ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಸಾವಿನ ನೋವಿಗೆ ಸಾಂತ್ವನದ ಮದ್ದು

ಸತ್ತವರು ಜೀವ ಪಡೆದುಕೊಳ್ಳುವರು!

ಸತ್ತವರು ಜೀವ ಪಡೆದುಕೊಳ್ಳುವರು!

ತಮ್ಮ ಗಂಡ ರಾಬರ್ಟ್‌ರ ಸಾವಿನ ನೋವು ಯಾವತ್ತೂ ಕಮ್ಮಿಯಾಗೋದೇ ಇಲ್ಲ ಅಂತ ಹೇಳಿದ ಗಾಲ್‌ ಎಂಬವರ ಬಗ್ಗೆ ಹಿಂದಿನ ಲೇಖನವೊಂದರಲ್ಲಿ ಓದಿದ್ದು ನಿಮಗೆ ನೆನಪಿರಬಹುದು. ದೇವರು ಸತ್ತವರನ್ನೆಲ್ಲ ಹೊಸ ಲೋಕದಲ್ಲಿ ಮತ್ತೆ ಬದುಕಿಸುತ್ತಾನೆ ಎಂದು ಬೈಬಲಿನಿಂದ ತಿಳಿದುಕೊಂಡ ಗಾಲ್‌, ತನ್ನ ಗಂಡ ರಾಬರ್ಟ್‌ರನ್ನು ಜೀವಂತವಾಗಿ ಪುನಃ ನೋಡಲು ಕಾಯುತ್ತಿದ್ದಾರೆ. “ನಾನು ತುಂಬ ಇಷ್ಟಪಡುವ ಬೈಬಲ್‌ ವಚನವೆಂದರೆ ಪ್ರಕಟನೆ 21:3, 4” ಎಂದು ಹೇಳುತ್ತಾರೆ ಗಾಲ್‌. ಅದು ತಿಳಿಸುವುದು: “ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.”

ಗಾಲ್‌ ಹೇಳುವುದು: “ಈ ಬೈಬಲ್‌ ವಚನ ಮನಸ್ಸಿಗೆ ತುಂಬ ನೆಮ್ಮದಿ ಕೊಡುತ್ತೆ. ಲೋಕದಲ್ಲಿ ಆಪ್ತರನ್ನು ಕಳೆದುಕೊಂಡ ಎಷ್ಟೋ ಜನರಿಗೆ ದೇವರು ಕೊಟ್ಟಿರುವ ಈ ಮಾತಿನ ಬಗ್ಗೆ ಗೊತ್ತೇ ಇಲ್ಲ. ಅದನ್ನ ನೋಡಿದಾಗ ನನಗೆ ಇನ್ನೂ ದುಃಖ ಆಗುತ್ತೆ.” ಹಾಗಾಗಿ ಗಾಲ್‌, ಮುಂದೊಂದು ದಿನ “ಮರಣವಿರುವುದಿಲ್ಲ” ಅಂತ ದೇವರು ಹೇಳಿರುವ ಸಂತೋಷದ ವಿಷಯವನ್ನು ಜನರಿಗೆ ತಿಳಿಸುತ್ತಾರೆ. ತಿಂಗಳಲ್ಲಿ 70 ತಾಸು ಈ ಸ್ವಯಂಸೇವೆ ಮಾಡುತ್ತಾರೆ.

ತಾನು ಪುನಃ ಬದುಕುವೆನೆಂದು ಯೋಬನಿಗೆ ಭರವಸೆಯಿತ್ತು

“ಮರಣ ಇಲ್ಲದೆ ಇರೋದಕ್ಕೆ ಸಾಧ್ಯನೇ ಇಲ್ಲ” ಅಂತ ಅನಿಸುತ್ತಿದೆಯಾ? ಮರಣವೇ ಇಲ್ಲದ ಪರಿಸ್ಥಿತಿ ತರುತ್ತೇನೆ ಅಂತ ದೇವರು ಮಾತು ಕೊಟ್ಟಿದ್ದಾನೆ. ಅಲ್ಲದೆ, ಬೈಬಲಿನಲ್ಲಿ ಯೋಬ ಎನ್ನುವ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸಿರುವುದನ್ನು ಗಮನಿಸಿ. ಅವನಿಗೆ ಮಾರಣಾಂತಿಕ ಕಾಯಿಲೆ ಬಂದಿತ್ತು. (ಯೋಬ 2:7) ತನ್ನ ಕಾಯಿಲೆಯಿಂದ ಎಷ್ಟು ಬೇಜಾರಾಗಿತ್ತೆಂದರೆ ಅವನು ಸಾವನ್ನು ಬಯಸಿದನು. ಆದರೆ ದೇವರು ಸತ್ತವರಿಗೆ ಮತ್ತೆ ಇದೇ ಭೂಮಿ ಮೇಲೆ ಜೀವಕೊಟ್ಟು ಬದುಕಿಸುತ್ತಾನೆ ಎನ್ನುವ ನಂಬಿಕೆ ಯೋಬನಿಗಿತ್ತು. ಅವನಿಗಿದ್ದ ನಂಬಿಕೆ ಈ ಮಾತುಗಳಿಂದ ಗೊತ್ತಾಗುತ್ತದೆ: “ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು . . .  ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು! ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.” (ಯೋಬ 14:13, 15) ತಾನು ಸತ್ತರೆ ದೇವರು ತನ್ನನ್ನು ನೆನಪಿಸಿಕೊಂಡು ಪುನಃ ಜೀವಕೊಡಲು ಕಾಯುತ್ತಿರುತ್ತಾನೆ ಅಂತ ಯೋಬನಿಗೆ ಭರವಸೆಯಿತ್ತು.

ಸತ್ತಿರುವ ಕೋಟಿಗಟ್ಟಲೆ ಜನರಲ್ಲಿ ಯೋಬ ಕೂಡ ಒಬ್ಬ. ದೇವರು ಭೂಮಿಯನ್ನು ಒಂದು ಸುಂದರ ತೋಟವನ್ನಾಗಿ ಮಾಡುವಾಗ ಇವರೆಲ್ಲರಿಗೂ ಜೀವಕೊಡುತ್ತಾನೆ. (ಲೂಕ 23:42, 43) ಹಾಗಾಗಿ ಬೈಬಲಿನ ಅಪೊಸ್ತಲರ ಕಾರ್ಯಗಳು 24:15 ರಲ್ಲಿ ಖಂಡಿತ “ಪುನರುತ್ಥಾನವಾಗುವುದೆಂದು” ಸ್ಪಷ್ಟವಾಗಿ ಹೇಳಲಾಗಿದೆ. ಯೇಸು ಕೂಡ ಹೇಳಿದ್ದು: “ಇದಕ್ಕೆ ಆಶ್ಚರ್ಯಪಡಬೇಡಿರಿ, ಏಕೆಂದರೆ ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಯೋಬನಿಗೆ ದೇವರು ಜೀವಕೊಡುವಾಗ ಅವನು ಯೌವ್ವನ ಕಾಲದಲ್ಲಿ ಹೇಗಿದ್ದನೋ ಅದೇ ರೀತಿ ಆಗುತ್ತಾನೆ. ಅವನ “ದೇಹವು ಬಾಲ್ಯಕ್ಕಿಂತಲೂ ಕೋಮಲ” ಆಗುತ್ತದೆ. (ಯೋಬ 33:24, 25) ಈ ಆಶೀರ್ವಾದ ಯೋಬನಿಗೆ ಮಾತ್ರವಲ್ಲ, ದೇವರು ಮಾನವರಿಗೋಸ್ಕರ ದಯೆಯಿಂದ ಮಾಡಿರುವ ಏರ್ಪಾಡನ್ನು ಮಾನ್ಯ ಮಾಡುವ ಎಲ್ಲರಿಗೂ ಸಿಗಲಿದೆ.

ನೀವು ಕೂಡ ನಿಮ್ಮ ಆಪ್ತರನ್ನು ಕಳೆದುಕೊಂಡಿರಬಹುದು. ಈ ಲೇಖನದಲ್ಲಿ ಇರುವ ವಿಷಯಗಳು ನಿಮ್ಮ ನೋವನ್ನು, ದುಃಖವನ್ನು ಸಂಪೂರ್ಣವಾಗಿ ಕಡಿಮೆ ಮಾಡದಿರಬಹುದು. ಆದರೆ ಬೈಬಲಿನಲ್ಲಿ ದೇವರು ಕೊಟ್ಟಿರುವ ಮಾತುಗಳ ಬಗ್ಗೆ ನಾವು ಯೋಚಿಸುತ್ತಾ ಇರುವುದರಿಂದ ಭವಿಷ್ಯದ ಬಗ್ಗೆ ಆಶಾಭಾವನೆಯಿಂದ ಬದುಕಲು ಆಗುತ್ತದೆ.—1 ಥೆಸಲೊನೀಕ 4:13.

ಆಪ್ತರ ಸಾವಿನ ನೋವನ್ನು ನಿಭಾಯಿಸುವುದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾ? “ದೇವರು ಯಾಕೆ ನಮ್ಮ ಕಷ್ಟಗಳನ್ನು ಸರಿಮಾಡದೆ ಹಾಗೇ ಬಿಟ್ಟುಬಿಟ್ಟಿದ್ದಾನೆ?” ಇಂಥ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕಾ? ದಯವಿಟ್ಟು jw.org ವೆಬ್‌ಸೈಟ್‌ ನೋಡಿ. ಬೈಬಲ್‌ ಕೊಡುವ ಉತ್ತರಗಳನ್ನು ತಿಳಿದುಕೊಳ್ಳಿ, ನೆಮ್ಮದಿ ಪಡೆದುಕೊಳ್ಳಿ. ▪ (w16-E No. 3)