ಕೊನೆಗೂ ದೃಢತೀರ್ಮಾನ ಮಾಡಿದ ಅರಿಮಥಾಯದ ಯೋಸೇಫ
ಅರಿಮಥಾಯದ ಯೋಸೇಫ ತನಗೆ ರೋಮನ್ ರಾಜ್ಯಪಾಲನಾಗಿದ್ದ ಪೊಂತ್ಯ ಪಿಲಾತನೊಂದಿಗೆ ಮಾತಾಡುವಷ್ಟು ಧೈರ್ಯ ಇದೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಯಾಕೆಂದರೆ ಪಿಲಾತನು ತುಂಬ ಹಠಮಾರಿ ವ್ಯಕ್ತಿಯಾಗಿದ್ದನು. ಯೇಸುವನ್ನು ಗೌರವಯುತವಾಗಿ ಹೂಣಿಡಬೇಕೆಂದರೆ ಯಾರಾದರೊಬ್ಬರು ಪಿಲಾತನ ಹತ್ತಿರ ಹೋಗಿ ಆತನ ಶರೀರವನ್ನು ಕೇಳಬೇಕಿತ್ತು. ಪಿಲಾತನ ಜೊತೆ ನಡೆದ ಈ ಮಾತುಕತೆ ಯೋಸೇಫ ಊಹಿಸಿದಷ್ಟು ಕಷ್ಟವಾಗಿರಲಿಲ್ಲ. ಯೇಸು ಸತ್ತುಹೋದನೆಂದು ಒಬ್ಬ ಅಧಿಕಾರಿಯ ಮೂಲಕ ಖಚಿತಪಡಿಸಿಕೊಂಡ ನಂತರ ಪಿಲಾತನು ಯೋಸೇಫನಿಗೆ ಅನುಮತಿ ಕೊಟ್ಟನು. ಆಗ ಯೋಸೇಫನು ತುಂಬಾ ದುಃಖದಲ್ಲಿದ್ದರೂ ಹೂಣಿಡುವ ಜಾಗಕ್ಕೆ ಓಡಿಹೋದನು.—ಮಾರ್ಕ 15:42-45.
-
ಅರಿಮಥಾಯದ ಯೋಸೇಫನು ಯಾರು?
-
ಅವನಿಗೂ ಯೇಸುವಿಗೂ ಏನು ಸಂಬಂಧ?
-
ಈ ಕಥೆಯನ್ನು ತಿಳಿದುಕೊಳ್ಳುವುದರಿಂದ ನಮಗೇನು ಪ್ರಯೋಜನ?
ಹಿರೀಸಭೆಯ ಸದಸ್ಯ
ದೇವರ ಪ್ರೇರೇಪಣೆಯಿಂದ ಮಾರ್ಕ ಬರೆದ ಸುವಾರ್ತಾ ಪುಸ್ತಕದಲ್ಲಿ ಯೋಸೇಫನನ್ನು ‘ಹಿರೀಸಭೆಯವರಲ್ಲಿ ಘನವಂತ ಸದಸ್ಯನು’ ಎಂದು ಕರೆಯಲಾಗಿದೆ. ಹಿರೀಸಭೆ ಅಂದರೆ ಸನ್ಹೇದ್ರೀನ್, ಯೆಹೂದ್ಯರ ಸರ್ವೋಚ್ಚ ನ್ಯಾಯಾಲಯ ಮತ್ತು ಆಡಳಿತ ಸಮಿತಿ. (ಮಾರ್ಕ 15:1, 43) ಯೋಸೇಫನು ಯೆಹೂದ್ಯರ ನಾಯಕರಲ್ಲಿ ಒಬ್ಬನಾಗಿದ್ದರಿಂದ ರೋಮನ್ ರಾಜ್ಯಪಾಲನನ್ನು ಭೇಟಿಯಾಗಲು ಕಷ್ಟವಾಗಲಿಲ್ಲ. ಯೋಸೇಫ ದೊಡ್ಡ ಸ್ಥಾನದಲ್ಲಿ ಇದ್ದದರಿಂದ ಅವನು ಶ್ರೀಮಂತನಾಗಿದ್ದನು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.—ಮತ್ತಾ. 27:57.
ಯೇಸುವನ್ನು ನನ್ನ ರಾಜನನ್ನಾಗಿ ಒಪ್ಪಿಕೊಳ್ಳಲು ನನಗೆ ಧೈರ್ಯ ಇದೆಯಾ?
ಹಿರೀಸಭೆಯಲ್ಲಿ ಹೆಚ್ಚಿನವರು ಯೇಸುವನ್ನು ದ್ವೇಷಿಸಿದರು. ಅದರ ಸದಸ್ಯರು ಯೇಸುವನ್ನು ಕೊಲ್ಲಲು ಒಳಸಂಚು ಮಾಡಿದ್ದರು. ಆದರೆ ಯೋಸೇಫನು “ಒಳ್ಳೆಯ ವ್ಯಕ್ತಿಯೂ ನೀತಿವಂತನೂ” ಆಗಿದ್ದನು. (ಲೂಕ 23:50) ಅವನ ಕಾಲದಲ್ಲಿದ್ದ ಹಿರೀಸಭೆಯ ಹೆಚ್ಚಿನ ಸದಸ್ಯರಿಗಿಂತ ಭಿನ್ನನಾಗಿ ಯೋಸೇಫ ಪ್ರಾಮಾಣಿಕನೂ, ಉತ್ತಮ ಗುಣಗಳಿರುವವನೂ ಆಗಿದ್ದನು ಮತ್ತು ದೇವರನ್ನು ಮೆಚ್ಚಿಸಲು ತನ್ನಿಂದಾದ ಎಲ್ಲವನ್ನು ಮಾಡುತ್ತಿದ್ದನು. ಅವನು ‘ದೇವರ ರಾಜ್ಯಕ್ಕಾಗಿ ಎದುರುನೋಡುತ್ತಿದ್ದ’ ಕಾರಣದಿಂದಲೇ ಯೇಸುವಿನ ಶಿಷ್ಯನಾದನು. (ಮಾರ್ಕ 15:43; ಮತ್ತಾ. 27:57) ಬಹುಶಃ, ಸತ್ಯ ಹಾಗೂ ನ್ಯಾಯದ ಬಗ್ಗೆ ಅವನಿಗಿದ್ದ ಹಂಬಲವು ಅವನನ್ನು ಯೇಸುವಿನ ಬೋಧನೆಗಳ ಕಡೆಗೆ ಆಕರ್ಷಿಸಿತು.
ಒಬ್ಬ ರಹಸ್ಯ ಶಿಷ್ಯ
ಯೋಸೇಫ “ಯೆಹೂದ್ಯರ ಭಯದಿಂದ ರಹಸ್ಯವಾಗಿ ಯೇಸುವಿನ ಶಿಷ್ಯನಾಗಿದ್ದ” ಎಂದು ಯೋಹಾನ 19:38 ಹೇಳುತ್ತದೆ. ಅವನು ಯಾಕೆ ಭಯಪಟ್ಟನು? ಯೆಹೂದ್ಯರು ಯೇಸುವನ್ನು ತಿರಸ್ಕರಿಸಿದ್ದರು ಮತ್ತು ಆತನನ್ನು ನಂಬಿದವರನ್ನು ಸಭಾಮಂದಿರದಿಂದ ಬಹಿಷ್ಕರಿಸುವ ದೃಢ ತೀರ್ಮಾನ ಮಾಡಿದ್ದರು ಎಂದು ಯೋಸೇಫನಿಗೆ ಗೊತ್ತಿತ್ತು. (ಯೋಹಾ. 7:45-49; 9:22) ಸಭಾಮಂದಿರದಿಂದ ಬಹಿಷ್ಕರಿಸಲ್ಪಟ್ಟವರನ್ನು ಯೆಹೂದ್ಯರು ಕೀಳಾಗಿ ಕಾಣುತ್ತಿದ್ದರು, ಅವರ ಜೊತೆ ಯಾವುದೇ ಸಹವಾಸ ಮಾಡದೆ ದೂರವಿಡುತ್ತಿದ್ದರು. ಆದ್ದರಿಂದ ಯೋಸೇಫನು ‘ನಾನು ಯೇಸುವನ್ನು ನಂಬಿದ್ದೇನೆ’ ಎಂದು ಮುಕ್ತವಾಗಿ ಒಪ್ಪಿಕೊಳ್ಳಲು ಹಿಂಜರಿದನು. ಹಾಗೆ ಹೇಳಿದ್ದರೆ ಅವನು ತನ್ನ ಸ್ಥಾನ ಮಾನವನ್ನು ಕಳಕೊಳ್ಳುತ್ತಿದ್ದನು.
ಈ ಇಕ್ಕಟ್ಟಿನಲ್ಲಿ ಇದ್ದದ್ದು ಯೋಸೇಫನು ಮಾತ್ರವಲ್ಲ. ಯೋಹಾನ 12:42ರ ಪ್ರಕಾರ, “ಅಧಿಪತಿಗಳಲ್ಲಿಯೂ ಅನೇಕರು ಅವನಲ್ಲಿ ನಂಬಿಕೆಯಿಟ್ಟರು, ಆದರೆ ಫರಿಸಾಯರ ನಿಮಿತ್ತ ಸಭಾಮಂದಿರದಿಂದ ಬಹಿಷ್ಕರಿಸಲ್ಪಡದಿರಲಿಕ್ಕಾಗಿ ಅವರು ಅವನಲ್ಲಿ ನಂಬಿಕೆಯಿಟ್ಟಿದ್ದೇವೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿಲ್ಲ.” ಇಂಥ ಪರಿಸ್ಥಿತಿಯಲ್ಲಿದ್ದ ಮತ್ತೊಬ್ಬ ವ್ಯಕ್ತಿ ಹಿರೀಸಭೆಯ ಸದಸ್ಯನಾದ ನಿಕೊದೇಮನಾಗಿದ್ದನು.—ಯೋಹಾ. 3:1-10; 7:50-52.
ಯೋಸೇಫನು ಯೇಸುವಿನ ಶಿಷ್ಯನಾಗಿದ್ದರೂ ಅದನ್ನು ಬಹಿರಂಗವಾಗಿ ಹೇಳಲು ಅವನಿಂದಾಗಲಿಲ್ಲ. ಇದೊಂದು ಗಂಭೀರ ವಿಷಯವಾಗಿತ್ತು. ಏಕೆಂದರೆ ಯೇಸು ಹೇಳಿದ್ದು: “ಜನರ ಮುಂದೆ ನನ್ನೊಂದಿಗಿದ್ದೇನೆಂದು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಅವನೊಂದಿಗಿದ್ದೇನೆಂದು ಸ್ವರ್ಗದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು; ಆದರೆ ಯಾವನು ಜನರ ಮುಂದೆ ನನ್ನನ್ನು ಅಲ್ಲಗಳೆಯುತ್ತಾನೋ ಅವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ತಂದೆಯ ಮುಂದೆ ಅಲ್ಲಗಳೆಯುವೆನು.” (ಮತ್ತಾ. 10:32, 33) ಯೋಸೇಫ ಯೇಸು ಕ್ರಿಸ್ತನನ್ನು ಸಂಪೂರ್ಣವಾಗಿ ಅಲ್ಲಗಳೆಯಲಿಲ್ಲ. ಅದೇ ಸಮಯದಲ್ಲಿ ಅವನಿಗೆ ತಾನು ಯೇಸು ಕ್ರಿಸ್ತನ ಶಿಷ್ಯನೆಂದು ಒಪ್ಪಿಕೊಳ್ಳುವ ಧೈರ್ಯನೂ ಇರಲಿಲ್ಲ. ನೀವು ಈ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದಿರಿ?
ಯೇಸುವಿನ ವಿರುದ್ಧ ಮಾಡಿದ ಕುತಂತ್ರದಲ್ಲಿ ಯೋಸೇಫ ಹಿರೀಸಭೆಯನ್ನು ಬೆಂಬಲಿಸಲಿಲ್ಲ ಎಂದು ಬೈಬಲ್ ತಿಳಿಸುತ್ತದೆ. (ಲೂಕ 23:51) ಯೇಸು ಕ್ರಿಸ್ತನ ವಿಚಾರಣೆಯಾದಾಗ ಯೋಸೇಫನು ಅಲ್ಲಿರಲಿಲ್ಲ ಎನ್ನುವುದು ಕೆಲವರ ಅನಿಸಿಕೆ. ಅಲ್ಲಿ ಆಗುತ್ತಿದ್ದ ಘೋರ ಅನ್ಯಾಯವನ್ನು ನೋಡುವಾಗ ಅವನಿಗೆ ತೀವ್ರ ದುಃಖವಾಗಿರಬೇಕು. ಅದೇನೇ ಆಗಿರಲಿ, ಯೋಸೇಫನಿಂದ ಇದನ್ನೆಲ್ಲಾ ತಡೆಯಲು ಆಗಲಿಲ್ಲ.
ಕೊನೆಗೂ ಗೊಂದಲವನ್ನು ಜಯಿಸಿದನು
ಯೇಸುವಿನ ಮರಣದ ನಂತರ, ಯೋಸೇಫನು ತನ್ನ ಭಯವನ್ನು ಜಯಿಸಿ ಯೇಸು ಕ್ರಿಸ್ತನ ಹಿಂಬಾಲಕರನ್ನು ಬೆಂಬಲಿಸಲು ನಿರ್ಣಯಿಸಿದನು. ಅವನ ಈ ನಿರ್ಣಯ ಮಾರ್ಕ 15:43ರಲ್ಲಿ ವ್ಯಕ್ತವಾಗುತ್ತದೆ. ಅಲ್ಲಿ ಹೀಗೆ ಹೇಳಲಾಗಿದೆ: ಅವನು “ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ಶರೀರವನ್ನು ತನಗೆ ಕೊಡಿಸಬೇಕೆಂದು ಕೇಳಿಕೊಂಡನು.”
ಯೇಸು ಕ್ರಿಸ್ತನ ಮರಣದ ಸಮಯದಲ್ಲಿ ಯೋಸೇಫನು ಆ ಸ್ಥಳದಲ್ಲಿದ್ದಿರಬಹುದು. ಹಾಗಾಗಿ, ಯೇಸು ಮರಣ ಹೊಂದಿದ್ದು ಪಿಲಾತನಿಗೆ ಗೊತ್ತಾಗುವ ಮೊದಲೇ ಯೋಸೇಫನಿಗೆ ಗೊತ್ತಿತ್ತು. ಆದುದರಿಂದ, ಯೋಸೇಫನು ಯೇಸು ಕ್ರಿಸ್ತನ ಶರೀರವನ್ನು ತನಗೆ ಕೊಡಿಸಬೇಕೆಂದು ಕೇಳಿದಾಗ ‘ಯೇಸು ಈಗಾಗಲೇ ಸತ್ತಿದ್ದಾನೊ ಇಲ್ಲವೊ ಎಂದು ಪಿಲಾತನು ಸಂಶಯಪಟ್ಟನು.’ (ಮಾರ್ಕ 15:44) ಒಂದುವೇಳೆ ಯೇಸು ಯಾತನಾ ಕಂಬದ ಮೇಲೆ ಅನುಭವಿಸಿದ ತೀವ್ರ ವೇದನೆಯನ್ನು ಯೋಸೇಫನು ನೋಡಿರುವುದಾದರೆ ಆ ಭೀಕರ ದೃಶ್ಯ ಅವನ ಮನಸ್ಸಾಕ್ಷಿಯನ್ನು ಪರೀಕ್ಷಿಸುವಂತೆ ಮತ್ತು ತಾನು ಯೇಸುವಿನ ಶಿಷ್ಯನೆಂದು ಎಲ್ಲರ ಮುಂದೆ ಒಪ್ಪಿಕೊಳ್ಳುವಂತೆ ಪ್ರಚೋದಿಸಿತಾ? ಇರಬಹುದು. ಅದೇನೇ ಆದರೂ ಕೊನೆಗೆ ಯೋಸೇಫನು ಕ್ರಿಯೆಗೈದನು. ಇದರಿಂದಾಗಿ ಆತನು ಒಬ್ಬ ರಹಸ್ಯ ಶಿಷ್ಯನಾಗಿ ಉಳಿಯಲಿಲ್ಲ.
ಯೋಸೇಫನು ಯೇಸುವಿನ ಶರೀರವನ್ನು ಸಮಾಧಿ ಮಾಡುತ್ತಾನೆ
ಯೆಹೂದಿ ನಿಯಮದ ಪ್ರಕಾರ ಮರಣ ಶಿಕ್ಷೆ ಹೊಂದಿದವರನ್ನು ಸೂರ್ಯ ಮುಳುಗುವ ಮೊದಲೇ ಹೂಣಿಡಬೇಕಾಗಿತ್ತು. (ಧರ್ಮೋ. 21:22, 23) ಆದರೆ ರೋಮನ್ನರು, ಮರಣ ಶಿಕ್ಷೆ ಹೊಂದಿದವರ ಶವಗಳನ್ನು ಅಲ್ಲೇ ಕಂಬದ ಮೇಲೆ ಕೊಳೆಯುವಂತೆ ಬಿಡುತ್ತಿದ್ದರು ಅಥವಾ ಎಲ್ಲರನ್ನೂ ಒಂದೇ ಸಮಾಧಿಯಲ್ಲಿ ಎಸೆದುಬಿಡುತ್ತಿದ್ದರು. ಆದರೆ ಯೋಸೇಫನ ಮನಸ್ಸಿನಲ್ಲಿ ಯೇಸುವಿಗಾಗಿ ಬೇರೆಯೇ ಯೋಚನೆ ಇತ್ತು. ಅವನು ಯೇಸುವನ್ನು ಹೂಣಿಡಲು ಏರ್ಪಾಡು ಮಾಡಿದನು. ಮರಣದಂಡನೆ ವಿಧಿಸಲಾದ ಸ್ಥಳದ ಹತ್ತಿರದಲ್ಲೇ ಯೋಸೇಫನಿಗೆ ಬಂಡೆಯಲ್ಲಿ ಕೊರೆದಿದ್ದ ಒಂದು ಹೊಸ ಸಮಾಧಿ ಇತ್ತು. ಇದನ್ನು ಯೋಸೇಫನು ತನ್ನ ಸ್ವಂತ ಕುಟುಂಬದ ಉಪಯೋಗಕ್ಕಾಗಿ ಮಾಡಿದ್ದನು. ಆದರೆ ಅಲ್ಲಿಯವರೆಗೆ ಅದರಲ್ಲಿ ಯಾರನ್ನೂ ಹೂಣಿಟ್ಟಿರಲಿಲ್ಲ. ಇದರಿಂದಾಗಿ ಯೋಸೇಫ ಅರಿಮಥಾಯದಿಂದ a ಯೆರೂಸಲೇಮಿಗೆ ಬಂದು ಹೆಚ್ಚು ಸಮಯ ಆಗಿರಲಿಲ್ಲ ಎಂದು ಗೊತ್ತಾಗುತ್ತದೆ. (ಲೂಕ 23:53; ಯೋಹಾ. 19:41) ತಮಗಾಗಿ ಮಾಡಿರುವ ಈ ಹೊಸ ಸಮಾಧಿಯಲ್ಲಿ ಯೇಸುವನ್ನು ಹೂಣಿಡುವ ಮೂಲಕ ಯೋಸೇಫನು ಉದಾರ ಮನಸ್ಸನ್ನು ತೋರಿಸಿದನು. ಹೀಗೆ ಮೆಸ್ಸೀಯನು “ಶ್ರೀಮಂತರ ನಡುವೆ” ಹೂಣಿಡಲ್ಪಡುವನೆಂಬ ಪ್ರವಾದನೆ ನೆರವೇರಿತು.—ಯೆಶಾ. 53:5, 8, 9, ನೂತನ ಲೋಕ ಭಾಷಾಂತರ.
ಯೆಹೋವನೊಂದಿಗಿನ ನನ್ನ ಸಂಬಂಧಕ್ಕಿಂತ ಬೇರೆ ಯಾವುದೇ ವಿಷಯಕ್ಕೆ ಹೆಚ್ಚು ಬೆಲೆ ಕೊಡುತ್ತೇನಾ?
ಯೇಸುವಿನ ಶರೀರವನ್ನು ಕಂಬದಿಂದ ಇಳಿಸಿದ ನಂತರ ಯೋಸೇಫನು ಅದನ್ನು ಶುದ್ಧವಾದ ನಾರುಮಡಿಯಲ್ಲಿ ಸುತ್ತಿ ತಾನು ಮಾಡಿಸಿದ ಸಮಾಧಿಯಲ್ಲಿ ಇಟ್ಟನೆಂದು ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿಯೂ ತಿಳಿಸಲಾಗಿದೆ. (ಮತ್ತಾ. 27:59-61; ಮಾರ್ಕ 15:46, 47; ಲೂಕ 23:53, 55; ಯೋಹಾ. 19:38-40) ಈ ಸಮಯದಲ್ಲಿ ಯೋಸೇಫನಿಗೆ ಸಹಾಯ ಮಾಡಿದ ಒಬ್ಬನೇ ಒಬ್ಬ ವ್ಯಕ್ತಿ ನಿಕೊದೇಮನಾಗಿದ್ದನೆಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. ಇವನು ಸುಗಂಧ ದ್ರವ್ಯಗಳನ್ನು ತೆಗೆದುಕೊಂಡು ಬಂದಿದ್ದನು. ಇವರಿಬ್ಬರೂ ಗೌರವಯುತ ಸ್ಥಾನದಲ್ಲಿದ್ದುದರಿಂದ ಈ ಕೆಲಸವನ್ನು ಇವರಿಬ್ಬರೇ ಮಾಡಿರಲಿಕ್ಕಿಲ್ಲ ಅಂತ ನಮಗೆ ಗೊತ್ತಾಗುತ್ತದೆ. ಯೇಸು ಕ್ರಿಸ್ತನ ಶರೀರವನ್ನು ಸಮಾಧಿಗೆ ತರಲು, ಹೂಣಿಡಲು ಅವರು ಸೇವಕರನ್ನು ನೇಮಿಸಿದ್ದಿರಬಹುದು. ಅದೇನೇ ಆದರೂ, ಅವರಿಬ್ಬರು ಮಾಡಿದ ಆ ಕೆಲಸ ಸಾಧಾರಣ ವಿಷಯವಾಗಿರಲಿಲ್ಲ. ಯಾಕೆಂದರೆ, ಮನುಷ್ಯನ ಶವ ಸೋಂಕಿದವನು ಏಳು ದಿನಗಳವರೆಗೆ ಅಶುದ್ಧನಾಗುತ್ತಿದ್ದನು ಮತ್ತು ಆತನು ಮುಟ್ಟಿದ್ದೆಲ್ಲವೂ ಅಶುದ್ಧವಾಗುತ್ತಿತ್ತು. (ಅರ. 19:11; ಹಗ್ಗಾ. 2:13) ಇದರಿಂದಾಗಿ ಅವರು ಪಸ್ಕದ ಆಚರಣೆಯ ಸಮಯದಲ್ಲಿ ಜನರಿಂದ ದೂರವಿರಬೇಕಾಗುತ್ತಿತ್ತು ಮತ್ತು ಹಬ್ಬದಲ್ಲಿ ಭಾಗವಹಿಸಲೂ ಸಾಧ್ಯವಾಗುತ್ತಿರಲಿಲ್ಲ. (ಅರ. 9:6) ಯೇಸು ಕ್ರಿಸ್ತನನ್ನು ಹೂಣಿಟ್ಟದ್ದರಿಂದಾಗಿ ಯೋಸೇಫನಿಗೆ ಹಿರೀಸಭೆಯ ಬೇರೆ ಸದಸ್ಯರಿಂದ ಅಪಹಾಸ್ಯ ಬರಸಾಧ್ಯವಿತ್ತು. ಯೇಸುವಿನ ಅಂತ್ಯ ಕ್ರಿಯೆಯನ್ನು ಗೌರವಯುತವಾಗಿ ಮಾಡುವುದರಿಂದ ಹಾಗೂ ಕ್ರಿಸ್ತನ ಶಿಷ್ಯರಲ್ಲಿ ತಾನು ಒಬ್ಬನೆಂದು ಬಹಿರಂಗವಾಗಿ ಗುರುತಿಸಿಕೊಳ್ಳುವುದರಿಂದ ಬರುವ ಯಾವುದೇ ಪರಿಣಾಮಗಳನ್ನು ಎದುರಿಸಲು ಯೋಸೇಫನು ಸಿದ್ಧನಾಗಿದ್ದನು.
ಯೋಸೇಫನ ಕಥೆಯ ಮುಕ್ತಾಯ
ಯೇಸುವನ್ನು ಸಮಾಧಿ ಮಾಡಿದ್ದರ ಬಗ್ಗೆ ತಿಳಿಸಿದ ನಂತರ ಸುವಾರ್ತಾ ಪುಸ್ತಕಗಳಲ್ಲಿ ಎಲ್ಲೂ ಅರಿಮಥಾಯದ ಯೋಸೇಫನ ಬಗ್ಗೆ ತಿಳಿಸಲಾಗಿಲ್ಲ. ಹಾಗಾಗಿ, ಅವನಿಗೆ ಮುಂದೆ ಏನಾಯಿತು? ಎಂಬ ಪ್ರಶ್ನೆ ಏಳುತ್ತದೆ. ಇದಕ್ಕೆ ಉತ್ತರ ನಮಗೆ ಗೊತ್ತಿಲ್ಲ. ಈಗಾಗಲೇ ನೋಡಿದ ಪ್ರಕಾರ, ಪರೀಕ್ಷೆಯ ಸಮಯದಲ್ಲಿ ಅವನ ನಂಬಿಕೆ ಹಾಗೂ ಧೈರ್ಯ ಬಲಗೊಳ್ಳುತ್ತಾ ಇತ್ತೇ ಹೊರತು ಕಡಿಮೆಯಾಗಲಿಲ್ಲ. ಇದು ಒಂದು ಒಳ್ಳೇ ಬದಲಾವಣೆಯಾಗಿತ್ತು. ಹಾಗಾಗಿ, ಅವನು ಕೊನೆಗೂ ತಾನು ಯೇಸುವಿನ ಶಿಷ್ಯನೆಂದು ಬಹಿರಂಗವಾಗಿ ಹೇಳಿಕೊಂಡಿರಲೇಬೇಕು ಎಂದು ನಾವು ಊಹಿಸಬಹುದು.
ಯೋಸೇಫನ ಕಥೆಯು ಈ ಪ್ರಶ್ನೆಗಳನ್ನು ಎಬ್ಬಿಸುತ್ತದೆ: ನಮ್ಮ ಜೀವನದಲ್ಲಿ ಯಾವುದಕ್ಕೆ ಹೆಚ್ಚು ಬೆಲೆ ಕೊಡುತ್ತೇವೆ? ಯೆಹೋವನೊಂದಿಗಿನ ನಮ್ಮ ಸಂಬಂಧಕ್ಕಾ? ಅಥವಾ ನಮ್ಮ ಸ್ಥಾನ-ಮಾನ, ಕೆಲಸ, ಆಸ್ತಿ-ಪಾಸ್ತಿ, ನಮ್ಮ ಕುಟುಂಬ ಮತ್ತು ಸ್ವಂತ ಸ್ವಾತಂತ್ರ್ಯಕ್ಕಾ? ಈ ವಿಷಯದ ಬಗ್ಗೆ ನಾವು ನಮ್ಮನ್ನೇ ಪರೀಕ್ಷಿಸುವುದು ಒಳ್ಳೇದು.
a ಅರಿಮಥಾಯ ಪ್ರದೇಶವನ್ನು ರಾಮಾ ಎಂದೂ ಕರೆಯಲಾಗುತ್ತಿತ್ತು. ಆಧುನಿಕ ದಿನಗಳಲ್ಲಿ ರೆಂಟಿಸ್ ಎಂದು ಕರೆಯಲಾಗುತ್ತದೆ. ಇದು ಸಮುವೇಲನ ಸ್ವಂತ ಊರಾಗಿದ್ದು, ಯೆರೂಸಲೇಮಿನ ವಾಯುವ್ಯ ದಿಕ್ಕಿನಲ್ಲಿ ಸುಮಾರು 22 ಮೈಲು (35 ಕಿ.ಮೀ.) ದೂರದಲ್ಲಿತ್ತು.—1 ಸಮು. 1:19, 20.