ಕೈದಿಗಳಿಗೆ ನೆರವು
ಯು.ಎಸ್. ಕರೆಕ್ಷನಲ್ ಇನ್‌ಸ್ಟಿಟ್ಯೂಷನ್‌ನ ಕೈದಿಗಳು ಪ್ರತಿದಿನ ಯೆಹೋವನ ಸಾಕ್ಷಿಗಳ ಆಫೀಸುಗಳಿಗೆ ಆಧ್ಯಾತ್ಮಿಕ ನೆರವು ಕೇಳಿ ಪತ್ರ ಬರೆಯುತ್ತಾರೆ.
ಇಂಥ ಪತ್ರಗಳಿಗೆ ನಾವು ಸ್ಪಂದಿಸುತ್ತೇವೆ. ಪತ್ರ ಬಂದಿರುವ ಅದೇ ಪ್ರದೇಶದಲ್ಲಿ ವಾಸಿಸುವ ಸ್ವಯಂಸೇವಕರು ಹೋಗಿ ಭೇಟಿಯಾಗುವಂತೆ ಏರ್ಪಾಡು ಮಾಡುತ್ತೇವೆ. ಹೀಗೆ ಜೈಲು, ಕಾರಾಗೃಹ, ಆಸ್ಪತ್ರೆ, ಬಾಲಾಪರಾಧಿಗಳ ಕೇಂದ್ರ, ಮಾದಕವ್ಯಸನಿಗಳ ಕೇಂದ್ರಗಳಲ್ಲಿರುವ ಜನರಿಗೆ ಬೈಬಲ್ ಕಲಿಯಲು ನೆರವಾಗುತ್ತೇವೆ.
ಕೆಲವು ಕಾರಾಗೃಹಗಳಲ್ಲಿ ನಮ್ಮ ಸ್ವಯಂಸೇವಕರು ಪ್ರತಿವಾರ ಹೋಗಿ ಕೂಟಗಳನ್ನು ಕೂಡ ನಡೆಸುತ್ತಿದ್ದಾರೆ. ಒಂದು ಕಾರಾಗೃಹದಲ್ಲಿ ಬೈಬಲ್ ಉಪನ್ಯಾಸಕ್ಕೆ 32 ಜನರು ಹಾಜರಿದ್ದರು.
ಇದರಿಂದ ಕೆಲವರಿಗೆ ಒಳ್ಳೇದಾಗಿರುವುದನ್ನು ನೋಡುವಾಗ ತುಂಬ ಸಂತೋಷವಾಗುತ್ತದೆ. ಅಮೆರಿಕದ ಇಂಡಿಯಾನ ರಾಜ್ಯದ ಒಬ್ಬ ವ್ಯಕ್ತಿ ಕೊಲೆಮಾಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ. ಆತ ಬೈಬಲ್ ಕಲಿತು ತನ್ನ ವ್ಯಕ್ತಿತ್ವದಲ್ಲಿ ಹಲವಾರು ಉತ್ತಮ ಬದಲಾವಣೆ ಮಾಡಿದ. ಈಗ ದೀಕ್ಷಾಸ್ನಾನ ಪಡೆದು ಒಬ್ಬ ಯೆಹೋವನ ಸಾಕ್ಷಿಯಾಗಿದ್ದಾನೆ.
ಕ್ಯಾಲಿಫೋರ್ನಿಯದ ಮನ-ಪರಿವರ್ತನಾ ಕೇಂದ್ರದಲ್ಲಿರುವ ಒಬ್ಬ ವ್ಯಕ್ತಿಗೆ ಬೈಬಲ್ ಕಲಿಸುವ ಯೆಹೋವನ ಸಾಕ್ಷಿ ಹೀಗೆ ಹೇಳುತ್ತಾರೆ: “ಬೈಬಲ್ ಕಲಿಯುವ ಮುಂಚೆ ಅವನ ಗುಣ, ವ್ಯಕ್ತಿತ್ವ ಹೇಗಿತ್ತು ಅಂತ ನಾನು ನೋಡಿದ್ದೇನೆ. ಈಗ ತುಂಬ ಬದಲಾಗಿದ್ದಾನೆ. ಎಷ್ಟರ ಮಟ್ಟಿಗಂದ್ರೆ ದೀಕ್ಷಾಸ್ನಾನ ಪಡೆಯುವಷ್ಟರ ಮಟ್ಟಿಗೆ ಬೇಕಾದಂಥ ಬದಲಾವಣೆಗಳನ್ನು ಮಾಡಿದ್ದಾನೆ.”
ಅನೇಕ ಕೈದಿಗಳು ಬೈಬಲ್ ತತ್ವಗಳನ್ನು ಜೀವನದಲ್ಲಿ ಪಾಲಿಸುತ್ತಿದ್ದಾರೆ. ಇದರಿಂದ ಅವರ ಪ್ರಾಣಕ್ಕೆ ಅಪಾಯವಿದೆ ಅಂತ ಗೊತ್ತಿದ್ದರೂ ಅಂಜುತ್ತಿಲ್ಲ. ಉದಾಹರಣೆಗೆ, ಬೈಬಲ್ ಕಲಿಯುತ್ತಿರುವ ಕೆಲವರು ಗ್ಯಾಂಗ್ ಸಹವಾಸ ಬಿಟ್ಟದ್ದರಿಂದ ಬೇರೆ ಕೈದಿಗಳ ದ್ವೇಷಕ್ಕೆ ಗುರಿಯಾದರು. ಇವರ ಸುರಕ್ಷೆಗಾಗಿ ಬೇರೆ ಕಡೆ ಸ್ಥಳಾಂತರಿಸಬೇಕಾಗಿ ಬಂತು.
ಬೈಬಲ್ ಕಲಿತದ್ದರಿಂದ ಕೈದಿಗಳ ಜೀವನವೇ ಬದಲಾಗುತ್ತಿರುವುದನ್ನು ನೋಡಿ ಜೈಲಿನ ಅಧಿಕಾರಿಗಳು ಮೂಕವಿಸ್ಮಿತರಾಗಿದ್ದಾರೆ. ಕೆಲವು ಅಧಿಕಾರಿಗಳು ಮನಪರಿವರ್ತನಾ ಕೇಂದ್ರಗಳಲ್ಲಿ ಯೆಹೋವನ ಸಾಕ್ಷಿಗಳು ಮಾಡಿದ ಸ್ವಯಂಸೇವೆಗಾಗಿ ಕೃತಜ್ಞತೆ ಸೂಚಿಸುವ ಸರ್ಟಿಫಿಕೆಟ್‌ಗಳನ್ನು ಮತ್ತು ಪ್ರಶಸ್ತಿಗಳನ್ನು ನೀಡಿದ್ದಾರೆ.