ಮಿಷನೆರಿಗಳು ಮಿಡತೆಗಳಂತಿದ್ದಾರೆ
124ನೇ ಗಿಲ್ಯಡ್ ಪದವಿ ಪ್ರದಾನ ಕಾರ್ಯಕ್ರಮ
ಮಿಷನೆರಿಗಳು ಮಿಡತೆಗಳಂತಿದ್ದಾರೆ
ಪ್ರತಿ ಆರು ತಿಂಗಳಿಗೊಮ್ಮೆ ‘ವಾಚ್ ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್’ ಪದವಿ ಪ್ರದಾನ ಕಾರ್ಯಕ್ರಮವನ್ನು ಏರ್ಪಡಿಸುತ್ತದೆ. ಈ ಕೂಟಕ್ಕೆ ಯುನೈಟೆಡ್ ಸ್ಟೇಟ್ಸ್‌ನ ಇಡೀ ಬೆತೆಲ್ ಕುಟುಂಬವನ್ನು ಆಮಂತ್ರಿಸಲಾಗುತ್ತದೆ. 2008, ಮಾರ್ಚ್ 8ರಂದು 30ಕ್ಕಿಂತ ಹೆಚ್ಚು ದೇಶಗಳಿಂದ ಬಂದ ಅತಿಥಿಗಳು ಬೆತೆಲ್ ಕುಟುಂಬದ ಜೊತೆಯಲ್ಲಿ ಗಿಲ್ಯಡ್ ಸ್ಕೂಲ್‌ನ 124ನೇ ತರಗತಿಯ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಹಾಜರಾದರು. ಆ ವಿಶೇಷ ದಿನದಂದು ವಿದ್ಯಾರ್ಥಿಗಳ ಸಮೇತ ನೆರೆದ ಒಟ್ಟು 6,411 ಮಂದಿ ಉಲ್ಲಾಸಿಸಿದರು.
ಆಡಳಿತ ಮಂಡಲಿಯ ಸದಸ್ಯರಾದ ಸ್ಟೀಫನ್ ಲೆಟ್, ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. ಅವರು, “ಯೆಹೋವನ ಸಾಂಕೇತಿಕ ಮಿಡತೆಗಳೊಂದಿಗೆ ಮುನ್ನಡೆಯಿರಿ” ಎಂಬ ಭಾಷಣದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಪ್ರಕಟನೆ 9:1-4, ಆಧ್ಯಾತ್ಮಿಕ ನಿಷ್ಕ್ರಿಯ ಸ್ಥಿತಿಯಿಂದ 1919ರಲ್ಲಿ ಚೇತರಿಸಿಕೊಂಡು ಚಟುವಟಿಕೆಗೆ ಧುಮುಕಿದ ಅಭಿಷಿಕ್ತ ಕ್ರೈಸ್ತರ ಚಿಕ್ಕ ಗುಂಪನ್ನು ಒಂದು ಮಿಡತೆ ದಂಡಿಗೆ ಹೋಲಿಸುತ್ತದೆ. “ಬೇರೆ ಕುರಿಗಳ” ಸದಸ್ಯರಾಗಿರುವ ಈ ವಿದ್ಯಾರ್ಥಿಗಳು ಸಾಂಕೇತಿಕ ಮಿಡತೆ ದಂಡಿನೊಂದಿಗೆ ಜೊತೆಗೂಡಿದ್ದಾರೆಂಬದನ್ನು ಅವರು ಪುನಃ ನೆನಪುಹುಟ್ಟಿಸಿದರು.—ಯೋಹಾ. 10:16.
ತದನಂತರ, ಯುನೈಟೆಡ್ ಸ್ಟೇಟ್ಸ್‌ನ ಬ್ರಾಂಚ್ ಕಮಿಟಿಯ ಸದಸ್ಯರಾದ ಲಾನ್ ಷಿಲಿಂಗ್ “ಪರಸ್ಪರರಿಗೆ ಸಹಕಾರಿಗಳಾಗಿರಿ” ಎಂಬ ಭಾಷಣ ಕೊಟ್ಟರು. ಅದು, ಪ್ರಥಮ ಶತಮಾನದ ಕ್ರೈಸ್ತ ದಂಪತಿ ಅಕ್ವಿಲ ಹಾಗೂ ಪ್ರಿಸ್ಕಳ ಮೇಲಾಧರಿತವಾಗಿತ್ತು. (ರೋಮಾ. 16:3, 4) ಈ ತರಗತಿಯಲ್ಲಿ ಒಟ್ಟು 28 ದಂಪತಿಗಳಿದ್ದರು. ಯಶಸ್ವಿ ಮಿಷನೆರಿಗಳಾಗಲು ಅವರು ತಮ್ಮ ವಿವಾಹ ಬಂಧವನ್ನು ಬಲವಾಗಿರಿಸಬೇಕೆಂದು ನೆನಪಿಸಲಾಯಿತು. ಬೈಬಲಿನಲ್ಲಿ ಯಾವಾಗಲೂ ಅಕ್ವಿಲ ಹಾಗೂ ಪ್ರಿಸ್ಕಳ ಹೆಸರು ಜೊತೆಜೊತೆಯಾಗಿ ಕಂಡುಬರುತ್ತದೆ. ಇದರಿಂದ, ಪೌಲನು ಮತ್ತು ಸಭೆಯವರು ಅವರಿಬ್ಬರನ್ನು ಯಾವಾಗಲೂ ಒಟ್ಟೊಟ್ಟಾಗಿ ಪರಿಗಣಿಸುತ್ತಿದ್ದರು ಎಂಬುದು ವ್ಯಕ್ತವಾಗುತ್ತದೆ. ತದ್ರೀತಿಯಲ್ಲಿ ಇಂದು ಮಿಷನೆರಿ ದಂಪತಿಗಳು ಕೆಲಸ ಹಾಗೂ ಆರಾಧನೆಯನ್ನು ಜೊತೆಯಾಗಿ ಮಾಡಬೇಕು ಮತ್ತು ತಮ್ಮ ವಿದೇಶಿ ನೇಮಕದಲ್ಲಿ ಎದುರಾಗುವ ಅಸಾಮಾನ್ಯ ಸವಾಲುಗಳನ್ನು ಒಟ್ಟಾಗಿ ನಿಭಾಯಿಸಬೇಕು. ಹೀಗೆ ಅವರು ಪರಸ್ಪರರಿಗೆ ಸಹಕಾರಿಗಳಾಗಲು ಸಾಧ್ಯವಾಗುತ್ತದೆ.—ಆದಿ. 2:18.
“ದೇವರ ಒಳ್ಳೇತನಕ್ಕೆ ಸ್ಪಂದಿಸಿರಿ” ಎಂಬ ಮುಂದಿನ ಭಾಷಣವನ್ನು ಆಡಳಿತ ಮಂಡಲಿಯ ಸದಸ್ಯರಾದ ಗೈ ಪಿಯರ್ಸ್ ನೀಡಿದರು. ಒಳ್ಳೆಯವರಾಗಿರುವುದರ ಅರ್ಥ, ಕೆಟ್ಟದ್ದನ್ನು ಮಾಡದೆ ಇರುವುದು ಮಾತ್ರವಲ್ಲ ಇತರರಿಗೋಸ್ಕರ ಒಳ್ಳೇದನ್ನು ಮಾಡುವುದೂ ಆಗಿದೆಯೆಂದು ಸಹೋದರ ಪಿಯರ್ಸ್ ವಿವರಿಸಿದರು. ಯೆಹೋವ ದೇವರ ಒಳ್ಳೇತನಕ್ಕೆ ಎಣೆಯಿಲ್ಲ. ದೇವರ ಒಳ್ಳೇತನ ಮತ್ತು ಪ್ರೀತಿಯು, ನಾವು ಇತರರಿಗೆ ಒಳಿತನ್ನು ಮಾಡುವಂತೆ ಪ್ರಚೋದಿಸುತ್ತದೆ. ವಿದ್ಯಾರ್ಥಿಗಳನ್ನು ಶ್ಲಾಘಿಸುತ್ತಾ ಭಾಷಣಕರ್ತರು ಸಮಾಪ್ತಿಯಲ್ಲಿ ಹೇಳಿದ್ದು: “ನೀವು ಈ ತನಕ ಒಳ್ಳೇದನ್ನು ಮಾಡಿದ್ದೀರಿ. ಯೆಹೋವ ದೇವರ ಒಳ್ಳೇತನಕ್ಕೆ ಸ್ಪಂದಿಸುತ್ತಾ ಆತನು ಕೊಡಲಿರುವ ಯಾವುದೇ ನೇಮಕಗಳಲ್ಲಿ ಒಳ್ಳೇದನ್ನು ಮಾಡುತ್ತಾ ಇರುವಿರಿ ಎಂಬ ಭರವಸೆ ನಮಗಿದೆ.”
ಹಿಂದೆ ಮಿಷನೆರಿಯಾಗಿದ್ದು, ಇತ್ತೀಚೆಗೆ ಗಿಲ್ಯಡ್ ಸ್ಕೂಲ್‌ನಲ್ಲಿ ಶಿಕ್ಷಕನಾಗಿ ನೇಮಕ ಪಡೆದ ಮೈಕಲ್ ಬರ್ನೆಟ್, “ಹುಬ್ಬುಗಳ ನಡುವೆ ಜ್ಞಾಪಕಪಟ್ಟಿಯಂತೆ ಕಟ್ಟಿಕೊಳ್ಳಿರಿ” ಎಂಬ ಶೀರ್ಷಿಕೆಯ ಭಾಷಣ ನೀಡಿದರು. ಯೆಹೋವನು ಐಗುಪ್ತದಿಂದ ಅದ್ಭುತಕರವಾಗಿ ಬಿಡುಗಡೆ ಮಾಡಿದ್ದನ್ನು ಇಸ್ರಾಯೇಲ್ಯರು, ತಮ್ಮ ಹುಬ್ಬುಗಳ ನಡುವೆ “ಜ್ಞಾಪಕಪಟ್ಟಿ” ಕಟ್ಟಿಕೊಂಡಿದ್ದಾರೋ ಎಂಬಂತೆ ಸದಾ ನೆನಪಿನಲ್ಲಿಡಬೇಕಿತ್ತು. (ವಿಮೋ. 13:16) ವಿದ್ಯಾರ್ಥಿಗಳು ತಾವು ಗಿಲ್ಯಡ್ ಸ್ಕೂಲಿನಲ್ಲಿ ಪಡೆದ ಹೇರಳ ಬೋಧನೆಯನ್ನು, ತಮ್ಮ ಹುಬ್ಬುಗಳ ನಡುವೆ ಜ್ಞಾಪಕಪಟ್ಟಿ ಕಟ್ಟಿಕೊಂಡಿದ್ದಾರೋ ಎಂಬಂತೆ ಸದಾ ನೆನಪಿನಲ್ಲಿಡಬೇಕೆಂದು ಸಲಹೆ ನೀಡಲಾಯಿತು. ಬೇರೆ ಮಿಷನೆರಿಗಳು ಅಥವಾ ಇತರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಾಗ ದೀನರೂ, ನಮ್ರರೂ ಆಗಿದ್ದು ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವ ಅಗತ್ಯವನ್ನು ಸಹೋದರ ಬರ್ನೆಟ್ ಒತ್ತಿಹೇಳಿದರು.—ಮತ್ತಾ. 5:23, 24.
ಹಲವಾರು ವರ್ಷಗಳಿಂದ ಗಿಲ್ಯಡ್ ಶಿಕ್ಷಕರಾದ ಮಾರ್ಕ್ ನೂಮಾರ್, “ನಿಮ್ಮ ಬಗ್ಗೆ ಯಾವ ಗೀತೆ ಹಾಡಲಾಗುವುದು?” ಎಂಬ ಭಾಷಣ ನೀಡಿದರು. ಪ್ರಾಚೀನ ಸಮಯಗಳಲ್ಲಿ ಹಾಡಿನ ಮೂಲಕ ಯುದ್ಧ ವಿಜಯವನ್ನು ಆಚರಿಸಲಾಗುತ್ತಿತ್ತು. ಅಂಥ ಒಂದು ಗೀತೆ ರೂಬೇನ್, ದಾನ್ ಮತ್ತು ಅಶೇರ್ ಕುಲಗಳವರು ಒಳ್ಳೇ ಕಾರ್ಯಕ್ಕಾಗಿ ಸಿದ್ಧಮನಸ್ಸನ್ನು ತೋರಿಸದವರೆಂದು ಬಯಲುಪಡಿಸುತ್ತದಾದರೂ ಜೆಬುಲೂನ್ ಕುಲದವರು ಸ್ವತ್ಯಾಗದ ಮನೋಭವದವರೆಂದು ಹಾಡಿಹೊಗಳುತ್ತದೆ. (ನ್ಯಾಯ. 5:16-18) ಗೀತೆಯು ಹಾಡಲ್ಪಡುವಾಗ ಅದರ ಪದಗಳು ಎಲ್ಲರಿಗೆ ಗೊತ್ತಾಗುವಂತೆಯೇ ಪ್ರತಿಯೊಬ್ಬ ಕ್ರೈಸ್ತನ ಕೆಲಸಕಾರ್ಯಗಳು ಕ್ರಮೇಣ ಇತರರಿಗೆ ತಿಳಿದುಬರುತ್ತವೆ. ಒಬ್ಬ ವ್ಯಕ್ತಿಗೆ ದೇವರ ಕೆಲಸಕ್ಕಾಗಿರುವ ಹುರುಪು ಮತ್ತು ದೇವಪ್ರಭುತ್ವಾತ್ಮಕ ಕ್ರಮಕ್ಕೆ ಅವನು ಯಾವಾಗಲೂ ತೋರಿಸುವ ನಿಷ್ಠೆಯು ದೇವರನ್ನು ಸಂತೋಷಪಡಿಸುತ್ತದೆ ಮತ್ತು ಸಹೋದರರಿಗೆ ಒಂದು ಉತ್ತಮ ಮಾದರಿಯಾಗಿರುತ್ತದೆ. ನಮ್ಮ ಕ್ರಿಯೆಗಳಿಂದ ನಾವು ರಚಿಸುವ ಸಾಂಕೇತಿಕ ಹಾಡಿಗೆ ಸಭೆಯಲ್ಲಿರುವ ಇತರರು ಕಿವಿಗೊಡುವಾಗ ನಮ್ಮ ಒಳ್ಳೇ ಮಾದರಿಯನ್ನು ಅನುಸರಿಸುವಂತೆ ಅವರಿಗೆ ಪ್ರೋತ್ಸಾಹ ಸಿಗುತ್ತದೆ.
124ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಗಿಲ್ಯಡ್ ತರಬೇತಿಯ ಭಾಗವಾಗಿ ಒಟ್ಟು 3,000 ತಾಸುಗಳನ್ನು ಕ್ಷೇತ್ರಸೇವೆಯಲ್ಲಿ ಕಳೆದರು. “ಪವಿತ್ರಾತ್ಮದ ಮಾರ್ಗದರ್ಶನವನ್ನು ಅನುಸರಿಸಿ” ಎಂಬ ಭಾಗವನ್ನು, ‘ತೀಯಾಕ್ರ್ಯಾಟಿಕ್ ಸ್ಕೂಲ್ಸ್ ಡಿಪಾರ್ಟ್‌ಮೆಂಟ್’ ಸದಸ್ಯರಾದ ಸ್ಯಾಮ್ ರಾಬರ್‌ಸನ್ ನಡೆಸಿದರು. ವಿದ್ಯಾರ್ಥಿಗಳು, ತಮಗೆ ಕ್ಷೇತ್ರದಲ್ಲಿ ಸಿಕ್ಕಿದ್ದ ಅನುಭವಗಳನ್ನು ಅವರಿಗೆ ತಿಳಿಸಿ ಕೆಲವೊಂದನ್ನು ಅಭಿನಯಿಸಿ ತೋರಿಸಿದರು. ಈ ಉತ್ತೇಜಕ ಅನುಭವಗಳ ಬಳಿಕ ಯುನೈಟೆಡ್ ಸ್ಟೇಟ್ಸ್‌ನ ಬ್ರಾಂಚ್ ಕಮಿಟಿಯ ಸದಸ್ಯರಾದ ಸಹೋದರ ಪ್ಯಾಟ್ರಿಕ್ ಲಾಫ್ರಾಂಕಾ ಅವರು, ಬೇರೆಬೇರೆ ದೇಶಗಳಲ್ಲಿ ಗಿಲ್ಯಡ್ ಮಿಷನೆರಿಗಳಾಗಿ ಸೇವೆಮಾಡುತ್ತಿದ್ದ ಅನೇಕರನ್ನು ಇಂಟರ್‌ವ್ಯೂ ಮಾಡಿದರು. ಆ ಎಲ್ಲ ಸಹೋದರರು ಕೊಟ್ಟ ವ್ಯಾವಹಾರಿಕ ಸಲಹೆಗಳಿಗೆ ವಿದ್ಯಾರ್ಥಿಗಳು ಕೃತಜ್ಞರಾಗಿದ್ದರು.
“ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು ಎಂಬದನ್ನು ನೆನಪಿಡಿ” ಎಂಬ ಕೊನೆ ಭಾಷಣವನ್ನು ಆಡಳಿತ ಮಂಡಲಿಯ ಸದಸ್ಯರಾದ, ಆ್ಯಂಟನಿ ಮೊರಿಸ್ ನೀಡಿದರು. ನಾವು ಸದ್ಯದಲ್ಲಿ ಅನುಭವಿಸುತ್ತಿರುವ ಆದರೆ ಸ್ವಲ್ಪಕಾಲ ಮಾತ್ರ ಇರುವ ಸಂಕಷ್ಟಗಳ ಕುರಿತೇ ಯೋಚಿಸುವ ಬದಲು ಭವಿಷ್ಯತ್ತಿನಲ್ಲಿ ಯೆಹೋವನು ಕೊಡುವ ಆಶೀರ್ವಾದಗಳ ಕುರಿತು ಯೋಚಿಸುವಂತೆ ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ. (2 ಕೊರಿಂ. 4:16-18) ಕಡು ಬಡತನ, ಅನ್ಯಾಯ, ದಬ್ಬಾಳಿಕೆ, ಅನಾರೋಗ್ಯ ಮತ್ತು ಮರಣವು ಇಂದು ನಮ್ಮ ಕಣ್ಮುಂದಿರುವ ನಿಜಾಂಶಗಳಾಗಿವೆ. ಇವುಗಳಲ್ಲಿ ಕೆಲವು ದುರಂತಕರ ಸನ್ನಿವೇಶಗಳು ಮಿಷನೆರಿಗಳಿಗೆ ಎದುರಾಗಬಲ್ಲವು. ಆದರೆ ಇವೆಲ್ಲಾ ಕೇವಲ ಸ್ವಲ್ಪಕಾಲ ಮಾತ್ರ ಇರುವಂಥವುಗಳು ಎಂಬದನ್ನು ನೆನಪಿನಲ್ಲಿಟ್ಟರೆ ನಮಗೆ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಿರೀಕ್ಷೆಯನ್ನಿಟ್ಟುಕೊಳ್ಳಲು ಸಾಧ್ಯವಾಗುವುದು.
ಅಂತಿಮವಾಗಿ, ಎಲ್ಲಾ ಪದವೀಧರರು ವೇದಿಕೆಯ ಮೇಲೆ ಕುಳಿತುಕೊಂಡು ಸಹೋದರ ಲೆಟ್ ಸಮಾಪ್ತಿಯಲ್ಲಿ ಹೇಳಿದ ಮಾತುಗಳಿಗೆ ಕಿವಿಗೊಟ್ಟರು. ಎಂದೂ ಬಿಟ್ಟುಕೊಡದಂತೆ ಪ್ರೋತ್ಸಾಹಿಸುತ್ತಾ ಅವರು ಹೇಳಿದ್ದು: “ಯೆಹೋವನು ನಮ್ಮೊಂದಿಗಿದ್ದರೆ, ನಮ್ಮ ಸಮಗ್ರತೆ ಎಂದೂ ಮುರಿಯದು.” ಹೊಸ ಮಿಷನೆರಿಗಳು ಮಿಡತೆಗಳಂತಿದ್ದು ಯೆಹೋವನ ಸೇವೆಯನ್ನು ಮಾಡುತ್ತಾ ಹುರುಪು, ನಿಷ್ಠೆ ಮತ್ತು ವಿಧೇಯತೆಯನ್ನು ಸದಾ ಕಾಪಾಡಿಕೊಳ್ಳುವಂತೆ ಉತ್ತೇಜಿಸಿದರು.
[ಪುಟ 30ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು
ಪ್ರತಿನಿಧಿಸಲಾದ ದೇಶಗಳ ಸಂಖ್ಯೆ: 7
ನೇಮಿಸಲಾದ ದೇಶಗಳ ಸಂಖ್ಯೆ: 16
ವಿದ್ಯಾರ್ಥಿಗಳ ಒಟ್ಟು ಸಂಖ್ಯೆ: 56
ಸರಾಸರಿ ಪ್ರಾಯ: 33.8
ಸತ್ಯದಲ್ಲಿ ಸರಾಸರಿ ವರ್ಷಗಳು: 18.2
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.8
[ಪುಟ 31ರಲ್ಲಿರುವ ಚಿತ್ರ]
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನಿಂದ ಪದವಿ ಪಡೆದ 124ನೇ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳನ್ನು ಎಡದಿಂದ ಬಲಕ್ಕೆ ಪಟ್ಟಿಮಾಡಲಾಗಿದೆ.
(1) ನಿಕಲ್ಸನ್, ಟಿ.; ಮೇನ್, ಎಚ್.; ಸೆಂಗೆ, ವೈ.; ಸ್ನೇಪ್, ಎಲ್.; ವಾನೇಗಾಸ್, ಸಿ.; ಪೋ, ಎಲ್. (2) ಸಾಂಟಾನಾ, ಎಸ್.; ಓ, ಕೆ.; ಲಮ್ಯಾಟ್ರ, ಸಿ.; ವಿಲ್ಯಮ್ಸ್, ಎನ್.; ಅಲೆಕ್ಸಾಂಡರ್, ಎಲ್. (3) ವುಡ್ಸ್, ಬಿ.; ಸ್ಟೇಂಟನ್, ಎಲ್.; ಹಂಟ್ಲಿ, ಈ.; ಅಲ್ವಾರೆಸ್, ಜಿ.; ಕ್ರುಜ್, ಜೆ.; ಬೆನೆಟ್, ಜೆ. (4) ವಿಲ್ಯಮ್‌ಸನ್, ಎ.; ಗೊನ್ಸಾಲೆಸ್, ಎನ್.; ಸುರಾಸ್ಕಿ, ಜೆ.; ಡಿಗಾಂಟ್, ಎಲ್.; ಮೇ, ಜೆ.; ಡ್ಯೇಮಿ, ಸಿ.; ಟ್ಯಾವನರ್, ಎಲ್. (5) ಲಮ್ಯಾಟ್ರ, ಡಬ್ಲ್ಯು.; ಹ್ಯಾರಿಸ್, ಎ.; ವೆಲ್ಸ್, ಸಿ.; ರಾಜರ್ಸ್, ಎಸ್.; ಡುರಾಂಟ್, ಎಮ್.; ಸೆಂಗೆ, ಜೆ. (6) ಹಂಟ್ಲಿ, ಟಿ.; ವಾನೇಗಾಸ್, ಎ.; ಪೋ, ಎ.; ಸಾಂಟಾನಾ, ವಿ.; ಟ್ಯಾವನರ್, ಡಿ.; ಓ, ಎಮ್.; (7) ಸುರಾಸ್ಕಿ, ಎಮ್; ರಾಜರ್ಸ್, ಜಿ.; ಡ್ಯೇಮಿ, ಡಿ.; ನಿಕಲ್ಸನ್, ಎಲ್.; ಅಲ್ವಾರೆಸ್, ಸಿ.; ಸ್ನೇಪ್, ಜೆ. (8) ಹ್ಯಾರಿಸ್, ಎಮ್.; ಗೊನ್ಸಾಲೆಸ್, ಪಿ.; ಮೇನ್, ಎಸ್.; ವುಡ್ಸ್, ಎಸ್.; ಸ್ಟೇಂಟನ್, ಬಿ.; ವಿಲ್ಯಮ್‌ಸನ್, ಬಿ.; ಡುರಾಂಟ್, ಜೆ. (9) ಕ್ರುಜ್, ಪಿ.; ಡಿಗಾಂಟ್, ಬಿ.; ವಿಲ್ಯಮ್ಸ್, ಡಿ; ವೆಲ್ಸ್, ಎಸ್.; ಅಲೆಕ್ಸಾಂಡರ್, ಡಿ.; ಮೇ, ಎಮ್.
[ಪುಟ 32ರಲ್ಲಿರುವ ಚಿತ್ರ]
ಗಿಲ್ಯಡ್ ಸ್ಕೂಲ್, ವಾಚ್‌ಟವರ್ ಎಜ್ಯುಕೇಷನಲ್ ಸೆಂಟರ್‌ನಲ್ಲಿದೆ