ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಗಯಾನದಲ್ಲಿ
ಬೇರೆ ಊರಿಗೆ ಹೋಗಿ ಸೇವೆ ಮಾಡಲಿಕ್ಕೆ ನಿಮಗೆ ಇಷ್ಟ ಇದ್ಯಾ? ಹಾಗಾದ್ರೆ ದಕ್ಷಿಣ ಅಮೆರಿಕದ ಗಯಾನ a ದೇಶಕ್ಕೆ ಹೋಗಿ ಸೇವೆ ಮಾಡಿದ ಕೆಲವರ ಅನುಭವಗಳನ್ನು ಓದಿ. ನೀವು ಏನೇನು ಮಾಡಬೇಕಾಗುತ್ತೆ ಅಂತ ಅವರಿಂದ ಕಲಿಯಬಹುದು. ಅವರಿಗೆ ಸೇವೆಯಲ್ಲಿ ಎಷ್ಟು ಖುಷಿ ಸಿಗ್ತಿದೆ ಅಂತ ನೋಡಿದ್ರೆ ನಿಮಗೂ ಬೇರೆ ಊರಿಗೆ ಹೋಗಿ ಸೇವೆ ಮಾಡಬೇಕು ಅನ್ನುವ ಆಸೆ ಜಾಸ್ತಿ ಆಗುತ್ತೆ. ಗಯಾನದಲ್ಲಿ ತುಂಬ ಜನರಿಗೆ ಯೆಹೋವನ ಬಗ್ಗೆ ಕಲಿಯಲಿಕ್ಕೆ ಆಸೆ. ಜೋಶುವ ಅಮೆರಿಕದಿಂದ ಅಲ್ಲಿಗೆ ಹೋಗಿ ಸ್ವಲ್ಪ ಸಮಯ ಸೇವೆ ಮಾಡಿದ. ಅವನು ಏನು ಹೇಳ್ತಾನೆ ನೋಡಿ, “ಅಗತ್ಯ ಹೆಚ್ಚಿರುವ ಕಡೆ ಹೋಗಿ ಸೇವೆ ಮಾಡಿದಾಗ ಸಿಗೋ ಖುಷಿನ ಮಾತಲ್ಲಿ ಹೇಳಕ್ಕೆ ಆಗಲ್ಲ.” ಗಯಾನದಲ್ಲಿ ಸೇವೆ ಮಾಡಲು ಹೋದ ಹೆಚ್ಚಿನವರ ಅನುಭವನೂ ಇದೇ.
ಹೇಗೆ ಆಸೆ ಬಂತು?
ಅಮೇರಿಕದಲ್ಲಿದ್ದ ಲೈನಲ್‌ಗೆ ಗಯಾನಕ್ಕೆ ಹೋಗಿ ಸೇವೆ ಮಾಡಲು ಆಸೆ ಹೇಗೆ ಬಂತು? ಅದಕ್ಕೆ ಮುಂಚೆ ಅವನು ಅಮೆರಿಕದಲ್ಲೇ ಅಪರೂಪಕ್ಕೆ ಸೇವೆ ಮಾಡ್ತಿದ್ದ ಟೆರಿಟರಿಗೆ ಹೋಗಿ ಸುವಾರ್ತೆ ಸಾರಿದ. ಅವನ ಅನುಭವ ಕೇಳಿ: “ಪಶ್ಚಿಮ ವರ್ಜೀನಿಯಾ ರಾಜ್ಯದ ಒಂದು ಹಳ್ಳಿಗೆ ಹೋಗಿ ಸೇವೆ ಮಾಡ್ಲಿಕ್ಕೆ 20 ಜನ್ರನ್ನ ನೇಮಿಸಲಾಯ್ತು. ಅವ್ರಲ್ಲಿ ನಾನೂ ಒಬ್ಬ. ಎರಡು ವಾರ ನಾವಲ್ಲಿ ಮಾಡಿದ ಸೇವೆ, ಸ್ನೇಹಿತರ ಸಹವಾಸ ತುಂಬ ಚೆನ್ನಾಗಿತ್ತು. ಅದ್ರಿಂದ ನನ್ನ ಜೀವನನೇ ಬದಲಾಗಿಬಿಡ್ತು. ನನಗೆ ಯೆಹೋವನ ಸೇವೆ ಮಾಡ್ಬೇಕು ಅನ್ನೋ ಆಸೆ ಇನ್ನೂ ಜಾಸ್ತಿ ಆಯ್ತು. ಹಾಗಾಗಿ ನನ್ನಿಂದ ಆದಷ್ಟು ಸೇವೆ ಮಾಡ್ಬೇಕು ಅಂತ ದೃಢತೀರ್ಮಾನ ಮಾಡ್ದೆ.”
ಗಾತ್ ಮತ್ತು ಅವನ ಹೆಂಡತಿ ಎರಿಕಾ ವಿದೇಶಕ್ಕೆ ಹೋಗಿ ಸೇವೆ ಮಾಡಬೇಕು ಅಂತ ತುಂಬ ಯೋಚಿಸ್ತಿರುವಾಗ ಗಯಾನಕ್ಕೆ ಹೋಗಲು ತೀರ್ಮಾನ ಮಾಡಿದ್ರು. ಯಾಕೆ? “ನಮಗೆ ಗೊತ್ತಿರೊ ಒಬ್ಬ ಸಹೋದರ ಮತ್ತು ಅವನ ಹೆಂಡ್ತಿ ಈಗಾಗ್ಲೇ ಅಲ್ಲಿಗೆ ಹೋಗಿ ಸೇವೆ ಮಾಡ್ತಿದ್ರು. ಅಲ್ಲಿ ಸೇವೆ ಮಾಡ್ಲಿಕ್ಕೆ ಅವರಿಗಿದ್ದ ಆಸೆ, ಉತ್ಸಾಹ ನೋಡಿ ನಮಗೂ ಅಲ್ಲಿಗೆ ಹೋಗಬೇಕು ಅಂತ ಅನಿಸ್ತು” ಅನ್ನುತ್ತಾಳೆ ಎರಿಕಾ. ಅವಳು, ಅವಳ ಗಂಡ ಅಲ್ಲಿ ಸೇವೆ ಮಾಡಿದ 3 ವರ್ಷಗಳನ್ನು ವರ್ಣಿಸ್ತಾ, “ಮನಸ್ಸಿಗೆ ತುಂಬ ಇಷ್ಟ ಆದ ನೇಮಕ ಅದು” ಎಂದು ಹೇಳ್ತಾರೆ. ಅದ್ರಿಂದ ಅವರಿಗೆ ಸಿಕ್ಕಿದ ಸಂತೋಷಕ್ಕೆ ಎಲ್ಲೆನೇ ಇರಲಿಲ್ಲ. ಗಾತ್ ಹೇಳೋದು ಏನಂದ್ರೆ, “ಅಗತ್ಯ ಇರೋ ಕಡೆ ಹೋಗಿ ಸೇವೆ ಮಾಡೋದು ತುಂಬ ಚೆನ್ನಾಗಿದೆ. ಅದರ ರುಚಿ ಏನಂತ ಈಗ ಗೊತ್ತಾಯ್ತು.” ನಂತರ ಇವರಿಬ್ಬರು ಗಿಲ್ಯಡ್ ಶಾಲೆಗೆ ಹೋದರು. ಈಗ ಬೊಲಿವಿಯದಲ್ಲಿ ಸೇವೆ ಮಾಡುತ್ತಿದ್ದಾರೆ.
ಹೋಗಲಿಕ್ಕೆ ಏನೇನು ಮಾಡಿದ್ರು?
ಜೀವನ ಸರಳವಾಗಿ ಇರಬೇಕು ಅಂತ ಬೈಬಲ್ ಹೇಳುತ್ತದೆ. (ಇಬ್ರಿಯ 13:5) ಜೀವನದಲ್ಲಿ ದೊಡ್ಡ ದೊಡ್ಡ ತೀರ್ಮಾನ ಮಾಡುವುದಕ್ಕಿಂತ ಮುಂಚೆ ಚೆನ್ನಾಗಿ ಯೋಚನೆ ಮಾಡಬೇಕು ಅಂತ ಸಹ ಬೈಬಲ್ ಹೇಳುತ್ತೆ. (ಲೂಕ 14:26-33) ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಲು ತಕ್ಕೊಳ್ಳುವ ತೀರ್ಮಾನನೂ ದೊಡ್ಡದೇ. ಗಾತ್ ಹೇಳ್ತಾನೆ: “ಗಯಾನಕ್ಕೆ ಹೋಗಲಿಕ್ಕೆ ಮುಂಚೆ ನಾವು ನಮ್ಮ ಜೀವನನ ಸರಳ ಮಾಡ್ಬೇಕಿತ್ತು. ನಮ್ಮ ಬಿಸಿನೆಸ್, ಮನೆ, ಮನೆಯಲ್ಲಿದ್ದ ಅನಾವಶ್ಯಕ ವಸ್ತುಗಳನ್ನೆಲ್ಲ ಮಾರಬೇಕಿತ್ತು. ಇದೆಲ್ಲ ಮಾಡಕ್ಕೆ ಕೆಲವು ವರ್ಷ ಹಿಡಿಯಿತು. ಅಷ್ಟ್ರಲ್ಲಿ ನಮ್ಮ ಆಸೆ ಕಮರಿ ಹೋಗಬಾರದು ಅಂತ ನಾವು ವರ್ಷಕ್ಕೆ ಒಂದು ಸಲ ಗಯಾನ ದೇಶಕ್ಕೆ ಹೋಗಿ ಸೇವೆ ಮಾಡ್ತಿದ್ವಿ. ಇದ್ರಿಂದ ನಮ್ಮ ಗುರಿನ ನಾವು ಮರೆತು ಹೋಗಲಿಲ್ಲ.”
ಯೋಚನೆ ಮಾಡಬೇಕಾಗಿರೋ ಇನ್ನೊಂದು ವಿಷ್ಯ ಏನಂದ್ರೆ ದುಡ್ಡು. ಕೆಲವು ಸ್ಥಳಗಳಲ್ಲಿ ಬೇರೆ ಊರಿನವರಿಗೆ, ದೇಶದವರಿಗೆ ಕೆಲಸ ಮಾಡಲಿಕ್ಕೆ ಅನುಮತಿ ಇದೆ. ಹಾಗಾಗಿ ಅಗತ್ಯ ಇರುವ ಸ್ಥಳಕ್ಕೆ ಹೋಗಿ ಸೇವೆ ಮಾಡುವವರಲ್ಲಿ ಕೆಲವರು ಅಲ್ಲೇ ಕೆಲಸ ಹುಡುಕಿಕೊಂಡು ಸೇವೆ ಮಾಡ್ತಾರೆ. ಇನ್ನು ಕೆಲವರು ಅವರ ಊರಲ್ಲಿ ಮಾಡ್ತಿದ್ದ ಕೆಲಸವನ್ನೇ ಆನ್‌ಲೈನಲ್ಲಿ ಮಾಡ್ತಾರೆ. ಇನ್ನು ಕೆಲವರು ಕೆಲವು ತಿಂಗಳ ಮಟ್ಟಿಗೆ ಅವರ ಊರಿಗೆ ಹೋಗಿ ದುಡಿದು ಮತ್ತೆ ಬರ್ತಾರೆ. ಪೌಲ್ ಮತ್ತು ಅವನ ಹೆಂಡತಿ ಸಿನೆದ ವರ್ಷಕ್ಕೆ ಒಂದು ಸಲ ಐರ್ಲೆಂಡ್‌ಗೆ ವಾಪಸ್ ಹೋಗಿ ಕೆಲಸ ಮಾಡ್ತಿದ್ರು. ಇದ್ರಿಂದ ಅವರಿಗೆ ಗಯಾನದಲ್ಲಿ 18 ವರ್ಷ ಸೇವೆ ಮಾಡಲು ಆಯಿತು. ಗಯಾನಕ್ಕೆ ಹೋಗಿ 11 ವರ್ಷ ಆದಾಗ ಅವರಿಗೆ ಮಗಳು ಹುಟ್ಟಿದ ಮೇಲೂ ಈ ಸೇವೆಯನ್ನು ಅವರು ಮುಂದುವರಿಸಿದರು.
“ನಿನ್ನ ಮಾರ್ಗವನ್ನು ಯೆಹೋವನಿಗೆ ಒಪ್ಪಿಸು; ಆತನಲ್ಲಿ ಭರವಸೆ ಇಡು; ಆತನು ಅದನ್ನು ನೆರವೇರಿಸುವನು” ಎನ್ನುತ್ತದೆ ಕೀರ್ತನೆ 37:5 (ಪವಿತ್ರ ಗ್ರಂಥ). ಅಮೆರಿಕದಲ್ಲಿರೋ ಕ್ರಿಸ್ಟೋಫರ್ ಮತ್ತು ಅವನ ಹೆಂಡತಿ ಲೋರಿಸಗೆ ವಿದೇಶದಲ್ಲಿ ಸೇವೆ ಮಾಡೋ ಗುರಿ ಇತ್ತು. ಅದಕ್ಕಾಗಿ ಅವರು ಏನೇನು ಮಾಡಿದ್ರು? ಆ ವಿಷ್ಯದ ಬಗ್ಗೆ ಯೆಹೋವನ ಹತ್ತಿರ ಯಾವಾಗಲೂ ಪ್ರಾರ್ಥನೆ ಮಾಡ್ತಿದ್ರು. ಹೊಸ ಸ್ಥಳದಲ್ಲಿ ಉಳುಕೊಳ್ಳಬೇಕಾದ್ರೆ ಏನೇನು ಮಾಡಬೇಕು ಅಂತ ಕುಟುಂಬ ಆರಾಧನೆಯಲ್ಲಿ ಚರ್ಚೆ ಮಾಡಿದ್ರು, ಅಲ್ಲಿಗೆ ಹೋದರೆ ಏನು ಪ್ರಯೋಜನ ಇದೆ, ಏನು ಸಮಸ್ಯೆ ಬರಬಹುದು ಅಂತ ಪಟ್ಟಿಮಾಡಿದ್ರು. ಭಾಷೆ ಸಮಸ್ಯೆ ಆಗಬಾರದು ಅಂತ ಅವರು ಗಯಾನ ದೇಶಕ್ಕೆ ಹೋಗಲು ನಿರ್ಧರಿಸಿದರು. ಯಾಕಂದ್ರೆ ಅಲ್ಲಿ ಸಾಮಾನ್ಯವಾಗಿ ಇಂಗ್ಲಿಷ್ ಮಾತಾಡ್ತಾರೆ.
ಆಮೇಲೆ ಅವರು ಜ್ಞಾನೋಕ್ತಿ 15:22 ಹೇಳುವ ಹಾಗೆ ನಡ್ಕೊಂಡ್ರು. “ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವುದಿಲ್ಲ; ಆದರೆ ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸಫಲಗೊಳ್ಳುವುವು.” (ಪವಿತ್ರ ಗ್ರಂಥ) ಗಯಾನದಲ್ಲಿ ಸಾರುವ ಕೆಲಸದ ಮೇಲ್ವಿಚಾರಣೆ ಮಾಡ್ತಿರುವ ಬ್ರಾಂಚ್‌ಗೆ ಪತ್ರ ಬರೆದು ಗಯಾನಕ್ಕೆ b ಹೋಗಿ ಸೇವೆ ಮಾಡಲು ತಮಗಿರೋ ಆಸೆ ಬಗ್ಗೆ, ತಮ್ಮ ಸನ್ನಿವೇಶದ ಬಗ್ಗೆ ಹೇಳಿದ್ರು. ಅಲ್ಲದೆ ಅಲ್ಲಿನ ಆಸ್ಪತ್ರೆ ಸೌಕರ್ಯ, ಹವಾಮಾನ ಮತ್ತು ಸಂಸ್ಕೃತಿ ಬಗ್ಗೆ ವಿಚಾರಿಸಿದ್ರು. ಅವರ ಪ್ರಶ್ನೆಗಳಿಗೆಲ್ಲ ಬ್ರಾಂಚ್ ಉತ್ತರ ಕೊಡ್ತು ಮತ್ತು ಗಯಾನದಲ್ಲಿ ಅವರು ಹೋಗಬೇಕಾಗಿದ್ದ ಸ್ಥಳದಲ್ಲಿರೋ ಹಿರಿಯರ ಮಂಡಲಿಯನ್ನು ಸಂಪರ್ಕಿಸಲು ಸಹಾಯಮಾಡಿತು.
ಈಗಾಗಲೇ ಹೇಳಿದ ಲೈನಲ್ ಗಯಾನದಲ್ಲಿ ಈಗ ಸಂಚರಣ ಮೇಲ್ವಿಚಾರಕ. ಅಲ್ಲಿಗೆ ಸ್ಥಳಾಂತರ ಮಾಡೋದಕ್ಕಿಂತ ಮುಂಚೆ ಅವನು ಕೂಡ ಜ್ಞಾನೋಕ್ತಿ 15:22 ಹೇಳುವ ಹಾಗೆ ನಡ್ಕೊಂಡ. ಅವನು ಹೇಳೋದೇನಂದ್ರೆ, “ಗಯಾನಕ್ಕೆ ಹೋಗೋದಕ್ಕಿಂತ ಮುಂಚೆ ನಾನು ಸ್ವಲ್ಪ ದುಡ್ಡು ಕೂಡಿಸಿಟ್ಟುಕೊಂಡೆ. ಅಲ್ಲದೆ, ವಿದೇಶದಲ್ಲಿ ಸೇವೆ ಮಾಡಿದ್ದವರ ಜೊತೆ ಮಾತಾಡಿದೆ. ಈ ವಿಷ್ಯದ ಬಗ್ಗೆ ಮನೆಯಲ್ಲಿರುವವರ ಜೊತೆ, ನನ್ನ ಸಭೆಯಲ್ಲಿರುವ ಹಿರಿಯರ ಜೊತೆ, ನಮ್ಮ ಸಂಚರಣ ಮೇಲ್ವಿಚಾರಕರ ಜೊತೆ ಮಾತಾಡಿದೆ. ಅಗತ್ಯ ಇರುವ ಕಡೆ ಸೇವೆ ಮಾಡೋದರ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಏನೇನು ಬಂದಿತ್ತೋ ಅದನ್ನೆಲ್ಲ ಓದಿದೆ.”
ಅಗತ್ಯ ಇರುವ ಸ್ಥಳದಲ್ಲಿ ಸೇವೆ ಮಾಡಲಿಕ್ಕೆ ಇಷ್ಟಪಡುವ ಹೆಚ್ಚಿನವರು ಮೊದಲು ಹೋಗಿ ಆ ಸ್ಥಳವನ್ನು ನೋಡ್ಕೊಂಡು ಬರ್ತಾರೆ. ಜೋಸೆಫ್ ಮತ್ತು ಅವನ ಹೆಂಡತಿ ಕ್ರಿಸ್ಟಿನ ಹೇಳೋದೇನಂದ್ರೆ, “ಫಸ್ಟ್ ಟೈಮ್ ಗಯಾನಕ್ಕೆ 3 ತಿಂಗಳಿಗೆ ಹೋಗಿದ್ವಿ. ಆ ಸ್ಥಳಕ್ಕೆ ಹೊಂದಿಕೊಳ್ಳೋದನ್ನ ಕಲಿಯಲು ಅಷ್ಟು ಸಮಯ ಸಾಕಾಗಿತ್ತು. ಆಮೇಲೆ ಮನೆಗೆ ಹೋಗಿ ಎಲ್ಲ ಸಾಮಾನು ತಗೊಂಡು ಗಯಾನಕ್ಕೆ ಹೋದ್ವಿ.”
ಹೇಗೆ ಹೊಂದಿಕೊಂಡ್ರು?
ಅಗತ್ಯ ಇರುವ ಸ್ಥಳದಲ್ಲಿ ಏನೇ ಆದ್ರೂ ಸೇವೆಯನ್ನು ಬಿಟ್ಟುಬಿಡದೆ ಇರಲಿಕ್ಕೆ ತ್ಯಾಗ ಮಾಡಬೇಕಾಗುತ್ತೆ. ಆ ಸ್ಥಳಕ್ಕೆ, ಸಂಸ್ಕೃತಿಗೆ ಹೊಂದಿಕೊಳ್ಳಬೇಕಾಗುತ್ತೆ. ಉದಾಹರಣೆಗೆ, ಚಳಿ ಹೆಚ್ಚಿರೋ ಸ್ಥಳದಿಂದ ಸಿಕ್ಕಾಪಟ್ಟೆ ಬಿಸಿಲು ಇರುವ ಸ್ಥಳಕ್ಕೆ ಹೋದಾಗ ಅಲ್ಲಿ ಕ್ರಿಮಿಕೀಟಗಳು ಜಾಸ್ತಿ ಇದೆ ಅಂತ ಗೊತ್ತಾಗುತ್ತೆ. ಆರಂಭದಲ್ಲಿ ಹೇಳಿರುವ ಜೋಶುವ ಏನು ಹೇಳ್ತಾನೆ ಅಂತ ನೋಡಿ, “ನಾನು ಇಷ್ಟೊಂದು ಕೀಟಗಳನ್ನ ನೋಡೇ ಇಲ್ಲ. ನನಗ್ಯಾಕೋ ಗಯಾನದಲ್ಲಿ ಇರುವಷ್ಟು ದೊಡ್ಡ ಕೀಟಗಳು ಲೋಕದಲ್ಲಿ ಬೇರೆಲ್ಲೂ ಇಲ್ಲವೇನೋ ಅಂತ ಅನಿಸುತ್ತೆ. ಆದ್ರೆ ಹೋಗ್ತಾ ಹೋಗ್ತಾ ನಾನೇ ಅಡ್ಜೆಸ್ಟ್ ಆಗಿಬಿಟ್ಟೆ. ಮನೆ ಕ್ಲೀನ್ ಮಾಡುತ್ತಿದ್ರೆ, ಮುಸುರೆ ಪಾತ್ರೆ ತೊಳೆದಿಟ್ರೆ, ಅವತ್ತಿನ ಕಸ ಅವತ್ತೇ ಬಿಸಡಿದ್ರೆ ಕ್ರಿಮಿಕೀಟಗಳು ಬರೋದು ಕಮ್ಮಿ ಆಗತ್ತೆ ಅಂತನೂ ಗೊತ್ತಾಯ್ತು.”
ಹೊಸ ಜಾಗದಲ್ಲಿ ಹೊಸ ತರದ ಊಟ ತಿನ್ನಲು ರೂಢಿ ಮಾಡಬೇಕಾಗುತ್ತೆ. ಹೊಸ ಹೊಸ ಅಡುಗೆ ಮಾಡೋದನ್ನೂ ಕಲಿಯಬೇಕಾಗುತ್ತೆ. ಇದ್ರ ಬಗ್ಗೆ ಜೋಶುವ ಏನು ಹೇಳ್ತಾನೆ ನೋಡಿ, “ಅಲ್ಲಿ ಸಿಗುವ ಪದಾರ್ಥಗಳಿಂದ ಹೇಗೆ ಅಡುಗೆ ಮಾಡೋದು ಅಂತ ನಾನು ಮತ್ತು ನನ್ನ ರೂಮ್‌ಮೇಟ್ ಸಹೋದರ ಸಹೋದರಿಯರನ್ನು ಕೇಳಿದ್ವಿ. ಹೊಸ ರೆಸಿಪಿ ಟ್ರೈ ಮಾಡಿದ ಮೇಲೆ ಸಭೆಯಲ್ಲಿ ಇರುವ ಕೆಲವರನ್ನು ಊಟಕ್ಕೆ ಕರೀತ್ತಿದ್ವಿ. ಅವರನ್ನು ತಿಳ್ಕೊಳೋಕೆ, ಹೊಸ ಸ್ನೇಹಿತರನ್ನು ಮಾಡ್ಕೊಳ್ಳೋಕೆ ಇದೊಂದು ಸೂಪರ್ ಐಡಿಯ.”
ಹೋದ ಸ್ಥಳದಲ್ಲಿ ಸಂಸ್ಕೃತಿಗೆ ಹೇಗೆ ಹೊಂದ್ಕೊಂಡ್ರು ಅಂತ ಪೌಲ್ ಮತ್ತು ಅವನ ಹೆಂಡತಿ ಕ್ಯಾತ್ರಿನ್ ಹೇಳ್ತಾರೆ ಕೇಳಿ, “ಇಲ್ಲಿ ಮರ್ಯಾದೆಯಿಂದ ನಡ್ಕೊಳ್ಳೋದು ಹೇಗೆ, ವಿಪರೀತ ಶೆಕೆ ಇರುವ ಈ ಜಾಗದಲ್ಲಿ ಎಂಥ ಬಟ್ಟೆ ಹಾಕಿದ್ರೆ ಯೋಗ್ಯ ಅಂತನೂ ತಿಳ್ಕೊಂಡ್ವಿ. ಬೇಕಾದ ಬದಲಾವಣೆ ಮಾಡ್ಕೊಂಡ್ವಿ. ಅದೇ ಸಮಯದಲ್ಲಿ ಬೈಬಲ್ ತತ್ವಗಳನ್ನು ಮೀರದೆ ಇರೋ ಹಾಗೂ ನೋಡ್ಕೊಂಡ್ವಿ. ಇದೆಲ್ಲ ಮಾಡಲಿಕ್ಕೆ ದೀನತೆ ಬೇಕಿತ್ತು. ಇದು ಹೊಸ ಜಾಗದಲ್ಲಿ ಹೊಸ ಅನುಭವ! ಇಲ್ಲಿನ ಸಂಸ್ಕೃತಿಗೆ ನಾವು ಹೊಂದಿಕೊಳ್ಳೋದನ್ನು ನೋಡಿದಾಗ ಸಭೆಯಲ್ಲಿ ಇರುವವರು ನಮ್ಮನ್ನು ತುಂಬ ಇಷ್ಟಪಟ್ರು ಮತ್ತು ಸೇವೆಯಲ್ಲಿ ಜನ ಒಳ್ಳೇ ಪ್ರತಿಕ್ರಿಯೆ ತೋರಿಸಿದ್ರು.”
ಏನು ಪ್ರಯೋಜನ ಸಿಕ್ತು?
ಜೋಸೆಫ್ ಮತ್ತು ಅವನ ಹೆಂಡತಿ ಕ್ರಿಸ್ಟಿನ ಹೇಳೋದೇನಂದ್ರೆ, “ನೋಡಲಿಕ್ಕೆ ಹೋದ್ರೆ ನಮಗೆ ಬಂದ ಕಷ್ಟ, ಸಮಸ್ಯೆ ಮತ್ತು ಸವಾಲುಗಳಿಗಿಂತ ನಮಗೆ ಸಿಕ್ಕಿದ ಆರ್ಶಿವಾದನೇ ಜಾಸ್ತಿ. ನಮಗಿದ್ದ ಸೌಕರ್ಯಗಳನ್ನು ಬಿಟ್ಟ ಹೋದಾಗ ಜೀವನದಲ್ಲಿ ಮೊದಲು ಯಾವುದನ್ನು ಮಾಡಬೇಕು ಅನ್ನೋದನ್ನು ಕಲಿತ್ವಿ. ಯಾವುದು ನಮ್ಮ ಜೀವನದಲ್ಲಿ ಬೇಕೇ ಬೇಕು ಅಂತ ಅಂದ್ಕೊಂಡಿದ್ದವೋ ಅವೆಲ್ಲ ಇಲ್ಲಾಂದ್ರೂ ಬದುಕೋಕೆ ಆಗುತ್ತೆ ಅಂತ ಗೊತ್ತಾಯ್ತು. ನಮಗೆ ಒಂದೊಂದು ಅನುಭವ ಆಗ್ತಾ ಇದ್ದ ಹಾಗೆ ಯೆಹೋವನಿಗೋಸ್ಕರ ನಮ್ಮಿಂದ ಆಗೋದನ್ನೆಲ್ಲ ಮಾಡಬೇಕು ಅನ್ನೋ ಛಲ ಬಂತು. ನಾವೀಗ ನಿಜವಾಗಲೂ ತೃಪ್ತಿಯಿಂದ ಇದ್ದೀವಿ.” ಇದೇ ಅನುಭವನೇ ತುಂಬ ಜನರಿಗೆ ಆಗಿದೆ.
ಈ ಮುಂಚೆ ತಿಳಿಸಲಾದ ಎರಿಕಾ ಹೀಗೆ ಹೇಳ್ತಾಳೆ, “ಯೆಹೋವನಲ್ಲಿ ಭರವಸೆ ಇಡೋದು ಅಂದ್ರೆ ಏನು ಅಂತ ನಾನು ಮತ್ತು ನನ್ನ ಗಂಡ ಕಲಿತ್ವಿ. ಯೆಹೋವನು ನಮಗೆ ತುಂಬ ಸಹಾಯ ಮಾಡಿದ್ದಾನೆ. ‘ಆತನು ಹೀಗೂ ಸಹಾಯ ಮಾಡ್ತಾನಾ?’ ಅಂತ ಇಲ್ಲಿ ಬಂದಮೇಲೆ ಗೊತ್ತಾಯ್ತು. ಇಂಥ ಹೊಸ ಹೊಸ ಅನುಭವಗಳಿಂದ ನಾನು ಮತ್ತು ನನ್ನ ಯಜಮಾನರು ತುಂಬ ಹತ್ರ ಆದ್ವಿ.”