ತಂತ್ರಜ್ಞಾನ ಯಾವ ಪ್ರಭಾವ ಬೀರುತ್ತೆ? ಮದುವೆ ಜೀವನದ ಮೇಲೆ
ತಂತ್ರಜ್ಞಾನವನ್ನು ಸರಿಯಾಗಿ ಬಳಸಿದ್ರೆ ಗಂಡ ಹೆಂಡತಿ ಸಂಬಂಧ ಚೆನ್ನಾಗಿರುತ್ತೆ. ಉದಾಹರಣೆಗೆ, ತಂತ್ರಜ್ಞಾನದ ಸಹಾಯದಿಂದ ಗಂಡ ಹೆಂಡತಿಗೆ ಮಾತಾಡೋಕೆ ಆಗುತ್ತೆ.
ಕೆಲವು ದಂಪತಿಗಳು ತಂತ್ರಜ್ಞಾನ ದುರುಪಯೋಗಿಸುವಾಗ . . .
-
ಒಟ್ಟಿಗೆ ಕಳೆಯಬೇಕಾದ ಸಮಯ ಹಾಳಾಗುತ್ತೆ.
-
ಇಷ್ಟ ಇಲ್ಲದೆ ಇದ್ರೂ ಕೆಲಸ ಮಾಡೋ ಪರಿಸ್ಥಿತಿ ಬರುತ್ತೆ.
-
ನಂಬಿಕೆ ದ್ರೋಹ ಮಾಡುವ ಸನ್ನಿವೇಶ ಬರುತ್ತೆ.
ನಿಮಗೆ ಗೊತ್ತಿರಬೇಕಾದ ವಿಷಯಗಳು
ಒಟ್ಟಿಗೆ ಕಳೆಯುವ ಸಮಯ
ಮೈಕಲ್ ಹೇಳಿದ್ದು: “ನಾನು ನನ್ನ ಹೆಂಡತಿ ಒಂದೇ ಮನೆಯಲ್ಲಿದ್ರೂ ಅವ್ಳು ನನ್ನನ್ನು ಕ್ಯಾರೇ ಮಾಡಲ್ಲ. ಅವ್ಳು ಮೂರು ಹೊತ್ತು ಫೋನಲ್ಲೇ ಮುಳುಗಿರುತ್ತಾಳೆ. ಆದ್ರೂ ‘ಫೋನ್ ನೋಡೋಕೆ ಟೈಮೇ ಸಿಕ್ಕಿರಲಿಲ್ಲ’ ಅಂತ ನನ್ನ ಹತ್ರ ಹೇಳ್ತಾಳೆ.” ಜೊನಾತಾನ್ ಹೇಳಿದ್ದು: “ಗಂಡ ಹೆಂಡತಿ ಒಂದೇ ಮನೆಯಲ್ಲಿದ್ರೂ ತುಂಬ ಕಿಲೋ ಮೀಟರ್ ದೂರ ಇದ್ದ ಹಾಗೆ ಅನಿಸುತ್ತೆ.”
ಯೋಚಿಸಿ: ನಿಮ್ಮ ಸಂಗಾತಿ ಜೊತೆ ಸಮಯ ಕಳೆಯುವಾಗ ಎಷ್ಟು ಸಲ ಫೋನ್ ಕಾಲ್, ಮೆಸೇಜ್ ಅಂತ ಚೆಕ್ ಮಾಡ್ತಾ ಇರ್ತೀರಾ? —ಎಫೆಸ 5:33.
ಕೆಲಸ
ಕೆಲವರು ಮನೆಗೆ ಬಂದಮೇಲೂ ಕೆಲಸಕ್ಕೆ ಸಂಬಂಧಿಸಿದ ಕಾಲ್ ಅಥವಾ ಇಮೇಲ್ ಅವರಿಗೆ ಬರಬಹುದು. ಇನ್ನು ಕೆಲವರಿಗೆ ಇಂಥಾ ಪರಿಸ್ಥಿತಿ ಇಲ್ಲಾಂದ್ರೂ ಕೆಲಸದ ಸಮಯ ಮುಗಿದ ಮೇಲೂ ಅವರಿನ್ನೂ ಕೆಲಸ ಮಾಡಬೇಕಾಗುತ್ತೆ. ಲೀ ಹೇಳಿದ್ದು: “ಹೆಂಡತಿ ಜೊತೆ ಸಮಯ ಕಳೆಯುವಾಗ ಕೆಲಸಕ್ಕೆ ಸಂಬಂಧಪಟ್ಟ ಕಾಲ್ ರಿಸೀವ್ ಮಾಡ್ದೇ ಇರೋದು, ಇಮೇಲ್ ಚೆಕ್ ಮಾಡ್ದೇ ಇರೋದು ಅಷ್ಟೇನು ಸುಲಭದ ವಿಷಯ ಅಲ್ಲ.” ಜಾಯ್ ಹೇಳಿದ್ದು: “ಮನೆಯಿಂದ ಕೆಲಸ ಮಾಡೋದ್ರಿಂದ ಯಾವಾಗ ಕೆಲಸ ನಿಲ್ಲಿಸಬೇಕು ಅಂತಾನೇ ಗೊತ್ತಾಗಲ್ಲ. ಅದಕ್ಕೆ ಎಷ್ಟೊತ್ತು ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡೋದು ತುಂಬ ಕಷ್ಟ.”
ಯೋಚಿಸಿ: ನಿಮ್ಮ ಸಂಗಾತಿ ಮಾತಾಡುವಾಗ ಚೆನ್ನಾಗಿ ಗಮನ ಕೊಟ್ಟು ಕೇಳುತ್ತೀರಾ?—ಲೂಕ 8:18.
ನಿಷ್ಠೆ
ಗಂಡ ಹೆಂಡತಿ ಮಧ್ಯೆ ಜಗಳ ಬರಲು ಒಂದು ಕಾರಣ ಸೋಶಿಯಲ್ ಮೀಡಿಯಾ. 10% ಜನರು ತಮ್ಮ ಸಂಗಾತಿಯಿಂದ ಕೆಲವು ವಿಷಯಗಳನ್ನು ಮುಚ್ಚಿಟ್ಟು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ ಅಂತ ಒಂದು ಸಮೀಕ್ಷೆ ಹೇಳುತ್ತೆ.
ಸೋಶಿಯಲ್ ಮೀಡಿಯಾವನ್ನು ಸರಿಯಾಗಿ ಉಪಯೋಗಿಸಿದ್ರೆ ಅದ್ರಿಂದ ಪ್ರಯೋಜನ ಇದೆ. ಆದ್ರೆ ಅದ್ರಲ್ಲಿರೋ ಅಪಾಯವನ್ನು ಗುರುತಿಸಿಲ್ಲಾ ಅಂದ್ರೆ ವ್ಯಭಿಚಾರ ಮಾಡೋ ಸಾಧ್ಯತೆ ಇದೆ. ಮದುವೆ ಮುರಿಯೋ ಒಂದು ಮುಖ್ಯ ಕಾರಣ ಸೋಶಿಯಲ್ ಮೀಡಿಯಾ ಅಂತ ವಿಚ್ಛೇದನ ವಕೀಲರು ಹೇಳ್ತಾರೆ.
ಯೋಚಿಸಿ: ನಿಮ್ಮ ಸಂಗಾತಿ ಅಲ್ಲದ ವ್ಯಕ್ತಿ ಜೊತೆ ಕದ್ದು ಮುಚ್ಚಿ ಮಾತಾಡ್ತಿರಾ?—ಜ್ಞಾನೋಕ್ತಿ 4:23.
ನೀವು ಮಾಡಬೇಕಾದ ವಿಷಯಗಳು
ಪ್ರಾಮುಖ್ಯ ವಿಷಯಗಳಿಗೆ ಗಮನ ಕೊಡಿ
ಒಳ್ಳೇ ಆಹಾರ ತಿಂದಿಲ್ಲ ಅಂದ್ರೆ ಆರೋಗ್ಯ ಚೆನ್ನಾಗಿರಲ್ಲ. ಹಾಗೆನೇ ಗಂಡ ಹೆಂಡತಿ ಒಟ್ಟಿಗೆ ಸಮಯ ಕಳೆದಿಲ್ಲ ಅಂದ್ರೆ ಅವ್ರ ಜೀವನದಲ್ಲಿ ಸಮಸ್ಯೆ ಇರುತ್ತೆ.—ಎಫೆಸ 5:28, 29.
ಬೈಬಲ್ ತತ್ವ: “ತುಂಬ ಮುಖ್ಯವಾದ ವಿಷ್ಯ ಯಾವುದು ಅಂತ ನೀವು ಚೆನ್ನಾಗಿ ತಿಳ್ಕೊಬೇಕು.”—ಫಿಲಿಪ್ಪಿ 1:10.
ಕೆಳಗಿರೋ ಯಾವ ವಿಷಯ ಮಾಡಬೇಕು ಅಂತ ನಿಮ್ಮ ಸಂಗಾತಿ ಜೊತೆ ಮಾತಾಡಿ ಅಥವಾ ನಿಮ್ಮ ಮದುವೆ ಜೀವನದಲ್ಲಿ ತಂತ್ರಜ್ಞಾನ ಅಡ್ಡಿಯಾಗದಿರೋಕೆ ಏನು ಮಾಡಬೇಕು ಅಂತ ಬರೆಯಿರಿ.
-
ದಿನಾ ಒಂದು ಹೊತ್ತಾದ್ರೂ ಇಬ್ರೂ ಒಟ್ಟಿಗೆ ಕೂತು ಊಟ ಮಾಡಿ
-
ಎಲೆಕ್ಟ್ರಾನಿಕ್ ಸಾಧನವನ್ನು ಬಳಸದೇ ಇರೋಕೆ ಒಂದು ಸಮಯ ನಿಶ್ಚಯಿಸಿ
-
ಖುಷಿಯಾಗಿರೋಕೆ, ಒಟ್ಟಿಗೆ ಸಮಯ ಕಳೆಯೋಕೆ ಪ್ಲ್ಯಾನ್ ಮಾಡಿ
-
ಮಲಗುವಾಗ ಎಲೆಕ್ಟ್ರಾನಿಕ್ ಸಾಧನವನ್ನು ಆಫ್ ಮಾಡಿ
-
ಕಡಿಮೆಪಕ್ಷ 15 ನಿಮಿಷವಾದ್ರೂ ಎಲೆಕ್ಟ್ರಾನಿಕ್ ಸಾಧನವನ್ನು ಆಫ್ ಮಾಡಿಟ್ಟು ಸಂಗಾತಿ ಜೊತೆ ಮಾತಾಡಿ
-
ಇಂಟರ್ನೆಟ್ ಯಾವಾಗ ಆಫ್ ಮಾಡಬೇಕಂತ ಸಮಯ ನಿಶ್ಚಯಿಸಿ