ನಿಮಗಿರೋ ನೇಮಕಾನ ಮನಸಾರೆ ಮಾಡಿ
ಆಪ್ತಮಿತ್ರನಿಂದ ಒಂದು ಪತ್ರ ಬಂದಾಗ ನಿಮ್ಗೆ ಹೇಗನಿಸುತ್ತೆ? ಹೀಗೊಂದು ಪತ್ರ ತಿಮೊತಿಗೆ ಪೌಲನಿಂದ ಬಂತು. ಆ ಪತ್ರವೇ ಬೈಬಲಿನ 2 ನೇ ತಿಮೊತಿ ಪುಸ್ತಕವಾಗಿದೆ. ತನ್ನ ಆಪ್ತಮಿತ್ರನಿಂದ ಬಂದ ಈ ಪತ್ರವನ್ನ ಓದಲು ತಿಮೊತಿ ಖಂಡಿತವಾಗಿಯೂ ಸದ್ದುಗದ್ದಲ ಇಲ್ಲದ ಸ್ಥಳವನ್ನು ಹುಡುಕಿ ಅಲ್ಲಿ ಕೂತು ಓದಿರುತ್ತಾನೆ. ‘ಪೌಲ ಚೆನ್ನಾಗಿದ್ದಾರಾ? ನನ್ನ ನೇಮಕದ ಬಗ್ಗೆ ಏನಾದ್ರೂ ಸಲಹೆ ಕೊಟ್ಟಿದ್ದಾರಾ? ನಾನಿನ್ನೂ ಚೆನ್ನಾಗಿ ಸುವಾರ್ತೆ ಸಾರೋಕೆ, ಸಭೆಯಲ್ಲಿ ಬೇರೆಯವರಿಗೆ ಸಹಾಯ ಮಾಡೋಕೆ ಏನಾದ್ರೂ ಸಲಹೆ ಕೊಟ್ಟಿದ್ದಾರಾ?’ ಅಂತ ತಿಮೊತಿ ಯೋಚಿಸಿರಬಹುದು. ಈ ಪತ್ರ ಓದಿದಾಗ ಅವ್ನಿಗೆ ಈ ಪ್ರಶ್ನೆಗಳಿಗೆ ಮಾತ್ರವಲ್ಲ ಬೇರೆ ವಿಷ್ಯಗಳ ಬಗ್ಗೆನೂ ಹೆಚ್ಚಿನ ಮಾಹಿತಿ ಸಿಕ್ಕಿರಬಹುದು. ಈ ಲೇಖನದಲ್ಲಿ ನಮ್ಗೆ ಸಹಾಯ ಆಗುವ ಸಲಹೆಗಳನ್ನ ನೋಡೋಣ.
‘ನಾನು ಎಲ್ಲವನ್ನೂ ಸಹಿಸಿಕೊಳ್ತಾ ಇದ್ದೇನೆ’
ತಿಮೊತಿ ಆ ಪತ್ರ ತೆರೆದು ಆರಂಭದ ಸಾಲುಗಳನ್ನ ಓದಿದ ಕೂಡಲೇ ಅವ್ನಿಗೆ ಪೌಲ ತನ್ನನ್ನ ಎಷ್ಟು ಪ್ರೀತಿಸ್ತಿದ್ದಾನೆ ಅನ್ನೋದು ಅರ್ಥವಾಯ್ತು. ಆ ಪತ್ರದಲ್ಲಿ ಪೌಲ ತಿಮೊತಿಯನ್ನು ‘ಪ್ರಿಯ ಮಗ’ ಅಂತ ಕರೆದಿದ್ದನು. (2 ತಿಮೊ. 1:2) ಈ ಪತ್ರ ತಿಮೊತಿಗೆ ಕ್ರಿ.ಶ. 65 ರಲ್ಲಿ ಸಿಕ್ಕಿರಬಹುದು. ಆಗ ಅವನಿಗೆ 30 ಅಥವಾ ಅದಕ್ಕಿಂತ ಹೆಚ್ಚು ಪ್ರಾಯ ಇದ್ದಿರಬಹುದು. ಅಷ್ಟರೊಳಗೆ ಅವನೊಬ್ಬ ಅನುಭವಸ್ಥ ಹಿರಿಯನಾಗಿದ್ದನು. ಯಾಕಂದ್ರೆ ಈಗಾಗ್ಲೇ ಹತ್ತಕ್ಕಿಂತ ಹೆಚ್ಚು ವರ್ಷ ಪೌಲನ ಜೊತೆ ಸೇವೆ ಮಾಡಿದ್ದನು ಮತ್ತು ಪೌಲನಿಂದ ಅನೇಕ ವಿಷ್ಯಗಳನ್ನು ಕಲ್ತಿದ್ದನು.
ಪೌಲ ತನಗೆ ಬಂದ ಕಷ್ಟಗಳನ್ನು ನಿಷ್ಠೆಯಿಂದ ಸಹಿಸಿಕೊಳ್ತಿದ್ದಾನೆ ಅಂತ ಓದಿದಾಗ ತಿಮೊತಿಗೆ ತುಂಬ ಉತ್ತೇಜನ ಸಿಕ್ಕಿರುತ್ತೆ. ಪೌಲ ರೋಮ್‌ನ ಜೈಲಿನಲ್ಲಿದ್ದ ಮತ್ತು ಇನ್ನು ಸ್ವಲ್ಪದ್ರಲ್ಲೇ ಮರಣದಂಡನೆ ಅನುಭವಿಸಲಿದ್ದ. (2 ತಿಮೊ. 1:15, 16; 4:6-8) ‘ನಾನು ಎಲ್ಲವನ್ನೂ ಸಹಿಸಿಕೊಳ್ತಾ ಇದ್ದೇನೆ’ ಅಂತ ಪೌಲ ಹೇಳಿದ ಮಾತಿನಿಂದ ಅವನು ಧೈರ್ಯವಾಗಿದ್ದಾನೆ ಅನ್ನೋದು ತಿಮೊತಿಗೆ ಗೊತ್ತಾಯ್ತು. (2 ತಿಮೊ. 2:8-13) ಪೌಲ ತನಗೆ ಬಂದ ಕಷ್ಟವನ್ನ ತಾಳಿಕೊಂಡ ಉದಾಹರಣೆಯಿಂದ ತಿಮೊತಿಯಂತೆ ನಾವೂ ಬಲ ಪಡ್ಕೊಳ್ಳಬಹುದು.
‘ವರವನ್ನ ಬೆಂಕಿಯಂತೆ ಪ್ರಜ್ವಲಿಸು’
ದೇವರ ಸೇವೆಯಲ್ಲಿ ಸಿಕ್ಕಿರೋ ನೇಮಕಾನ ತುಂಬ ಅಮೂಲ್ಯವಾಗಿ ನೋಡ್ಬೇಕು ಅಂತ ಪೌಲ ತಿಮೊತಿಗೆ ಸಲಹೆ ಕೊಟ್ಟ. ತಿಮೊತಿ ‘ದೇವರಿಂದ ದೊರೆತ ವರವನ್ನು ಬೆಂಕಿಯ ಹಾಗೆ ಪ್ರಜ್ವಲಿಸಬೇಕು’ ಅಂತ ಪೌಲ ಬಯಸಿದ. (2 ತಿಮೊ. 1:6) ಇಲ್ಲಿ “ವರ” ಅನ್ನೋ ಪದಕ್ಕೆ ಪೌಲ ಗ್ರೀಕ್‌ನಲ್ಲಿ ಕರಿಸ್ಮಾ ಅನ್ನೋ ಪದವನ್ನ ಬಳಸಿದ್ದಾನೆ. ಈ ಗ್ರೀಕ್ ಪದ ಉಚಿತವಾಗಿ ಮತ್ತು ಕಷ್ಟಪಡದೇ ಇದ್ರೂ ಸಿಗೋ ವರವನ್ನ ಸೂಚಿಸುತ್ತೆ. ಈ ವರ ತಿಮೊತಿಗೆ ಸಭೆಯಲ್ಲಿ ಒಂದು ವಿಶೇಷ ಜವಾಬ್ದಾರಿ ನಿರ್ವಹಿಸೋಕೆ ಅವನನ್ನ ಆಯ್ಕೆ ಮಾಡಿದಾಗ ಸಿಕ್ತು.—1 ತಿಮೊ. 4:14.
ತಿಮೊತಿ ಈ ವರವನ್ನ ಹೇಗೆ ಉಪಯೋಗಿಸಬೇಕಿತ್ತು? ‘ಬೆಂಕಿಯಂತೆ ಪ್ರಜ್ವಲಿಸು’ ಅಂತ ಪೌಲ ಬರೆದ ಸಾಲನ್ನು ಓದಿದಾಗ ತಿಮೊತಿಗೆ ಅಡುಗೆಮನೆಯಲ್ಲಿ ಬಳಸ್ತಿದ್ದ ಕೆಂಡ ಇನ್ನೇನು ಆರಿಹೋಗಲಿದ್ದಾಗ
ಜನ ಏನು ಮಾಡ್ತಿದ್ದರೋ ಅದು ಮನಸ್ಸಿಗೆ ಬಂದಿರಬಹುದು. ಜನ ಆ ಕೆಂಡಕ್ಕೆ ಗಾಳಿ ಊದಿ ಚೆನ್ನಾಗಿ ಉರಿಯೋ ತರ ಮಾಡ್ತಿದ್ರು. ಆಗ ಮಾತ್ರ ಅದರಿಂದ ಶಾಖ ಸಿಗ್ತಿತ್ತು ಮತ್ತು ಅದನ್ನ ಉಪಯೋಗಿಸೋಕೆ ಆಗ್ತಿತ್ತು. ಪೌಲ ಇಲ್ಲಿ ಬಳಸಿರೋ ಅನಾಸೋಪೆರಿಯೋ ಅನ್ನೋ ಗ್ರೀಕ್ ಪದಕ್ಕೆ ‘ಮತ್ತೆ ಉರಿಸು, ಕಟ್ಟಿಗೆ ಹಾಕು, ಗಾಳಿಯನ್ನ ಊದು’ ಅನ್ನೋ ಅರ್ಥ ಇದೆ ಅಂತ ಒಂದು ಶಬ್ದಕೋಶ ಹೇಳುತ್ತೆ. ಅಂದ್ರೆ “ಒಂದು ಕೆಲ್ಸವನ್ನ ಉತ್ಸಾಹದಿಂದ ಮಾಡು” ಅಂತ ಹೇಳೋಕೆ ಪೌಲ ಈ ಪದ ಬಳಸಿದ್ದಾನೆ. ಇನ್ನೊಂದು ಮಾತಲ್ಲಿ ‘ನಿನಗಿರೋ ನೇಮಕಾನ ಮನಸಾರೆ ಮಾಡು’ ಅಂತ ತಿಮೊತಿಗೆ ಹೇಳ್ತಿದ್ದಾನೆ. ಇದೇ ರೀತಿ ನಾವು ಕೂಡ ಉತ್ಸಾಹದಿಂದ ದೇವರ ಕೆಲ್ಸವನ್ನ ಮಾಡಬೇಕು ಅಂತ ಇದು ಪ್ರೋತ್ಸಾಹಿಸುತ್ತೆ.‘ಶ್ರೇಷ್ಠ ಹೊಣೆಗಾರಿಕೆಯನ್ನ ಕಾಪಾಡು’
ತನ್ನ ಆಪ್ತಮಿತ್ರನಿಂದ ಬಂದ ಪತ್ರದ ಮುಂದಿನ ಸಾಲುಗಳನ್ನ ಓದುತ್ತಿದ್ದಾಗ ತಿಮೊತಿಗೆ ತನ್ನ ಸೇವೆಯನ್ನ ಇನ್ನೂ ಚೆನ್ನಾಗಿ ಹೇಗೆ ಮಾಡ್ಬಹುದು ಅನ್ನೋದಕ್ಕೆ ಇನ್ನೊಂದು ಸಲಹೆ ಸಿಕ್ತು. ಅದೇನಂದ್ರೆ “ನಿನ್ನ ವಶಕ್ಕೆ ಕೊಡಲ್ಪಟ್ಟಿರುವ ಈ ಶ್ರೇಷ್ಠ ಹೊಣೆಗಾರಿಕೆಯನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮದ ಮೂಲಕ ಕಾಪಾಡು.” (2 ತಿಮೊ. 1:14) ಹಾಗಾದ್ರೆ ಇಲ್ಲಿ ತಿಳಿಸಲಾಗಿರೋ ಹೊಣೆಗಾರಿಕೆ ಯಾವ್ದು? ತಿಮೊತಿ ವಶಕ್ಕೆ ಏನು ಕೊಡಲಾಗಿತ್ತು? ದೇವರ ವಾಕ್ಯದಿಂದ ಕಲಿತ ಸತ್ಯವನ್ನು ‘ಸ್ವಸ್ಥಕರವಾದ ಮಾತುಗಳು’ ಅಂತ ಪೌಲನು ಹಿಂದಿನ ವಚನದಲ್ಲಿ ಹೇಳಿದ್ದಾನೆ. (2 ತಿಮೊ. 1:13) ಒಬ್ಬ ಕ್ರೈಸ್ತನಾಗಿ ತಿಮೊತಿ ದೇವರ ವಾಕ್ಯದ ಸತ್ಯವನ್ನ ಸಭೆಯ ಒಳಗೂ ಹೊರಗೂ ಸಾರಬೇಕಿತ್ತು. (2 ತಿಮೊ. 4:1-5) ಅಷ್ಟುಮಾತ್ರವಲ್ಲ ಒಬ್ಬ ಹಿರಿಯನಾಗಿ ಸಭೆಯಲ್ಲಿದ್ದ ಸಹೋದರ ಸಹೋದರಿಯರನ್ನ ಪರಿಪಾಲಿಸೋ ಜವಾಬ್ದಾರಿ ಅವನಿಗಿತ್ತು. (1 ಪೇತ್ರ 5:2) ಯೆಹೋವ ದೇವರ ಪವಿತ್ರಾತ್ಮದ ಸಹಾಯದಿಂದ ಮತ್ತು ದೇವರ ವಾಕ್ಯವನ್ನ ಉಪಯೋಗಿಸಿ ತಿಮೊತಿ ತನ್ನ ಹೊಣೆಗಾರಿಕೆಯನ್ನು ಕಾಪಾಡಬೇಕಿತ್ತು ಅಂದ್ರೆ ದೇವರ ಬಗ್ಗೆ ಇರೋ ಸತ್ಯವನ್ನ ಕಲಿಸ್ಬೇಕಿತ್ತು.—2 ತಿಮೊ. 3:14-17.
ಇಂದು ಕ್ರೈಸ್ತರಾದ ನಮ್ಗೆ ದೇವರ ಬಗ್ಗೆ ಇರೋ ಸತ್ಯವನ್ನ ಬೇರೆಯವರಿಗೆ ತಿಳಿಸೋ ಹೊಣೆಗಾರಿಕೆ ಅಥ್ವಾ ಜವಾಬ್ದಾರಿ ಇದೆ. (ಮತ್ತಾ. 28:19, 20) ಇದನ್ನ ನಾವು ಚೆನ್ನಾಗಿ ನಿರ್ವಹಿಸಬೇಕಂದ್ರೆ ಪಟ್ಟುಬಿಡದೆ ಪ್ರಾರ್ಥನೆ ಮಾಡ್ಬೇಕು ಮತ್ತು ದೇವರ ವಾಕ್ಯವನ್ನ ಪ್ರತಿದಿನ ಓದೋ ರೂಢಿ ಬೆಳೆಸಿಕೊಳ್ಳಬೇಕು. (ರೋಮ. 12:11, 12; 1 ತಿಮೊ. 4:13, 15, 16) ಇದ್ರ ಜೊತೆಗೆ ನಮಗೆ ಸಭೆಯ ಹಿರಿಯರಾಗಿ ಸೇವೆ ಮಾಡೋ ನೇಮಕ ಇರಬಹುದು ಇಲ್ಲವೇ ಪೂರ್ಣಸಮಯದ ಸೇವೆ ಮಾಡೋ ನೇಮಕ ಇರಬಹುದು. ನಾವು ಈ ಹೊಣೆಗಾರಿಕೆಯನ್ನ ಚೆನ್ನಾಗಿ ಮಾಡ್ಬೇಕಂದ್ರೆ ದೀನರಾಗಿರಬೇಕು. ಜೊತೆಗೆ ಯೆಹೋವ ದೇವರ ಸಹಾಯ ಕೇಳ್ಕೊಬೇಕು. ಆಗ ದೇವರು ಕೊಟ್ಟಿರೋ ಹೊಣೆಗಾರಿಕೆ ನಮಗೆ ಅಮೂಲ್ಯ ಅಂತ ತೋರಿಸಿಕೊಡ್ತೇವೆ.
“ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು”
ತಿಮೊತಿಗೆ ಇನ್ನೂ ಒಂದು ಜವಾಬ್ದಾರಿ ಇತ್ತು. ಅವನು ಮಾಡ್ತಿದ್ದ ಕೆಲಸವನ್ನ ಬೇರೆಯವ್ರಿಗೂ ಕಲಿಸಿಕೊಡ್ಬೇಕಿತ್ತು. ಹಾಗಾಗಿಯೇ ಪೌಲ ಅವನಿಗೆ ಹೀಗೆ ಹೇಳಿದನು: “ನೀನು ನನ್ನಿಂದ ಕೇಳಿಸಿಕೊಂಡ ಸಂಗತಿಗಳನ್ನು ಇತರರಿಗೆ ಬೋಧಿಸಲು ತಕ್ಕಷ್ಟು ಅರ್ಹರಾಗಿರುವಂಥ ನಂಬಿಗಸ್ತ ಪುರುಷರಿಗೆ ಒಪ್ಪಿಸಿಕೊಡು.” (2 ತಿಮೊ. 2:2) ಅಂದ್ರೆ ತಿಮೊತಿ ತಾನು ಕಲಿತ ವಿಷಯವನ್ನು ಬೇರೆ ಸಹೋದರರಿಗೂ ಕಲಿಸಬೇಕಿತ್ತು. ಇವತ್ತು ಕೂಡ ಕ್ರೈಸ್ತ ಹಿರಿಯರು ಹೀಗೇ ಮಾಡ್ಬೇಕು. ಒಬ್ಬ ಒಳ್ಳೇ ಹಿರಿಯನು ತನಗೆ ಗೊತ್ತಿರೋ ವಿಷ್ಯಗಳನ್ನು ಬೇರೆಯವ್ರಿಗೆ ಕಲಿಸೋಕೆ ಹೊಟ್ಟೆಕಿಚ್ಚುಪಟ್ಟು ತನ್ನಲ್ಲೇ ಇಟ್ಟುಕೊಳ್ಳಲ್ಲ. ಬದ್ಲಿಗೆ ಆ ಕೆಲ್ಸವನ್ನ ಅವ್ರಿಗೆ ಕಲಿಸಿ ಅದನ್ನ ಮಾಡೋಕೂ ಸಹಾಯ ಮಾಡ್ತಾನೆ. ‘ಆ ಕೆಲ್ಸವನ್ನ ಚೆನ್ನಾಗಿ ಕಲಿತು ನನ್ನನ್ನೇ ಮೀರಿಸಿ ಬಿಡ್ತಾರೆ’ ಅನ್ನೋ ಭಯ ಅವನಿಗಿರಲ್ಲ. ಅಷ್ಟುಮಾತ್ರವಲ್ಲ ಒಂದು ಕೆಲ್ಸವನ್ನ ಅರ್ಧಂಬರ್ಧ ಹೇಳಿಕೊಡಲ್ಲ. ಬದ್ಲಿಗೆ ಆ ಕೆಲ್ಸವನ್ನ ಚೆನ್ನಾಗಿ ಅರ್ಥಮಾಡ್ಕೊಂಡು ಒಳ್ಳೇ ತೀರ್ಮಾನಗಳನ್ನ ಮಾಡೋದು ಹೇಗೆ ಅಂತ ಅವನು ಅವ್ರಿಗೆ ಕಲಿಸ್ತಾನೆ ಹಾಗೂ ಅವ್ರು ಯೆಹೋವನ ಜೊತೆಗೆ ಆಪ್ತ ಸಂಬಂಧ ಬೆಳೆಸಿಕೊಳ್ಳಲು ಸಹಾಯ ಮಾಡ್ತಾನೆ. ಹೀಗೆ ಆ ಹಿರಿಯ ‘ನಂಬಿಗಸ್ತ ಪುರುಷರಿಗೆ’ ಕಲಿಸುವಾಗ ಅವರು ಸಭೆಯನ್ನ ಚೆನ್ನಾಗಿ ಪರಿಪಾಲಿಸಲು ಕಲಿತಾರೆ.
ಪೌಲ ಬರೆದ ಈ ಪತ್ರವನ್ನ ಓದಿದಾಗ ತಿಮೊತಿಗೆ ತುಂಬ ಖುಷಿ ಆಗಿರುತ್ತೆ. ತುಂಬ ಸಲಹೆಗಳು ಒಳಗೂಡಿದ್ದ ಆ ಪತ್ರವನ್ನು ಪುನಃಪುನಃ ಓದಿರುತ್ತಾನೆ ಮತ್ತು ಆ ಸಲಹೆಗಳನ್ನ ಹೇಗೆ ಅನ್ವಯಿಸಬಹುದು ಅಂತನೂ ಯೋಚಿಸಿರ್ತಾನೆ.
ಪೌಲ ತಿಮೊತಿಗೆ ಕೊಟ್ಟ ಈ ಸಲಹೆ ನಮಗೂ ಅನ್ವಯ ಆಗುತ್ತೆ. ಹೇಗಂದ್ರೆ ನಮಗೆ ಸಿಕ್ಕಿರೋ ವರವನ್ನು ಬೆಂಕಿಯಂತೆ ಪ್ರಜ್ವಲಿಸಬೇಕು ಮತ್ತು ಹೊಣೆಗಾರಿಕೆಯನ್ನು ಕಾಪಾಡಿಕೊಳ್ಬೇಕು. ಹಾಗೂ ನಮಗಿರೋ ಜ್ಞಾನವನ್ನ ಮತ್ತು ಅನುಭವವನ್ನ ಬೇರೆಯವ್ರಿಗೆ ಹಂಚಬೇಕು. ಹೀಗೆ ಮಾಡಿದ್ರೆ ಪೌಲ ತಿಮೊತಿಗೆ ಹೇಳಿದ ಹಾಗೆ ನಾವೂ ನಮ್ಮ ‘ಶುಶ್ರೂಷೆಯನ್ನ ಪೂರ್ಣವಾಗಿ ಮಾಡಿ ಮುಗಿಸಬಹುದು.’—2 ತಿಮೊ. 4:5.