ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ

ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ

ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ

“ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿರಿ. ನೀವು ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆಗಳುಳ್ಳವರೂ ಆಗಿರಬೇಕು.”—2 ಪೇತ್ರ 3:11.

ನಿಮ್ಮ ಉತ್ತರವೇನು?

ದೇವರ ಮೆಚ್ಚುಗೆ ಗಳಿಸಬೇಕಾದರೆ ನೀವು ಯಾವ ರೀತಿಯ ವ್ಯಕ್ತಿಯಾಗಿರಬೇಕು?

ಸೈತಾನನು ಜನರನ್ನು ಹೇಗೆ ವಂಚಿಸುತ್ತಾನೆ?

ಯೆಹೋವನೊಂದಿಗಿನ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು?

1, 2. ದೇವರ ಮೆಚ್ಚುಗೆಗೆ ಪಾತ್ರರಾಗಬೇಕಾದರೆ ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು?

ಬೇರೆಯವರು ತಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೋ ಎಂದು ಹೆಚ್ಚಿನವರು ಯೋಚಿಸುತ್ತಾರೆ. ಹಾಗಿರುವಾಗ ಕ್ರೈಸ್ತರಾಗಿರುವ ನಾವು, ಪ್ರಪಂಚದಲ್ಲೇ ಮಹೋನ್ನತನೂ ಪ್ರಮುಖನೂ ಅಷ್ಟೇ ಅಲ್ಲ “ಜೀವದ ಬುಗ್ಗೆ”ಯೂ ಆಗಿರುವ ಯೆಹೋವ ದೇವರಿಗೆ ನಮ್ಮ ಬಗ್ಗೆ ಯಾವ ಅಭಿಪ್ರಾಯ ಇದೆ ಎಂದು ತಿಳಿಯುವುದು ಅವಶ್ಯ ಅಲ್ವಾ!—ಕೀರ್ತ. 36:9.

2 ‘ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕೆಂದು’ ಯೆಹೋವನು ಬಯಸುತ್ತಾನೋ ಅಂಥವರಾಗಿರಬೇಕಾದರೆ, “ಪವಿತ್ರ ನಡತೆಯುಳ್ಳವರೂ ದೇವಭಕ್ತಿಯ ಕ್ರಿಯೆ”ಗಳನ್ನು ಮಾಡುವವರೂ ನಾವಾಗಿರಬೇಕೆಂದು ಅಪೊಸ್ತಲ ಪೇತ್ರ ಉತ್ತೇಜಿಸುತ್ತಾನೆ. (2 ಪೇತ್ರ 3:11 ಓದಿ.) ದೇವರ ಒಪ್ಪಿಗೆಯನ್ನು ಪಡೆಯಬೇಕಾದರೆ ನಮ್ಮ “ನಡತೆ” ಪವಿತ್ರವಾಗಿರಬೇಕು. ಅಂದರೆ ನಾವು ನೈತಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧರಾಗಿರಬೇಕು. ಅದಕ್ಕಿಂತ ಹೆಚ್ಚಾಗಿ “ದೇವಭಕ್ತಿಯ ಕ್ರಿಯೆ”ಗಳನ್ನು ಮಾಡುವವರು ನಾವಾಗಿರಬೇಕು. ದೇವರಲ್ಲಿ ಗೌರವಭರಿತ ಭಕ್ತಿ ನಮಗಿರಬೇಕು, ನಿಷ್ಠೆಯ ನಂಟಿರಬೇಕು. ಆತನ ಮೆಚ್ಚುಗೆ ಪಡೆಯಲು ನಾವು ಹೇಗೆ ನಡೆದುಕೊಳ್ಳುತ್ತೇವೆ ಅನ್ನುವುದನ್ನಷ್ಟೆ ಅಲ್ಲ, ನಾವು ಹೃದಯದಲ್ಲಿ ಎಂಥವರಾಗಿದ್ದೇವೆ ಎಂದು ಪರೀಕ್ಷಿಸಿಕೊಳ್ಳುವುದು ಕೂಡ ಮುಖ್ಯ. ಯೆಹೋವನು ನಮ್ಮ “ಹೃದಯವನ್ನು ಶೋಧಿಸುವವ”ನಾಗಿದ್ದಾನೆ. ಆತನಿಗೆ ಗೊತ್ತು ನಮ್ಮ ನಡತೆ ಪವಿತ್ರವಾಗಿದೆಯಾ, ನಾವು ಆತನಿಗೆ ಸಂಪೂರ್ಣ ಭಕ್ತಿಯನ್ನು ಸಲ್ಲಿಸುತ್ತಿದ್ದೇವಾ ಇಲ್ಲವಾ ಎಂದು.—1 ಪೂರ್ವ. 29:17.

3. ಯೆಹೋವ ದೇವರೊಂದಿಗಿನ ಸಂಬಂಧದ ಕುರಿತು ನಾವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು?

3 ಪಿಶಾಚನಾದ ಸೈತಾನನಿಗೆ ನಾವು ಯೆಹೋವನ ಮೆಚ್ಚುಗೆ ಪಡೆಯುವುದು ಇಷ್ಟವಿಲ್ಲ. ನಮ್ಮ ಮತ್ತು ಯೆಹೋವ ದೇವರ ಮಧ್ಯೆ ಇರುವ ಸಂಬಂಧವನ್ನು ಮುರಿದು ಮೂರಾಬಟ್ಟೆ ಮಾಡಲು ಅವನು ಏನು ಬೇಕಾದರೂ ಮಾಡಲು ಸಿದ್ಧನಿದ್ದಾನೆ. ದೇವರನ್ನು ಆರಾಧಿಸದಂತೆ ಮಾಡಲು ಅವನು ಸುಳ್ಳು ಹೇಳಲಿಕ್ಕೂ ನಮ್ಮನ್ನೂ ವಂಚಿಸಲಿಕ್ಕೂ ಹೇಸಲ್ಲ. (ಯೋಹಾ. 8:44; 2 ಕೊರಿಂ. 11:13-15) ಹಾಗಾಗಿ ನಾವೆಲ್ಲರೂ ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು: ‘ಸೈತಾನನು ಜನರನ್ನು ಹೇಗೆ ವಂಚಿಸುತ್ತಾನೆ? ಯೆಹೋವನೊಂದಿಗಿನ ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳಲು ನಾನೇನು ಮಾಡಬೇಕು?’

ಸೈತಾನನು ಜನರನ್ನು ಹೇಗೆ ವಂಚಿಸುತ್ತಾನೆ?

4. (1) ದೇವರೊಂದಿಗಿನ ನಮ್ಮ ಸಂಬಂಧವನ್ನು ಕಡಿದುಹಾಕಲು ಸೈತಾನನು ಮುಖ್ಯವಾಗಿ ಯಾವುದನ್ನು ಗುರಿಹಲಗೆಯನ್ನಾಗಿ ಮಾಡಿಕೊಳ್ಳುತ್ತಾನೆ? (2) ಏಕೆ?

4 “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ; ಅಂತೆಯೇ ಪಾಪವು ಮಾಡಿ ಮುಗಿಸಲ್ಪಟ್ಟಾಗ ಮರಣವನ್ನು ಉಂಟುಮಾಡುತ್ತದೆ” ಎಂದು ಬರೆದನು ಶಿಷ್ಯನಾದ ಯಾಕೋಬ. (ಯಾಕೋ. 1:14, 15) ಹಾಗಾದರೆ ದೇವರೊಂದಿಗಿನ ನಮ್ಮ ಸಂಬಂಧವನ್ನು ಮುರಿದುಹಾಕಲು ಸೈತಾನನು ನಮ್ಮ ಆಶೆಗಳ ಮೂಲವಾಗಿರುವ ಹೃದಯವನ್ನು ಗುರಿಹಲಗೆಯನ್ನಾಗಿ ಮಾಡಿಕೊಂಡಿದ್ದಾನೆ.

5, 6. (1) ಯಾವುದನ್ನು ಬಳಸಿ ಸೈತಾನನು ನಮ್ಮ ಮೇಲೆ ಗುರಿಯಿಡುತ್ತಾನೆ? (2) ನಮ್ಮ ಹೃದಯದಲ್ಲಿ ತಪ್ಪು ಬಯಕೆಗಳನ್ನು ತುಂಬಿಸಲು ಅವನು ಯಾವೆಲ್ಲ ತಂತ್ರಗಳನ್ನು ಬಳಸುತ್ತಾನೆ? (3) ಅವುಗಳನ್ನು ಬಳಸುವುದರಲ್ಲಿ ಸೈತಾನನಿಗೆ ಎಷ್ಟು ಅನುಭವವಿದೆ?

5 ಯಾವುದನ್ನು ಬಳಸಿ ಸೈತಾನನು ನಮ್ಮ ಹೃದಯಕ್ಕೆ ಗುರಿಯಿಡುತ್ತಾನೆ? “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ” ಎಂದು ಬೈಬಲ್‌ ಹೇಳುತ್ತದೆ. (1 ಯೋಹಾ. 5:19) ಸೈತಾನನು ಬಳಸುವ ಅಸ್ತ್ರಗಳಲ್ಲಿ ‘ಲೋಕದಲ್ಲಿರುವ ವಿಷಯಗಳು’ ಸೇರಿವೆ. (1 ಯೋಹಾನ 2:15, 16 ಓದಿ.) ಜನರನ್ನು ಸುಲಭವಾಗಿ ವಂಚಿಸುವಂಥ ರೀತಿಯಲ್ಲಿ ಪಿಶಾಚನು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಾವಿರಾರು ವರ್ಷಗಳಿಂದ ರೂಪಿಸುತ್ತಾ ಬಂದಿದ್ದಾನೆ. ಅದೇ ಲೋಕದಲ್ಲಿ ನಾವು ಜೀವಿಸುತ್ತಿರುವುದರಿಂದ ಅವನ ಕುತಂತ್ರಗಳನ್ನು ಪ್ರತಿರೋಧಿಸುವ ಅಗತ್ಯವಿದೆ.—ಯೋಹಾ. 17:15.

6 ನಮ್ಮ ಹೃದಯದಲ್ಲಿ ಕೆಟ್ಟ ಬಯಕೆಗಳನ್ನು ಹುಟ್ಟಿಸಲು ಸೈತಾನನು ಅನೇಕ ವಿಧಾನಗಳನ್ನು ಬಳಸುತ್ತಾನೆ. ಹೀಗೆ ಮಾಡಲು ಅವನು ಪ್ರಯೋಗಿಸುವ ಮೂರು ಕುತಂತ್ರಗಳನ್ನು ಅಪೊಸ್ತಲ ಯೋಹಾನನು ನಮಗೆ ತಿಳಿಸಿದ್ದಾನೆ. ಅವು, (1) “ಶರೀರದಾಶೆ” (2) “ಕಣ್ಣಿನಾಶೆ” (3) “ಜೀವನೈಶ್ವರ್ಯದ ಆಡಂಬರ ಪ್ರದರ್ಶನ.” ಇವನ್ನು ಬಳಸಿಯೇ ಸೈತಾನನು ಅರಣ್ಯದಲ್ಲಿ ಯೇಸುವನ್ನು ಮರುಳುಗೊಳಿಸಲು ಪ್ರಯತ್ನಿಸಿದನು. ಅನೇಕ ವರ್ಷಗಳಿಂದ ಬಳಸಿದ ಅವೇ ಮೋಡಿಗಳನ್ನು ಇಂದು ಅವನು ಇನ್ನೂ ಚೆನ್ನಾಗಿ ಬಳಸುತ್ತಿದ್ದಾನೆ. ಅವರವರಿಗೆ ತಕ್ಕಂತೆ ಅವನಲ್ಲಿ ಅಸ್ತ್ರಗಳಿವೆ. ಅವುಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂದು ಕಲಿಯುವ ಮೊದಲು ಅವನು ಹವ್ವಳನ್ನು ವಂಚಿಸುವುದರಲ್ಲಿ ಹೇಗೆ ಜಯಸಾಧಿಸಿದನು ಮತ್ತು ಯೇಸುವನ್ನು ಮರುಳುಗೊಳಿಸುವುದರಲ್ಲಿ ಹೇಗೆ ಸೋತುಹೋದನು ಎನ್ನುವುದನ್ನು ನೋಡೋಣ.

“ಶರೀರದಾಶೆ”

7. ಸೈತಾನನು ಹವ್ವಳನ್ನು ವಂಚಿಸಲು “ಶರೀರದಾಶೆ”ಯನ್ನು ಹೇಗೆ ಬಳಸಿದನು?

7 ಎಲ್ಲ ಮನುಷ್ಯರಿಗೆ ಬೇಕಾಗಿರುವ ಮೂಲಭೂತ ಅಗತ್ಯಗಳಲ್ಲಿ ಆಹಾರವೂ ಒಂದು. ಸೃಷ್ಟಿಕರ್ತನು ಈ ಭೂಮಿಯನ್ನು ಸಾಕಷ್ಟು ಆಹಾರ ಕೊಡುವಂಥ ರೀತಿಯಲ್ಲಿ ಉಂಟುಮಾಡಿದ್ದಾನೆ. ನಮ್ಮಲ್ಲಿ ಆಹಾರದ ಕಡೆಗಿರುವ ಸಾಮಾನ್ಯ ಬಯಕೆಯನ್ನೇ ಸೈತಾನನು ಬಳಸಿ ಯೆಹೋವನ ಚಿತ್ತವನ್ನು ಮಾಡದಂತೆ ತಡೆಯಬಹುದು. ಹವ್ವಳ ಉದಾಹರಣೆ ಗಮನಿಸಿ. (ಆದಿಕಾಂಡ 3:1-6 ಓದಿ.) “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ವೃಕ್ಷ”ದ ಹಣ್ಣನ್ನು ತಿನ್ನಬಹುದೆಂದು ಸೈತಾನನು ಹವ್ವಳಿಗೆ ಹೇಳಿದನು. ‘ಅದನ್ನು ತಿಂದರೆ ನೀನು ಸಾಯುವುದಿಲ್ಲ, ತಿಂದ ತಕ್ಷಣ ದೇವರಂತೆ ಆಗುತ್ತಿ’ ಎಂದನು. (ಆದಿ. 2:9) ಹೀಗೆ ಹೇಳುವ ಮೂಲಕ ಸೈತಾನನು ಹವ್ವಳಿಗೆ, ‘ಜೀವಿಸಬೇಕಾದರೆ ದೇವರಿಗೆ ವಿಧೇಯರಾಗಲೇಬೇಕು ಅಂತ ಏನಿಲ್ಲ’ ಎಂದಂತಿತ್ತು. ಎಷ್ಟು ದೊಡ್ಡ ಸುಳ್ಳು ಅದಾಗಿತ್ತು! ಸೈತಾನನು ಹವ್ವಳ ಮನಸ್ಸಿನಲ್ಲಿ ಈ ಯೋಚನೆ ಹಾಕಿದ ಮೇಲೆ ಅವಳ ಮುಂದೆ ಎರಡು ಆಯ್ಕೆಗಳಿದ್ದವು. ಒಂದು ಆ ಯೋಚನೆಯನ್ನು ಕೂಡಲೆ ತಳ್ಳಿಹಾಕುವುದು. ಇನ್ನೊಂದು ಅದರ ಕುರಿತು ಯೋಚಿಸುತ್ತಲೇ ಇದ್ದು ಆ ಹಣ್ಣನ್ನು ತಿನ್ನುವ ಆಶೆಯನ್ನು ಹೆಚ್ಚಿಸುವುದು. ಅವಳು ತೋಟದಲ್ಲಿರುವ ಇತರ ಎಲ್ಲ ಮರದ ಹಣ್ಣುಗಳನ್ನು ತಿನ್ನಬಹುದಿತ್ತಾದರೂ ಸೈತಾನನು ಹೇಳಿದ ಆ ವಿಷಯದ ಕುರಿತು ತೀರಾ ಆಲೋಚಿಸಹತ್ತಿದಳು. ನಂತರ ಆ ಹಣ್ಣನ್ನು “ತೆಗೆದುಕೊಂಡು ತಿಂದಳು.” ಹೀಗೆ ಯಾವುದನ್ನು ತಿನ್ನಬಾರದೆಂದು ಸೃಷ್ಟಿಕರ್ತನು ಹೇಳಿದನೋ ಅದನ್ನೇ ಹವ್ವಳು ಬಯಸುವಂತೆ ಸೈತಾನನು ಮಾಡಿದನು.

8. (1) ಸೈತಾನನು ಯೇಸುವನ್ನು ಮರುಳುಗೊಳಿಸಲು “ಶರೀರದಾಶೆ”ಯನ್ನು ಹೇಗೆ ಬಳಸಿದನು? (2) ಆದರೆ ಅವನು ಜಯಸಾಧಿಸಲಿಲ್ಲ ಯಾಕೆ?

8 ಸೈತಾನನು ಇದೇ ಕುತಂತ್ರವನ್ನು ಬಳಸಿ ಯೇಸುವನ್ನು ಅರಣ್ಯದಲ್ಲಿ ಪ್ರಲೋಭಿಸಲು ಪ್ರಯತ್ನಿಸಿದನು. ಯೇಸು 40 ದಿನ ಉಪವಾಸ ಮಾಡಿದ್ದನು. ಹಾಗಾಗಿ ಸೈತಾನನು ಅವನಿಗಿದ್ದ ಆಹಾರದ ಅಗತ್ಯವನ್ನೇ ಬಳಸಿಕೊಂಡನು. “ನೀನು ದೇವರ ಮಗನಾಗಿರುವಲ್ಲಿ ಈ ಕಲ್ಲಿಗೆ ರೊಟ್ಟಿಯಾಗುವಂತೆ ಹೇಳು” ಅಂದನು ಸೈತಾನ. (ಲೂಕ 4:1-3) ಯೇಸುವಿಗೆ ಸಹ ಎರಡು ಆಯ್ಕೆಗಳಿದ್ದವು. ಒಂದು ತನ್ನ ಅಗತ್ಯವನ್ನು ಪೂರೈಸಲು ಅದ್ಭುತ ಶಕ್ತಿಯನ್ನು ಉಪಯೋಗಿಸುವುದು. ಇನ್ನೊಂದು ಆ ಶಕ್ತಿಯನ್ನು ಉಪಯೋಗಿಸದಿರುವುದು. ತನ್ನಲ್ಲಿದ್ದ ಅದ್ಭುತ ಶಕ್ತಿಯನ್ನು ಸ್ವಾರ್ಥ ಬಯಕೆಗಳಿಗಾಗಿ ಬಳಸಬಾರದೆಂದು ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವನು ಹಸಿದಿದ್ದರೂ, ತನ್ನ ತಂದೆಯಾದ ಯೆಹೋವನೊಂದಿಗಿನ ಸಂಬಂಧಕ್ಕಿಂತ ಆ ಬಯಕೆಯನ್ನು ತಣಿಸುವುದಕ್ಕೆ ಹೆಚ್ಚು ಮಹತ್ವ ಕೊಡಲಿಲ್ಲ. ಯೇಸು ಸೈತಾನನಿಗೆ ಉತ್ತರಿಸಿದ್ದು: “‘ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು’ ಎಂದು ಬರೆದಿದೆ.”—ಮತ್ತಾ. 4:4.

“ಕಣ್ಣಿನಾಶೆ”

9. (1) “ಕಣ್ಣಿನಾಶೆ” ಎಂಬುದು ಏನನ್ನು ಸೂಚಿಸುತ್ತದೆ? (2) ಸೈತಾನನು ಈ ಆಶೆಯನ್ನು ಹವ್ವಳ ಮೇಲೆ ಹೇಗೆ ಬಳಸಿದನು?

9 “ಕಣ್ಣಿನಾಶೆ”ಯನ್ನು ಸೈತಾನನ ಇನ್ನೊಂದು ಕುತಂತ್ರವೆಂದು ಯೋಹಾನನು ತಿಳಿಸಿದನು. ಈ ಪದವೇ ತಿಳಿಸುವಂತೆ, ಒಬ್ಬ ವ್ಯಕ್ತಿ ಒಂದು ವಿಷಯವನ್ನು ಆಶಿಸಬೇಕಾದರೆ ಕೇವಲ ಕಣ್ಣಿಂದ ನೋಡಿದರೆ ಸಾಕು. ಹವ್ವಳ ವಿಷಯದಲ್ಲೂ ಆಗಿದ್ದು ಇದೇ ಅಲ್ವಾ! ಈ ಹಣ್ಣನ್ನು ತಿಂದರೆ ‘ನಿಮ್ಮ ಕಣ್ಣುಗಳು ತೆರೆಯುತ್ತವೆ’ ಎಂದು ಹೇಳುವ ಮೂಲಕ ಸೈತಾನನು ಕಣ್ಣಿನಾಶೆಯನ್ನು ಅವಳ ಮೇಲೆ ಪ್ರಯೋಗಿಸಿದನು. ಹವ್ವಳು ಆ ನಿಷೇಧಿಸಿದ ಹಣ್ಣನ್ನು ನೋಡುತ್ತಾ ಇದ್ದಷ್ಟು ಅದು ಅವಳನ್ನು ಹೆಚ್ಚೆಚ್ಚು ಆಕರ್ಷಿಸಿತು. ಆ ಹಣ್ಣು “ನೋಡುವದಕ್ಕೆ ರಮ್ಯವಾಗಿ” ಕಂಡಿತು.

10. (1) ಯೇಸುವನ್ನು ಪ್ರಲೋಭಿಸಲು “ಕಣ್ಣಿನಾಶೆ”ಯನ್ನು ಸೈತಾನನು ಹೇಗೆ ಬಳಸಿದನು? (2) ಅದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು?

10 ಯೇಸುವಿನ ವಿಷಯದಲ್ಲೂ ಹೀಗಾಯಿತಾ? ಸೈತಾನನು “ನಿವಾಸಿತ ಭೂಮಿಯ ಎಲ್ಲ ರಾಜ್ಯಗಳನ್ನು ಕ್ಷಣಮಾತ್ರದಲ್ಲೇ [ಯೇಸುವಿಗೆ] ತೋರಿಸಿದನು. ಮತ್ತು ಪಿಶಾಚನು ಅವನಿಗೆ, ‘ಈ ಎಲ್ಲ ಅಧಿಕಾರವನ್ನೂ ಇವುಗಳ ವೈಭವವನ್ನೂ ನಾನು ನಿನಗೆ ಕೊಡುವೆನು’” ಎಂದನು. (ಲೂಕ 4:5, 6) ಆ ಕ್ಷಣದಲ್ಲೇ ಎಲ್ಲ ರಾಜ್ಯಗಳನ್ನು ಯೇಸುವಿಗೆ ತನ್ನ ಅಕ್ಷರಾರ್ಥ ಕಣ್ಣುಗಳಿಂದ ನೋಡಲು ಸಾಧ್ಯವಿರಲಿಲ್ಲವಾದರೂ, ಸೈತಾನನು ಅವುಗಳ ವೈಭವವನ್ನು ಯೇಸುವಿಗೆ ತೋರಿಸಿ ಅವನನ್ನು ಆಕರ್ಷಿಸಲು ಪ್ರಯತ್ನಿಸಿದನು. ಇದನ್ನು ನೋಡಿಯಾದರೂ ಯೇಸು ಮರುಳಾಗಬಹುದು ಅಂದುಕೊಂಡನು. ಆಮೇಲೆ ನಾಚಿಕೆಗೆಟ್ಟವನಾಗಿ, “ನೀನು ನನ್ನ ಮುಂದೆ ಒಂದು ಆರಾಧನಾ ಕ್ರಿಯೆಯನ್ನು ಮಾಡುವಲ್ಲಿ ಇದೆಲ್ಲವೂ ನಿನ್ನದಾಗುವುದು” ಎಂದನು. (ಲೂಕ 4:7) ಸೈತಾನನು ಬಯಸುವಂಥ ರೀತಿಯ ವ್ಯಕ್ತಿಯಾಗಿರಲು ಯೇಸು ಸ್ವಲ್ಪವೂ ಇಷ್ಟಪಡಲಿಲ್ಲ. ಹಾಗಾಗಿ ಅವನು ನೋಡುತ್ತಾ ಇರುವ ಬದಲು ತಕ್ಷಣ ಹೀಗೆ ಪ್ರತಿಕ್ರಿಯಿಸಿದನು: “‘ನಿನ್ನ ದೇವರಾಗಿರುವ ಯೆಹೋವನನ್ನೇ ನೀನು ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆಯನ್ನು ಸಲ್ಲಿಸಬೇಕು’ ಎಂದು ಬರೆದಿದೆ.”—ಲೂಕ 4:8.

“ಜೀವನೈಶ್ವರ್ಯದ ಆಡಂಬರ ಪ್ರದರ್ಶನ”

11. ಸೈತಾನನು ಹವ್ವಳನ್ನು ಹೇಗೆ ಮರುಳುಗೊಳಿಸಿದನು?

11 ಯೋಹಾನನು ಲೋಕದಲ್ಲಿರುವ ವಿಷಯಗಳ ಕುರಿತು ತಿಳಿಸುವಾಗ “ಜೀವನೈಶ್ವರ್ಯದ ಆಡಂಬರ ಪ್ರದರ್ಶನ”ದ ಕುರಿತು ತಿಳಿಸಿದನು. ಆದಾಮಹವ್ವರ ಸಮಯದಲ್ಲಿ ಭೂಮಿಯಲ್ಲಿ ಅವರು ಮಾತ್ರ ಇದ್ದ ಕಾರಣ ಇತರರ ಮುಂದೆ “ಜೀವನೈಶ್ವರ್ಯದ ಆಡಂಬರ ಪ್ರದರ್ಶನ”ವನ್ನು ಮಾಡಲು ಆಗುತ್ತಿರಲಿಲ್ಲ. ಆದರೂ ಅವರು ಗರ್ವವನ್ನು ತೋರಿಸಿದರು. ಸೈತಾನನು ಹವ್ವಳಿಗೆ, ದೇವರು ನಿನ್ನಿಂದ ಏನೋ ಒಂದು ಒಳ್ಳೆ ವಿಷಯವನ್ನು ಮುಚ್ಚಿಡುತ್ತಿದ್ದಾನೆ ಅಂತ ಸುಳ್ಳು ಹೇಳಿದನು. “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು” ತಿಂದ ದಿನವೇ ನೀನು “ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು” ತಿಳಿದುಕೊಳ್ಳುತ್ತಿ ಎಂದು ಪಿಶಾಚನು ಅವಳಿಗೆ ಹೇಳಿದನು. (ಆದಿ. 2:17; 3:5) ಹೀಗೆ ಯೆಹೋವನಿಂದ ಸ್ವಾತಂತ್ರ್ಯ ಪಡೆಯುವಂತೆ ಸೈತಾನನು ಹವ್ವಳಿಗೆ ಸಲಹೆ ಕೊಡುತ್ತಿದ್ದನು. ಈ ಸುಳ್ಳನ್ನು ಸತ್ಯವೆಂದು ನಂಬಿ ಹವ್ವ ಮರುಳಾದಳು. ಇದಕ್ಕೆ ಆಕೆಯಲ್ಲಿ ಬಂದ ಗರ್ವವೇ ಕಾರಣ. ತಾನು ಹೇಗೂ ಸಾಯಲ್ಲ ಎಂಬ ಮೊಂಡ ಧೈರ್ಯದಿಂದ ಆ ನಿಷೇಧಿತ ಹಣ್ಣನ್ನು ಅವಳು ತಿಂದಳು. ಅದೆಷ್ಟು ದೊಡ್ಡ ತಪ್ಪಾಗಿತ್ತಲ್ವಾ!

12. (1) ಸೈತಾನನು ಯೇಸುವನ್ನು ಪ್ರಲೋಭಿಸಲು ಬಳಸಿದ ಮತ್ತೊಂದು ವಿಧ ಯಾವುದು? (2) ಅದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು?

12 ಹವ್ವಳಿಗೂ ಯೇಸುವಿಗೂ ಎಷ್ಟು ಅಜಗಜಾಂತರ! ಯೇಸು ತೋರಿಸಿದ ದೀನತೆ ಎಷ್ಟು ಒಳ್ಳೆ ಮಾದರಿ ನಮಗೆ! ಸೈತಾನನು ಅವನನ್ನು ಪ್ರಲೋಭಿಸಲು ಮತ್ತೊಂದು ವಿಧವನ್ನು ಬಳಸಿದರೂ ಯೇಸು ಸೈತಾನನು ಹೇಳಿದಂತೆ ಮಾಡುವ ಯೋಚನೆಯನ್ನೂ ತನ್ನ ಹೃದಯದಲ್ಲಿ ಹುಟ್ಟುವಂತೆ ಅನುಮತಿಸಲಿಲ್ಲ. ದೇವರನ್ನು ಪರೀಕ್ಷಿಸಲು ಅವನು ಬಯಸಲಿಲ್ಲ. ಸೈತಾನನು ಕೇಳಿಕೊಂಡ ಆ ಚಿಕ್ಕ ಕ್ರಿಯೆಯನ್ನು ಮಾಡಿದ್ದರೂ ಅದು ಅವನಲ್ಲಿದ್ದ ಗರ್ವ ಅನಿಸಿಕೊಳ್ಳುತ್ತಿತ್ತು. ಆದರೆ ಯೇಸು ಸ್ಪಷ್ಟವಾಗಿ ನೇರವಾಗಿ ಹೀಗೆ ಉತ್ತರಿಸಿದನು: “‘ನಿನ್ನ ದೇವರಾಗಿರುವ ಯೆಹೋವನನ್ನು ಪರೀಕ್ಷಿಸಬಾರದು’ ಎಂದು ಹೇಳಲಾಗಿದೆ.”ಲೂಕ 4:9-12 ಓದಿ.

ಯೆಹೋವನೊಂದಿಗಿನ ಸಂಬಂಧವನ್ನು ಕಾಪಾಡಿಕೊಳ್ಳುವುದು ಹೇಗೆ?

13, 14. ಸೈತಾನನು ಇಂದು ಕುತಂತ್ರಗಳನ್ನು ಹೇಗೆ ಬಳಸುತ್ತಿದ್ದಾನೆ?

13 ಹವ್ವಳಿಗೆ ಮತ್ತು ಯೇಸುವಿಗೆ ಬಳಸಿದ ಅವೇ ಕುತಂತ್ರಗಳನ್ನು ಸೈತಾನನು ಇಂದೂ ಬಳಸುತ್ತಿದ್ದಾನೆ. “ಶರೀರದಾಶೆ” ಎಂಬ ಅಸ್ತ್ರವನ್ನು ಜನರ ಮೇಲೆ ಬಳಸುತ್ತಾ ಅನೈತಿಕತೆಗೆ, ಅತಿಯಾದ ಭೋಜನ ಕುಡಿತಕ್ಕೆ ಕುಮ್ಮಕ್ಕು ಕೊಡುತ್ತಿದ್ದಾನೆ. “ಕಣ್ಣಿನಾಶೆ”ಯನ್ನು ಬಳಸಿ ಅಶ್ಲೀಲ ಚಿತ್ರಗಳನ್ನು ನೋಡುವಂತೆ ಪ್ರಲೋಭಿಸುತ್ತಿದ್ದಾನೆ. ಮುಖ್ಯವಾಗಿ ಇಂಟರನೆಟ್‌ ಬಳಸುವುದರಲ್ಲಿ ಅಜಾಗರೂಕರಾಗಿ ಇರುವವರಿಗೆ ಅವನು ಗಾಳ ಹಾಕುತ್ತಾನೆ. “ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಮಾಡುವಂತೆ ಪ್ರಚೋದಿಸುವ ಮೂಲಕ ಜನರು ಗರ್ವಿಷ್ಠರಾಗುವಂತೆ, ಹಣ, ವಸ್ತು ವ್ಯಾಮೋಹ, ಅಧಿಕಾರ, ಹೆಸರು ಗಳಿಸುವುದರ ಹಿಂದೆ ಹೋಗುವಂತೆ ಮಾಡುತ್ತಿದ್ದಾನೆ.

14 ‘ಲೋಕದಲ್ಲಿರುವ ವಿಷಯಗಳೆಲ್ಲ’ ಮೀನುಗಾರನ ಗಾಳಕ್ಕಿರುವ ತೀನಿಯಂತೆ. ಅದು ತುಂಬ ಆಕರ್ಷಿಸುತ್ತದೆ. ಆದರೆ ಅದರ ಹಿಂದೆ ಕೊಂಡಿ ಇದೆ ಅನ್ನುವುದೇ ಮೀನಿಗೆ ಗೊತ್ತಿರಲ್ಲ. ಜನರು ಯಾವುದನ್ನು ದಿನನಿತ್ಯದ ಸಾಮಾನ್ಯ ಅಗತ್ಯಗಳೆಂದು ನೆನಸುತ್ತಾರೋ ಅಂಥವುಗಳನ್ನೇ ಸೈತಾನನು ಬಳಸಿಕೊಂಡು ದೇವರ ನಿಯಮಗಳಿಗೆ ವಿರುದ್ಧವಾಗಿ ಹೋಗುವಂತೆ ಮಾಡುತ್ತಾನೆ. ಈ ಎಲ್ಲ ಕುತಂತ್ರಗಳಿಂದ ಅವನು ನಮ್ಮ ಹೃದಯಗಳಲ್ಲಿ ತಪ್ಪಾದ ಬಯಕೆಗಳನ್ನು ಹುಟ್ಟಿಸಲು ಪ್ರಯತ್ನಿಸುತ್ತಾನೆ. ಹಾಯಾಗಿರುವುದು, ನಮ್ಮ ವೈಯಕ್ತಿಕ ಅಗತ್ಯಗಳನ್ನು ತಣಿಸುವುದು ಯೆಹೋವನ ಚಿತ್ತವನ್ನು ಮಾಡುವುದಕ್ಕಿಂತ ಪ್ರಾಮುಖ್ಯ ಎಂದು ನೆನಸುವಂತೆ ಮಾಡುತ್ತಾನೆ. ಈ ಕುತಂತ್ರಗಳು ನಮ್ಮ ಮೇಲೆ ಸಹ ಕೆಲಸ ಮಾಡಬಹುದಾ?

15. ಸೈತಾನನ ಪ್ರಲೋಭನೆಗಳನ್ನು ನಿಗ್ರಹಿಸಲು ಯೇಸುವಿನ ಮಾದರಿಯನ್ನು ಅನುಕರಿಸುವುದು ಹೇಗೆ?

15 ಹವ್ವಳು ಸೈತಾನನ ಗಾಳಕ್ಕೆ ಬಿದ್ದಂತೆ ಯೇಸು ಬೀಳಲಿಲ್ಲ. ಸೈತಾನನ ಪ್ರಲೋಭನೆಯನ್ನು ಅವನು ಜಯಿಸಿದನು. ಪ್ರತಿಬಾರಿ ಶಾಸ್ತ್ರಗ್ರಂಥದಿಂದ ಉತ್ತರಕೊಟ್ಟನು. ಹಾಗಾಗಿಯೇ “ಎಂದು ಬರೆದಿದೆ” ಅಥವಾ “ಎಂದು ಹೇಳಲಾಗಿದೆ” ಅಂದನು. ನಾವು ಸಹ ಬೈಬಲಿನ ಪಕ್ಕಾ ವಿದ್ಯಾರ್ಥಿಗಳಾಗಿದ್ದರೆ ಬೈಬಲ್‌ ವಚನಗಳ ಒಳ್ಳೆ ಪರಿಚಯ ನಮಗಿರುತ್ತದೆ. ಸಂದರ್ಭ ಬಂದಾಗ ಅವುಗಳನ್ನು ಮನಸ್ಸಿಗೆ ತರಲು, ಪ್ರಲೋಭನೆಗಳನ್ನು ಜಯಿಸಲು ಸಾಧ್ಯವಾಗುತ್ತದೆ. (ಕೀರ್ತ. 1:1, 2) ದೇವರಿಗೆ ಸದಾ ನಂಬಿಗಸ್ತರಾಗಿ ಉಳಿದವರ ಮಾದರಿಯನ್ನು ನೆನಪಿನಲ್ಲಿಟ್ಟುಕೊಳ್ಳುವುದರಿಂದ ಅವರನ್ನು ಅನುಸರಿಸಲು ಸಾಧ್ಯವಾಗುತ್ತದೆ. (ರೋಮ. 15:4) ಯೆಹೋವನಲ್ಲಿ ಗೌರವಭರಿತ ಭಕ್ತಿಯಿದ್ದು, ಆತನು ಪ್ರೀತಿಸುವುದನ್ನು ಪ್ರೀತಿಸುತ್ತಾ ದ್ವೇಷಿಸುವುದನ್ನು ದ್ವೇಷಿಸುವ ಮೂಲಕ ನಮ್ಮನ್ನು ನಾವು ಕಾಪಾಡಿಕೊಳ್ಳುತ್ತೇವೆ.—ಕೀರ್ತ. 97:10.

16, 17. ನಾವು ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆ ಎನ್ನುವುದು ನಮ್ಮ “ವಿವೇಚನಾಶಕ್ತಿ”ಯ ಮೇಲೆ ಹೇಗೆ ಹೊಂದಿಕೊಂಡಿದೆ?

16 ನಾವು ಲೋಕದ ಯೋಚನಾಧಾಟಿಯ ಪ್ರಕಾರವಿರದೆ, ದೇವರು ಬಯಸುವಂಥ ವ್ಯಕ್ತಿಗಳು ಆಗಿರಬೇಕಾದರೆ ನಮ್ಮ “ವಿವೇಚನಾಶಕ್ತಿ”ಯನ್ನು ಬಳಸಬೇಕೆಂದು ಅಪೊಸ್ತಲ ಪೌಲನು ಉತ್ತೇಜಿಸಿದ್ದಾನೆ. (ರೋಮ. 12:1, 2) ನಾವು ಏನು ಯೋಚಿಸುತ್ತೇವೋ ಅದರ ಕಡೆಗೆ ನಿಯಂತ್ರಣವನ್ನು ಸಾಧಿಸುವುದರ ಜರೂರಿಯ ಕುರಿತು ಪೌಲನು ತಿಳಿಸುತ್ತಾ ಹೀಗಂದನು: “ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ ಕುತರ್ಕಗಳನ್ನೂ ಪ್ರತಿಯೊಂದು ಉನ್ನತವಾದ ವಿಷಯವನ್ನೂ ನಾವು ಕೆಡವಿಹಾಕುವವರಾಗಿದ್ದೇವೆ; ನಾವು ಪ್ರತಿಯೊಂದು ಯೋಚನೆಯನ್ನು ಸೆರೆಹಿಡಿದು ಅದನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಮಾಡುತ್ತೇವೆ.” (2 ಕೊರಿಂ. 10:5) ನಮ್ಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಹಾಗಾಗಿ ಭಕ್ತಿವರ್ಧಕ ವಿಷಯಗಳನ್ನು “ಲಕ್ಷ್ಯಕ್ಕೆ ತಂದುಕೊಳ್ಳುತ್ತಾ” ಇರಬೇಕು.—ಫಿಲಿ. 4:8.

17 ಬೇಡದಿದ್ದೆಲ್ಲವನ್ನೂ ಯೋಚಿಸುತ್ತಾ ಅಥವಾ ಬಯಸುತ್ತಾ ಇದ್ದರೆ ನಾವು ಪವಿತ್ರರಾಗಿ ಉಳಿಯಲು ಸಾಧ್ಯವಿಲ್ಲ. “ಶುದ್ಧವಾದ ಹೃದಯದಿಂದ” ನಾವು ಯೆಹೋವನನ್ನು ಪ್ರೀತಿಸಬೇಕು. (1 ತಿಮೊ. 1:5) ಆದರೆ ಈ ಹೃದಯ ವಂಚಕ. ಹಾಗಿರುವುದರಿಂದ ‘ಲೋಕದಲ್ಲಿರುವ ವಿಷಯಗಳು’ ನಮ್ಮನ್ನೆಷ್ಟು ಮರುಳುಗೊಳಿಸುತ್ತಿವೆ ಅನ್ನುವುದೇ ನಮಗೆ ಗೊತ್ತಾಗಲಿಕ್ಕಿಲ್ಲ. (ಯೆರೆ. 17:9) ಆದ್ದರಿಂದ ನಾವು ‘ನಂಬಿಕೆಯಲ್ಲಿ ಇದ್ದೇವಾ ಇಲ್ಲವಾ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇದ್ದು, ನಾವು ಏನಾಗಿದ್ದೇವೆ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಬೇಕು.’ ಬೈಬಲ್‌ ಅಧ್ಯಯನ ಮಾಡುತ್ತಾ ‘ನನ್ನ ಆಲೋಚನೆಗಳು ಬಯಕೆಗಳು ದೇವರಿಗೆ ಹಿಡಿಸುತ್ತವಾ?’ ಅಂತ ನಮ್ಮನ್ನು ನಾವೇ ಕೇಳಿಕೊಳ್ಳಬೇಕು.—2 ಕೊರಿಂ. 13:5.

18, 19. ಯೆಹೋವನು ಮೆಚ್ಚುವಂಥ ವ್ಯಕ್ತಿಗಳು ನಾವಾಗಿರಲು ಯಾಕೆ ಪ್ರಯಾಸಪಡಬೇಕು?

18 ‘ಲೋಕದಲ್ಲಿರುವ ವಿಷಯಗಳಿಂದ’ ನಮ್ಮನ್ನು ಕಾಪಾಡಿಕೊಳ್ಳಲು ನೆರವಾಗುವ ಇನ್ನೊಂದು ಸಹಾಯ ಯೋಹಾನನ ಪ್ರೇರಿತ ಮಾತುಗಳಲ್ಲಿದೆ: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತಿದೆ, ಆದರೆ ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು.” (1 ಯೋಹಾ. 2:17) ಸೈತಾನನ ಲೋಕ ನೋಡಲು ನೈಜವಾಗಿ ಕಾಣುತ್ತದೆ. ಶಾಶ್ವತವಾಗಿ ಇರುತ್ತದೇನೋ ಅನಿಸುತ್ತದೆ. ಆದರೆ ಒಂದು ದಿನ ಅದು ಕಾಣದೆ ಹೋಗುತ್ತದೆ. ಸೈತಾನನ ಲೋಕದಲ್ಲಿರುವ ಎಲ್ಲ ವಿಷಯಗಳು ನಶ್ವರ. ನಾವಿದನ್ನು ನೆನಪಿನಲ್ಲಿಟ್ಟರೆ ಪಿಶಾಚನ ತಂತ್ರೋಪಾಯಗಳಿಂದ ಮೋಸಹೋಗಲ್ಲ.

19 ‘ನಾವು ಯೆಹೋವನ ದಿನದ ಸಾನ್ನಿಧ್ಯವನ್ನು ಎದುರುನೋಡುತ್ತಾ ಮನಸ್ಸಿನಲ್ಲಿ ನಿಕಟವಾಗಿ ಇಡುತ್ತಾ ಇದ್ದೇವೆ. ಆ ದಿನದಲ್ಲಿ ಆಕಾಶವು ಬೆಂಕಿ ಹೊತ್ತಿ ಲಯವಾಗಿ ಹೋಗುವುದು ಮತ್ತು ಘಟಕಾಂಶಗಳು ಅತಿಯಾದ ಉಷ್ಣತೆಯಿಂದ ಕರಗಿಹೋಗುವವು.’ ಆದ್ದರಿಂದ ದೇವರು ಮೆಚ್ಚುವಂಥ ವ್ಯಕ್ತಿಗಳು ನಾವಾಗಿರಬೇಕೆಂದು ಅಪೊಸ್ತಲ ಪೇತ್ರನು ಉತ್ತೇಜಿಸಿದ್ದಾನೆ. (2 ಪೇತ್ರ 3:12) ಅತೀ ಬೇಗನೆ ಯೆಹೋವನ ದಿನ ಬರಲಿದೆ. ಆ ದಿನದಲ್ಲಿ ದೇವರು ಸೈತಾನನ ಲೋಕದ ಪ್ರತಿಯೊಂದು ಭಾಗವನ್ನು ನಾಶಮಾಡುತ್ತಾನೆ. ಅಲ್ಲಿಯವರೆಗೂ ಸೈತಾನನು ಹವ್ವ ಮತ್ತು ಯೇಸುವಿಗೆ ಮಾಡಿದಂತೆ ತನ್ನ ‘ಲೋಕದಲ್ಲಿರುವ ವಿಷಯಗಳಿಂದ’ ನಮ್ಮನ್ನು ಪ್ರತಿದಿನ ಪ್ರಲೋಭಿಸುತ್ತಲೇ ಇರುತ್ತಾನೆ. ನಾವು ಹವ್ವಳಂತೆ ಸ್ವಂತ ಬಯಕೆಗಳನ್ನು ತಣಿಸುವುದಕ್ಕೆ ಪ್ರಮುಖತೆ ಕೊಡದಿರೋಣ. ಪ್ರಮುಖತೆ ಕೊಡುವಲ್ಲಿ ಸೈತಾನನೇ ನಮ್ಮ ದೇವರೆಂದು ಒಪ್ಪಿಕೊಂಡ ಹಾಗಾಗುತ್ತದೆ. ಸೈತಾನನು ಲೋಕದ ವಿಷಯಗಳಿಂದ ನಮ್ಮನ್ನೆಷ್ಟೇ ಆಕರ್ಷಿಸಲಿ ಯೇಸುವಿನಂತೆ ಪ್ರಲೋಭನೆಗಳನ್ನು ಜಯಿಸೋಣ. ಯೆಹೋವನು ಬಯಸುವಂಥ, ಮೆಚ್ಚುವಂಥ ವ್ಯಕ್ತಿಯಾಗಿರಲು ಪ್ರತಿಯೊಬ್ಬರು ದೃಢನಿರ್ಧಾರ ಮಾಡೋಣ.

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

[ಪುಟ 24ರಲ್ಲಿರುವ ಚಿತ್ರ]

“ಶರೀರದಾಶೆ”ಯ ಪಾಶಕ್ಕೆ ಹವ್ವಳು ಬಿದ್ದುಹೋದಳು (ಪ್ಯಾರ 7)

[ಪುಟ 25ರಲ್ಲಿರುವ ಚಿತ್ರ]

ಯಾವುದೂ ತನ್ನ ಲಕ್ಷ್ಯವನ್ನು ಭಂಗಗೊಳಿಸುವಂತೆ ಯೇಸು ಬಿಟ್ಟುಕೊಡಲಿಲ್ಲ (ಪ್ಯಾರ 8)

[ಪುಟ 26ರಲ್ಲಿರುವ ಚಿತ್ರ]

ಈ ಸಂದರ್ಭಗಳಲ್ಲಿ ಬೈಬಲಿನ ಯಾವ ತತ್ವಗಳು ನಿಮ್ಮ ಮನಸ್ಸಿಗೆ ಬರಬೇಕು? (ಪ್ಯಾರ 13, 14)