ಯೆಹೋವನ ಸಾಕ್ಷಿಗಳ ಸ್ಥಾಪಕ ಯಾರು?
ಆಧುನಿಕ ದಿನದ ಯೆಹೋವನ ಸಾಕ್ಷಿಗಳ ಸಂಘಟನೆ ಆರಂಭವಾದದ್ದು 19ನೇ ಶತಮಾನದ ಕೊನೆಯ ಭಾಗದಲ್ಲಿ. ಆ ದಿನಗಳಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದ ಪಿಟ್ಸಬರ್ಗ್ನ ಹತ್ತಿರ ವಾಸಿಸುತ್ತಿದ್ದ ಬೈಬಲ್ ವಿದ್ಯಾರ್ಥಿಗಳ ಸಣ್ಣ ಗುಂಪೊಂದು ಬೈಬಲನ್ನು ಕ್ರಮಬದ್ಧವಾಗಿ ಅಧ್ಯಯನಮಾಡಲು ಆರಂಭಿಸಿತು. ಚರ್ಚ್ಗಳು ಬೋಧಿಸುತ್ತಿದ್ದ ಸಿದ್ಧಾಂತಗಳನ್ನು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೋ ಅದರೊಂದಿಗೆ ಹೋಲಿಸಿನೋಡಲು ಪ್ರಾರಂಭಿಸಿದರು. ಅವರು ಕಲಿಯುತ್ತಿದ್ದ ವಿಷಯಗಳನ್ನು ಪುಸ್ತಕಗಳಲ್ಲಿ, ವಾರ್ತಾಪತ್ರಿಕೆಗಳಲ್ಲಿ ಮತ್ತು ಈಗ ಕಾವಲಿನಬುರುಜು-ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಹೆಸರಿರುವ ಪತ್ರಿಕೆಯಲ್ಲಿ ಪ್ರಕಟಿಸಲು ಶುರುಮಾಡಿದರು.
ಬೈಬಲ್ ಅಧ್ಯಯನ ಮಾಡುತ್ತಿದ್ದ ಆ ಪ್ರಾಮಾಣಿಕ ವಿದ್ಯಾರ್ಥಿಗಳ ಗುಂಪಿನಲ್ಲಿ ಚಾರ್ಲ್ಸ್ ಟೇಸ್ ರಸಲ್ ಎಂಬ ಹೆಸರಿನ ವ್ಯಕ್ತಿ ಇದ್ದರು. ಅವರು ಬೈಬಲ್ ಶಿಕ್ಷಣ ಕೆಲಸದಲ್ಲಿ ಮುಂದಾಳತ್ವ ವಹಿಸಿದರು ಮತ್ತು ಕಾವಲಿನಬುರುಜು ಪತ್ರಿಕೆಯ ಮೊದಲ ಸಂಪಾದಕರಾಗಿ ಕೆಲಸಮಾಡಿದರು. ಆದರೆ ಅವರು ಒಂದು ಹೊಸ ಧರ್ಮವನ್ನು ಹುಟ್ಟುಹಾಕಲಿಲ್ಲ. ಬದಲಾಗಿ, ಯೇಸು ಕ್ರಿಸ್ತನ ಬೋಧನೆಗಳನ್ನು ಪ್ರಚಾರಮಾಡುವುದು ಮತ್ತು ಮೊದಲ ಶತಮಾನದಲ್ಲಿದ್ದ ಕ್ರೈಸ್ತ ಮಾದರಿಯನ್ನು ಅನುಸರಿಸುವುದು ರಸಲ್ ಮತ್ತು ಇತರ ಬೈಬಲ್ ವಿದ್ಯಾರ್ಥಿಗಳ (ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು) ಮುಖ್ಯ ಉದ್ದೇಶವಾಗಿತ್ತು. ಕ್ರೈಸ್ತ ಧರ್ಮದ ಸ್ಥಾಪಕನು ಯೇಸು ಆಗಿರುವುದರಿಂದ ಆತನೇ ನಮ್ಮ ಸಂಘಟನೆಯ ಸ್ಥಾಪಕನಾಗಿದ್ದಾನೆ.—ಕೊಲೊಸ್ಸೆ 1:18-20