ಜೀವನದಲ್ಲಿ ನಾನು ಏನು ಮಾಡಬೇಕಂತ ದೇವರು ಇಷ್ಟ ಪಡ್ತಾನೆ?
ಬೈಬಲ್ ಕೊಡೋ ಉತ್ತರ
ನಾವು ದೇವರನ್ನ ಒಬ್ಬ ವ್ಯಕ್ತಿಯಾಗಿ ತಿಳಿದುಕೊಳ್ಳಬೇಕು, ಆತನಿಗೆ ಹತ್ತಿರ ಆಗಬೇಕು ಹಾಗೂ ಆತನನ್ನ ಪೂರ್ಣಹೃದಯದಿಂದ ಪ್ರೀತಿಸ್ತಾ ಆರಾಧಿಸಬೇಕು ಅನ್ನೋದೆ ದೇವರ ಇಷ್ಟ. (ಮತ್ತಾಯ 22:37, 38; ಯಾಕೋಬ 4:8) ಯೇಸುವಿನ ಜೀವನ ರೀತಿ ಹಾಗೂ ಬೋಧನೆಗಳಿಂದ ನಾವು ದೇವರ ಇಷ್ಟವನ್ನ ಹೇಗೆ ಮಾಡೋದು ಅಂತ ತಿಳಿದುಕೊಳ್ಳಬಹುದು. (ಯೋಹಾನ 7:16, 17) ದೇವರ ಇಷ್ಟ ಏನೆಂದು ಯೇಸು ಕೇವಲ ಬಾಯಿ ಮಾತಲ್ಲಿ ಹೇಳಲಿಲ್ಲ, ತನ್ನ ನಡೆ ನುಡಿಯಲ್ಲಿ ತೋರಿಸಿಕೊಟ್ಟನು. ಯೇಸು ತನ್ನ ಜೀವನದ ಉದ್ದೇಶದ ಬಗ್ಗೆ ಮಾತಾಡ್ತಾ “ನನ್ನ ಇಷ್ಟ ಮಾಡಕ್ಕೆ ಬರಲಿಲ್ಲ, ನನ್ನನ್ನ ಕಳಿಸಿದವನ ಇಷ್ಟ ಮಾಡಕ್ಕೆ ಬಂದೆ” ಅಂತ ಹೇಳಿದ.—ಯೋಹಾನ 6:38.
ನನ್ನ ಜೀವನದಲ್ಲಿ ದೇವರ ಇಷ್ಟ ಏನಂತ ತಿಳಿಯಲು ನನಗೆ ವಿಶೇಷ ಸೂಚನೆ, ದರ್ಶನ ಅಥವಾ ಒಂದು ಅದ್ಭುತದ ಅವಶ್ಯಕತೆ ಇದೆಯಾ?
ಇಲ್ಲ, ಯಾಕಂದ್ರೆ ದೇವರು ಎಲ್ಲಾ ಮನುಷ್ಯರಿಗೆ ಏನು ಹೇಳಕ್ಕೆ ಬಯಸ್ತಾನೋ ಅದು ಬೈಬಲಲ್ಲಿದೆ. ಅದನ್ನ ಜೀವನದಲ್ಲಿ ಅನ್ವಯಿಸೋದರಿಂದ “ಯಾವಾಗ್ಲೂ ಒಳ್ಳೇ ಕೆಲಸಗಳನ್ನ ಮಾಡೋಕೆ ಸಾಮರ್ಥ್ಯ ಸಿಗುತ್ತೆ.” (2 ತಿಮೊತಿ 3:16, 17) ನನ್ನ ಜೀವನದಲ್ಲಿ ದೇವರ ಇಷ್ಟ ಏನಂತ ತಿಳಿಯಲು ನಾವು ಬೈಬಲ್ ಜೊತೆಗೆ ನಮ್ಮ “ಯೋಚನಾ ಸಾಮರ್ಥ್ಯವನ್ನ” ಕೂಡ ಬಳಸಬೇಕಂತ ದೇವರು ಬಯಸ್ತಾನೆ.—ರೋಮನ್ನರಿಗೆ 12:1, 2; ಎಫೆಸ 5:17.
ನನ್ನ ಕೈಯಲ್ಲಿ ದೇವರ ಇಷ್ಟ ಮಾಡಕ್ಕಾಗುತ್ತಾ?
ಹೌದು, ಖಂಡಿತ ಮಾಡಕ್ಕಾಗುತ್ತೆ. ಯಾಕಂದ್ರೆ ಬೈಬಲ್ ಹೀಗೆ ಹೇಳುತ್ತೆ: ‘ದೇವರ ಆಜ್ಞೆಗಳು ಅಷ್ಟೇನೂ ಕಷ್ಟ ಅಲ್ಲ.’ (1 ಯೋಹಾನ 5:3) ಹಾಗಂತ ದೇವರ ಆಜ್ಞೆಗಳನ್ನ ಯಾವಾಗಲೂ ಪಾಲಿಸೋದು ಅಷ್ಟೇನು ಸುಲಭ ಅಲ್ಲ. ಆದರೆ ಆತನ ಆಜ್ಞೆಗಳನ್ನ ಪಾಲಿಸಲು ನಾವು ಹಾಕುವ ಪ್ರಯತ್ನಕ್ಕಿಂತ ಅದರಿಂದ ಸಿಗೋ ಆಶೀರ್ವಾದಗಳೇ ಜಾಸ್ತಿ. ಇದರ ಬಗ್ಗೆ ಯೇಸು ಹೀಗೆ ಹೇಳಿದನು: “ದೇವರ ಮಾತು ಕೇಳಿಸ್ಕೊಂಡು ಅದ್ರ ಪ್ರಕಾರ ನಡೆಯೋರು ಇನ್ನೂ ಖುಷಿಯಾಗಿ ಇರ್ತಾರೆ.”—ಲೂಕ 11:28.