ಸತ್ಯವನ್ನು ಕಲಿಸಿ
‘ಯೆಹೋವನೇ, ನಿನ್ನ ವಾಕ್ಯದ ಸಾರಾಂಶವು ಸತ್ಯವೇ.’—ಕೀರ್ತ. 119:159, 160.
1, 2. (ಎ) ಯೇಸು ತನ್ನ ಜೀವನದಲ್ಲಿ ಯಾವ ಕೆಲಸಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟನು? ಯಾಕೆ? (ಬಿ) “ದೇವರ ಜೊತೆಕೆಲಸಗಾರರಾಗಿ” ಯಶಸ್ಸನ್ನು ಪಡೆಯಬೇಕಾದರೆ ನಾವೇನು ಮಾಡಬೇಕು?
ಯೇಸು ಕ್ರಿಸ್ತನು ಒಬ್ಬ ಬಡಗಿಯಾಗಿದ್ದನು, ನಂತರ ಬೋಧಕನಾದನು. (ಮಾರ್ಕ 6:3; ಯೋಹಾ. 13:13) ಎರಡು ಕೆಲಸವನ್ನೂ ತುಂಬ ಚೆನ್ನಾಗಿ ಮಾಡಲು ಕಲಿತಿದ್ದನು. ಒಬ್ಬ ಬಡಗಿಯಾಗಿ ತನ್ನ ಹತ್ತಿರ ಇದ್ದ ಸಲಕರಣೆಗಳನ್ನು ಬಳಸಿ ಮರದಿಂದ ಉಪಯೋಗಕ್ಕೆ ಬರುವ ವಸ್ತುಗಳನ್ನು ತಯಾರಿಸಲು ಕಲಿತನು. ಒಬ್ಬ ಬೋಧಕನಾಗಿ ಬೈಬಲಿನ ಬಗ್ಗೆ ತನಗಿದ್ದ ಆಳವಾದ ಜ್ಞಾನವನ್ನು ಉಪಯೋಗಿಸಿ ದೇವರ ವಾಕ್ಯದಲ್ಲಿರುವ ಸತ್ಯವನ್ನು ಸಾಮಾನ್ಯ ಜನರಿಗೆ ಕಲಿಸಿದನು. (ಮತ್ತಾ. 7:28; ಲೂಕ 24:32, 45) 30 ವರ್ಷ ಆದಾಗ ಯೇಸು ತನ್ನ ಬಡಗಿ ಕೆಲಸ ಬಿಟ್ಟು ಬೋಧಕನಾದನು. ಯಾಕೆಂದರೆ ಇರುವುದರಲ್ಲೇ ತುಂಬ ಪ್ರಾಮುಖ್ಯವಾದ ಕೆಲಸ ಇದು ಎಂದು ಆತನಿಗೆ ಗೊತ್ತಿತ್ತು. ದೇವರ ರಾಜ್ಯದ ಕುರಿತು ಸುವಾರ್ತೆ ಸಾರುವುದೇ ತನ್ನನ್ನು ದೇವರು ಭೂಮಿಗೆ ಕಳುಹಿಸಲು ಒಂದು ಕಾರಣ ಎಂದು ಯೇಸು ಹೇಳಿದನು. (ಮತ್ತಾ. 20:28; ಲೂಕ 3:23; 4:43) ಸುವಾರ್ತೆ ಸಾರುವುದರ ಮೇಲೆ ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದನು. ಬೇರೆಯವರೂ ಇದನ್ನೇ ಮಾಡಬೇಕೆಂದು ಪ್ರೋತ್ಸಾಹಿಸಿದನು.—ಮತ್ತಾ. 9:35-38.
2 ನಮ್ಮಲ್ಲಿ ಹೆಚ್ಚಿನವರು ಬಡಗಿಗಳಲ್ಲ. ಆದರೆ ನಾವೆಲ್ಲರೂ ಬೋಧಕರು. ಬೇರೆಯವರಿಗೆ ಸುವಾರ್ತೆ ಕುರಿತು ಕಲಿಸುತ್ತೇವೆ. ಈ ಕೆಲಸ ತುಂಬ ಮುಖ್ಯವಾಗಿರುವುದರಿಂದ ದೇವರು ಸಹ ಇದರಲ್ಲಿ ಭಾಗವಹಿಸುತ್ತಾನೆ. ಆದ್ದರಿಂದ ನಮ್ಮನ್ನು ‘ದೇವರ ಜೊತೆಕೆಲಸಗಾರರು’ ಎಂದು ಕರೆಯಲಾಗಿದೆ. (1 ಕೊರಿಂ. 3:9; 2 ಕೊರಿಂ. 6:4) ಒಬ್ಬ ಕೀರ್ತನೆಗಾರನು ಹೀಗೆ ಬರೆದಿದ್ದಾನೆ: “ನಿನ್ನ ವಾಕ್ಯದ ಸಾರಾಂಶವು ಸತ್ಯವೇ.” (ಕೀರ್ತ. 119:159, 160) ನಾವು ಈ ಮಾತನ್ನು ಒಪ್ಪುತ್ತೇವೆ. ಯೆಹೋವನ ವಾಕ್ಯವೇ ಸತ್ಯ. ಆದ್ದರಿಂದಲೇ ನಾವು ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿದ್ದೇವಾ’ ಎಂದು ಖಚಿತಪಡಿಸಿಕೊಳ್ಳಬೇಕು. (2 ತಿಮೊಥೆಯ 2:15 ಓದಿ.) ನಾವು ಬೈಬಲನ್ನು ಚೆನ್ನಾಗಿ ಬಳಸಲು ಕಲಿಯುತ್ತಾ ಇರಬೇಕು. ಯಾಕೆಂದರೆ ಯೆಹೋವ, ಯೇಸು ಮತ್ತು ರಾಜ್ಯದ ಬಗ್ಗೆ ಸಾರಲು ಬೈಬಲೇ ಮುಖ್ಯ ಸಲಕರಣೆಯಾಗಿದೆ. ನಾವು ಸೇವೆಯಲ್ಲಿ ಯಶಸ್ಸನ್ನು ಪಡೆಯಲು ಯೆಹೋವನ ಸಂಘಟನೆ ನಮಗೆ ಬೇರೆ ಸಲಕರಣೆಗಳನ್ನೂ ಕೊಟ್ಟಿದೆ. ನಾವು ಈ ಸಲಕರಣೆಗಳನ್ನೂ ಹೇಗೆ ಉಪಯೋಗಿಸುವುದು ಎಂದು ಕಲಿಯಬೇಕು. ಈ ಸಲಕರಣೆಗಳು ನಮ್ಮ ಬೋಧನಾ ಸಲಕರಣೆಗಳ ಭಾಗವಾಗಿವೆ.
3. (ಎ) ಸೇವೆಯಲ್ಲಿ ನಾವು ಯಾವುದಕ್ಕೆ ಗಮನ ಕೊಡಬೇಕು? (ಬಿ) ನಾವು ಯಾರಿಗಾಗಿ ಹುಡುಕಬೇಕೆಂದು ಅಪೊಸ್ತಲರ ಕಾರ್ಯಗಳು 13:48 ಹೇಳುತ್ತದೆ?
3 ನಾವು ಈ ಸಲಕರಣೆಗಳನ್ನು ‘ಸಾರುವ ಸಲಕರಣೆ’ ಎಂದು ಕರೆಯದೆ ‘ಬೋಧನಾ ಸಲಕರಣೆ’ ಎಂದು ಯಾಕೆ ಕರೆಯುತ್ತೇವೆ ಎಂದು ನೀವು ಯೋಚಿಸಿರಬಹುದು. “ಸಾರುವುದು” ಅಂದರೆ ಒಂದು ಸಂದೇಶವನ್ನು ತಿಳಿಸುವುದು. ಆದರೆ “ಬೋಧಿಸುವುದು” ಅಂದರೆ ಆ ಸಂದೇಶವನ್ನು ವಿವರಿಸುವುದು. ಇದರಿಂದಾಗಿ ಒಬ್ಬ ವ್ಯಕ್ತಿ ಕೇಳಿಸಿಕೊಂಡ ಸಂದೇಶವನ್ನು ಅರ್ಥಮಾಡಿಕೊಂಡು ಕ್ರಿಯೆಗೈಯಲು ಸಾಧ್ಯವಾಗುತ್ತದೆ. ಈ ಲೋಕಕ್ಕೆ ಹೆಚ್ಚು ಸಮಯ ಉಳಿದಿಲ್ಲ. ಹಾಗಾಗಿ ನಾವು ಬೈಬಲ್ ಅಧ್ಯಯನಗಳನ್ನು ಆರಂಭಿಸಿ ಜನರಿಗೆ ಸತ್ಯ ಕಲಿಸಿ ಶಿಷ್ಯರನ್ನಾಗಿ ಮಾಡುವುದಕ್ಕೆ ಗಮನ ಕೊಡಬೇಕು. ಹಾಗಾದರೆ ನಾವು “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ವ್ಯಕ್ತಿಗಳಿಗಾಗಿ ಶ್ರದ್ಧೆಯಿಂದ ಹುಡುಕಬೇಕು. ಅಂಥವರು ಸಿಕ್ಕಿದಾಗ ಅವರು ಯೆಹೋವನ ಸೇವೆಯನ್ನು ಆರಂಭಿಸಲು ಅವರಿಗೆ ಬೇಕಾದ ಸಹಾಯವನ್ನು ಕೊಡಬೇಕು.—ಅ. ಕಾರ್ಯಗಳು 13:44-48 ಓದಿ.
4. “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ವ್ಯಕ್ತಿಗಳನ್ನು ನಾವು ಹೇಗೆ ಕಂಡುಹಿಡಿಯಬಹುದು?
4 “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ವ್ಯಕ್ತಿಗಳನ್ನು ನಾವು ಹೇಗೆ ಕಂಡುಹಿಡಿಯಬಹುದು? ಮೊದಲನೇ ಶತಮಾನದಲ್ಲಿದ್ದ ಕ್ರೈಸ್ತರು ಸಾರುವ ಕೆಲಸದ ಮೂಲಕ ಇಂಥ ವ್ಯಕ್ತಿಗಳನ್ನು ಕಂಡುಹಿಡಿದರು. “ನೀವು ಯಾವುದೇ ಊರನ್ನು ಅಥವಾ ಹಳ್ಳಿಯನ್ನು ಪ್ರವೇಶಿಸಿದಾಗ, ಅಲ್ಲಿ ಯೋಗ್ಯರು ಯಾರೆಂದು ಹುಡುಕಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 10:11) ಇಂದು ಸಹ ನಾವು ಅದನ್ನೇ ಮಾಡಬೇಕು. ಜನರಿಗೆ ನಿಜವಾದ ಆಸಕ್ತಿ ಇಲ್ಲ ಅಂದರೆ, ದರ್ಪ ತೋರಿಸಿದರೆ, ಆಧ್ಯಾತ್ಮಿಕತೆ ಇಲ್ಲ ಅಂದರೆ ಅವರು ಸುವಾರ್ತೆಗೆ ಕಿವಿಗೊಡುವುದಿಲ್ಲ. ಆದರೆ ನಾವು ನಿಜವಾದ ಆಸಕ್ತಿ ಇರುವ, ದೀನತೆ ಇರುವ, ಸತ್ಯವನ್ನು ಕಲಿಯಲು ಮನಸ್ಸಿರುವ ವ್ಯಕ್ತಿಗಳಿಗಾಗಿ ಹುಡುಕುತ್ತಿದ್ದೇವೆ. ಈ ಕೆಲಸವನ್ನು ಯೇಸು ಮಾಡಿದ ಬಡಗಿ ಕೆಲಸಕ್ಕೆ ಹೋಲಿಸಬಹುದು. ಆತನು ಒಂದು ಮೇಜನ್ನೋ ಬಾಗಿಲನ್ನೋ ನೊಗವನ್ನೋ ಅಥವಾ ಬೇರಾವುದೋ ವಸ್ತುವನ್ನು ಮಾಡುವ ಮುಂಚೆ ಅದನ್ನು ಮಾಡಲು ಸೂಕ್ತವಾದ ಮರಕ್ಕಾಗಿ ಹುಡುಕಬೇಕಿತ್ತು. ಅಂಥ ಮರ ಸಿಕ್ಕಿದಾಗ ತನ್ನ ಸಲಕರಣೆ ಪೆಟ್ಟಿಗೆಯನ್ನು ತಂದು ತನ್ನ ಕೌಶಲಗಳನ್ನು ಉಪಯೋಗಿಸುತ್ತಾ ಬೇಕಾದ ವಸ್ತುವನ್ನು ಮಾಡುತ್ತಿದ್ದನು. ಅದೇ ರೀತಿ ನಾವು ಸಹ ಮೊದಲು ಪ್ರಾಮಾಣಿಕ ವ್ಯಕ್ತಿಗಳನ್ನು ಕಂಡುಹಿಡಿಯಬೇಕು. ಅಂಥವರು ಸಿಕ್ಕಿದಾಗ ನಮ್ಮ ಹತ್ತಿರ ಇರುವ ಸಲಕರಣೆಗಳನ್ನು ಮತ್ತು ಕೌಶಲಗಳನ್ನು ಉಪಯೋಗಿಸುತ್ತಾ ಅವರನ್ನು ಶಿಷ್ಯರನ್ನಾಗಿ ಮಾಡಬೇಕು.—ಮತ್ತಾ. 28:19, 20.
5. ನಮ್ಮ ಬೋಧನಾ ಸಲಕರಣೆಗಳ ಬಗ್ಗೆ ನಾವು ಏನು ತಿಳಿದುಕೊಳ್ಳಬೇಕು? ದೃಷ್ಟಾಂತಿಸಿ. (ಲೇಖನದ ಆರಂಭದ ಚಿತ್ರಗಳನ್ನು ನೋಡಿ.)
5 ಒಂದು ಸಲಕರಣಾ ಪೆಟ್ಟಿಗೆಯಲ್ಲಿರುವ ಒಂದೊಂದು ಸಲಕರಣೆಯನ್ನೂ ಒಂದೊಂದು ಉದ್ದೇಶಕ್ಕೆ ಬಳಸಲಾಗುತ್ತದೆ. ಉದಾಹರಣೆಗೆ, ಒಬ್ಬ ಬಡಗಿಯಾಗಿ ಯೇಸು ಯಾವೆಲ್ಲಾ ಸಲಕರಣೆಗಳನ್ನು ಉಪಯೋಗಿಸಿರಬಹುದೆಂದು ಯೋಚಿಸಿ. a ಅಳತೆ ಮಾಡಲು, ಗುರುತು ಹಾಕಲು, ಕತ್ತರಿಸಲು, ತೂತು ಮಾಡಲು, ಆಕಾರ ಕೊಡಲು ಆತನಿಗೆ ಸಲಕರಣೆಗಳು ಬೇಕಾಗಿತ್ತು. ಮರದ ತುಂಡುಗಳನ್ನು ಸಮ ಮಾಡಿ ಒಟ್ಟಿಗೆ ಜೋಡಿಸಲು ಸಲಕರಣೆಗಳು ಬೇಕಾಗಿತ್ತು. ಅದೇ ರೀತಿ ನಮ್ಮ ಬೋಧನಾ ಕೆಲಸದಲ್ಲಿ ನಾವು ಉಪಯೋಗಿಸುವ ಒಂದೊಂದು ಸಲಕರಣೆಗೂ ಒಂದೊಂದು ಉದ್ದೇಶವಿದೆ. ಈ ಪ್ರಾಮುಖ್ಯ ಸಲಕರಣೆಗಳನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
ನಮ್ಮನ್ನು ಪರಿಚಯಿಸುವ ಸಲಕರಣೆಗಳು
6, 7. (ಎ) ಕಾಂಟ್ಯಾಕ್ಟ್ ಕಾರ್ಡ್ ಅನ್ನು ನೀವು ಹೇಗೆ ಉಪಯೋಗಿಸಿದ್ದೀರಿ? (ಬಿ) ಸಭಾ ಕೂಟಗಳ ಆಮಂತ್ರಣ ಪತ್ರವನ್ನು ನಾವು ಯಾಕೆ ಉಪಯೋಗಿಸುತ್ತೇವೆ?
6 ಕಾಂಟ್ಯಾಕ್ಟ್ ಕಾರ್ಡ್. ಇದರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇದರ ಮೂಲಕ ನಾವು ಯಾರು ಎಂದು ಜನರು ತಿಳುಕೊಳ್ಳುತ್ತಾರೆ. ನಮ್ಮ ವೆಬ್‌ಸೈಟನ್ನು ನೋಡಲು ಇದು ಪ್ರೋತ್ಸಾಹಿಸುತ್ತದೆ. ವೆಬ್‌ಸೈಟ್‌ನಲ್ಲಿ ಜನರು ನಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು, ಒಂದು ಬೈಬಲ್ ಅಧ್ಯಯನ ಬೇಕೆಂದು ವಿನಂತಿಸಬಹುದು. ಇದುವರೆಗೆ 4 ಲಕ್ಷ ಜನರು ನಮ್ಮ ವೆಬ್‌ಸೈಟ್‌ನಲ್ಲಿ ಒಂದು ಬೈಬಲ್ ಅಧ್ಯಯನಕ್ಕೆ ವಿನಂತಿಸಿದ್ದಾರೆ. ಈ ರೀತಿ ನೂರಾರು ವಿನಂತಿಗಳು ಪ್ರತಿ ದಿನ ಬರುತ್ತವೆ! ನೀವು ನಿಮ್ಮ ಹತ್ತಿರ ಕೆಲವು ಕಾಂಟ್ಯಾಕ್ಟ್ ಕಾರ್ಡ್‌ಗಳನ್ನು ಯಾವಾಗಲೂ ಇಟ್ಟುಕೊಂಡರೆ, ಇಡೀ ದಿನ ನಿಮಗೆ ಸಿಗುವ ಬೇರೆಬೇರೆ ವ್ಯಕ್ತಿಗಳಿಗೆ ಅದನ್ನು ಕೊಡಬಹುದು.
7 ಆಮಂತ್ರಣ ಪತ್ರ. ಕೂಟದ ಆಮಂತ್ರಣ ಪತ್ರದಲ್ಲಿ ಹೀಗೆ ಹಾಕಲಾಗಿದೆ: “ಬೈಬಲ್ ಕಲಿಯಲು ಯೆಹೋವನ ಸಾಕ್ಷಿಗಳು ನಿಮ್ಮನ್ನು ಆಮಂತ್ರಿಸುತ್ತಾರೆ.” ಅವರು ಬೈಬಲ್ ಬಗ್ಗೆ “ಕೂಟಗಳಲ್ಲಿ” ಅಥವಾ ತಮಗೆ “ಅನುಕೂಲವಾದ ಸ್ಥಳದಲ್ಲಿ” ಕಲಿಯಬಹುದು ಎಂದು ಹಾಕಲಾಗಿದೆ. ನಾವು ಯಾರು ಎಂದು ಜನರು ಈ ಆಮಂತ್ರಣ ಪತ್ರದ ಮೂಲಕ ತಿಳಿದುಕೊಳ್ಳಬಹುದು. ‘ದೇವರ ವಾಕ್ಯವನ್ನು ಕೇಳಿಸಿಕೊಳ್ಳಲು’ ಬಯಸುವವರು ನಮ್ಮೊಂದಿಗೆ ಬೈಬಲ್ ಅಧ್ಯಯನ ಮಾಡಲು ಅದರಲ್ಲಿ ಪ್ರೋತ್ಸಾಹ ಇದೆ. (ಲೂಕ 11:28) ಜನರು ಬೈಬಲ್ ಅಧ್ಯಯನ ಮಾಡಲು ಒಪ್ಪಿದರೂ ಒಪ್ಪದಿದ್ದರೂ ಕೂಟಗಳಿಗೆ ಹಾಜರಾಗಬಹುದು. ಅವರು ಕೂಟಗಳಿಗೆ ಬಂದರೆ ಬೈಬಲಿನ ಬಗ್ಗೆ ಎಷ್ಟೊಂದು ಕಲಿಯಬಹುದು ಎಂದು ಸ್ವತಃ ನೋಡಿ ತಿಳುಕೊಳ್ಳುತ್ತಾರೆ.
8. ಜನರು ಒಂದೇ ಒಂದು ಸಾರಿಯಾದರೂ ನಮ್ಮ ಕೂಟಕ್ಕೆ ಬರುವುದು ಯಾಕೆ ಪ್ರಾಮುಖ್ಯ? ಒಂದು ಉದಾಹರಣೆ ಕೊಡಿ.
8 ಜನರು ಒಂದೇ ಒಂದು ಸಾರಿಯಾದರೂ ನಮ್ಮ ಕೂಟಕ್ಕೆ ಬರುವಂತೆ ಆಮಂತ್ರಿಸುವುದು ಪ್ರಾಮುಖ್ಯ. ಯಾಕೆ? ಅವರು ಕೂಟಕ್ಕೆ ಬಂದರೆ, ಯೆಹೋವನ ಸಾಕ್ಷಿಗಳು ಬೈಬಲಿನಿಂದ ಸತ್ಯ ಕಲಿಸುತ್ತಾರೆ ಮತ್ತು ದೇವರ ಬಗ್ಗೆ ತಿಳುಕೊಳ್ಳಲು ಸಹಾಯ ಮಾಡುತ್ತಾರೆ ಎಂದು ಗೊತ್ತಾಗುತ್ತದೆ. ಆದರೆ ಸುಳ್ಳು ಧರ್ಮಗಳು ಇದನ್ನು ಮಾಡುವುದಿಲ್ಲ ಎಂದು ಸಹ ಅರ್ಥವಾಗುತ್ತದೆ. (ಯೆಶಾ. 65:13) ಅಮೆರಿಕದಲ್ಲಿರುವ ರೇ ಮತ್ತು ಲಿಂಡ ದಂಪತಿ ಈ ವ್ಯತ್ಯಾಸವನ್ನು ಕೆಲವು ವರ್ಷಗಳ ಹಿಂದೆ ನೋಡಿದರು. ಅವರಿಗೆ ದೇವರ ಮೇಲೆ ನಂಬಿಕೆ ಇತ್ತು ಮತ್ತು ಆತನ ಬಗ್ಗೆ ಹೆಚ್ಚು ತಿಳುಕೊಳ್ಳಲು ಬಯಸಿದರು. ಆದ್ದರಿಂದ ತಮ್ಮ ನಗರದಲ್ಲಿರುವ ಎಲ್ಲ ಚರ್ಚುಗಳಿಗೆ ಭೇಟಿಕೊಟ್ಟು ಎರಡು ಅಂಶಗಳನ್ನು ನೋಡಬೇಕೆಂದು ತೀರ್ಮಾನಿಸಿದರು. ಮೊದಲನೇದು, ಆ ಚರ್ಚಿನಲ್ಲಿ ತಮಗೆ ಏನಾದರೂ ಕಲಿಯಕ್ಕೆ ಸಿಗಬೇಕು. ಎರಡನೇದು, ಆ ಚರ್ಚಿನ ಸದಸ್ಯರು ದೇವರ ಸೇವಕರಿಗೆ ತಕ್ಕ ಬಟ್ಟೆ ಹಾಕಿರಬೇಕು. ಯಾವ ಚರ್ಚಲ್ಲಿ ಈ ಎರಡು ಅಂಶ ಇರುತ್ತೋ ಅದಕ್ಕೆ ಸೇರಬೇಕೆಂದಿದ್ದರು. ಅವರಿದ್ದ ಸ್ಥಳದಲ್ಲಿ ತುಂಬ ಚರ್ಚುಗಳು ಇದ್ದದರಿಂದ ಎಲ್ಲಾ ಚರ್ಚಿಗೆ ಹೋಗಿ ನೋಡಲು ವರ್ಷಗಳೇ ಹಿಡಿಯಿತು. ಆದರೆ ಎಲ್ಲಾ ಕಡೆ ಅವರಿಗೆ ನಿರಾಶೆಯೇ ಆಯಿತು. ಯಾವ ಚರ್ಚಿನಲ್ಲೂ ಅವರಿಗೆ ಯಾವುದನ್ನೂ ಕಲಿಯಕ್ಕೆ ಸಿಗಲಿಲ್ಲ ಮತ್ತು ಚರ್ಚ್ ಸದಸ್ಯರು ಹಾಕಿದ ಬಟ್ಟೆ ಯೋಗ್ಯವಾಗಿರಲಿಲ್ಲ. ತಾವು ಪಟ್ಟಿಮಾಡಿಕೊಂಡಿದ್ದ ಕೊನೆಯ ಚರ್ಚಿಗೆ ಭೇಟಿ ಕೊಟ್ಟ ಮೇಲೆ ಲಿಂಡ ಕೆಲಸಕ್ಕೆ ಹೋದರು, ರೇ ಮನೆ ದಾರಿ ಹಿಡಿದರು. ದಾರಿಯಲ್ಲಿ ಅವರು ಒಂದು ರಾಜ್ಯ ಸಭಾಗೃಹವನ್ನು ನೋಡಿದರು. ‘ಒಳಗೆ ಹೋಗಿ ಏನು ನಡೀತದೆ ನೋಡೋಣ’ ಎಂದು ಅವರ ಮನಸ್ಸು ಹೇಳಿತು. ಅವರು ಕೂಟಕ್ಕೆ ಹಾಜರಾದರು, ಅದನ್ನು ತುಂಬ ಆನಂದಿಸಿದರು. ರಾಜ್ಯ ಸಭಾಗೃಹದಲ್ಲಿದ್ದ ಎಲ್ಲರೂ ಪ್ರೀತಿ ವಾತ್ಸಲ್ಯದಿಂದ ಮಾತಾಡಿಸಿದರು ಮತ್ತು ಎಲ್ಲರೂ ಸಭ್ಯವಾದ ಬಟ್ಟೆ ಹಾಕಿದ್ದರು. ರೇ ಮೊದಲನೇ ಸಾಲಿನಲ್ಲಿ ಕೂತುಕೊಂಡರು. ಅವರು ಕೇಳಿಸಿಕೊಂಡ ವಿಷಯಗಳನ್ನು ತುಂಬ ಇಷ್ಟಪಟ್ಟರು. ಮೊದಲನೇ ಸಾರಿ ಕೂಟಕ್ಕೆ ಬರುವ ವ್ಯಕ್ತಿ “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ” ಎಂದು ಹೇಳುವನು ಎಂಬ ಪೌಲನ ಮಾತನ್ನು ಇದು ನೆನಪಿಗೆ ತರುತ್ತದೆ. (1 ಕೊರಿಂ. 14:23-25) ರೇ ಪ್ರತಿ ಭಾನುವಾರ ಕೂಟಗಳಿಗೆ ಹಾಜರಾಗಲು ಆರಂಭಿಸಿದರು. ಆಮೇಲೆ ಮಧ್ಯವಾರದ ಕೂಟಗಳಿಗೂ ತಪ್ಪದೆ ಬಂದರು. ಲಿಂಡ ಕೂಡ ಕೂಟಗಳಿಗೆ ಬರಲು ಆರಂಭಿಸಿದರು. ಈ ದಂಪತಿಗೆ 70ರ ಪ್ರಾಯವಾದರೂ ಬೈಬಲ್ ಅಧ್ಯಯನ ಮಾಡಿ ದೀಕ್ಷಾಸ್ನಾನ ತೆಗೆದುಕೊಂಡರು.
ಸಂಭಾಷಣೆ ಆರಂಭಿಸಲು ಸಲಕರಣೆಗಳು
9, 10. (ಎ) ಕರಪತ್ರಗಳನ್ನು ಉಪಯೋಗಿಸುವುದು ಯಾಕೆ ಸುಲಭ? (ಬಿ) ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? ಎಂಬ ಕರಪತ್ರವನ್ನು ಹೇಗೆ ಉಪಯೋಗಿಸಬಹುದೆಂದು ವಿವರಿಸಿ.
9 ಕರಪತ್ರಗಳು. ನಮ್ಮ ಬೋಧನಾ ಸಲಕರಣೆಗಳಲ್ಲಿ ಎಂಟು ಕರಪತ್ರಗಳಿವೆ. ಅವನ್ನು ಉಪಯೋಗಿಸುವುದು ಸುಲಭ. ಇವುಗಳ ಸಹಾಯದಿಂದ ಸಂಭಾಷಣೆ ಆರಂಭಿಸುವುದೂ ಸುಲಭ. 2013ರಿಂದ ಈ ಕರಪತ್ರಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಯಿತು. ಆ ಸಮಯದಿಂದ ಈಗಿನ ವರೆಗೆ ಸುಮಾರು ಐನೂರು ಕೋಟಿ ಪ್ರತಿಗಳನ್ನು ಮುದ್ರಿಸಲಾಗಿದೆ! ಈ ಎಲ್ಲ ಕರಪತ್ರಗಳನ್ನು ಒಂದೇ ರೀತಿ ವಿನ್ಯಾಸಿಸಲಾಗಿದೆ. ಹಾಗಾಗಿ ನೀವು ಒಂದು ಕರಪತ್ರವನ್ನು ಹೇಗೆ ಉಪಯೋಗಿಸುವುದು ಎಂದು ಕಲಿತರೆ ಎಲ್ಲವನ್ನೂ ಕಲಿತಂತೆ. ಒಂದು ಕರಪತ್ರವನ್ನು ಉಪಯೋಗಿಸುತ್ತಾ ಹೇಗೆ ಸಂಭಾಷಣೆ ಆರಂಭಿಸಬಹುದು?
10 ಈ ಲೋಕವನ್ನು ಮುಂದೆ ಎಂದಾದರೂ ದೇವರು ಆಳುತ್ತಾನಾ? ಎಂಬ ಕರಪತ್ರವನ್ನು ನೀವು ಉಪಯೋಗಿಸಲು ಬಯಸುತ್ತೀರಿ ಎಂದು ಇಟ್ಟುಕೊಳ್ಳಿ. ಮುಖಪುಟದಲ್ಲಿರುವ ಪ್ರಶ್ನೆಯನ್ನು ವ್ಯಕ್ತಿಗೆ ತೋರಿಸುತ್ತಾ “ನೀವು ಈ ಪ್ರಶ್ನೆಯ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ನಿಮ್ಮ ಅನಿಸಿಕೆ . . . ” ಎಂದು ಕೇಳಿ. ಆ ಮೂರು ಉತ್ತರಗಳಲ್ಲಿ ಅವರು ಯಾವುದನ್ನು ಆರಿಸುತ್ತಾರೆ ನೋಡಿ. ಅವರ ಉತ್ತರ ಸರಿನಾ ತಪ್ಪಾ ಎಂದು ಹೇಳುವ ಬದಲು ಎರಡನೇ ಪುಟದಲ್ಲಿರುವ “ಪವಿತ್ರ ಗ್ರಂಥ ಏನು ಹೇಳುತ್ತದೆ?” ಎಂಬ ಪ್ರಶ್ನೆಗೆ ಹೋಗಿ. ಅಲ್ಲಿ ಕೊಡಲಾಗಿರುವ ದಾನಿಯೇಲ 2:44 ಮತ್ತು ಯೆಶಾಯ 9:6ನ್ನು ಓದಿ. ಸಂಭಾಷಣೆಯ ಕೊನೆಯಲ್ಲಿ ಹಿಂದಿನ ಪುಟದಲ್ಲಿ “ಯೋಚಿಸಿ” ಎಂಬ ಶೀರ್ಷಿಕೆಯ ಕೆಳಗಿರುವ “ದೇವರೇ ಆಳ್ವಿಕೆ ಮಾಡಿದರೆ ನಮ್ಮ ಜೀವನ ಹೇಗಿರುವುದು?” ಎಂಬ ಪ್ರಶ್ನೆಯನ್ನು ಕೇಳಿ. ಮುಂದಿನ ಭೇಟಿಯಲ್ಲಿ ದೇವರಿಂದ ನಿಮಗೊಂದು ಸಿಹಿಸುದ್ದಿ! ಕಿರುಹೊತ್ತಗೆಯ 7ನೇ ಪಾಠದಿಂದ ಉತ್ತರ ಕೊಡಬಹುದು. ಈ ಕಿರುಹೊತ್ತಗೆ ಬೈಬಲ್ ಅಧ್ಯಯನ ಆರಂಭಿಸಲು ನಾವು ಉಪಯೋಗಿಸುವ ಒಂದು ಸಲಕರಣೆ ಆಗಿದೆ.
ಬೈಬಲಿನಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಸಲಕರಣೆಗಳು
11. (ಎ) ನಮ್ಮ ಪತ್ರಿಕೆಗಳನ್ನು ಯಾವ ಉದ್ದೇಶದಿಂದ ತಯಾರಿಸಲಾಗುತ್ತದೆ? (ಬಿ) ನಾವು ಯಾವುದನ್ನು ತಿಳುಕೊಳ್ಳಬೇಕು?
11 ಪತ್ರಿಕೆಗಳು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಇಡೀ ಲೋಕದಲ್ಲಿ ಅತಿ ಹೆಚ್ಚು ಭಾಷೆಗಳಿಗೆ ಭಾಷಾಂತರವಾಗಿ ವಿತರಣೆಯಾಗುವಂಥ ಪತ್ರಿಕೆಗಳು. ಅನೇಕ ದೇಶಗಳಲ್ಲಿರುವ ಜನರು ನಮ್ಮ ಪತ್ರಿಕೆಗಳನ್ನು ಓದುವುದರಿಂದ ಮುಖಪುಟದಲ್ಲಿರುವ ಶೀರ್ಷಿಕೆಗಳನ್ನು ಎಲ್ಲಾ ಕಡೆ ಇರುವ ಜನರಿಗೆ ಹಿಡಿಸುವಂಥ ರೀತಿಯಲ್ಲಿ ಹಾಕಲಾಗುತ್ತದೆ. ಇಂದು ಜೀವನದಲ್ಲಿ ಯಾವುದಕ್ಕೆ ತುಂಬ ಪ್ರಾಮುಖ್ಯತೆ ಕೊಡಬೇಕೆಂದು ಜನರಿಗೆ ಅರ್ಥಮಾಡಿಸಲು ನಾವು ಈ ಪತ್ರಿಕೆಗಳನ್ನು ಉಪಯೋಗಿಸಬೇಕು. ಆದರೆ ಇದಕ್ಕಿಂತ ಮುಂಚೆ, ನಮ್ಮ ಯಾವ ಪತ್ರಿಕೆಯನ್ನು ಯಾವ ರೀತಿಯ ವ್ಯಕ್ತಿಗಾಗಿ ತಯಾರಿಸಲಾಗುತ್ತದೆ ಎಂದು ನಾವು ತಿಳುಕೊಳ್ಳಬೇಕು.
12. (ಎ) ಎಚ್ಚರ! ಪತ್ರಿಕೆಯನ್ನು ಯಾರಿಗಾಗಿ ತಯಾರಿಸಲಾಗುತ್ತದೆ ಮತ್ತು ಅದರ ಉದ್ದೇಶ ಏನು? (ಬಿ) ಈ ಸಲಕರಣೆಯನ್ನು ಉಪಯೋಗಿಸಿ ನಿಮಗೆ ಇತ್ತೀಚೆಗೆ ಯಾವ ಒಳ್ಳೇ ಅನುಭವಗಳು ಸಿಕ್ಕಿದವು?
12 ಬೈಬಲ್ ಬಗ್ಗೆ ಸ್ವಲ್ಪವೇ ಗೊತ್ತಿರುವ ಅಥವಾ ಏನೂ ಗೊತ್ತಿಲ್ಲದ ಜನರಿಗಾಗಿ ಎಚ್ಚರ! ಪತ್ರಿಕೆಯನ್ನು ತಯಾರಿಸಲಾಗುತ್ತದೆ. ಇಂಥವರಿಗೆ ಕ್ರೈಸ್ತ ಬೋಧನೆಗಳ ಬಗ್ಗೆ ಏನೂ ಗೊತ್ತಿರಲ್ಲ, ಧರ್ಮದ ಮೇಲೆ ನಂಬಿಕೆ ಇರಲ್ಲ, ಬೈಬಲ್ ಕೊಡುವ ಸಲಹೆಯನ್ನು ಪಾಲಿಸಿದರೆ ಜೀವನವನ್ನು ಚೆನ್ನಾಗಿ ನಡೆಸಬಹುದೆಂದು ಗೊತ್ತಿರಲ್ಲ. ಎಚ್ಚರ! ಪತ್ರಿಕೆಯ ಒಂದು ಮುಖ್ಯ ಉದ್ದೇಶ ಏನೆಂದರೆ, ದೇವರು ನಿಜವಾಗಿಯೂ ಇದ್ದಾನೆಂದು ಮನವರಿಕೆ ಮಾಡಿಸುವುದು. (ರೋಮ. 1:20; ಇಬ್ರಿ. 11:6) ಬೈಬಲ್ “ನಿಜವಾಗಿಯೂ . . . ದೇವರ ವಾಕ್ಯ” ಎಂದು ಓದುಗರು ನಂಬಲು ಸಹ ಈ ಪತ್ರಿಕೆ ಸಹಾಯ ಮಾಡುತ್ತದೆ. (1 ಥೆಸ. 2:13) 2018ರ ಮೂರು ಸಂಚಿಕೆಗಳಲ್ಲಿ ಈ ಶೀರ್ಷಿಕೆ ಇದೆ: “ಸಂತೋಷದ ಜೀವನಮಾರ್ಗ,” “ಯಶಸ್ವಿ ಕುಟುಂಬಗಳ 12 ಸೂತ್ರಗಳು” ಮತ್ತು “ಸಾವಿನ ನೋವಿನಲ್ಲಿರುವವರಿಗೆ ಸಹಾಯ.”
13. (ಎ) ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿಯನ್ನು ಯಾರಿಗಾಗಿ ತಯಾರಿಸಲಾಗುತ್ತದೆ? (ಬಿ) ಈ ಸಲಕರಣೆಯನ್ನು ಉಪಯೋಗಿಸುತ್ತಾ ನಿಮಗೆ ಇತ್ತೀಚೆಗೆ ಸಿಕ್ಕಿದ ಒಳ್ಳೇ ಅನುಭವಗಳನ್ನು ಹೇಳಿ.
13 ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿಯ ಮುಖ್ಯ ಉದ್ದೇಶ ಏನೆಂದರೆ, ದೇವರ ಮೇಲೆ ಮತ್ತು ಬೈಬಲಿನ ಮೇಲೆ ಗೌರವ ಇರುವ ವ್ಯಕ್ತಿಗಳಿಗೆ ಬೈಬಲ್ ಬೋಧನೆಗಳನ್ನು ವಿವರಿಸುವುದೇ ಆಗಿದೆ. ಇಂಥವರಿಗೆ ಬೈಬಲ್ ಬಗ್ಗೆ ಅಲ್ಪಸ್ವಲ್ಪ ಗೊತ್ತಿರುತ್ತದೆ, ಆದರೆ ವಿಷಯಗಳು ನಿಷ್ಕೃಷ್ಟವಾಗಿ ಗೊತ್ತಿರಲ್ಲ. (ರೋಮ. 10:2; 1 ತಿಮೊ. 2:3, 4) 2018ರ ಮೂರು ಸಂಚಿಕೆಗಳು ಈ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ: “ಬೈಬಲ್ ಈಗಿನ ಕಾಲಕ್ಕೂ ಸೂಕ್ತ ಆಗಿದೆಯಾ?” “ಭವಿಷ್ಯ ಹೇಗಿರಲಿದೆ?” ಮತ್ತು “ದೇವರಿಗೆ ನಿಮ್ಮ ಬಗ್ಗೆ ಚಿಂತೆ ಇದೆಯಾ?”
ಪ್ರಚೋದನೆ ನೀಡುವ ಸಲಕರಣೆಗಳು
14. (ಎ) ಯಾವ ನಾಲ್ಕು ವಿಡಿಯೋಗಳು ನಮ್ಮ ಬೋಧನಾ ಸಲಕರಣೆಯ ಭಾಗವಾಗಿವೆ? (ಬಿ) ಈ ವಿಡಿಯೋಗಳನ್ನು ತೋರಿಸಿದ್ದರಿಂದ ನಿಮಗೆ ಸಿಕ್ಕಿರುವ ಒಳ್ಳೇ ಅನುಭವಗಳನ್ನು ಹೇಳಿ.
14 ವಿಡಿಯೋಗಳು. ಯೇಸುವಿನ ಕಾಲದಲ್ಲಿ ಬಡಗಿ ಬಳಸುತ್ತಿದ್ದ ಸಲಕರಣೆಗಳನ್ನು ಅವನು ತನ್ನ ಸ್ವಂತ ಶಕ್ತಿ ಹಾಕಿ ಬಳಸಬೇಕಿತ್ತು. ಆದರೆ ಈಗ ಬಡಗಿಗಳು ವಿದ್ಯುತ್‌ಚಾಲಿತ ಸಲಕರಣೆಗಳನ್ನು ಉಪಯೋಗಿಸುತ್ತಾರೆ. ಗರಗಸ, ತೂತು ಮಾಡುವ ಯಂತ್ರ, ನುಣುಪು ಮಾಡುವ ಯಂತ್ರದಂಥ ಅನೇಕ ಸಲಕರಣೆಗಳು ವಿದ್ಯುತ್ತಿನಿಂದ ನಡೆಯುತ್ತವೆ. ಅದೇ ರೀತಿ ಇಂದು ನಮ್ಮ ಹತ್ತಿರ ಮುದ್ರಿತ ಪ್ರಕಾಶನಗಳ ಜೊತೆಗೆ ಜನರಿಗೆ ತೋರಿಸಲು ಸುಂದರವಾದ ವಿಡಿಯೋಗಳೂ ಇವೆ. ಇದರಲ್ಲಿ ನಾಲ್ಕನ್ನು ನಮ್ಮ ಬೋಧನಾ ಸಲಕರಣೆಯ ಭಾಗವಾಗಿ ಕೊಡಲಾಗಿದೆ. ಅವು ಯಾವುವೆಂದರೆ, ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?, ಬೈಬಲ್ ಅಧ್ಯಯನ ಅಂದರೇನು?, ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಮತ್ತು ಯೆಹೋವನ ಸಾಕ್ಷಿಗಳು ಯಾರು? ಸಣ್ಣ ವಿಡಿಯೋಗಳನ್ನು ಎರಡು ನಿಮಿಷದೊಳಗೆ ತೋರಿಸಬಹುದು. ಮೊದಲನೇ ಭೇಟಿಯಲ್ಲಿ ಇದು ತುಂಬ ಪರಿಣಾಮಕಾರಿ. ದೊಡ್ಡ ವಿಡಿಯೋಗಳನ್ನು ನಾವು ಪುನರ್ಭೇಟಿಗೆ ಹೋದಾಗ ಮನೆಯವರಿಗೆ ಸಮಯ ಇದ್ದರೆ ಉಪಯೋಗಿಸಬಹುದು. ಈ ವಿಡಿಯೋಗಳು ಅತ್ಯುತ್ತಮವಾದ ಸಲಕರಣೆಗಳಾಗಿವೆ. ಯಾಕೆಂದರೆ ಇವನ್ನು ನೋಡಿದಾಗ ಜನರಿಗೆ ಬೈಬಲನ್ನು ಅಧ್ಯಯನ ಮಾಡಲು ಮತ್ತು ಕೂಟಗಳಿಗೆ ಬರಲು ಬೇಕಾದ ಪ್ರಚೋದನೆ ಸಿಗಬಹುದು.
15. ತಮ್ಮ ಸ್ವಂತ ಭಾಷೆಯಲ್ಲಿ ನಮ್ಮ ಒಂದು ವಿಡಿಯೋವನ್ನು ನೋಡುವುದರಿಂದ ಜನರ ಮೇಲೆ ಯಾವ ಪರಿಣಾಮ ಆಗಬಹುದು? ಉದಾಹರಣೆಗಳನ್ನು ಕೊಡಿ.
15 ಒಂದು ಉದಾಹರಣೆ ನೋಡಿ. ನಮ್ಮ ಒಬ್ಬ ಸಹೋದರಿ ಮೈಕ್ರೋನೇಷಿಯಾದಿಂದ ಬಂದಿದ್ದ ಒಬ್ಬ ಸ್ತ್ರೀಯನ್ನು ಭೇಟಿಮಾಡಿದರು. ಆ ಸ್ತ್ರೀಯ ಮಾತೃಭಾಷೆ ಯಾಪೀಸ್. ನಮ್ಮ ಸಹೋದರಿ ಆ ಸ್ತ್ರೀಗೆ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋವನ್ನು ಯಾಪೀಸ್ ಭಾಷೆಯಲ್ಲಿ ತೋರಿಸಿದರು. ವಿಡಿಯೋ ಆರಂಭವಾದ ಕೂಡಲೆ ಆ ಸ್ತ್ರೀ “ಇದು ನನ್ನ ಭಾಷೆ. ನನ್ನಿಂದ ನಂಬಕ್ಕಾಗ್ತಿಲ್ಲ! ಆ ವ್ಯಕ್ತಿಯ ಉಚ್ಚಾರಣೆಯಿಂದ ಅವರು ನನ್ನ ದ್ವೀಪದವರೇ ಎಂದು ಖಂಡಿತ ಹೇಳಬಲ್ಲೆ. ಅವರು ಮಾತಾಡುತ್ತಿರೋದು ನನ್ನ ಭಾಷೆ!” ಎಂದಳು. ನಂತರ ನಮ್ಮ ವೆಬ್‌ಸೈಟ್‌ನಲ್ಲಿ ತನ್ನ ಭಾಷೆಯಲ್ಲಿರುವ ಎಲ್ಲ ಪ್ರಕಾಶನಗಳನ್ನು ಓದುತ್ತೇನೆ ಮತ್ತು ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ ಅಂದಳು. (ಅ. ಕಾರ್ಯಗಳು 2:8, 11 ಹೋಲಿಸಿ.) ಇನ್ನೊಂದು ಉದಾಹರಣೆ ಅಮೆರಿಕದಲ್ಲಿರುವ ನಮ್ಮ ಒಬ್ಬ ಸಹೋದರಿಯದ್ದು. ಅವರ ಅಣ್ಣನ ಮಗ ಬೇರೊಂದು ಖಂಡದಲ್ಲಿದ್ದಾನೆ. ನಮ್ಮ ಸಹೋದರಿ ಅವನಿಗೆ ಅವನ ಸ್ವಂತ ಭಾಷೆಯಲ್ಲಿ ಮೇಲೆ ತಿಳಿಸಲಾದ ಅದೇ ವಿಡಿಯೋವಿನ ಲಿಂಕನ್ನು ಕಳುಹಿಸಿದರು. ಅವನು ವಿಡಿಯೋವನ್ನು ನೋಡಿಬಿಟ್ಟು “ಈ ಲೋಕ ಒಂದು ದುಷ್ಟ ಶಕ್ತಿಯ ಕೈಯಲ್ಲಿದೆ ಎಂಬ ವಿಷಯ ನನ್ನ ಗಮನ ಸೆಳೆಯಿತು. ನಾನು ಒಂದು ಬೈಬಲ್ ಅಧ್ಯಯನಕ್ಕಾಗಿ ವಿನಂತಿಸಿದ್ದೇನೆ” ಎಂದು ಇ-ಮೇಲ್ ಮಾಡಿದನು. ಇದನ್ನು ಕೇಳಿ ತುಂಬ ಖುಷಿಯಾಗುತ್ತದೆ. ಯಾಕೆಂದರೆ ಈ ವ್ಯಕ್ತಿ ನಮ್ಮ ಕೆಲಸ ನಿಷೇಧಿಸಲ್ಪಟ್ಟಿರುವ ಒಂದು ದೇಶದಲ್ಲಿದ್ದಾನೆ.
ಸತ್ಯವನ್ನು ಕಲಿಸುವ ಸಲಕರಣೆಗಳು
16. ಈ ಕಿರುಹೊತ್ತಗೆಗಳ ಉದ್ದೇಶ ಏನೆಂದು ತಿಳಿಸಿ: (ಎ) ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ. (ಬಿ) ದೇವರಿಂದ ನಿಮಗೊಂದು ಸಿಹಿಸುದ್ದಿ! (ಸಿ) ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
16 ಕಿರುಹೊತ್ತಗೆಗಳು. ಓದು-ಬರಹ ಕಡಿಮೆ ಇರುವ ವ್ಯಕ್ತಿಗೆ ಅಥವಾ ತನ್ನ ಭಾಷೆಯಲ್ಲಿ ಬೈಬಲ್ ಸಾಹಿತ್ಯ ಇಲ್ಲದಿರುವ ವ್ಯಕ್ತಿಗೆ ನೀವು ಹೇಗೆ ಸತ್ಯ ಕಲಿಸುತ್ತೀರಿ? ಅಂಥವರಿಗೆಂದೇ ಒಂದು ಸಲಕರಣೆ ಇದೆ. ಅದು ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಎಂಬ ಕಿರುಹೊತ್ತಗೆ. b ಬೈಬಲ್ ಅಧ್ಯಯನ ಆರಂಭಿಸಲು ದೇವರಿಂದ ನಿಮಗೊಂದು ಸಿಹಿಸುದ್ದಿ! ಅತ್ಯುತ್ತಮ ಸಲಕರಣೆ. ಜನರಿಗೆ ಈ ಕಿರುಹೊತ್ತಗೆಯ ಕೊನೇ ಪುಟದಲ್ಲಿರುವ 14 ಪಾಠಗಳ ಪಟ್ಟಿಯನ್ನು ತೋರಿಸಿ ಯಾವುದು ಇಷ್ಟ ಎಂದು ಕೇಳಿ. ಆಮೇಲೆ ಆ ಪಾಠದಿಂದಲೇ ಅಧ್ಯಯನ ಆರಂಭಿಸಿ. ನೀವು ಪುನರ್ಭೇಟಿಗಳನ್ನು ಮಾಡುವಾಗ ಇದೇ ರೀತಿ ಮಾಡಿ ನೋಡಿದ್ದೀರಾ? ಬೋಧನಾ ಸಲಕರಣೆಯಲ್ಲಿರುವ ಮೂರನೇ ಕಿರುಹೊತ್ತಗೆ ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ನಮ್ಮ ಸಂಘಟನೆಯ ಬಗ್ಗೆ ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸಲು ಈ ಕಿರುಹೊತ್ತಗೆಯನ್ನು ತಯಾರಿಸಲಾಗಿದೆ. ಪ್ರತಿ ಸಾರಿ ಬೈಬಲ್ ಅಧ್ಯಯನ ಮಾಡುವಾಗ ಈ ಕಿರುಹೊತ್ತಗೆಯನ್ನು ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳಲು 2017ರ ಮಾರ್ಚ್ ತಿಂಗಳ ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ ನೋಡಿ.
17. (ಎ) ಅಧ್ಯಯನ ಮಾಡಲು ಬಳಸುವ ಪ್ರತಿ ಪುಸ್ತಕದ ಉದ್ದೇಶವೇನು? (ಬಿ) ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದರೂ ಏನು ಮಾಡಬೇಕು? ಯಾಕೆ?
17 ಪುಸ್ತಕಗಳು. ಕಿರುಹೊತ್ತಗೆಯನ್ನು ಬಳಸಿ ಒಬ್ಬ ವ್ಯಕ್ತಿಗೆ ಅಧ್ಯಯನ ಆರಂಭಿಸಿದ ಮೇಲೆ ಯಾವಾಗ ಬೇಕಾದರೂ ಬೈಬಲ್ ನಮಗೆ ಏನು ಕಲಿಸುತ್ತದೆ? ಎಂಬ ಪುಸ್ತಕದಿಂದ ಅಧ್ಯಯನವನ್ನು ಆರಂಭಿಸಬಹುದು. ಬೈಬಲಿನ ಮೂಲಭೂತ ಬೋಧನೆಗಳ ಬಗ್ಗೆ ತಿಳಿದುಕೊಳ್ಳಲು ಈ ಪುಸ್ತಕ ಜನರಿಗೆ ಸಹಾಯ ಮಾಡುತ್ತದೆ. ಇದನ್ನು ಅಧ್ಯಯನ ಮಾಡುತ್ತಾ ಇರುವಾಗ ವಿದ್ಯಾರ್ಥಿ ಪ್ರಗತಿ ಮಾಡುತ್ತಾ ಇದ್ದರೆ ಮತ್ತು ಈ ಪುಸ್ತಕದ ಅಧ್ಯಯನ ಮುಗಿದರೆ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” c ಎಂಬ ಪುಸ್ತಕದಿಂದ ಅಧ್ಯಯನವನ್ನು ಮಾಡಬಹುದು. ನಮ್ಮ ಜೀವನದಲ್ಲಿ ಪ್ರತಿ ದಿನ ಬೈಬಲಿನ ತತ್ವಗಳನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗೆ ಈ ಪುಸ್ತಕ ಕಲಿಸುತ್ತದೆ. ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದರೂ ಹೊಸಬನಾಗಿರುವುದರಿಂದ ಆ ಎರಡೂ ಪುಸ್ತಕಗಳನ್ನು ಅಧ್ಯಯನ ಮಾಡಿ ಮುಗಿಸಬೇಕು ಎನ್ನುವುದನ್ನು ಮನಸ್ಸಲ್ಲಿಡಿ. ಯಾಕೆಂದರೆ ಯೆಹೋವನಲ್ಲಿ ತನ್ನ ನಂಬಿಕೆಯನ್ನು ಬಲಪಡಿಸಲು ಮತ್ತು ಆತನಿಗೆ ನಿಷ್ಠೆಯಿಂದಿರಲು ವಿದ್ಯಾರ್ಥಿಗೆ ಈ ಪುಸ್ತಕಗಳು ಸಹಾಯ ಮಾಡುತ್ತವೆ.—ಕೊಲೊಸ್ಸೆ 2:6, 7 ಓದಿ.
18. (ಎ) ಸತ್ಯವನ್ನು ಕಲಿಸಲು 1 ತಿಮೊಥೆಯ 4:16 ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ? ಇದರಿಂದ ಯಾವ ಫಲಿತಾಂಶ ಸಿಗುತ್ತದೆ? (ಬಿ) ಬೋಧನಾ ಸಲಕರಣೆಗಳನ್ನು ಉಪಯೋಗಿಸುವಾಗ ನಮ್ಮ ಗುರಿ ಏನಾಗಿರಬೇಕು?
18 ಜನರಿಗೆ “ಸುವಾರ್ತೆಯ ಕುರಿತಾದ ಸತ್ಯ” ತಿಳಿಸಬೇಕಾದ ಹೊಣೆ ಯೆಹೋವನ ಸಾಕ್ಷಿಗಳಾದ ನಮಗಿದೆ. ಈ ಸತ್ಯದಿಂದಾಗಿ ಜನರು ನಿತ್ಯಜೀವ ಪಡಕೊಳ್ಳುತ್ತಾರೆ. (ಕೊಲೊ. 1:5; 1 ತಿಮೊಥೆಯ 4:16 ಓದಿ.) ನಮಗೆ ಬೇಕಾಗಿರುವ ಎಲ್ಲ ರೀತಿಯ ಸಲಕರಣೆಗಳನ್ನು ದೇವರು ಕೊಟ್ಟಿದ್ದಾನೆ. (“ ಬೋಧನಾ ಸಲಕರಣೆಗಳು” ಚೌಕ ನೋಡಿ.) ಈ ಸಲಕರಣೆಗಳನ್ನು ನಮ್ಮಿಂದ ಎಷ್ಟು ಚೆನ್ನಾಗಿ ಬಳಸಲು ಆಗುತ್ತೋ ಅಷ್ಟು ಚೆನ್ನಾಗಿ ಬಳಸೋಣ. ಯಾವ ಸಲಕರಣೆಯನ್ನು ಯಾವಾಗ ಬಳಸಬೇಕು ಎಂದು ನಮ್ಮಲ್ಲಿ ಪ್ರತಿಯೊಬ್ಬರು ನಿರ್ಧರಿಸಬಹುದು. ಆದರೆ ಸಾಹಿತ್ಯವನ್ನು ವಿತರಿಸುವುದು ನಮ್ಮ ಗುರಿಯಲ್ಲ ಮತ್ತು ನಮ್ಮ ಸಂದೇಶವನ್ನು ಕೇಳಲು ಮನಸ್ಸಿಲ್ಲದವರಿಗೆ ನಾವು ಸಾಹಿತ್ಯವನ್ನು ಕೊಡುವುದಿಲ್ಲ ಎನ್ನುವುದನ್ನು ನೆನಪಿಡಿ. ನಿಜವಾದ ಆಸಕ್ತಿ ಇರುವ, ದೀನತೆ ಇರುವ, ಸತ್ಯವನ್ನು ಕಲಿಯುವ ಮನಸ್ಸಿರುವ ಅಂದರೆ “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ವ್ಯಕ್ತಿಗಳನ್ನು ಕಂಡುಹಿಡಿದು ಶಿಷ್ಯರನ್ನಾಗಿ ಮಾಡುವುದೇ ನಮ್ಮ ಗುರಿ.—ಅ. ಕಾ. 13:48; ಮತ್ತಾ. 28:19, 20.
b ಓದಲು ಸ್ವಲ್ಪನೂ ಗೊತ್ತಿಲ್ಲದವರಿಗೆ ದೇವರ ಮಾತನ್ನು ಆಲಿಸಿ ಎಂಬ ಕಿರುಹೊತ್ತಗೆಯನ್ನು ಕೊಟ್ಟು ಅಧ್ಯಯನ ಮಾಡಿ. ಅದರಲ್ಲಿ ಹೆಚ್ಚಾಗಿ ಚಿತ್ರಗಳೇ ಇವೆ.
c ಈ ಪುಸ್ತಕದ ಸರಳೀಕೃತ ಆವೃತ್ತಿ ಕನ್ನಡದಲ್ಲಿ ಬಂದಾಗ ಅದನ್ನೇ ಉಪಯೋಗಿಸಬೇಕು.