ಸನ್ನಿವೇಶ ಬದಲಾದರೂ ಸಮಾಧಾನವಾಗಿರಿ
“ನನ್ನ ಮನಸ್ಸನ್ನು ಸಮಾಧಾನಪಡಿಸಿದ್ದೇನೆ.”—ಕೀರ್ತ. 131:2.
1, 2. (ಎ) ಜೀವನದಲ್ಲಿ ದಿಢೀರನೆ ಬದಲಾವಣೆಗಳು ಆದಾಗ ನಮ್ಮ ಮೇಲೆ ಎಂಥ ಪ್ರಭಾವ ಆಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಕೀರ್ತನೆ 131 ಹೇಳುವಂತೆ ಸಮಾಧಾನವಾಗಿರಲು ಯಾವುದು ನಮಗೆ ಸಹಾಯ ಮಾಡುತ್ತದೆ?
ಲೊಯಿಡ್ ಮತ್ತು ಅಲಿಗ್ಸಾಂಡ್ರ 25ಕ್ಕೂ ಹೆಚ್ಚು ವರ್ಷ ಬೆತೆಲ್ ಸೇವೆ ಮಾಡಿದ ಮೇಲೆ ಅವರಿಗೆ ಹೊಸ ನೇಮಕ ಸಿಕ್ಕಿ ಬೆತೆಲನ್ನು ಬಿಡಬೇಕಾಯಿತು. ಆರಂಭದಲ್ಲಿ ಅವರಿಗೆ ದುಃಖವಾಯಿತು. ಲೊಯಿಡ್ ಹೇಳುವುದು: “ಬೆತೆಲ್ ಮತ್ತು ಅಲ್ಲಿ ನಾನು ಮಾಡುತ್ತಿದ್ದ ಕೆಲಸ ನನಗೆ ಸರ್ವಸ್ವ ಆಗಿತ್ತು. ಈ ಬದಲಾವಣೆ ಆಗಿದ್ದು ಒಳ್ಳೆಯದೇ ಅಂತ ಅನಿಸಿದರೂ ವಾರಗಳು, ತಿಂಗಳುಗಳು ಹೋದ ಹಾಗೆ ನನ್ನನ್ನು ಕಡೆಗಣಿಸಲಾಗಿದೆ ಅಂತ ಆಗಾಗ ಅನಿಸುತ್ತಿತ್ತು.” ಒಂದು ಕ್ಷಣ ಲೊಯಿಡ್ ‘ಆಗಿದ್ದೆಲ್ಲಾ ಒಳ್ಳೇದಕ್ಕೆ’ ಅಂತ ಅಂದುಕೊಳ್ಳುತ್ತಿದ್ದರು, ಆದರೆ ಮರುಕ್ಷಣ ‘ಹೀಗ್ ಆಗಿಹೋಯಿತಲ್ಲಾ’ ಎಂದು ಯೋಚಿಸಿ ಬೇಜಾರು ಮಾಡಿಕೊಳ್ಳುತ್ತಿದ್ದರು.
2 ಜೀವನದಲ್ಲಿ ನಾವು ನೆನಸಿರದ ಬದಲಾವಣೆಗಳು ಆಗುತ್ತಾ ಇರುತ್ತವೆ ಮತ್ತು ಇದರಿಂದ ನಮಗೆ ತುಂಬ ಚಿಂತೆ, ಒತ್ತಡ ಆಗಬಹುದು. (ಜ್ಞಾನೋ. 12:25) ಆ ಬದಲಾವಣೆಗಳನ್ನು ನಾವು ಸ್ವೀಕರಿಸುವುದಕ್ಕೆ ಅಥವಾ ಹೊಂದಿಕೊಳ್ಳುವುದಕ್ಕೆ ಕಷ್ಟವಾದಾಗ ಸಮಾಧಾನವಾಗಿರಲು ಏನು ಮಾಡಬಹುದು? (ಕೀರ್ತನೆ 131:1-3 ಓದಿ.) ಹಿಂದೆ ಇದ್ದ ಮತ್ತು ಈಗ ಇರುವ ಯೆಹೋವನ ಕೆಲವು ಸೇವಕರು ತಮ್ಮ ಜೀವನದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆಗಳು ಆದಾಗ ಮನಶ್ಶಾಂತಿಯನ್ನು ಕಳಕೊಳ್ಳದೆ ಇರಲು ಏನು ಮಾಡಿದರು ಎಂದು ನೋಡೋಣ.
“ದೇವಶಾಂತಿ” ಹೇಗೆ ಸಹಾಯ ಮಾಡುತ್ತದೆ?
3. ಯೋಸೇಫನ ಜೀವನದಲ್ಲಿ ಇದ್ದಕ್ಕಿದ್ದಂತೆ ಯಾವ ಬದಲಾವಣೆ ಆಯಿತು?
3 ಯೋಸೇಫನ ಉದಾಹರಣೆ ನೋಡಿ. ಯಾಕೋಬನಿಗೆ ಅವನ ಎಲ್ಲ ಗಂಡುಮಕ್ಕಳಲ್ಲಿ ಯೋಸೇಫ ಅಂದರೆ ಪಂಚಪ್ರಾಣ. ಇದರಿಂದ ಯೋಸೇಫನ ಅಣ್ಣಂದಿರಿಗೆ ಅವನ ಮೇಲೆ ಹೊಟ್ಟೆಕಿಚ್ಚು ಬಂತು. ಯೋಸೇಫನಿಗೆ 17 ವರ್ಷವಾದಾಗ ಅವನನ್ನು ದಾಸನಾಗಿ ಮಾರಿಬಿಟ್ಟರು. (ಆದಿ. 37:2-4, 23-28) ಸುಮಾರು 13 ವರ್ಷ ಅವನು ಐಗುಪ್ತದಲ್ಲಿ ಮೊದಲಿಗೆ ದಾಸನಾಗಿ ಕಷ್ಟಪಟ್ಟನು, ನಂತರ ಸೆರೆಮನೆಯಲ್ಲಿದ್ದನು. ಅವನನ್ನು ತುಂಬ ಪ್ರೀತಿ ಮಾಡುತ್ತಿದ್ದ ತಂದೆಯಿಂದ ದೂರ ಇರಬೇಕಾಯಿತು. ‘ಎಲ್ಲಾ ಮುಗಿದುಹೋಯಿತು’ ಅಂತ ಅವನು ನೆನಸಬಹುದಿತ್ತು, ಕೋಪ ಮಾಡಿಕೊಳ್ಳಬಹುದಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ಸಹಿಸಿಕೊಳ್ಳಲು ಅವನಿಗೆ ಯಾವುದು ಸಹಾಯ ಮಾಡಿತು?
4. (ಎ) ಯೋಸೇಫನು ಸೆರೆಮನೆಯಲ್ಲಿದ್ದಾಗ ಏನು ಮಾಡಿದನು? (ಬಿ) ಯೋಸೇಫನ ಪ್ರಾರ್ಥನೆಗೆ ಯೆಹೋವನು ಹೇಗೆ ಉತ್ತರ ಕೊಟ್ಟನು?
4 ಯೋಸೇಫನು ಸೆರೆಮನೆಯಲ್ಲಿ ಕಷ್ಟಪಡುತ್ತಿದ್ದಾಗ ಯೆಹೋವನು ತನಗೆ ಎಷ್ಟು ಸಹಾಯ ಮಾಡುತ್ತಿದ್ದಾನೆ ಎನ್ನುವುದರ ಕಡೆಗೆ ಗಮನ ಕೊಟ್ಟಿರಬೇಕು. (ಆದಿ. 39:21; ಕೀರ್ತ. 105:17-19) ಜೊತೆಗೆ ಚಿಕ್ಕವನಿದ್ದಾಗ ತನಗೆ ಬಂದ ಪ್ರವಾದನಾತ್ಮಕ ಕನಸಿನ ಬಗ್ಗೆನೂ ಯೋಚಿಸಿರಬಹುದು. ಇದರಿಂದ ಯೆಹೋವನು ತನ್ನ ಜೊತೆ ಇದ್ದಾನೆ ಎಂಬ ಭರವಸೆ ಖಂಡಿತ ಅವನಿಗೆ ಸಿಕ್ಕಿರುತ್ತದೆ. (ಆದಿ. 37:5-11) ಅವನು ಆಗಾಗ ಪ್ರಾರ್ಥನೆ ಮಾಡಿ ತನ್ನ ಹೃದಯದಲ್ಲಿ ಇರುವುದನ್ನೆಲ್ಲ ಯೆಹೋವನ ಹತ್ತಿರ ಹೇಳಿಕೊಂಡಿರಬಹುದು. (ಕೀರ್ತ. 145:18) ಎಲ್ಲ ಕಷ್ಟದಲ್ಲೂ ಅವನೊಂದಿಗೆ ಇರುತ್ತೇನೆ ಎನ್ನುವ ಭರವಸೆಯನ್ನು ಕೊಡುವ ಮೂಲಕ ಯೆಹೋವನು ಅವನ ಪ್ರಾರ್ಥನೆಗೆ ಉತ್ತರ ಕೊಟ್ಟನು.—ಅ. ಕಾ. 7:9, 10. a
5. ಯೆಹೋವನ ಸೇವೆಯನ್ನು ಬಿಡದಿರಲು “ದೇವಶಾಂತಿ” ಹೇಗೆ ಸಹಾಯ ಮಾಡುತ್ತದೆ?
5 ನಾವು ಎಂಥದ್ದೇ ಕಷ್ಟದ ಸನ್ನಿವೇಶದಲ್ಲಿದ್ದರೂ ‘ದೇವಶಾಂತಿಯನ್ನು’ ಪಡಕೊಳ್ಳಬಹುದು. ಅದು ನಮ್ಮ ‘ಮಾನಸಿಕ ಶಕ್ತಿಗಳನ್ನು’ ಕಾಪಾಡುತ್ತದೆ ಮತ್ತು ನಮಗೆ ಮನಶ್ಶಾಂತಿ ಕೊಡುತ್ತದೆ. (ಫಿಲಿಪ್ಪಿ 4:6, 7 ಓದಿ.) ಚಿಂತೆ ಮತ್ತು ಒತ್ತಡದಿಂದ ನಾವು ಬಳಲಿ ಬೆಂಡಾದಾಗ “ದೇವಶಾಂತಿ” ಯೆಹೋವನ ಸೇವೆಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ಎಂದಿಗೂ ಸೋಲದಿರಲು ನಮಗೆ ಸಹಾಯ ಮಾಡುತ್ತದೆ. ಇಂಥ ಅನುಭವವನ್ನು ಪಡೆದಿರುವ ಆಧುನಿಕ ದಿನದ ಸಹೋದರ-ಸಹೋದರಿಯರ ಉದಾಹರಣೆಗಳನ್ನು ನೋಡೋಣ.
ಮನಶ್ಶಾಂತಿಗಾಗಿ ಪ್ರಾರ್ಥಿಸಿ
6, 7. ಮನಶ್ಶಾಂತಿಗಾಗಿ ಪ್ರಾರ್ಥಿಸುವುದರಿಂದ ಯಾವ ಪ್ರಯೋಜನ ಸಿಗುತ್ತದೆ? ಉದಾಹರಣೆ ಕೊಡಿ.
6 ರೈಯನ್ ಮತ್ತು ಜೂಲಿಯೆಟ್‌ಗೆ ತಮ್ಮ ತಾತ್ಕಾಲಿಕ ವಿಶೇಷ ಪಯನೀಯರ್ ಸೇವೆಯನ್ನು ನಿಲ್ಲಿಸಬೇಕು ಅಂತ ಗೊತ್ತಾದಾಗ ತುಂಬ ಕಷ್ಟ ಆಯಿತು. ರೈಯನ್ ಹೀಗೆ ಹೇಳುತ್ತಾರೆ: “ಈ ವಿಷಯದ ಬಗ್ಗೆ ನಾವು ಮನಸ್ಸು ಬಿಚ್ಚಿ ಪ್ರಾರ್ಥಿಸಿದ್ವಿ. ನಾವು ಯೆಹೋವನ ಮೇಲೆ ಭರವಸೆ ಇಟ್ಟಿದ್ದೇವೆ ಎಂದು ತೋರಿಸಲು ಇದು ಒಂದು ಒಳ್ಳೇ ಅವಕಾಶ ಆಗಿತ್ತು. ಯಾಕೆಂದರೆ ನಮ್ಮ ಸಭೆಯಲ್ಲಿದ್ದ ಅನೇಕರು ಸತ್ಯಕ್ಕೆ ಬಂದು ಹೆಚ್ಚು ಸಮಯ ಆಗಿರಲಿಲ್ಲ. ಹಾಗಾಗಿ ‘ನಂಬಿಕೆಯಲ್ಲಿ ಒಳ್ಳೇ ಮಾದರಿ ಇಡಕ್ಕೆ ನಮಗೆ ಸಹಾಯ ಮಾಡಪ್ಪಾ’ ಎಂದು ಯೆಹೋವನಲ್ಲಿ ಬೇಡಿಕೊಂಡೆವು.”
7 ಅವರ ಪ್ರಾರ್ಥನೆಗೆ ಯೆಹೋವನು ಹೇಗೆ ಉತ್ತರ ಕೊಟ್ಟನು? ರೈಯನ್ ಹೇಳುವುದು: “ಪ್ರಾರ್ಥನೆ ಮಾಡಿದ ತಕ್ಷಣವೇ ನಮ್ಮಲ್ಲಿದ್ದ ನಕಾರಾತ್ಮಕ ಭಾವನೆಗಳು ಮತ್ತು ನಮ್ಮ ಚಿಂತೆಯೆಲ್ಲ ಮಾಯವಾಯಿತು. ದೇವಶಾಂತಿ ನಮ್ಮ ಹೃದಯವನ್ನು ಮತ್ತು ಮಾನಸಿಕ ಶಕ್ತಿಯನ್ನು ಕಾದು ಕಾಪಾಡಿತು. ಸರಿಯಾದ ಮನೋಭಾವ ಇದ್ದರೆ ಯೆಹೋವನ ಸೇವೆಯನ್ನು ಚೆನ್ನಾಗಿ ಮಾಡಿಕೊಂಡು ಹೋಗಬಹುದು ಎಂದು ಅರ್ಥಮಾಡಿಕೊಂಡೆವು.”
8-10. (ಎ) ನಮಗೆ ಚಿಂತೆ ಇದ್ದಾಗ ದೇವರಾತ್ಮ ಹೇಗೆ ಸಹಾಯ ಮಾಡುತ್ತದೆ? (ಬಿ) ಯೆಹೋವನ ಸೇವೆಗೆ ಗಮನ ಕೊಟ್ಟರೆ ಆತನು ಹೇಗೆ ಸಹಾಯ ಮಾಡುತ್ತಾನೆ?
8 ಪವಿತ್ರಾತ್ಮ ನಮಗೆ ಮನಶ್ಶಾಂತಿ ಕೊಡುತ್ತದೆ ಮತ್ತು ಜೀವನದಲ್ಲಿ ನಿಜವಾಗಲೂ ಯಾವುದು ಪ್ರಾಮುಖ್ಯ ಎಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ವಚನಗಳನ್ನು ನಮ್ಮ ಮನಸ್ಸಿಗೆ ತರುತ್ತದೆ. (ಯೋಹಾನ 14:26, 27 ಓದಿ.) ಬೆತೆಲ್‌ನಲ್ಲಿ ಹತ್ತಿರತ್ತಿರ 25 ವರ್ಷ ಇದ್ದ ಫಿಲಿಪ್ ಮತ್ತು ಮೇರಿ ದಂಪತಿಗೆ ಏನಾಯಿತೆಂದು ನೋಡಿ. ಕೇವಲ ನಾಲ್ಕು ತಿಂಗಳೊಳಗೆ ಅವರಿಬ್ಬರ ಅಮ್ಮಂದಿರೂ ಮತ್ತು ಒಬ್ಬ ಸಂಬಂಧಿಕರೂ ತೀರಿಹೋದರು. ಮೇರಿಯ ತಂದೆಯನ್ನು ನೋಡಿಕೊಳ್ಳಬೇಕಾಗಿತ್ತು. ಅವರಿಗೆ ಬುದ್ಧಿಮಾಂದ್ಯತೆ ಇತ್ತು.
9 ಫಿಲಿಪ್ ಹೇಳುವುದು: “ಎಲ್ಲ ಸಹಿಸಿಕೊಂಡು ಹೋಗಕ್ಕೆ ಆಗುತ್ತೆ ಅಂತ ಅಂದುಕೊಂಡಿದ್ದೆ. ಆದರೆ ಅದು ನಿಜ ಆಗಿರಲಿಲ್ಲ. ಹಾಗೇ ಒಂದಿನ ಕಾವಲಿನಬುರುಜುವಿನ ಒಂದು ಲೇಖನದಲ್ಲಿದ್ದ ಕೊಲೊಸ್ಸೆ 1:11 ನನ್ನ ಕಣ್ಣಿಗೆ ಬಿತ್ತು. ನಾನು ಎಲ್ಲ ಸಹಿಸಿಕೊಳ್ಳುತ್ತಿದ್ದೆ, ಆದರೆ ಪೂರ್ತಿ ಮಟ್ಟಿಗಲ್ಲ ಎಂದು ಅರ್ಥ ಆಯಿತು. ನಾನು ‘ಆನಂದದಿಂದ ಮತ್ತು ದೀರ್ಘ ಸಹನೆಯಿಂದ ಸಂಪೂರ್ಣವಾಗಿ ತಾಳಿಕೊಳ್ಳಬೇಕಿತ್ತು.’ ನನ್ನ ಆನಂದ ನನ್ನ ಸನ್ನಿವೇಶದ ಮೇಲೆ ಹೊಂದಿಕೊಂಡಿಲ್ಲ, ಬದಲಿಗೆ ಪವಿತ್ರಾತ್ಮ ನನಗೆ ಎಷ್ಟು ಸಹಾಯ ಮಾಡುತ್ತಿದೆ ಅನ್ನುವುದರ ಮೇಲೆ ಹೊಂದಿಕೊಂಡಿದೆ ಎಂದು ಈ ವಚನ ತೋರಿಸಿಕೊಟ್ಟಿತು.”
10 ಫಿಲಿಪ್ ಮತ್ತು ಮೇರಿ ಯೆಹೋವನ ಸೇವೆ ಕಡೆಗೆ ಗಮನ ಹರಿಸಿದರು. ಇದರಿಂದ ಆತನು ಅವರನ್ನು ಅನೇಕ ರೀತಿಯಲ್ಲಿ ಆಶೀರ್ವದಿಸಿದನು. ಅವರು ಬೆತೆಲ್ ಬಿಟ್ಟು ಬಂದ ಸ್ವಲ್ಪ ಸಮಯದಲ್ಲೇ ಪ್ರಗತಿಪರ ಬೈಬಲ್ ಅಧ್ಯಯನಗಳು ಸಿಕ್ಕಿದವು. ಅವರ ಬೈಬಲ್ ವಿದ್ಯಾರ್ಥಿಗಳು ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಅಧ್ಯಯನ ಮಾಡಲು ಬಯಸಿದರು. ಮೇರಿ ಹೇಳುವುದು: “ಅವರೇ ನಮ್ಮ ಆನಂದವಾಗಿದ್ದರು ಮತ್ತು ಎಲ್ಲ ಸರಿಹೋಗುತ್ತೆ ಎಂದು ಯೆಹೋವನು ಈ ರೀತಿ ಹೇಳುತ್ತಿದ್ದಾನೆ ಎಂದು ನಮಗನಿಸಿತು.”
ಯೆಹೋವನು ಆಶೀರ್ವದಿಸುವುದಕ್ಕೆ ದಾರಿ ಮಾಡಿಕೊಡಿ
11, 12. (ಎ) ಯೆಹೋವನು ತನ್ನನ್ನು ಆಶೀರ್ವದಿಸಲು ಯೋಸೇಫನು ಹೇಗೆ ದಾರಿ ಮಾಡಿಕೊಟ್ಟನು? (ಬಿ) ಯೆಹೋವನು ಯೋಸೇಫನಿಗೆ ಯಾವ ಪ್ರತಿಫಲ ಕೊಟ್ಟನು?
11 ಜೀವನದಲ್ಲಿ ದಿಢೀರನೆ ಬದಲಾವಣೆಗಳು ಆದಾಗ ನಮ್ಮ ಸಮಸ್ಯೆಗಳ ಬಗ್ಗೆಯೇ ಮೂರು ಹೊತ್ತು ಯೋಚನೆ ಮಾಡುತ್ತಿರುತ್ತೇವೆ. ಯೋಸೇಫನು ಹೀಗೇ ಯೋಚನೆ ಮಾಡುತ್ತಾ ಇರಬಹುದಿತ್ತು. ಆದರೆ ತನ್ನ ಸನ್ನಿವೇಶದಲ್ಲಿ ಏನು ಮಾಡಲಿಕ್ಕೆ ಆಗುತ್ತದೋ ಅದನ್ನು ಚೆನ್ನಾಗಿ ಮಾಡಿದನು. ಪೋಟೀಫರನ ಹತ್ತಿರ ಎಷ್ಟು ಕಷ್ಟಪಟ್ಟು ದುಡಿದಿದ್ದನೋ ಅಷ್ಟೇ ಕಷ್ಟಪಟ್ಟು ಸೆರೆಮನೆಯಲ್ಲೂ ಕೆಲಸ ಮಾಡಿದನು. ಸೆರೆಮನೆಯ ಯಜಮಾನ ಹೇಳಿದ್ದನ್ನೆಲ್ಲಾ ಚಾಚೂತಪ್ಪದೆ ಮಾಡುತ್ತಿದ್ದನು.—ಆದಿ. 39:21-23.
12 ಒಂದಿನ ಇಬ್ಬರು ಸೆರೆವಾಸಿಗಳನ್ನು ನೋಡಿಕೊಳ್ಳುವ ನೇಮಕ ಯೋಸೇಫನಿಗೆ ಸಿಕ್ಕಿತು. ಅವರಿಬ್ಬರು ಫರೋಹನ ಆಸ್ಥಾನದಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿಗಳು. ಯೋಸೇಫನು ಅವರಿಬ್ಬರಿಗೆ ತುಂಬ ದಯೆ ತೋರಿಸಿದನು. ಆಗ ಆ ಪುರುಷರು ತಮ್ಮ ಚಿಂತೆಗಳನ್ನು ಮತ್ತು ಹಿಂದಿನ ರಾತ್ರಿ ತಮಗೆ ಬಿದ್ದಂಥ ವಿಚಿತ್ರ ಕನಸುಗಳನ್ನು ಅವನ ಹತ್ತಿರ ಹೇಳಿಕೊಂಡರು. (ಆದಿ. 40:5-8) ಈ ಮಾತುಕತೆ ತನಗೆ ಒಂದಿನ ಬಿಡುಗಡೆ ತರುತ್ತೆ ಎಂದು ಯೋಸೇಫ ನೆನಸಿರಲಿಕ್ಕಿಲ್ಲ. ಎರಡು ವರ್ಷಗಳ ನಂತರ ಅವನನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ಅದೇ ದಿನ ಅವನಿಗೆ ಇಡೀ ಐಗುಪ್ತದಲ್ಲಿ ಫರೋಹನ ನಂತರದ ಸ್ಥಾನ ಸಿಕ್ಕಿತು!—ಆದಿ. 41:1, 14-16, 39-41.
13. ನಮ್ಮ ಸನ್ನಿವೇಶ ಏನೇ ಆಗಿದ್ದರೂ ಯೆಹೋವನ ಆಶೀರ್ವಾದ ಪಡೆಯುವುದಕ್ಕೆ ನಾವೇನು ಮಾಡಬೇಕು?
13 ಯೋಸೇಫನಂತೆ ನಾವು ಸಹ ನಮ್ಮ ಕೈಮೀರಿದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆಗ ನಾವು ತಾಳ್ಮೆಯಿಂದ ಇರಬೇಕು, ನಮ್ಮಿಂದ ಏನು ಮಾಡಕ್ಕಾಗುತ್ತೋ ಅದನ್ನು ಚೆನ್ನಾಗಿ ಮಾಡಬೇಕು. ಆಗ ಯೆಹೋವನ ಆಶೀರ್ವಾದ ಸಿಗುತ್ತದೆ. (ಕೀರ್ತ. 37:5) ಕೆಲವೊಮ್ಮೆ ಗಲಿಬಿಲಿ, ಚಿಂತೆಯಿಂದ ನಮಗೆ ದಿಕ್ಕು ಕಾಣದೆ ಹೋಗುತ್ತದೆ. ಆದರೆ ಯೆಹೋವನು ನಮ್ಮ ಕೈಬಿಡಲ್ಲ. (2 ಕೊರಿಂ. 4:8) ನಾವು ಆತನ ಸೇವೆಗೆ ಮೊದಲ ಸ್ಥಾನ ಕೊಟ್ಟರಂತೂ ಆತನು ನಮ್ಮ ಜೊತೆ ಯಾವಾಗಲೂ ಇರುತ್ತಾನೆ.
ಸೇವೆಗೆ ಗಮನ ಕೊಡಿ
14-16. ಸೌವಾರ್ತಿಕನಾದ ಫಿಲಿಪ್ಪನು ತನ್ನ ಜೀವನದಲ್ಲಿ ಬದಲಾವಣೆಗಳು ಆದಾಗಲೂ ಹೇಗೆ ಸೇವೆಗೆ ಗಮನ ಕೊಟ್ಟನು?
14 ಜೀವನದಲ್ಲಿ ಎಷ್ಟೇ ಏರುಪೇರುಗಳಾದರೂ ಸೇವೆ ಕಡೆಗೆ ಗಮನ ಕೊಟ್ಟವರಲ್ಲಿ ಸೌವಾರ್ತಿಕನಾದ ಫಿಲಿಪ್ಪನು ಒಂದು ಅತ್ಯುತ್ತಮ ಮಾದರಿಯಾಗಿದ್ದಾನೆ. ಯೆರೂಸಲೇಮಿನಲ್ಲಿದ್ದಾಗ ಅವನಿಗೆ ಸಿಕ್ಕಿದ ಹೊಸ ನೇಮಕವನ್ನು ಸಂತೋಷವಾಗಿ ಮಾಡಿಕೊಂಡು ಹೋಗುತ್ತಿದ್ದ. (ಅ. ಕಾ. 6:1-6) ಆದರೆ ಎಲ್ಲ ತಲೆಕೆಳಗಾಯಿತು. ಸ್ತೆಫನನನ್ನು ಕೊಲ್ಲಲಾಯಿತು. b ಆಮೇಲೆ ಕ್ರೈಸ್ತರ ವಿರುದ್ಧ ಹಿಂಸೆಯ ಅಲೆ ಎದ್ದಿತು. ಇದರಿಂದಾಗಿ ಅವರು ಯೆರೂಸಲೇಮಿನಿಂದ ಓಡಿಹೋದರು. ಆದರೆ ಫಿಲಿಪ್ಪನು ಯೆಹೋವನ ಸೇವೆಯಲ್ಲಿ ನಿರತನಾಗಿರಬೇಕು ಎಂದು ಬಯಸಿದ್ದರಿಂದ ಸಮಾರ್ಯದ ಪಟ್ಟಣಕ್ಕೆ ಹೋದನು. ಅಲ್ಲಿದ್ದ ಜನರಿಗೆ ಸುವಾರ್ತೆ ಸಾರುವ ಅಗತ್ಯವಿತ್ತು.—ಮತ್ತಾ. 10:5; ಅ. ಕಾ. 8:1, 5.
15 ದೇವರಾತ್ಮ ಎಲ್ಲಿ ನಡಿಸಿದರೂ ಅಲ್ಲಿ ಹೋಗಲು ಫಿಲಿಪ್ಪನು ಸಿದ್ಧನಿದ್ದನು. ಹಾಗಾಗಿ ಎಲ್ಲಿ ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುವ ಅಗತ್ಯವಿತ್ತೋ ಆ ಸ್ಥಳಗಳಿಗೆ ಹೋಗಿ ಸಾರಲು ಯೆಹೋವನು ಅವನನ್ನು ಉಪಯೋಗಿಸಿದನು. ಅನೇಕ ಯೆಹೂದ್ಯರು ಸಮಾರ್ಯದವರನ್ನು ಕೀಳಾಗಿ ನೋಡುತ್ತಿದ್ದರು ಮತ್ತು ಅವರ ಹತ್ತಿರ ಕೆಟ್ಟದಾಗಿ ನಡಕೊಳ್ಳುತ್ತಿದ್ದರು. ಆದರೆ ಫಿಲಿಪ್ಪನು ಪೂರ್ವಗ್ರಹ ತೋರಿಸಲಿಲ್ಲ. ಸಮಾರ್ಯದವರಿಗೆ ಉತ್ಸಾಹದಿಂದ ಸುವಾರ್ತೆ ಸಾರಿದನು. ಆ ಜನರೆಲ್ಲರೂ ಗುಂಪಾಗಿ ಕೂಡಿ ಬಂದು ಅವನ ಮಾತಿಗೆ ಕಿವಿಗೊಟ್ಟರು.—ಅ. ಕಾ. 8:6-8.
16 ಮುಂದೆ ದೇವರಾತ್ಮ ಫಿಲಿಪ್ಪನನ್ನು ಅಷ್ಡೋದ್ ಮತ್ತು ಕೈಸರೈಯದಲ್ಲಿ ಸುವಾರ್ತೆ ಸಾರಲು ಮಾರ್ಗದರ್ಶಿಸಿತು. ಆ ಸ್ಥಳಗಳಲ್ಲಿದ್ದ ಅನೇಕರು ಅನ್ಯಜನಾಂಗದವರಾಗಿದ್ದರು. (ಅ. ಕಾ. 8:39, 40) ನಂತರ ಅವನ ಜೀವನದಲ್ಲಿ ಇನ್ನೊಂದು ಬದಲಾವಣೆ ಆಯಿತು. ಅವನು ಅಲ್ಲೇ ಮನೆ ಮಾಡಿಕೊಂಡನು, ಮಕ್ಕಳೂ ಹುಟ್ಟಿದರು. ಇಷ್ಟೆಲ್ಲ ಬದಲಾವಣೆ ಆದರೂ ಫಿಲಿಪ್ಪನಂತೂ ಸೇವೆಯಲ್ಲಿ ನಿರತನಾಗಿದ್ದನು. ಹಾಗಾಗಿ ಯೆಹೋವನು ಅವನನ್ನು ಮತ್ತು ಅವನ ಕುಟುಂಬವನ್ನು ಹೇರಳವಾಗಿ ಆಶೀರ್ವದಿಸಿದನು.—ಅ. ಕಾ. 21:8, 9.
17, 18. ನಮ್ಮ ಜೀವನದಲ್ಲಿ ಬದಲಾವಣೆಗಳಾದಾಗ ಸೇವೆಗೆ ಗಮನ ಕೊಟ್ಟರೆ ಯಾವ ಪ್ರಯೋಜನ ಸಿಗುತ್ತದೆ?
17 ಸನ್ನಿವೇಶಗಳು ಬದಲಾದಾಗ ಸೇವೆಗೆ ಗಮನ ಕೊಟ್ಟದ್ದರಿಂದ ಸಂತೋಷವಾಗಿರಲು ಮತ್ತು ಒಳ್ಳೇದನ್ನು ಯೋಚಿಸಲು ಸಾಧ್ಯವಾಯಿತು ಎಂದು ಅನೇಕ ಪೂರ್ಣ ಸಮಯದ ಸೇವಕರು ಹೇಳುತ್ತಾರೆ. ಉದಾಹರಣೆಗೆ, ದಕ್ಷಿಣ ಆಫ್ರಿಕದ ದಂಪತಿಯಾದ ಆಸ್‌ಬಾರ್ನ್ ಮತ್ತು ಪೊಲೈಟ್ ಬೆತೆಲ್‌ನಿಂದ ಹೊರ ಬಂದಾಗ ಯಾವುದಾದರೊಂದು ಪಾರ್ಟ್-ಟೈಮ್ ಕೆಲಸ ಮತ್ತು ವಾಸಕ್ಕೆ ಒಂದು ಮನೆ ಸಿಗುವುದು ಸುಲಭ ಅಂತ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಆಸ್‌ಬಾರ್ನ್ ಹೇಳುವುದು: “ನಾವು ಅಂದುಕೊಂಡಷ್ಟು ಬೇಗ ನಮಗೆ ಕೆಲಸ ಸಿಗಲಿಲ್ಲ.” ಪೊಲೈಟ್ ಹೀಗೆ ಹೇಳುತ್ತಾರೆ: “ಮೂರು ತಿಂಗಳು ನಮಗೆ ಕೆಲಸಾನೇ ಸಿಗಲಿಲ್ಲ. ದುಡ್ಡೂ ಇರಲಿಲ್ಲ. ನಿಜವಾಗಲೂ ಅದು ತುಂಬ ಕಷ್ಟದ ಸಮಯವಾಗಿತ್ತು.”
18 ಇಂಥ ಒತ್ತಡಭರಿತ ಸನ್ನಿವೇಶದಲ್ಲಿ ಆಸ್‌ಬಾರ್ನ್ ಮತ್ತು ಪೊಲೈಟ್‌ಗೆ ಯಾವುದು ಸಹಾಯ ಮಾಡಿತು? “ಸಭೆಯವರ ಜೊತೆ ಸುವಾರ್ತೆ ಸಾರಲು ಹೋಗಿದ್ದು ನಮ್ಮ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದಿರಲು, ಒಳ್ಳೇದನ್ನು ಯೋಚಿಸಲು ಸಹಾಯ ಮಾಡಿತು” ಎಂದು ಆಸ್‌ಬಾರ್ನ್ ಹೇಳುತ್ತಾರೆ. ಮನೆಯಲ್ಲಿ ಕೂತು ಸಮಸ್ಯೆ ಬಗ್ಗೆನೇ ಚಿಂತೆ ಮಾಡೋ ಬದಲು ಅವರಿಬ್ಬರು ಸೇವೆಯಲ್ಲಿ ನಿರತರಾದರು. ಇದರಿಂದ ಅವರಿಗೆ ತುಂಬ ಸಂತೋಷ ಸಿಕ್ಕಿತು! “ಎಲ್ಲ ಕಡೆ ಕೆಲಸ ಹುಡುಕಿದ್ವಿ, ಕೊನೆಗೂ ಒಂದು ಕೆಲಸ ಸಿಕ್ಕಿತು” ಎಂದು ಆಸ್‌ಬಾರ್ನ್ ಹೇಳುತ್ತಾರೆ.
ಯೆಹೋವನನ್ನು ಸಂಪೂರ್ಣವಾಗಿ ನಂಬಿ
19-21. (ಎ) ಮನಶ್ಶಾಂತಿ ಕಾಪಾಡಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ? (ಬಿ) ಅನಿರೀಕ್ಷಿತ ಬದಲಾವಣೆಗಳು ಆದಾಗ ಅದಕ್ಕೆ ಹೊಂದಿಕೊಂಡರೆ ಯಾವ ಪ್ರಯೋಜನ ಸಿಗುತ್ತದೆ?
19 ನಾವು ಆಗಲೇ ನೋಡಿದಂತೆ, ನಾವಿರುವ ಸನ್ನಿವೇಶದಲ್ಲಿ ನಮ್ಮಿಂದ ಏನು ಮಾಡಕ್ಕಾಗುತ್ತೋ ಅದನ್ನು ಚೆನ್ನಾಗಿ ಮಾಡಿಕೊಂಡು ಹೋದರೆ ಮತ್ತು ಯೆಹೋವನನ್ನು ಸಂಪೂರ್ಣವಾಗಿ ನಂಬಿದರೆ ಮನಶ್ಶಾಂತಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. (ಮೀಕ 7:7 ಓದಿ.) ಸಮಯ ಕಳೆದ ಹಾಗೆ, ಬದಲಾವಣೆಗಳಿಗೆ ನಾವು ಹೊಂದಿಕೊಂಡಿದ್ದರಿಂದ ಯೆಹೋವನೊಟ್ಟಿಗಿನ ನಮ್ಮ ಸ್ನೇಹ ಬಲವಾಗಿದೆ ಎನ್ನುವುದನ್ನು ಸಹ ಅರ್ಥಮಾಡಿಕೊಳ್ಳುತ್ತೇವೆ. ಪೊಲೈಟ್ ಏನು ಹೇಳುತ್ತಾರೆಂದರೆ, “ಬೆತೆಲಿಂದ ಬಂದ ಮೇಲೆ ಕಷ್ಟದ ಮಧ್ಯೆಯೂ ಯೆಹೋವನನ್ನು ಅವಲಂಬಿಸುವುದು ಹೇಗೆ ಅಂತ ಕಲಿತಿದ್ದೇನೆ. ಯೆಹೋವನೊಟ್ಟಿಗಿರುವ ನನ್ನ ಸಂಬಂಧ ಇನ್ನೂ ಬಲವಾಗಿದೆ.”
20 ಈ ಮುಂಚೆ ತಿಳಿಸಲಾದ ಮೇರಿ ಈಗಲೂ ವಯಸ್ಸಾದ ತಂದೆಯನ್ನು ನೋಡಿಕೊಂಡು ಪಯನೀಯರ್ ಸೇವೆ ಮಾಡುತ್ತಿದ್ದಾರೆ. ಅವರು ಹೇಳುವುದು: “ಚಿಂತೆಗಳು ಬಂದಾಗ ತಕ್ಷಣ ಪ್ರಾರ್ಥನೆ ಮಾಡಬೇಕು, ಆಗ ಮನಸ್ಸಿಗೆ ಸಮಾಧಾನ ಆಗುತ್ತೆ ಅನ್ನೋದನ್ನು ಅರ್ಥಮಾಡಿಕೊಂಡಿದ್ದೇನೆ. ಎಲ್ಲವನ್ನೂ ಯೆಹೋವನ ಕೈಗೆ ಬಿಡುವುದೇ ಒಳ್ಳೇದು ಎನ್ನುವ ದೊಡ್ಡ ಪಾಠಾನ ಕಲಿತಿದ್ದೇನೆ. ಯಾಕೆಂದರೆ ಮುಂದೆ ಇದರ ಅವಶ್ಯಕತೆ ತುಂಬಾನೇ ಇದೆ.”
21 ಜೀವನದಲ್ಲಾದ ಬದಲಾವಣೆಗಳು ತಾವು ನೆನಸಿರದಂಥ ವಿಧದಲ್ಲಿ ನಂಬಿಕೆಯನ್ನು ಪರೀಕ್ಷೆ ಮಾಡಿದವು ಎಂದು ಲೊಯಿಡ್ ಮತ್ತು ಅಲಿಗ್ಸಾಂಡ್ರ ಹೇಳುತ್ತಾರೆ. ಆದರೆ ಆ ಪರೀಕ್ಷೆಗಳೇ ತಮಗೆ ತುಂಬ ಸಹಾಯ ಮಾಡಿದ್ದು ಎಂದು ಅವರು ಗ್ರಹಿಸಿದರು. ಈಗ ಅವರಿಗೆ ಸಮಸ್ಯೆ ಬಂದರೂ ಅದನ್ನು ಸಹಿಸಿಕೊಂಡು ಹೋಗುವಷ್ಟು ತಮ್ಮ ನಂಬಿಕೆ ಬಲವಾಗಿದೆ ಮತ್ತು ತಾವು ಉತ್ತಮ ವ್ಯಕ್ತಿಗಳಾಗಿದ್ದೇವೆ ಎಂದು ಅವರಿಬ್ಬರು ಹೇಳುತ್ತಾರೆ.
22. ನಮ್ಮ ಸನ್ನಿವೇಶದಲ್ಲಿ ನಮ್ಮಿಂದ ಏನಾಗುತ್ತೋ ಅದನ್ನು ಚೆನ್ನಾಗಿ ಮಾಡಿದರೆ ಯಾವ ವಿಷಯದಲ್ಲಿ ಖಾತ್ರಿಯಿಂದ ಇರಬಹುದು?
22 ಈ ವ್ಯವಸ್ಥೆಯಲ್ಲಿ ನಮ್ಮ ಸನ್ನಿವೇಶಗಳು ದಿಢೀರನೆ ಬದಲಾಗಬಹುದು. ಯೆಹೋವನ ಸೇವೆಯಲ್ಲಿ ನಮ್ಮ ನೇಮಕಗಳು ಬದಲಾಗಬಹುದು, ಕಾಯಿಲೆ ಬರಬಹುದು ಅಥವಾ ನಮ್ಮ ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಏನೇ ಆದರೂ ಯೆಹೋವನು ನಿಮ್ಮ ಬಗ್ಗೆ ಚಿಂತಿಸುತ್ತಾನೆ ಮತ್ತು ಸರಿಯಾದ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತಾನೆ ಎನ್ನುವ ಭರವಸೆ ನಿಮಗಿರಲಿ. (ಇಬ್ರಿ. 4:16; 1 ಪೇತ್ರ 5:6, 7) ಆದರೆ ಆ ಭರವಸೆ ನಿಜ ಆಗಬೇಕೆಂದರೆ ನಿಮಗಿರುವ ಸನ್ನಿವೇಶದಲ್ಲಿ ನಿಮ್ಮಿಂದ ಏನಾಗುತ್ತೋ ಅದನ್ನು ಚೆನ್ನಾಗಿ ಮಾಡಿಕೊಂಡು ಹೋಗಿ. ತಂದೆಯಾದ ಯೆಹೋವನಿಗೆ ಪ್ರಾರ್ಥನೆ ಮಾಡಿ ಮತ್ತು ಪೂರ್ತಿಯಾಗಿ ಆತನನ್ನು ಅವಲಂಬಿಸಲು ಕಲಿಯಿರಿ. ಹೀಗೆ ಮಾಡಿದರೆ ಸನ್ನಿವೇಶಗಳು ಬದಲಾದಾಗಲೂ ಯೆಹೋವನಿಂದ ಸಿಗುವ ಸಮಾಧಾನವನ್ನು ನೀವು ಅನುಭವಿಸುತ್ತೀರಿ.
a ಅನೇಕ ವರ್ಷಗಳಾದ ಮೇಲೆ ಯೋಸೇಫನು ತನ್ನ ಮೊದಲ ಮಗ ಹುಟ್ಟಿದಾಗ ಅವನಿಗೆ ಮನಸ್ಸೆ ಎಂದು ಹೆಸರಿಟ್ಟನು. (ಮನಸ್ಸೆ ಅಂದರೆ “ಮರಸುವವನು”) ಯಾಕೆಂದರೆ ಅವನು ಹೇಳಿದ್ದು: ‘ನನ್ನ ಎಲ್ಲಾ ಕಷ್ಟವನ್ನು ಮರೆತುಬಿಡುವಂತೆ ದೇವರು ಮಾಡಿದ್ದಾನೆ.’ ಯೆಹೋವನು ತನ್ನನ್ನು ಸಂತೈಸಲು ಮಗನನ್ನು ಒಂದು ಉಡುಗೊರೆಯಾಗಿ ಕೊಟ್ಟಿದ್ದಾನೆ ಅಂತ ಯೋಸೇಫನು ಅರ್ಥಮಾಡಿಕೊಂಡನು.—ಆದಿ. 41:51, ಪಾದಟಿಪ್ಪಣಿ.
b ಈ ಸಂಚಿಕೆಯಲ್ಲಿರುವ “ನಿಮಗೆ ಗೊತ್ತಿತ್ತಾ?” ಎಂಬ ಲೇಖನ ನೋಡಿ.