ಡೇಟಿಂಗ್ ಬಗ್ಗೆ ಯೆಹೋವನ ಸಾಕ್ಷಿಗಳಿಗೆ ನಿಯಮಗಳಿದೆಯಾ?
ಬೈಬಲಿನಲ್ಲಿರೋ ತತ್ತ್ವಗಳು ಹಾಗೂ ಆಜ್ಞೆಗಳು ನಾವು ದೇವರನ್ನ ಮೆಚ್ಚಿಸೋಕೆ ಹಾಗೂ ನಮಗೆ ಪ್ರಯೋಜನ ತರುವ ನಿರ್ಣಯಗಳನ್ನ ಮಾಡೋಕೆ ಸಹಾಯ ಮಾಡುತ್ತೆ ಅಂತ ಯೆಹೋವನ ಸಾಕ್ಷಿಗಳು ನಂಬ್ತಾರೆ. (ಯೆಶಾಯ 48:17, 18) ಈ ತತ್ತ್ವಗಳು ಹಾಗೂ ಆಜ್ಞೆಗಳನ್ನ ನಾವು ಮಾಡಿಕೊಳ್ಳಲಿಲ್ಲ, ಆದರೆ ಅದನ್ನ ಪಾಲಿಸ್ತಾ ಜೀವಿಸ್ತೀವಿ. ಡೇಟಿಂಗ್ aಗೆ ಅನ್ವಯಿಸೋ ಇಂಥ ಕೆಲವು ತತ್ತ್ವಗಳು ಹಾಗೂ ಆಜ್ಞೆಗಳನ್ನ ನಾವೀಗ ನೋಡೋಣ.
ಮದುವೆಯು ಒಂದು ಶಾಶ್ವತ ಬಂಧ. (ಮತ್ತಾಯ 19:6) ಯೆಹೋವನ ಸಾಕ್ಷಿಗಳು ಮದುವೆ ಆಗೋ ಉದ್ದೇಶದಿಂದ ಡೇಟಿಂಗ್ ಮಾಡ್ತಾರೆ ಹೊರತು ಮಜಾ ಮಾಡೋಕೆ ಅಲ್ಲ. ಅದಕ್ಕೆ ನಾವು ಡೇಟಿಂಗ್ ಅನ್ನೋ ವಿಷಯನ ಗಂಭೀರವಾಗಿ ನೋಡ್ತೀವಿ.
ಮದುವೆಯ ವಯಸ್ಸಿಗೆ ಬಂದವರು ಮಾತ್ರ ಡೇಟಿಂಗ್ ಮಾಡಬಹುದು. ಅಷ್ಟೆ ಅಲ್ಲ, ಡೇಟಿಂಗ್ ಮಾಡವವರು ‘ಯುವಪ್ರಾಯ ದಾಟಿರಬೇಕು’, ಅಥವಾ ತನ್ನ ಲೈಂಗಿಕ ಆಸೆಗಳನ್ನ ಹತೋಟಿಯಲ್ಲಿ ಇಡೋಕೆ ಕಲಿತಿರಬೇಕು.—1 ಕೊರಿಂಥ 7:36.
ಮದುವೆಯಾಗೋಕೆ ಅರ್ಹರಾಗಿರೋರು ಮಾತ್ರ ಡೇಟಿಂಗ್ ಮಾಡಬಹುದು. ಬೈಬಲ್ ಪ್ರಕಾರ, ತಮ್ಮ ಸಂಗಾತಿ ವ್ಯಭಿಚಾರ ಮಾಡಿದ್ದರೆ ಮಾತ್ರ ಗಂಡ ಅಥವಾ ಹೆಂಡತಿ ವಿಚ್ಛೇದನ ಪಡೆಯಬಹುದು. ಈ ಕಾರಣಕ್ಕಾಗಿ ವಿಚ್ಛೇದನ ಪಡೆದವರು ಮಾತ್ರ ಅವರು ಬಯಸೋದಾದರೆ ಡೇಟಿಂಗ್ ಮಾಡ್ತಾ ಮತ್ತೆ ಮದುವೆಯಾಗಬಹುದು. ಬೇರೆ ಕಾರಣಕ್ಕೆ ವಿಚ್ಛೇದನ ಪಡೆದವರು ಮತ್ತೆ ಮದುವೆಯಾಗುವಂತಿಲ್ಲ.—ಮತ್ತಾಯ 19:9.
ಒಬ್ಬ ಕ್ರೈಸ್ತನು ಮದುವೆಯಾಗೋಕೆ ಇಷ್ಟ ಪಡೋದಾದರೆ ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆಯಾಗಬೇಕು ಅನ್ನೋ ಆಜ್ಞೆ ಬೈಬಲಿನಲ್ಲಿದೆ. (1 ಕೊರಿಂಥ 7:39) ಯೆಹೋವನ ಸಾಕ್ಷಿಗಳು ಈ ಆಜ್ಞೆಯನ್ನು ಪಾಲಿಸ್ತಾರೆ. ನಮ್ಮ ನಂಬಿಕೆಗಳ ಬಗ್ಗೆ ಗೊತ್ತಿದ್ದು ಅದನ್ನ ಗೌರವಿಸ್ತೀನಿ ಆದರೆ ಪಾಲಿಸಲ್ಲ ಅಂತ ಹೇಳೋರನ್ನ ಅಲ್ಲ ಬದಲಿಗೆ ಯಾರು ದೇವರ ಇಷ್ಟವನ್ನ ಮಾಡುತ್ತಾ, ಆತನಿಗೆ ತನ್ನ ಜೀವನವನ್ನ ಸಮರ್ಪಿಸಿ ದೀಕ್ಷಾಸ್ನಾನ ಪಡೆದಿರುತ್ತಾರೊ ಅಂತ ವ್ಯಕ್ತಿಯನ್ನ ಮಾತ್ರ ಮದುವೆಯಾಗುತ್ತಾರೆ. (2 ಕೊರಿಂಥ 6:14) ದೇವರು ಮೊದಲಿನಿಂದಲೂ ತನ್ನ ಜನರಿಗೆ ಇದನ್ನೇ ಹೇಳಿದ್ದಾನೆ. ಅವರು ದೇವರನ್ನ ಆರಾಧಿಸುವವರನ್ನ ಮಾತ್ರ ಅಂದ್ರೆ ಒಂದೇ ನಂಬಿಕೆಯಲ್ಲಿ ಇರುವವರನ್ನ ಮಾತ್ರ ಮದುವೆಯಾಗಬೇಕು ಅನ್ನೋ ಆಜ್ಞೆ ಕೊಟ್ಟಿದ್ದಾನೆ. (ಆದಿಕಾಂಡ 24:3; ಮಲಾಕಿಯ 2:11) ನಮ್ಮ ಈ ಕಾಲದ ಅನೇಕ ಸಂಶೋಧಕರು ಕೂಡ ಈ ಆಜ್ಞೆ ತುಂಬ ಪ್ರಯೋಜನ ತರುತ್ತೆ ಅಂತ ಕಂಡುಕೊಂಡಿದ್ದಾರೆ. b
ಮಕ್ಕಳು ಅಪ್ಪ ಅಮ್ಮ ಹೇಳೋದನ್ನ ಕೇಳಬೇಕು. (ಜ್ಞಾನೋಕ್ತಿ 1:8; ಕೊಲೊಸ್ಸೆ 3:20) ಈ ಆಜ್ಞೆಯಲ್ಲಿ, ಇನ್ನೂ ತಮ್ಮ ಹೆತ್ತವರ ಜೊತೆ ವಾಸಿಸುವ ಮಕ್ಕಳು ಡೇಟಿಂಗ್ ಬಗ್ಗೆ ಅಪ್ಪ ಅಮ್ಮ ಹೇಳೋ ಮಾತನ್ನ ಪಾಲಿಸಬೇಕು ಅನ್ನೋದೂ ಸೇರಿದೆ. ಇದರಲ್ಲಿ ತಮ್ಮ ಮಗ ಅಥವಾ ಮಗಳು ಯಾವ ವಯಸ್ಸಿನಲ್ಲಿ ಡೇಟಿಂಗ್ ಶುರುಮಾಡಬಹುದು, ಡೇಟಿಂಗ್ ಮಾಡುವಾಗ ಯಾವೆಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಅನ್ನೋ ನಿರ್ಧಾರ ಮಾಡೋದು ಸೇರಿದೆ.
ಬೈಬಲ್ ತತ್ತ್ವಗಳಿಗೆ ಅನುಸಾರವಾಗಿ ಡೇಟಿಂಗ್ ಮಾಡಬೇಕೋ ಬೇಡವೋ, ಡೇಟಿಂಗ್ ಮಾಡೋದಾದ್ರೆ ಯಾರ ಜೊತೆ ಡೇಟಿಂಗ್ ಮಾಡಲಿ ಅಂತ ಸಾಕ್ಷಿಗಳು ತಾವೇ ನಿರ್ಧರಿಸುತ್ತಾರೆ. ಇದು “ಪ್ರತಿಯೊಬ್ಬನು ತನ್ನ ಜವಾಬ್ದಾರಿ ಅನ್ನೋ ಹೊರೆಯನ್ನ ತಾನೇ ಹೊತ್ಕೊಬೇಕು” ಎಂಬ ತತ್ವಕ್ಕೆ ಹೊಂದಿಕೆಯಲ್ಲಿದೆ. (ಗಲಾತ್ಯ 6:5, ಪಾದಟಿಪ್ಪಣಿ) ಆದ್ರೂ, ಅನೇಕ ಸಾಕ್ಷಿಗಳು ಡೇಟಿಂಗ್ ಮಾಡುವಾಗ ವಿವೇಚನೆಯನ್ನ ಬಳಸ್ತಾರೆ. ಅವರು ತುಂಬ ಅನುಭವ ಇರುವ ಹಾಗೂ ಅವರ ಬಗ್ಗೆ ನಿಜವಾದ ಕಾಳಜಿ ವಹಿಸುವ ಪ್ರೌಢ ಕ್ರೈಸ್ತ ಸಹೋದರ ಸಹೋದರಿಯರಿಂದ ಸಲಹೆಯನ್ನು ಪಡೆಯುತ್ತಾರೆ.—ಜ್ಞಾನೋಕ್ತಿ 1:5.
ಸಾಮಾನ್ಯವಾಗಿ ಡೇಟಿಂಗ್ಗೆ ಸಂಬಂಧಿಸಿದ ಅನೇಕ ಅಭ್ಯಾಸಗಳು ತುಂಬ ಗಂಭೀರ ಪಾಪಗಳಾಗಿವೆ. ಉದಾಹರಣೆಗೆ, ಲೈಂಗಿಕ ಅನೈತಿಕತೆಯಿಂದ ದೂರ ಇರಿ ಅನ್ನೋ ಆಜ್ಞೆ ಬೈಬಲಿನಲ್ಲಿದೆ. ಇದನ್ನ ನಾವು ಪಾಲಿಸಬೇಕು. ಈ ಆಜ್ಞೆಯಲ್ಲಿ ಸೆಕ್ಸ್ ಮಾತ್ರವಲ್ಲ, ಮದುವೆಯಾಗದೆ ಇರೋ ಇಬ್ಬರ ಮಧ್ಯ ನಡೆಯೋ ಇತರ ಅಶುದ್ಧ ಕ್ರಿಯೆಗಳೂ ಸೇರಿದೆ, ಅಂದ್ರೆ ಇನ್ನೊಬ್ಬ ವ್ಯಕ್ತಿಯ ಜನನಾಂಗಗಳನ್ನ ಮುಟ್ಟುವುದು ಅಥವಾ ಕೈಯಾಡಿಸೋದು ಅಥವಾ ಬಾಯಿ ಸೆಕ್ಸ್ (ಓರಲ್ ಸೆಕ್ಸ್), ಗುದದ್ವಾರದ ಮೂಲಕ ಮಾಡುವ ಸೆಕ್ಸ್ (ಏನಲ್ ಸೆಕ್ಸ್) ಸೇರಿದೆ. (1 ಕೊರಿಂಥ 6:9-11) ಮದುವೆಗೆ ಮೊದಲು ಲೈಂಗಿಕ ಅನೈತಿಕತೆಗೆ ನಡೆಸದ ಆದ್ರೆ ಲೈಂಗಿಕ ಬಯಕೆಗಳನ್ನ ಕೆರಳಿಸುವಂತೆ ಮಾಡೋ ಕೆಲಸಗಳನ್ನೂ ಬೈಬಲ್ “ಅಶುದ್ಧತೆ” ಎಂದು ಕರೆಯುತ್ತೆ. ದೇವರು ಅಂತಹ ವಿಷಯಗಳನ್ನು ದ್ವೇಷಿಸುತ್ತಾನೆ. (ಗಲಾತ್ಯ 5:19-21) ‘ಅಶ್ಲೀಲ ಅಥವಾ ಕೆಟ್ಟ ಮಾತು’ ತುಂಬಿರೋ ಅನೈತಿಕ ಸಂಭಾಷಣೆಗಳನ್ನ ಕೂಡ ಬೈಬಲ್ ಖಂಡಿಸುತ್ತೆ.—ಕೊಲೊಸ್ಸೆ 3:8.
ನಮ್ಮ ಹೃದಯ ಅಥವಾ ನಮ್ಮ ಒಳಗಿನ ವ್ಯಕ್ತಿತ್ವ ಮೋಸ ಮಾಡುತ್ತೆ. (ಯೆರೆಮೀಯ 17:9) ಅದು ಒಬ್ಬ ವ್ಯಕ್ತಿಗೆ ಒಂದು ವಿಷಯ ಕೆಟ್ಟದ್ದು ಅಂತ ಗೊತ್ತಿದ್ದರೂ ಅದನ್ನ ಮಾಡುವ ಹಾಗೆ ಮಾಡುತ್ತೆ. ಆದ್ದರಿಂದ, ಡೇಟಿಂಗ್ ಮಾಡುವಾಗ, ಅವರು ಯಾವುದೇ ತಪ್ಪು ಮಾಡಬಾರದು ಅಂತ ಯೆಹೋವನ ಸಾಕ್ಷಿಗಳು ಒಬ್ಬಂಟಿಗರಾಗಿ ಭೇಟಿಯಾಗುವುದಿಲ್ಲ. ಅವರು ಎಲ್ಲರ ಮುಂದೆ ಭೇಟಿಯಾಗುತ್ತಾರೆ ಅಥವಾ ಹೊರಗೆ ಹೋಗುವಾಗ ಅವರ ತಮ್ಮೊಂದಿಗೆ ಮೂರನೇ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತಾರೆ. (ಜ್ಞಾನೋಕ್ತಿ 28:26) ಮದುವೆಯ ಬಗ್ಗೆ ಯೋಚಿಸುತ್ತಿರುವ ಸಾಕ್ಷಿಗಳು ಆನ್ಲೈನ್ ಡೇಟಿಂಗ್ ಸೈಟ್ಗಳ ಅಪಾಯಗಳ ಬಗ್ಗೆ ತಿಳಿದು ಜಾಗ್ರತೆವಹಿಸ್ತಾರೆ. ಯಾಕೆಂದ್ರೆ ಜಾಗ್ರತೆವಹಿಸಿಲ್ಲಾಂದ್ರೆ ಅವರಿಗೆ ಗೊತ್ತಿಲ್ಲದೇ ಇರೋ ಅಥವಾ ಸ್ವಲ್ಪ ಮಟ್ಟಿಗೆ ತಿಳಿದಿರೋ ವ್ಯಕ್ತಿ ಜೊತೆ ಸಂಬಂಧವನ್ನ ಬೆಳೆಸೋ ಸಾಧ್ಯತೆ ಇರುತ್ತೆ.—ಕೀರ್ತನೆ 26:4.
a ಕೆಲವು ಸಂಸ್ಕೃತಿಗಳಲ್ಲಿ ಡೇಟಿಂಗ್ ಸಾಮಾನ್ಯವಾಗಿದೆ, ಆದರೆ ಎಲ್ಲಾ ಸಂಸ್ಕೃತಿಗಳಲ್ಲೂ ಹೀಗಿಲ್ಲ. ಮದುವೆಗೆ ಮುಂಚೆ ಡೇಟಿಂಗ್ ಮಾಡಬೇಕು ಅಥವಾ ಅದು ಇಲ್ಲದೆ ನೀವು ಮದುವೆಯಾಗಲು ಸಾಧ್ಯವಿಲ್ಲ ಅಂತ ಬೈಬಲ್ ಹೇಳುವುದಿಲ್ಲ.
b ಉದಾಹರಣೆಗೆ, ಮ್ಯಾರೇಜ್ ಆ್ಯಂಡ್ ಫ್ಯಾಮಿಲಿ ರಿವ್ಯೂ ಎಂಬ ಇಂಗ್ಲಿಷ್ ಪತ್ರಿಕೆ ಹೀಗೆ ಹೇಳುತ್ತೆ: “ಮದುವೆಯಾಗಿ 25 ರಿಂದ 50 ವರ್ಷಗಳಾದ ದಂಪತಿಗಳ ಮೇಲೆ ಮೂರು ಪ್ರತ್ಯೇಕ ಅಧ್ಯಯನಗಳನ್ನ ನಡೆಸಲಾಯಿತು. ಗಂಡ ಹೆಂಡತಿ ಇಬ್ಬರೂ ದೇವರನ್ನ ನಂಬಿದರೆ, ಒಂದೇ ಧರ್ಮದಲ್ಲಿದ್ದರೆ ಮತ್ತು ಧರ್ಮದ ಬಗ್ಗೆ ಒಂದೇ ರೀತಿಯ ದೃಷ್ಟಿಕೋನಗಳನ್ನ ಹೊಂದಿದ್ದರೆ ಮಾತ್ರ ಮದುವೆಯು ತುಂಬ ವರ್ಷಗಳು ಉಳಿಯುತ್ತೆ ಎಂದು ಈ ಅಧ್ಯಯನವು ತೋರಿಸಿದೆ.”—ಸಂಪುಟ 38, ಸಂಚಿಕೆ 1, ಪುಟ 88 (2005)