ಯೆಹೋವನ ಸಾಕ್ಷಿಗಳು ವಿಪತ್ತು ಪರಿಹಾರ ಕಾರ್ಯಕ್ಕೆ ಸಹಾಯಹಸ್ತ ನೀಡುತ್ತಾರಾ?
ಹೌದು, ವಿಪತ್ತುಗಳಾದಾಗ ಯೆಹೋವನ ಸಾಕ್ಷಿಗಳು ಹೆಚ್ಚಿನ ಸಂದರ್ಭದಲ್ಲಿ ಸಹಾಯಹಸ್ತ ನೀಡುತ್ತಾರೆ. ಅಂಥ ಪ್ರಾಯೋಗಿಕ ಸಹಾಯವನ್ನು ಯೆಹೋವನ ಸಾಕ್ಷಿಗಳಿಗೂ, ಸಾಕ್ಷಿಗಳಲ್ಲದವರಿಗೂ ನೀಡುತ್ತೇವೆ. ಇದಕ್ಕೆ ಆಧಾರ ಬೈಬಲ್‌ನಲ್ಲಿರುವ ಗಲಾತ್ಯ 6:10ನೇ ವಚನ. ಅಲ್ಲಿ ಹೀಗೆ ಹೇಳಲಾಗಿದೆ: “ಆದುದರಿಂದ ಅನುಕೂಲಕರವಾದ ಸಮಯವು ಇರುವ ವರೆಗೆ ಎಲ್ಲರಿಗೂ ಒಳ್ಳೇದನ್ನು ಮಾಡೋಣ, ಅದರಲ್ಲೂ ವಿಶೇಷವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವವರಿಗೆ ಮಾಡೋಣ.” ಹಾನಿಗೊಳಗಾದವರಿಗೆ ಅಂಥ ಸಮಯದಲ್ಲಿ ಭಾವಾನಾತ್ಮಕ ಮತ್ತು ಆಧ್ಯಾತ್ಮಿಕ ಸಹಾಯದ ಅಗತ್ಯವಿರುತ್ತದೆ. ಅದನ್ನೂ ನೀಡುವ ಪ್ರಯತ್ನ ಮಾಡುತ್ತೇವೆ.—2 ಕೊರಿಂಥ 1:3, 4
ಕಾರ್ಯವಿಧಾನ
ವಿಪತ್ತು ಎದುರಾದಾಗ, ಅಲ್ಲಿನ ಸಭಾ ಹಿರಿಯರು ತಮ್ಮ ಸಭೆಯ ಎಲ್ಲಾ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿ, ಅವರೆಲ್ಲಾ ಸುರಕ್ಷಿತರಾಗಿದ್ದಾರಾ ಮತ್ತು ಅವರಿಗೆ ಏನಾದರೂ ಸಹಾಯದ ಅಗತ್ಯವಿದೆಯಾ ಎಂದು ತಿಳಿದುಕೊಳ್ಳುತ್ತಾರೆ. ನಂತರ ತಮಗೆ ಸಿಕ್ಕಿದ ಮಾಹಿತಿಯ ಮತ್ತು ತಕ್ಷಣಕ್ಕೆ ತಾವು ನೀಡಿದ ಸಹಾಯದ ಕುರಿತು ಯೆಹೋವನ ಸಾಕ್ಷಿಗಳ ಸ್ಥಳೀಯ ಬ್ರಾಂಚ್ ಆಫೀಸಿಗೆ ವರದಿ ನೀಡುತ್ತಾರೆ.
ಆಕಸ್ಮಾತ್, ಬೇಕಾದಂಥ ಸಹಾಯವನ್ನು ಸಂಪೂರ್ಣವಾಗಿ ನೀಡಲು ಸ್ಥಳಿಕ ಸಭೆಗೆ ಸಾಧ್ಯವಾಗದಿದ್ದರೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿ ಆ ಅಗತ್ಯಗಳನ್ನು ಪೂರೈಸಲು ಮುಂದಾಗುತ್ತದೆ. ಪ್ರಥಮ ಶತಮಾನದ ಕ್ರೈಸ್ತರು ಕೂಡ ಇದನ್ನೇ ಮಾಡಿದರು. ಅವರು ಬರಗಾಲದ ಸಂದರ್ಭದಲ್ಲಿ ಒಬ್ಬರಿಗೊಬ್ಬರು ನೆರವಾದರು. (1 ಕೊರಿಂಥ 16:1-4) ಪರಿಹಾರ ಕಾರ್ಯವನ್ನು ಸಂಘಟಿಸಲು ಮತ್ತು ಮಾರ್ಗದರ್ಶಿಸಲು ಸ್ಥಳೀಯ ಬ್ರಾಂಚ್ ಆಫೀಸ್, ಡಿಸಾಸ್ಟರ್ ರಿಲೀಫ್ ಕಮಿಟಿಗಳನ್ನು ನೇಮಿಸುತ್ತದೆ. ಬೇರೆಬೇರೆ ಸ್ಥಳದ ಸಾಕ್ಷಿಗಳು ಸ್ವಯಂಸೇವಕರಾಗಿ ಬಂದು ತಮ್ಮ ಸಮಯ, ಸಂಪನ್ಮೂಲಗಳನ್ನು ವ್ಯಯಿಸಿ ಸಹಾಯಹಸ್ತ ನೀಡುತ್ತಾರೆ.—ಜ್ಞಾನೋಕ್ತಿ 17:17.
ಹಣಸಹಾಯ
ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಬರುವ ಕಾಣಿಕೆಗಳನ್ನು ಉಪಯೋಗಿಸುವ ಒಂದು ವಿಧ ವಿಪತ್ತಿನಲ್ಲಿ ಹಾನಿಗೊಳಗಾದವರಿಗೆ ಪರಿಹಾರ ನೀಡುವುದಾಗಿದೆ. (ಅಪೊಸ್ತಲರ ಕಾರ್ಯಗಳು 11:27-30; 2 ಕೊರಿಂಥ 8:13-15) ಈ ಕೆಲಸಗಳೆಲ್ಲವೂ ಸ್ವಯಂಸೇವೆಯಾಗಿರುವುದರಿಂದ, ಸಿಗುವಂಥ ಕಾಣಿಕೆಗಳು ಪರಿಹಾರ ಕಾರ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಅದನ್ನು ನಿರ್ವಹಣಾ ಕೆಲಸಕ್ಕಾಗಿ ಉಪಯೋಗಿಸುವುದಿಲ್ಲ. ಎಲ್ಲಾ ರೀತಿಯ ಕಾಣಿಕೆಯ ವಿಷಯದಲ್ಲಿ ನಾವು ಜಾಗರೂಕರಾಗಿರುತ್ತೇವೆ.—2 ಕೊರಿಂಥ 8:20