ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆ ಸಂತೋಷಕರ ಪರಿಣಾಮಗಳನ್ನು ತಂದಿತು
ರಾಜ್ಯ ಘೋಷಕರು ವರದಿ ಮಾಡುತ್ತಾರೆ
ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆ ಸಂತೋಷಕರ ಪರಿಣಾಮಗಳನ್ನು ತಂದಿತು
ಕಡೇ ದಿವಸಗಳಲ್ಲಿ “ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು” ಎಂದು ಯೇಸು ಕ್ರಿಸ್ತನು ಮುಂತಿಳಿಸಿದನು. ಇದರ ಫಲಿತಾಂಶವಾಗಿ, ಇಂದು ಲೋಕದ ಅನೇಕ ಭಾಗಗಳಲ್ಲಿ, ಸಾಮಾನ್ಯವಾಗಿ ಜನರು ರಾಜ್ಯ ಸುವಾರ್ತೆಯ ಕಡೆಗೆ ನಿರಾಸಕ್ತಿಯನ್ನು ತೋರಿಸುತ್ತಾರೆ. ಕೆಲವರು ಧರ್ಮವನ್ನು ಕೀಳಾಗಿಯೂ ಕಾಣುತ್ತಾರೆ.—ಮತ್ತಾಯ 24:12, 14.
ಹೀಗಿದ್ದರೂ, ರಾಜ್ಯ ಪ್ರಚಾರಕರು ಈ ಪಂಥಾಹ್ವಾನವನ್ನು ನಂಬಿಕೆ ಮತ್ತು ತಾಳ್ಮೆಯೊಂದಿಗೆ ಯಶಸ್ವಿದಾಯಕವಾಗಿ ನಿಭಾಯಿಸುತ್ತಿದ್ದಾರೆ. ಇದನ್ನೇ ಚೆಕ್ ರಿಪಬ್ಲಿಕ್‌ನ ಮುಂದಿನ ಅನುಭವವು ತೋರಿಸುತ್ತದೆ.
ಇಬ್ಬರು ಸಾಕ್ಷಿಗಳು ಮುಚ್ಚಿದ ಬಾಗಿಲಿನ ಹಿಂದೆ ನಿಂತಿದ್ದ ಒಬ್ಬ ಸ್ತ್ರೀಯೊಟ್ಟಿಗೆ ಮಾತಾಡಿದರು. ತುಸು ಹೊತ್ತಿನ ನಂತರ, ಬಾಗಿಲು ಸ್ವಲ್ಪ ತೆರೆಯಿತು, ಮತ್ತು ಆ ಸ್ತ್ರೀ ಕೈಚಾಚಿ ಸಾಕ್ಷಿಗಳು ನೀಡುತ್ತಿದ್ದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ತೆಗೆದುಕೊಂಡಳು. “ಥ್ಯಾಂಕ್ ಯೂ” ಎಂಬ ಧ್ವನಿಯನ್ನು ಮಾತ್ರ ಸಹೋದರಿಯರು ಕೇಳಿಸಿಕೊಂಡರು ಮತ್ತು ಬಾಗಿಲು ಮುಚ್ಚಲ್ಪಟ್ಟಿತು. “ಪುನಃ ಭೇಟಿಮಾಡಬೇಕೋ?” ಎಂದು ಸಾಕ್ಷಿಗಳು ಯೋಚಿಸಿದರು. ಅವರಲ್ಲಿ ಒಬ್ಬಳು, ಪಯನೀಯರ್ ಅಥವಾ ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದಳು, ಮತ್ತು ಈಕೆ ಪುನಃ ಭೇಟಿನೀಡಲು ನಿರ್ಧರಿಸಿದಳು. ಆದರೆ ಪುನಃ ಅದೇ ಸಂಭವಿಸಿತು, ಮತ್ತು ಇದು ಸುಮಾರು ಒಂದು ವರ್ಷದ ವರೆಗೂ ಮುಂದುವರಿಯಿತು.
ತನ್ನ ಸಮೀಪಿಸುವಿಕೆಯನ್ನು ಬದಲಾಯಿಸಬೇಕೆಂದು ತೀರ್ಮಾನಿಸಿದ ಪಯನೀಯರಳು ಸಹಾಯವನ್ನು ಕೋರುತ್ತಾ ಯೆಹೋವನಿಗೆ ಪ್ರಾರ್ಥಿಸಿದಳು. ಮುಂದಿನ ಬಾರಿ ಪತ್ರಿಕೆಗಳನ್ನು ನೀಡಿದಾಗ, ಆ ಸ್ತ್ರೀಗೆ ಸ್ನೇಹಭಾವದಿಂದ ಈ ಪ್ರಶ್ನೆಗಳನ್ನು ಕೇಳಿದಳು: “ನೀವು ಹೇಗಿದ್ದೀರಿ? ಪತ್ರಿಕೆಗಳು ನಿಮಗೆ ಇಷ್ಟವಾದವೋ?” ಮೊದಲು ಯಾವುದೇ ಪ್ರತಿಕ್ರಿಯೆಯಿರಲಿಲ್ಲ, ಆದರೆ ಇನ್ನೂ ಕೆಲವು ಭೇಟಿಗಳ ನಂತರ, ಆ ಸ್ತ್ರೀಯು ಮಿತ್ರಭಾವದಿಂದ ವರ್ತಿಸಲು ಆರಂಭಿಸಿದಳು. ಒಮ್ಮೆ ಅವಳು ಬಾಗಿಲನ್ನು ಪೂರ್ತಿ ತೆರೆದು ಸಾಕ್ಷಿಗಳಿಗೆ ಕಿವಿಗೊಟ್ಟಳು, ಆದರೆ ಸಂಭಾಷಣೆಯು ಸಂಕ್ಷಿಪ್ತವಾಗಿತ್ತು.
ಬಾಗಿಲ ಬಳಿ ನಿಂತು ಮಾತನಾಡಲು ಹಿಂಜರಿಕೆಯನ್ನು ತೋರಿಸಿದ ಸ್ತ್ರೀಯನ್ನು ಮನಸ್ಸಿನಲ್ಲಿಡುತ್ತಾ, ಈ ಭೇಟಿಗಳ ಉದ್ದೇಶವನ್ನು ವಿವರಿಸಲಿಕ್ಕಾಗಿ ಮತ್ತು ಒಂದು ಮನೆ ಬೈಬಲ್ ಅಧ್ಯಯನವನ್ನು ನೀಡಲಿಕ್ಕಾಗಿ ಪಯನೀಯರ್ ಸಹೋದರಿಯು ಒಂದು ಪತ್ರವನ್ನು ಬರೆಯಲು ನಿರ್ಧರಿಸಿದಳು. ಕೊನೆಗೆ, ಒಂದೂವರೆ ವರ್ಷದ ವರೆಗಿನ ತಾಳ್ಮೆಯ ಪ್ರಯತ್ನದ ನಂತರ, ಮನೆಯವಳೊಂದಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವುದರಲ್ಲಿ ಪಯನೀಯರಳು ಯಶಸ್ವಿಯಾದಳು. ಇದು ಅವಳನ್ನು ಚಕಿತಗೊಳಿಸಿತು, ಆದರೆ ನಂತರ ಆ ಸ್ತ್ರೀಯು ಹೇಳಿದ ಈ ಮಾತುಗಳಿಂದ ಅವಳು ಉತ್ತೇಜಿಸಲ್ಪಟ್ಟಳು: “ನೀವು ನನಗೆ ಪತ್ರಿಕೆಗಳನ್ನು ತಂದುಕೊಡಲು ಆರಂಭಿಸಿದ್ದರಿಂದ ನಾನು ದೇವರಲ್ಲಿ ನಂಬಿಕೆಯಿಡಲು ಆರಂಭಿಸಿದೆ.”
ವಾಸ್ತವದಲ್ಲಿ, ತಾಳ್ಮೆ ಮತ್ತು ಪಟ್ಟುಹಿಡಿಯುವಿಕೆ ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸಂತೋಷಕರ ಪರಿಣಾಮಗಳನ್ನು ತರಬಲ್ಲದು.—ಮತ್ತಾಯ 28:19, 20.