆ ನಾವು ಹೇಗೆಲ್ಲ ಗೌರವ ಕೊಡಬಹುದು? (ಚಿತ್ರ ನೋಡಿ.)

11 ಹಿರಿಯರು “ಮಾಡೋ ಕೆಲಸಕ್ಕಾಗಿ” ನಾವು ಅವ್ರನ್ನ ಮೆಚ್ಕೊಬೇಕು, ಗೌರವ ಕೊಡಬೇಕು ಅಂತ ಯೆಹೋವ ಬಯಸ್ತಾನೆ. (1 ಥೆಸ. 5:12, 13) ಫಿನ್‌ಲ್ಯಾಂಡಲ್ಲಿರೋ ಸಹೋದರಿ ಹೆನ್ರಿಟಾ ಹಿರಿಯರ ಬಗ್ಗೆ ಏನು ಹೇಳ್ತಾರೆ ನೋಡಿ. “ಹಿರಿಯರು ನಮಗೆ ಮನಸಾರೆ ಸಹಾಯ ಮಾಡ್ತಾರೆ. ಹಾಗಂತ ಅವ್ರಿಗೆ ಬೇಕಾದಷ್ಟು ಸಮಯ ಇದೆ, ಅವ್ರಿಗೆ ಸುಸ್ತೇ ಆಗಲ್ಲ, ಅವ್ರ ಜೀವನದಲ್ಲಿ ಕಷ್ಟಗಳೇ ಇಲ್ಲ ಅಂತಲ್ಲ. ನಾನು ಇದನ್ನ ಅರ್ಥ ಮಾಡ್ಕೊಂಡು ಹಿರಿಯರ ಹತ್ರ ಹೋಗಿ ಬ್ರದರ್‌, ನೀವೊಬ್ಬ ಒಳ್ಳೇ ಎಲ್ಡರ್‌! ಸಭೆನ ಚೆನ್ನಾಗಿ ನೋಡ್ಕೊಳ್ತೀರ” ಅಂತ ಹೇಳ್ತೀನಿ. ಟರ್ಕಿಯಲ್ಲಿರೋ ಇನ್ನೊಬ್ಬ ಸಹೋದರಿ ಸೆರಾ ಏನು ಹೇಳ್ತಾರೆ ನೋಡಿ. “ಹಿರಿಯರು ತಮ್ಮ ಕೆಲಸನ ಚೆನ್ನಾಗಿ ಮಾಡ್ಕೊಂಡು ಹೋಗೋಕೆ ಅವ್ರಿಗೂ ‘ಪ್ರೋತ್ಸಾಹ ಬೇಕು.’ ಅದಕ್ಕೆ ನಾನು ಅವ್ರಿಗೆ ಕಾರ್ಡ್‌ ಬರಿತೀನಿ, ಊಟಕ್ಕೆ ಕರಿತೀನಿ ಅಥವಾ ಅವ್ರ ಜೊತೆಗೆ ಸೇವೆಗೆ ಹೋಗ್ತೀನಿ.” ನಿಮ್ಮ ಸಭೆಲೂ ಕಷ್ಟಪಟ್ಟು ಕೆಲಸ ಮಾಡ್ತಿರೋ ಹಿರಿಯರು ಇದ್ದಾರೆ. ನೀವ್ಯಾರಿಗೆ ಥ್ಯಾಂಕ್ಸ್‌ ಹೇಳಬೇಕು ಅಂತ ಇದ್ದೀರಾ? ಅವ್ರಿಗೆ ಹೇಗೆಲ್ಲ ಥ್ಯಾಂಕ್ಸ್‌ ಹೇಳಬಹುದು ಅಂತ ಯೋಚ್ನೆ ಮಾಡಿ.—1 ಕೊರಿಂ. 16:18.

ಸಭೆ ನೋಡ್ಕೊಳೋ ಸಹೋದರರಿಗೂ “ಪ್ರೋತ್ಸಾಹ ಬೇಕು.” ಅದನ್ನ ನೀವೂ ಮಾಡಬಹುದು. (ಪ್ಯಾರ 7, 11, 15 ನೋಡಿ)


ಪ್ರೋತ್ಸಾಹ ಕೊಡೋ ಸಂಚರಣ ಮೇಲ್ವಿಚಾರಕರು

12. ಸಭೆಯನ್ನ ಬಲಪಡಿಸೋಕೆ ಯೇಸು ಇನ್ನೂ ಏನು ಮಾಡಿದನು? (1 ಥೆಸಲೊನೀಕ 2:7, 8)

12 ಯೇಸು “ಉಡುಗೊರೆಗಳಾಗಿ” ಕೊಟ್ಟಿರೋ ಇನ್ನು ಕೆಲವು ಸಹೋದರರು ಬೇರೆ ರೀತಿಯಲ್ಲಿ ಸಹಾಯ ಮಾಡ್ತಾರೆ. ಆತನ ನಿರ್ದೇಶನದ ಪ್ರಕಾರ ಯೆರೂಸಲೇಮಲ್ಲಿದ್ದ ಹಿರಿಯರು ಪೌಲನನ್ನ, ಬಾರ್ನಬನನ್ನ ಮತ್ತು ಇನ್ನು ಕೆಲವು ಸಹೋದರರನ್ನ ಸಂಚರಣ ಮೇಲ್ವಿಚಾರಕರಾಗಿ ಕಳಿಸಿದ್ರು. (ಅ. ಕಾ. 11:22) ಯಾಕೆ? ಸಹಾಯಕ ಸೇವಕರು ಮತ್ತು ಹಿರಿಯರು ಹೇಗೆ ಸಭೆಯನ್ನ ಬಲಪಡಿಸಬೇಕಿತ್ತೋ ಅದೇ ತರ ಇವರೂ ಮಾಡಬೇಕಿತ್ತು. (ಅ. ಕಾ. 15:40, 41) ಅದಕ್ಕೆ ಅವರು ಆರಾಮಾಗಿರೋ ಜೀವನನ ಬಿಟ್ರು, ಸಹೋದರ ಸಹೋದರಿಯರಿಗೆ ಕಲಿಸೋಕೆ ಪ್ರೋತ್ಸಾಹಿಸೋಕೆ ತಮ್ಮ ಜೀವನೇ ಪಣಕ್ಕಿಟ್ರು.1 ಥೆಸಲೊನೀಕ 2:7, 8 ಓದಿ.

13. ಸಂಚರಣ ಮೇಲ್ವಿಚಾರಕರು ಏನೆಲ್ಲಾ ಮಾಡ್ತಾರೆ?

13 ಸಂಚರಣ ಮೇಲ್ವಿಚಾರಕರು ಒಂದೇ ಕಡೆ ಇರೋಕಾಗಲ್ಲ. ಅವರು ಒಂದೊಂದು ವಾರ ಒಂದೊಂದು ಸಭೆಗೆ ಓಡಾಡ್ತಾ ಇರ್ತಾರೆ. ಕೆಲವೊಮ್ಮೆ ಒಂದು ಸಭೆಯಿಂದ ಇನ್ನೊಂದು ಸಭೆಗೆ ನೂರಾರು ಕಿಲೋಮೀಟರ್‌ ದೂರ ಇರುತ್ತೆ. ಪ್ರತಿವಾರ ಅವರು ತುಂಬ ಭಾಷಣಗಳನ್ನ ಕೊಡ್ತಾರೆ. ಪರಿಪಾಲನಾ ಭೇಟಿ ಮಾಡ್ತಾರೆ, ಪಯನೀಯರ್‌ ಕೂಟ, ಹಿರಿಯರ ಕೂಟ ಮತ್ತು ಕ್ಷೇತ್ರ ಸೇವಾ ಕೂಟಗಳನ್ನ ಮಾಡ್ತಾರೆ. ಅಷ್ಟೇ ಅಲ್ಲ ಅವರು ಸಮ್ಮೇಳನಗಳನ್ನ ಅಧಿವೇಶನಗಳನ್ನ ಏರ್ಪಡಿಸ್ತಾರೆ, ಅದಕ್ಕಾಗಿ ಭಾಷಣಗಳನ್ನ ತಯಾರಿಸ್ತಾರೆ. ಪಯನೀಯರ್‌ ಶಾಲೆಗಳನ್ನ, ಸರ್ಕಿಟ್‌ ಸಮ್ಮೇಳನದಲ್ಲಿರೋ ಪಯನೀಯರರ ವಿಶೇಷ ಕೂಟವನ್ನ ನಡೆಸ್ತಾರೆ. ಇನ್ನೂ ಕೆಲವೊಮ್ಮೆ ಬ್ರಾಂಚ್‌ ಕೊಡೋ ಪ್ರಾಮುಖ್ಯವಾದ ಅರ್ಜೆಂಟಾದ ಕೆಲಸಗಳನ್ನೂ ಮಾಡ್ತಾರೆ. ಸಂಚರಣ ಮೇಲ್ವಿಚಾರಕರು ಇಷ್ಟೆಲ್ಲಾ ಕೆಲಸ ಮಾಡ್ತಾರೆ ಅಂತ ನಿಮಗೆ ಗೊತ್ತಿತ್ತಾ?

14. ಸಂಚರಣ ಮೇಲ್ವಿಚಾರಕರನ್ನ ನೀವು ಯಾಕೆ ಮೆಚ್ಕೊಳ್ತಿರಾ?

14 ಸಂಚರಣ ಮೇಲ್ವಿಚಾರಕರಿಂದ ಸಭೆಗೆ ಏನೆಲ್ಲಾ ಪ್ರಯೋಜನ ಆಗುತ್ತೆ? ಟರ್ಕಿಯಲ್ಲಿರೋ ಒಬ್ಬ ಸಹೋದರ ಹೀಗೆ ಹೇಳ್ತಾರೆ, “ಪ್ರತಿ ಸಲ ಸಂಚರಣ ಮೇಲ್ವಿಚಾರಕರನ್ನ ನೋಡಿದಾಗ, ನಾನೂ ಅವ್ರ ತರ ಸಹೋದರ ಸಹೋದರಿಯರಿಗೆ ಸಮಯ ಕೊಡಬೇಕು, ಸಹಾಯ ಮಾಡಬೇಕು ಅಂತ ಅನಿಸುತ್ತೆ. ನಾನು ಎಷ್ಟೋ ಸಂಚರಣ ಮೇಲ್ವಿಚಾರಕರನ್ನ ನೋಡಿದ್ದೀನಿ, ಆದ್ರೆ ಯಾರೂ ‘ಬಿಜ಼ಿ ಇದ್ದೀವಿ, ಟೈಮ್‌ ಇಲ್ಲ ಅಂತ ಹೇಳಿದ್ದೂ ಇಲ್ಲ, ಆ ತರ ನಡ್ಕೊಂಡಿದ್ದೂ ಇಲ್ಲ.’” ನಾವು ಆಗ್ಲೇ ನೋಡಿದ ಸಹೋದರಿ ಜೊಯಾನ ಸಂಚರಣ ಮೇಲ್ವಿಚಾರಕರ ಜೊತೆ ಒಂದಿನ ಸೇವೆ ಮಾಡಿದ್ರು. ಆದ್ರೆ ಆ ದಿನ ಅವ್ರಿಗೆ ಯಾರೂ ಮನೇಲಿ ಸಿಗಲಿಲ್ಲ. ಆವತ್ತು ಏನಾಯ್ತು ಅಂತ ಅವ್ರೇ ಹೇಳ್ತಾರೆ ಕೇಳಿ: “ಆ ದಿನಾನ ನಾನು ಮರಿಯೋಕೇ ಆಗಲ್ಲ, ಯಾಕಂದ್ರೆ ಆಗಷ್ಟೇ ನನ್ನ ಇಬ್ರು ಅಕ್ಕಂದಿರು ಬೇರೆ ಊರಿಗೆ ಶಿಫ್ಟ್‌ ಆಗಿದ್ರು. ನನಗೆ ಅವರು ಆಗಾಗ ನೆನಪಾಗ್ತಿದ್ರು, ನಂಗೆ ಬೇಜಾರಾಗ್ತಿತ್ತು. ಅದಕ್ಕೆ ಅದ್ರ ಬಗ್ಗೆ ಸಂಚರಣ ಮೇಲ್ವಿಚಾಕರಿಗೆ ಹೇಳ್ದೆ. ಅವರು ನನಗೆ ತುಂಬ ಸಮಾಧಾನ ಮಾಡಿದ್ರು. ನಮ್ಮವರಿಂದ ನಾವು ಈಗ ತುಂಬ ದೂರ ಇರಬಹುದು, ಆದ್ರೆ ಹೊಸಲೋಕದಲ್ಲಿ ಅವ್ರ ಜೊತೆ ತುಂಬ ಸಮಯ ಕಳಿತೀವಿ” ಅಂತ ಹೇಳಿದ್ರು. ಸಂಚರಣ ಮೇಲ್ವಿಚಾರಕರು ನಿಮ್ಮನ್ನ ಪ್ರೋತ್ಸಾಹಿಸಿದ ದಿನಗಳು ನಿಮಗೂ ನೆನಪಾಗ್ತಿದೆಯಾ?—ಅ. ಕಾ. 20:37–21:1.

15. (ಎ) ಸಂಚರಣ ಮೇಲ್ವಿಚಾರಕರನ್ನ ನಾವು ಹೇಗೆ ನೋಡ್ಕೊಬೇಕು ಅಂತ 3 ಯೋಹಾನ 5-8 ಹೇಳುತ್ತೆ? (ಚಿತ್ರ ನೋಡಿ.) (ಬಿ) ಅವ್ರನ್ನ ಮರ್ತಿಲ್ಲ ಅಂತ ನಾವು ಹೇಗೆಲ್ಲ ತೋರಿಸಬಹುದು? (“ ಹೆಂಡ್ತಿಯರ ತ್ಯಾಗನೂ ಮರಿಬೇಡಿ!” ಚೌಕ ನೋಡಿ)

15 ಅಪೊಸ್ತಲ ಯೋಹಾನ ಗಾಯನಿಗೆ ಒಂದು ಸಲಹೆ ಕೊಟ್ಟ. ಸಭೆಯನ್ನ ಪ್ರೋತ್ಸಾಹಿಸೋಕೆ ಬರೋ ಸಹೋದರರಿಗೆ ಅತಿಥಿ ಸತ್ಕಾರ ಮಾಡಿ, ಚೆನ್ನಾಗಿ ನೋಡ್ಕೊಳೋಕೆ ಹೇಳಿದ. “ದೇವರಿಗೆ ಇಷ್ಟವಾಗೋ ತರ ಅವ್ರನ್ನ ಕಳಿಸ್ಕೊಡು” ಅಂತನೂ ಹೇಳಿದ. (3 ಯೋಹಾನ 5-8 ಓದಿ.) ಈ ಸಲಹೆನ ಪಾಲಿಸೋಕೆ ನಾವೇನು ಮಾಡಬಹುದು? ಸಂಚರಣ ಮೇಲ್ವಿಚಾರಕರನ್ನ ನಮ್ಮ ಮನೆಗೆ ಊಟಕ್ಕೆ ಕರೀಬಹುದು, ಆ ವಾರದಲ್ಲಿ ನಾವು ಸೇವೆಗೆ ಹೋಗಬಹುದು. ಲೆಸ್ಲೀ ಅನ್ನೋ ಸಹೋದರಿ ಏನು ಹೇಳ್ತಾರೆ ಅಂತ ನೋಡಿ. “ಅವ್ರಿಗೆ ಬೇಕಾಗಿರೋದನ್ನ ಕೊಟ್ಟು, ಅವ್ರನ್ನ ಚೆನ್ನಾಗಿ ನೋಡ್ಕೊಳಪ್ಪಾ ಅಂತ ಪ್ರಾರ್ಥನೆ ಮಾಡ್ತೀನಿ. ನೀವು ಬಂದಿದ್ದು ತುಂಬ ಸಹಾಯ ಆಯ್ತು ಅಂತ ನಾನೂ ನನ್ನ ಗಂಡ ಅವ್ರಿಗೆ ಪತ್ರ ಬರೀತೀವಿ” ಅಂತ ಹೇಳ್ತಾರೆ. ನೆನಪಿಡಿ, ಸಂಚರಣ ಮೇಲ್ವಿಚಾರಕರು ದೇವದೂತರಲ್ಲ. ಅವ್ರೂ ನಮ್‌ ತರ ಕಾಯಿಲೆ ಬೀಳ್ತಾರೆ, ಅವ್ರಿಗೂ ಸುಸ್ತಾಗುತ್ತೆ, ಚಿಂತೆ ಆಗುತ್ತೆ, ಕುಗ್ಗೋಗ್ತಾರೆ. ಹಾಗಾಗಿ ನಾವು ಪ್ರೀತಿಯಿಂದ ಒಂದೆರಡು ಮಾತಾಡಿದ್ರೂ ಒಂದು ಚಿಕ್ಕ ಗಿಫ್ಟ್‌ ಕೊಟ್ರೂ ಅದ್ರಿಂದ ಅವ್ರಿಗೆ ಎಷ್ಟೋ ಸಮಾಧಾನ ಆಗುತ್ತೆ. ಅವ್ರ ಪ್ರಾರ್ಥನೆಗೆ ಉತ್ರ ಸಿಕ್ಕಿದ ಹಾಗೆ ಇರುತ್ತೆ.—ಜ್ಞಾನೋ. 12:25.

‘ಉಡುಗೊರೆಗಳಾಗಿರೋ’ ಸಹೋದರರು ಬೇಕಾಗಿದ್ದಾರೆ

16. ಜ್ಞಾನೋಕ್ತಿ 3:27​ರಲ್ಲಿರೋದನ್ನ ಮಾಡೋಕೆ ಸಹೋದರರು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?

16 ದಿನ ಹೋದಂತೆ ಸಭೆ ನೋಡ್ಕೊಳ್ಳೋಕೆ ಸಹೋದರರ ಅಗತ್ಯ ಹೆಚ್ಚಾಗ್ತಾ ಇದೆ. ನೀವು ದೀಕ್ಷಾಸ್ನಾನ ಆಗಿರೋ ಸಹೋದರ ಆಗಿದ್ರೆ ಈ ಅಗತ್ಯನ ಪೂರೈಸೋಕೆ ನಿಮ್ಮ ಕೈಯಿಂದ ಸಹಾಯ ಮಾಡೋಕೆ ಆಗುತ್ತಾ? (ಜ್ಞಾನೋಕ್ತಿ 3:27 ಓದಿ.) ನೀವು ಸಹಾಯಕ ಸೇವಕನಾಗೋಕೆ ಗುರಿ ಇಡ್ತೀರಾ? ನೀವು ಈಗಾಗ್ಲೇ ಸಹಾಯಕ ಸೇವಕನಾಗಿದ್ರೆ ಹಿರಿಯನಾಗೋಕೆ ಬೇಕಾದ ಅರ್ಹತೆ ಪಡ್ಕೊಳ್ತಿರಾ? c ನಿಮಗೆ ಸಾಧ್ಯ ಆಗೋದಾದ್ರೆ ರಾಜ್ಯ ಪ್ರಚಾರಕರ ಶಾಲೆಗೆ ಅರ್ಜಿ ಹಾಕ್ತಿರಾ? ನಿಜ, ಇದನ್ನೆಲ್ಲ ಮಾಡೋಕೆ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನ ಮಾಡ್ಕೊಬೇಕಾಗುತ್ತೆ. ಆದ್ರೆ ಇದನ್ನೆಲ್ಲ ಮಾಡಿದ್ರೆ ನಿಮಗೇ ಪ್ರಯೋಜನ ಆಗುತ್ತೆ. ನೀವು ಒಳ್ಳೆ ತರಬೇತಿ ಪಡ್ಕೊಳ್ತೀರ, ಯೇಸು ನಿಮ್ಮನ್ನ ತನ್ನ ಸೇವೆಯಲ್ಲಿ ಚೆನ್ನಾಗಿ ಬಳಸ್ತಾನೆ. ಇದನ್ನೆಲ್ಲ ಮಾಡೋಕೆ ನಿಮಗೆ ಅರ್ಹತೆ ಇಲ್ಲ, ನಿಮ್ಮ ಕೈಲಿ ಆಗಲ್ಲ ಅಂತ ನಿಮಗೆ ಅನಿಸಿದ್ರೆ ಯೆಹೋವನಿಗೆ ಪ್ರಾರ್ಥನೆ ಮಾಡಿ. ಪವಿತ್ರಶಕ್ತಿ ಕೊಡಪ್ಪಾ ಅಂತ ಬೇಡ್ಕೊಳಿ. ಆಗ ನಿಮಗೆ ಯಾವುದೇ ನೇಮಕ ಸಿಕ್ಕಿದ್ರೂ ಅದನ್ನ ಚೆನ್ನಾಗಿ ಮಾಡೋಕೆ ಆಗುತ್ತೆ.—ಲೂಕ 11:13; ಅ. ಕಾ. 20:28.

17. ಸಹೋದರರನ್ನ “ಉಡುಗೊರೆಗಳಾಗಿ” ಕೊಟ್ಟಿರೋದ್ರಿಂದ ಯೇಸು ಬಗ್ಗೆ ನಮಗೆ ಏನು ಗೊತ್ತಾಗುತ್ತೆ?

17 ‘ಉಡುಗೊರೆಗಳಾಗಿರೋ’ ಈ ಸಹೋದರರು ಕಷ್ಟಪಟ್ಟು ಮಾಡೋ ಈ ಕೆಲಸಗಳನ್ನ ನೋಡಿದ್ರೆ ಯೇಸುನೇ ಇವ್ರನ್ನ ನಡೆಸ್ತಿರೋದು ಅಂತ ನಮಗೆ ಚೆನ್ನಾಗಿ ಗೊತ್ತಾಗುತ್ತೆ. (ಮತ್ತಾ. 28:20) ನಮ್ಮ ರಾಜ ಯೇಸು ನಮ್ಮನ್ನ ತುಂಬ ಪ್ರೀತಿಸ್ತಾನೆ. ನಮಗೆ ಬೇಕಾಗಿರೋದನ್ನ ಉದಾರವಾಗಿ ಕೊಡ್ತಾನೆ. ಅದಕ್ಕೆ ನಮಗೆ ಸಹಾಯ ಮಾಡೋಕೆ ಈ ಸಹೋದರರನ್ನ ಕೊಟ್ಟಿದ್ದಾನೆ. ಇವ್ರೂ ಕಷ್ಟಪಟ್ಟು ಸಭೆಲಿ ದುಡಿತಿದ್ದಾರೆ. ಅದಕ್ಕೆ ನಾವು ಇವ್ರಿಗೂ ಇವ್ರನ್ನ ಕೊಟ್ಟಿರೋದಕ್ಕೆ ಯೇಸುಗೂ ತುಂಬ ಥ್ಯಾಂಕ್ಸ್‌ ಹೇಳಬೇಕು. ಜೊತೆಗೆ ಯೆಹೋವನಿಗೂ ಥ್ಯಾಂಕ್ಸ್‌ ಹೇಳಬೇಕು. ಯಾಕಂದ್ರೆ ಎಲ್ಲ ಒಳ್ಳೇ ಬಹುಮಾನ ಎಲ್ಲ ಒಳ್ಳೇ ವರಗಳನ್ನ ಆತನೇ ನಮಗೆ ಕೊಟ್ಟಿದ್ದಾನೆ.—ಯಾಕೋ. 1:17.

ಗೀತೆ 122 ಲಕ್ಷಾಂತರ ಸೋದರರು

a ಹಿರಿಯರಾಗಿ ಸೇವೆ ಮಾಡ್ತಿರೋ ಆಡಳಿತ ಮಂಡಳಿಯ ಸದಸ್ಯರು, ಆಡಳಿತ ಮಂಡಳಿಯ ಸಹಾಯಕರು, ಬ್ರಾಂಚ್‌ ಕಮಿಟಿ ಸದಸ್ಯರು ಮತ್ತು ಬೇರೆಬೇರೆ ನೇಮಕಗಳನ್ನ ಮಾಡ್ತಿರೋ ಸಹೋದರರು ಕೂಡ ‘ಉಡುಗೊರೆಗಳಾಗಿದ್ದಾರೆ.’

b ಕೆಲವ್ರ ಹೆಸ್ರು ಬದಲಾಗಿದೆ.

c ಸಹಾಯಕ ಸೇವಕರಾಗೋಕೆ ಅಥವಾ ಹಿರಿಯರಾಗೋಕೆ ಏನು ಮಾಡಬೇಕು ಅನ್ನೋದ್ರ ಬಗ್ಗೆ ಹೆಚ್ಚಿನ ಮಾಹಿತಿ ಈ ಮುಂದಿನ ಲೇಖನಗಳಲ್ಲಿ ಇದೆ: ನವೆಂಬರ್‌ 2024ರ ಕಾವಲಿನಬುರುಜುವಿನಲ್ಲಿರೋ “ಸಹೋದರರೇ, ಸಹಾಯಕ ಸೇವಕರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?” ಮತ್ತು “ಸಹೋದರರೇ, ಹಿರಿಯರಾಗೋಕೆ ನೀವು ಪ್ರಯತ್ನ ಹಾಕ್ತಿದ್ದೀರಾ?” ಅನ್ನೋ ಲೇಖನಗಳನ್ನ ಓದಿ.