ಕೊನೆಯ ಪಸ್ಕ ಹಬ್ಬದಲ್ಲಿ ನಮ್ರತೆ
ಅಧ್ಯಾಯ 113
ಕೊನೆಯ ಪಸ್ಕ ಹಬ್ಬದಲ್ಲಿ ನಮ್ರತೆ
ಪೇತ್ರ ಮತ್ತು ಯೋಹಾನರು, ಯೇಸುವಿನ ಅಪ್ಪಣೆಯ ಪ್ರಕಾರ ಪಸ್ಕ ಹಬ್ಬದ ಸಿದ್ಧತೆಗಾಗಿ ಯೆರೂಸಲೇಮಿಗೆ ಈಗಾಗಲೇ ಬಂದಿರುತ್ತಾರೆ. ಯೇಸುವು ಪ್ರಾಯಶಃ ಅವನ ಉಳಿದ ಹತ್ತು ಮಂದಿ ಅಪೊಸ್ತಲರೊಂದಿಗೆ ಅಪರಾಹ್ನದ ಇಳೀಹೊತ್ತಿನಲ್ಲಿ ಆಗಮಿಸಿರಬಹುದು. ಯೇಸುವು ಮತ್ತು ಅವನ ಪಂಗಡವು ಎಣ್ಣೇಮರಗಳ ಗುಡ್ಡದಿಂದ ಇಳಿಯುತ್ತಿರುವಾಗ ಸೂರ್ಯನು ದಿಗಂತದಲ್ಲಿ ಅಸ್ತಮಿಸುತ್ತಿದ್ದನು. ಅವನ ಪುನರುತ್ಥಾನವಾದ ನಂತರದ ತನಕ ಯೇಸುವು ಹಗಲುಹೊತ್ತಿನಲ್ಲಿ ಈ ಗುಡ್ಡದಿಂದ ಪಟ್ಟಣವನ್ನು ವೀಕ್ಷಿಸುವದು ಇದು ಕೊನೆಯ ಬಾರಿಯದ್ದಾಗಿತ್ತು.
ಬಲುಬೇಗನೆ ಯೇಸು ಮತ್ತು ಅವನ ತಂಡದವರು ನಗರದೊಳಗೆ ಬರುತ್ತಾರೆ ಮತ್ತು ಪಸ್ಕಹಬ್ಬವನ್ನು ಅವರು ಆಚರಿಸುವಂಥ ಮನೆಗೆ ತಲುಪುತ್ತಾರೆ. ಅವರು ಮೇಲಂತಸ್ತಿನ ದೊಡ್ಡ ಕೋಣೆಗೆ ಹೋಗಲು ಮೆಟ್ಟಲುಗಳನ್ನು ಹತ್ತುತ್ತಾರೆ, ಪಸ್ಕ ಹಬ್ಬದ ಅವರ ವೈಯಕ್ತಿಕ ಆಚರಣೆಗೆ ಅಲ್ಲಿ ಎಲ್ಲಾ ಸಿದ್ಧಮಾಡಿಟ್ಟಿರುವದನ್ನು ಕಾಣುತ್ತಾರೆ. ಯೇಸುವು ಅಂಥ ಒಂದು ಸಂದರ್ಭಕ್ಕಾಗಿ ಮುನ್ನೋಡುತ್ತಿದ್ದನು, ಅವನು ಹೇಳುವದು: “ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸುತ್ತೇನೆ.”
ಸಂಪ್ರದಾಯಕ್ಕನುಸಾರ ಪಸ್ಕ ಹಬ್ಬದ ಪಾಲಿಗರು ದ್ರಾಕ್ಷಾರಸದ ನಾಲ್ಕು ಪಾತ್ರೆಗಳಿಂದ ಕುಡಿಯುತ್ತಿದ್ದರು. ಸ್ಫುಟವಾಗಿ ಮೂರನೆಯ ಪಾತ್ರೆಯನ್ನು ಸ್ವೀಕರಿಸಿಯಾದ ನಂತರ, ಯೇಸುವು ದೇವರ ಸ್ತೋತ್ರ ಮಾಡಿ ಅಂದದ್ದು: “ಇದನ್ನು ತಕ್ಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ. ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲವೆಂದು ನಿಮಗೆ ಹೇಳುತ್ತೇನೆ.”
ಊಟವನ್ನು ಮಾಡುತ್ತಾ ಇರುವಾಗ, ಯೇಸುವು ಎದ್ದು ಹೊದ್ದಿದ್ದ ಮೇಲ್ಹೇದಿಕೆಯನ್ನು ತೆಗೆದಿಟ್ಟು ಕೈಪಾವುಡವನ್ನು ತಕ್ಕೊಂಡು, ಬೋಗುಣಿಯೊಂದರಲ್ಲಿ ನೀರು ತುಂಬಿಸಿದನು. ಸಾಮಾನ್ಯವಾಗಿ, ಅತಿಥಿಯ ಕಾಲುಗಳು ತೊಳೆಯಲ್ಪಡುವದನ್ನು ಆತಿಥೇಯನು ನೋಡಿಕೊಳ್ಳುತ್ತಾನೆ. ಆದರೆ ಈ ಸಂದರ್ಭದಲ್ಲಿ ಯಾರೂ ಆತಿಥೇಯನು ಹಾಜರಿಲ್ಲದರ್ದಿಂದ, ಯೇಸುವು ಈ ವೈಯಕ್ತಿಕ ಸೇವೆಯ ಜಾಗ್ರತೆಯನ್ನು ವಹಿಸಿಕೊಳ್ಳುತ್ತಾನೆ. ಅಪೊಸ್ತಲರಲ್ಲಿ ಯಾರಾದರೊಬ್ಬರು ಈ ಆವಕಾಶವನ್ನು ತಮ್ಮದಾಗಿ ಮಾಡಿಕೊಳ್ಳಬಹುದಿತ್ತು; ಆದರೂ, ಅವರಲ್ಲಿ ಸ್ವಲ್ಪ ಪ್ರತಿಸ್ಪರ್ಧೆಯು ಇನ್ನೂ ಇದ್ದುದರಿಂದ, ಯಾರೊಬ್ಬನೂ ಇದನ್ನು ಮಾಡುವದಿಲ್ಲ. ಯೇಸುವು ಅವರ ಕಾಲುಗಳನ್ನು ತೊಳೆಯಲು ಆರಂಭಿಸಿದಾಗ ಅವರು ಪೇಚಾಟಕ್ಕೊಳಗಾಗುತ್ತಾರೆ.
ಯೇಸುವು ಅವನ ಬಳಿಗೆ ಬಂದಾಗ, ಪೇತ್ರನು ಅಡ್ಡಿಮಾಡುತ್ತಾನೆ: “ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು.”
“ನಾನು ನಿನ್ನನ್ನು ತೊಳೆಯದಿದ್ದರೆ ನನ್ನ ಸಂಗಡ ನಿನಗೆ ಪಾಲಿಲ್ಲ,” ಹೇಳುತ್ತಾನೆ ಯೇಸು.
“ಸ್ವಾಮೀ,” ಪೇತ್ರನು ಪ್ರತಿವರ್ತಿಸುವದು, “ನನ್ನ ಕಾಲುಗಳನ್ನು ಮಾತ್ರವಲ್ಲದೆ ಕೈಗಳನ್ನೂ ತಲೆಯನ್ನೂ ಸಹ ತೊಳೆಯಬೇಕು.”
“ಸ್ನಾನಮಾಡಿಕೊಂಡವನು,” ಯೇಸುವು ಉತ್ತರಿಸುವದು, “ಕಾಲುಗಳನ್ನು ತೊಳೆಯವದಲ್ಲದೆ ಬೇರೇನೂ ತೊಳೆಯಬೇಕಾಗಿರುವದಿಲ್ಲ, ಅವನ ಮೈಯೆಲ್ಲಾ ಶುದ್ಧವಾಗಿದೆ. ನೀವೂ ಶುದ್ಧರಾಗಿದ್ದೀರಿ; ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ.” ಇದನ್ನು ಹೇಳಲು ಕಾರಣವೇನಂದರೆ ತನ್ನನ್ನು ಹಿಡುಕೊಡಲು ಇಸ್ಕರಿಯೋತ ಯೂದನು ಯೋಜನೆಗಳನ್ನು ಮಾಡಿದ್ದಾನೆಂದು ಅವನಿಗೆ ಗೊತ್ತಿತ್ತು.
ಹಿಡುಕೊಡುವವನಾದ ಯೂದನ ಕಾಲುಗಳನ್ನು ಸಹಿತ, ಎಲ್ಲಾ 12 ಮಂದಿಯ, ತೊಳೆದಾದ ನಂತರ, ಅವನು ತನ್ನ ಮೇಲ್ಹೇದಿಕೆಯನ್ನು ಹಾಕಿಕೊಳ್ಳುತ್ತಾನೆ ಮತ್ತು ತಿರಿಗಿ ಮೇಜಿನ ಬಳಿ ಕೂತುಕೊಳ್ಳುತ್ತಾನೆ. ಅನಂತರ ಅವನು ಪ್ರಶ್ನಿಸುವದು: “ನಾನು ನಿಮಗೆ ಮಾಡಿದ್ದು ಏನೆಂದು ಗೊತ್ತಾಯಿತೋ? ನೀವು ನನ್ನನ್ನು ಗುರುವೆಂದೂ ಕರ್ತನೆಂದೂ ಕರೆಯುತ್ತೀರಿ; ನೀವು ಕರೆಯುವದು ಸರಿ; ನಾನು ಅಂಥವನೇ ಹೌದು. ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ಒಬ್ಬರು ತೊಳೆಯುವ ಹಂಗಿನವರಾಗಿದ್ದೀರಿ. ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ. ನಿಮಗೆ ನಿಜನಿಜವಾಗಿ ಹೇಳುತ್ತೇನೆ, ದಣಿಗಿಂತ ಆಳು ದೊಡ್ಡವನಲ್ಲ, ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. ನೀವು ಇದನ್ನು ತಿಳುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.”
ನಮ್ರ ಸೇವೆಯ ಎಂಥ ಒಂದು ಸುಂದರವಾದ ಪಾಠ! ತಾವು ಅಷ್ಟೊಂದು ಪ್ರಮುಖರೆಂದೆಣಿಸುತ್ತಾ ಇತರರು ಯಾವಾಗಲೂ ತಮ್ಮ ಸೇವೆ ಮಾಡತಕ್ಕದ್ದು ಎಂಬಂಥ ರೀತಿಯಲ್ಲಿ ಅಪೊಸ್ತಲರು ಪ್ರಥಮ ಸ್ಥಾನಗಳನ್ನು ಹುಡುಕಬಾರದಿತ್ತು. ಯೇಸುವಿನಿಂದ ಇಡಲ್ಪಟ್ಟ ನಮೂನೆಯನ್ನು ಹಿಂಬಾಲಿಸುವ ಆವಶ್ಯಕತೆ ಅವರಿಗಿತ್ತು. ಇದೊಂದು ಬಾಹ್ಯಾಚಾರದ ಕಾಲು ತೊಳೆಯುವಿಕೆಯಲ್ಲ. ಅಲ್ಲ, ಬದಲು ಕೆಲಸವು ಎಷ್ಟೇ ಕೀಳು ಯಾ ಆಹ್ಲಾದಕರವಲ್ಲದ್ದಾಗಿರಲಿ, ಯಾವುದೇ ಪಕ್ಷಪಾತವಿಲ್ಲದೆ ಸೇವೆ ಸಲ್ಲಿಸಲು ಇಚ್ಛೆಯುಳ್ಳವನಾಗಿರುವದಾಗಿದೆ. ಮತ್ತಾಯ 26:20, 21; ಮಾರ್ಕ 14:17, 18; ಲೂಕ 22:14-18; 7:44; ಯೋಹಾನ 13:1-17.
▪ ಪಸ್ಕ ಹಬ್ಬವನ್ನು ಆಚರಿಸಲು ಪಟ್ಟಣವನ್ನು ಪ್ರವೇಶಿಸುವಾಗ ಯೇಸುವಿನ ಯೆರೂಸಲೇಮಿನ ಕಡೆಗಿನ ನೋಟವು ಯಾವ ರೀತಿಯಲ್ಲಿ ಅಸದೃಶವಾಗಿತ್ತು?
▪ ಪಸ್ಕ ಹಬ್ಬದ ಸಮಯದಲ್ಲಿ ದೇವರ ಸ್ತೋತ್ರವನ್ನು ಮಾಡಿದ ನಂತರ ಯಾವ ಪಾತ್ರೆಯನ್ನು ಯೇಸುವು ತನ್ನ ಹನ್ನೆರಡು ಮಂದಿ ಅಪೊಸ್ತಲರಿಗೆ ದಾಟಿಸುತ್ತಾನೆ?
▪ ಯೇಸುವು ಭೂಮಿಯ ಮೇಲಿರುವಾಗ ಯಾವ ವೈಯಕ್ತಿಕ ಸೇವೆಯು ಪದ್ಧತಿಗನುಸಾರ ಅತಿಥಿಗಳಿಗೆ ಒದಗಿಸಲ್ಪಡುತ್ತಿತ್ತು, ಮತ್ತು ಯೇಸುವು ಮತ್ತು ಅವನ ಅಪೊಸ್ತಲರಿಂದ ಪಸ್ಕ ಹಬ್ಬವು ಆಚರಿಸಲ್ಪಡುತ್ತಿರುವ ಸಮಯದಲ್ಲಿ ಅದು ಯಾಕೆ ಒದಗಿಸಲ್ಪಡಲಿಲ್ಲ?
▪ ತನ್ನ ಅಪೊಸ್ತಲರ ಪಾದಗಳನ್ನು ತೊಳೆದ ಕೀಳ್ಮಟ್ಟದ ಸೇವೆಯನ್ನು ನಡಿಸಿದ್ದರಲ್ಲಿ ಯೇಸುವಿನ ಉದ್ದೇಶವೇನಾಗಿತ್ತು?