ಬೈಬಲ್‌ನಲ್ಲಿರೋ ಸ್ತ್ರೀಯರಿಂದ ನಾವು ಯಾವ ಪಾಠ ಕಲಿಬಹುದು?
ಬೈಬಲ್ ಕೊಡೋ ಉತ್ತರ
ಬೈಬಲ್‌ನಲ್ಲಿ ಅನೇಕ ಸ್ತ್ರೀಯರ ಉದಾಹರಣೆಗಳು ಇವೆ. ಆ ಸ್ತ್ರೀಯರಿಂದ ನಾವು ತುಂಬ ಪಾಠಗಳನ್ನ ಕಲಿಬಹುದು. (ರೋಮನ್ನರಿಗೆ 15:4; 2 ತಿಮೊತಿ 3:16, 17) ಈ ಲೇಖನದಲ್ಲಿ ನಾವು ಕೆಲವು ಸ್ತ್ರೀಯರ ಉದಾಹರಣೆಗಳನ್ನ ನೋಡೋಣ. ಅವುಗಳಲ್ಲಿ ಕೆಲವೊಂದು ಒಳ್ಳೇ ಮಾದರಿನೂ ಇದೆ, ಕೆಟ್ಟ ಮಾದರಿನೂ ಇದೆ.—1 ಕೊರಿಂಥ 10:11; ಇಬ್ರಿಯ 6:12.
ಅಬೀಗೈಲ್
ಅಬೀಗೈಲ್ ಯಾರು? ಇವಳು ನಾಬಾಲನ ಹೆಂಡತಿ. ಈ ನಾಬಾಲ ತುಂಬ ಶ್ರೀಮಂತ ಮತ್ತು ಕಠೋರ ವ್ಯಕ್ತಿ ಆಗಿದ್ದ. ಆದ್ರೆ ಅಬೀಗೈಲ್ ಜಾಣೆ, ಅವಳಲ್ಲಿ ದೀನತೆ ಇತ್ತು. ಅವಳು ನೋಡೋಕೆ ತುಂಬ ಸುಂದರವಾಗಿದ್ದಳು. ಅವಳಿಗೆ ಯೆಹೋವನ ಮೇಲೆ ಭಯಭಕ್ತಿನೂ ಇತ್ತು.—1 ಸಮುವೇಲ 25:3.
ಅವಳು ಏನ್ ಮಾಡಿದಳು? ಅಬೀಗೈಲ್ ಜಾಣ್ಮೆಯಿಂದ ನಡ್ಕೊಂಡು, ಬುದ್ಧಿ ಉಪಯೋಗಿಸಿ ಮುಂದೆ ಬರೋ ಕಷ್ಟದಿಂದ ತಪ್ಪಿಸ್ಕೊಂಡಳು. ಇಸ್ರಾಯೇಲ್ಯರ ಮುಂದಿನ ರಾಜ ದಾವೀದ ಎಲ್ಲಿ ಅಡಿಗಿಕೊಂಡಿದ್ದನೋ ಆ ಸ್ಥಳದ ಹತ್ರನೇ ಅಬೀಗೈಲ್ ಮತ್ತು ನಾಬಾಲ ಇದ್ರು. ನಾಬಾಲನ ಕುರಿಗಳನ್ನ ದಾವೀದ ಮತ್ತು ಅವನ ಜೊತೆ ಇದ್ದವರು ಕಳ್ಳರಿಂದ ಕಾಪಾಡಿದ್ರು. ಆದ್ರೆ ದಾವೀದನ ಸೇವಕರು ನಾಬಾಲನ ಹತ್ರ ಆಹಾರ ಕೇಳೋಕೆ ಬಂದಾಗ ಅವನು ರೇಗಾಡಿ ಕೊಡೋಕಾಗಲ್ಲ ಅಂದ. ಇದ್ರಿಂದ ದಾವೀದನ ಕೋಪ ನೆತ್ತಿಗೇರಿ, ತನ್ನ ಸೇವಕರನ್ನ ಕರ್ಕೊಂಡು ನಾಬಾಲನನ್ನ ಮತ್ತು ಅವನ ಕುಟುಂಬದವರನ್ನ ಸಾಯಿಸೋಕೆ ಹೊರಟ.—1 ಸಮುವೇಲ 25:10-12, 22.
ನಾಬಾಲ ನಡ್ಕೊಂಡ ವಿಷ್ಯ ಅಬೀಗೈಲಳ ಕಿವಿಗೆ ಬಿದ್ದ ತಕ್ಷಣ ಅವಳು ತನ್ನ ಸೇವಕರ ಕೈಯಲ್ಲಿ ದಾವೀದನಿಗೆ ಮತ್ತು ಅವನ ಸೇವಕರಿಗೆ ಆಹಾರ ಕೊಟ್ಟು ಕಳಿಸಿದಳು. ಅಷ್ಟೇ ಅಲ್ಲ ತನ್ನ ಸೇವಕರ ಜೊತೆ ಬಂದು ದಾವೀದನ ಹತ್ರ ಕ್ಷಮೆ ಕೂಡ ಕೇಳಿದಳು. (1 ಸಮುವೇಲ 25:14-19, 24-31) ಅವಳು ತಂದ ಉಡುಗೊರೆ, ಅವಳ ದೀನತೆ, ಕೊಟ್ಟ ಸಲಹೆ ಇದನ್ನೆಲ್ಲ ದಾವೀದ ನೋಡಿದಾಗ ದೇವರೇ ಅವಳನ್ನ ಕಳಿಸಿ ಮುಂದೆ ಆಗೋ ಅನಾಹುತನ ತಪ್ಪಿಸಿದ ಅಂತ ಅಂದ್ಕೊಂಡ. (1 ಸಮುವೇಲ 25:32, 33) ಸ್ವಲ್ಪ ದಿನ ಆದ್ಮೇಲೆ ನಾಬಾಲ ಸತ್ತುಹೋದ. ದಾವೀದ ಅಬೀಗೈಲಳನ್ನ ಮದುವೆ ಮಾಡ್ಕೊಂಡ.—1 ಸಮುವೇಲ 25:37-41.
ಅಬೀಗೈಲಳಿಂದ ನಾವೇನು ಕಲಿಬಹುದು? ಅಬೀಗೈಲಳ ಹತ್ರ ಆಸ್ತಿ, ಸೌಂದರ್ಯ ಎಲ್ಲಾ ಇದ್ರು ‘ತಾನೇ ಗ್ರೇಟು’ ಅಂತ ಯಾವತ್ತು ಅಂದ್ಕೊಂಡಿಲ್ಲ. ಅವಳ ತಪ್ಪಿಲ್ಲದಿದ್ರೂ ಶಾಂತಿ ಕಾಪಾಡ್ಕೋಸ್ಕರ ಕ್ಷಮೆ ಕೇಳೋಕೆ ರೆಡಿ ಇದ್ದಳು. ಕಷ್ಟಕರ ಸಮಯದಲ್ಲಿ ಕೂಡ ಸಮಾಧಾನದಿಂದ, ಜಾಣ್ಮೆಯಿಂದ, ಧೈರ್ಯದಿಂದ ಮತ್ತು ಬುದ್ಧಿವಂತೆಕೆಯಿಂದ ನಡ್ಕೊಂಡಳು.
▸ ಅಬೀಗೈಲಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ವಿವೇಚನೆಯಿಂದ ಕ್ರಿಯೆಗೈದಾಕೆ” ಅನ್ನೋ ಲೇಖನ ನೋಡಿ.
ಈಜೆಬೇಲ್
ಈಜೆಬೇಲ್ ಯಾರು? ಇವಳು ಇಸ್ರಾಯೇಲಿನ ರಾಜನಾದ ಅಹಾಬನ ಹೆಂಡತಿ. ಇವಳು ಇಸ್ರಾಯೇಲ್ಯ ಸ್ತ್ರೀಯೂ ಅಲ್ಲ, ಯೆಹೋವನ ಆರಾಧಕಳೂ ಅಲ್ಲ. ಇವಳು ಕಾನಾನ್ಯರ ದೇವರಾದ ಬಾಳನ ಆರಾಧಕಳು.
ಅವಳು ಏನ್ ಮಾಡಿದಳು? ರಾಣಿ ಈಜೆಬೇಲ್ ಸ್ವಲ್ಪನೂ ಕರುಣೆ ಇಲ್ಲದೆ ಕ್ರೂರಿಯಾಗಿ ದರ್ಪದಿಂದ ಅಧಿಕಾರ ನಡಿಸ್ತಿದ್ದಳು. ಅವಳು ಬಾಳನ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಲೈಂಗಿಕ ಅನೈತಿಕತೆಯನ್ನ ಎಲ್ಲರೂ ಮಾಡುವಂತೆ ಪ್ರೋತ್ಸಾಹಿಸಿದಳು. ಅದೇ ಸಮಯದಲ್ಲಿ, ಸತ್ಯ ದೇವರಾದ ಯೆಹೋವನ ಅರಾಧನೆಯನ್ನ ಎಲ್ಲರೂ ನಿಲ್ಲಿಸುವಂತೆ ಕುಮ್ಮಕ್ಕು ಕೊಟ್ಟಳು.—1 ಅರಸು 18:4, 13; 19:1-3.
ಈಜೆಬೇಲ್ ತನ್ನ ಸ್ವಾರ್ಥಕೋಸ್ಕರ ಸುಳ್ಳು ಹೇಳಿದಳು, ಕೊಲೆ ಮಾಡಿದಳು. (1 ಅರಸು 21:8-16) ದೇವರು ಹೇಳಿದ ಹಾಗೆ ಅವಳು ಕ್ರೂರವಾಗಿ ಸತ್ತಳು, ಅವಳ ದೇಹ ಸಮಾಧಿ ಸೇರಲಿಲ್ಲ.—1 ಅರಸು 21:23; 2 ಅರಸು 9:10, 32-37.
ಈಜೆಬೇಲಳಿಂದ ನಾವೇನು ಕಲಿಬಹುದು? ಇವಳು ನಮಗೊಂದು ಕೆಟ್ಟ ಮಾದರಿ. ಅವಳು ನಾಚಿಕೆಗೆಟ್ಟವಳು ಮತ್ತು ತನಗೆ ಬೇಕಾದದ್ದನ್ನ ಪಡಿಯೋಕೋಸ್ಕರ ಏನ್ ಮಾಡೋಕು ರೆಡಿ ಇದ್ದಳು. ಆದ್ರಿಂದ ಅವಳಿಗೆ ಮಾನ-ಮರ್ಯಾದೆ ಇಲ್ಲದಿದ್ದವಳು, ಅನೈತಿಕತೆ ನಡೆಸುತ್ತಿದ್ದವಳು, ಕ್ರೂರಿ ಅನ್ನೋ ಹೆಸ್ರು ಬಂತು.
ಎಸ್ತೇರ್
ಎಸ್ತೇರ್ ಯಾರು? ಇವಳು ಯೆಹೂದ್ಯಳು. ಪರ್ಷಿಯದ ರಾಜ ಅಹಷ್ವೇರೋಷ ಇವಳನ್ನ ರಾಣಿಯಾಗಿ ಆರಿಸಿಕೊಂಡಿದ್ದ.
ಅವಳು ಏನ್ ಮಾಡಿದಳು? ರಾಣಿ ಎಸ್ತೇರ್ ತನ್ನ ಅಧಿಕಾರ ಬಳಸಿ ತನ್ನ ಜನರನ್ನ ಸಾವಿನ ದವಡೆಯಿಂದ ಬಿಡಿಸಿದಳು. ಪರ್ಷಿಯದಲ್ಲಿದ್ದ ಯೆಹೂದ್ಯರನ್ನೆಲ್ಲ ಸಾಯಿಸಬೇಕು ಅನ್ನೋ ನಿಯಮ ಹೊರಡಿಸಲಾಗಿತ್ತು. ಪತ್ರದ ಮೂಲಕ ಈ ಸಂದೇಶ ರಾಣಿ ಎಸ್ತೇರ್ ಕೈಗೆ ಸೇರಿತ್ತು. ಈ ಸಂಚು ರೂಪಿಸಿದ್ದು ಆ ದೇಶದ ಪ್ರಧಾನ ಮಂತ್ರಿಯಾಗಿದ್ದ ಹಾಮಾನ. (ಎಸ್ತೇರ್ 3:13-15; 4:1, 5) ಎಸ್ತೇರಳು ಚಿಕ್ಕಪ್ಪನಾದ ಮೊರ್ದೆಕೈ ಸಹಾಯ ಪಡೆದಳು ಮತ್ತು ತನ್ನ ಜೀವವನ್ನ ಪಣಕ್ಕಿಟ್ಟು ರಾಜ ಅಹಷ್ವೇರೋಷನ ಮುಂದೆ ಈ ಕುತಂತ್ರವನ್ನ ಬಯಲು ಮಾಡಿದಳು. (ಎಸ್ತೇರ್ 4:10-16; 7:1-10) ಯೆಹೂದಿಗಳು ತಮ್ಮನು ತಾವೇ ಸಂರಕ್ಷಿಸ್ಕೊಳ್ಳೋಕೆ ಇನ್ನೊಂದು ನಿಯಮ ಹೊರಡಿಸುವಂತೆ ಎಸ್ತೇರ್ ಮತ್ತು ಮೊರ್ದೆಕೈಗೆ ರಾಜ ಅಹಷ್ವೇರೋಷ ಒಪ್ಪಿಗೆ ಕೊಟ್ಟನು.—ಎಸ್ತೇರ್ 8:5-11; 9:16, 17.
ಎಸ್ತೇರಳಿಂದ ನಾವೇನು ಕಲಿಬಹುದು? ರಾಣಿ ಎಸ್ತೇರ್ ಧೈರ್ಯ, ದೀನತೆ ಮತ್ತು ಒಳ್ಳೇ ನಡತೆಗೆ ಉತ್ತಮ ಮಾದರಿ. (ಕೀರ್ತನೆ 31:24; ಫಿಲಿಪ್ಪಿ 2:3) ಅವಳಿಗಿದ್ದ ಅಂದ-ಚಂದ, ಅಧಿಕಾರದಿಂದ ಅವಳು ‘ನಾನೇ ಮೇಲು’ ಅಂತ ಹೆಮ್ಮೆ ಪಡಬಹುದಿತ್ತು. ಆದ್ರೆ ಅವಳು ತಗ್ಗಿಬಗ್ಗಿ ದೀನತೆಯಿಂದ ನಡ್ಕೊಂಡಳು, ಬೇರೆಯವರ ಸಲಹೆ ಮತ್ತು ಸಹಾಯ ಪಡ್ಕೊಂಡಳು. ಗಂಡನ ಜೊತೆ ಮಾತಾಡುವಾಗ್ಲೂ ತುಂಬ ಜಾಣತನದಿಂದ, ಗೌರವದಿಂದ ಅದೇ ಸಮಯದಲ್ಲಿ ಧೈರ್ಯದಿಂದ ಮಾತಾಡಿದಳು. ಯೆಹೂದ್ಯರು ಸಾವಿನ ಬಾಯಲ್ಲಿದ್ದಾಗ ನುಣುಚಿಕೊಳ್ಳೋ ಬದಲು ಧೈರ್ಯದಿಂದ ತಾನು ಒಬ್ಬ ಯೆಹೂದ್ಯಳು ಅಂತ ತೋರಿಸಿಕೊಟ್ಟಳು.
▸ ಎಸ್ತೇರ್ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ದೇವಜನರ ಪರವಹಿಸಿ ನಿಂತಾಕೆ” ಮತ್ತು “ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ” ಅನ್ನೋ ಲೇಖನ ನೋಡಿ.
ದೆಬೋರ
ದೆಬೋರ ಯಾರು? ಅವಳು ಯೆಹೋವನ ಪ್ರವಾದಿನಿ. ಯೆಹೋವ ದೇವರು ಕೊಡೋ ಸಂದೇಶವನ್ನ ಜನ್ರಿಗೆ ತಲುಪಿಸ್ತಿದ್ದಳು ಮತ್ತು ಇಸ್ರಾಯೇಲ್ಯರ ಮಧ್ಯ ಬರೋ ಸಮಸ್ಯೆಗಳನ್ನ ಯೆಹೋವನ ಸಹಾಯದಿಂದ ಪರಿಹಾರ ಮಾಡ್ತಿದ್ದಳು.—ನ್ಯಾಯಸ್ಥಾಪಕರು 4:4, 5.
ಅವಳು ಏನ್ ಮಾಡಿದಳು? ದೇವರ ಆರಾಧಕರು ಸಮಸ್ಯೆಯಲ್ಲಿದ್ದಾಗ ಧೈರ್ಯದಿಂದ ಸಹಾಯ ಮಾಡಿದಳು. ದೇವರು ಹೇಳಿದ ಹಾಗೆ, ಇಸ್ರಾಯೇಲ್ಯರ ವೈರಿಯಾದ ಕಾನಾನ್ಯರ ವಿರುದ್ಧ ಸೈನ್ಯ ಕಟ್ಟೋಕೆ ಬಾರಾಕನಿಗೆ ಹೇಳಿ ಕಳಿಸಿದಳು. (ನ್ಯಾಯಸ್ಥಾಪಕರು 4:6, 7) ಬಾರಾಕ ‘ಯುದ್ಧದಲ್ಲಿ ನೀನು ನಮ್ಮ ಜೊತೆನೇ ಇರಬೇಕು’ ಅಂತ ದೆಬೋರಳನ್ನ ಕೇಳಿಕೊಂಡಾಗ ಅವಳು ಭಯಪಡದೆ ಅವ್ರ ಜೊತೆ ಇದ್ದು ಬೆಂಬಲ ಕೊಟ್ಟಳು.—ನ್ಯಾಯಸ್ಥಾಪಕರು 4:8, 9.
ಯೆಹೋವ ದೇವರು ಇಸ್ರಾಯೇಲ್ಯರನ್ನ ಯುದ್ಧದಲ್ಲಿ ಗೆಲ್ಲಿಸಿದಾಗ, ಯೆಹೋವನನ್ನ ಹೊಗಳ್ತಾ ದೆಬೋರ ಮತ್ತು ಬಾರಾಕ ಹಾಡಿದ ಹಾಡಲ್ಲಿ ಒಂದು ಭಾಗವನ್ನ ದೆಬೋರಳೇ ರಚಿಸಿದ್ದು. ಕಾನಾನ್ಯರನ್ನ ಸೋಲಿಸೋದ್ರಲ್ಲಿ ಯಾಯೇಲಳು ಮಾಡಿದ ದೊಡ್ಡ ಸಾಹಸದ ಬಗ್ಗೆ ಆ ಹಾಡಲ್ಲಿ ಹಾಡಿ ಹೊಗಳಿದಳು.—ನ್ಯಾಯಸ್ಥಾಪಕರು 5.
ದೆಬೋರಳಿಂದ ನಾವೇನು ಕಲಿಬಹುದು? ದೆಬೋರ ಬೇರೆಯವರಿಗೋಸ್ಕರ ಏನ್ ಮಾಡೋಕು ರೆಡಿ ಇದ್ದಳು. ಅವಳು ಧೈರ್ಯಶಾಲಿ ಆಗಿದ್ದಳು. ದೇವರಿಗೆ ಏನು ಇಷ್ಟನೋ ಅದನ್ನ ಮಾಡೋಕೆ ಇಸ್ರಾಯೇಲ್ಯರಿಗೆ ಪ್ರೋತ್ಸಾಹ ಕೊಡುತ್ತಿದ್ದಳು. ಅವರು ಒಳ್ಳೇದನ್ನ ಮಾಡಿದಾಗ ಅವ್ರನ್ನ ಧಾರಳವಾಗಿ ಹೊಗಳುತ್ತಾ ಮೆಚ್ಚಿಗೆಯನ್ನ ವ್ಯಕ್ತಪಡಿಸ್ತಿದ್ದಳು.
▸ ದೆಬೋರಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನಾನು ಇಸ್ರಾಯೇಲಿಗೆ ತಾಯಿಯಾಗಿ ಎದ್ದು ಬರುವೆ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ದೆಲೀಲಾ
ದೆಲೀಲಾ ಯಾರು? ಇವಳು ಶಕ್ತಿಶಾಲಿಯಾದ ಸಂಸೋನನು ಪ್ರೀತಿಸಿದ ಸ್ತ್ರೀ.—ನ್ಯಾಯಸ್ಥಾಪಕರು 16:4, 5.
ಅವಳು ಏನ್ ಮಾಡಿದಳು? ಫಿಲಿಷ್ಟಿಯರ ಕೈಯಿಂದ ಇಸ್ರಾಯೇಲ್ಯರನ್ನ ರಕ್ಷಿಸೋಕೆ ಯೆಹೋವನು ಸಂಸೋನನ್ನ ಆರಿಸಿಕೊಂಡಿದ್ದನು. ಯೆಹೋವನು ಅವನಿಗೆ ಅದ್ಭುತ ಶಕ್ತಿ ಕೊಟ್ಟಿದ್ರಿಂದ ಫಿಲಿಷ್ಟಿಯರು ಅವನನ್ನ ಸೋಲಿಸೋಕೇ ಆಗಲಿಲ್ಲ. (ನ್ಯಾಯಸ್ಥಾಪಕರು 13:5) ಅದಕ್ಕೆ ಫಿಲಿಷ್ಟಿಯರು ದೆಲೀಲಳನ್ನ ಬಳಸ್ಕೊಂಡ್ರು. ಅವಳು ಅವರ ಹತ್ರ ಹಣ ತಗೊಂಡು ಸಂಸೋನನಿಗೆ ನಂಬಿಕೆ ದ್ರೋಹ ಮಾಡಿದಳು.
ಸಂಸೋನನ ಶಕ್ತಿಯ ಒಳಗುಟ್ಟೇನು ಅಂತ ತಿಳ್ಕೊಳ್ಳೋಕೆ ಫಿಲಿಷ್ಟಿಯರು ದೆಲೀಲಳಿಗೆ ದುಡ್ಡು ಕೊಟ್ರು. ದೆಲೀಲಾ ದುಡ್ಡು ತಗೊಂಡು ಕೆಲಸ ಶುರು ಮಾಡಿದಳು. ತುಂಬ ಪ್ರಯತ್ನದ ನಂತ್ರ ಸಂಸೋನನ ಒಳಗುಟ್ಟೇನು ಅಂತ ತಿಳ್ಕೊಂಡಳು. (ನ್ಯಾಯಸ್ಥಾಪಕರು 16:15-17) ಅವಳು ಅದನ್ನ ಫಿಲಿಷ್ಟಿಯರಿಗೆ ಹೇಳಿದಳು, ಅವರು ಅವನನ್ನ ಹಿಡಿದು ಜೈಲಿಗೆ ಹಾಕಿದ್ರು.—ನ್ಯಾಯಸ್ಥಾಪಕರು 16:18-21.
ದೆಲೀಲಾಳಿಂದ ನಾವೇನು ಕಲಿಬಹುದು? ಇವಳು ನಮಗೊಂದು ಕೆಟ್ಟ ಮಾದರಿ. ಹಣದಾಸೆಯಿಂದ ಯೆಹೋವ ದೇವರ ಸೇವಕನಿಗೆ ನಿಷ್ಠೆ ತೋರಿಸಲಿಲ್ಲ, ದ್ರೋಹ ಬಗೆದಳು, ಸ್ವಾರ್ಥಿಯಾದಳು.
ಮರಿಯ (ಯೇಸುವಿನ ತಾಯಿ)
ಮರಿಯ ಯಾರು? ಈ ಯುವತಿ ಒಬ್ಬ ಯೆಹೂದ್ಯಳು. ದೇವರು ಅದ್ಭುತ ಮಾಡಿದ್ರಿಂದ ಅವಳು ಕನ್ಯೆಯಾಗಿದ್ರು ಯೇಸುವಿಗೆ ಜನ್ಮ ಕೊಡಲು ಸಾಧ್ಯ ಆಯ್ತು.
ಅವಳು ಏನ್ ಮಾಡಿದಳು? ಮರಿಯ ದೀನತೆಯಿಂದ ದೇವರು ಹೇಳಿದ ಹಾಗೆ ಮಾಡಿದಳು. ಇವಳಿಗೆ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿತ್ತು. ಆದ್ರೆ ಒಂದಿನ ದೇವದೂತ ಅವಳಿಗೆ ಕಾಣಿಸಿಕೊಂಡು ‘ನೀನು ಗರ್ಭಿಣಿ ಆಗಿ, ಜನ ತುಂಬ ಸಮಯದಿಂದ ಕಾಯ್ತಿದ್ದ ಮೆಸ್ಸೀಯನಿಗೆ ಜನ್ಮ ಕೊಡ್ತೀಯ’ ಅಂತ ಹೇಳಿದ. (ಲೂಕ 1:26-33) ಆಗ ಅವಳು ಸಂತೋಷದಿಂದ ಈ ನೇಮಕವನ್ನ ಒಪ್ಕೊಂಡಳು. ಯೇಸು ಹುಟ್ಟಿದ ಮೇಲೆ ಅವಳು ಕನ್ಯೆಯಾಗೇ ಉಳಿದಳಾ? ಇಲ್ಲ. ಮರಿಯ ಮತ್ತು ಯೋಸೇಫನಿಗೆ ನಾಲ್ಕು ಗಂಡು ಮಕ್ಕಳು ಇದ್ರು. ಅದ್ರೊಟ್ಟಿಗೆ ಕಡಿಮೆಪಕ್ಷ ಎರಡು ಹೆಣ್ಣು ಮಕ್ಕಳಿದ್ರು. (ಮತ್ತಾಯ 13:55, 56) ಇಂಥ ದೊಡ್ಡ ಸುಯೋಗ ಸಿಕ್ಕಿದ್ರೂ ಅವಳು ತನಗೆ ಮಹಿಮೆ ಸಿಗಬೇಕು, ತನ್ನನ್ನ ಎಲ್ಲರು ಸ್ಪೆಷಲಾಗಿ ನೋಡಬೇಕು ಅಂತ ಆಸೆ ಪಡಲಿಲ್ಲ. ಯೇಸು ಇದ್ದಾಗ್ಲೂ ಸರಿ, ಕ್ರೈಸ್ತ ಸಭೆಯ ಭಾಗವಾಗಿದಾಗ್ಲೂ ಸರಿ ಈ ಆಸೆ ಅವಳಲ್ಲಿ ಹುಟ್ಟಲಿಲ್ಲ.
ಮರಿಯಳಿಂದ ನಾವೇನು ಕಲಿಬಹುದು? ಮರಿಯ ಒಬ್ಬ ನಂಬಿಗಸ್ತ ಸ್ತ್ರೀ. ಅವಳು ಗಂಭೀರ ಜವಾಬ್ದಾರಿಯನ್ನ ಸಂತೋಷದಿಂದ ಮಾಡಿದಳು. ಅವಳು ದೇವರ ವಾಕ್ಯವನ್ನ ಚೆನ್ನಾಗಿ ತಿಳ್ಕೊಂಡಿದ್ದಳು. ಉದಾಹರಣೆಗೆ ಲೂಕ 1:46-55 ರಲ್ಲಿ ಮರಿಯ ಸುಮಾರು 20 ವಚನಗಳನ್ನ ಬಳಸಿ ಮಾತಾಡಿದ್ದನ್ನ ನೋಡಬಹುದು.
▸ ಮರಿಯಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ಮರಿಯಳ ಉದಾಹರಣೆಯಿಂದ ಕಲಿಯಿರಿ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ಮರಿಯ (ಮಾರ್ಥ ಮತ್ತು ಲಾಜರನ ಸಹೋದರಿ)
ಮರಿಯ ಯಾರು? ಇವಳು ಲಾಜರ ಮತ್ತು ಮಾರ್ಥಳ ಸಹೋದರಿ. ಈ ಮೂವರು ಯೇಸುವಿನ ಆಪ್ತ ಸ್ನೇಹಿತರು.
ಅವಳು ಏನ್ ಮಾಡಿದಳು? ಮರಿಯಳಿಗೆ ಯೇಸುವಿನ ಮೇಲೆ ತುಂಬ ಗೌರವ ಇತ್ತು. ಯೇಸು ದೇವರ ಮಗ ಅಂತ ಅವಳು ನಂಬಿದಳು. ಯೇಸು ಇದಿದ್ರೆ ತನ್ನ ಸಹೋದರ ಲಾಜರ ಸಾಯುತ್ತಿರಲಿಲ್ಲ ಅನ್ನೋ ನಂಬಿಕೆ ಅವಳಿಗಿತ್ತು. ಯೇಸು ಲಾಜರನನ್ನ ಪುನರುತ್ಥಾನ ಮಾಡಿದಾಗ ಅವಳು ಅಲ್ಲೇ ಇದ್ದಳು. ಒಂದಿನ ಯೇಸು ಅವ್ರ ಮನೆಗೆ ಬಂದಾಗ ಮಾರ್ಥ ಅಡುಗೆ ಮಾಡೋದ್ರಲ್ಲಿ ಮುಳುಗಿದ್ದಳು. ಆದ್ರೆ ಮರಿಯ ಯೇಸು ಹತ್ರ ಕೂತು ಆತನು ಹೇಳೋದನ್ನೆಲ್ಲ ಕೇಳಿಸ್ಕೊಳ್ತಿದ್ದಳು. ‘ಕೆಲಸ ಬಿಟ್ಟು ಕೂತ್ಕೊಂಡಿದ್ದೀಯಾ’ ಅಂತ ಮಾರ್ಥ ಬೈದಾಗ ಯೇಸು ಮರಿಯ ಮಾಡಿದ್ದು ಸರಿ ಅಂತ ಹೇಳಿದ. ಮುಖ್ಯ ವಿಷ್ಯಗಳ ಕಡೆ ಗಮನಕೊಟ್ಟಿದ್ದಕ್ಕೆ ಮರಿಯಳನ್ನ ಹೊಗಳಿದ.—ಲೂಕ 10:38-42.
ಇನ್ನೊಂದು ಸಂದರ್ಭದಲ್ಲಿ, ಮರಿಯ ಧಾರಾಳ ಸ್ವಭಾವವನ್ನ ತೋರಿಸಿದಳು. ಅವಳು ತುಂಬ ‘ಬೆಲೆಯುಳ್ಳ ಸುಗಂಧ ತೈಲವನ್ನ’ ಯೇಸುವಿನ ತಲೆ ಮತ್ತು ಕಾಲಿನ ಮೇಲೆ ಹಾಕಿದಳು. (ಮತ್ತಾಯ 26:6, 7) ಮರಿಯ ತೈಲನ ಹಾಳ್ ಮಾಡ್ತಿದ್ದಾಳೆ ಅಂತ ಕೆಲವರು ಬೈದ್ರು. ಆದ್ರೆ ಯೇಸು ಅವಳ ಪರವಹಿಸಿ ಮಾತಾಡ್ತಾ: “ಲೋಕದ ಸುತ್ತಲೂ ಎಲ್ಲೆಲ್ಲ ಸುವಾರ್ತೆಯು ಸಾರಲ್ಪಡುತ್ತದೋ ಅಲ್ಲೆಲ್ಲ ಈ ಸ್ತ್ರೀಯು ಮಾಡಿದ ಕಾರ್ಯವು ಸಹ ಅವಳ ನೆನಪಿಗಾಗಿ ತಿಳಿಸಲ್ಪಡುವುದು” ಅಂದನು.—ಮತ್ತಾಯ 24:14; 26:8-13.
ಮರಿಯಳಿಂದ ನಾವೇನು ಕಲಿಬಹುದು? ಮರಿಯಳಿಗೆ ದೇವರ ಮೇಲೆ ತುಂಬ ನಂಬಿಕೆ ಇತ್ತು. ಎಲ್ಲದ್ದಕ್ಕಿಂತ ದೇವರ ಆರಾಧನೆಯೇ ತುಂಬ ಮುಖ್ಯವಾಗಿತ್ತು. ಬೆಲೆಯುಳ್ಳ ತೈಲ ಹಾಕಿ ದುಡ್ಡಿಗೆ ಬೆಲೆ ಕೊಡದೆ ಯೇಸುವಿಗೆ ಬೆಲೆ ಕೊಟ್ಟು ಗೌರವಿಸಿದಳು.
ಮಗ್ದಲದ ಮರಿಯ
ಮಗ್ದಲದ ಮರಿಯ ಯಾರು? ಅವಳು ಯೇಸುವಿನ ನಿಷ್ಠಾವಂತ ಶಿಷ್ಯೆ ಆಗಿದ್ದಳು.
ಅವಳು ಏನ್ ಮಾಡಿದಳು? ಯೇಸು ಮತ್ತು ಆತನ ಶಿಷ್ಯರ ಜೊತೆ ಪ್ರಯಾಣಿಸಿದವರಲ್ಲಿ ಇವಳು ಒಬ್ಬಳು. ಅವ್ರಿಗೆ ಬೇಕಾದದ್ದನ್ನ ಕೊಡೋಕೆ ಇವಳು ತನ್ನ ಹಣವನ್ನ ಧಾರಾಳವಾಗಿ ಬಳಸಿದಳು. (ಲೂಕ 8:1-3) ಇವಳು ಯೇಸುವಿನ ಜೊತೆ ಕೊನೆ ತನಕ ಇದ್ದಳು. ಅವನನ್ನ ಸಾಯಿಸಿದಾಗ್ಲೂ ಹತ್ರ ಇದ್ದಳು. ಯೇಸು ಪುನರುತ್ಥಾನ ಆದಾಗ ಅವನನ್ನ ಮೊದಲು ನೋಡೋ ಸುಯೋಗ ಇವಳಿಗೂ ಸಿಕ್ತು.—ಯೋಹಾನ 20:11-18.
ಮರಿಯಳಿಂದ ನಾವೇನು ಕಲಿಬಹುದು? ಮಗ್ದಲದ ಮರಿಯಳು ಯೇಸುವಿನ ಸೇವೆಗೆ ಪೂರ್ತಿ ಬೆಂಬಲ ಕೊಟ್ಟಳು. ನಂಬಿಗಸ್ತ ಶಿಷ್ಯಳಾಗಿ ಉಳಿದಳು.
ಮಾರ್ಥ
ಮಾರ್ಥ ಯಾರು? ಇವಳು ಲಾಜರ ಮತ್ತು ಮರಿಯಳ ಸಹೋದರಿ. ಈ ಮೂವರು ಯೆರೂಸಲೇಮಿನಲ್ಲಿದ್ದ ಬೇಥಾನ್ಯದಲ್ಲಿ ವಾಸಿಸ್ತಿದ್ರು.
ಅವಳು ಏನ್ ಮಾಡಿದಳು? ಯೇಸುವಿಗೆ ‘ಮಾರ್ಥ, ಅವಳ ಸಹೋದರಿ ಮರಿಯ ಮತ್ತು ಸಹೋದರ ಲಾಜರನ ಮೇಲೆ ಪ್ರೀತಿ ಇತ್ತು.’ ಮಾರ್ಥ ಕೂಡ ಯೇಸುವಿನ ಆಪ್ತ ಸ್ನೇಹಿತಳಾಗಿದ್ದಳು. (ಯೋಹಾನ 11:5) ಮಾರ್ಥ ತುಂಬ ಅತಿಥಿಸತ್ಕಾರ ಮಾಡ್ತಿದ್ದಳು. ಯೇಸು ಅವರ ಮನೆಗೆ ಬಂದಾಗ ಮರಿಯ ಆತನು ಹೇಳೋದನ್ನೆಲ್ಲ ಕೂತು ಕೇಳ್ತಿದ್ದಳು. ಆದ್ರೆ ಮಾರ್ಥ ಅಡುಗೆ ಮಾಡೋದ್ರಲ್ಲಿ ಮುಳುಗಿ ಹೋಗಿದ್ದಳು. ‘ಮರಿಯ ನನ್ಗೆ ಸಹಾಯ ಮಾಡ್ತಿಲ್ಲ’ ಅಂತ ಯೇಸುವಿನ ಹತ್ರ ಮಾರ್ಥ ದೂರಿದಳು. ಆಗ ಯೇಸು ನೋವು ಆಗದಂತೆ ಮಾರ್ಥಳನ್ನ ತಿದ್ದಿದನು.—ಲೂಕ 10:38-42.
ಲಾಜರನಿಗೆ ಹುಷಾರು ಇಲ್ಲದಿದ್ದಾಗ ಮಾರ್ಥ ಮತ್ತು ಮರಿಯ ಯೇಸುವಿಗೆ ಬರೋಕೆ ಹೇಳಿದರು. ಯಾಕಂದ್ರೆ ಅವ್ರಿಗೆ ಯೇಸು ಖಂಡಿತ ಗುಣಪಡಿಸ್ತಾನೆ ಅನ್ನೋ ನಂಬಿಕೆ ಇತ್ತು. (ಯೋಹಾನ 11:3, 21) ಆದ್ರೆ ಲಾಜರ ತೀರಿಕೊಂಡ. ಪುನರುತ್ಥಾನದ ಬಗ್ಗೆ ಬೈಬಲ್ ಕೊಡೋ ಮಾತಿನ ಮೇಲೆ ಮಾರ್ಥಳಿಗೆ ಎಷ್ಟು ನಂಬಿಕೆ ಇತ್ತು ಅಂತ ಅವಳು ಯೇಸುವಿನ ಜೊತೆ ಆಡಿದ ಮಾತಿನಿಂದ ಗೊತ್ತಾಗುತ್ತೆ. ತನ್ನ ಸಹೋರನನ್ನ ಎಬಿಸೋ ಶಕ್ತಿ ಯೇಸುವಿಗೆ ಇದೆ ಅನ್ನೋ ನಂಬಿಕೆ ಅವಳಿಗಿತ್ತು ಅಂತನೂ ಆ ಮಾತಿಂದ ಗೊತ್ತಾಗುತ್ತೆ.—ಯೋಹಾನ 11:20-27.
ಮಾರ್ಥಳಿಂದ ನಾವೇನು ಕಲಿಬಹುದು? ಮಾರ್ಥ ಅತಿಥಿಸತ್ಕಾರ ಮಾಡೋದ್ರಲ್ಲಿ ಎತ್ತಿದ ಕೈ. ಸಲಹೆ ಕೊಟ್ಟಾಗ ಪೂರ್ಣ ಮನಸ್ಸಿಂದ ಸ್ವೀಕರಿಸಿದಳು. ತನ್ನ ಮನಸ್ಸಿನ ಭಾವನೆಗಳನ್ನ ಮತ್ತು ತನ್ನ ನಂಬಿಕೆಯನ್ನ ಮುಕ್ತವಾಗಿ ತಿಳಿಸಿದಳು.
▸ ಮಾರ್ಥಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನಾನು ವಿಶ್ವಾಸವಿಟ್ಟಿದ್ದೇನೆ” ಅನ್ನೋ ಲೇಖನ ನೋಡಿ.
ಮಿರ್ಯಾಮ
ಮಿರ್ಯಾಮ ಯಾರು? ಇವಳು ಮೋಶೆ ಮತ್ತು ಆರೋನನ ಸಹೋದರಿ. ಬೈಬಲ್‌ನಲ್ಲಿರೋ ಪ್ರವಾದಿನಿಯರಲ್ಲಿ ಇವಳೇ ಮೊದಲಿನವಳು.
ಅವಳು ಏನ್ ಮಾಡಿದಳು? ಪ್ರವಾದಿನಿಯಾದ ಅವಳು ದೇವರ ಸಂದೇಶವನ್ನ ಜನ್ರಿಗೆ ತಿಳಿಸಿದಳು. ಇಸ್ರಾಯೇಲ್‌ನಲ್ಲಿ ಅವಳಿಗೆ ಮುಖ್ಯ ಸ್ಥಾನ ಇತ್ತು. ದೇವರು ಈಜಿಪ್ಟ್‌ನವರನ್ನ ಕೆಂಪು ಸಮುದ್ರದಲ್ಲಿ ನಾಶ ಮಾಡಿದ ನಂತ್ರ ಅಲ್ಲಿದ್ದ ಗಂಡಸರ ಜೊತೆ ಅವಳೂ ವಿಜಯ ಗೀತೆ ಹಾಡಿದಳು.—ವಿಮೋಚನಕಾಂಡ 15:1, 20, 21.
ಸ್ವಲ್ಪ ಸಮಯದ ನಂತ್ರ ಮಿರ್ಯಾಮ ಮತ್ತು ಆರೋನ ಮೋಶೆ ವಿರುದ್ಧ ದೂರೋಕೆ ಶುರು ಮಾಡಿದ್ರು. ಅವರಿಬ್ಬರು ಅಹಂಕಾರದಿಂದ ನಡ್ಕೊಂಡ್ರು, ಹೊಟ್ಟೆಕಿಚ್ಚು ಪಟ್ಟರು. ದೇವರು ಅವ್ರ ಮಾತನ್ನ ಕೇಳಿಸಿಕೊಳ್ತಾ ಇದ್ದನು. ಅಲ್ಲದೆ ಮಿರ್ಯಾಮ ಮತ್ತು ಆರೋನನಿಗೆ ಚೆನ್ನಾಗಿ ಬುದ್ಧಿ ಹೇಳಿದನು. (ಅರಣ್ಯಕಾಂಡ 12:1-9) ದೇವರು ಮಿರ್ಯಾಮಳಿಗೆ ಕುಷ್ಠ ಬರೋ ಹಾಗೆ ಮಾಡಿದನು. ಯಾಕಂದ್ರೆ ಮೋಶೆ ವಿರುದ್ಧ ದೂರೋಕೆ ಮೊದಲು ಶುರು ಮಾಡಿದು ಅವಳೇ. ಮೋಶೆ ಅವಳಿಗೋಸ್ಕರ ದೇವರ ಹತ್ರ ಬೇಡ್ಕೊಂಡಾಗ ದೇವರು ಅವಳನ್ನ ವಾಸಿ ಮಾಡಿದನು. ಅವಳು ಇಸ್ರಾಯೇಲ್ಯರ ಪಾಳೆಯದಿಂದ ಹೊರಗೆ ಏಳು ದಿನ ಪ್ರತ್ಯೇಕವಾಗಿ ಇದ್ದ ನಂತ್ರ ಪುನಃ ಪಾಳೆಯಕ್ಕೆ ಬರಲು ಅವಕಾಶ ಸಿಕ್ತು.—ಅರಣ್ಯಕಾಂಡ 12:10-15.
ಮಿರ್ಯಾಮ ದೇವರು ಕೊಟ್ಟ ಬುದ್ಧಿವಾದವನ್ನ ಸ್ವೀಕರಿಸದಳು ಅಂತ ಬೈಬಲ್ ಹೇಳುತ್ತೆ. ನೂರಾರು ವರ್ಷಗಳ ನಂತ್ರ, ದೇವರು ಇಸ್ರಾಯೇಲ್ಯರಿಗೆ, “ಮೋಶೆಯನ್ನೂ ಆರೋನನನ್ನೂ ಮಿರ್ಯಾಮಳನ್ನೂ ನಿನಗೆ ನಾಯಕರನ್ನಾಗಿ ಕಳುಹಿಸಿದೆನು” ಅಂತ ಹೇಳ್ತಾ ಅವಳಿಗಿದ್ದ ಅಮೂಲ್ಯ ಸುಯೋಗದ ಬಗ್ಗೆ ನೆನಪಿಸಿದನು.—ಮೀಕ 6:4.
ಮಿರ್ಯಾಮಳಿಂದ ನಾವೇನು ಕಲಿಬಹುದು? ದೇವರ ಸೇವಕರು ಒಬ್ಬರಿಗೊಬ್ಬರು ಅಥವಾ ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡೋದನ್ನ ಆತನು ಗಮನಿಸ್ತಾ ಇರ್ತಾನೆ ಅಂತ ಮಿರ್ಯಾಮಳ ಕಥೆಯಿಂದ ಗೊತ್ತಾಗುತ್ತೆ. ನಾವು ದೇವರನ್ನ ಮೆಚ್ಚಿಸಬೇಕಾದ್ರೆ ಅಹಂಕಾರ ಮತ್ತು ಹೊಟ್ಟೆಕಿಚ್ಚನ್ನ ಬಿಡಬೇಕು, ಈ ಗುಣಗಳು ನಮ್ಮಲ್ಲಿ ಇದ್ರೆ ಬೇರೆಯವರ ಹೆಸ್ರನ್ನ ಹಾಳು ಮಾಡ್ತೀವಿ ಅಂತ ಕಲಿಯುತ್ತೇವೆ.
ಯಾಯೇಲ
ಯಾಯೇಲ ಯಾರು? ಇವಳು ಹೆಬೆರನ ಹೆಂಡತಿ. ಹೆಬೆರ ಇಸ್ರಾಯೇಲ್ಯನಲ್ಲ. ಯಾಯೇಲ ದೇವರ ಜನ್ರಿಗೆ ಧೈರ್ಯದಿಂದ ಸಹಾಯ ಮಾಡಿದಳು.
ಅವಳು ಏನ್ ಮಾಡಿದಳು? ಕಾನಾನ್ಯರ ಸೇನಾಪತಿಯಾದ ಸೀಸೆರ ಇಸ್ರಾಯೇಲ್ಯರ ಜೊತೆ ಯುದ್ಧ ಮಾಡಿ ಸೋತ ನಂತ್ರ ಬಚ್ಚಿಟ್ಟುಕೊಳ್ಳೋಕೆ ಜಾಗ ಹುಡುಕ್ತಿದ್ದ. ಆಗ ಯಾಯೇಲಳು ತನ್ನ ಡೇರೆಗೆ ಬಂದು ಬಚ್ಚಿಟ್ಟುಕೊಳ್ಳುವಂತೆ ಅವನಿಗೆ ಹೇಳಿದಳು. ಆ ಸಮಯದಲ್ಲಿ ಯಾಯೇಲ ಕೂಡಲೇ ಹೆಜ್ಜೆ ತಗೊಂಡಳು. ಅವನು ನಿದೆಯಲ್ಲಿದ್ದಾಗ ಅವಳು ಅವನನ್ನ ಸಾಯಿಸಿದಳು.—ನ್ಯಾಯಸ್ಥಾಪಕರು 4:17-21.
ದೆಬೋರ, “ಯೆಹೋವನು ಸೀಸೆರನನ್ನು ಒಬ್ಬ ಸ್ತ್ರೀಗೆ ಒಪ್ಪಿಸಿಕೊಡುವನು” ಅಂತ ಪ್ರವಾದಿಸಿದ ಮಾತನ್ನ ಯಾಯೇಲ ನೆರವೇರಿಸಿದಳು. (ನ್ಯಾಯಸ್ಥಾಪಕರು 4:9) ಅದಕ್ಕೆ ಅವಳಿಗೆ ‘ಸ್ತ್ರೀಯರಲ್ಲೇ ಹೆಚ್ಚು ಆಶೀರ್ವಾದ ಸಿಕ್ಕಿದ ಸ್ತ್ರೀ’ ಅನ್ನೋ ಕೀರ್ತಿ ಸಿಕ್ತು.—ನ್ಯಾಯಸ್ಥಾಪಕರು 5:24.
ಯಾಯೇಲಳಿಂದ ನಾವೇನು ಕಲಿಬಹುದು? ಯಾಯೇಲಳು ಬೇಗನೇ ಹೆಜ್ಜೆ ತಗೊಂಡು ಧೈರ್ಯ ತೋರಿಸಿದಳು. ಹೇಳಿದ ಮಾತನ್ನ ನೆರವೇರಿಸೋಕೆ ಹೇಗೆ ಬೇಕಾದ್ರೂ ದೇವರು ಹೆಜ್ಜೆ ತಗೊಳ್ತಾನೆ ಅಂತ ಅವಳ ಉದಾಹರಣೆಯಿಂದ ಗೊತ್ತಾಗುತ್ತೆ.
ರಾಹೇಲ
ರಾಹೇಲ ಯಾರು? ಇವಳು ಲಾಬಾನನ ಮಗಳು ಮತ್ತು ಪೂರ್ವಜನಾದ ಯಾಕೋಬನ ಮುದ್ದಿನ ಹೆಂಡತಿ.
ಅವಳು ಏನ್ ಮಾಡಿದಳು? ರಾಹೇಲಳು ಯಾಕೋಬನನ್ನ ಮದುವೆಯಾಗಿ ಎರಡು ಗಂಡು ಮಕ್ಕಳನ್ನ ಹೆತ್ತಳು. ಅವ್ರಿಬ್ಬರು ಪ್ರಾಚೀನ ಇಸ್ರಾಯೇಲ್ಯರ 12 ಕುಲಗಳ ಮುಖ್ಯಸ್ಥರಲ್ಲಿ ಇದ್ರು. ರಾಹೇಲ ತನ್ನ ತಂದೆ ಕುರಿಗಳನ್ನ ನೋಡ್ಕೊಳ್ತಿದ್ದಾಗ ತನ್ನ ಭಾವಿ ಗಂಡನನ್ನ ನೋಡಿದಳು. (ಆದಿಕಾಂಡ 29:9, 10) ರಾಹೇಲ ಅವಳ ಅಕ್ಕ ಲೇಯಳಿಗಿಂತ ‘ರೂಪವತಿ’ ಆಗಿದ್ದಳು.—ಆದಿಕಾಂಡ 29:17.
ಯಾಕೋಬ ರಾಹೇಲನ್ನ ಪ್ರೀತಿಸಿದ. ಅವಳನ್ನ ಮದುವೆ ಆಗೋಕೆ ‘ಏಳು ವರ್ಷ ಕೆಲಸ ಮಾಡ್ತೀನಿ’ ಅಂತ ಒಪ್ಕೊಂಡ. (ಆದಿಕಾಂಡ 29:18) ಆದ್ರೆ ಲಾಬಾನ ಯಾಕೋಬನಿಗೆ ಮೋಸ ಮಾಡಿ ಮೊದಲು ಲೇಯಳನ್ನ ಮದುವೆ ಮಾಡಿಸಿದ. ನಂತ್ರ ರಾಹೇಲಳನ್ನ ಮದುವೆ ಮಾಡಿ ಕೊಡೋಕೆ ಒಪ್ಕೊಂಡ.—ಆದಿಕಾಂಡ 29:25-27.
ಯಾಕೋಬನಿಗೆ ಲೇಯ ಮತ್ತು ಅವಳಿಗೆ ಹುಟ್ಟಿದ್ದ ಮಕ್ಕಳಿಗಿಂತ ರಾಹೇಲ ಮತ್ತು ಅವಳಿಗೆ ಹುಟ್ಟಿದ್ದ ಮಕ್ಕಳಂದ್ರೆ ಹೆಚ್ಚು ಪ್ರೀತಿ. (ಆದಿಕಾಂಡ 37:3; 44:20, 27-29) ಇದ್ರಿಂದ ಲೇಯ ಮತ್ತು ರಾಹೇಲಳ ಮಧ್ಯ ದ್ವೇಷ ಬೆಳಿತು.
ರಾಹೇಲಳಿಂದ ನಾವೇನು ಕಲಿಬಹುದು? ದೇವರು ತನ್ನ ಪ್ರಾರ್ಥನೆಯನ್ನ ಕೇಳ್ತಾನೆ ಅನ್ನೋ ನಂಬಿಕೆಯಿಂದ ರಾಹೇಲ ಕುಟುಂಬದಲ್ಲಿ ಆದ ಸಮಸ್ಯೆಗಳನ್ನ ಸಹಿಸಿಕೊಂಡಳು. (ಆದಿಕಾಂಡ 30:22-24) ಬಹುಪತ್ನೀತ್ವದಿಂದ ಕುಟುಂಬದಲ್ಲಿ ಎಷ್ಟು ಸಮಸ್ಯೆಗಳು ಏಳುತ್ತೆ ಅಂತ ಇವಳ ಉದಾಹರಣೆಯಿಂದ ಗೊತ್ತಾಗುತ್ತೆ. ರಾಹೇಲಳ ಅನುಭವದಿಂದ ಒಬ್ಬನಿಗೆ ಒಂದೇ ಹೆಂಡತಿ ಇರಬೇಕು ಅನ್ನೋ ದೇವರು ಕೊಟ್ಟ ನಿಯಮ ಎಷ್ಟು ವಿವೇಕಯುತ ಅಂತ ತಿಳ್ಕೊಬಹುದು.
▸ ರಾಹೇಲಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ಕಷ್ಟ ಸಂಕಷ್ಟಗಳ ಮಧ್ಯ ‘ಇಸ್ರಾಯೇಲನ ಮನೆ ಕಟ್ಟಿದ್ದ’ ಅಕ್ಕ-ತಂಗಿ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
▸ ಬಹುಪತ್ನೀತ್ವವನ್ನ ದೇವರು ಯಾಕೆ ಸ್ವಲ್ಪ ಸಮಯದ ತನಕ ಅನುಮತಿಸಿದನು ಅಂತ ತಿಳ್ಕೊಳ್ಳೋಕೆ “ದೇವರು ಬಹುಪತ್ನೀತ್ವವನ್ನ ಅನುಮತಿಸ್ತಾನಾ?” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ರಾಹಾಬ
ರಾಹಾಬ ಯಾರು? ಇವಳು ಕಾನಾನ್ಯರ ಯೆರಿಕೋ ಪಟ್ಟಣದಲ್ಲಿ ವಾಸಿಸ್ತಿದ್ದಳು. ಇವಳೊಬ್ಬ ವೇಶ್ಯೆ ಆಗಿದ್ದಳು. ಆಮೇಲೆ ಯೆಹೋವನ ಆರಾಧಕಳಾದಳು.
ಅವಳು ಏನ್ ಮಾಡಿದಳು? ಯೆರಿಕೋ ಪಟ್ಟಣವನ್ನ ನೋಡೋಕೆ ಬಂದ ಇಬ್ಬರು ಗೂಢಚಾರರನ್ನ ರಾಹಾಬಳು ಬಚ್ಚಿಟ್ಟಳು. ಯಾಕಂದ್ರೆ ಇಸ್ರಾಯೇಲ್ಯರ ದೇವರಾದ ಯೆಹೋವ ತನ್ನ ಜನರನ್ನ ಈಜಿಪ್ಟ್‌ನಿಂದ ಬಿಡುಗಡೆ ಮಾಡಿದ ವಿಷ್ಯವನ್ನ, ನಂತ್ರ ಅಮೋರಿಯರ ದಾಳಿಯಿಂದ ಬಿಡಿಸಿದ ವಿಷ್ಯವನ್ನ ಅವಳು ಕೇಳಿಸಿಕೊಂಡಿದ್ದಳು.
ರಾಹಾಬ ಗೂಢಚಾರರಿಗೆ ಸಹಾಯ ಮಾಡಿ ಅವ್ರ ಹತ್ರ ಇಸ್ರಾಯೇಲ್ಯರು ಯೆರಿಕೋ ಪಟ್ಟಣವನ್ನ ನಾಶ ಮಾಡೋಕೆ ಬಂದಾಗ ತನ್ನನ್ನ ತನ್ನ ಕುಟುಂಬವನ್ನ ರಕ್ಷಿಸಬೇಕಂತ ಕೇಳಿಕೊಂಡಳು. ಅವ್ರು ಅದಕ್ಕೆ ಒಪ್ಕೊಂಡ್ರು, ಆದ್ರೆ ಕೆಲವು ಶರತ್ತುಗಳನ್ನ ಇಟ್ರು. ಏನಂದ್ರೆ, ‘ನಾವು ಬಂದ ವಿಷ್ಯ ಯಾರಿಗೂ ಹೇಳಬಾರದು, ಇಸ್ರಾಯೇಲ್ಯರು ದಾಳಿ ಮಾಡುವಾಗ ನೀನು, ನಿನ್ನ ಕುಟುಂಬ ಮನೆಯಲ್ಲೇ ಇರಬೇಕು. ಅದೇ ಸಮಯದಲ್ಲಿ ನಿನ್ನ ಮನೆ ಗುರುತು ಹಿಡಿಯೋಕೆ ನೀನು ಒಂದು ಕೆಂಪು ಹಗ್ಗವನ್ನ ಕಿಟಕಿಗೆ ತೂಗಬಿಡಬೇಕು.’ ರಾಹಾಬ ಅವ್ರು ಕೊಟ್ಟ ಪ್ರತಿಯೊಂದು ನಿರ್ದೇಶನವನ್ನ ಚಾಚೂತಪ್ಪದೆ ಪಾಲಿಸಿದಳು. ಹೀಗೆ ಇಸ್ರಾಯೇಲ್ಯರು ಯೆರಿಕೋವಿನ ಮೇಲೆ ದಾಳಿ ಮಾಡಿದಾಗ ಅವಳು, ಅವಳ ಕುಟುಂಬ ಬಚಾವಾದ್ರು.
ನಂತ್ರ ರಾಹಾಬ ಒಬ್ಬ ಇಸ್ರಾಯೇಲ್ಯನನ್ನ ಮದುವೆ ಆಗಿ ರಾಜ ದಾವೀದ ಮತ್ತು ಯೇಸು ಕ್ರಿಸ್ತನಿಗೆ ಪೂರ್ವಜಳಾದಳು.—ಯೆಹೋಶುವ 2:1-24; 6:25; ಮತ್ತಾಯ 1:5, 6, 16.
ರಾಹಾಬಳಿಂದ ನಾವೇನು ಕಲಿಬಹುದು? ರಾಹಾಬಳು ನಂಬಿಕೆಗೆ ಉತ್ತಮ ಮಾದರಿ ಎಂದು ಬೈಬಲ್ ಹೇಳುತ್ತೆ. (ಇಬ್ರಿಯ 11:30, 31; ಯಾಕೋಬ 2:25) ಅವಳ ಕಥೆಯಿಂದ ದೇವರು ಕ್ಷಮಿಸಲು ಸಿದ್ಧನು, ಆತನು ಪಕ್ಷಪಾತಿಯಲ್ಲ, ಯಾರು ಆತನ ಮೇಲೆ ನಂಬಿಕೆ ಇಡುತ್ತಾರೋ ಅವ್ರು ಯಾವುದೇ ಹಿನ್ನೆಲೆಯವರಾಗಿದ್ರೂ ಸರಿ ಅವ್ರನ್ನ ಆಶೀರ್ವದಿಸ್ತಾನೆ ಅಂತ ಗೊತ್ತಾಗುತ್ತೆ.
▸ ರಾಹಾಬಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನೀತಿವಂತಳೆಂದು ತೋರಿಸಿಕೊಟ್ಟಾಕೆ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ರೆಬೆಕ್ಕ
ರೆಬೆಕ್ಕ ಯಾರು? ಇವಳು ಇಸಾಕನ ಹೆಂಡತಿ. ಯಾಕೋಬ ಮತ್ತು ಏಸಾವ ಅನ್ನೋ ಅವಳಿ-ಜವಳಿ ಗಂಡುಮಕ್ಕಳ ತಾಯಿ.
ಅವಳು ಏನ್ ಮಾಡಿದಳು? ರೆಬೆಕ್ಕ ಕಷ್ಟದ ಸಮಯದಲ್ಲೂ ದೇವರಿಗೆ ಇಷ್ಟ ಆಗೋ ತರ ನಡ್ಕೊಂಡಳು. ಅವಳು ಬಾವಿಯಿಂದ ನೀರು ತೆಗೆಯುವಾಗ ಒಬ್ಬ ವ್ಯಕ್ತಿ ಅವಳ ಹತ್ರ ಸ್ವಲ್ಪ ನೀರು ಕೇಳಿದ. ತಕ್ಷಣ ಅವಳು ಅವನಿಗೆ ಕುಡಿಯೋಕೆ ನೀರು ಕೊಟ್ಟಳು. ಅಲ್ಲದೆ ಅವನ ಒಂಟೆಗಳಿಗೂ ನೀರು ಕೊಡ್ತೀನಿ ಅಂತ ಹೇಳಿದಳು. (ಆದಿಕಾಂಡ 24:15-20) ಅವನು ಅಬ್ರಹಾಮನ ಸೇವಕನಾಗಿದ್ದನು. ಅವನು ಅಬ್ರಹಾಮನ ಮಗನಾದ ಇಸಾಕನಿಗೆ ಹುಡುಗಿ ಹುಡುಕ್ತಾ ತುಂಬ ದೂರದಿಂದ ಬಂದಿದ್ದನು. (ಆದಿಕಾಂಡ 24:2-4) ಅವನು ದೇವರ ಆಶೀರ್ವಾದಕ್ಕಾಗಿ ಬೇಡಿದನು. ರೆಬೆಕ್ಕ ಶ್ರಮಪಡೋದನ್ನ, ಅತಿಥಿಸತ್ಕಾರ ಮಾಡ್ತಿರೋದನ್ನ ನೋಡಿ ದೇವರು ತನ್ನ ಪ್ರಾರ್ಥನೆಗೆ ಉತ್ತರ ಕೊಟ್ಟು ‘ಇವಳೇ ಇಸಾಕನಿಗೆ ಸರಿಯಾದ ಜೋಡಿ’ ಅಂತ ತೋರಿಸಿಕೊಡ್ತಿದ್ದಾನೆ ಎಂದು ಆ ಸೇವಕ ಅರ್ಥ ಮಾಡ್ಕೊಂಡ.—ಆದಿಕಾಂಡ 24:10-14, 21, 27.
ಆ ಸೇವಕ ಯಾಕೆ ಬಂದನು ಅಂತ ರೆಬೆಕ್ಕಳಿಗೆ ಗೊತ್ತಾದಾಗ ಅವನ ಜೊತೆ ಹೋಗಿ ಇಸಾಕನನ್ನ ಮದುವೆ ಆಗೋಕೆ ಅವಳು ಒಪ್ಪಿದಳು. (ಆದಿಕಾಂಡ 24:57-59) ಅವಳಿಗೆ ಅವಳಿ-ಜವಳಿ ಮಕ್ಕಳು ಹುಟ್ಟಿದ್ರು. ದೊಡ್ಡ ಮಗ ಏಸಾವ ಚಿಕ್ಕವನಾದ ಯಾಕೋಬನ ಸೇವೆ ಮಾಡ್ತಾನೆ ಅಂತ ದೇವರು ಮೊದಲೇ ಅವಳಿಗೆ ಹೇಳಿದನು. (ಆದಿಕಾಂಡ 25:23) ರೆಬೆಕ್ಕಳಿಗೆ ದೇವರ ಉದ್ದೇಶ ಏನಂತ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಇಸಾಕ ತನ್ನ ಮೊದಲ ಮಗನಾದ ಏಸಾವನನ್ನ ಆಶೀರ್ವಾದ ಮಾಡಬೇಕು ಅಂತ ಅಂದ್ಕೊಂಡಾಗ ಆ ಆಶೀರ್ವಾದ ಯಾಕೋಬನಿಗೆ ಸಿಗೋ ತರ ಅವಳು ಮಾಡಿದಳು.—ಆದಿಕಾಂಡ 27:1-17.
ರೆಬೆಕ್ಕಳಿಂದ ನಾವೇನು ಕಲಿಬಹುದು? ರೆಬೆಕ್ಕಳಲ್ಲಿ ಸಭ್ಯತೆ ಮತ್ತು ಅತಿಥಿಸತ್ಕಾರದ ಗುಣ ಇತ್ತು. ಅವಳು ಶ್ರಮಜೀವಿ ಆಗಿದ್ದಳು. ಈ ಗುಣಗಳಿಂದ ಅವಳು ಒಳ್ಳೇ ಹೆಂಡತಿಯಾಗಿ, ತಾಯಿಯಾಗಿ ಮತ್ತು ಸತ್ಯ ದೇವರ ಆರಾಧಕಳಾಗಿ ಮುಂದುವರಿಯೋಕೆ ಸಾಧ್ಯ ಆಯ್ತು.
▸ ರೆಬೆಕ್ಕಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನನಗೆ ಇಷ್ಟ ಇದೆ, ನಾನು ಹೋಗ್ತೀನಿ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ರೂತ
ರೂತ ಯಾರು? ಇವಳು ಮೋವಾಬ್ ಪ್ರದೇಶದವಳು. ಇಸ್ರಾಯೇಲ್ ದೇಶದಲ್ಲಿ ಯೆಹೋವನನ್ನ ಆರಾಧಿಸೋಕೆ ಇವಳು ತನ್ನ ದೇವರುಗಳನ್ನ, ತನ್ನ ದೇಶವನ್ನ ಬಿಟ್ಟು ಬಂದಳು.
ಅವಳು ಏನ್ ಮಾಡಿದಳು? ರೂತಳು ತನ್ನ ಅತ್ತೆ ನೊವೊಮಿಗೆ ಅಪಾರ ಪ್ರೀತಿ ತೋರಿಸಿದಳು. ಇಸ್ರಾಯೇಲ್‌ನಲ್ಲಿ ಬಂದ ಬರಗಾಲವನ್ನ ತಪ್ಪಿಸಿಕೊಳ್ಳೋಕೆ ನೊವೊಮಿ, ಅವಳ ಗಂಡ ಮತ್ತು ಅವಳ ಇಬ್ಬರು ಗಂಡು ಮಕ್ಕಳು ಮೋವಾಬ್‌ಗೆ ಹೋಗಿದ್ರು. ಆ ಗಂಡು ಮಕ್ಕಳು ಮೋವಾಬ್ ಸ್ತ್ರೀಯರಾದ ರೂತ ಮತ್ತು ಒರ್ಫಾಳನ್ನ ಮದುವೆಯಾದ್ರು. ಸ್ವಲ್ಪ ಸಮಯದ ನಂತ್ರ ನೊವೊಮಿಯ ಗಂಡ ಮತ್ತು ಅವಳ ಎರಡು ಗಂಡು ಮಕ್ಕಳು ತೀರಿಹೋದ್ರು. ಹೀಗೆ ನೊವೊಮಿ ಮತ್ತು ಅವಳ ಸೊಸೆಯರು ವಿಧವೆಯರಾದ್ರು.
ಇಸ್ರಾಯೇಲ್‌ನಲ್ಲಿ ಬರಗಾಲ ನಿಂತು ಹೋದಮೇಲೆ ನೊವೊಮಿ ಅಲ್ಲಿಗೆ ಹೋಗೋಕೆ ನಿರ್ಣಯಿಸಿದಳು. ಅವಳ ಜೊತೆ ರೂತ ಮತ್ತು ಒರ್ಫಾಳು ಹೊರಟ್ರು. ಆದ್ರೆ ನೊವೊಮಿ ಅವರಿಬ್ಬರಿಗೆ ತಮ್ಮ-ತಮ್ಮ ಸಂಬಂಧಿಕರ ಹತ್ರ ಹೋಗೋಕೆ ಹೇಳಿದಳು. ಒರ್ಫಾ ಹೋದಳು. (ರೂತ್ 1:1-6, 15) ಆದ್ರೆ ರೂತ ತನ್ನ ಅತ್ತೆ ಜೊತೆನೇ ಇದ್ದಳು. ಅವಳು ನೊವೊಮಿಯನ್ನ ತುಂಬ ಪ್ರೀತಿಸಿದಳು ಮತ್ತು ನೊವೊಮಿಯ ದೇವರಾದ ಯೆಹೋವನನ್ನ ಆರಾಧಿಸೋಕೆ ಇಷ್ಟಪಟ್ಟಳು.—ರೂತ್ 1:16, 17; 2:11.
ಅತ್ತೆಗೆ ನಿಷ್ಠೆ ತೋರಿಸಿದ್ರಿಂದ, ಶ್ರಮಪಟ್ಟು ಕೆಲಸ ಮಾಡಿದ್ರಿಂದ ನೊವೊಮಿಯ ಊರಾದ ಬೆತ್ಲೆಹೇಮ್‌ನಲ್ಲಿ ರೂತ ಒಳ್ಳೇ ಹೆಸರು ಪಡೆದಳು. ಶ್ರೀಮಂತನಾದ ಬೋವಜನಿಗೆ ರೂತಳನ್ನ ನೋಡಿ ಖುಷಿಯಾಯ್ತು. ಅಲ್ಲದೇ ಅವನು ರೂತ ಮತ್ತು ನೊವೊಮಿಗೆ ಧಾರಳವಾಗಿ ಆಹಾರ ಕೊಟ್ಟ. (ರೂತ್ 2:5-7, 20) ನಂತ್ರ ರೂತಳು ಬೋವಜನನ್ನ ಮದುವೆಯಾದಳು. ರಾಜ ದಾವೀದ ಮತ್ತು ಯೇಸು ಕ್ರಿಸ್ತನಿಗೆ ಪೂರ್ವಜಳಾದಳು.—ಮತ್ತಾಯ 1:5, 6, 16.
ರೂತಳಿಂದ ನಾವೇನು ಕಲಿಬಹುದು? ನೊವೊಮಿ ಮತ್ತು ಯೆಹೋವನ ಮೇಲಿರೋ ಪ್ರೀತಿಯಿಂದ ರೂತಳು ತನ್ನ ಮನೆ, ತನ್ನ ಕುಟುಂಬ ಎಲ್ಲವನ್ನ ಬಿಟ್ಟು ಬರೋಕೆ ರೆಡಿ ಇದ್ದಳು. ಅವಳಿಗೆ ಎಷ್ಟೇ ಕಷ್ಟ ಇದ್ರು ಅವಳು ಶ್ರಮಪಟ್ಟು ಕೆಲಸ ಮಾಡಿದಳು, ಅತ್ತೆ ಜೊತೆಗೇ ಇದ್ದಳು ಮತ್ತು ನಿಷ್ಠಳಾಗಿದ್ದಳು.
▸ ರೂತಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು” ಮತ್ತು “ಗುಣವಂತೆ” ಅನ್ನೋ ಲೇಖನ ನೋಡಿ.
ಲೇಯ
ಲೇಯ ಯಾರು? ಇವಳು ಪೂರ್ವಜನಾದ ಯಾಕೋಬನ ಮೊದಲ ಹೆಂಡತಿ. ಇವಳ ತಂಗಿ ರಾಹೇಲ ಅವನ ಎರಡನೇ ಹೆಂಡತಿ.—ಆದಿಕಾಂಡ 29:20-29.
ಅವಳು ಏನ್ ಮಾಡಿದಳು? ಲೇಯ ಮತ್ತು ಯಾಕೋಬನಿಗೆ ಆರು ಗಂಡುಮಕ್ಕಳು ಹುಟ್ಟಿದ್ರು. (ರೂತ್ 4:11) ಯಾಕೋಬ ಮದುವೆ ಆಗೋಕೆ ಇಷ್ಟಪಟ್ಟದ್ದು ಲೇಯಳನ್ನಲ್ಲ ರಾಹೇಲಳನ್ನ. ಇವರಿಬ್ಬರ ಅಪ್ಪ ಲಾಬಾನ ಪ್ಲ್ಯಾನ್ ಮಾಡಿ ರಾಹೇಲಳ ಬದಲು ಲೇಯಳನ್ನ ಮದುವೆ ಮಾಡಿಸಿಕೊಟ್ಟ. ಲಾಬಾನ ಮೋಸ ಮಾಡಿ ಲೇಯಳನ್ನ ಮದುವೆ ಮಾಡಿಸಿಕೊಟ್ಟ ಅಂತ ಯಾಕೋಬನಿಗೆ ಗೊತ್ತಾದ್ದಾಗ ಅವನು ಬಂದು ಲಾಬಾನನ ಹತ್ರ ಮಾತಾಡ್ತಾನೆ. ಆಗ ಲಾಬಾನ ‘ದೊಡ್ಡ ಮಗಳು ಇರಬೇಕಿದ್ರೆ ಚಿಕ್ಕ ಮಗಳನ್ನ ಮದುವೆ ಮಾಡಿಸಿಕೊಡೋದು ನಮ್ಮ ಸಂಸ್ಕೃತಿ ಅಲ್ಲ’ ಅಂತ ಹೇಳಿದ. ಒಂದು ವಾರ ಆದ್ಮೇಲೆ ಯಾಕೋಬ ರಾಹೇಲಳನ್ನ ಮದುವೆಯಾದ.—ಆದಿಕಾಂಡ 29:26-28.
ಲೇಯಳಿಗಿಂತ ರಾಹೇಲಳನ್ನ ಯಾಕೋಬ ತುಂಬ ಪ್ರೀತಿಸ್ತಿದ್ದ. (ಆದಿಕಾಂಡ 29:30) ಹಾಗಾಗಿ ಲೇಯ ಯಾಕೋಬನ ಪ್ರೀತಿ ಪಡಿಯೋಕೆ, ಗಮನ ತನ್ನ ಕಡೆ ಸೆಳೆಯೋಕೆ ತಂಗಿ ಜೊತೆ ಸ್ಪರ್ಧೆಗೆ ಇಳಿದಳು. ದೇವರು ಲೇಯಳನ್ನ ಗಮನಿಸಿ ಅವಳಿಗೆ ಏಳು ಮಕ್ಕಳಾಗುವಂತೆ ಆಶೀರ್ವದಿಸಿದನು. ಹೀಗೆ ಅವಳಿಗೆ ಆರು ಗಂಡು ಮಕ್ಕಳು, ಒಂದು ಹೆಣ್ಣು ಮಗಳು ಹುಟ್ಟಿದ್ರು.—ಆದಿಕಾಂಡ 29:31.
ಲೇಯಳಿಂದ ನಾವೇನು ಕಲಿಬಹುದು? ಲೇಯ ಪ್ರಾರ್ಥನೆ ಮಾಡ್ತಾ ದೇವರ ಮೇಲೆ ಆತುಕೊಂಡಳು. ಕುಟುಂಬದಲ್ಲಿ ಸಮಸ್ಯೆ ಇದ್ರು ಅವಳು ದೇವರಿಗೆ ಕೃತಜ್ಞಳಾಗಿದ್ದಳು. (ಆದಿಕಾಂಡ 29:32-35; 30:20) ಅವಳ ಅನುಭವದಿಂದ ಬಹುಪತ್ನೀತ್ವದಿಂದ ಕುಟುಂಬದಲ್ಲಿ ಸಮಸ್ಯೆ ಬರುತ್ತೆ ಅಂತ ಗೊತ್ತಾಗುತ್ತೆ. ದೇವರು ಆ ಏರ್ಪಾಡನ್ನ ಸ್ವಲ್ಪ ಸಮಯಕ್ಕೆ ಅನುಮತಿಸಿದ್ದನು. ಗಂಡ ಮತ್ತು ಹೆಂಡತಿಗೆ ದೇವರು ಕೊಟ್ಟ ನಿಯಮ ಏನಂದ್ರೆ ಒಬ್ಬರಿಗೆ ಒಂದೇ ಸಂಗಾತಿ ಇರಬೇಕು.—ಮತ್ತಾಯ 19:4-6.
▸ ಲೇಯಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ಕಷ್ಟ ಸಂಕಷ್ಟಗಳ ಮಧ್ಯ ‘ಇಸ್ರಾಯೇಲನ ಮನೆ ಕಟ್ಟಿದ್ದ’ ಅಕ್ಕ-ತಂಗಿ” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
▸ ಬಹುಪತ್ನೀತ್ವವನ್ನ ದೇವರು ಯಾಕೆ ಸ್ವಲ್ಪ ಸಮಯದ ತನಕ ಅನುಮತಿಸಿದನು ಅಂತ ತಿಳ್ಕೊಳ್ಳೋಕೆ “ದೇವರು ಬಹುಪತ್ನೀತ್ವವನ್ನ ಅನುಮತಿಸ್ತಾನಾ?” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ಲೋಟನ ಹೆಂಡತಿ
ಲೋಟನ ಹೆಂಡತಿ ಯಾರು? ಇವಳ ಹೆಸ್ರು ಏನಂತ ಬೈಬಲ್ ಹೇಳಲ್ಲ. ಆದ್ರೆ ಅವಳಿಗೆ ಎರಡು ಹೆಣ್ಣು ಮಕ್ಕಳು ಇದ್ರು. ಅವಳು ಮತ್ತು ಅವಳ ಕುಟುಂಬದವರು ಸೊದೋಮ್ ಪಟ್ಟಣದಲ್ಲಿ ಮನೆ ಮಾಡ್ಕೊಂಡು ಇದ್ರು.—ಆದಿಕಾಂಡ 19:1, 15.
ಅವಳು ಏನ್ ಮಾಡಿದಳು? ಅವಳು ದೇವರ ಮಾತು ಕೇಳಲಿಲ್ಲ. ಸೊದೋಮ್ ಮತ್ತು ಅದ್ರ ಅಕ್ಕಪಕ್ಕದ ಪಟ್ಟಣಗಳಲ್ಲಿ ಲೈಂಗಿಕ ಅನೈತಿಕತೆ ತುಂಬಿ ತುಳುಕ್ತಿದ್ರಿಂದ ದೇವರು ಆ ಪಟ್ಟಣಗಳನ್ನ ನಾಶ ಮಾಡೋಕೆ ನಿರ್ಣಯಿಸಿದನು. ಸೊದೋಮ್‌ನಲ್ಲಿದ್ದ ನಂಬಿಗಸ್ತನಾದ ಲೋಟ ಮತ್ತು ಅವನ ಕುಟುಂಬವನ್ನ ದೇವರು ಪ್ರೀತಿಸ್ತಿದ್ರಿಂದ ಅವ್ರನ್ನ ಕಾಪಾಡೋಕೆ ಇಬ್ಬರು ದೇವದೂತರನ್ನ ಆತನು ಕಳಿಸಿದನು.—ಆದಿಕಾಂಡ 18:20; 19:1, 12, 13.
ದೇವದೂತರು ಲೋಟನ ಕುಟುಂಬದವರಿಗೆ ‘ಇಲ್ಲಿಂದ ಓಡಿ ಹೋಗಿ, ಹಿಂದೆ ತಿರುಗಿ ನೋಡಬೇಡಿ, ನೋಡಿದ್ರೆ ಸಾಯ್ತಿರಾ’ ಅಂತ ಹೇಳಿದ್ರು. (ಆದಿಕಾಂಡ 19:17) ‘ಲೋಟನ ಹೆಂಡತಿ ಹಿಂದಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.’—ಆದಿಕಾಂಡ 19:26.
ಲೋಟನ ಹೆಂಡತಿಯಿಂದ ನಾವೇನು ಕಲಿಬಹುದು? ಲೋಟನ ಹೆಂಡತಿಯಿಂದ ಕಣ್ಣಿನ ಆಸೆ ಇದ್ರೆ ದೇವರು ಮಾತು ಕೇಳೋಕೆ ತಪ್ಪಿ ಹೋಗ್ತೇವೆ ಅಂತ ಗೊತ್ತಾಗುತ್ತೆ. ಅವಳು ಎಚ್ಚರಿಕೆಯ ಪಾಠವಾಗಿದ್ದಾಳೆ ಅಂತ ಯೇಸು ಹೇಳ್ತಾ, “ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ” ಅಂದನು.—ಲೂಕ 17:32.
ಶೂಲಮ್ ಯುವತಿ
ಶೂಲಮ್ ಯುವತಿ ಯಾರು? ಇವಳು ಅಂದ-ಚಂದದ ಹಳ್ಳಿ ಹುಡುಗಿ. ಬೈಬಲಿನ ಪರಮಗೀತ ಪುಸ್ತಕದಲ್ಲಿ ಇವಳು ಮುಖ್ಯ ಪಾತ್ರಧಾರಿ. ಅವಳ ಹೆಸ್ರು ಏನಂತ ಬೈಬಲ್ ಹೇಳಲ್ಲ.
ಅವಳು ಏನ್ ಮಾಡಿದಳು? ಅವಳು ಪ್ರೀತಿಸ್ತಿದ್ದ ಹುಡುಗನಿಗೆ ನಿಷ್ಠೆಯಿಂದ ಇದ್ದಳು. ಅವನು ಮಂದೆ ಮೇಯಿಸ್ತಿದ್ದನು. (ಪರಮ ಗೀತ 2:16) ಅವಳ ಚಂದ ಶ್ರೀಮಂತ ರಾಜ ಸೊಲೊಮೋನನ ಕಣ್ ಸೆಳೆಯಿತು. ಅವನು ಅವಳ ಪ್ರೀತಿ ಸೆಳೆಯೋಕೆ ಪ್ರಯತ್ನಿಸಿದ. (ಪರಮ ಗೀತ 7:6) ಸೊಲೊಮೋನನನ್ನು ಪ್ರೀತಿ ಮಾಡು ಅಂತ ಬೇರೆಯವರು ಹೇಳಿದ್ರು ಅವಳು ಒಪ್ಪಿಲಿಲ್ಲ. ಅವಳು ಮಂದೆ ಮೇಯಿಸೋ ದೀನ ಹುಡುಗನನ್ನು ಪ್ರೀತಿಸಿದಳು, ಅವನಿಗೆ ನಿಷ್ಠಳಾಗಿದ್ದಳು.—ಪರಮ ಗೀತ 3:5; 7:10; 8:6.
ಶೂಲಮ್ ಯುವತಿಯಿಂದ ನಾವೇನು ಕಲಿಬಹುದು? ಅವಳು ಸುಂದರವಾಗಿದ್ರು, ಬೇರೆಯವರು ಅವಳನ್ನ ಹೊಗಳಿದ್ರು ಸಭ್ಯವಾಗಿ ನಡ್ಕೊಂಡಳು. ಬೇರೆಯವರಿಂದ ಒತ್ತಡ ಬಂದ್ರು, ಬೇರೆಯವರು ಹಣದಾಸೆ ತೋರಿಸಿದ್ರು ಮಂದೆ ಮೇಯಿಸೋ ಹುಡುಗನ ಪ್ರೀತಿ ಮಾಡೋದನ್ನ ಅವಳು ನಿಲ್ಲಿಸಲಿಲ್ಲ. ಅವಳು ತನ್ನ ಭಾವನೆಗಳನ್ನ ಹತೋಟಿಯಲ್ಲಿ ಇಟ್ಟಳು ಮತ್ತು ನೈತಿಕವಾಗಿ ಶುದ್ಧವಾಗಿದ್ದಳು.
ಸಾರ
ಸಾರ ಯಾರು? ಇವಳು ಅಬ್ರಹಾಮನ ಹೆಂಡತಿ ಮತ್ತು ಇಸಾಕನ ತಾಯಿ.
ಅವಳು ಏನ್ ಮಾಡಿದಳು? ತನ್ನ ಗಂಡ ಅಬ್ರಹಾಮನಿಗೆ ದೇವರು ಕೊಟ್ಟ ಮಾತು ನೆರವೇರುತ್ತೆ ಅಂತ ಅವಳು ನಂಬಿದಳು. ಹಾಗಾಗಿ ಊರ್ ಪಟ್ಟಣದಲ್ಲಿ ಎಲ್ಲ ಸುಖ-ಸಂಪತ್ತು ಇದ್ರು ಅಲ್ಲಿಂದ ಹೊರಡಲು ರೆಡಿ ಇದ್ದಳು. ದೇವರು ಅಬ್ರಹಾಮನಿಗೆ ಊರ್ ಪಟ್ಟಣ ಬಿಟ್ಟು ಕಾನಾನ್‌ಗೆ ಹೋಗುವಂತೆ ಹೇಳಿದನು. ದೇವರು ಅವನಿಗೆ ‘ನಿನ್ನನ್ನ ಆಶೀರ್ವದಿಸಿ, ದೊಡ್ಡ ಜನಾಂಗ ಆಗುವಂತೆ ಮಾಡ್ತೇನೆ’ ಅಂತ ಮಾತು ಕೊಟ್ಟಿದ್ದನು. (ಆದಿಕಾಂಡ 12:1-5) ಆಗ ಸಾರಳಿಗೆ 60 ವರ್ಷ ಇದ್ದಿರಬಹುದು. ಆ ಸಮಯದಿಂದ ಅಬ್ರಹಾಮ ಮತ್ತು ಸಾರ ಪ್ರಯಾಣ ಮಾಡ್ತಾ ಡೇರೆಯಲ್ಲಿ ವಾಸ ಮಾಡಿದ್ರು.
ಅವರು ಅಲ್ಲಿ-ಇಲ್ಲಿ ಪ್ರಯಾಣ ಮಾಡ್ತಾ ಅಪಾಯಕರ ಜೀವನ ನಡೆಸ್ತಿದ್ರು. ಇಷ್ಟೆಲ್ಲ ಇದ್ರು ದೇವರು ಕೊಟ್ಟ ನಿರ್ದೇಶನವನ್ನ ಅಬ್ರಹಾಮ ಪಾಲಿಸೋಕೆ ಪೂರ್ಣ ಸಹಕಾರ ಕೊಟ್ಟಳು. (ಆದಿಕಾಂಡ 12:10, 15) ತುಂಬ ವರ್ಷಗಳಿಂದ ಅವ್ರಿಗೆ ಮಕ್ಕಳಿರಲಿಲ್ಲ. ಇದ್ರಿಂದ ಅವಳಿಗೆ ತುಂಬ ದುಃಖ ಆಯ್ತು. ಆದ್ರೆ ದೇವರು ಅಬ್ರಹಾಮನ ಸಂತಾನವನ್ನ ಆಶೀರ್ವದಿಸ್ತೇನೆ ಅಂತ ಮಾತು ಕೊಟ್ಟಿದ್ದನು. (ಆದಿಕಾಂಡ 12:7; 13:15; 15:18; 16:1, 2, 15) ಸಾರ ತಾಯಿ ಆಗ್ತಾಳೆ ಅಂತ ದೇವರು ಸಮಯ ನಂತ್ರ ಮಾತು ಕೊಟ್ಟನು. ಮಕ್ಕಳು ಹುಟ್ಟೋ ವಯಸ್ಸು ದಾಟಿದ ಮೇಲೆ ಅವಳಿಗೆ ಮಗು ಹುಟ್ಟಿತ್ತು. ಆಗ ಅವಳಿಗೆ 90 ವರ್ಷ, ಅಬ್ರಹಾಮನಿಗೆ 100 ವರ್ಷ. (ಆದಿಕಾಂಡ 17:17; 21:2-5) ಅವರು ಮಗುವಿಗೆ ಇಸಾಕ ಅಂತ ಹೆಸರಿಟ್ರು.
ಸಾರಳಿಂದ ನಾವೇನು ಕಲಿಬಹುದು? ದೇವರು ಕೊಟ್ಟ ಮಾತು ಖಂಡಿತ ನೆರವೇರುತ್ತೆ ಅಂತ ನಂಬಿಕೆ ಇಡಬೇಕು. ಅದು ನೆರವೇರೋಕೆ ಸಾಧ್ಯನೇ ಇಲ್ಲ ಅಂತ ಅನಿಸಿದ್ರೂ ಸಹ ನಾವು ನಂಬಿಕೆ ಇಡಬೇಕು. ಇದನ್ನ ನಾವು ಸಾರಳ ಉದಾಹರಣೆಯಿಂದ ಕಲಿಯುತ್ತೇವೆ. (ಇಬ್ರಿಯ 11:11) ಅಲ್ಲದೆ, ಇವಳು ಹೆಂಡತಿಯರಿಗೆ ಒಳ್ಳೇ ಮಾದರಿ. ಮದುವೆ ಜೀವನದಲ್ಲಿ ಒಬ್ಬರಿಗೊಬ್ಬರು ಗೌರವ ತೋರಿಸೋದು ಎಷ್ಟು ಮುಖ್ಯ ಅಂತ ಇವಳಿಂದ ಕಲಿಬಹುದು.—1 ಪೇತ್ರ 3:5, 6.
▸ ಸಾರಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ನೀನು ಸುಂದರಿದೇವರು ಅವಳನ್ನ ‘ರಾಣಿ’ ಅಂತ ಕರೆದನು” ಮತ್ತು “ದೇವರು ಅವಳನ್ನ ‘ರಾಣಿ’ ಅಂತ ಕರೆದನುದೇವರು ಅವಳನ್ನ ‘ರಾಣಿ’ ಅಂತ ಕರೆದನು” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ಹವ್ವ
ಹವ್ವ ಯಾರು? ಇವಳೇ ಮೊಟ್ಟಮೊದಲ ಸ್ತ್ರೀ. ಬೈಬಲ್‌ನಲ್ಲೂ ಇವಳೇ ಮೊಟ್ಟಮೊದಲ ಸ್ತ್ರೀ.
ಅವಳು ಏನ್ ಮಾಡಿದಳು? ಯೆಹೋವನು ಕೊಟ್ಟ ನೇರ ನಿರ್ದೇಶನಕ್ಕೆ ಹವ್ವ ಕಿವಿಗೊಡಲಿಲ್ಲ. ಅವಳ ಗಂಡ ಆದಾಮನ ತರ ಅವಳನ್ನ ಕೂಡ ಪರಿಪೂರ್ಣವಾಗಿ ಸೃಷ್ಟಿ ಮಾಡಲಾಗಿತ್ತು. ಅವ್ರಿಗೆ ಯೋಚಿಸಿ ನಿರ್ಣಯ ಮಾಡೋ ಸ್ವತಂತ್ರ ಕೊಡಲಾಗಿತ್ತು. ಪ್ರೀತಿ, ವಿವೇಕ ಅನ್ನೋ ದೇವರ ಒಳ್ಳೊಳ್ಳೇ ಗುಣಗಳನ್ನ ಬೆಳೆಸ್ಕೊಳ್ಳೋ ಸಾಮರ್ಥ್ಯವನ್ನೂ ಅವ್ರಿಗೆ ಕೊಡಲಾಗಿತ್ತು. (ಆದಿಕಾಂಡ 1:27) ತಿನ್ನಬಾರದು ಅಂತ ಹೇಳಿದ ಹಣ್ಣನ್ನ ಒಂದುವೇಳೆ ತಿಂದ್ರೆ ಸಾಯುತ್ತೀರಿ ಎಂದ ದೇವರು ಹೇಳಿದ ಮಾತು ಹವ್ವಳಿಗೆ ಗೊತ್ತಿತ್ತು. ಆದ್ರೆ ಅದನ್ನ ತಿಂದ್ರೆ ಸಾಯಲ್ಲ ಅಂತ ಸೈತಾನ ಹೇಳಿದ ಮಾತನ್ನ ಕೇಳಿ ಅವಳು ಮೋಸ ಹೋದಳು. ದೇವರ ಮಾತು ಕೇಳಲಿಲ್ಲ ಅಂದ್ರೆ ‘ನಿನ್ನ ಜೀವನ ಚೆನ್ನಾಗಿ ಇರುತ್ತೆ’ ಅಂತ ಅವನು ಹೇಳಿದ ಮಾತನ್ನ ಅವಳು ನಂಬಿದಳು. ಹಣ್ಣನ್ನ ಅವಳು ತಿಂದಳು, ನಂತ್ರ ಅವಳು ತನ್ನ ಗಂಡ ಕೂಡ ತಿನ್ನೋ ತರ ಮಾಡಿದಳು.—ಆದಿಕಾಂಡ 3:1-6; 1 ತಿಮೊತಿ 2:14.
ಹವ್ವಳಿಂದ ನಾವೇನು ಕಲಿಬಹುದು? ತಪ್ಪಾದ ಆಸೆಗಳ ಬಗ್ಗೆ ಯೋಚಿಸೋದು ಎಷ್ಟು ಅಪಾಯಕಾರಿ ಅಂತ ಹವ್ವಳ ಉದಾಹರಣೆಯಿಂದ ಗೊತ್ತಾಗುತ್ತೆ. ದೇವರು ಅವಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ರೂ ಅವಳಿಗೆ ಸೇರದ ವಿಷ್ಯದ ಮೇಲೆ ಅತಿಆಸೆ ಬೆಳೆಸ್ಕೊಂಡಳು.—ಆದಿಕಾಂಡ 3:6; 1 ಯೋಹಾನ 2:16.
ಹನ್ನ
ಹನ್ನ ಯಾರು? ಇವಳು ಎಲ್ಕಾನನ ಹೆಂಡತಿ ಮತ್ತು ಹಿಂದೆ ಇಸ್ರಾಯೇಲ್‌ನಲ್ಲಿ ಒಳ್ಳೇ ಹೆಸರು ಮಾಡಿದ ಪ್ರವಾದಿ ಸಮುವೇಲನ ತಾಯಿ.—1 ಸಮುವೇಲ 1:1, 2, 4-7.
ಅವಳು ಏನ್ ಮಾಡಿದಳು? ಹನ್ನಳಿಗೆ ಮಕ್ಕಳು ಹುಟ್ಟದಿದ್ದಾಗ ಸಾಂತ್ವನಕ್ಕಾಗಿ ದೇವರ ಮೇಲೆ ಆತುಕೊಂಡಳು. ಎಲ್ಕಾನನಿಗೆ ಇಬ್ರು ಹೆಂಡತಿಯರು. ಅವನ ಇನ್ನೊಂದು ಹೆಂಡತಿ ಪೆನಿನ್ನಳಿಗೆ ಮಕ್ಕಳು ಇದ್ರು. ಆದ್ರೆ ಹನ್ನಳಿಗೆ ಮದುವೆಯಾಗಿ ತುಂಬ ಸಮಯ ಆಗಿದ್ರು ಮಕ್ಕಳೇ ಇರಲಿಲ್ಲ. ಪೆನಿನ್ನ ಯಾವಾಗ್ಲೂ ಹನ್ನಳ ಹತ್ರ ತುಂಬ ನೋವಾಗೋ ರೀತಿಯಲ್ಲಿ ಕೆಣಕಿ ಮಾತಾಡ್ತಿದ್ದಳು. ಹಾಗಾಗಿ ಹನ್ನ ಸಾಂತ್ವನಕ್ಕಾಗಿ ದೇವರಿಗೆ ಪ್ರಾರ್ಥನೆ ಮಾಡಿದಳು. ದೇವರು ತನಗೆ ಒಬ್ಬ ಮಗನನ್ನ ಕೊಟ್ಟರೆ ಅವನನ್ನ ದೇವದರ್ಶನ ಗುಡಾರದಲ್ಲಿ ಸೇವೆ ಮಾಡೋಕೆ ಬಿಡ್ತೀನಿ ಅಂತ ಮಾತು ಕೊಟ್ಟಳು. ದೇವದರ್ಶನ ಗುಡಾರ ಅಂದ್ರೆ ಇಸ್ರಾಯೇಲ್ಯರು ಆರಾಧನೆ ಮಾಡೋಕೆ ಬಳಸೋ ಡೇರೆ. ಅದನ್ನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಗೊಂಡು ಹೋಗಬಹುದಿತ್ತು.—1 ಸಮುವೇಲ 1:11.
ದೇವರು ಅವಳ ಪ್ರಾರ್ಥನೆಗೆ ಉತ್ತರ ಕೊಟ್ಟನು. ಅವಳಿಗೆ ಸಮುವೇಲ ಹುಟ್ಟಿದ. ಕೊಟ್ಟ ಮಾತಿನ ತರ ಹನ್ನ ನಡ್ಕೊಂಡಳು. ಸಮುವೇಲ ಚಿಕ್ಕವನಿದ್ದಾಗಲೇ ದೇವದರ್ಶನ ಗುಡಾರದಲ್ಲಿ ಸೇವೆ ಮಾಡೋಕೆ ಅವಳು ಕರ್ಕೊಂಡು ಹೋದಳು. (1 ಸಮುವೇಲ 1:27, 28) ಪ್ರತಿ ವರ್ಷ ಅವಳು ಅವನಿಗಾಗಿ ಒಂದು ತೋಳಿಲ್ಲದ ಅಂಗಿಯನ್ನ ಹೊಲಿದು ಕೊಡ್ತಿದ್ದಳು. ಸಮಯ ನಂತ್ರ, ದೇವರು ಅವಳಿಗೆ ಇನ್ನೂ ಐದು ಮಕ್ಕಳನ್ನ ಕೊಟ್ಟು ಆಶೀರ್ವದಿಸಿದನು. ಅವಳಿಗೆ ಮೂರು ಗಂಡುಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದ್ರು.—1 ಸಮುವೇಲ 2:18-21.
ಹನ್ನಳಿಂದ ನಾವೇನು ಕಲಿಬಹುದು? ಹನ್ನ ಹೃದಯ ಬಿಚ್ಚಿ ಪ್ರಾರ್ಥನೆ ಮಾಡಿದ್ರಿಂದ ಅವಳಿಗೆ ಕಷ್ಟಗಳನ್ನ ತಾಳಿಕೊಳ್ಳೋಕೆ ಆಯ್ತು. 1 ಸಮುವೇಲ 2:1-10 ರಲ್ಲಿರೋ ಹನ್ನಳ ಕೃತಜ್ಞತೆ ತುಂಬಿದ ಪ್ರಾರ್ಥನೆಯನ್ನ ಓದಿದ್ರೆ ಅವಳಿಗೆ ದೇವರ ಮೇಲೆ ಎಷ್ಟು ದೃಢ ನಂಬಿಕೆ ಇತ್ತು ಅಂತ ತಿಳ್ಕೊಳ್ಳಬಹುದು.
▸ ಲೇಯಳ ಬಗ್ಗೆ ಹೆಚ್ಚು ತಿಳ್ಕೊಳ್ಳೋಕೆ “ಪ್ರಾರ್ಥನೆಯಲ್ಲಿ ದೇವರ ಬಳಿ ಹೃದಯ ತೋಡಿಕೊಂಡಾಕೆ” ಅನ್ನೋ ಲೇಖನ ನೋಡಿ.
▸ ಬಹುಪತ್ನೀತ್ವವನ್ನ ದೇವರು ಯಾಕೆ ಸ್ವಲ್ಪ ಸಮಯದ ತನಕ ಅನುಮತಿಸಿದನು ಅಂತ ತಿಳ್ಕೊಳ್ಳೋಕೆ “ದೇವರು ಬಹುಪತ್ನೀತ್ವವನ್ನ ಅನುಮತಿಸ್ತಾನಾ?” (ಇಂಗ್ಲಿಷ್) ಅನ್ನೋ ಲೇಖನ ನೋಡಿ.
ಬೈಬಲ್ ಸ್ತ್ರೀಯರ ಕಾಲರೇಖೆ
ಜಲಪ್ರಳಯ (ಕ್ರಿ.ಪೂ. 2370)
ಈಜಿಪ್ಟ್‌ನಿಂದ ಬಿಡುಗಡೆ (ಕ್ರಿ.ಪೂ. 1513)
ಇಸ್ರಾಯೇಲಿನ ಮೊದಲ ರಾಜ (ಕ್ರಿ.ಪೂ. 1117)
ಯೇಸುವಿನ ದೀಕ್ಷಾಸ್ನಾನ (ಕ್ರಿ.ಶ. 29)
ಯೇಸುವಿನ ಮರಣ (ಕ್ರಿ.ಶ. 33)