Privacy Settings

To provide you with the best possible experience, we use cookies and similar technologies. Some cookies are necessary to make our website work and cannot be refused. You can accept or decline the use of additional cookies, which we use only to improve your experience. None of this data will ever be sold or used for marketing. To learn more, read the Global Policy on Use of Cookies and Similar Technologies. You can customize your settings at any time by going to Privacy Settings.

‘ನಾನು ನಿನ್ನನ್ನು ಮರೆಯೆ’

‘ನಾನು ನಿನ್ನನ್ನು ಮರೆಯೆ’

ದೇವರ ಸಮೀಪಕ್ಕೆ ಬನ್ನಿರಿ

‘ನಾನು ನಿನ್ನನ್ನು ಮರೆಯೆ’

ಯೆಹೋವ ದೇವರಿಗೆ ತನ್ನ ಜನರ ಬಗ್ಗೆ ಕಳಕಳಿ ಇದೆಯೇ? ಇದ್ದರೆ ಎಷ್ಟಿರಬಹುದು? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಒಂದೇ ಒಂದು ದಾರಿ ದೇವರ ಗ್ರಂಥವಾದ ಬೈಬಲೇ. ಅದರಲ್ಲಿ ಆತನು ತನ್ನ ಜನರ ಬಗ್ಗೆ ತನಗೆ ಹೇಗನಿಸುತ್ತದೆಂದು ತಿಳಿಸಿದ್ದಾನೆ. ಅಂಥ ಒಂದು ಮಾತು ಯೆಶಾಯ 49:15ರಲ್ಲಿದೆ.

ತನ್ನ ಜನರ ಬಗ್ಗೆ ಕಳಕಳಿ, ಚಿಂತೆ ಇದೆ ಎನ್ನುವುದನ್ನು ವಿವರಿಸಲು ಯೆಹೋವನು ಯೆಶಾಯನ ಮೂಲಕ ಮನಮುಟ್ಟುವ ಉದಾಹರಣೆಯೊಂದನ್ನು ಕೊಡುತ್ತಾನೆ. ಅಂಥ ಉದಾಹರಣೆ ಬೇರೊಂದಿಲ್ಲ. “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ?” ಎಂದು ಆತ ಕೇಳುತ್ತಾನೆ. ಇದನ್ನು ಕೇಳಿದಾಕ್ಷಣ ‘ಎಲ್ಲಾದರೂ ಉಂಟೇ’ ಎನ್ನಬಹುದು ನೀವು. ಕೂಸು ರಾತ್ರಿ-ಹಗಲು ಅಮ್ಮನನ್ನೇ ಅವಲಂಬಿಸಿರುತ್ತದೆ, ಅದಕ್ಕೇನಾದರೂ ಬೇಕಿದ್ದರೆ ಹೇಗಾದರೂ ಮಾಡಿ ಅವಳ ಗಮನ ಸೆಳೆಯುತ್ತದೆ. ಹಾಗಾಗಿ ತಾಯಿ ತನ್ನ ಕೂಸನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ಯೆಹೋವನು ಈ ಪ್ರಶ್ನೆ ಕೇಳಲು ಬೇರೊಂದು ಕಾರಣವಿದೆ.

ತಾಯಿ ತನ್ನ ಕಂದಮ್ಮನ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತಾ ಆರೈಕೆ ಮಾಡುವುದೇಕೆ? ಬರೀ ಮಗುವಿನ ಅಳು ನಿಲ್ಲಿಸಲೆಂದೇ? ಇಲ್ಲ. “ಹೆತ್ತ ಮಗುವಿನ ಮೇಲೆ” ಸ್ವಾಭಾವಿಕವಾಗಿಯೇ ತಾಯಿಗೆ ಕರುಣೆ ಇದ್ದೇ ಇರುತ್ತದೆ. “ಕರುಣೆ” ಎಂಬದಕ್ಕಾಗಿರುವ ಹೀಬ್ರು ಪದ ಅಸಹಾಯಕರ ಕಡೆಗಿನ ಕೋಮಲ ಮಮತೆಯನ್ನು ಸೂಚಿಸುತ್ತದೆ. ತನ್ನ ಅಸಹಾಯಕ ಹಸುಳೆಗಾಗಿ ಹೆತ್ತಕರುಳು ತೋರಿಸುವ ಕೋಮಲ ಮಮತೆ ಅಥವಾ ಕಕ್ಕುಲತೆ ಅತ್ಯಂತ ಉತ್ಕಟ ಭಾವನೆಯೆಂದು ನಮ್ಮೆಲ್ಲರಿಗೂ ಗೊತ್ತೇ ಇದೆ.

ಆದರೆ ಎಲ್ಲ ತಾಯಂದಿರಿಗೆ ತಮ್ಮ ಮೊಲೆಕೂಸಿನ ಮೇಲೆ ಮಮತೆ ಇರುವುದಿಲ್ಲ ಎಂಬದು ದುಃಖದ ಸಂಗತಿ. ಆದ್ದರಿಂದಲೇ ತಾಯಿ ತನ್ನ ಹೆತ್ತ ಮಗುವನ್ನು “ಒಂದು ವೇಳೆ ಮರೆತಾಳು” ಎನ್ನುತ್ತಾನೆ ಯೆಹೋವನು. ನಾವಿಂದು ಜೀವಿಸುವ ಲೋಕದಲ್ಲಿ ಹೆಚ್ಚಿನವರು “ನಿಷ್ಠೆಯಿಲ್ಲದವರೂ ಸ್ವಾಭಾವಿಕ ಮಮತೆಯಿಲ್ಲದವರೂ” ಆಗಿದ್ದಾರೆ. ಇದಕ್ಕೆ ಸ್ತ್ರೀಯರೂ ಹೊರತಾಗಿಲ್ಲ. (2 ತಿಮೊಥೆಯ 3:1-5) ನವಜಾತ ಶಿಶುಗಳನ್ನು ಅಲಕ್ಷಿಸುವ, ಹಿಂಸಿಸುವ, ಬೀದಿಗೆ ಎಸೆಯುವ ತಾಯಂದಿರ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. “ತಪ್ಪನ್ನು ಮಾಡುವ ಪ್ರವೃತ್ತಿ ತಾಯಂದಿರಲ್ಲೂ ಇದೆ. ಕೆಲವೊಮ್ಮೆ ಅವರ ಪ್ರೀತಿಗಿಂತ ಅವರ ತುಚ್ಛತನ ಮೇಲುಗೈ ಸಾಧಿಸುತ್ತದೆ. ಹೀಗೆ ಮಾನವ ಪ್ರೀತಿಯಲ್ಲೇ ಅತಿ ಶ್ರೇಷ್ಠವಾದ ತಾಯಿಯ ಮಮತೆ ಅರ್ಥ ಕಳೆದುಕೊಳ್ಳುತ್ತಿದೆ” ಎಂದು ಯೆಶಾಯ 49:15ರ ಬಗ್ಗೆ ಒಂದು ಬೈಬಲ್‌ ಪರಾಮರ್ಶ ಕೃತಿ ಹೇಳಿತು.

“ನಾನಾದರೆ ನಿನ್ನನ್ನು ಮರೆಯೆ” ಎಂದು ಯೆಹೋವನು ಭರವಸೆಯ ಮಾತು ಕೊಡುತ್ತಾನೆ. ಯೆಶಾಯ 49:15ರಲ್ಲಿ ಆತ ಕೇಳಿದ ಪ್ರಶ್ನೆಗೆ ಕಾರಣ ಈಗ ಅರ್ಥವಾಯಿತೇ? ಆ ವಚನದಲ್ಲಿ ದೇವರು ಹೋಲಿಕೆಯ ಬದಲು ವ್ಯತ್ಯಾಸ ತೋರಿಸುತ್ತಿದ್ದಾನೆ. ಅಸಹಾಯಕ ಕೂಸುಗಳಿಗೆ ಪ್ರೀತಿ ವಾತ್ಸಲ್ಯ ತೋರಿಸಲು ತಪ್ಪುವ ತಾಯಂದಿರಂತೆ ಅಲ್ಲ ಆತ. ಕಷ್ಟದಲ್ಲಿರುವ ತನ್ನ ಆರಾಧಕರನ್ನೆಂದೂ ಆತ ಮರೆಯುವುದಿಲ್ಲ. ಆದ್ದರಿಂದಲೇ “ದೇವರ ಪ್ರೀತಿಯ ಬಗ್ಗೆ ಹಳೇ ಒಡಂಬಡಿಕೆಯಲ್ಲಿ ಇರುವ ಪ್ರಬಲ ಅಭಿವ್ಯಕ್ತಿಗಳಲ್ಲಿ ಇದೂ ಒಂದು. ಇದೇ ಏಕೈಕ ಪ್ರಬಲ ಅಭಿವ್ಯಕ್ತಿ ಎಂದರೂ ತಪ್ಪಾಗದು” ಎಂದು ಮೇಲೆ ತಿಳಿಸಲಾದ ಪರಾಮರ್ಶ ಕೃತಿ ಯೆಶಾಯ 49:15ರ ಬಗ್ಗೆ ಸೂಕ್ತವಾಗಿಯೇ ಹೇಳಿತು.

“ಕರುಣೆಯನ್ನು ದಯಪಾಲಿಸುವ” ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳುವಾಗ ಮನಸ್ಸಿಗೆಷ್ಟು ನೆಮ್ಮದಿ ಆಗುತ್ತದಲ್ಲವೇ? (ಲೂಕ 1:77, ಸತ್ಯವೇದವು ಬೈಬಲ್‌) ಯೆಹೋವನಿಗೆ ಆಪ್ತರಾಗುವುದು ಹೇಗೆಂದು ತಿಳಿದುಕೊಳ್ಳಲು ನಿಮಗೆ ಇಷ್ಟವಿದೆಯೇ? ಪ್ರೀತಿಯ ಸಾಕಾರಮೂರ್ತಿಯಾದ ಆತನು ತನ್ನ ಆರಾಧಕರಿಗೆ “ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ” ಎನ್ನುತ್ತಾನೆ. ಎಂಥ ಭರವಸೆಯ ಮಾತುಗಳಿವು!—ಇಬ್ರಿಯ 13:5. (w12-E 02/01)