ಸುಖೀ ಸಂಸಾರಕ್ಕೆ ಸಲಹೆಗಳು | ಯುವಜನರು
ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?
ಸಮಸ್ಯೆ
ಇವತ್ತು ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ಮನೆಯಲ್ಲೇ ಕೂತು ಸಾವಿರಾರು ಜನರನ್ನು ಸಂಪರ್ಕಿಸಬಹುದು. ಇತಿಹಾಸದಲ್ಲೇ ಇಂಥ ಒಂದು ವಿಷಯ ನಡೆದಿಲ್ಲ. ಇಷ್ಟಿದ್ದರೂ ನಿಜ ಸ್ನೇಹಿತರು ಸಿಗುವುದು ತುಂಬ ಕಷ್ಟ. ಒಬ್ಬ ಯುವಕನು ಹೀಗಂದನು: “ನಾನು ಒಬ್ಬರನ್ನು ಸ್ನೇಹಿತರಾಗಿ ಮಾಡಿಕೊಂಡರೆ ಅದು ಬೇಗ ಹಾಳಾಗಿಬಿಡುತ್ತೆ. ಆದರೆ ನನ್ನ ಅಪ್ಪ ಎಷ್ಟೋ ವರ್ಷಗಳ ಹಿಂದೆ ಮಾಡಿದ ಫ್ರೆಂಡ್‌ಷಿಪ್ ಈಗಲೂ ಚೆನ್ನಾಗಿದೆ.”
ನಿಜವಾದ ಸ್ನೇಹಿತರು, ಏನೇ ಆದರೂ ನಿಮ್ಮನ್ನು ಬಿಟ್ಟುಹೋಗದಿರುವ ಸ್ನೇಹಿತರು ಸಿಗುವುದು ಯಾಕೆ ಇಷ್ಟು ಅಪರೂಪ ಆಗಿಬಿಟ್ಟಿದೆ?
ನಿಮಗಿದು ತಿಳಿದಿರಲಿ
ತಂತ್ರಜ್ಞಾನದ “ಕೊಡುಗೆ.” ಒಬ್ಬ ವ್ಯಕ್ತಿ ನಮ್ಮ ಕಣ್ಣ ಮುಂದೆ ಇಲ್ಲ ಅಂದರೂ ನಾವು ಅವರ ಸ್ನೇಹಿತರಾಗಿರಬಹುದು ಎಂದು ಇವತ್ತು ತುಂಬ ಜನ ನೆನಸುತ್ತಾರೆ. ಇದಕ್ಕೆ ಕಾರಣ ಟೆಕ್ಸ್‌ಟ್ ಮೆಸೇಜ್‌ಗಳು, ಸಾಮಾಜಿಕ ಜಾಲತಾಣ. ನೇರವಾಗಿ ಮಾತಾಡಬೇಕಾದ ವಿಷಯಗಳನ್ನು ಇವತ್ತು ಮೆಸೇಜುಗಳಲ್ಲೇ ಹೇಳಿ ಮುಗಿಸಿಬಿಡುತ್ತಾರೆ. “ಈಗ ಮುಖ ನೋಡಿ ಮಾತಾಡುವುದು ತುಂಬ ಕಡಿಮೆಯಾಗಿಬಿಟ್ಟಿದೆ . . . ವಿದ್ಯಾರ್ಥಿಗಳು ಸ್ಕ್ರೀನ್ ಮುಂದೆ ಕೂತು ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಆದರೆ ಒಬ್ಬರಿನ್ನೊಬ್ಬರ ಹತ್ತಿರ ನೇರವಾಗಿ ಮಾತಾಡೋದು ಕಡಿಮೆ” ಎಂದು ಆರ್ಟಿಫಿಷಿಯಲ್ ಮೆಚ್ಯುರಿಟಿ ಪುಸ್ತಕ ಹೇಳುತ್ತದೆ.
ಆದರೆ ತಂತ್ರಜ್ಞಾನದ ಒಂದು ಅಪಾಯವೇನೆಂದರೆ ಆಪ್ತರಾಗಿಲ್ಲದವರನ್ನು ಸಹ ನಮಗೆ ತುಂಬ ಆಪ್ತರು ಎಂದು ಅನಿಸುವಂತೆ ಮಾಡುತ್ತದೆ. “ನನ್ನ ಸ್ನೇಹಿತರು ಹೇಗಿದ್ದಾರೆ ಎಂದು ತಿಳುಕೊಳ್ಳೋಕೆ ಪ್ರತಿ ಸಲ ನಾನೇ ಮೆಸೇಜ್ ಕಳುಹಿಸುತ್ತಿದ್ದೆ. ನಂತರ ನಾನು ಮೆಸೇಜ್ ಕಳುಹಿಸುವುದನ್ನು ನಿಲ್ಲಿಸಿ ಎಷ್ಟು ಜನ ನನ್ನನ್ನು ಪುನಃ ಕಾಂಟ್ಯಾಕ್ಟ್ ಮಾಡ್ತಾರೆ ಅಂತ ನೋಡಿದೆ. ನಿಜ ಹೇಳಬೇಕೆಂದರೆ ನನಗೆ ಮೆಸೇಜ್ ಮಾಡಿದವರು ಕೆಲವರು ಮಾತ್ರ. ನಾನು ನೆನಸಿದಷ್ಟು ಅವರು ನನಗೆ ಆಪ್ತರಾಗಿರಲಿಲ್ಲ” ಎಂದು 22 ವರ್ಷದ ಬರ್ನಾಡ್ a ಹೇಳುತ್ತಾರೆ.
ಆದರೆ ಮೆಸೇಜ್ ಮಾಡುವ ಮೂಲಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಆಗುತ್ತಲ್ವಾ? ಹೀಗೆ ನಮ್ಮ ಸಂಬಂಧ ಗಟ್ಟಿ ಆಗುತ್ತಲ್ವಾ? ನಿಜ, ಆದರೆ ಇಷ್ಟು ಮಾತ್ರ ಸಾಕಾಗಲ್ಲ. ನಿಮ್ಮ ಸ್ನೇಹಿತನನ್ನು ಭೇಟಿಯಾಗಿ ಅವನ ಜೊತೆ ಸಮಯ ಕಳೆದರೆ ಮಾತ್ರ ನಿಮ್ಮ ಸಂಬಂಧ ಗಟ್ಟಿಯಾಗುತ್ತೆ. ಸಾಮಾಜಿಕ ಜಾಲತಾಣ ನಿಮ್ಮ ಮಧ್ಯೆ ಸೇತುವೆಯಂತೆ ಇರಬಹುದು. ಆದರೆ ನೀವು ಹತ್ತಿರ ಆಗಬೇಕಾದರೆ ಆ ಸೇತುವೆಯನ್ನು ದಾಟಿ ಮುಂದೆ ಬನ್ನಿ.
ನೀವೇನು ಮಾಡಬಹುದು?
ನಿಜ ಸ್ನೇಹಿತನು ಯಾರು ಅಂತ ತಿಳುಕೊಳ್ಳಿ. “ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 18:24) ಇಂಥ ಸ್ನೇಹಿತರು ನಿಮಗಿದ್ದಾರಾ? ನೀವು ಇಂಥ ಸ್ನೇಹಿತರಾ? ಈ ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಇದನ್ನು ಮಾಡಿ – ನಿಮ್ಮ ಸ್ನೇಹಿತರಲ್ಲಿ ಯಾವ ಮೂರು ಗುಣಗಳು ಇರಬೇಕೆಂದು ನೀವು ಬಯಸುತ್ತೀರಿ ಮತ್ತು ನಿಮ್ಮ ಸ್ನೇಹಿತರು ನಿಮ್ಮಲ್ಲಿ ಯಾವ ಮೂರು ಗುಣಗಳಿವೆ ಅಂತ ಹೇಳ್ತಾರೆ ಎಂದು ಬರೆಯಿರಿ. ‘ನನ್ನ ಆನ್‌ಲೈನ್ ಸ್ನೇಹಿತರಲ್ಲಿ ಎಷ್ಟು ಮಂದಿ ನಾನು ಬಯಸುವ ಗುಣಗಳನ್ನು ತೋರಿಸುತ್ತಾರೆ? ನನ್ನಲ್ಲಿ ಯಾವ ಗುಣಗಳಿವೆ ಎಂದು ಅವರು ಹೇಳುತ್ತಾರೆ’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.—ಬೈಬಲ್ ತತ್ವ: ಫಿಲಿಪ್ಪಿ 2:4.
ಮುಖ್ಯ ವಿಷಯಗಳಿಗೆ ಆದ್ಯತೆ ಕೊಡಿ. ಆನ್‌ಲೈನ್‌ನಲ್ಲಿ ಹೆಚ್ಚಾಗಿ ಒಂದೇ ರೀತಿಯ ವಿಷಯಗಳನ್ನು ಇಷ್ಟಪಡುವವರು, ಹವ್ಯಾಸಗಳಿರುವವರು ಸ್ನೇಹಿತರಾಗುತ್ತಾರೆ. ಇಂಥವರನ್ನೇ ಸ್ನೇಹಿತರಾಗಿ ಮಾಡಿಕೊಳ್ಳದೆ ನಿಮ್ಮಲ್ಲಿರುವಂಥದ್ದೇ ಮೌಲ್ಯಗಳಿರುವವರನ್ನು ಸ್ನೇಹಿತರಾಗಿ ಮಾಡಿಕೊಳ್ಳುವುದು ಮುಖ್ಯ. “ನನಗೆ ತುಂಬ ಸ್ನೇಹಿತರು ಇಲ್ಲ ನಿಜ. ಆದರೆ ನನಗಿರುವ ಸ್ನೇಹಿತರು ನಾನೊಬ್ಬ ಒಳ್ಳೇ ವ್ಯಕ್ತಿಯಾಗಿರಲು ಸಹಾಯ ಮಾಡುತ್ತಾರೆ” ಎಂದು 21 ವರ್ಷದ ಲೀನ ಹೇಳುತ್ತಾರೆ.—ಬೈಬಲ್ ತತ್ವ: ಜ್ಞಾನೋಕ್ತಿ 13:20.
ಮುಖಾಮುಖಿ ಭೇಟಿಯಾಗಿ. ಮುಖ ನೋಡಿ ನೇರವಾಗಿ ಮಾತಾಡುವುದು ತುಂಬ ಒಳ್ಳೇದು. ಏಕೆಂದರೆ ಹಾಗೆ ಮಾತಾಡುವಾಗ, ಅವರ ಸ್ವರ, ಅವರ ಭಾವನೆಗಳು, ಹಾವಭಾವ ಇದನ್ನೆಲ್ಲ ಗಮನಿಸಲು ಆಗುತ್ತದೆ.—ಬೈಬಲ್ ತತ್ವ: 1 ಥೆಸಲೊನೀಕ 2:17.
ಪತ್ರ ಬರೆಯಿರಿ. ಅದೆಲ್ಲಾ ಹಳೆ ಕಾಲದ್ದು ಅಂತ ನಿಮಗೆ ಅನಿಸಬಹುದು. ಆದರೆ ಪತ್ರ ಬರೆಯುವ ಮೂಲಕ ನಿಮಗೆ ಅವರ ಬಗ್ಗೆ ಎಷ್ಟು ಕಾಳಜಿ ಇದೆ ಎಂದು ನಿಮ್ಮ ಸ್ನೇಹಿತರಿಗೆ ತೋರಿಸಿಕೊಡುತ್ತೀರ. ಇವತ್ತು ಸಮಯ ಮಾಡಿಕೊಂಡು ಪತ್ರ ಬರೆಯುವವರು ತುಂಬ ಕಡಿಮೆ. ಯಾಕೆಂದರೆ ಅವರದೇ ಆದ ನೂರೆಂಟು ಕೆಲಸ ಇರುತ್ತದೆ. ಶೆರೀ ಟರ್ಕಲ್ ಎಂಬ ಲೇಖಕಿ ಬರೆದ ಒಟ್ಟಿಗಿದ್ದರೂ ಒಂಟಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಒಬ್ಬ ಯುವಕನ ಹೇಳಿಕೆ ಹೀಗಿದೆ: ‘ಇದುವರೆಗೂ ನನಗೇ ಅಂತ ಯಾರೂ ಪತ್ರ ಬರೆದದ್ದು ನೆನಪಿಲ್ಲ.’ ಪತ್ರ ಬರೆಯುವ ಕಾಲದಲ್ಲಿ ಅವನು ಹುಟ್ಟಿರಲಿಲ್ಲವಾದರೂ ಪತ್ರ ಬರೆಯುವ ವಿಷಯ ತನಗೆ ತುಂಬ ಇಷ್ಟ ಅನ್ನುತ್ತಾನೆ ಆ ಯುವಕ. ಈ ವಿಧಾನ ಹಳೇದಾದರೂ ಸ್ನೇಹಿತರನ್ನು ಮಾಡಿಕೊಳ್ಳಲು ಯಾಕೆ ಇದನ್ನು ಬಳಸಬಾರದು?
ಒಟ್ಟಾರೆ ಹೇಳುವುದಾದರೆ: ನಿಜ ಸ್ನೇಹಿತರಾಗಿರಬೇಕಾದರೆ ಆನ್‌ಲೈನ್ ಸಂಪರ್ಕ ಮಾತ್ರ ಸಾಕಾಗಲ್ಲ. ನೀವು ಹಾಗೂ ನಿಮ್ಮ ಸ್ನೇಹಿತರು ಪ್ರೀತಿ ತಾಳ್ಮೆ ತೋರಿಸಿ, ಅವರ ಭಾವನೆ ಅರ್ಥಮಾಡಿಕೊಳ್ಳಿ, ತಪ್ಪುಮಾಡಿದರೆ ಕ್ಷಮಿಸಿ. ಹೀಗೆ ಮಾಡಿದಾಗ ನಿಮ್ಮ ಸ್ನೇಹ ತುಂಬ ಚೆನ್ನಾಗಿರುತ್ತೆ. ಆದರೆ ಬರೀ ಆನ್‌ಲೈನ್‌ನಲ್ಲಿ ಮಾತಾಡುತ್ತಿರುವುದಾದರೆ ಈ ಗುಣಗಳನ್ನು ತೋರಿಸುವುದು ಕಷ್ಟ. ◼ (g16-E No. 1)
a ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.